ಯಾದಗಿರಿ | ಬಬಲಾದ ಗ್ರಾಮಕ್ಕೆ ಹೋಗುವ ರಸ್ತೆ ದುಸ್ಥಿತಿ : ಮಳೆಯಲ್ಲಿ ಜೀವಾಪಾಯದ ಸಂಚಾರ

ಯಾದಗಿರಿ: ವಡಿಗೇರಾ ತಾಲ್ಲೂಕಿನ ಬಬಲಾದ ಗ್ರಾಮಕ್ಕೆ ಹೋಗುವ ರಸ್ತೆ ಹೊಂಡ-ಗುಂಡಿಗಳಿಂದ ತುಂಬಿ, ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಗ್ರಾಮೀಣ ರಸ್ತೆ ದುಸ್ಥಿತಿ ಮತ್ತೆ ಬಯಲಾಗಿದೆ. ವಾಹನ ಸವಾರರು ಹಾಗೂ ಸಾರ್ವಜನಿಕರು ದಿನನಿತ್ಯ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಇತ್ತೀಚಿನ ಮಳೆಯಿಂದಾಗಿ ರಸ್ತೆಯ ಗುಂಡಿಗಳು ನೀರಿನಿಂದ ತುಂಬಿ ಸಣ್ಣ ಸರೋವರಗಳಂತಾಗಿದ್ದು, ಬೈಕ್ ಸವಾರರು, ವಿದ್ಯಾರ್ಥಿಗಳು ಹಾಗೂ ರೈತರು ಅಪಾಯದೊಂದಿಗೆ ಸಂಚರಿಸುವ ಪರಿಸ್ಥಿತಿ ಉಂಟಾಗಿದೆ. ತುರ್ತು ಅವಶ್ಯಕತೆಗಳಲ್ಲಿ ಅಂಬ್ಯುಲೆನ್ಸ್ ಹಾಗೂ ಸಾರಿಗೆ ವಾಹನಗಳು ಸಂಚಾರ ನಡೆಸುವುದು ಸವಾಲಾಗಿ ಪರಿಣಮಿಸಿದೆ.
ಗ್ರಾಮಸ್ಥರು ಹಲವು ಬಾರಿ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದರೂ, ಯಾವುದೇ ದುರಸ್ತಿ ಕಾರ್ಯ ನಡೆಯದಿರುವುದರಿಂದ ಅಸಮಾಧಾನ ವ್ಯಕ್ತವಾಗಿದೆ. “ಮಳೆ ಮುಗಿಯುವವರೆಗೂ ದುರಸ್ತಿ ಸಾಧ್ಯವಿಲ್ಲ” ಎಂಬ ನೆಪ ಹೇಳುತ್ತಾ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಕ್ಷಣ ರಸ್ತೆ ದುರಸ್ತಿ ಕಾರ್ಯ ಕೈಗೊಂಡು ಸಾರ್ವಜನಿಕರ ಜೀವಭದ್ರತೆ ಕಾಪಾಡುವಂತೆ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ಗೌತಮ ಕ್ರಾಂತಿ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.