ಯಾದಗಿರಿ | ಜಾತಿಗಣತಿ ಪಾರದರ್ಶಕವಾಗಿರಲಿ, ಲಿಂಗಾಯತರಿಗೆ ಅನ್ಯಾಯವಾಗಬಾರದು: ಮಠಾಧೀಶರ ವೇದಿಕೆ ಮನವಿ

ಯಾದಗಿರಿ, ಸೆ. 15: ರಾಜ್ಯ ಸರ್ಕಾರ ಪ್ರಸ್ತುತ ನಡೆಸುತ್ತಿರುವ ಜಾತಿಗಣತಿ ಸಮೀಕ್ಷೆ ಪಾರದರ್ಶಕವಾಗಿದ್ದು, ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ವೀರಶೈವ ಲಿಂಗಾಯತ ಮಠಾಧೀಶರ ವೇದಿಕೆ ಸೋಮವಾರ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರಿಗೆ ಮನವಿ ಸಲ್ಲಿಸಿತು.
ವೇದಿಕೆ ಸದಸ್ಯರು ಮಾತನಾಡಿ, ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾತಿಗಣತಿ ಸಮೀಕ್ಷೆಯಲ್ಲಿ ಹಿಂದೂ ಹಾಗೂ ವೀರಶೈವ ಲಿಂಗಾಯತ ಜಾತಿಗಳನ್ನು ಕ್ರಿಶ್ಚಿಯನ್ ಎಂದು ಕೋಡ್ ಮೂಲಕ ಗುರುತಿಸುವ ಕೆಲಸ ಮಾಡುತ್ತಿದೆ. ಸರ್ಕಾರ ತಕ್ಷಣವೇ ಈ ಸಮೀಕ್ಷೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
2013ರಲ್ಲಿ ಹಾಗೆಯೇ ಈಗ 2023ರ ನಂತರವೂ ಸರ್ಕಾರ ಧರ್ಮ ಮತ್ತು ಜಾತಿಗಳ ನಡುವೆ ಒಡಕುಂಟು ಮಾಡುವ ಕೆಲಸಕ್ಕೆ ಮುಂದಾಗಿದೆ. ಜಾತಿ ಸಮೀಕ್ಷೆಯ ಮೂಲಕ ಹಿಂದೂ ಹಾಗೂ ವೀರಶೈವ ಲಿಂಗಾಯತರ ನಡುವೆ ಕೈಸ್ತರನ್ನು ನುಗ್ಗಿಸಿ, ಮೀಸಲಾತಿಯಿಂದ ಲಾಭ ಮಾಡಿಕೊಡಲು ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದರು.
ಈ ಹಿಂದೆ 2014–15ರಲ್ಲಿ ನ್ಯಾ.ಕಾಂತರಾಜು ನೇತೃತ್ವದಲ್ಲಿ ಜಾತಿ ಸಮೀಕ್ಷೆ ನಡೆಸಲಾಗಿದ್ದರೂ, ವರದಿ ಸ್ವೀಕರಿಸಲಾಗದೆ ಕೈಬಿಡಲಾಗಿತ್ತು. ಇದೀಗ ಸರ್ಕಾರದ ಪ್ರಕಟಣೆಯಂತೆ ಸೆ. 22ರಿಂದ ದಸರಾ–ನವರಾತ್ರಿ ಅವಧಿಯಲ್ಲಿ 15 ದಿನಗಳ ಕಾಲ ಸಮೀಕ್ಷೆ ನಡೆಯಲಿದೆ. ಕೆಇಬಿ ಸಿಬ್ಬಂದಿಗೆ ಚೀಟಿ ಹಂಚುವ ಕೆಲಸ ನೀಡಲಾಗಿದ್ದು, ಹಿಂದೂ ಹಾಗೂ ವೀರಶೈವ ಲಿಂಗಾಯತ ಉಪಜಾತಿಗಳ ಮುಂದೆ “ಕ್ರಿಶ್ಚಿಯನ್” ಪದ ಸೇರಿಸುವ ಮೂಲಕ ಮತಾಂತರ ಹುನ್ನಾರ ನಡೆದಿದೆ ಎಂದು ಅವರು ಆರೋಪಿಸಿದರು.
ಈ ಸಂದರ್ಭದಲ್ಲಿ ಶ್ರೀ ಸೂಗುರೇಶ್ವರ ಶಿವಾಚಾರ್ಯರು (ಹಿರೇಮಠ), ಶ್ರೀ ಸಿದ್ದೇಶ್ವರ ಶಿವಾಚಾರ್ಯರು (ಗುಂಬಳಪುರ ಮಠ, ಶಹಾಪುರ), ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರು ಕಾಮ, ಶರಣು ಬಿ.ಗದ್ದುಗೆ, ಬಿಜೆಪಿ ಮುಖಂಡ ಮಹೇಶರಡ್ಡಿ ಮುದ್ನಾಳ, ನಗರಸಭೆ ಮಾಜಿ ಅಧ್ಯಕ್ಷ ವಿಲಾಸ ಪಾಟೀಲ್, ಶಹಾಪುರ ನಗರಸಭೆ ಸದಸ್ಯ ರಾಜುಗೌಡ ಪಾಟೀಲ್ ಮಡ್ನಾಳ, ಮಲ್ಲಿನಾಥ ಚಿಂಚೊಳಿ, ಶಂಭುಲಿಂಗ ಗೊಗಿ, ಶರಣುಗೌಡ ಬಾಡಿಯಾಳ, ರುದ್ರುಗೌಡ ಪಾಟೀಲ್, ಬಸ್ಸುಗೌಡ ನಾಯ್ಕಲ್, ಸಿದ್ದುಗೌಡ ತಂಗಡಗಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.