ಭೂ ಮಂಜೂರಾತಿ ನಿಯಮಗಳನ್ನೇ ಸಡಿಲಗೊಳಿಸಿ ಇಸ್ಕಾನ್ಗೆ ಸರಕಾರಿ ಬೀಳು ಜಮೀನು ಮಂಜೂರು ಪ್ರಸ್ತಾವ

Photo credit: theleela.com
ಬೆಂಗಳೂರು : ಖಾಸಗಿ ಸಂಸ್ಥೆಯಾಗಿರುವ ಇಸ್ಕಾನ್ಗೆ 5 ಎಕರೆ 23 ಗುಂಟೆ ವಿಸ್ತೀರ್ಣ ಹೊಂದಿರುವ ಸರಕಾರಿ ಬೀಳು ಜಮೀನನ್ನು ಮಂಜೂರು ಮಾಡುವ ಉದ್ದೇಶದಿಂದ ಕರ್ನಾಟಕ ಭೂ ಮಂಜೂರಾತಿ ನಿಯಮಗಳನ್ನೇ ಸಡಿಲಗೊಳಿಸಲು ಮುಂದಾಗಿರುವುದು ಇದೀಗ ಬಹಿರಂಗವಾಗಿದೆ.
ಇಸ್ಕಾನ್ ಸಂಸ್ಥೆಯು ಖಾಸಗಿ ಸಂಸ್ಥೆಯಾಗಿರುವ ಕಾರಣ ನಿಯಮಗಳ ಪ್ರಕಾರ ಸರಕಾರಿ ಜಮೀನನ್ನು ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ. ಆದರೂ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 27ನ್ನು ಕಾಂಗ್ರೆಸ್ ಸರಕಾರ ಮುಂದಿರಿಸಿದೆ.
ಶೈಕ್ಷಣಿಕ ಉದ್ದೇಶಕ್ಕಾಗಿ ಜಮೀನು ಮಂಜೂರು ಮಾಡಬೇಕು ಎಂದು ಸ್ವತಃ ಇಸ್ಕಾನ್ ಸಂಸ್ಥೆಯೇ ತನ್ನ ಮನವಿಯಲ್ಲಿ ಕೋರಿದ್ದರೂ ಧಾರ್ಮಿಕ ಉದ್ದೇಶದ ಚಾರಿಟಬಲ್ ಟ್ರಸ್ಟ್ಗಳಿಗೆ ಮಂಜೂರು ಮಾಡುವ ದರವನ್ನೇ ಆರಂಭದಲ್ಲಿ ಶಿಫಾರಸು ಮಾಡಿತ್ತು.
ಚಿಕ್ಕಬಳ್ಳಾಪುರ ಜಿಲ್ಲೆಯ 8 ಸರಕಾರಿ ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಡಿ ಅಡುಗೆ ತಯಾರಿಕೆ ವೆಚ್ಚದ ಅನುದಾನ, ಅಡುಗೆ ಸಿಬ್ಬಂದಿಯ ಸಂಭಾವನೆ ಮೊತ್ತ, ಅಡುಗೆ ಕೋಣೆ ನಿರ್ವಹಣೆ, ಆಹಾರ ಧಾನ್ಯ ಹಾಗೂ ಯೋಜನೆ ಅನುಷ್ಠಾನದ ಸಂಪೂರ್ಣ ಸುಪರ್ದಿಯನ್ನು ಹಿಂದಿನ ಬಿಜೆಪಿ ಸರಕಾರವು ಅಕ್ಷಯ ಪಾತ್ರ ಫೌಂಡೇಷನ್ಗೆ ವಹಿಸಿತ್ತು.
ಇದೀಗ ಕಾಂಗ್ರೆಸ್ ಸರಕಾರವೂ ಇದೇ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಇದೇ ಇಸ್ಕಾನ್ ಸಂಸ್ಥೆಗೆ ಬಹು ಕೋಟಿ ರೂ. ಬೆಲೆಬಾಳುವ 5-23 ಎಕರೆ ವಿಸ್ತೀರ್ಣದ ಸರಕಾರಿ ಬೀಳು ಭೂಮಿಯನ್ನು ಮಂಜೂರು ಮಾಡಲು ತುದಿಗಾಲಲ್ಲಿ ನಿಂತಿದೆ.
ರಾಜ್ಯದ ವಿವಿಧೆಡೆ ಈಗಾಗಲೇ ಇಸ್ಕಾನ್ ಸಂಸ್ಥೆಯು ಜಮೀನನ್ನು ಹೊಂದಿರುವ ಕುರಿತು ಶಾಸನ ಸಭೆಗಳಲ್ಲಿ ಹಲವಾರು ಬಾರಿ ಚರ್ಚೆ ನಡೆದಿದ್ದವು. ಈ ಸಂಸ್ಥೆಗೆ ಸರಕಾರಿ ಜಮೀನನ್ನು ಮಂಜೂರು ಮಾಡಿದ್ದರ ಬಗ್ಗೆಯೂ ಹಲವು ಆಕ್ಷೇಪಗಳು ವ್ಯಕ್ತವಾಗಿದ್ದವು.
ಇದರ ಬೆನ್ನಲ್ಲೇ ಇದೀಗ ಕಾಂಗ್ರೆಸ್ ಸರಕಾರ ಇಸ್ಕಾನ್ಗೆ 5-23 ಎಕರೆ ವಿಸ್ತೀರ್ಣದ ಸರಕಾರಿ ಜಮೀನು ಮಂಜೂರು ಮಾಡಲು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22-ಎ(2)ಯನ್ನು ಬದಿಗಿರಿಸಲು ಹೊರಟಿರುವುದು ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು "the-file.in" ಆರ್ಟಿಐ ಅಡಿ ಸಮಗ್ರ ಕಡತವನ್ನು ಪಡೆದುಕೊಂಡಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ಲು ಹೋಬಳಿಯ ಯರಮಾರನೇಹಳ್ಳಿಯಲ್ಲಿರುವ 5-23 ಎಕರೆ ವಿಸ್ತೀರ್ಣದ ಸರಕಾರಿ ಬೀಳು ಜಮೀನನ್ನು ಮಂಜೂರು ಮಾಡಬೇಕು ಎಂದು 2023ರ ಅಕ್ಟೋಬರ್ 18ರಂದು ಕಂದಾಯ ಸಚಿವ ಕೃಷ್ಣಬೈರೇಗೌಡ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಮನವಿ ಸಲ್ಲಿಸಿತ್ತು.
ಇಸ್ಕಾನ್ ಮನವಿಯಲ್ಲೇನಿತ್ತು? :
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಗ್ರಾಮೀಣ ಮಕ್ಕಳಿಗಾಗಿ ಶಾಲೆಯನ್ನು ನಡೆಸಲು ಇಸ್ಕಾನ್ ಉದ್ದೇಶಿಸಿದೆ. ಚಿಕ್ಕಬಳ್ಳಾಪುರ ತಾಲಕೂಕು ಮಂಡಿಕಲ್ಲು ಹೋಬಳಿ ಯರ್ರಮಾರೇನಹಳ್ಳಿ ಗ್ರಾಮದ ಸರ್ವೇ ನಂಬರ್ 187ರಲ್ಲಿ 4-38 ಎಕರೆ ಮತ್ತು ಸರ್ವೇ ನಂಬರ್ 191ರಲ್ಲಿ 0-98 ಗುಂಟೆ ಸೇರಿ ಒಟ್ಟಾರೆ 5-23 ಎಕರೆ ಜಮೀನು ಇದೆ. ಈ ಜಮೀನನ್ನು ಅಕ್ಷಯ ಪಾತ್ರ ಅಡುಗೆ ಮನೆ ಮತ್ತು ಆರ್ಥಿಕ ಸಾಮಾಜಿಕ ಹಿಂದುಳಿದ ಗ್ರಾಮೀಣ ಮಕ್ಕಳಿಗೆ ಶಾಲಾ ಕಟ್ಟಡ ನಿರ್ಮಾಣಕ್ಕಾಗಿ ಮಂಜೂರು ಮಾಡಬೇಕು ಎಂದು ಇಸ್ಕಾನ್ ಅಧ್ಯಕ್ಷರು ಮನವಿಯಲ್ಲಿ ಕೋರಿದ್ದರು ಎಂಬುದು ಗೊತ್ತಾಗಿದೆ.
ಇಸ್ಕಾನ್ನ ಮನವಿಯನ್ನಾಧರಿಸಿ ನಿಯಮಾ ನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಕೃಷ್ಣಬೈರೇಗೌಡ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಸ್ಥಳ ತನಿಖೆ ನಡೆಸಿದ್ದ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಮತ್ತು ರಾಜಸ್ವ ನಿರೀಕ್ಷಕರು, ಇಸ್ಕಾನ್ಗೆ 5-23 ಎಕರೆ ವಿಸ್ತೀರ್ಣದ ಸರಕಾರಿ ಬೀಳು ಜಮೀನನ್ನು ಮಂಜೂರು ಮಾಡಬಹುದು ಎಂದು ಶಿಫಾರಸು ಮಾಡಿದ್ದರು ಎಂಬುದು ಆರ್ಟಿಐ ದಾಖಲೆಯಿಂದ ತಿಳಿದು ಬಂದಿದೆ.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸುಧಾಕರ್ ಅವರು ಸಲ್ಲಿಸಿದ್ದ ನಡಾವಳಿ ಮೇಲೆ ‘ಸಚಿವ ಸಂಪುಟದ ಮುಂದೆ ಮಂಡಿಸುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದ್ದರು.
ಎಕರೆಗೆ 6.84 ಲಕ್ಷ ರೂ.:
ಯರಮಾರೇನಹಳ್ಳಿ ಗ್ರಾಮದ ಮಾರ್ಗಸೂಚಿ ಮತ್ತು ಮಾರುಕಟ್ಟೆ ಮೌಲ್ಯದ ಬಗ್ಗೆ ಚಿಕ್ಕಬಳ್ಳಾಪುರ ತಾಲೂಕು ಹಿರಿಯ ಉಪ ನೋಂದಣಾಧಿಕಾರಿಗಳು 2024ರ ಜುಲೈ 12ರಂದು ವರದಿ ನೀಡಿದ್ದರು. ಇದರ ಪ್ರಕಾರ ಯರಮಾರೇನಹಳ್ಳಿ ಗ್ರಾಮದಲ್ಲಿ ಎಕರೆ ಒಂದಕ್ಕೆ ಮಾರ್ಗಸೂಚಿ ಮೌಲ್ಯ 5,00,000 ರೂ. ಇದೆ. ಹಾಗೂ ಮಾರುಕಟ್ಟೆ ಮೌಲ್ಯವು ಎಕರೆ ಒಂದಕ್ಕೆ 6,84,000 ರೂ. ಇದೆ ಎಂದು ವರದಿಯಲ್ಲಿ ಮಾಹಿತಿ ನೀಡಿದ್ದರು ಎಂಬುದು ಗೊತ್ತಾಗಿದೆ.
ಹಾಗೆಯೇ ಸ್ಥಳೀಯ ಜಿಲ್ಲಾಡಳಿತವು ಮಾಡಿದ್ದ ಶಿಫಾರಸನ್ನು ಆಧರಿಸಿ ಕಂದಾಯ ಇಲಾಖೆಯು ಈ ಸಂಬಂಧ ಕಾನೂನು ಇಲಾಖೆಯ ಅಭಿಪ್ರಾಯ ಕೋರಿತ್ತು.
ಇಲಾಖೆಯ ಅಭಿಪ್ರಾಯದಲ್ಲೇನಿದೆ? :
ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22-ಎ (2) ರ ಪ್ರಕಾರ ಇಸ್ಕಾನ್ ಸಂಸ್ಥೆಯು ಖಾಸಗಿ ಸಂಸ್ಥೆಯಾಗಿರುವ ಕಾರಣ ಜಮೀನು ಮಂಜೂರು ಮಾಡಲು ಅವಕಾಶವಿರುವುದಿಲ್ಲ.
ಆದರೆ, ಈ ನಿಯಮಗಳಲ್ಲಿ ಏನೇ ಹೇಳಿದ್ದಾಗಿಯೂ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 27ರ ಅಡಿ ಪ್ರಕಾರ ರಾಜ್ಯ ಸರಕಾರವು ಸ್ವತಃ ಅಥವಾ ವಿಭಾಗೀಯ ಕಮಿಷನರ್ ಅಥವಾ ಡೆಪ್ಯುಟಿ ಕಮಿಷನರ್ ಅವರ ಶಿಫಾರಸಿನ ಮೇರೆಗೆ ನಿಯಮಗಳನ್ನು ಸಡಿಲಗೊಳಿಸಲು ಕಾರಣವಿದೆ ಎಂದು ಕಂಡು ಬಂದರೆ ಕಾರಣಗಳನ್ನು ದಾಖಲಿಸಿ, ಷರತ್ತುಗಳನ್ನು ವಿಧಿಸಿ ಆದೇಶ ಮಾಡಬಹುದಾಗಿರುತ್ತದೆ ಎಂದು ಕಾನೂನು ಇಲಾಖೆಯು ಅಭಿಪ್ರಾಯ ನೀಡಿರುವುದು ಗೊತ್ತಾಗಿದೆ.
ಅಲ್ಲದೇ ಧಾರ್ಮಿಕ ಉದ್ದೇಶದ ಚಾರಿಟೆಬಲ್ ಟ್ರಸ್ಟ್ಗಳಿಗೆ ಜಮೀನು ಮಂಜೂರು ಮಾಡಲು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22 ಎ (1) (i) ರಲ್ಲಿ ಉಲ್ಲೇಖಿಸಿರುವ ಕ್ರಮ ಸಂಖ್ಯೆ 4ರಲ್ಲಿನ ನಿಯಮಗಳ ಪ್ರಕಾರ ದರ ಮಾರ್ಗಸೂಚಿಯ ಬೆಲೆ ಶೇ.25ರ ದರದಲ್ಲಿ ಮತ್ತು ಮಾರುಕಟ್ಟೆ ಮೌಲ್ಯದ ಶೇ.50ರಷ್ಟು ದರದಲ್ಲಿ ವಿಧಿಸಬಹುದು ಎಂದೂ ಅಭಿಪ್ರಾಯಿಸಿತ್ತು.
ಅಷ್ಟೇ ಅಲ್ಲ, ಚಿಕ್ಕಬಳ್ಳಾಪುರ ತಾಲೂಕಿನ ತಹಶೀಲ್ದಾರ್ ಕೂಡ ಧಾರ್ಮಿಕ ಉದ್ದೇಶದ ಚಾರಿಟಬಲ್ ಟ್ರಸ್ಟ್ಗಳಿಗೆ ವಿಧಿಸುವ ದರದಲ್ಲಿಯೇ ಮಂಜೂರು ಮಾಡಬಹುದು ಎಂದು ಶಿಫಾರಸು ಮಾಡಿದ್ದರು.
ಆದರೆ ಆಡಳಿತ ಇಲಾಖೆಯಾದ ಕಂದಾಯ ಇಲಾಖೆಯು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22ಎ (1) (i) ಕ್ರಮ ಸಂಖ್ಯೆ 2ರಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ಜಮೀನು ಮಂಜೂರು ಮಾಡಲು ಮಾರ್ಗಸೂಚಿ ಬೆಲೆಯ ಶೇ.50ರಷ್ಟು ಮತ್ತು ಮಾರುಕಟ್ಟೆ ಮೌಲ್ಯದ ಶೇ.100ರಷ್ಟನ್ನು ವಿಧಿಸಿ ಮಂಜೂರು ಮಾಡಬಹುದು ಎಂದು ಶಿಫಾರಸು ಮಾಡಿತ್ತು.
ಸದರಿ ಜಮೀನು ಶಿಕ್ಷಣ ಉದ್ದೇಶಕ್ಕಾಗಿ ಮಂಜೂರು ಮಾಡಲಾಗುತ್ತಿರುವುದರಿಂದ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22 ಎ (1)(i) ಅನ್ವಯ ಮಾರುಕಟ್ಟೆ ಮೌಲ್ಯ ವಿಧಿಸಿ ಮಂಜೂರು ಮಾಡಬೇಕಾಗಿರುತ್ತದೆ,’ ಎಂದು ಆರ್ಥಿಕ ಇಲಾಖೆಯು ಅಭಿಪ್ರಾಯಿಸಿರುವುದು ಗೊತ್ತಾಗಿದೆ. ಶ್ರಿ
ಹಾಗೆಯೇ ಈ ಪ್ರಸ್ತಾವವನ್ನು ಸಚಿವ ಸಂಪುಟದ ಮುಂದೆ ಮಂಡಿಸಬೇಕು ಎಂದು ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಪ್ರಜೀತ್ ಕೆ ನಂಬಿಯಾರ್ ಅವರು 2025ರ ಜನವರಿ 15ರಂದು ಆಡಳಿತ ಇಲಾಖೆಗೆ ತಿಳಿಸಿದ್ದರು.