ಭದ್ರತೆಯ ದೃಷ್ಟಿಯಿಂದ ಬದಲಿಸಬೇಕಿದೆ ತುಂಗಭದ್ರಾ ಜಲಾಶಯದ ಆರು ಗೇಟ್‌ಗಳು

ಕೊಪ್ಪಳ, ಆ.15: ತುಂಗಭದ್ರಾ ಜಲಾಶಯದ ಕ್ರಷ್ಟ್ ಗೇಟ್ ನಂ. 19 ಮುರಿದು ಒಂದು ವರ್ಷವಾದರೂ ಈವರೆಗೆ ಅದನ್ನು ಸರಿಪಡಿಸಲಾಗಿಲ್ಲ, ಈ ನಡುವೆ ಇನ್ನೊಂದು ಆಘಾತಕಾರಿ ಅಂಶ ಹೊರಬಂದಿದ್ದು, ಜಲಾಶಯದ ಅರು ಗೇಟ್‌ಗಳು ಸವೆತದಿಂದ ಬಾಗಿದ್ದು (ಬೆಂಡ್) ಅದನ್ನು ಒಂದು ವೇಳೆ ಮೇಲೆತ್ತಲು ಪ್ರಯತ್ನಿಸಿದರೆ ಜಲಾಶಯಕ್ಕೆ ಹಾನಿ ಆಗುವ ಸಂಭವ ಇದೆ ಎಂಬ ಮಾಹಿತಿ ಹೊರ ಬಂದಿದೆ.
ಕಳೆದ ವರ್ಷ ಟಿಬಿ ಡ್ಯಾಂನ ಕ್ರಷ್ಟ್ ಗೇಟ್ 19 ಮುರಿದಿದ್ದರಿಂದ ನಿತ್ಯ ಲಕ್ಷಂತಾರ ಕ್ಯೂಸೆಕ್ ನೀರು ಪೋಲಾಗಿತ್ತು. ಮುರಿದ ಗೇಟ್‌ನ್ನು ಸರಿಪಡಿಸುವ ಸಲುವಾಗಿ ಜಲಾಶಯದಲ್ಲಿ ಹೆಚ್ಚು ನೀರು ಸಂಗ್ರಹಿಸಲಾಗುತ್ತಿಲ್ಲ, ಓಳಹರಿವಿನಿಂದ ಬಂದ ನೀರನ್ನು ನದಿಗೆ ಹರಿಸಲಾಗುತ್ತಿದೆ. ಈ ಕಾರಣದಿಂದ ರೈತರಿಗೆ ಒಂದೇ ಬೆಳೆಗೆ ನೀರು ಇದ್ದು, ಎರಡನೇ ಬೆಳೆಗೆ ಬೇಕಾಗುವ ನೀರು ಜಲಾಶಯದಲ್ಲಿ ಸಂಗ್ರಹಿಸಲಾಗುತ್ತಿಲ್ಲ. ಜಲಾಶಯದ ಭದ್ರತೆಯ ದೃಷ್ಠಿಯಿಂದ ಹೆಚ್ಚು ನೀರು ಸಂಗ್ರಹಿಸಲು ಸಾಧ್ಯವಾಗದ ಕಾರಣ ಮತ್ತೆ ಆರು ಗೇಟ್ ಗಳಿಗೆ ಹಾನಿಯಾಗಿರುವ ವಿಚಾರವು ರೈತರು ಆತಂಕ ಪಡುವಂತಾಗಿದೆ.
ಕೇಂದ್ರ ಸರಕಾರದ ಡ್ಯಾಂ ಸೇಪ್ಟಿ ರಿವೀವ್ ಕಮಿಟಿಯು ಜಲಾಶಯದ ಕುರಿತು ಅಧ್ಯಯನ ನಡೆಸಿ ವರದಿ ನೀಡಿದ್ದು, ಅದರಂತೆ ಗೇಟ್ ಸಂಖ್ಯೆ 11, 18, 20, 24, 27 ಮತ್ತು 28, ಸಂಖ್ಯೆಯ ಗೇಟ್‌ಗಳು ಶೇ. 35-40ರಷ್ಟು ಸವೆದಿದ್ದು, ಇದರಿಂದ ಅವುಗಳು ಹಾನಿಗೀಡಾಗಿವೆ ಎಂದು ಹೇಳಲಾಗಿದೆ. ಇವುಗಳಂತೆ ಉಳಿದ ಗೇಟ್ ಗಳು ಕೂಡ ಸವೆದಿರುವುದರಿಂದ ಎಲ್ಲ ಗೇಟ್‌ಗಳನ್ನು ಬದಲಿಸಲು ತೀರ್ಮಾನ ಮಾಡಲಾಗಿದ್ದು, ಈ ಗೇಟ್‌ಗಳನ್ನು ಬದಲಿಸಲು ಎಂಟು ತಿಂಗಳಗಳ ಕಾಲವಕಾಶ ಬೇಕಾಗಬಹುದು ಎಂಬ ಮಾಹಿತಿ ತಿಳಿದುಬಂದಿದೆ.
ಸದ್ಯ ಜಲಾಶಯದಲ್ಲಿ 80 ಟಿಎಂಸಿಗೂ ಹೆಚ್ಚು ನೀರು ಸಂಗ್ರಹಿಸದಂತೆ ತಜ್ಞರು ಹೇಳಿದ್ದು, ಹಾಗಾಗಿ ಎಷ್ಟೇ ಒಳ ಹರಿವು ಹೆಚ್ಚಾದರೂ ನೀರು ಸಂಗ್ರಹಿಸಲಾಗುತ್ತಿಲ್ಲ, ಒಂದು ಗೇಟನ್ನು ಒಂದು ವರ್ಷವಾದರೂ ಸರಿಪಡಿಸಲಾಗಿಲ್ಲ, ಆದರೆ ಈಗ ಎಲ್ಲ ಗೇಟ್ ಗಳನ್ನು ಸರಿಪಡಿಸಲು ಎಷ್ಟು ವರ್ಷ ಆಗುತ್ತೋ? ಎಂಬ ಮಾತುಗಳು ರೈತಾಪಿ ವರ್ಗದಿಂದ ಕೇಳಿಬರುತ್ತಿವೆ.
ಯಾವುದೇ ಸರಕಾರಗಳು ಆಡಳಿತದಲ್ಲಿ ಇರಲಿ, ಈ ಭಾಗದ ಜನರು, ರೈತರ ಮತ್ತು ಕಲ್ಯಾಣ ಕರ್ನಾಟಕದ ಬಗ್ಗೆ ಯಾವಾಗಲು ತಲೆ ಕೆಡೆಸಿ ಕೊಳ್ಳುವುದಿಲ್ಲ. ಒಂದು ವೇಳೆ ಕಾವೇರಿ ಜಲಾಶಯಕ್ಕೆ ಹೀಗಾಗಿದ್ದರೆ ಸರಕಾರವೇ ಅಲುಗಾಡುತ್ತಿತ್ತು ಎಂದು ರೈತರು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತಿದ್ದಾರೆ.
ಏನಾದರೂ ಇದರ ಬಗ್ಗೆ ರಾಜಕಾರಣಿಗಳಿಗೆ ಕೇಳಿದರೆ ಟಿಬಿ ಬೋರ್ಡ್ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಾರೆ. ತುಂಗಭದ್ರಾ ಜಲಾಶಯಕ್ಕೆ ಏನಾದರೂ ಆದರೆ ಟಿಬಿ ಬೋರ್ಡ್ ನವರು ನೋಡಿಕೊಳ್ಳುತ್ತಾರೆ ಎಂದು ಹಾಲಿ-ಮಾಜಿಮಂತ್ರಿಗಳು ಹೇಳುತ್ತಾರೆ. ಆದರೆ, ಅವರು ನಿಜವಾಗಿಯೂ ತಮ್ಮ ಜವಾಬ್ದಾರಿಯಿಂದ ನುಣಿಚಿಕೊಳ್ಳುತ್ತಾರೆ. ಆದರೆ ಜಲಾಶಯದಿಂದ ಹೂಳು ತೆಗೆಯುವುದಾಗಲಿ, ಸಮಾನಾಂತರ ಜಲಾಶಯ ನಿರ್ಮಾಣದ ಬಗ್ಗೆಯಾಗಲಿ ಒಂದು ಮಾತನ್ನು ಆಡುವುದಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ತುಂಗಭದ್ರಾ ಜಲಾಶಯದ ಎಲ್ಲ ಗೇಟ್ ಗಳನ್ನು ಬದಲಾಯಿಸಲು ತೀರ್ಮಾನ ಮಾಡಲಾಗಿದ್ದು, ಆದಷ್ಟು ಬೇಗ ಗೇಟ್‌ಗಳನ್ನು ಬದಲಾಯಿಸಲಾಗುವುದು. ಆರು ಗೇಟ್‌ಗಳು ಬೆಂಡ್ ಆಗಿದ್ದು, ಅದನ್ನು ಮೇಲಕ್ಕೆ ಎತ್ತಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಬೇರೆ ಗೇಟ್‌ಗಳನ್ನೇ ಜಾಸ್ತಿ ಮೇಲಕ್ಕೆ ಎತ್ತಿ ನೀರನ್ನು ಹರಿಸಲಾಗುತ್ತಿದೆ. ಒಂದು ವೇಳೆ 6 ಗೇಟ್‌ಗಳನ್ನು ಮೇಲಕ್ಕೆ ಎತ್ತಲು ಪ್ರಯತ್ನಿಸಿದರೆ ಜಲಾಶಯಕ್ಕೆ ಹಾನಿ ಆಗುವ ಸಾಧ್ಯತೆ ಇದೆ.
-ಶಿವರಾಜ್ ತಂಗಡಗಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ