ಕಲ್ಯಾಣ ಕರ್ನಾಟಕಕ್ಕೆ ಘೋಷಣೆಯಾಗಿರುವ ಯೋಜನೆಗಳ ಜಾರಿಗೆ ಕರವೇ ಒತ್ತಾಯ

ಯಾದಗಿರಿ: ಕಲಬುರಗಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಪಾಯಿ ಯೋಜನೆಗಳನ್ನು ಘೋಷಿಸಿದ್ದರೂ, ಅವು ಜಾರಿಯಾಗದೇ ಕಾಗದದ ಮಟ್ಟಕ್ಕೆ ಸೀಮಿತವಾಗಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮು ನಾಯಕ ಮಾತನಾಡಿ, “ಸಂಪುಟ ಸಭೆಯಲ್ಲಿ 56 ನಿರ್ಧಾರಗಳಲ್ಲಿ 46 ಕಲ್ಯಾಣ ಕರ್ನಾಟಕಕ್ಕೆ ಸಂಬಂಧಿಸಿದವು. ಆದರೆ ಒಂದು ವರ್ಷದೊಳಗೆ ಜಾರಿಗೆ ಬಂದಿರುವುದು ಶೇ.10ಕ್ಕೂ ಕಡಿಮೆ. ಉಳಿದವು ಜನತೆಗೆ ತಲುಪದ ಭರವಸೆಗಳಾಗಿಯೇ ಉಳಿದಿವೆ” ಎಂದು ಟೀಕಿಸಿದರು.
“ಕೃಷಿ ಇಲಾಖೆಗೆ 100 ಕೋಟಿ, ಬೀದರ್–ಕಲಬುರಗಿಗೆ ಕುಡಿಯುವ ನೀರು ಯೋಜನೆಗೆ 7,200 ಕೋಟಿ, ಕಲಬುರಗಿಗೆ 1,685 ಕೋಟಿ ವೆಚ್ಚದಲ್ಲಿ ಸ್ಮಾರ್ಟ್ ಸಿಟಿ, 17,439 ಹುದ್ದೆಗಳ ಭರ್ತಿ, ಆರೋಗ್ಯ ಕ್ಷೇತ್ರದಲ್ಲಿ 45 ಹೊಸ ಕೇಂದ್ರಗಳ ಸ್ಥಾಪನೆ, ಸಮುದಾಯ ಆರೋಗ್ಯ ಕೇಂದ್ರಗಳ ಮೇಲ್ದರ್ಜೆ, ಹೊಸ ನ್ಯಾಯಾಲಯ ಸಂಕೀರ್ಣ ನಿರ್ಮಾಣ ಸೇರಿದಂತೆ ಅನೇಕ ನಿರ್ಧಾರಗಳು ಕೈಗೊಳ್ಳಲ್ಪಟ್ಟಿದ್ದರೂ, ಯಾವುದೂ ನೆಲೆಯೂರಿಲ್ಲ. ಇದು ಕಲ್ಯಾಣ ಕರ್ನಾಟಕದ ಜನರ ಹಕ್ಕಿನ ಮೇಲಿನ ನಿರ್ಲಕ್ಷ್ಯ” ಎಂದು ಆರೋಪಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ 41 ಶಾಸಕರು, 5 ಸಂಸದರು, 6 ಸಚಿವರು ಇದ್ದರೂ ಅಭಿವೃದ್ಧಿ ವಿಚಾರದಲ್ಲಿ ಯಾರೂ ಗಂಭೀರವಾಗಿ ಮಾತಾಡುತ್ತಿಲ್ಲ. ಪ್ರತ್ಯೇಕ ಸಚಿವಾಲಯದ ಘೋಷಣೆಯೂ ಇನ್ನೂ ಅಸಾಧ್ಯವಾಗಿರುವುದು ವಿಷಾದನೀಯ. ಈ ಬಾರಿಯ ಘೋಷಣೆಗಳನ್ನೂ ಕೂಡ ತಕ್ಷಣ ಜಾರಿಗೆ ತರದಿದ್ದರೆ ಕರವೇ ಉಗ್ರ ಹೋರಾಟಕ್ಕೆ ಮುಂದಾಗಲಿದೆ” ಎಂದು ಭೀಮುನಾಯಕ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂತೋಷ ನಿರ್ಮಲಕರ್, ಶಿವರಾಜ ಹೊನಗೇರಿ, ಜನಾರ್ದನ, ಶರಣು ಎಲ್ಹೇರಿ ಮತ್ತಿತರರು ಉಪಸ್ಥಿತರಿದ್ದರು.