'ತಾಂತ್ರಿಕ ದೋಷ' ಎಸ್ಸಿ-ಎಸ್ಟಿ ಕಾನೂನು ಪದವೀಧರರ ಶಿಷ್ಯವೇತನಕ್ಕೆ ಅಡ್ಡಿ: ಆರೋಪ

ಸಾಂದರ್ಭಿಕ ಚಿತ್ರ PC: PTI
ಬೆಂಗಳೂರು, ಮೇ 4: ರಾಜ್ಯ ಸರಕಾರವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾನೂನು ಪದವೀಧರರಿಗೆ ಮಾಸಿಕ ಶಿಷ್ಯವೇತನವನ್ನು ನೀಡುತ್ತಿದ್ದು, ಈ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲು ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಅರ್ಹ ಅಭ್ಯರ್ಥಿಗಳು ಈ ಯೋಜನೆಯ ಸೌಲಭ್ಯ ಪಡೆಯಲು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ಪರಿಶಿಷ್ಟರ ಕಲ್ಯಾಣಕ್ಕಾಗಿ ರಾಜ್ಯ ಸರಕಾರವು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಅನೇಕ ಯೋಜನೆಗಳನ್ನು ಅನುಷ್ಟಾನ ಮಾಡಿದೆ. ಅದರಲ್ಲಿ ಕಾನೂನು ಪದವೀಧರರಿಗೆ ಶಿಷ್ಯವೇತನವನ್ನು ನೀಡುವುದು ಒಂದು ಪ್ರಮುಖ ಯೋಜನೆಯಾಗಿದೆ. ಕಾನೂನು ಪದವಿ ಪೂರೈಸಿದವರು ಈ ಯೋಜನೆಯಡಿ ಆಯ್ಕೆಯಾದರೆ, ಫಲಾನುಭವಿಗಳಿಗೆ 2 ವರ್ಷಗಳ ಕಾಲ ಮಾಸಿಕ 10 ಸಾವಿರ ರೂ.ಗಳ ವರೆಗೆ ಶಿಷ್ಯವೇತನ ನೀಡಲಾಗುತ್ತದೆ. ಆದರೆ, ಅರ್ಜಿ ಸಲ್ಲಿಸಲು ಇಲಾಖೆ ನಿಗದಿ ಪಡಿಸುವ ಅವೈಜ್ಞಾನಿಕ ಕೊನೆ ದಿನಾಂಕಗಳು ಮತ್ತು ಅರ್ಜಿ ಸಲ್ಲಿಸುವಾಗ ಬರುವ ಹಲವು ತಂತ್ರಾಂಶ ದೋಷಗಳಿಂದಾಗಿ ಅರ್ಹ ವಿದ್ಯಾರ್ಥಿಗಳು ಯೋಜನೆಯಿಂದ ದೂರ ಉಳಿಯುವಂತಾಗಿದೆ.
ಹಿರಿಯ ವಕೀಲರಲ್ಲಿ ಹಲವರು ಪ್ರಾರಂಭದಲ್ಲಿ ಕಿರಿಯ ವಕೀಲರಿಗೆ ಹೆಚ್ಚು ವೇತನ ನೀಡುವುದಿಲ್ಲ. ಇದರಿಂದಾಗಿ ಎಷ್ಟೋ ಜನ ವಿದ್ಯಾರ್ಥಿಗಳು ಪದವಿ ಪಡೆದುಕೊಂಡಿದ್ದರೂ ನ್ಯಾಯಾಲಯದಲ್ಲಿ ವಕೀಲ ವೃತ್ತಿ ಮಾಡಲು ಸಾಧ್ಯವಾಗದೇ, ಅಸಹಾಯಕತೆಯಿಂದ ದೂರ ಉಳಿದುಬಿಡುತ್ತಾರೆ. ಹೀಗಾಗಿಯೇ ಸಮಾಜ ಕಲ್ಯಾಣ ಇಲಾಖೆಯು ಕಾನೂನು ಪದವೀಧರರಿಗೆ ಶಿಷ್ಯವೇತನ ಯೋಜನೆಯನ್ನು ಜಾರಿ ಮಾಡಿದೆ.
ಕಾನೂನು ಪದವಿ ಪರೀಕ್ಷೆಗಳು ವರ್ಷಕ್ಕೆ ಎರಡು ಬಾರಿ ನಡೆಯುತ್ತವೆ. ಇನ್ನು ಕ್ಯಾರಿ ಓವರ್ ಆಯ್ಕೆಯೊಂದಿಗೆ ವಿದ್ಯಾರ್ಥಿಗಳು ಕೊನೆಯ ವರ್ಷದಲ್ಲಿ ಎಲ್ಲ ಅನುತ್ತೀರ್ಣವಾದ ವಿಷಯಗಳನ್ನು ಒಮ್ಮೆಲೆ ಉತ್ತೀರ್ಣರಾಗಲು ಅವಕಾಶ ಇದೆ. ಹೀಗೆ ಪದವಿ ಮುಗಿಸಿರುವ ವಿದ್ಯಾರ್ಥಿಗಳು ಬಾರ್ ಕೌನ್ಸಿಲ್ನಲ್ಲಿ ರಿಜಿಸ್ಟರ್ ಆಗುವುದಕ್ಕೆ ವರ್ಷದಲ್ಲಿ ಎರಡು ಅವಕಾಶಗಳಿರುತ್ತದೆ.
ಆದರೆ, ಬಾರ್ ಕೌನ್ಸಿಲ್ನಲ್ಲಿ ರಿಜಿಸ್ಟರ್ ಆದ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯಿಂದ ಸಿಗುವ ಈ ಸ್ಟೈಫಂಡ್(ಶಿಷ್ಯ ವೇತನ) ಯೋಜನೆ ಪಡೆದುಕೊಳ್ಳುವುದಕ್ಕೆ ತಿಂಗಳುಗಳಾದರೂ ಪರದಾಡುವಂತಹ ಸ್ಥಿತಿ ಪದೆ ಪದೇ ಮರುಕಳಿಸುತ್ತಿದೆ. ಹೀಗಾಗಿ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಲು ದಿನಾಂಕಗಳನ್ನು ನಿಗಧಿ ಮಾಡಬಾರದು, ವರ್ಷಪೂರ್ತಿ ಅವಕಾಶ ನೀಡಬೇಕು ಎಂದು ಅಭ್ಯರ್ಥಿಗಳ ಒತ್ತಾಯವಾಗಿದೆ.
ಕಾನೂನು ಪದವಿ ಫಲಿತಾಂಶ ಪ್ರಕಟವಾದ ನಂತರ ಕೆಲವರು ಈ ಯೋಜನೆಯ ಅವಕಾಶ ಪಡೆದುಕೊಳ್ಳುತ್ತಾರೆ. ಆದರೆ, ಅನುತ್ತೀರ್ಣರಾದ ಹಲವರು ಮರುಮೌಲ್ಯಮಾಪನ, ಚಾಲೆಂಜ್ ಮೌಲ್ಯಮಾಪನಕ್ಕೆ ಸಾವಿರಾರು ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸುತ್ತಾರೆ. ಈ ಮರುಮೌಲ್ಯಮಾಪನ ಫಲಿತಾಂಶ ಪ್ರಕಟವಾಗುವುದಕ್ಕೆ ಕನಿಷ್ಠ ತಿಂಗಳಾದರೂ ತೆಗೆದುಕೊಳ್ಳುವ ಸಾಧ್ಯತೆ ಇದೆ. ಈ ಫಲಿತಾಂಶ ಪ್ರಕಟವಾಗುವುದರೊಳಗೆ ಯೋಜನೆಗೆ ನಿಗಧಿಪಡಿಸಿರುವ ಕೊನೆ ದಿನಾಂಕ ಮುಕ್ತಾಯವಾಗಿರುತ್ತದೆ. ಇನ್ನು ಅರ್ಜಿ ಸಲ್ಲಿಸಲು ಅವಕಾಶವಿದ್ದ ಸಮಯದಲ್ಲಿ ಸಾಕಷ್ಟು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ವೇಳೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದರೆ ಮುಂದಿನ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಎಂದು ಉತ್ತರ ನೀಡಿ ಸುಮ್ಮನಾಗುತ್ತಾರೆ.
ಬೆಂಗಳೂರಿನಂತಹ ಮಹಾನಗರದಲ್ಲಿ ಸ್ವಾವಲಂಬಿಯಾಗಿ ಬದುಕಲು ಕನಿಷ್ಠ 25 ಸಾವಿರ ರೂ.ಗಳು ಇದ್ದರೆ ಮಾತ್ರ ಸಾಧ್ಯ. ಎಷ್ಟೋ ಜನ ವಿದ್ಯಾರ್ಥಿಗಳು ಹಳ್ಳಿಗಳಿಂದ ಬಂದು ಇಲ್ಲಿ ವಾಸ ಮಾಡುತ್ತಿರುತ್ತಾರೆ. ಅವರು ಈ ನಗರದಲ್ಲಿ ಹಿರಿಯ ವಕೀಲರು ಕೊಡುವ 6 ಸಾವಿರ, ಹತ್ತು ಸಾವಿರ ರೂ.ಗಳಿಗೆ ಬೆಂಗಳೂರಿನಲ್ಲಿ ಬದುಕಲು ಸಾಧ್ಯವೇ ಇಲ್ಲ. ಇಂತಹ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಕೊಡುವ ಸ್ಟೈ ಫಂಡ್ ನೆರವು ಆಗುತ್ತದೆ. ಆದರೆ ಸೂಕ್ತ ಸಮಯಕ್ಕೆ ಈ ಯೋಜನೆ ಅರ್ಹರಿಗೆ ತಲುಪದೇ ಇರುವುದೇ ಬೇಸರದ ಸಂಗತಿ.
ಉಡುಪಿಯಲ್ಲಿರುವ ವೈಕುಂಠ ಬಾಳಿಗ ಕಾಲೇಜಿನಲ್ಲಿ 2024ನೇ ಸಾಲಿನಲ್ಲಿ ಕಾನೂನು ಪದವಿ ಪಡೆದಿರುತ್ತೇನೆ. ಮೂರನೇ ವರ್ಷದ ಅಂತಿಮ ಸೆಮಿಸ್ಟರ್ನಲ್ಲಿ ಒಂದು ವಿಷಯ ಅನುತ್ತೀರ್ಣವಾದ ಕಾರಣ, ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುತ್ತೇನೆ. ಒಂದು ತಿಂಗಳ ನಂತರ ಮರುಮೌಲ್ಯಮಾಪನದಲ್ಲಿ ಉತ್ತೀರ್ಣಳಾಗುತ್ತೇನೆ. ಬೆಂಗಳೂರಿಗೆ ಬಂದು ಬಾರ್ ಕೌನ್ಸಿಲ್ನಲ್ಲಿ ನೋಂದಣಿ ಆಗುವುದರೊಳಗೆ ಸಮಾಜ ಕಲ್ಯಾಣ ಇಲಾಖೆಯಿಂದ ಕೊಡುವ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಮುಕ್ತಾಯವಾಯಿತು. ಸಹಾಯವಾಣಿಗೆ ಕರೆ ಮಾಡಿದರೂ ಪ್ರಯೋಜನವಾಗಿಲ್ಲ.
-ಅನಿತಾ ಕೆ., ಚಿಕ್ಕಮಗಳೂರು ಜಿಲ್ಲೆ
ಪರಿಶಿಷ್ಟ ಜಾತಿ, ಪಂಗಡ ಕಾನೂನು ಪದವಿಧರರಿಗೆ ಶಿಷ್ಯವೇತನ ನೀಡುವ ಯೋಜನೆಗೆ ಸಂಬಂಧಿಸಿ ಪ್ರತೀ ವರ್ಷವೂ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಹಲವು ವಿದ್ಯಾರ್ಥಿಗಳು ಯೋಜನೆಯ ಅನುಕೂಲ ಪಡೆದುಕೊಳ್ಳುತ್ತಿದ್ದಾರೆ. ವರ್ಷಕ್ಕೆ ಎರಡು ಬಾರಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡುವುದರಿಂದ ಅರ್ಹ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ ಎಂದರೆ ಸರಕಾರ ಜೊತೆಗೆ ಮಾತನಾಡಿ ಕ್ರಮವಹಿಸಲಾಗುವುದು.
-ಡಾ.ರಾಕೇಶ್ ಕುಮಾರ್ ಕೆ., ಸಮಾಜ ಕಲ್ಯಾಣ ಇಲಾಖೆ ಆಯುಕ್ತ
ಪ್ರತೀ ವರ್ಷ ಜೂನ್ ಅಥವಾ ಜುಲೈನಲ್ಲಿ ಅರ್ಜಿ ಸಲ್ಲಿಸಲು ಒಂದು ತಿಂಗಳ ಕಾಲ ಅವಕಾಶ ಮಾಡಿಕೊಡಲಾಗಿದೆ. ಅರ್ಹ ಅಭ್ಯರ್ಥಿಗಳು ನಿರ್ದಿಷ್ಟ ಕಾಲಾವಧಿಯಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳುತ್ತಾರೆ. ತಾಂತ್ರಿಕ ಸಮಸ್ಯೆಗಳಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅಭ್ಯರ್ಥಿಗಳು ಮುಂದಿನ ಸಾಲಿನಲ್ಲಿ ಅರ್ಜಿ ಸಲ್ಲಿಸಿ ಯೋಜನೆಯ ಅನುಕೂಲ ಪಡೆದುಕೊಳ್ಳಲು ಅವಕಾಶವಿರುತ್ತದೆ.
-ಪುರುಷೋತ್ತಮ್, ಉಪ ನಿರ್ದೇಶಕರು(ಶಿಕ್ಷಣ) ಸಮಾಜ ಕಲ್ಯಾಣ ಇಲಾಖೆ