ಚಾಮರಾಜನಗರ ಜಿಲ್ಲೆಯಲ್ಲಿ ನಿಲ್ಲದ ವನ್ಯಜೀವಿಗಳ ಬಲಿ

ಸಾಂದರ್ಭಿಕ ಚಿತ್ರPC: google.com/maps
ಚಾಮರಾಜನಗರ: ರಾಜ್ಯದಲ್ಲಿ ಅತ್ಯಧಿಕ ಅರಣ್ಯ ಪ್ರದೇಶ ಹೊಂದಿರುವ, ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿ ಭಾಗಹೊಂದಿಕೊಂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಇದೀಗ ವನ್ಯ ಜೀವಿಗಳ ಸರಣಿ ಸಾವು ಹೆಚ್ಚಾಗುತ್ತಿದ್ದು, ನಾಗರಿಕ ವಲಯದಲ್ಲಿ ಆತಂಕ ಹೆಚ್ಚಾಗುತ್ತಿದೆ.
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದಲ್ಲಿ ಜೂನ್ನಲ್ಲಿ ಐದು ಹುಲಿಗಳ ಸಾವು ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಸಾಕು ಹಸು ಬಲಿ ಪಡೆದಿದ್ದಕ್ಕೆ ಹಸುವಿನ ಕಳೇಬರಕ್ಕೆ ವಿಷ ಹಾಕಿ ಹುಲಿಗಳ ಸಾವಿಗೆ ಕಾರಣರಾದ ಪ್ರಕರಣದ ಆರೋಪಿಗಳಾದ ಮಾದುರಾಜು, ಕೋನಪ್ಪ, ನಾಗರಾಜು ಎಂಬವರನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ.
ಹುಲಿಗಳ ಸಾವು ಮಾಸುವ ಮುನ್ನವೇ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಕಂದೇಗಾಲ- ಕೊಡಸೋಗೆ ಗ್ರಾಮದ ಬಳಿ 20 ಕೋತಿಗಳಿಗೆ ವಿಷ ಹಾಕಿ, ಆಗಲೂ ಸಾಯದೇ ಇದ್ದ ಕೋತಿಗಳಿಗೆ ತಲೆಗೆ ಹೊಡೆದು ಹತ್ಯೆಮಾಡಲಾಗಿತ್ತು. ಇದರಲ್ಲಿ 1 ಕೋತಿ ಮಾತ್ರ ಬದುಕುಳಿಯಿತು. ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಕರಿಕಲ್ಲು ಕ್ವಾರಿ ಬಳಿ 5-6 ವರ್ಷದ ಗಂಡು ಚಿರತೆ ವಿಷ ಪ್ರಾಶನದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಹೀಗೆ ಒಂದರ ಹಿಂದೆ ಮತ್ತೊಂದು ಪ್ರಾಣಿಗಳು ಬಲಿಯಾಗುತ್ತಿರುವುದು ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಹೇಳಿದಂತೆ ಚಾಮರಾಜನಗರ ಜಿಲ್ಲಾದ್ಯಂತ ವನ್ಯ ಜೀವಿಗಳಿಗೆ ರಕ್ಷಣೆ ಇಲ್ಲವೆಂಬ ಆರೋಪಕ್ಕೆ ಪುಷ್ಟಿ ನೀಡುತ್ತಿದೆ. ಅಲ್ಲದೇ, ಕಾಡಂಚಿನ ಗ್ರಾಮಗಳಲ್ಲಿ ಮಾನವ-ಪ್ರಾಣಿ ಸಂಘರ್ಷ ತಾರಕಕ್ಕೇರಿರುವುದನ್ನು ಅರಣ್ಯ ಇಲಾಖೆ ತಡೆಯುವಲ್ಲಿ ವಿಫಲವಾಗಿದೆ. ಇದರ ಪರಿಣಾಮವಾಗಿಯೇ ವಿಷ ಪ್ರಾಶನದಂತಹ ಪ್ರಕರಣಗಳು ನಡೆಯುತ್ತಿವೆ ಎನ್ನುವುದೂ ಖಚಿತವಾಗುತ್ತಿದೆ.
<ಹುಲಿಗಳ ಸಾವಿನ ವರದಿ ಸಲ್ಲಿಕೆ: ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದ ಹನೂರು ತಾಲೂಕಿನ ಹೂಗ್ಯಂ ವಲಯದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ವಿಷ ಪ್ರಾಶನದಿಂದ ಐದು ಹುಲಿಗಳು ಮೃತಪಟ್ಟ ಪ್ರಕರಣದ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ಮೇರೆಗೆ ರಚನೆಯಾಗಿದ್ದ ಸಮಿತಿಯಿಂದ ವರದಿ ಸಲ್ಲಿಕೆಯಾಗಿದೆಯೇ ಅಥವಾ ಇಲ್ಲವೇ ಎನ್ನುವ ಪ್ರಶ್ನೆ ಮೂಡಿತ್ತು. ಈ ಕುರಿತು ಲಭ್ಯವಾಗಿರುವ ಮಾಹಿತಿ ಪ್ರಕಾರ, ಸಮಿತಿಯಲ್ಲಿದ್ದ ಕೆಲವರು ವರದಿಯನ್ನು ನೀಡಿದ್ದಾರೆ. ಇದನ್ನು ಸರಕಾರಕ್ಕೆ ಇನ್ನೂ ಸಲ್ಲಿಕೆ ಮಾಡಿಲ್ಲ ಎನ್ನಲಾಗುತ್ತಿದೆ.
ಇನ್ನು ಈ ಪ್ರಕರಣದಲ್ಲಿ ಕರ್ತವ್ಯಲೋಪವೆಸಗಿರುವ ಆರೋಪದಡಿ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಜಾನನ ಹೆಗಡೆ, ವಲಯ ಅರಣ್ಯಾಧಿಕಾರಿ ಮಾದೇಶ ರವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಯಿತು. ಐಎಫ್ಎಸ್ ಅಧಿಕಾರಿ ಚಕ್ರಪಾಣಿ ವೈ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿತ್ತು.
<ಚಿರತೆ ವರದಿ ಏನಾಯ್ತು?: ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿಧಾಮದ ಹನೂರು ತಾಲೂಕಿನ ಕೌದಳ್ಳಿ ವಲಯದ ರಾಮಾಪುರ ಮತ್ತು ಮಾರ್ಟಳ್ಳಿ ಗಡಿಯಲ್ಲಿ ಚಿರತೆ ಮೃತಪಟ್ಟಿದ್ದ ಕುರಿತು ವರದಿಯನ್ನು ನೀಡಬೇಕೆಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಜೂ.30ಂದು ಆದೇಶ ಹೊರಡಿಸಿದ್ದರು. ಚಿರತೆಯ ಉಗುರುಗಳಿಗಾಗಿ ಚಿರತೆ ಹತ್ಯೆ ನಡೆದಿದೆ ಎಂಬ ಮಾಹಿತಿ ಕಚೇರಿಗೆ ಬಂದಿದೆ.
<ನೂತನ ಡಿಸಿಎಫ್: ಐದು ಹುಲಿಗಳ ಸಾವಿನ ಪ್ರಕರಣದಲ್ಲಿ ವಿವಾದದ ಕೇಂದ್ರಬಿಂದುವಾಗಿದ್ದ ಮಲೆ ಮಹದೇಶ್ವರ ವನ್ಯಜೀವಿಧಾಮಕ್ಕೆ ಹೊಸ ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಆಗಮನವಾಗಿದೆ. ಈ ಹಿಂದೆ ಇದ್ದಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ವೈ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ಅವರ ಸ್ಥಾನಕ್ಕೆ ಬೆಂಗಳೂರು ಕೇಂದ್ರ ಸ್ಥಾನದಲ್ಲಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಸಂತೋಷಕುಮಾರ್ಗೆ ಹೆಚ್ಚುವರಿ ಪ್ರಭಾರ ಜವಾಬ್ದಾರಿ ನೀಡಲಾಗಿತ್ತು.
ಇದೀಗ ಈ ಹಿಂದೆ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಭಾಸ್ಕರ್ ವರ್ಗಾವಣೆಯಾಗಿ ಸ್ಥಳ ನಿರೀಕ್ಷೆಯಲ್ಲಿದ್ದರು. ಇವರನ್ನು ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನಿಯೋಜನೆ ಮಾಡಲಾಗಿದೆ. ಶುಕ್ರವಾರ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
5 ಹುಲಿಗಳ ಸಾವು ಪ್ರಕರಣ: ಕಾರ್ಬೋಫುರಾನ್ ಬಳಕೆ ದೃಢ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿಧಾಮದ ಮೀಣ್ಯಂ ಸಮೀಪದ ಕಾಡಿನೊಳಗೆ ಹಸುವಿನ ಕಳೆಬರ ತಿಂದು ಐದು ಹುಲಿಗಳು ಸಾವನ್ನಪ್ಪಿದ್ದವು, ಹುಲಿಗಳ ಸಾವಿನ ಬಗ್ಗೆ ಕಾರಣ ತಿಳಿಯಲು ಹುಲಿಗಳ ಅಂಗಾಗದ ಭಾಗವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಪ್ರಯೋಗಾಲಯದಿಂದ ವರದಿ ಬಂದಿದ್ದು, ಹುಲಿಗಳ ಸಾವಿಗೆ ವಿಷಕಾರಿ ಕಾರ್ಬೋಫುರಾನ್ ಎಂದು ಬಂದಿದೆ. ಹಸುವಿನ ಮೃತ ದೇಹದ ಮೇಲೆ ಕಾರ್ಬೋಫುರಾನ್ ಸಿಂಪಡಿಸಿರುವುದು ದೃಢವಾಗಿದೆ. ಇದನ್ನು ತಿಂದ ಹುಲಿಗಳು ಸಾವನ್ನಪ್ಪಿದೆ ಎಂದು ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹಿರಲಾಲ್ ಮಾಹಿತಿ ನೀಡಿದ್ದಾರೆ
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೂಗ್ಯಂ ವಲಯದ ಮೀಣ್ಯಂ ಬಳಿಯ ಕಾಡಿನಲ್ಲಿ ಐದು ಹುಲಿಗಳ ಸಾವಿನ ಪ್ರಕರಣದ ತನಿಖೆಗಾಗಿ ರಚನೆಯಾಗಿದ್ದ ಸಮಿತಿಯ ವರದಿ ಹಾಗೂ ಕೌದಳ್ಳಿ ವಲಯದಲ್ಲಿ ಚಿರತೆ ಮೃತಪಟ್ಟಿದ್ದ ತನಿಖೆಯ ವರದಿಯನ್ನು ಸೋಮವಾರ ಸರಕಾರಕ್ಕೆ ಸಲ್ಲಿಕೆಯಾಗಲಿದೆ.
ಟಿ.ಹೀರಾಲಾಲ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಚಾಮರಾಜನಗರ ವೃತ್ತ