ಈವರೆಗೆ ಹೇರಿದ್ದ ಜಿಎಸ್ಟಿಗಾಗಿ ಪ್ರಧಾನಿ ಕ್ಷಮೆಯಾಚಿಸುತ್ತಾರೆಯೆ?

PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಇತ್ತೀಚೆಗೆ ತಾನು ಮಾಡಿದ ಜಿಎಸ್ಟಿ ಸರಳೀಕರಣವನ್ನು ಕೇಂದ್ರ ಸರಕಾರವು ದೇಶದ ಜನತೆಗೆ ನೀಡಿದ ಮಹಾ ಕೊಡುಗೆ, ದೀಪಾವಳಿ ಉಡುಗೊರೆ ಎಂಬಿತ್ಯಾದಿಯಾಗಿ ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಟ್ರಂಪ್ ಸುಂಕದಿಂದ ಹೋದ ಮಾನವನ್ನು ಜಿಎಸ್ಟಿ ಸುಂಕದಿಂದ ಮರಳಿ ಗಳಿಸಿಕೊಳ್ಳುವುದಕ್ಕೆ ಪ್ರಧಾನಿ ಮೋದಿ ಯತ್ನಿಸುತಿದ್ದಾರೆ. ಶೇ. 5, ಶೇ. 12, ಶೇ. 18 ಹಾಗೂ ಶೇ. 28 ಹೀಗೆ ನಾಲ್ಕು ಹಂತಗಳ ತೆರಿಗೆ ಸ್ಲ್ಯಾಬ್ಗಳನ್ನು ಶೇ. 5 ಹಾಗೂ ಶೇ. 18 ಹೀಗೆ ಎರಡೇ ಹಂತದ ಸ್ಲ್ಯಾಬ್ಗಳಿಗೆ ಸರಕಾರ ಇಳಿಸಿದೆ. ಬಹುತೇಕ ಜೀವನಾವಶ್ಯಕ ವಸ್ತುಗಳನ್ನು ಶೇ. 5ರ ಜಿಎಸ್ಟಿ ಸ್ಲ್ಯಾಬ್ಗೆ ಸೇರ್ಪಡೆಗೊಳಿಸಲಾಗಿದೆ ಎಂದು ಕೇಂದ್ರ ಸರಕಾರ ಹೇಳಿಕೊಂಡಿದೆ. ಈ ಸುಧಾರಣೆ ದೇಶದ ಜನತೆಗೆ ಸಣ್ಣ ಮಟ್ಟದ ನಿರಾಳತೆಯನ್ನು ತಂದಿದೆ ಎನ್ನುವುದು ನಿಜವೇ ಆಗಿದ್ದರೂ, ಇದನ್ನು ಮೋದಿಯ ಕೊಡುಗೆ ಎಂದು ಕರೆಯುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಉಳಿದೇ ಬಿಡುತ್ತದೆ. ಇಷ್ಟಕ್ಕೂ ನಾಲ್ಕು ಹಂತದ ಭಾರೀ ತೆರಿಗೆಗಳನ್ನು ಈ ದೇಶದ ಮೇಲೆ ಹೇರಿದವರು ಯಾರು? ಜಿಎಸ್ಟಿಯ ಗಂಟೆಯನ್ನು ಮೊದಲ ಬಾರಿಗೆ ಬಾರಿಸಿದಾಗ ದೇಶಕ್ಕೆ ಪ್ರಧಾನಿ ಮೋದಿ ನೀಡಿದ ಭರವಸೆಗಳೇನು? ಜಿಎಸ್ಟಿಯಿಂದ ವ್ಯಾಪಾರ ಇನ್ನಷ್ಟು ಸುಲಭವಾಗುತ್ತದೆ ಬೆಲೆಗಳು ಇಳಿಕೆಯಾಗುತ್ತವೆ. ತೆರಿಗೆಗಳು ಸೋರಿಕೆಯಾಗದೆ, ದೇಶದ ಬೊಕ್ಕಸವನ್ನು ತಲುಪಿ ಅಭಿವೃದ್ಧಿಯ ಯೋಜನೆಗಳಿಗೆ ಸದ್ಬಳಕೆಯಾಗುತ್ತವೆ ಎಂದು ಸರಕಾರ ಹೇಳಿಕೊಂಡಿತ್ತು. ಜಿಎಸ್ಟಿ ಹೇರಿಕೆಯು ಅವೈಜ್ಞಾನಿಕವಾಗಿದೆ ಎಂದು ಹೆಚ್ಚಿನ ವಿರೋಧ ಪಕ್ಷಗಳು ಟೀಕೆ ಮಾಡಿದಾಗಲೂ ಅದಕ್ಕೆ ಕಿವಿ ಕೊಡದೆ ಕಳೆದ ಎಂಟು ವರ್ಷಗಳಿಂದ ಜೀವನಾವಶ್ಯಕ ವಸ್ತುಗಳ ಮೇಲೂ ಭಾರೀ ತೆರಿಗೆಗಳನ್ನು ವಿಧಿಸುತ್ತಾ ಬಂದಿತು. ಜಿಎಸ್ಟಿಯಿಂದ ದೇಶದಲ್ಲಿ ಉದ್ಯಮಗಳು ಚಿಗುರಲಿಲ್ಲ. ಬದಲಿಗೆ ಜಿಎಸ್ಟಿ ತೆರಿಗೆ ನೋಟು ನಿಷೇಧ ಮಾಡಿದ ಗಾಯಗಳ ಮೇಲೆ ಎಳೆದ ಬರೆಯಾಗಿತ್ತು.
ಕಳೆದ ಎಂಟು ವರ್ಷಗಳಲ್ಲಿ ಜಿಎಸ್ಟಿಯಿಂದಾಗಿ ಉದ್ಯಮಗಳು ಬೇರೆ ಬೇರೆ ರೀತಿಯ ಸಂಕಟಗಳಿಗೆ ಸಿಲುಕಿಕೊಂಡವು. ಗ್ರಾಹಕರಿಗೆ ಯಾವ ರೀತಿಯಲ್ಲೂ ಅನುಕೂಲವಾಗಲಿಲ್ಲ. ಯಾವುದೇ ವಸ್ತುಗಳ ಬೆಲೆ ಇಳಿಕೆಯಾಗಲಿಲ್ಲ ಮಾತ್ರವಲ್ಲ, ಜೀವನಾವಶ್ಯಕ ವಸ್ತುಗಳ ಮೇಲೆ ದುಬಾರಿ ತೆರಿಗೆ ವಿಧಿಸುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಅನನುಕೂಲವಾಯಿತು. ಮಧ್ಯಮ ವರ್ಗದ, ಸಣ್ಣ ಉದ್ದಿಮೆಗಳಿಗೆ ನೆರವಾಗುವ ಬದಲು ಜಿಎಸ್ಟಿಯು ಪ್ರಬಲರಿಗೆ ಇನ್ನಷ್ಟು ಅನುಕೂಲಗಳನ್ನು ಮಾಡಿಕೊಟ್ಟಿತು. ಬೃಹತ್ ಉದ್ಯಮಿಗಳ ಲಾಬಿಗಳಿಗೆ ಅನುಗುಣವಾಗಿ ತೆರಿಗೆಗಳ ಸ್ಲ್ಯಾಬ್ಗಳನ್ನು ವಿಧಿಸಲಾಯಿತು. ಆಕ್ಸ್ಫಾಮ್ನ ವರದಿಯ ಪ್ರಕಾರ, ಈ ದೇಶದಲ್ಲಿ ಶೇ. 50 ರಷ್ಟು ಬಡವರು ಮೂರನೇ ಎರಡರಷ್ಟು ಜಿಎಸ್ಟಿ ತೆರಿಗೆಯನ್ನು ಪಾವತಿಸುತ್ತಾ ಬಂದಿದ್ದಾರೆ. ಶೇ. 40ರಷ್ಟು ಮಧ್ಯಮವರ್ಗದಿಂದ ಮೂರನೇ ಒಂದು ಭಾಗ ಜಿಎಸ್ಟಿ ತೆರಿಗೆಯನ್ನು ಸುಲಿಯಲಾಗುತ್ತದೆ. ಶೇ. 10ರಷ್ಟು ಶ್ರೀಮಂತ ವರ್ಗದಿಂದ ಕೇವಲ ಶೇ. 3-4ರಷ್ಟು ಜಿಎಸ್ಟಿ ತೆರಿಗೆ ಪಾವತಿಯಾಗುತ್ತಾ ಬಂದಿದೆ. 2021ರಲ್ಲಿ ಒಟ್ಟು 14.7 ಲಕ್ಷ ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹವಾಗಿದ್ದರೆ, 2022-23ರಲ್ಲಿ ಇದು 18 ಲಕ್ಷ ಕೋಟಿ ರೂಪಾಯಿಯನ್ನು ತಲುಪಿತ್ತು. ವರದಿ ಪ್ರಕಾರ ಶೇ. 40ರಷ್ಟು ಮಧ್ಯಮವರ್ಗದವರು ಹಾಗೂ ಶೇ. 10ರಷ್ಟು ಶ್ರೀಮಂತ ವರ್ಗದವರು ತಮ್ಮ ಆದಾಯದಿಂದ ಪರೋಕ್ಷ ತೆರಿಗೆಗಳ ಮೇಲೆ ಮಾಡುವ ಒಟ್ಟು ವೆಚ್ಚಕ್ಕಿಂತ ಹೆಚ್ಚು ಶೇ. 50 ಬಡವರ್ಗದವರು ತಮ್ಮ ಆದಾಯವನ್ನು ವೆಚ್ಚ ಮಾಡುತ್ತಾರೆ. ಶ್ರೀಮಂತರಿಗೆ ಹೋಲಿಸಿದರೆ, ಬಡವರು ಆರು ಪಟ್ಟು ಹೆಚ್ಚು ಪರೋಕ್ಷ ತೆರಿಗೆಗಾಗಿ ವೆಚ್ಚ ಮಾಡುತ್ತಾರೆ. ಅಂದರೆ ಜಿಎಸ್ಟಿ ತೆರಿಗೆಯಿಂದ ಈ ದೇಶದ ಬಡವರು ಮತ್ತು ಮಧ್ಯಮ ವರ್ಗದ ಜನರು ಅತಿ ಹೆಚ್ಚು ಬಾಧಿತರಾದರು. ಡಿಜಿಟಲ್ ಫೈಲಿಂಗ್ಗಳು, ಇನ್ವಾಯ್ಸ್ ಗೊಂದಲಗಳಿಗೆ ಉದ್ದಿಮೆಗಳು ಬಲಿಯಾದವು. ಆರೋಗ್ಯ, ಇಂಧನ, ಆಹಾರ, ಆರೋಗ್ಯ ರಕ್ಷಣೆಗೂ ದುಬಾರಿ ತೆರಿಗೆಗಳು ವಿಧಿಸಲ್ಪಟ್ಟು ಮಧ್ಯಮ ವರ್ಗ ಹೀನಾಯವಾಗಿ ಶೋಷಣೆಗೊಳಪಟ್ಟಿತು. ಕಾರ್ಪೊರೇಟ್ ಶಕ್ತಿಗಳು ಇದನ್ನು ವ್ಯಾಪಕವಾಗಿ ದುರುಪಯೋಗಪಡಿಸಿಕೊಂಡವು. ಶಾಲಾ ಸಮವಸ್ತ್ರ ಮತ್ತು ಪುಸ್ತಕಗಳ ಮೇಲೂ ಶೇ. 18 ತೆರಿಗೆಯನ್ನು ವಿಧಿಸಲಾಯಿತು. ಇಷ್ಟೆಲ್ಲ ಮಾಡಿರುವುದು ಹತ್ತು ವರ್ಷಗಳ ಹಿಂದಿನ ಯುಪಿಎ ಸರಕಾರವಲ್ಲ. ಇದೇ ಮೋದಿ ಸರಕಾರ. ಈಗ ಪ್ರಧಾನಿ ಜಿಎಸ್ಟಿ ಸರಳೀಕರಣವನ್ನು ದೇಶದ ಜನರಿಗೆ ಕೊಡುಗೆ ಎಂದು ಹೇಳುತ್ತಿದ್ದಾರೆ. ಇದು ಕೊಡುಗೆಯಾಗಿದ್ದರೆ, ಈ ಎಂಟು ವರ್ಷಗಳಲ್ಲಿ ಜನರಿಂದ ಕಿತ್ತುಕೊಂಡದ್ದಕ್ಕೆ ಏನೆಂದು ಕರೆಯುತ್ತಾರೆ? ಕಳೆದ ಎಂಟು ವರ್ಷ ಈ ದೇಶದ ಜನರ ಮೇಲೆ ಹೇರಿದ ‘ಜಿಎಸ್ಟಿ ತುರ್ತು ಪರಿಸ್ಥಿತಿ’ಗಾಗಿ ಪ್ರಧಾನಿ ಮೋದಿಯವರು ಜನರ ಜೊತೆಗೆ ಕ್ಷಮೆ ಯಾಚಿಸಬೇಡವೆ? ಈ ಎಂಟು ವರ್ಷಗಳಲ್ಲಿ ಉದ್ದಿಮೆಗಳಿಗಾದ ನಷ್ಟ ಮತ್ತು ಗ್ರಾಹಕರಿಗೆ ಆದ ವಂಚನೆಗಳನ್ನು ತುಂಬಿಕೊಡುವವರು ಯಾರು? ಗ್ರಾಹಕರಿಗೆ ಪರಿಹಾರ ರೂಪದಲ್ಲಿ ಸರಕಾರ ಮೊತ್ತವನ್ನು ಪಾವತಿ ಮಾಡುತ್ತದೆಯೆ?
ತಮಾಷೆಯೆಂದರೆ, ಕಾರುಗಳು ಮತ್ತು ದ್ವಿಚಕ್ರ ವಾಹನಗಳನ್ನು ತಯಾರಿಸುವ ಆಟೋಮೊಬೈಲ್ ಕಂಪೆನಿಗಳಿಗೆ ಕೈಗಾರಿಕಾ ಸಚಿವಾಲಯದಿಂದ ಇದೀಗ ಆದೇಶವೊಂದು ಹೋಗಿದೆ. ಅದರ ಪ್ರಕಾರ, ದೇಶಾದ್ಯಂತ ಎಲ್ಲ ಡೀಲರ್ ಶಿಪ್ಗಳಲ್ಲಿ ಹಳೆಯ ಮತ್ತು ಹೊಸ ಬೆಲೆಗಳನ್ನು ತೋರಿಸುವ ಪೋಸ್ಟರ್ಗಳನ್ನು ಪ್ರದರ್ಶಿಸಬೇಕಾಗುತ್ತದೆ. ಅದೇನೋ ಒಳ್ಳೆಯದೇ. ಆದರೆ ಈ ಪೋಸ್ಟರ್ಗಳಲ್ಲಿ ಕಡ್ಡಾಯವಾಗಿ ಪ್ರಧಾನಿ ಮೋದಿಯವರ ಭಾವಚಿತ್ರ ಇರಬೇಕು ಎಂದು ಸೂಚಿಸಲಾಗಿದೆ. ಒಟ್ಟಿನಲ್ಲಿ, ತಾನೇ ಮಾಡಿದ ತಪ್ಪುಗಳನ್ನು ಬಳಿಕ ತಾನೇ ಸರಿಪಡಿಸಿಕೊಂಡು ಅದನ್ನೇ ತನ್ನ ಹೆಗ್ಗಳಿಕೆಯೆಂದು ಕೊಚ್ಚಿಕೊಳ್ಳಲು ಮುಂದಾಗಿರುವ ಪ್ರಧಾನಿಯ ಆತ್ಮವಿಶ್ವಾಸ ಶ್ಲಾಘನಾರ್ಹವಾಗಿದೆ. ಹೊಸ ಜಿಎಸ್ಟಿ ಸರಳೀಕರಣವು ಸಮಸ್ಯೆಗಳನ್ನು ಪೂರ್ಣ ಪ್ರಮಾಣದಲ್ಲಿ ಇತ್ಯರ್ಥಗೊಳಿಸಿಲ್ಲ. ಭವಿಷ್ಯದಲ್ಲಿ ಇದು ಇನ್ನಷ್ಟು ಆರ್ಥಿಕ ಸಂಘರ್ಷಕ್ಕೆ ಕಾರಣವಾಗಲಿದೆ. ಈಗಾಗಲೇ ಬದಲಾವಣೆಗಳು ಖಜಾನೆಗೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ನಷ್ಟವುಂಟು ಮಾಡುತ್ತದೆ ಎಂದು ಆರ್ಥಿಕ ತಜ್ಞರು ಅಂದಾಜು ವ್ಯಕ್ತಪಡಿಸಿದ್ದಾರೆ. ಎಲ್ಲಕ್ಕಿಂತ ವಿವಿಧ ರಾಜ್ಯಗಳು ಈಗಾಗಲೇ ಅಸಮಾಧಾನದಿಂದ ಭುಸುಗುಟ್ಟುತ್ತಿವೆ. ಜಿಎಸ್ಟಿ ಜಾರಿಗೆ ಬಂದ ದಿನದಿಂದ, ಕೇಂದ್ರ ಸರಕಾರ ರಾಜ್ಯಗಳಿಗೆ ನೀಡಿದ ಭರವಸೆಗಳಿಗೆ ಬದ್ಧವಾಗಿ ಉಳಿದಿಲ್ಲ. ಜಿಎಸ್ಟಿ ಪರಿಹಾರವನ್ನು ಈಗಾಗಲೇ ಪೂರ್ಣಪ್ರಮಾಣದಲ್ಲಿ ರಾಜ್ಯಗಳಿಗೆ ಒದಗಿಸುವಲ್ಲಿ ವಿಪಲವಾಗಿದೆ. ಇದೀಗ ಸರಳೀಕರಣದಿಂದ ರಾಜ್ಯಗಳ ಶೇ. 20ರಷ್ಟು ಆದಾಯಗಳಿಗೆ ಕಡಿತ ಬೀಳಲಿದೆ. ಜಿಎಸ್ಟಿ ಕೌನ್ಸಿಲ್ ನಷ್ಟ ಪರಿಹಾರ ನೀಡಲಿ ಎಂದು ರಾಜ್ಯಗಳು ಒತ್ತಾಯಿಸುತ್ತಿವೆ. ಆದರೆ ಕೇಂದ್ರ ಸರಕಾರ ಈ ಬಗ್ಗೆ ಮೌನ ಮುರಿಯುತ್ತಿಲ್ಲ. ರಾಜ್ಯಗಳ ಆದಾಯ ಕುಂಠಿತವಾಗುವುದರಿಂದ ಹಲವು ಜನಪರ ಯೋಜನೆಗಳ ಮೇಲೆ ತೀವ್ರ ಪರಿಣಾಮಗಳು ಬೀರಲಿವೆ. ಹಾಗೆಯೇ ಜವಳಿ ಉದ್ಯಮಗಳೂ ಸರಳೀಕರಣದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿವೆ. 2,500ಕ್ಕಿಂತ ಅಧಿಕ ಬೆಲೆಯ ಉಡುಪುಗಳು ಶೇ. 18ರಷ್ಟು ತೆರಿಗೆಯನ್ನು ಬೇಡುತ್ತವೆ. ಇದು ಸಣ್ಣ ಘಟಕಗಳ ಮೇಲೆ ಭಾರೀ ದುಷ್ಪರಿಣಾಮ ಬೀರಲಿದ್ದು, ಅಲ್ಲಿರುವ ಕಾರ್ಮಿಕರ ಕೆಲಸಗಳಿಗೂ ಹೊಡೆತ ನೀಡಲಿದೆ. ಮುಖ್ಯವಾಗಿ ಬೃಹತ್ ಉದ್ಯಮಗಳು ಈ ತೆರಿಗೆಯ ಲಾಭವನ್ನು ಗ್ರಾಹಕರಿಗೆ ನೀಡಲು ಅವಕಾಶ ನೀಡುತ್ತದೆಯೇ ಎನ್ನುವುದನ್ನು ಕಾದು ನೋಡಬೇಕು. ಸರಕಾರ ತೆರಿಗೆಗೆ ಸಂಬಂಧಿಸಿ ಆಮೂಲಾಗ್ರ ಬದಲಾವಣೆಗಳನ್ನು ತರುವ ಅಗತ್ಯವಿದೆ. ಶ್ರೀಮಂತರ ಮೇಲೆ ನೇರ ತೆರಿಗೆಗಳನ್ನು ವಿಧಿಸುವುದಕ್ಕೆ ಮುಂದಾಗಬೇಕು. ಆಹಾರ, ಅಡುಗೆ ಅನಿಲ, ಆರೋಗ್ಯ, ಶಿಕ್ಷಣ, ಸಮವಸ್ತ್ರಗಳು, ಔಷಧಗಳು ಜಿಎಸ್ಟಿಯಿಂದ ಹೊರಗಿರಬೇಕು. ತೆರಿಗೆಯಿಂದ ನಾಜೂಕಾಗಿ ನುಣುಚಿಕೊಳ್ಳುತ್ತಿರುವ ಕಾರ್ಪೊರೇಟ್ಗಳ ಮೇಲೆ ಜಿಎಸ್ಟಿ ಕುಣಿಕೆಯನ್ನು ಬಿಗಿಯಾಗಿಸಬೇಕು. ತೆರಿಗೆ ಸರಳೀಕರಣವು ಈ ದೇಶದ ಸಮಗ್ರ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯನ್ನು ಗುರಿಯಾಗಿರಿಸಿಕೊಳ್ಳಬೇಕೇ ಹೊರತು, ಚುನಾವಣೆಯ ಅಲ್ಪಗುರಿಯನ್ನು ಹೊಂದಿರಬಾರದು. ಹಾಗೆಯೇ ರಾಜ್ಯಗಳನ್ನು ಆರ್ಥಿಕವಾಗಿ ಇನ್ನಷ್ಟು ಅಸಹಾಯಕವಾಗಿಸುವ ದುರುದ್ದೇಶದಿಂದ ಕೇಂದ್ರ ಸರಕಾರ ಹಿಂದೆ ಸರಿಯಬೇಕು. ಜಿಎಸ್ಟಿಯ ಸಂಗ್ರಹವನ್ನು ರಾಜ್ಯಗಳೊಂದಿಗೆ ಹಂಚಿಕೊಳ್ಳುವ ವಿಷಯದಲ್ಲಿ ಅದು ಹೆಚ್ಚು ಉದಾರವಾಗುವ ಅಗತ್ಯವಿದೆ. ಇಲ್ಲದೇ ಇದ್ದರೆ ಇದು ರಾಜ್ಯ ಮತ್ತು ಕೇಂದ್ರದ ನಡುವಿನ ಬಿರುಕುಗಳನ್ನು ಇನ್ನಷ್ಟು ಹೆಚ್ಚಿಸಲಿದೆ.