ಸುರಪುರ | ನಗರಸಭೆ ಮುಂದೆ ಬಿ.ಬಸವಲಿಂಗಪ್ಪನವರ ಮೂರ್ತಿ ನಿರ್ಮಿಸಲು ಕ್ರಾಂತಿ ಆಗ್ರಹ

ಸುರಪುರ, ಸೆ.17: ರಾಜ್ಯದಲ್ಲಿ ಮಲ ಹೊರುವ ಪದ್ಧತಿ ನಿಷೇಧಿಸಿರುವ ಬಿ. ಬಸವಲಿಂಗಪ್ಪನವರ ಮೂರ್ತಿಯನ್ನು ನಗರದ ನಗರಸಭೆ ಮುಂಭಾಗದಲ್ಲಿ ನಿರ್ಮಿಸಲು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಒತ್ತಾಯಿಸಿದ್ದಾರೆ.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ, ಪತ್ರಿಕಾ ಪ್ರಕಟಣೆ ನೀಡಿದ್ದು, ಇತ್ತೀಚೆಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಉದ್ಯಾನವನಕ್ಕೆ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಅವರ ಹೆಸರಿಡಲು ಹಾಗೂ ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ ಮತ್ತು ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಮೂರ್ತಿಗಳನ್ನು ನಿರ್ಮಿಸಲು ಅನುಮೋದಿಸಿರುವುದು ಶ್ಲಾಘನೀಯ ಎಂದರು.
ಅದರಂತೆ, ನಗರದ ಬುದ್ಧ ವಿಹಾರಕ್ಕೆ ಹೋಗುವ ಎಡಭಾಗದ ಬಡಾವಣೆಗೆ ಅಂಬೇಡ್ಕರ್ ನಗರ ಅಥವಾ ಬುದ್ಧ ನಗರ ಎಂದು ಹೆಸರಿಡಲು ಶಾಸಕರಾದ ರಾಜಾ ವೇಣುಗೋಪಾಲ ನಾಯಕ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಹಿಂದೆ ಶಾಸಕನಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರು ಬಸವಲಿಂಗಪ್ಪನವರ ಮೂರ್ತಿ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದನ್ನು ಸ್ಮರಿಸಿದ ಅವರು, ಈಗ ಶಾಸಕರಾಗಿರುವ ರಾಜಾ ವೇಣುಗೋಪಾಲ ನಾಯಕರು ಆ ಕೆಲಸವನ್ನು ನೆರವೇರಿಸಬೇಕು ಎಂದು ಆಗ್ರಹಿಸಿದ್ದಾರೆ.