ಗುರುಮಠಕಲ್ ಜೆಡಿಎಸ್ ಶಾಸಕ ಶರಣುಗೌಡ ಕಂದಕೂರ ವಿರುದ್ದ ಕಾಂಗ್ರೆಸ್‌ನಿಂದ ಪ್ರತಿಭಟನೆ

ಗುರುಮಠಕಲ್: ಪ್ರಜಾಸೌಧ ಅಡಿಗಲ್ಲು ಸಮಾರಂಭದಲ್ಲಿ ಶಾಸಕ ಶರಣುಗೌಡ ಕಂದಕೂರ ಶಿಷ್ಟಾಚಾರ ಉಲ್ಲಂಘನೆ ಮಾಡಿ, ಮಾಜಿ ಸಚಿವ ಹಾಗೂ ನಿಜಶರಣ ಅಂಬಿಗಾರ ಚೌಡಯ್ಯ ನಿಗಮದ ರಾಜ್ಯಾಧ್ಯಕ್ಷ ಬಾಬುರಾವ್ ಚಿಂಚನಸೂರ ಅವರನ್ನು ಏಕವಚನದಲ್ಲಿ ಬೈದು ಅವಮಾನಿಸಿದ್ದಾರೆಂದು ಆರೋಪಿಸಿ, ಗುರುಮಠಕಲ್ ಹಾಗೂ ಸೈದಾಪೂರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.
ಪಟ್ಟಣದ ಸಿಹಿನೀರು ಭಾವಿಯಿಂದ ಗಂಗಾಪರಮೇಶ್ವರಿ ವೃತ್ತದ ಮೂಲಕ ಬಸವೇಶ್ವರ ವೃತ್ತದವರೆಗೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಮೆರವಣಿಗೆ ನಡೆಸಿ, ಶಾಸಕ ಕಂದಕೂರ ವಿರುದ್ಧ ಘೋಷಣೆ ಕೂಗಿದರು.
ನಂತರ ತಹಶೀಲ್ದಾರ್ ಶಾಂತಗೌಡ ಬಿರಾದಾರ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸ್ಸಿರೆಡ್ಡಿ ಅನಪೂರ ಮಾತನಾಡಿ, “ಗುರುಮಠಕಲ್ ಕ್ಷೇತ್ರವು ಕಾಂಗ್ರೆಸ್ ಪಕ್ಷದ ಗಡಿಮನೆ. ಇಲ್ಲಿಂದ ಆಯ್ಕೆಯಾಗಿದ್ದ ಡಾ.ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಬಾಬುರಾವ್ ಚಿಂಚನಸೂರ ಅವರು ಸಹ ಸಚಿವರಾಗಿಯೂ ಕ್ಷೇತ್ರದ ಅಭಿವೃದ್ಧಿ ಮಾಡಿದ್ದಾರೆ. ಆದರೆ ಇತ್ತೀಚಿನ ಶಾಸಕ ಕಂದಕೂರ ಅಹಂಕಾರದಿಂದ ವರ್ತಿಸುತ್ತಿದ್ದಾರೆ. ಅಭಿವೃದ್ಧಿ ಮರೀಚಿಕೆಯಾಗಿದೆ. ಬೇಕಾದರೆ ಯಾವುದೇ ವೇದಿಕೆಯಲ್ಲಿ ಕುಳಿತು, ಯಾರು ಅಭಿವೃದ್ಧಿ ಮಾಡಿದ್ದಾರೆ ಮತ್ತು ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಎಂಬುದರ ಕುರಿತು ಚರ್ಚಿಸಲು ನಾನು ಶಾಸಕರಿಗೆ ಸವಾಲು ಹಾಕುತ್ತೇನೆ” ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಸಾಯಿಬಣ್ಣ ಬೋರಬಂಡ ಅವರು ಮಾತನಾಡಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಚಪೇಟ್ಲಾ, ನಿರಂಜನರೆಡ್ಡಿ, ಮುಖಂಡರಾದ ರಾಜಗೋಪಾಲರೆಡ್ಡಿ, ಭೀಮಣ್ಣ ಶಾಲಿ, ಶ್ರೇಣಿಕುಮಾರ ಧೋಖಾ, ವಿಶ್ವನಾಥ ನೀಲಹಳ್ಳಿ, ನಿತ್ಯಾನಂದ ಪೂಜಾರಿ, ರಘುನಾಥರೆಡ್ಡಿ ನಜರಪೂರ, ಸೈಯದ್ ಖಾಜಾ ಮೈನೋದ್ದೀನ್, ಸಂಜೀವಕುಮಾರ ಚಂದಾಪೂರ, ಸಾಯಿಬಣ್ಣ ಹೂಗರ್, ಲಕ್ಷ್ಮಣ ಆಶನಾಳ, ಮಲ್ಲಮ್ಮ, ಸ್ಯಾಮಶನ್, ಮೊಗುಲಪ್ಪ ಬೊಯಿನ್ ಯದ್ಲಾಪೂರ್, ಸೈಯದ್ ಬಾಬಾ, ಚನ್ನಬಸಪ್ಪ ಗಾಜರಕೊಟ್, ಹುಸನಪ್ಪ ಪುಲಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.