ಉತ್ತರ ಪ್ರದೇಶ ‘ಪ್ರಯೋಗ’ ಬಿಹಾರದಲ್ಲೂ ಆಗುವುದೇ?

ಯಾದವರು, ಮುಸ್ಲಿಮರ ಜತೆ ಒಬಿಸಿ, ಇಬಿಸಿ, ದಲಿತರ ಸಮೀಕರಣ ಮಾಡಿ ಚುನಾವಣೆ ಎದುರಿಸಿದರೆ ಐಎನ್‌ಡಿಐಎಗೆ ಲಾಭವಾಗಬಹುದು. ಮುಸ್ಲಿಮ್ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಅವರಿಗೇ ಟಿಕೆಟ್ ಹಂಚಿಕೆ ಮಾಡುವುದು ಸರಿಯಾದ ಕ್ರಮ. ಇದರಿಂದ ಉವೈಸಿ ದುರ್ಬಲಗೊಳ್ಳುವುದು ನಿಶ್ಚಿತ. ಇದರಿಂದ ಮತಗಳ ವಿಭಜನೆ ತಪ್ಬಬಹುದು.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಇಂಥದೊಂದು ಪ್ರಯೋಗ ನಡೆಸಿ ಯಶಸ್ವಿಯಾಗಿದ್ದಾರೆ. ಒಬಿಸಿ, ಇಬಿಸಿ, ದಲಿತರು ಹಾಗೂ ಮುಸ್ಲಿಮರ ಸಮೀಕರಣ ಮಾಡಿದ್ದಾರೆ. ಈ ಸಮೀಕರಣವೇ ಎನ್‌ಡಿಎ ಅಲ್ಲಿ ಮುಗ್ಗರಿಸಲು ಕಾರಣವಾಗಿದ್ದು. ಬಿಹಾರದಲ್ಲೂ ಈ ಪ್ರಯೋಗ ನಡೆಯಬೇಕಿದೆ. ಹೀಗಾದರೆ ಐಎನ್‌ಡಿಐಎ ಬ್ಲಾಕ್ ಕೈಗೆ ಅಧಿಕಾರ ಸಿಗಬಹುದು.
ಮಗಧ ಬುದ್ಧನ ನೆಲ. ಇಂದಿನ ಬಿಹಾರವೇ ಹಿಂದಿನ ಮಗಧ. ಮೌರ್ಯರು, ಗುಪ್ತರು ಸೇರಿ ಅನೇಕ ರಾಜ ಮನೆತನಗಳು ಆಳಿ ಅಳಿದಿವೆ. ಪಾಟಲಿಪುತ್ರ (ಪಟ್ನಾ) ಮಗಧದ ರಾಜಧಾನಿ. ಇಲ್ಲಿ ನೆನಪು ಮಾಡಿಕೊಳ್ಳಲು ಹೊರಟಿರುವುದು ರಾಜ ಮನೆತನಗಳ ಇತಿಹಾಸವನ್ನಲ್ಲ. ಬದುಕಿನ ಸತ್ಯ ಹುಡುಕಲು ಹೋದ ಗೌತಮನ ಹೆಜ್ಜೆ ಗುರುತುಗಳನ್ನು. ಕುಟುಂಬ, ರಾಜ ವೈಭೋಗ, ಸಾಮ್ರಾಜ್ಯ ಎಲ್ಲ ತೊರೆದ ಬುದ್ಧನ ತ್ಯಾಗವನ್ನು. ಇಂಥ ತ್ಯಾಗ-ಶಾಂತಿಯ ತೋಟದಲ್ಲಿ ‘ಆಧಿಪತ್ಯ’ ಸ್ಥಾಪಿಸಲು ರಾಜಕೀಯ ಪಕ್ಷಗಳು ಜಿದ್ದಾಜಿದ್ದಿಗಿಳಿದಿವೆ.
ಬಿಹಾರದಲ್ಲಿ ಚುನಾವಣಾ ‘ಅಖಾಡ’ ಅಣಿಯಾಗಿದೆ. ಅಕ್ಟೋಬರ್, ನವೆಂಬರೊಳಗೆ ‘ಮತ ಸಮರ’ ಮುಗಿದು ಹೊಸ ‘ಸಾಮ್ರಾಟ’ ಅಧಿಕಾರಕ್ಕೆ ಬರಬೇಕಿದೆ. ಈ ಹೊಸ ಸಾಮ್ರಾಟ ಯಾರು? ನಿತೀಶೋ, ತೇಜಸ್ವಿಯೋ ಇಲ್ಲವೇ ಹೊಸಬರೋ ಇದನ್ನು ಮತದಾರರು ನಿರ್ಣಯಿಸಬೇಕು. ಬಿಹಾರ ಇತರ ಹಿಂದುಳಿದ ವರ್ಗಗಳ ರಾಜಕಾರಣದ ‘ಎಪಿಕ್ ಸೆಂಟರ್’. ದಕ್ಷಿಣದ ಕರ್ನಾಟಕ, ತಮಿಳುನಾಡಲ್ಲಿ ಬಹಳ ಹಿಂದೆ ಹಿಂದುಳಿದ, ದಲಿತ ಶೋಷಿತ ವರ್ಗಗಳಿಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಸಿಕ್ಕರೂ, ಉತ್ತರದಲ್ಲಿ ಈ ಪ್ರಯೋಗ ದೊಡ್ಡ ಮಟ್ಟದಲ್ಲಿ ನಡೆದಿದ್ದು ಬಿಹಾರದಲ್ಲಿ ಮೊದಲು. ಈ ವರ್ಗಗಳಿಗೆ ಅವುಗಳ ಸಂಖ್ಯೆಗನುಗುಣವಾಗಿ ರಾಜಕೀಯ- ಔದ್ಯೋಗಿಕವಾಗಿ ಪ್ರಾತಿನಿಧ್ಯ ಸಿಗಬೇಕೆಂದು ದನಿ ಎತ್ತಿದವರು ಸಮಾಜವಾದಿ ಚಿಂತಕ ಡಾ. ರಾಮಮನೋಹರ ಲೋಹಿಯಾ.
90ರ ದಶಕದ ಮಂಡಲ್ ಚಳವಳಿ ಒಬಿಸಿಗಳಲ್ಲಿ ದೊಡ್ಡ ಮಟ್ಟದ ರಾಜಕೀಯ ಪ್ರಜ್ಞೆ ಬೆಳೆಸಿತು. ಅವರ ಸಂಘಟನೆಗೂ ದಾರಿ ಮಾಡಿತು. ಅಲ್ಲಿವರೆಗೆ ಅಧಿಕಾರ ಮೇಲ್ವರ್ಗದ ಹಿಡಿತದಲ್ಲಿತ್ತು. ಅವರ ಕೈಯಲ್ಲೇ ಕಾಂಗ್ರೆಸ್ ಸಿಕ್ಕಿತ್ತು. ಆಗೊಮ್ಮೆ, ಈಗೊಮ್ಮೆ ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ನಾಯಕರನ್ನು ಮುಖ್ಯಮಂತ್ರಿ ಗದ್ದುಗೆಯಲ್ಲಿ ಕೂರಿಸಲಾಗುತಿತ್ತು. ಮಂಡಲ್ ಚಳವಳಿ ಮೇಲ್ವರ್ಗದ ಪ್ರಾಬಲ್ಯ ತಪ್ಪಿಸಿ, ಕಾಂಗ್ರೆಸ್ ಕೋಟೆ ಕುಸಿಯುವಂತೆ ಮಾಡಿತು. ಅಲ್ಲಿಂದ ಪ್ರಾದೇಶಿಕ ಪಕ್ಷಗಳದ್ದೇ ಪಾರುಪತ್ಯ. ಲೋಹಿಯಾ ಗರಡಿಯಲ್ಲಿ ಬೆಳೆದು ಬಂದ, ಹಿಂದುಳಿದ ವರ್ಗಗಳಿಗೆ ಸೇರಿದ ಲಾಲು ಪ್ರಸಾದ್ ಮತ್ತು ನಿತೀಶ್ ಕುಮಾರ್ ಅವರದೇ ನಾಯಕತ್ವ. ಈಗಲೂ ರಾಜ್ಯ ರಾಜಕಾರಣ ಅವರ ಸುತ್ತ ಗಿರಕಿ ಹೊಡೆಯುತ್ತಿದೆ. ಅವರಿಲ್ಲದ ರಾಜಕಾರಣ ಊಹಿಸುವುದೂ ಕಷ್ಟ.
ಮೂರೂವರೆ ದಶಕಗಳ ಬಿಹಾರ ರಾಜಕಾರಣದಲ್ಲಿ ಲಾಲು- ನಿತೀಶ್ ಮೆರೆದಿದ್ದಾರೆ. ರಾಷ್ಟ್ರ ರಾಜಕಾರಣದಲ್ಲೂ ಮಿಂಚಿದ್ದಾರೆ. ಆಗಾಗ ಅಧಿಕಾರ ಕೈ ಬದಲಾಯಿಸಿದೆ. ಲಾಲು, ಅವರ ಕುಟುಂಬದ ಮೊದಲ 15 ವರ್ಷದಲ್ಲಿ ಬಿಹಾರ ಅಭಿವೃದ್ಧಿ ಕಂಡಿಲ್ಲದಿರುವುದು ನಿರ್ವಿವಾದ. ಅವರು ಮನಸ್ಸು ಮಾಡಿದ್ದರೆ ಬಿಹಾರ ಅಭಿವೃದ್ಧಿ ಸೂಚ್ಯಂಕದಲ್ಲಿ ನಂಬರ್ ಒನ್ ಆಗುತಿತ್ತು. ಅಂಥ ಅವಕಾಶ ಕಳೆದುಕೊಂಡರು. ಆಗ ರಾಜ್ಯ ಅಭಿವೃದ್ಧಿ ಆಗಿದ್ದರೆ ಈಗ ತೇಜಸ್ವಿ ಯಾದವ್ ಅಧಿಕಾರ ಹಿಡಿಯಲು ಕಷ್ಟಪಡಬೇಕಿರಲಿಲ್ಲ.
ಒಮ್ಮೆ, ‘‘ಬಿಹಾರದ ರಸ್ತೆಗಳನ್ನು ಹೇಮಾಮಾಲಿನಿ ಕೆನ್ನೆಯಂತೆ ನುಣುಪಾಗಿ ಮಾಡುತ್ತೇನೆ’’ ಎಂದು ಲಾಲು ವಿವಾದಾತ್ಮಕ ಹೇಳಿಕೆ ಕೊಟ್ಟರೇ ವಿನಾ ಒಳ್ಳೆಯ ರಸ್ತೆಗಳನ್ನು ಮಾಡಲಿಲ್ಲ; ಗ್ರಾಮೀಣರಿಗೆ ಮೂಲ ಸೌಕರ್ಯ ಒದಗಿಸಲಿಲ್ಲ. ಅಭಿವೃದ್ಧಿ ಮಾತೆತ್ತಿದ್ದರೆ, ‘‘ಒಬಿಸಿಗೆ ಘನತೆ ಬದುಕು ಮುಖ್ಯ, ಆಮೇಲೆ ಅಭಿವೃದ್ಧಿ’’ ಎಂದು ಹೇಳುತ್ತಿದ್ದರು. ಅದೇನೇ ಇರಲಿ, ಲಾಲು ಒಬಿಸಿ ಮತ್ತು ಶೋಷಿತ ಸಮುದಾಯಗಳನ್ನು ಸಮೀಕರಣಗೊಳಿಸಿ ಪರ್ಯಾಯ ರಾಜಕೀಯ ಶಕ್ತಿ ಕಟ್ಟಿದ್ದು ತಮಾಷೆ ವಿಷಯವಲ್ಲ. ಅದೇ ಸಂದರ್ಭದಲ್ಲಿ ಭಾಗಲ್ಪುರ ಮತೀಯ ಗಲಭೆ ಬಳಿಕ ಬಹುತೇಕ ಮುಸ್ಲಿಮರು ಕಾಂಗ್ರೆಸ್ ಬಿಟ್ಟು ಲಾಲು ಕಡೆ ವಾಲಿದರು ಆಗಲೇ ಲಾಲು ‘ಎಂ-ವೈ’ (ಮುಸ್ಲಿಮ್-ಯಾದವ) ಸೂತ್ರ ಹೆಣೆದು ಯಶಸ್ಸು ಕಂಡಿದ್ದು. ಸದ್ಯ, ಈ ಸೂತ್ರ ಬೇರ್ಪಡದಂತೆ ನೋಡಿಕೊಳ್ಳುವುದೇ ದೊಡ್ಡ ಸವಾಲು. ಈ ಸಮೀಕರಣ ಒಡೆಯಲು ಪ್ರಯತ್ನ ನಡೆಯುತ್ತಿದೆ. ಜೆಡಿಯು-ಬಿಜೆಪಿ ತಂತ್ರ ಮಾಡುತ್ತಿವೆ. ಒಂದೆಡೆ ಜೆಡಿಯು, ಮತ್ತೊಂದೆಡೆ ಬಿಜೆಪಿ ಹೀಗೆ ಲಾಲು ಇಕ್ಕಳದಲ್ಲಿ ಸಿಲುಕಿದ್ದಾರೆ. ಎಂ-ವೈಗೆ ಪರ್ಯಾಯವಾಗಿ ತಮ್ಮದೇ ಕುರ್ಮಿ, ಇಬಿಸಿ, ಪಸ್ಮಂದ ಮುಸ್ಲಿಮರನ್ನು ಬೆಸೆದಿರುವ ನಿತೀಶ್, ಯಾದವರನ್ನೂ ಓಲೈಸುತ್ತಿದ್ದಾರೆ. ಮೇಲ್ವರ್ಗದ ಭೂಮಿಹಾರ್, ರಜಪೂತ, ಕಾಯಸ್ಥ ಜಾತಿಗಳೂ ಬೆಂಬಲಕ್ಕಿವೆ. ಇದೇ ‘ಕಾಂಬಿನೇಷನ್’ 2005ರಿಂದ ಜೆಡಿಯು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ.
ಬಿಹಾರದಲ್ಲಿ ಈ ಸಲ ಬದಲಾವಣೆ ಗಾಳಿ ಬೀಸುವುದೇ ರಾಜಕೀಯ ಅಧಿಕಾರ ನಿತೀಶ್ ಅವರಿಂದ ತೇಜಸ್ವಿ ಕೈಗೆ ಸಿಗುವುದೇ ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆ ಆಗುತ್ತಿವೆ. ಎರಡು ವರ್ಷದ ಹಿಂದೆ ಬಿಡುಗಡೆಯಾದ ರಾಜ್ಯದ ಆರ್ಥಿಕ-ಸಾಮಾಜಿಕ ಸಮೀಕ್ಷೆ ಅಧ್ಯಯನ ವರದಿ ಜಾತಿಗಳ ಬಲಾಬಲದ ಸ್ಪಷ್ಟ ಚಿತ್ರಣ ನೀಡಿದೆ. ಅದರಂತೆ, ಇಬಿಸಿ ಗುಂಪಿನಲ್ಲಿರುವ 112 ಜಾತಿಗಳ ಸಂಖ್ಯೆ ಶೇ. 36, ಎರಡನೇ ಸ್ಥಾನದಲ್ಲಿ ಒಬಿಸಿ ಜಾತಿಗಳಿವೆ. ಅವುಗಳ ಪ್ರಮಾಣ ಶೇ. 27ಕ್ಕೂ ಹೆಚ್ಚು. ಪರಿಶಿಷ್ಟ ಜಾತಿ ಶೇ 19.65, ಪರಿಶಿಷ್ಟ ಪಂಗಡ ಶೇ. 1.68, ಮೇಲ್ವರ್ಗ ಶೇ 15.5, ಒಟ್ಟು ಜನಸಂಖ್ಯೆಯ ಶೇ. 18ರಷ್ಟು ಮುಸ್ಲಿಮರು. ಉಳಿದವರು ಹಿಂದೂಗಳು. ಮುಸ್ಲಿಮರು-ಯಾದವರು (ಎಂ-ವೈ) ಒಗ್ಗೂಡಿದರೆ ಶೇ. 32ರಷ್ಟಾಗಲಿದ್ದಾರೆ.
ಆದರೆ, ಈ ಸಮುದಾಯಗಳ ಮತಗಳು ಪೂರ್ಣವಾಗಿ ಐಎನ್‌ಡಿಐಎಗೆ ಬೀಳುತ್ತವೆ ಎಂದು ಹೇಳಲಾಗದು. ಹೊಸ ಪೀಳಿಗೆಯ ಯಾದವ ಮತದಾರರು ಎನ್‌ಡಿಎ ಪರ ವಾಲುತ್ತಿದ್ದಾರೆ. ಮುಸ್ಲಿಮರು ಏಕಮುಖವಾಗಿ ಆಲೋಚಿಸುವ ಕಾಲ ಮುಗಿದಿದೆ. ಅವರನ್ನು ಬೇರೆ ಪಕ್ಷಗಳೂ ಓಲೈಸುತ್ತಿವೆ. ಅಸದುದ್ದೀನ್ ಉವೈಸಿ ಮುಸ್ಲಿಮರನ್ನೇ ಕೇಂದ್ರೀಕರಿಸಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಐಎಂಐಎಂ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಐದರಲ್ಲಿ ಗೆದ್ದಿದೆ. 14 ಕಡೆ ಠೇವಣಿ ಕಳೆದುಕೊಂಡಿದೆ. ಮುಸ್ಲಿಮರ ಮತಗಳನ್ನು ಅಲ್ಪಸ್ವಲ್ಪ ಕಸಿದರೂ ಹಾನಿ ಐಎನ್‌ಡಿಐಎಗೆ. ಬಿಎಸ್‌ಪಿ ಶೇ 1.5ರಷ್ಟು ಮತಗಳನ್ನು ಪಡೆದಿದೆ. ‘ಚುನಾವಣಾ ವ್ಯೆಹಕರ್ತ’ ಪ್ರಶಾಂತ್ ಕಿಶೋರ್ ಅವರದ್ದು ಬಿಹಾರ ರಾಜಕಾರಣಕ್ಕೆ ಹೊಸ ಎಂಟ್ರಿ. ಬ್ರಾಹ್ಮಣರಾಗಿರುವ ಅವರು ಯಾರಿಗೆ ‘ಏಟು’ ಕೊಡುತ್ತಾರೆ ನೋಡಬೇಕು.
2015ರ ವಿಧಾನಸಭೆ ಚುನಾವಣೆಯಲ್ಲಿ ಆರ್‌ಜೆಡಿ 48 ಯಾದವರು, 16 ಮುಸ್ಲಿಮರಿಗೆ ಟಿಕೆಟ್ ನೀಡಿತ್ತು. 2020ರಲ್ಲಿ 58 ಯಾದವರು ಮತ್ತು 17 ಮುಸ್ಲಿಮರನ್ನು ಕಣಕ್ಕಿಳಿಸಿತ್ತು. ಇವರಲ್ಲಿ 8 ಮುಸ್ಲಿಮರು ಗೆದ್ದರು. ಜೆಡಿಯುನ 11 ಮುಸ್ಲಿಮರಲ್ಲಿ ಯಾರೂ ಗೆಲ್ಲಲಿಲ್ಲ. ಇದು ಜೆಡಿಯುಗೆ ಮುಸ್ಲಿಮರ ಬೆಂಬಲವಿಲ್ಲ ಎಂಬುದರ ಸ್ಪಷ್ಟ ಸೂಚನೆ. ಲಾಲು ಪಕ್ಷವೂ ಹೆಚ್ಚಿನ ಸಂಖ್ಯೆಯಲ್ಲಿರುವ ಮುಸ್ಲಿಮರಿಗೆ ಕಡಿಮೆ ಟಿಕೆಟ್ ನೀಡಿ, ಅವರಿಗಿಂತ ಕಡಿಮೆ ಸಂಖ್ಯೆಯಲ್ಲಿರುವ ಯಾದವರಿಗೆ ಅಧಿಕ ಟಿಕೆಟ್ ನೀಡಿತು. ಈ ಧೋರಣೆ ಬಂಡಾಯಕ್ಕೆ ಕಾರಣವಾಯಿತು. ಅದರ ಪರಿಣಾಮ ಚುನಾವಣೆ ಮೇಲಾಯಿತು.
ದಶಕದ ಹಿಂದೆ 53 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ ಶೇ. 24.42ರಷ್ಟು ಮತಗಳನ್ನು ಪಡೆದಿತ್ತು. ಎನ್‌ಡಿಎ ಮಿತ್ರ ಪಕ್ಷ ಜೆಡಿಯು ಶೇ. 16.83 ಮತಗಳೊಂದಿಗೆ 71 ಸ್ಥಾನ ಗಳಿಸಿತ್ತು. ಕಾಂಗ್ರೆಸ್‌ನ 27 ಅಭ್ಯರ್ಥಿಗಳು ಚುನಾಯಿತರಾಗಿದ್ದರು. ಅದು ಪಡೆದ ಮತಗಳು ಶೇ. 6.66, ಆರ್‌ಜೆಡಿಯ 80 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಈ ಪಕ್ಷಕ್ಕೆ ಬಂದ ಮತಗಳ ಪ್ರಮಾಣ ಶೇ. 18.35. ಎನ್‌ಡಿಎ ತನ್ನ ಎದುರಾಳಿಗಿಂತ ಸೀಟು ಹಾಗೂ ಮತ ಗಳಿಕೆಯಲ್ಲಿ ಮುಂದಿತ್ತು. 2020ರಲ್ಲಿ ಬಿಜೆಪಿ ಪಡೆದ ಮತಗಳ ಪ್ರಮಾಣ ಕಡಿಮೆ ಆದರೂ ಸೀಟುಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, 74 ಸ್ಥಾನಗಳನ್ನು ಗೆದ್ದುಕೊಂಡಿದೆ. ಅದಕ್ಕೆ ಶೇ 19.46ರಷ್ಟು ಮತಗಳು ಬಂದಿವೆ. ಜೆಡಿಯುಗೆ ಶೇ 15.39ರಷ್ಟು ಮತದಾರರು ಬೆಂಬಲಿಸಿದರೂ, ಸಿಕ್ಕ ಸ್ಥಾನಗಳು 43. ಕಾಂಗ್ರೆಸ್ ಮತಗಳು ಏರಿಕೆಯಾಗಿದ್ದರೂ ಸೀಟುಗಳು ಕಡಿಮೆಯಾಗಿವೆ. ಆರ್‌ಜೆಡಿ ಜತೆ ಚೌಕಾಸಿ ಮಾಡಿಕೊಂಡು 70 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಣಕ್ಕಿಳಿದರೂ, ಗೆಲುವು ಸಾಧ್ಯವಾಗಿದ್ದು 19 ಕಡೆ ಮಾತ್ರ. ಆರ್‌ಜೆಡಿ ಮತಗಳು ಏರಿಕೆಯಾಗಿದ್ದರೂ ಹಿಂದಿನ ಚುನಾವಣೆಗಿಂತ ಐದು ಸ್ಥಾನಗಳು ಕಡಿಮೆಯಾಗಿವೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಯು ಮತಗಳ ಪ್ರಮಾಣ ವಿಧಾನಸಭೆ ಚುನಾವಣೆಗಿಂತ ಅತ್ಯಲ್ಪ ಏರಿಕೆಯಾದರೂ ಸೀಟುಗಳು ಗಣನೀಯವಾಗಿ ಹೆಚ್ಚಳವಾಗಿವೆ. ಉಭಯ ಪಕ್ಷಗಳು ತಲಾ 12 ಸ್ಥಾನಗಳನ್ನು ಗೆದ್ದಿವೆ. ಕಾಂಗ್ರೆಸ್ ಬೆಂಬಲಿತ ಮತದಾರರಲ್ಲಿ ಏರಿಳಿತ ಕಾಣದಿದ್ದರೂ ಸಿಕ್ಕಿದ ಸ್ಥಾನಗಳು ಮೂರು. ಆರ್‌ಜೆಡಿ ಬಲ ಬಹುತೇಕ ವಿಧಾನಸಭೆ ಚುನಾವಣೆಯಷ್ಟೇ ಇದ್ದು, ನಾಲ್ಕು ಸ್ಥಾನ ದಕ್ಕಿದೆ. ಸಿಪಿಐ(ಎಂಎಲ್) ಅಭ್ಯರ್ಥಿಗಳದ್ದು ಅಚ್ಚರಿಯ ಗೆಲುವು. ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಎರಡು ಕಡೆ ಗೆದ್ದಿದೆ. ಇದಕ್ಕೆ ಕಾರ್ಯಕರ್ತರ ಬದ್ಧತೆ, ನಿಷ್ಠೆ ಮತ್ತು ವ್ಯವಸ್ಥಿತ ಪ್ರಚಾರ ಕಾರಣ. ಆರ್‌ಜೆಡಿ ಹಾಗೂ ಕಾಂಗ್ರೆಸ್‌ಗೆ ಇಂತಹ ಕಾರ್ಯಕರ್ತರ ಪಡೆ ಇಲ್ಲ.
ರಾಹುಲ್ ಇತ್ತೀಚೆಗೆ ಬಿಹಾರದಲ್ಲಿ ನಡೆಸಿದ ‘ವೋಟರ್ ಅಧಿಕಾರ್ ಯಾತ್ರಾ’ ನಿರೀಕ್ಷೆ ಮೀರಿ ಯಶಸ್ಸು ಕಂಡಿದೆ. ಕಾಂಗ್ರೆಸ್ ಮುಖಂಡನನ್ನು ಅಸಂಖ್ಯಾತ ಜನ ಬೆಂಬಲಿಸಿದ್ದಾರೆ. ಅವರ ಜತೆ ಆರ್‌ಜೆಡಿ ಮುಖಂಡ, ವಿಧಾನಸಭೆ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಹೆಗಲು ಕೊಟ್ಟಿದ್ದಾರೆ. ‘ಭಾರತ ಜೋಡೊ ನ್ಯಾಯ ಯಾತ್ರೆ’ ಬಳಿಕ ಲೋಕಸಭೆ ವಿರೋಧ ಪಕ್ಷದ ನಾಯಕ ನಡೆಸಿದ ದೊಡ್ಡ ಯಾತ್ರೆ ಬಿಹಾರ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಇದರ ಬಿಸಿಯನ್ನು ಚುನಾವಣೆವರೆಗೆ ಕಾಪಿಟ್ಟುಕೊಳ್ಳಬೇಕಿದೆ.
‘ಇಂಡಿಯಾ’ ಬ್ಲಾಕ್ ಟಿಕೆಟ್ ಹಂಚಿಕೆಯಲ್ಲಿ ಜನಪರ ಹೆಜ್ಜೆ ಇಡಬೇಕಿದೆ. ದೊಡ್ಡ ಸಂಖ್ಯೆಯ ಸಮಾಜಕ್ಕೆ ಕಡಿಮೆ ಟಿಕೆಟ್, ಕಡಿಮೆ ಸಂಖ್ಯೆಯಲ್ಲಿರುವ ಜಾತಿಗಳಿಗೆ ಹೆಚ್ಚಿನ ಟಿಕೆಟ್‌ಗಳನ್ನು ಕೊಡುವುದರಿಂದ ಅಸಮಾಧಾನ ಹುಟ್ಟುತ್ತದೆ. ಬದಲಿಗೆ ಜನಸಂಖ್ಯೆ ಆಧಾರದಲ್ಲಿ ಸಮಾನ ಅವಕಾಶ ಕಲ್ಪಿಸಬೇಕಿದೆ. ಯಾದವರು, ಮುಸ್ಲಿಮರ ಜತೆ ಒಬಿಸಿ, ಇಬಿಸಿ, ದಲಿತರ ಸಮೀಕರಣ ಮಾಡಿ ಚುನಾವಣೆ ಎದುರಿಸಿದರೆ ಐಎನ್‌ಡಿಐಎಗೆ ಲಾಭವಾಗಬಹುದು. ಮುಸ್ಲಿಮ್ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಅವರಿಗೇ ಟಿಕೆಟ್ ಹಂಚಿಕೆ ಮಾಡುವುದು ಸರಿಯಾದ ಕ್ರಮ. ಇದರಿಂದ ಉವೈಸಿ ದುರ್ಬಲಗೊಳ್ಳುವುದು ನಿಶ್ಚಿತ. ಇದರಿಂದ ಮತಗಳ ವಿಭಜನೆ ತಪ್ಬಬಹುದು.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಇಂಥದೊಂದು ಪ್ರಯೋಗ ನಡೆಸಿ ಯಶಸ್ವಿಯಾಗಿದ್ದಾರೆ. ಒಬಿಸಿ, ಇಬಿಸಿ, ದಲಿತರು ಹಾಗೂ ಮುಸ್ಲಿಮರ ಸಮೀಕರಣ ಮಾಡಿದ್ದಾರೆ. ಈ ಸಮೀಕರಣವೇ ಎನ್‌ಡಿಎ ಅಲ್ಲಿ ಮುಗ್ಗರಿಸಲು ಕಾರಣವಾಗಿದ್ದು. ಬಿಹಾರದಲ್ಲೂ ಈ ಪ್ರಯೋಗ ನಡೆಯಬೇಕಿದೆ. ಹೀಗಾದರೆ ಐಎನ್‌ಡಿಐಎ ಬ್ಲಾಕ್ ಕೈಗೆ ಅಧಿಕಾರ ಸಿಗಬಹುದು.