ಅಂಕಲ್ ಜಡ್ಜ್ ಸಿಂಡ್ರೋಮ್: ನ್ಯಾಯಾಲಯಗಳಲ್ಲಿ ತಲೆಮಾರುಗಳ ಆಳ್ವಿಕೆ!

PC : PTI
ಪ್ರಜಾಪ್ರಭುತ್ವದ ಆಧಾರ ಸ್ತಂಭಗಳು ಯಾವುವು ಎಂದು ಕೇಳಿದರೆ, ಸಂವಿಧಾನ, ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಎಂಬ ಉತ್ತರ ಬರುತ್ತದೆ.
ಇವುಗಳಲ್ಲಿ, ಜನಸಾಮಾನ್ಯರ ಕೊನೆಯ ಭರವಸೆಯಾಗಿರುವುದು ನ್ಯಾಯಾಂಗ.
ನ್ಯಾಯದೇವತೆಯ ಕಣ್ಣಿಗೆ ಬಟ್ಟೆ ಕಟ್ಟಿರಲಾಗುತ್ತದೆ, ಏಕೆಂದರೆ ಅವಳಿಗೆ ಬಡವ-ಬಲ್ಲಿದ, ಪರಿಚಿತ -ಅಪರಿಚಿತ ಎಂಬ ಭೇದವಿಲ್ಲ.
ಆದರೆ, ಆ ಬಟ್ಟೆಯ ಹಿಂದಿನ ಕಣ್ಣುಗಳು ಕೇವಲ ತಮ್ಮದೇ ಕುಟುಂಬದ ಸದಸ್ಯರನ್ನು ಹೆಚ್ಚು ಗುರುತಿಸುತ್ತಿವೆಯೇ?
ನ್ಯಾಯದಾನವೆಂಬುದು ಕೆಲವೇ ಕೆಲವು ಕುಟುಂಬಗಳ ಸ್ವತ್ತಾಗುತ್ತಿದೆಯೇ?
ಭಾರತದ ಅತ್ಯುನ್ನತ ನ್ಯಾಯಾಲಯಗಳು 'ಕುಟುಂಬದ ವ್ಯವಹಾರ'ದಂತೆ ನಡೆಯುತ್ತಿವೆಯೇ?
ಭಾರತೀಯ ನ್ಯಾಯಾಂಗದ ಆಳದಲ್ಲಿ ಬೇರೂರಿರುವ ಸ್ವಜನಪಕ್ಷಪಾತ ಮತ್ತು
ವಂಶಪಾರಂಪರ್ಯದ ಆತಂಕಕಾರಿ ವಾಸ್ತವವನ್ನು ಅಂಕಿ-ಅಂಶಗಳ ಇಲ್ಲಿದೆ.
ಇದು ನ್ಯಾಯಾಂಗದ ಮೇಲಿನ ಟೀಕಾ ಪ್ರಹಾರ ಅಲ್ಲ, ಬದಲಾಗಿ ಈ ದೇಶದ ಜನರ ಕೊನೆಯ ಭರವಸೆಯಾಗಿರುವ ನ್ಯಾಯಾಂಗದ ಆತ್ಮವನ್ನು ಉಳಿಸಿಕೊಳ್ಳಬೇಕೆಂಬ ಕಳಕಳಿಯ ಕರೆ.
ಭಾರತದಲ್ಲಿ ನ್ಯಾಯಾಧೀಶರ ನೇಮಕಾತಿ ನಡೆಯುವುದು 'ಕೊಲಿಜಿಯಂ' ವ್ಯವಸ್ಥೆಯ ಮೂಲಕ. ಅಂದರೆ, ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳು ಮತ್ತು ಹಿರಿಯ ನ್ಯಾಯಮೂರ್ತಿಗಳ ಒಂದು ಉನ್ನತ ಮಟ್ಟದ ಸಮಿತಿಯು ನ್ಯಾಯಾಧೀಶರನ್ನು ಆಯ್ಕೆ ಮಾಡುತ್ತದೆ.
ಕಾರ್ಯಾಂಗದ ಹಸ್ತಕ್ಷೇಪದಿಂದ ನ್ಯಾಯಾಂಗದ ಸ್ವಾತಂತ್ರ್ಯವನ್ನು ಕಾಪಾಡಲು ಈ ವ್ಯವಸ್ಥೆ ಜಾರಿಗೆ ಬಂತು.
ಇದು ಒಳ್ಳೆಯ ಉದ್ದೇಶವೇ.
ಆದರೆ, ಈ ವ್ಯವಸ್ಥೆಯಲ್ಲಿ ಪಾರದರ್ಶಕತೆಯ ತೀವ್ರ ಕೊರತೆಯಿದೆ. ಇದಕ್ಕೆ ಯಾರು ಅರ್ಜಿ ಹಾಕುತ್ತಾರೆ, ಯಾರನ್ನು ಏಕೆ ಆಯ್ಕೆ ಮಾಡಲಾಗುತ್ತದೆ, ಯಾರನ್ನು ಏಕೆ ತಿರಸ್ಕರಿಸಲಾಗುತ್ತದೆ ಎಂಬ ಮಾಹಿತಿ ಸಾರ್ವಜನಿಕವಾಗಿ ಲಭ್ಯವಿಲ್ಲ.
ಇದೇ ಗೌಪ್ಯತೆಯೇ ನ್ಯಾಯಾಧೀಶರ ನೇಮಕಾತಿಯಲ್ಲಿ ಸ್ವಜನಪಕ್ಷಪಾತದ ಬೇರುಗಳು ಆಳವಾಗಿ ಇಳಿಯಲು ಫಲವತ್ತಾದ ಮಣ್ಣನ್ನು ಒದಗಿಸಿದೆಯೇ?
ಅಂಕಿ-ಅಂಶಗಳನ್ನು ನೋಡಿದರೆ ಈ ಅನುಮಾನ ದಟ್ಟವಾಗುತ್ತದೆ.
ಎಪ್ರಿಲ್ 2025 ರ ದಿ ಪ್ರಿಂಟ್ ನ ಒಂದು ವರದಿಯ ಪ್ರಕಾರ, ಸುಪ್ರೀಂ ಕೋರ್ಟ್ನ ಶೇ. 33ರಷ್ಟು ಮತ್ತು ಹೈಕೋರ್ಟ್ ಗಳ ಶೇ. 50ರಷ್ಟು ನ್ಯಾಯಾಧೀಶರು ನ್ಯಾಯಾಂಗದ ಉನ್ನತ ಸ್ಥಾನಗಳಲ್ಲಿರುವವರ ಅಥವಾ ಈ ಮೊದಲು ಇದ್ದವರ ಸಂಬಂಧಿಕರಾಗಿದ್ದಾರೆ.
2016ರಲ್ಲಿ, ಸುಪ್ರೀಂ ಕೋರ್ಟ್ನ 28 ನ್ಯಾಯಾಧೀಶರಲ್ಲಿ 11 ಮಂದಿ ನ್ಯಾಯಾಧೀಶರ ಅಥವಾ ಪ್ರಮುಖ ವಕೀಲರ ಕುಟುಂಬಗಳಿಂದ ಬಂದವರಾಗಿದ್ದರು.
ಇತ್ತೀಚಿನ 'ದಿ ಪ್ರಿಂಟ್' ವರದಿಯ ಪ್ರಕಾರ, ಸುಪ್ರೀಂ ಕೋರ್ಟ್ನ ಶೇ. 60ರಷ್ಟು ಹಾಲಿ ನ್ಯಾಯಾಧೀಶರ ಸಂಬಂಧಿಕರು ಕಾನೂನು ವೃತ್ತಿಯಲ್ಲಿದ್ದಾರೆ. ಪ್ರತಿ ಮೂವರು ಹೈಕೋರ್ಟ್ ನ್ಯಾಯಾಧೀಶರಲ್ಲಿ ಒಬ್ಬರು ಹಾಲಿ ಅಥವಾ ಮಾಜಿ ನ್ಯಾಯಾಧೀಶರ ಸಂಬಂಧಿ!
ಈ ಸಂಖ್ಯೆಗಳು ಕೇವಲ ಕಾಕತಾಳೀಯವೇ? ಅಥವಾ ವ್ಯವಸ್ಥಿತ ಮಾದರಿಯೇ?
ನ್ಯಾಯಾಂಗದಲ್ಲಿರುವ ಈ ಫ್ಯಾಮಿಲಿ ಕನೆಕ್ಷನ್ ನ ಕೆಲವು ಉದಾಹರಣೆಗಳನ್ನು ಇಲ್ಲಿವೆ.
ದೇಶದ ಮಾಜಿ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್:
ಇವರ ತಂದೆ ನ್ಯಾ ವೈ.ವಿ. ಚಂದ್ರಚೂಡ್, ಭಾರತದ ಅತಿ ದೀರ್ಘಾವಧಿಯ ಮುಖ್ಯ ನ್ಯಾಯಮೂರ್ತಿಯಾಗಿದ್ದರು.
ಮಾಜಿ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ: ಇವರದ್ದು ನ್ಯಾಯಾಂಗದಲ್ಲಿ ಆಳವಾದ ಬೇರುಗಳನ್ನು ಹೊಂದಿರುವ ಕುಟುಂಬ. ಇವರ ಚಿಕ್ಕಪ್ಪ, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಚ್.ಆರ್. ಖನ್ನಾ ಅವರು ತುರ್ತುಪರಿಸ್ಥಿತಿಯ ಸಮಯದಲ್ಲಿ ನೀಡಿದ ಐತಿಹಾಸಿಕ ತೀರ್ಪಿಗೆ ಪ್ರಸಿದ್ಧರು. ಅಷ್ಟೇ ಅಲ್ಲ, ಇವರ ತಂದೆ, ನ್ಯಾಯಮೂರ್ತಿ ಡಿ.ಆರ್. ಖನ್ನಾ ಅವರು ದೆಹಲಿ ಹೈಕೋರ್ಟ್ ನ ನ್ಯಾಯಾಧೀಶರಾಗಿದ್ದರು.
ಹಾಲಿ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ: ಇವರ ತಂದೆ ಆರ್.ಎಸ್. ಗವಾಯಿ ಅವರು ರಾಜಕಾರಣಿ ಮತ್ತು ಗವರ್ನರ್ ಆಗಿದ್ದರು. ಇಷ್ಟೇ ಅಲ್ಲ, ಅವರ ಸಹೋದರ ವಕೀಲರಾಗಿದ್ದರೆ, ಅವರ ಸೋದರ ಸಂಬಂಧಿ ಮಗ ಹೈಕೋರ್ಟ್ ನ ನ್ಯಾಯಾಧೀಶರಾಗುವ ಹಾದಿಯಲ್ಲಿದ್ದಾರೆ. ಇದು ರಾಜಕೀಯ ಮತ್ತು ನ್ಯಾಯಾಂಗ ಎರಡರಲ್ಲೂ ಇರುವ ಪ್ರಭಾವಿ ಹಿನ್ನೆಲೆಯನ್ನು ತೋರಿಸುತ್ತದೆ.
ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ : ಇವರದ್ದು ಕಾನೂನು ಮತ್ತು ಆಡಳಿತದಲ್ಲಿ ಆಳವಾದ ಹಿನ್ನೆಲೆಯಿರುವ ಕುಟುಂಬ. ಇವರ ಮುತ್ತಜ್ಜ ಸರ್ ದಯಾ ಕಿಶನ್ ಕೌಲ್ ಅವರು ಒಂದು ಕಾಲದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮಂತ್ರಿಯಾಗಿದ್ದರು.
ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿ ವಿಕ್ರಮ್ ನಾಥ್: ಇವರ ಕುಟುಂಬವು ಹಲವಾರು ತಲೆಮಾರುಗಳಿಂದ ಕಾನೂನು ವೃತ್ತಿಯಲ್ಲಿದೆ. ವಕೀಲರು ಮತ್ತು ನ್ಯಾಯಾಧೀಶರ ಸುದೀರ್ಘ ಪರಂಪರೆ ಇವರ ಕುಟುಂಬಕ್ಕಿದೆ.
ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ
ನ್ಯಾಯಮೂರ್ತಿ ಕೆ.ಎಂ. ಜೋಸೆಫ್: ಇವರ ತಂದೆ ಕೆ.ಕೆ. ಮ್ಯಾಥ್ಯೂ, ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿದ್ದರು.
ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿ, ಕನ್ನಡತಿ
ನ್ಯಾಯಮೂರ್ತಿ ಬಿ.ವಿ. ನಾಗರತ್ನ: ಇವರ ತಂದೆ ನ್ಯಾ. ಇ.ಎಸ್. ವೆಂಕಟರಾಮಯ್ಯ, ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿ.
ನ್ಯಾ. ನಾಗರತ್ನ ಅವರೂ ಮುಂದೆ ದೇಶದ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ.
ಸುಪ್ರೀಂ ಕೋರ್ಟ್ ಹಾಲಿ ನ್ಯಾಯಮೂರ್ತಿ ದೀಪಂಕರ್ ದತ್ತಾ: ಇವರ ತಂದೆ ನ್ಯಾ. ಸಲೀಲ್ ಕುಮಾರ್ ದತ್ತಾ, ಕಲ್ಕತ್ತಾ ಹೈಕೋರ್ಟ್ನ ಮಾಜಿ ನ್ಯಾಯಾಧೀಶರು.
ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ
ನ್ಯಾಯಮೂರ್ತಿ ಹೇಮಂತ್ ಗುಪ್ತಾ: ಇವರ ತಂದೆ ನ್ಯಾ ಜೆ.ವಿ. ಗುಪ್ತಾ, ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು.
ಈ ಪಟ್ಟಿ ಇಲ್ಲಿಗೇ ನಿಲ್ಲುವುದಿಲ್ಲ. ಹಲವಾರು ಹೈಕೋರ್ಟ್ ಗಳಲ್ಲಿಯೂ ಇದೇ 'ಅಂಕಲ್ ಜಡ್ಜ್ ಸಿಂಡ್ರೋಮ್' ವ್ಯಾಪಕವಾಗಿದೆ.
ಈ ಚಿತ್ರಣದ ಇನ್ನೊಂದು ಮುಖವನ್ನು ನಾವು ನೋಡಬೇಕು. ಒಂದೆಡೆ, ನ್ಯಾಯಾಧೀಶರ ಮಕ್ಕಳು ಮತ್ತು ಸಂಬಂಧಿಕರು ಸುಲಭವಾಗಿ ನ್ಯಾಯಾಧೀಶರಾಗುತ್ತಿದ್ದಾರೆ.
ಮತ್ತೊಂದೆಡೆ, ಯಾವುದೇ ಪ್ರಭಾವೀ ಹಿನ್ನೆಲೆಯಿಲ್ಲದ, ಪ್ರತಿಭಾವಂತ ಕಿರಿಯ ವಕೀಲರು ತಿಂಗಳಿಗೆ 5,000 ರೂಪಾಯಿ ಸಂಪಾದಿಸಲೂ ಹೆಣಗಾಡುತ್ತಿರುವ ಕಠೋರ ವಾಸ್ತವವಿದೆ.
ಅವರಿಗೆ ಮಾರ್ಗದರ್ಶನ ನೀಡುವವರಿಲ್ಲ, ಅವಕಾಶಗಳನ್ನು ಸೃಷ್ಟಿಸುವ 'ಗಾಡ್ಫಾದರ್'ಗಳಿಲ್ಲ. ಅವರ ಪ್ರತಿಭೆ ವ್ಯವಸ್ಥೆಯ ಗೋಡೆಗಳಿಗೆ ತಲೆ ಚಚ್ಚಿಕೊಂಡು ಸಾಯುತ್ತಿದೆ.
ಇಲ್ಲಿ ಯಾವುದೇ ಹಾಲಿ ನ್ಯಾಯಮೂರ್ತಿಗಳ ಅರ್ಹತೆ ಅಥವಾ ಸಾಮರ್ಥ್ಯವನ್ನು ಪ್ರಶ್ನಿಸಲಾಗುತ್ತಿಲ್ಲ. ಈ ಪಟ್ಟಿಯಲ್ಲಿರುವ ಅನೇಕರು ಅತ್ಯಂತ ಸಮರ್ಥ ಮತ್ತು ಪ್ರಾಮಾಣಿಕ ನ್ಯಾಯಾಧೀಶರಾಗಿರಬಹುದು.
ಆದರೆ, ಪ್ರಶ್ನೆ ಇರುವುದು ವ್ಯವಸ್ಥೆಯ ಬಗ್ಗೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ನ್ಯಾಯಾಧೀಶರ ಸಂಬಂಧಿಕರೇ ನ್ಯಾಯಾಧೀಶರಾಗುವುದು ಕೇವಲ ಅವರ ಪ್ರತಿಭೆಯಿಂದಲೇ? ಅಥವಾ ಅವರಿಗೆ ವ್ಯವಸ್ಥೆಯೊಳಗೆ ಒಂದು ಸುಲಭವಾದ ದಾರಿ ಸಿಗುತ್ತದೆಯೇ?
ಕೆಲವೊಮ್ಮೆ, ಕೆಲವು ನ್ಯಾಯಮೂರ್ತಿಗಳು, ತಾವು ಮೊದಲ ತಲೆಮಾರಿನ ವಕೀಲರಲ್ಲದಿದ್ದರೂ, ತಮ್ಮ ಕುಟುಂಬದಿಂದ ಯಾವುದೇ ವಿಶೇಷ ಬೆಂಬಲ ಸಿಗಲಿಲ್ಲ ಎಂದು ಹೇಳುತ್ತಾರೆ. ಅವರ ವೈಯಕ್ತಿಕ ಅನುಭವಗಳು ಗೌರವಾನ್ವಿತ.
ಆದರೆ, ಒಟ್ಟಾರೆ ಅಂಕಿ-ಅಂಶಗಳು ಒಂದು ದೊಡ್ಡ ಮತ್ತು ಸ್ಪಷ್ಟವಾದ ಚಿತ್ರಣವನ್ನು ನೀಡುತ್ತವೆ. ಇಷ್ಟು ದೊಡ್ಡ ಪ್ರಮಾಣದ ಹಾಗು ಸ್ಪಷ್ಟ ವಾಸ್ತವಗಳನ್ನು ಕಾಕತಾಳೀಯ ಎಂದು ತಳ್ಳಿಹಾಕಲು ಸಾಧ್ಯವಿಲ್ಲ.
ಈ ಸ್ವಜನಪಕ್ಷಪಾತ ಕೇವಲ ನೈತಿಕವಾಗಿ ತಪ್ಪಲ್ಲ, ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ. ಏಕೆಂದರೆ, ಇದು ನ್ಯಾಯಾಂಗದಲ್ಲಿ ಜಾತಿವಾದವನ್ನೂ ಪೋಷಿಸುತ್ತಿದೆ.
2018 ರಿಂದ 2022ರವರೆಗೆ ಹೈಕೋರ್ಟ್ಗಳಿಗೆ ನೇಮಕಗೊಂಡ ನ್ಯಾಯಾಧೀಶರಲ್ಲಿ ಶೇ. 79ರಷ್ಟು ಮಂದಿ ಪ್ರಬಲ ಸಮುದಾಯಗಳಿಗೆ ಸೇರಿದವರು.
ಜನಸಂಖ್ಯೆಯಲ್ಲಿ ಕಾಲು ಭಾಗದಷ್ಟಿರುವ ಪರಿಶಿಷ್ಟ ಜಾತಿಯ ಪಾಲು ಶೇ. 3ಕ್ಕಿಂತ ಕಡಿಮೆ, ಮತ್ತು ಪರಿಶಿಷ್ಟ ಪಂಗಡದ ಪಾಲು ಕೇವಲ ಶೇ. 1.
ಹಾಗಾದರೆ ನ್ಯಾಯಾಂಗದ ಬಾಗಿಲುಗಳು ಕೆಲವೇ ಕುಟುಂಬಗಳಿಗೆ ಮತ್ತು ಕೆಲವೇ ಸಮುದಾಯಗಳಿಗೆ ಮಾತ್ರ ತೆರೆದಿವೆಯೇ?
ಇದಕ್ಕೆ ಪರಿಹಾರವೇನು?
ಕೊಲಿಜಿಯಂ ವ್ಯವಸ್ಥೆಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕೆಂದಲ್ಲ. ಆದರೆ ಅದನ್ನು ಸುಧಾರಿಸಲೇಬೇಕಿದೆ.
ನ್ಯಾಯಾಧೀಶರ ನೇಮಕಾತಿಯನ್ನು ಪಾರದರ್ಶಕಗೊಳಿಸುವುದು ಮೊದಲ ಹೆಜ್ಜೆ.
ಕೊಲಿಜಿಯಂ ಖಾಲಿ ಇರುವ ಸ್ಥಾನಗಳಿಗೆ ಸಾರ್ವಜನಿಕವಾಗಿ ಅರ್ಜಿಗಳನ್ನು ಆಹ್ವಾನಿಸಬೇಕು. ಅಭ್ಯರ್ಥಿಗಳ ಅರ್ಹತಾ ಮಾನದಂಡಗಳನ್ನು ಸ್ಪಷ್ಟವಾಗಿ ಪ್ರಕಟಿಸಬೇಕು. ಸಂದರ್ಶನಗಳನ್ನು ನಡೆಸಿ, ಆಯ್ಕೆ ಮತ್ತು ತಿರಸ್ಕಾರಕ್ಕೆ ಕಾರಣಗಳನ್ನು ದಾಖಲಿಸಬೇಕು.
ಇದರಿಂದ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದಿಲ್ಲ, ಬದಲಾಗಿ ಅದರ ವಿಶ್ವಾಸಾರ್ಹತೆ ಹೆಚ್ಚುತ್ತದೆ. ಪ್ರತಿಭಾವಂತ, ಆದರೆ ಹಿನ್ನೆಲೆಯಿಲ್ಲದ ಯುವಕ-ಯುವತಿಯರಿಗೆ ನ್ಯಾಯಾಂಗದ ಬಾಗಿಲು ತೆರೆಯುತ್ತದೆ. ಆಗ ನಮ್ಮ ನ್ಯಾಯಾಲಯಗಳು ನಿಜವಾಗಿಯೂ ಭಾರತದ ವೈವಿಧ್ಯತೆಯನ್ನು ಪ್ರತಿನಿಧಿಸುತ್ತವೆ.
ಈ ಚರ್ಚೆಯ ಉದ್ದೇಶ ನ್ಯಾಯಾಂಗವನ್ನು ಇನ್ನಷ್ಟು ಬಲಪಡಿಸುವುದು. ಸಾರ್ವಜನಿಕರ ನಂಬಿಕೆಯೇ ನ್ಯಾಯಾಂಗದ ಅತಿದೊಡ್ಡ ಬಲ. ಆ ನಂಬಿಕೆಗೆ ಸ್ವಜನಪಕ್ಷಪಾತದ ಗೆದ್ದಲು ಹಿಡಿಯಲು ಬಿಡಬಾರದು.
ನ್ಯಾಯದೇವತೆಯ ಕಣ್ಣಿಗೆ ಕಟ್ಟಿರುವ ಬಟ್ಟೆ, ಅವಳು ಕುರುಡಿ ಎಂಬುದರ ಸಂಕೇತವಲ್ಲ.
ಬದಲಾಗಿ, ಅವಳು ನಿಷ್ಪಕ್ಷಪಾತಿ ಎಂಬುದರ ಸಂಕೇತ. ಆ ನಿಷ್ಪಕ್ಷ ನೀತಿಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ.