ಬಿಹಾರದ ಮತದಾರರ ಪಟ್ಟಿಯಲ್ಲಿ ʼಮೃತಪಟ್ಟವರುʼ ಸುಪ್ರೀಂ ಕೋರ್ಟ್ ಮುಂದೆ ಜೀವಂತವಾಗಿ ಹಾಜರು!

ಸುಪ್ರೀಂ ಕೋರ್ಟ್ | PC : PTI
ಸರ್ಕಾರಿ ದಾಖಲೆಗಳಲ್ಲಿ 'ಸತ್ತಿದ್ದಾರೆ' ಎಂದು ಘೋಷಿಸಲ್ಪಟ್ಟ 17 ಮಂದಿ ಜೀವಂತ ನಾಗರಿಕರು ಇಂದು ದೇಶದ ಸರ್ವೋಚ್ಚ ನ್ಯಾಯಾಲಯದ ಮುಂದೆ ಬಂದು ನಿಂತಾಗ, ಈ ಪ್ರಶ್ನೆಗಳು ಗಂಭೀರ ಸ್ವರೂಪ ಪಡೆದುಕೊಂಡಿವೆ.
ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಅಭಿಯಾನವು ಲಕ್ಷಾಂತರ ಅರ್ಹ ಮತದಾರರನ್ನು ವ್ಯವಸ್ಥಿತವಾಗಿ ಹೊರಗಿಡುವ ಪಿತೂರಿಯೇ? ಈ ಕಾರ್ಯಾಚರಣೆಯ ಹಿಂದಿನ ಉದ್ದೇಶವಾದರೂ ಏನು?
ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಆರ್ಜೆಡಿ ಸಂಸದ ಸುಧಾಕರ್ ಸಿಂಗ್ ಮತ್ತು ರಾಜಕೀಯ ಹೋರಾಟಗಾರ ಯೋಗೇಂದ್ರ ಯಾದವ್ ಅವರು ಈ ಪ್ರಕ್ರಿಯೆಯ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇದು ಜಗತ್ತಿನ ಇತಿಹಾಸದಲ್ಲೇ ಅತಿ ದೊಡ್ಡ ಮತದಾರರ ಹಕ್ಕು ಕಸಿಯುವ ಹುನ್ನಾರ ಎಂದು ಆರೋಪಿಸಿದ್ದಾರೆ.
ಸುಧಾಕರ್ ಸಿಂಗ್ ಅವರು, ಲಕ್ಷಾಂತರ ನೈಜ ಮತದಾರರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಿ, ನಕಲಿ ಹೆಸರುಗಳನ್ನು ಸೇರಿಸಲಾಗುತ್ತಿದೆ ಎಂದು ಆರೋಪಿಸಿದರೆ, ಯೋಗೇಂದ್ರ ಯಾದವ್ ಅವರು, ಯಾವುದೇ ಹೊಸ ಮತದಾರರನ್ನು ಸೇರಿಸದೆ ಕೇವಲ ಹೆಸರುಗಳನ್ನು ತೆಗೆದುಹಾಕುವ ಈ ಪ್ರಕ್ರಿಯೆಯು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ವಾದಿಸಿದ್ದಾರೆ. ಇಬ್ಬರೂ ತಮ್ಮ ವಾದವನ್ನು ಸಮರ್ಥಿಸಲು 'ಸತ್ತಿದ್ದಾರೆ' ಎಂದು ಮತದಾರರ ಕರಡು ಪಟ್ಟಿಯಲ್ಲಿ ಘೋಷಿಸಲ್ಪಟ್ಟ ಜೀವಂತ ವ್ಯಕ್ತಿಗಳನ್ನೇ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.
ಆರ್ಜೆಡಿ ಸಂಸದ ಸುಧಾಕರ್ ಸಿಂಗ್ ಅವರು ಸುಪ್ರೀಂ ಕೋರ್ಟ್ ವಿಚಾರಣೆಯ ನಂತರ ದಿ ರೆಡ್ ಮೈಕ್ ಗೆ ನೀಡಿದ ಹೇಳಿಕೆಯಲ್ಲಿ ಚುನಾವಣಾ ಆಯೋಗದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ.
ತಮ್ಮ ಹೆಸರನ್ನು ಮತದಾರರ ಪಟ್ಟಿಯಿಂದ 'ಸತ್ತಿದ್ದಾರೆ' ಎಂಬ ಕಾರಣ ನೀಡಿ ತೆಗೆದುಹಾಕಲಾಗಿದ್ದ 17 ಜೀವಂತ ನಾಗರಿಕರನ್ನು ಅವರು ಖುದ್ದಾಗಿ ಸುಪ್ರೀಂ ಕೋರ್ಟ್ಗೆ ಕರೆತಂದಿದ್ದರು. "ಚುನಾವಣಾ ಆಯೋಗ ನಮಗೊಂದು ರೈಲು ಕೊಟ್ಟರೆ, ಸತ್ತಿದ್ದಾರೆ ಎಂದು ಘೋಷಿಸಲ್ಪಟ್ಟ ಆದರೆ ನಿಜವಾಗಿ ಜೀವಂತವಾಗಿರುವ ಜನರಿಂದಲೇ ಅದನ್ನು ತುಂಬಿಸಿ ಕಳುಹಿಸುತ್ತೇವೆ," ಎಂದು ಸಿಂಗ್ ಸವಾಲು ಹಾಕಿದ್ದಾರೆ.
ಒಂದೇ ಬೂತ್ನಲ್ಲಿ 275 ಜನರನ್ನು ಸತ್ತವರೆಂದು ಘೋಷಿಸಲಾಗಿದ್ದು, ಅವರೆಲ್ಲರ ಫೋಟೋಗಳನ್ನು ಗುರುತಿನ ಚೀಟಿ ಸಮೇತ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಒಂದೆಡೆ, ಅರ್ಹ ಮತದಾರರ ಹೆಸರುಗಳನ್ನು ತೆಗೆದುಹಾಕಲಾಗುತ್ತಿದೆ. ಇನ್ನೊಂದೆಡೆ, ಬೃಹತ್ ಪ್ರಮಾಣದಲ್ಲಿ ನಕಲಿ ಹೆಸರುಗಳನ್ನು ಸೇರಿಸಲಾಗುತ್ತಿದೆ.
"ಮಹಾರಾಷ್ಟ್ರದಲ್ಲಿ 65 ರಿಂದ 70 ಲಕ್ಷ ನಕಲಿ ಹೆಸರುಗಳನ್ನು ಸೇರಿಸಲಾಗಿತ್ತು. ಬೆಂಗಳೂರಿನ ಒಂದು ಲೋಕಸಭಾ ಕ್ಷೇತ್ರದಲ್ಲಿ 1,15,000 ಮತಗಳನ್ನು ಸೇರಿಸಲಾಗಿತ್ತು. ಈಗ ಅದೇ ಪ್ರಕ್ರಿಯೆ ಬಿಹಾರದಲ್ಲಿ ಶುರುವಾಗಿದೆ," ಎಂದು ಸಿಂಗ್ ಆರೋಪಿಸಿದ್ದಾರೆ. ತಮ್ಮ ಸ್ವಂತ ನಿವಾಸದ ವಿಳಾಸದಲ್ಲೇ ಸೂರಜ್ ಸಿಂಗ್ ಮತ್ತು ಮನೋಜ್ ಕುಮಾರ್ ರಾಥೋಡ್ ಎಂಬ ಇಬ್ಬರು ನಕಲಿ ವ್ಯಕ್ತಿಗಳ ಹೆಸರನ್ನು ಸೇರಿಸಲಾಗಿದೆ ಎಂದು ಅವರು ಉದಾಹರಣೆ ನೀಡಿದ್ದಾರೆ.
"ನನ್ನ ಬೂತ್ನಲ್ಲಿ ಅಶೋಕ್ ಸಿಂಗ್ ಮತ್ತು ಅವಧೇಶ್ ಸಿಂಗ್ ಎಂಬುವವರ ಹೆಸರುಗಳನ್ನು ಎರಡೆರಡು ಬಾರಿ ಸೇರಿಸಲಾಗಿದೆ. ಇದು ನಕಲಿ ಹೆಸರುಗಳನ್ನು ತೆಗೆಯುವ ಕೆಲಸವಲ್ಲ; ಬದಲಿಗೆ, ಚುನಾವಣೆ ಗೆಲ್ಲಲು ಬಿಜೆಪಿ ಮತ್ತು ಆರೆಸ್ಸೆಸ್ ಗೆ ಬದ್ಧವಾಗಿರುವ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಹುನ್ನಾರ," ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಮತದಾರರ ಪಟ್ಟಿಯಿಂದ ತೆಗೆದುಹಾಕಲಾದ 65 ಲಕ್ಷ ಜನರ ಪಟ್ಟಿಯನ್ನು ಅರ್ಜಿದಾರರಿಗಾಗಲಿ, ಸುಪ್ರೀಂ ಕೋರ್ಟಿಗಾಗಲಿ ನೀಡಲು ಆಯೋಗ ನಿರಾಕರಿಸುತ್ತಿದೆ. "ಸುಪ್ರೀಂ ಕೋರ್ಟ್ ನ್ಯಾಯದ ದೇಗುಲ. ಆಯೋಗವು ನ್ಯಾಯಾಲಯದ ಮುಂದೆ ಸತ್ಯವನ್ನು ಇಡಲು ನಿರಾಕರಿಸಿದರೆ, ಅದು ತನ್ನ ಕಳ್ಳತನವನ್ನು ಮುಚ್ಚಿಡಲು ಯತ್ನಿಸುತ್ತಿದೆ ಎಂದರ್ಥ," ಎಂದು ಸಿಂಗ್ ಟೀಕಿಸಿದ್ದಾರೆ.
ಹೆಸರು ತೆಗೆದುಹಾಕಿದ ಪಟ್ಟಿಯನ್ನು ಬೂತ್ ಮಟ್ಟದ ಏಜೆಂಟರಿಗೆ (BLA) ನೀಡಲಾಗಿದೆ ಎಂಬ ಆಯೋಗದ ವಾದವನ್ನು ಅವರು ತಳ್ಳಿಹಾಕಿದ್ದಾರೆ. "ಹೌದು, ಅವರು ಪಟ್ಟಿಯನ್ನು ಕೊಟ್ಟಿದ್ದಾರೆ, ಆದರೆ ಇಂಗ್ಲಿಷ್ನಲ್ಲಿ. ಬಿಹಾರ ಹಿಂದಿ ಮಾತನಾಡುವ ರಾಜ್ಯ, ಇಲ್ಲಿ ಎಷ್ಟು ಜನರಿಗೆ ಇಂಗ್ಲಿಷ್ ಓದಲು ಬರುತ್ತದೆ? ಅಷ್ಟೇ ಅಲ್ಲ, ಆ ಪಟ್ಟಿಯಲ್ಲಿ ಹೆಸರು ತೆಗೆದುಹಾಕಲು ಕಾರಣವನ್ನೇ ನಮೂದಿಸಿಲ್ಲ. ಇದು ಹಸಿದವನಿಗೆ ಕಲ್ಲು ಬೆರೆಸಿದ ಅನ್ನವನ್ನು ನೀಡಿ, ನಂತರ ನಾವು ಅವನಿಗೆ ಊಟ ಹಾಕಿದ್ದೇವೆ ಎಂದು ಹೇಳಿದಂತಿದೆ," ಎಂದು ಅವರು ವ್ಯಂಗ್ಯವಾಡಿದ್ದಾರೆ.
ಈ ಪ್ರಕ್ರಿಯೆಯಿಂದ ಬಿಹಾರದ ವಲಸೆ ಕಾರ್ಮಿಕರಿಗೆ ಅತಿ ಹೆಚ್ಚು ಹಾನಿಯಾಗಲಿದೆ. ಶೇ. 40ರಷ್ಟು ಜನರಿಗೆ ಭೂ ದಾಖಲೆಗಳಿಲ್ಲ, ಶೇ. 35ರಷ್ಟು ಜನ ಅನಕ್ಷರಸ್ಥರು. ಇವರು ಆಯೋಗ ಕೇಳುವ ದಾಖಲೆಗಳನ್ನು ಎಲ್ಲಿಂದ ತರುತ್ತಾರೆ? ಇದು ಕೇವಲ ಮತದಾರರ ಮೇಲಿನ ದಾಳಿಯಲ್ಲ, ಇದು ಪೌರತ್ವದ ಮೇಲಿನ ದಾಳಿ," ಎಂದು ಸಿಂಗ್ ಎಚ್ಚರಿಸಿದ್ದಾರೆ.
ಇದೇ ವೇಳೆ, ಪ್ರಕರಣದ ಮತ್ತೊಬ್ಬ ಅರ್ಜಿದಾರರಾದ ರಾಜಕೀಯ ಹೋರಾಟಗಾರ ಯೋಗೇಂದ್ರ ಯಾದವ್ ಅವರು ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಅವರ ಪೀಠದ ಮುಂದೆ ಸ್ವತಃ ಹಾಜರಾಗಿ ತಮ್ಮ ವಾದ ಮಂಡಿಸಿದರು.
'ಸತ್ತಿದ್ದಾರೆ' ಎಂದು ಘೋಷಿಸಲ್ಪಟ್ಟ ಇಬ್ಬರು ಜೀವಂತ ವ್ಯಕ್ತಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ ಯಾದವ್, "ಇದು ವಿಶ್ವದ ಇತಿಹಾಸದಲ್ಲೇ ಅತಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಮತದಾನದ ಹಕ್ಕು ಕಸಿಯುವ ಪ್ರಕ್ರಿಯೆ," ಎಂದು ಬಣ್ಣಿಸಿದ್ದಾರೆ. ಬಿಹಾರದಲ್ಲಿ ಈಗಾಗಲೇ 65 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದ್ದು, ಈ ಸಂಖ್ಯೆ ಒಂದು ಕೋಟಿ ದಾಟುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದ್ದಾರೆ.
"ಇದು ಸಾಮಾನ್ಯ ಪರಿಷ್ಕರಣೆಯಲ್ಲ, ಇದು ಸಾಮೂಹಿಕ ಬಹಿಷ್ಕಾರ. ದಯವಿಟ್ಟು ನೋಡಿ, ಇವರನ್ನು ಸತ್ತಿದ್ದಾರೆಂದು ಘೋಷಿಸಲಾಗಿದೆ ಆದರೆ ಇವರು ಜೀವಂತವಾಗಿದ್ದಾರೆ," ಎಂದು ಯಾದವ್ ನ್ಯಾಯಾಧೀಶರ ಗಮನ ಸೆಳೆದರು. ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 'ಶೂನ್ಯ ಸೇರ್ಪಡೆ'ಯೊಂದಿಗೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ, ಅಂದರೆ ಯಾವುದೇ ಹೊಸ ಮತದಾರರನ್ನು ನೋಂದಾಯಿಸದೆ ಕೇವಲ ಹೆಸರುಗಳನ್ನು ಅಳಿಸಲಾಗುತ್ತಿದೆ ಎಂದು ಅವರು ವಾದಿಸಿದರು.
ಬಿಹಾರದಲ್ಲಿ ಚುನಾವಣಾ ನೋಂದಣಿ ಅಧಿಕಾರಿಗಳು (ERO) ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳಾಗಿಯೂ ಕಾರ್ಯನಿರ್ವಹಿಸುತ್ತಿದ್ದು, ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಪ್ರತಿದಿನ ಸಾವಿರಾರು ಅರ್ಜಿಗಳನ್ನು ಪರಿಶೀಲಿಸುವುದು ಹೇಗೆ ಸಾಧ್ಯ ಎಂದು ಯಾದವ್ ಪ್ರಶ್ನಿಸಿದ್ದಾರೆ.
ಅರ್ಜಿದಾರರ ವಾದವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಯೋಗೇಂದ್ರ ಯಾದವ್ ಅವರ ವಿಶ್ಲೇಷಣೆಯನ್ನು ಶ್ಲಾಘಿಸಿದೆ. "ಜೀವಂತ ವ್ಯಕ್ತಿಗಳನ್ನು ಸತ್ತವರೆಂದು ಘೋಷಿಸಿರುವುದರಲ್ಲಿ ಅಜಾಗರೂಕತೆಯಿಂದ ದೋಷವಾಗಿರಬಹುದು," ಎಂದು ನ್ಯಾಯಮೂರ್ತಿ ಬಾಗ್ಚಿ ಅಭಿಪ್ರಾಯಪಟ್ಟರೂ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಭರವಸೆ ನೀಡಿದರು.
ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯು ಕೇವಲ ತಾಂತ್ರಿಕ ಪ್ರಕ್ರಿಯೆಯಾಗಿ ಉಳಿದಿಲ್ಲ. ಇದು ದೇಶದ ಚುನಾವಣಾ ವ್ಯವಸ್ಥೆಯ ಪಾರದರ್ಶಕತೆ ಮತ್ತು ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯ ಬಗ್ಗೆಯೇ ಮೂಲಭೂತ ಪ್ರಶ್ನೆಗಳನ್ನು ಎತ್ತಿದೆ. ಲಕ್ಷಾಂತರ ನಾಗರಿಕರ ಪ್ರಜಾಸತ್ತಾತ್ಮಕ ಹಕ್ಕನ್ನೇ ಕಸಿದುಕೊಳ್ಳುವ ಆರೋಪ ಹೊತ್ತಿರುವ ಈ ಪ್ರಕರಣದ ವಿಚಾರಣೆ ಬುಧವಾರ ಕೂಡ ಮುಂದುವರಿಯಲಿದೆ.