ಯಾದಗಿರಿ | ಹೆದ್ದಾರಿ, ಗ್ರಾಮೀಣ ಭಾಗದ ರಸ್ತೆಗಳಲ್ಲಿ ಅಪಾಯಕ್ಕೆ ಆಹ್ವಾನಿಸುತ್ತಿರುವ ಹೊಂಡಗಳು

ಯಾದಗಿರಿ, ಆ.31: ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಿಲ್ಲೆಯ ಗ್ರಾಮೀಣ ಭಾಗದ ರಸ್ತೆಗಳು ತೀರಾ ಹದಗೆಟ್ಟಿದ್ದು, ಜಿಲ್ಲೆಗೆ ಹೋಗುವ ರಾಜ್ಯ ಹೆದ್ದಾರಿಗಳಲ್ಲೂ ದೊಡ್ಡ, ದೊಡ್ಡ ಹೊಂಡಗಳ ದರ್ಶನವಾಗುತ್ತಿದ್ದು, ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ.
ರಾಜ್ಯ ಹೆದ್ದಾರಿಯಿಂದಿಡಿದು ನಗರದಲ್ಲಿನ ರಸ್ತೆಗಳವರೆಗೆ ಬಹುತೇಕ ರಸ್ತೆಗಳಲ್ಲಿ ದೊಡ್ಡ, ದೊಡ್ಡ ಗುಂಡಿಗಳು ಬಿದ್ದಿವೆ. ಮಳೆ ನೀರು ರಸ್ತೆ ಗುಂಡಿಗಳಲ್ಲಿ ನಿಂತಿರುವುದರಿಂದ, ಬಹಳಷ್ಟು ರಸ್ತೆಗಳು ಗದ್ದೆಗಳಂತಾಗಿವೆ. ಪಾದಚಾರಿಗಳು, ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳು ಸಂಚರಿಸಲಾಗದ ಸ್ಥಿತಿ ಇದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಜನಪ್ರತಿನಿಧಿಗಳು ಕಣ್ಣಿದ್ದರೂ ಕುರುಡರಂತೆ ವರ್ತಿಸುತ್ತಿದ್ದಾರೆ. ಇದು ನಮ್ಮ ದೌರ್ಭಾಗ್ಯವೆಂದು ವಾಹನ ಸವಾರರು ಶಾಪ ಹಾಕುತ್ತಿದ್ದಾರೆ.
ದೋರನಹಳ್ಳಿ ಗ್ರಾಮದ ರೈತರು ಎತ್ತಿನ ಬಂಡಿಗಳು ರಾಜ್ಯ ಹೆದ್ದಾರಿ ಮೇಲೆ ದಿನನಿತ್ಯ ಓಡಾಡುತ್ತವೆ. ರಸ್ತೆಗಳಲ್ಲಿ ಗುಂಡಿಗಳು ಹೆಚ್ಚಿರುವುದರಿಂದ ತಲುಪಬೇಕಾದ ಸ್ಥಳಕ್ಕೆ ತಲುಪಲು ತಡವಾಗುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಎಚ್ಚೆತ್ತುಕೊಂಡು ರಸ್ತೆಗೆ ಕಾಯಕಲ್ಪ ಕಲ್ಪಿಸಬೇಕಾಗಿದೆ.
ರಸ್ತೆ ಹದಗೆಟ್ಟು ವರ್ಷವೊಂದು ಕಳೆಯಿತು. ಈ ರಸ್ತೆಯಲ್ಲೇ ಶಾಸಕರು ಮತ್ತು ಸಚಿವರು ಓಡಾಡುತ್ತಾರೆ. ಆದರೆ ದುರಸ್ತಿ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ.
-ಬಾಲಪ್ಪ ಶೆಟ್ಟಿ, ದೋರನಹಳ್ಳಿ ಗ್ರಾಮಸ್ಥ