ಶೋಷಿತ ವರ್ಗದ ಧ್ವನಿ

ಮೊತ್ತ ಮೊದಲ ಕನ್ನಡ ಪತ್ರಿಕೆ ‘ಮಂಗಳೂರು ಸಮಾಚಾರ’ ಆರಂಭವಾದ ಕರಾವಳಿಯನ್ನು ಕನ್ನಡ ಪತ್ರಿಕೋದ್ಯಮದ ತವರೂರು ಎನ್ನಬಹುದು. ಮುದ್ರಣ ತಂತ್ರಜ್ಞಾನದಲ್ಲಾದ ವ್ಯಾಪಕ ಮತ್ತು ವೇಗದ ಅಭಿವೃದ್ಧಿಯಿಂದ ಕನ್ನಡ ಮತ್ತು ಇಂಗ್ಲಿಷ್ ಹೀಗೆ ಎರಡೂ ಭಾಷೆಗಳಲ್ಲಿ ಪ್ರಕಟವಾಗುತ್ತಿರುವ ರಾಷ್ಟ್ರ ಮತ್ತು ರಾಜ್ಯ ಮಟ್ಟದ ಹೆಚ್ಚಿನ ದಿನಪತ್ರಿಕೆಗಳಿಗೆ ಇಂದು ಮಂಗಳೂರಲ್ಲೇ ವಿನ್ಯಾಸವಾಗಿ-ಮುದ್ರಣವಾಗುತ್ತಿರುವ ಮಂಗಳೂರು ಆವೃತ್ತಿಗಳಿವೆ.
ಈ ಹಿನ್ನೆಲೆಯಲ್ಲಿ ಸುಮಾರು ಎರಡು ದಶಕಗಳ ಹಿಂದೆ ಮಂಗಳೂರಿನಲ್ಲಿಯೇ ಆರಂಭವಾಗಿ, ಕರ್ನಾಟಕ ರಾಜ್ಯದ ಪತ್ರಿಕೋದ್ಯಮದಲ್ಲಿ ತನ್ನದೇ ಛಾಪು ಮೂಡಿಸಿ, ಪ್ರಸ್ತುತ ರಾಜ್ಯದ ಇತರ ನಗರಗಳಲ್ಲಿ ಆವೃತ್ತಿಯನ್ನು ಹೊಂದಿರುವ ‘ವಾರ್ತಾಭಾರತಿ’ಯ ಸಾಧನೆ ಮೆಚ್ಚುವಂತಹದ್ದು. ಬೃಹತ್ ಉದ್ದಿಮೆದಾರರು, ಬಂಡವಾಳಶಾಹಿಗಳು, ಮಾರುವೇಷದ ರಾಜಕಾರಣಿಗಳು ಆಳುತ್ತಿರುವ ಮಾಧ್ಯಮ ಕ್ಷೇತ್ರವನ್ನು ಪ್ರವೇಶಿಸುವುದೆಂದರೆ ಚಕ್ರವ್ಯೆಹವನ್ನು ಹೊಕ್ಕಂತೆ. ಜೀವಂತ ಉಳಿಯಬೇಕಾದರೆ ಸತತ ಹೋರಾಡುತ್ತಲೇ ಇರಬೇಕು ಅಥವಾ ಚಕ್ರವ್ಯೆಹದ ಒಳಗೆ ವೀರಮರಣವನ್ನು ಕಾಣಬೇಕು. ವ್ಯೆಹವನ್ನು ಪ್ರವೇಶಿಸಿದ ‘ವಾರ್ತಾಭಾರತಿ’ ಇನ್ನೂ ಹೋರಾಡುತ್ತ, ತನ್ನೊಂದಿಗೆ ನಮ್ಮನ್ನೂ ಜೀವಂತವಾಗಿ ಇಟ್ಟಿದೆ ಎನ್ನುವುದು ಅಭಿಮಾನದ ಮತ್ತು ಅಭಿನಂದನೀಯ ಸಂಗತಿ.
ಕನ್ನಡ ಪತ್ರಿಕೋದ್ಯಮದಲ್ಲಿ ‘ವಾರ್ತಾಭಾರತಿ’ ಪತ್ರಿಕೆಯ ವಿಶ್ವಾಸಾರ್ಹತೆ ಮತ್ತು ಬದ್ಧತೆ ಯಾವ ಮಟ್ಟಕ್ಕೆ ಬೆಳೆದು ನಿಂತಿದೆ ಎಂದರೆ - ಕರ್ನಾಟಕ ರಾಜ್ಯದ ಉಭಯ ಸದನಗಳಲ್ಲಿ ‘ವಾರ್ತಾಭಾರತಿ’ಯ ವರದಿಗಳು ಪದೇ ಪದೇ ಉಲ್ಲೇಖವಾಗಿ, ಚರ್ಚೆ ನಡೆದು ಸರಕಾರದಿಂದ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳಿಗೆ ನಾಂದಿಯಾಗಿರುವುದೇ ಇದಕ್ಕೆ ಬಹು ದೊಡ್ಡ ಸಾಕ್ಷಿಯಾಗಿದೆ.
ನನಗೆ ಆತ್ಮೀಯರೂ, ಮಾರ್ಗದರ್ಶಕರೂ ಆಗಿರುವ ನಮ್ಮ ಸಮಾಜದ ಅನಿವಾಸಿ ಉದ್ಯಮಿಯೊಬ್ಬರು ಯಾವತ್ತೂ ‘‘ಒಂದು ವೇಳೆ ‘ವಾರ್ತಾಭಾರತಿ’ಯಂತಹ ಪತ್ರಿಕೆಯೊಂದು ನಮ್ಮಲ್ಲಿ ಇಲ್ಲದೇ ಇರುತ್ತಿದ್ದರೆ ನಮ್ಮ (ಅರ್ಥಾತ್ ದನಿಯಿಲ್ಲದವರ) ಗತಿ ಏನಾಗುತ್ತಿತ್ತು?’’ ಎಂದು ಆತಂಕ ವ್ಯಕ್ತಪಡಿಸುತ್ತಿರುವುದು ಉಂಟು. ಅವರ ಆತಂಕದ ಮಾತುಗಳಲ್ಲೂ ನಾನು, ಶೋಷಿತರ ಮತ್ತು ದಮನಿತರ ಪರ ಅಂಜದೇ ಅಳುಕದೇ ದನಿ ಎತ್ತುವ ಪತ್ರಿಕೆಯ ಸ್ಪಷ್ಟ ಧೋರಣೆಯ ಬಗ್ಗೆ ಹೆಮ್ಮೆ ಪಟ್ಟದ್ದುಂಟು.
ಹೇಳಬೇಕಾದ್ದನ್ನು, ಹೇಳಬೇಕಾದ ಸಮಯದಲ್ಲಿ ಹೇಳದೆ, ತಮ್ಮನ್ನು ತಾವು ಮುಖ್ಯವಾಹಿನಿ ಮಾಧ್ಯಮಗಳೆಂದು ಕರೆದುಕೊಳ್ಳುವ ಬಹುತೇಕ ಪತ್ರಿಕೆಗಳು ಮೌನಕ್ಕೆ ಶರಣಾದಾಗ ‘ವಾರ್ತಾಭಾರತಿ’ ಮಾತನಾಡಿದೆ ಎಂಬುದೇ ಪ್ರಜ್ಞಾವಂತ ನಾಗರಿಕ ಸಮಾಜಕ್ಕೆ ಅಭಿಮಾನದ ವಿಚಾರ. ಎನ್‌ಕೌಂಟರ್ ಹೆಸರಲ್ಲಿ ನಡೆದ ವಿಕ್ರಮ್ ಗೌಡ ಹತ್ಯೆ ಇರಬಹುದು ಅಥವಾ ರಾಷ್ಟಭಕ್ತಿಯ ಹೆಸರಲ್ಲಿ ನಡೆದ ಅಶ್ರಫ್ ಗುಂಪುಹತ್ಯೆ ಇರಬಹುದು - ಯಾವುದೇ ಅತಿರೇಕಕ್ಕೆ ಹೋಗದೆ, ಎಚ್ಚರವನ್ನೂ ಕಳೆದುಕೊಳ್ಳದೇ ವರದಿ ಮಾಡಿದ ‘ವಾರ್ತಾಭಾರತಿ’ಯ ಎದೆಗಾರಿಕೆ ಮೆಚ್ಚಬೇಕಾದದ್ದು.
ನಾಡಿನ ಬಹುತೇಕ ಪತ್ರಿಕೆಗಳು ಸೌಂದರ್ಯ ಸ್ಪರ್ಧೆ, ರಿಯಾಲಿಟಿ ಶೋ, ಸಿನೆಮಾ, ಗ್ಲಾಮರ್ ಜಗತ್ತು ಎಂದು ರಂಜನೆಯ ಹಿಂದೆ ಓಡುತ್ತಿರುವಾಗ ‘ವಾರ್ತಾಭಾರತಿ’ ಪತ್ರಿಕೆ ವಿಚಾರ ಮತ್ತು ವಿಜ್ಞಾನದ ಬರಹಗಳಿಗೆ ಒತ್ತು ನೀಡುತ್ತಾ ಬಂದಿರುವುದು ಪತ್ರಿಕೆಯ ಇನ್ನೊಂದು ವಿಶೇಷ ಗುಣ. ಸಾಹಿತ್ಯ ಮತ್ತು ಸಂಸ್ಕೃತಿಗೆ ನಾಡಿನ ಬಹುತೇಕ ಪತ್ರಿಕೆಗಳು ವಾರದ ಪುರವಣಿ ಮತ್ತು ಸಾಹಿತ್ಯ ಸಂಪದ ರೂಪದಲ್ಲಿ ಪ್ರೋತ್ಸಾಹ ನೀಡುತ್ತಿದ್ದರೂ, ‘ವಾರ್ತಾಭಾರತಿ’ ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ವಿದ್ಯಮಾನಗಳ ಸುದ್ದಿಗಳಿಗೆ ವಿಶೇಷ ಮಹತ್ವ ನೀಡಿ ಪ್ರಕಟಿಸುವುದರ ಮೂಲಕ ಸಾಹಿತ್ಯ ಲೋಕ ಮತ್ತು ಸಾಂಸ್ಕೃತಿಕ ಜಗತ್ತಿಗೆ ಪ್ರಚಾರ ನೀಡುವತ್ತ ಕನ್ನಡ ಪತ್ರಿಕೋದ್ಯವದಲ್ಲಿ ಇದ್ದ ನಿರ್ವಾತವನ್ನು ತುಂಬಿದ್ದು ಶ್ಲಾಘನೀಯ.
ಸದಭಿರುಚಿಯ ಸಾಹಿತ್ಯ ಪುಸ್ತಕ, ಸಿನೆಮಾ, ನಾಟಕ, ಸಂಗೀತ ಕಾರ್ಯಕ್ರಮಗಳ ವರದಿ - ವಿಶ್ಲೇಷಣೆಗಳನ್ನು ಆಗಾಗ ಪ್ರಕಟಿಸುತ್ತಾ ನಾಡಿನ ಬಹುಸಂಸ್ಕೃತಿಯನ್ನು ಎತ್ತಿ ಹಿಡಿಯುವ ಕೆಲಸವನ್ನು ‘ವಾರ್ತಾಭಾರತಿ’ ಮಾಡುತ್ತಲೇ ಬಂದಿದೆ. ಕನ್ನಡದ ಪತ್ರಿಕೆಯಾದರೂ ಕರಾವಳಿಯ ಇತರ ಭಾಷೆಗಳಾದ ಕೊಂಕಣಿ, ತುಳು, ಬ್ಯಾರಿ ಭಾಷೆಗಳ ಸಾಹಿತ್ಯ ಮತ್ತು ಕಲೆಗಳಿಗೆ ನಾಡಿನ ಇತರ ಮಾಧ್ಯಮಗಳು ನೀಡುವುದಕ್ಕಿಂತಲೂ ಹೆಚ್ಚು ಜಾಗವನ್ನು ಪತ್ರಿಕೆ ಕೊಡುತ್ತಲೇ ಬಂದಿದೆ. ಈ ಕಾರಣಕ್ಕಾಗಿ ಎಲ್ಲಾ ಭಾಷೆಗಳ ಓದುಗರಿಗೆ ‘ವಾರ್ತಾಭಾರತಿ’ ಆಪ್ತವಾಗಿದೆ. ಭಾಷೆಯ ವಿಷಯದಲ್ಲೂ ‘ವಾರ್ತಾಭಾರತಿ’ ಸಣ್ಣ ಮತ್ತು ಮಧ್ಯಮ ವರ್ಗ - ಸಮುದಾಯದ ಪರ ನಿಂತಿರುವುದು ಕೊಂಕಣಿಯಂತಹ ಪ್ರಾದೇಶಿಕ ಭಾಷೆಯಲ್ಲಿ ಬರೆಯುತ್ತಿರುವ ನನ್ನ ಅಭಿಮಾನವನ್ನು ದ್ವಿಗುಣಗೊಳಿಸಿದೆ.
ಪತ್ರಿಕೆಯ ಸಂಪಾದಕೀಯ ಮತ್ತು ಅಂಕಣ ಬರಹಗಳು ಪತ್ರಿಕೆಯ ಧೋರಣೆಯನ್ನು ಯಾವತ್ತೂ ಬಿಟ್ಟುಕೊಡುವುದಿಲ್ಲ ಎಂಬುದಕ್ಕೆ ‘ವಾರ್ತಾಭಾರತಿ’ ಸಂಪಾದಕೀಯ ಮತ್ತು ಅಂಕಣ ಪುಟಗಳು ಸಾಕ್ಷಿಯಾಗಿವೆ. ಕೆಲವು ವರ್ಷಗಳ ಹಿಂದೆ ಹಿರಿಯ ಪತ್ರಕರ್ತರೊಬ್ಬರು (ಇಂಧೂದರ ಹೊನ್ನಾಪುರ) ಸಂದೇಶ ಪತ್ರಿಕೋದ್ಯಮ ಪ್ರಶಸ್ತಿಯನ್ನು ಸ್ವೀಕರಿಸುತ್ತಾ ಹೇಳಿದ ಮಾತು ನನಗಿನ್ನೂ ನೆನಪಿದೆ. ‘‘ಪತ್ರಕರ್ತರಾದವರು ಸದಾ ಪಕ್ಷಪಾತಿಗಳಾಗಿರಬೇಕು (biased) - ಸತ್ಯ ಮತ್ತು ನ್ಯಾಯದ ಪರ ಪಕ್ಷಪಾತಿಗಳಾಗಿರಬೇಕು’’. ‘ವಾರ್ತಾಭಾರತಿ’ ಪತ್ರಿಕೆ ಈವರೆಗೆ ಸತ್ಯ ಮತ್ತು ನ್ಯಾಯದ ಪರ ಅಚಲವಾಗಿ ನಿಂತಿದೆ ಎಂಬುದನ್ನು ನಾವೆಲ್ಲರೂ ಅಭಿಮಾನದಿಂದ ಹೇಳಬಹುದಾಗಿದೆ.
ಕರಾವಳಿಯ ಪತ್ರಿಕೋದ್ಯಮದ ಇತಿಹಾಸ ಗಮನಿಸಿದರೆ-ಸತ್ಯ ಮತ್ತು ನ್ಯಾಯದ ಪರ ನಿಂತು ಜನಮಾನಸದಲ್ಲಿ ಬಹುದೊಡ್ಡ ನಿರೀಕ್ಷೆ ಹುಟ್ಟಿಸಿದ ಮುಂಗಾರು, ಜನವಾಹಿನಿಯಂತಹ ಪತ್ರಿಕೆಗಳೇ ಬಹಳ ಕಾಲ ಬಾಳಲಿಲ್ಲ. ಈ ಕರಾಳ ಇತಿಹಾಸದಿಂದ ಪಾಠ ಕಲಿತು, ಸಾಕಷ್ಟು ಪೂರ್ವ ತಯಾರಿಯೊಂದಿಗೆ ಕನ್ನಡ ಪತ್ರಿಕಾರಂಗಕ್ಕೆ ಹೆಜ್ಜೆಯಿಟ್ಟ ‘ವಾರ್ತಾಭಾರತಿ’ ಮುದ್ರಣ ಮಾಧ್ಯಮದಲ್ಲಿ ನಿರೀಕ್ಷೆಗೂ ಮಿಗಿಲಾಗಿಯೇ ಬೆಳೆದು, ಪ್ರಸ್ತುತ ವಿದ್ಯುನ್ಮಾನ ಮಾಧ್ಯಮದಲ್ಲಿ ಹೊಸತನಕ್ಕೆ ನಾಂದಿಯಾಗಿರುವುದು ಚೇತೋಹಾರಿ ಬೆಳವಣಿಗೆ. ವಿದ್ಯುನ್ಮಾನದ ಪೋರ್ಟಲ್ ಮತ್ತು ಡಿಜಿಟಲ್ - ಎರಡೂ ವಿಭಾಗಗಳಲ್ಲಿ ಪತ್ರಿಕೆಯ ಸದ್ಯದ ಬೆಳವಣಿಗೆ ಬೆರಗುಗೊಳಿಸುವಂತಿದೆ. ಡಿಜಿಟಲ್ ವೀಡಿಯೊಗಳು ಪ್ರಕಟವಾದ ಕೆಲವೇ ನಿಮಿಷಗಳಲ್ಲಿ ಲಕ್ಷಾಂತರ ವೀಕ್ಷಣೆಗೊಳಪಟ್ಟರೆ, ಅರವತ್ತು ಸೆಕೆಂಡು ಸುದ್ದಿ - ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತಿರುವ ಅವಸರದ ಸುದ್ದಿ ಲೋಕಕ್ಕೆ ಹೊಸ ಭರವಸೆಯಂತಿದೆ.
ತನ್ನ ಶೀರ್ಷಿಕೆಯಲ್ಲಿನ ‘ಭಾರತಿ’ಯಂತೆ ವರದಿ - ವಿಶ್ಲೇಷಣೆಗಳಲ್ಲಿ ಭಾರತೀಯತೆಯನ್ನು ಉಳಿಸಿಕೊಂಡಿರುವ ಪತ್ರಿಕೆ, ಘೋಷವಾಕ್ಯ ‘ಸಾರಥಿ’ಯಂತೆ ಸುದ್ದಿ ಪ್ರಸಾರಕ್ಕೆ ಜನದನಿಗಳನ್ನು ಆಯ್ದುಕೊಳ್ಳುವಾಗ ಮಾತ್ರ ವಿಶೇಷ ಎಚ್ಚರವನ್ನು ಕಾಯ್ದುಕೊಂಡು ಬಂದಿದೆ. ನೂರು ಜನರು ಸೇರಿ ಸುಳ್ಳು ಹೇಳಿದೊಡನೆ, ಸುಳ್ಳು ಸತ್ಯವಾಗಲಾರದು ಎಂಬ ಎಚ್ಚರ ಸಾರಥಿಗೆ ಇದ್ದಾಗ ಮಾತ್ರ ಸಾರಥಿಯ ಮೇಲೆ ಓದುಗರಿಗೂ ವಿಶ್ವಾಸ ಮತ್ತು ಧೈರ್ಯ ಬರುತ್ತದೆ. ಎರಡನ್ನೂ ‘ವಾರ್ತಾಭಾರತಿ’ ಈ ವರೆಗೂ ಉಳಿಸಿಕೊಂಡಿದೆ.
‘ವಾರ್ತಾಭಾರತಿ’ ಪತ್ರಿಕೆ ಮತ್ತು ಕಳೆದ ಕೆಲವು ವರ್ಷಗಳಿಂದ ನಿರ್ಧರಿತ ವೇಗದಲ್ಲಿ ಬೆಳೆಯುತ್ತಿರುವ ‘ವಾರ್ತಾಭಾರತಿ’ ಡಿಜಿಟಲ್ ಆವೃತ್ತಿ-ಎರಡೂ ಕರಾವಳಿಯ ಬಹುತ್ವದ ಬದುಕು, ಸಾಂಸ್ಕೃತಿಕ ಸಿರಿವಂತಿಕೆಗೆ ಜೀವಂತ ಸಾಕ್ಷಿಯಾಗಿ ಬೆಳೆದು ನಿಂತಿದೆ. ಸುಳ್ಳುಸುದ್ದಿ ಮತ್ತು ಅಪನಂಬಿಕೆಗಳ ವೈರಸ್‌ಗೆ ತುತ್ತಾಗಿ ಕರಾವಳಿಯ ಸಾಮಾಜಿಕ ಸ್ವಾಸ್ಥ್ಯ ಕ್ಷೀಣಿಸತೊಡಗಿದಾಗ, ಜೀವರಕ್ಷಕ ಲಸಿಕೆಯಂತೆ ಬಂದು, ಬದ್ಧತೆ, ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಸತ್ಯ ಮತ್ತು ನಾಯದ ಪರ ನಿಂತು, ಶೋಷಿತ ಮತ್ತು ದಮನಿತ ವರ್ಗದ ಧ್ವನಿಯಾಗಿ ಬೆಳೆದಿರುವ ‘ವಾರ್ತಾಭಾರತಿ’ಯ ಎರಡು ದಶಕಗಳ ಚೇತೋಹಾರಿ ಪ್ರಯಾಣ ಕನ್ನಡ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಕರಾವಳಿಯ ಸಾಮಾಜಿಕ ಬದುಕಿನಲ್ಲಿ ಆಸಕ್ತಿ ಇರುವ ಸಮಾಜಶಾಸ್ತ್ರದ ಶಿಕ್ಷಕರು, ಅಧ್ಯಯನಾಸಕ್ತರಿಗೂ ಬೆರಗಿನ ಬೆಳಕಾಗಲಿದೆ ಎಂಬುದು ನನ್ನ ಪ್ರಾಮಾಣಿಕ ಅನಿಸಿಕೆ. ಕರಾವಳಿಯ ತಲ್ಲಣಗಳನ್ನು ಮಾತ್ರವಲ್ಲ, ಕರಾವಳಿಯ ಜನರ ಸತ್ಯ ಮತ್ತು ನ್ಯಾಯದ ಹೋರಾಟಗಳನ್ನೂ ‘ವಾರ್ತಾಭಾರತಿ’ ಆವೇಶಕ್ಕಾಗಲಿ, ಆಮಿಷಕ್ಕಾಗಲೀ ಒಳಗಾಗದೇ ಸದ್ದಿಲ್ಲದೇ ದಾಖಲಿಸುತ್ತಾ ಬಂದಿದೆ, ಅದೇ ಬದ್ಧತೆಯಿಂದ ದಾಖಲಿಸುತ್ತಲೇ ಇದೆ.