ಸೌಜನ್ಯಾಳ ಮರಣೋತ್ತರ ಪರೀಕ್ಷೆ: ವೈದ್ಯರ ವಿರುದ್ಧ ಆರೋಪಗಳನ್ನು ತಳ್ಳಿ ಹಾಕಿದ್ದ ಇಲಾಖಾ ವಿಚಾರಣೆ

ಬೆಂಗಳೂರು, ಸೆ.3: ಉಜಿರೆಯ ಕುಮಾರಿ ಸೌಜನ್ಯಾಳ ಮರಣೋತ್ತರ ಪರೀಕ್ಷೆ ನಡೆಸಿದ್ದ ವೈದ್ಯರಾದ ಡಾ.ರಶ್ಮಿ ಮತ್ತು ಡಾ.ಆದಂ ಉಸ್ಮಾನ್ ಅವರಿಬ್ಬರ ವಿರುದ್ಧ ಆರೋಪಗಳನ್ನು ಸಿಬಿಐ ತನಿಖಾ ಸಂಸ್ಥೆಯು ದೃಢಪಡಿಸಿದ್ದರೂ ಇಲಾಖೆ ವಿಚಾರಣೆಯಲ್ಲಿ ಆ ಎಲ್ಲ ದೃಢಪಟ್ಟ ಅಂಶಗಳನ್ನು ತಳ್ಳಿ ಹಾಕಿರುವುದನ್ನು ಆರ್‌ಟಿಐ ಅಡಿ ಪಡೆದಿರುವ ದಾಖಲೆಗಳ ಮೂಲಕ ‘the-file.in’ ಇದೀಗ ಹೊರಗೆಡವುತ್ತಿದೆ.
ತುಂಬಾ ಮುಖ್ಯವಾಗಿ ಕುಮಾರಿ ಸೌಜನ್ಯಾಳ ಮರಣೋತ್ತರ ಪರೀಕ್ಷೆಗೂ ಮುನ್ನ ವಿಸೆರಾ ಸಂಗ್ರಹಿಸಲು ಪೊಲೀಸರು ಸೂಚನಾ ಪತ್ರದಲ್ಲಿ ಕೋರಿಕೆಯನ್ನೇ ಸಲ್ಲಿಸಿರಲಿಲ್ಲ ಎಂಬ ಅಂಶವನ್ನು ಆಪಾದಿತ ವೈದ್ಯರ ಪೈಕಿ ಡಾ.ಆದಂ ಉಸ್ಮಾನ್ ಅವರು ವಿಚಾರಣೆ ವೇಳೆ ದಾಖಲಿಸಿದ್ದ ಹೇಳಿಕೆಯ ಬಹಿರಂಗವಾಗಿದೆ.
ಸೌಜನ್ಯಾಳ ಮರಣೋತ್ತರ ಪರೀಕ್ಷೆ ಪ್ರಕ್ರಿಯೆಯಲ್ಲಿ ಲೋಪ ಎಸಗಿದ್ದಾರೆ ಎಂದು ಆರೋಪಿಸಿದ್ದ ಸಿಬಿಐ ತನಿಖಾ ಸಂಸ್ಥೆಯು ಆಪಾದಿತ ವೈದ್ಯರಿಬ್ಬರ ವಿರುದ್ಧ ಉಗ್ರ ದಂಡನೆಯನ್ನು ವಿಧಿಸಬೇಕು ಎಂದು ಶಿಫಾರಸು ಮಾಡಿತ್ತು. ಈ ಶಿಫಾರಸಿನ ಅನುಷ್ಠಾನ ಆಗಿದೆಯೇ ಇಲ್ಲವೇ ಎಂಬ ಕುರಿತು ‘the-file.in’ಆರ್‌ಟಿಐಯಲ್ಲಿ ಸಮಗ್ರ ಕಡತವನ್ನು ಕೇಳಿತ್ತು. ಇದೀಗ ಸರಕಾರವು 438 ಪುಟಗಳ ಕಡತವನ್ನು ಒದಗಿಸಿದೆ.
ಸೌಜನ್ಯಾಳ ಹತ್ಯೆ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು ಎಂದು ವಿಶೇಷ ತನಿಖಾ ತಂಡಕ್ಕೆ ಮನವಿ ಸಲ್ಲಿಕೆಯಾಗಿರುವ ಹೊತ್ತಿನಲ್ಲೇ ಸೌಜನ್ಯಾಳ ಮರಣೋತ್ತರ ಪರೀಕ್ಷೆ ನಡೆಸಿದ್ದ ಆಪಾದಿತ ವೈದ್ಯರ ವಿರುದ್ಧದ ವಿಚಾರಣೆ ವರದಿಯ ಕಡತವು ಮುನ್ನೆಲೆಗೆ ಬಂದಿದೆ.
ಅಲ್ಲದೇ ಆರೋಪಿತ ಅಧಿಕಾರಿಗಳ ಆರೋಪಗಳ ಕುರಿತಾಗಿ ವಿಚಾರಣೆ ನಡೆಸಿದ್ದ ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದ ಇಲಾಖೆ ವಿಚಾರಣೆಯು, ವೈದ್ಯರಿಬ್ಬರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ.
ಅಲ್ಲದೇ ಸೌಜನ್ಯಾಳ ಹಸ್ತದ ಹಿಂಬದಿಯಲ್ಲಿ ಗಾಯದ ಗುರುತುಗಳಿದ್ದವು ಎಂದು ಸಿಬಿಐ ಮಾಡಿದ್ದ ಆರೋಪವನ್ನು ವೈದ್ಯ ಡಾ.ಆದಂ ಉಸ್ಮಾನ್ ಅವರು ಒಪ್ಪಿಲ್ಲ. ಅಲ್ಲದೇ ಯಾವುದೇ ಗುರುತುಗಳಿರಲಿಲ್ಲ ಎಂದು ಪ್ರತಿಪಾದಿಸುವ ಮೂಲಕ ಸಿಬಿಐ ತನಿಖೆಯ ಅಂಶವನ್ನು ಪ್ರಶ್ನಿಸಿರುವುದು ಕಡತದ ಹಾಳೆಗಳಿಂದ ಗೊತ್ತಾಗಿದೆ.