Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಪ್ರವಾದಿ ಮುಹಮ್ಮದ್ (ಸ): ಆದರ್ಶ ಶಿಕ್ಷಕ

ಪ್ರವಾದಿ ಮುಹಮ್ಮದ್ (ಸ): ಆದರ್ಶ ಶಿಕ್ಷಕ

ರೂಹೀ, ಬೋಳಾರ್ರೂಹೀ, ಬೋಳಾರ್5 Sept 2025 7:01 AM IST
share
ಪ್ರವಾದಿ ಮುಹಮ್ಮದ್ (ಸ): ಆದರ್ಶ ಶಿಕ್ಷಕ

̄ಮುಸ್ಲಿಮ್ ಸಮಾಜದಲ್ಲಿ ‘ಶಿಕ್ಷಕ’ ಎಂಬುದು ಬಹಳ ಗೌರವಾನ್ವಿತ ಪದವಿ. ಪ್ರವಾದಿ ಮುಹಮ್ಮದ್ (ಸ) ತಮ್ಮನ್ನು ‘ಮುಅಲ್ಲಿಮ್’ (ಶಿಕ್ಷಕ) ಎಂದು ಪರಿಚಯಿಸಿದ್ದರು. ‘‘ನನ್ನನ್ನು ಶಿಕ್ಷಕನಾಗಿ ಕಳುಹಿಸಲಾಗಿದೆ’’ ಎಂದು ಅವರು ಹೇಳುತ್ತಿದ್ದರು. ಆದರೆ ಅವರು ಪೌರೋಹಿತ್ಯದ ವಿರೋಧಿಯಾಗಿದ್ದರು. ಜ್ಞಾನದ ಮೇಲೆ ಯಾರದೇ ಏಕಸ್ವಾಮ್ಯವನ್ನು ಅವರು ಒಪ್ಪಿರಲಿಲ್ಲ. ʼʼಜ್ಞಾನ ಪ್ರಾಪ್ತಿಯು ಪ್ರತಿಯೊಬ್ಬ ಮುಸ್ಲಿಮ್ ಪುರುಷನ ಮತ್ತು ಸ್ತ್ರೀಯ ಮೇಲೆ ಕಡ್ಡಾಯವಾಗಿದೆ’’ ಎಂದು ಅವರು ತಮ್ಮ ಪ್ರವಾದಿತ್ವದ ಆರಂಭದಲ್ಲೇ ಘೋಷಿಸಿದ್ದರು. ಯಾವುದೇ ರೂಪದಲ್ಲಿ ಜ್ಞಾನವನ್ನು ಬಚ್ಚಿಡುವ ಸಂಪ್ರದಾಯವನ್ನು ಅವರು ವಿರೋಧಿಸಿದ್ದರು.

ಪ್ರವಾದಿ ಮುಹಮ್ಮದ್ (ಸ) ನಿರಕ್ಷರಿಯಾಗಿದ್ದರು. ಅವರು ಹೇಳಿರುವಂತೆ, ಅನಿರೀಕ್ಷಿತವಾಗಿ ಅವರಿಗೆ ಬಂದ ಪ್ರಥಮ ದಿವ್ಯ ಸಂದೇಶದ ಪ್ರಥಮ ಪದ ‘‘ಓದು’’ ಎಂಬುದಾಗಿತ್ತು. ಸಾಕ್ಷರತೆಯನ್ನು, ಅಕ್ಷರ ಕಲಿಯುವ ಮತ್ತು ಕಲಿಸುವ ಚಟುವಟಿಕೆಯನ್ನು ಅವರು ಒಂದು ಪುಣ್ಯದಾಯಕ ಸತ್ಕಾರ್ಯವೆಂದು ವೈಭವೀಕರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಜನರನ್ನು ಪ್ರೋತ್ಸಾಹಿಸಿದರು. ಮಕ್ಕಾದ ಸಾಂಪ್ರದಾಯಿಕ ಸಮಾಜದಲ್ಲಿ ತಮ್ಮ ಕ್ರಾಂತಿಕಾರಿ ಸಂದೇಶದ ವಿರುದ್ಧ ಪ್ರತಿರೋಧವು ಮುಗಿಲು ಮುಟ್ಟಿದಾಗ ಪ್ರವಾದಿ ಮುಹಮ್ಮದ್ (ಸ) ಮದೀನಾ ನಗರಕ್ಕೆ ವಲಸೆ ಹೋದರು. ಅಲ್ಲಿ ಪ್ರಥಮವಾಗಿ ಅವರು ಒಂದು ಪುಟ್ಟ ಮಸೀದಿಯನ್ನು ನಿರ್ಮಿಸಿದರು. ಅದರ ಚಪ್ಪರವನ್ನು ಖರ್ಜೂರದ ಎಲೆಗಳಿಂದ ನಿರ್ಮಿಸಲಾಗಿತ್ತು. ಆ ಕಚ್ಚಾ ಕಟ್ಟಡದ ಭಾಗವಾಗಿದ್ದ, ಅದರ ಚಾವಡಿಯನ್ನು ಜನರು ‘ಸುಫ್ಫಾ’ ಎಂದು ಕರೆಯುತ್ತಿದ್ದರು. ಆ ಚಾವಡಿಯು ಹಲವು ನಿರಾಶ್ರಿತರ ಆಶ್ರಯಧಾಮವಾಗಿತ್ತು. ಜೊತೆಗೇ, ಅದು ಒಂದು ಕಲಿಕಾ ಕೇಂದ್ರವೂ ಆಗಿತ್ತು. ದಿನವಿಡೀ ಅಲ್ಲಿ ವಿವಿಧ ರೂಪಗಳಲ್ಲಿ ವಿದ್ಯಾರ್ಜನೆಯ ಚಟುವಟಿಕೆ ನಡೆಯುತ್ತಿತ್ತು. ಹೆಚ್ಚಿನ ವೇಳೆ ಅಲ್ಲಿ ಸ್ವತಃ ಪ್ರವಾದಿ ಮುಹಮ್ಮದ್ (ಸ) ಅವರೇ ಶಿಕ್ಷಕರಾಗಿರುತ್ತಿದ್ದರು. ಅವರ ಹಲವು ಹಿರಿಯ ಅನುಯಾಯಿಗಳೂ ಅಲ್ಲಿ ಶಿಕ್ಷಕರ ಪಾತ್ರ ನಿರ್ವಹಿಸುತ್ತಿದ್ದರು. ಪ್ರಸ್ತುತ ಚಾವಡಿಯಲ್ಲಿ ಮಾತ್ರವಲ್ಲದೆ ಮಸೀದಿಯ ಒಳಗೂ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿದ್ದವು. ಶಾಲೆಯನ್ನು ಮಸೀದಿಯ ಭಾಗವಾಗಿಸುವ ಸತ್ಸಂಪ್ರದಾಯವು ಹಿಜರಿ ಶಕೆಯ ಮೊದಲ ವರ್ಷದಲ್ಲಿ, ಮದೀನಾದ ಮೊದಲ ಮಸೀದಿಯಿಂದಲೇ ಆರಂಭವಾಯಿತು.

ಮುಸ್ಲಿಮ್ ಸಮಾಜದಲ್ಲಿ ‘ಶಿಕ್ಷಕ’ ಎಂಬುದು ಬಹಳ ಗೌರವಾನ್ವಿತ ಪದವಿ. ಪ್ರವಾದಿ ಮುಹಮ್ಮದ್ (ಸ) ತಮ್ಮನ್ನು ‘ಮುಅಲ್ಲಿಮ್’ (ಶಿಕ್ಷಕ) ಎಂದು ಪರಿಚಯಿಸಿದ್ದರು. ‘‘ನನ್ನನ್ನು ಶಿಕ್ಷಕನಾಗಿ ಕಳುಹಿಸಲಾಗಿದೆ’’ ಎಂದು ಅವರು ಹೇಳುತ್ತಿದ್ದರು. ಆದರೆ ಅವರು ಪೌರೋಹಿತ್ಯದ ವಿರೋಧಿಯಾಗಿದ್ದರು.

ಜ್ಞಾನದ ಮೇಲೆ ಯಾರದೇ ಏಕಸ್ವಾಮ್ಯವನ್ನು ಅವರು ಒಪ್ಪಿರಲಿಲ್ಲ. ʼʼಜ್ಞಾನ ಪ್ರಾಪ್ತಿಯು ಪ್ರತಿಯೊಬ್ಬ ಮುಸ್ಲಿಮ್ ಪುರುಷನ ಮತ್ತು ಸ್ತ್ರೀಯ ಮೇಲೆ ಕಡ್ಡಾಯವಾಗಿದೆ’’ ಎಂದು ಅವರು ತಮ್ಮ ಪ್ರವಾದಿತ್ವದ ಆರಂಭದಲ್ಲೇ ಘೋಷಿಸಿದ್ದರು. ಯಾವುದೇ ರೂಪದಲ್ಲಿ ಜ್ಞಾನವನ್ನು ಬಚ್ಚಿಡುವ ಸಂಪ್ರದಾಯವನ್ನು ಅವರು ವಿರೋಧಿಸಿದ್ದರು. ಅವರ ಈ ಧೋರಣೆಯು ಪವಿತ್ರ ಕುರ್‌ಆನ್‌ನಿಂದ ಪ್ರೇರಿತವಾಗಿತ್ತು:

‘‘ನಾವು ಇಳಿಸಿಕೊಟ್ಟಿರುವ ಸ್ಪಷ್ಟ ಸಂದೇಶಗಳನ್ನು ಹಾಗೂ ಮಾರ್ಗದರ್ಶನವನ್ನು- ನಾವು ಮಾನವರಿಗಾಗಿ ಒಂದು ಗ್ರಂಥದಲ್ಲಿ ಸ್ಪಷ್ಟವಾಗಿ ವಿವರಿಸಿದ ಬಳಿಕ (ಅವುಗಳನ್ನು) ಬಚ್ಚಿಡುವವರನ್ನು ಅಲ್ಲಾಹನು ಶಪಿಸುತ್ತಾನೆ ಮತ್ತು ಶಪಿಸುವವರೆಲ್ಲರೂ ಶಪಿಸುತ್ತಾರೆ’’ -(ಕುರ್ ಆನ್-2:159)

ಪ್ರವಾದಿ (ಸ) ಹೇಳಿದರು:

‘‘ಖಂಡಿತವಾಗಿಯೂ ಅಲ್ಲಾಹ್, ಅವನ ದೂತರು, ಆಕಾಶಗಳ ಮತ್ತು ಭೂಮಿಯ ಎಲ್ಲ ಜೀವಿಗಳು, ಬಿಲಗಳಲ್ಲಿರುವ ಇರುವೆಗಳು ಮತ್ತು ನೀರಲ್ಲಿರುವ ಮೀನುಗಳು ಕೂಡಾ ಜನರಿಗೆ ಒಳಿತನ್ನು ಕಲಿಸುವವರಿಗೆ ಶುಭ ಕೋರುತ್ತಾರೆ.’’

(ವರದಿ: ಅಬೂ ಉಮಾಮಾ ಅಲ್ ಬಾಹಿಲಿ, ಸಂಗ್ರಹ: ಜಾಮಿಯ್ ತಿರ್ಮಿಝಿ-2685)

ಒಂದು ಗಮನಾರ್ಹ ಸಂಗತಿ ಏನೆಂದರೆ, ಪ್ರವಾದಿ ಮುಹಮ್ಮದರು (ಸ) ಎಂದೂ ತಮ್ಮ ಜೊತೆಗಾರರ ಪೈಕಿ ಯಾರನ್ನೂ ತಮ್ಮ ವಿದ್ಯಾರ್ಥಿ ಎಂದು ಕರೆಯಲಿಲ್ಲ. ಮಾತ್ರವಲ್ಲ ಅವರು ತಮ್ಮ ಜೊತೆಗಾರರ ಪೈಕಿ ಯಾರನ್ನೂ ತನ್ನ ಭಕ್ತ, ಅಭಿಮಾನಿ, ಶಿಷ್ಯ ಅಥವಾ ಅನುಯಾಯಿ ಎಂದು ಕೂಡಾ ಕರೆಯಲಿಲ್ಲ. ಅವರು ತಮ್ಮ ಪ್ರತಿಯೊಬ್ಬ ಜೊತೆಗಾರನನ್ನೂ ‘ಸಹಾಬಿ’ (ಸಂಗಾತಿ) ಎಂದೇ ಕರೆಯುತ್ತಿದ್ದರು. ಈಗಲೂ ಅವರ ಇತಿಹಾಸವನ್ನು ಚರ್ಚಿಸುವಾಗ ಅವರ ಎಲ್ಲ ಜೊತೆಗಾರರನ್ನೂ ‘ಸಹಾಬಿ’ ಎಂದೇ ಗುರುತಿಸಲಾಗುತ್ತದೆ, ನೆನಪಿಸಲಾಗುತ್ತದೆ. ಇಂದು ಇತಿಹಾಸ, ಹದೀಸ್ ಗ್ರಂಥಗಳು ಇತ್ಯಾದಿ ಮೂಲಗಳಲ್ಲಿ ಪ್ರವಾದಿ ಮುಹಮ್ಮದ್ (ಸ) ಅವರ ಕುರಿತು ಲಭ್ಯವಿರುವ ಮಾಹಿತಿಗಳೆಲ್ಲಾ ಆ ‘ಸಂಗಾತಿ’ಗಳಿಂದಲೇ ವರದಿಯಾಗಿವೆ. ಪ್ರವಾದಿವರ್ಯರು ತಮ್ಮೆಲ್ಲಾ ಅನುಯಾಯಿಗಳನ್ನು ಸಮಾನರಾಗಿ ಕಾಣುತ್ತಿದ್ದರು. ಅವರು ತಮ್ಮ ಸಂಗಾತಿಗಳ ನಡುವೆ ಯಾವುದೇ ರೀತಿಯ ಶ್ರೇಣೀಕರಣವನ್ನು ಮಾಡಿರಲಿಲ್ಲ. ಹೊರಗಿನಿಂದ ಹೊಸದಾಗಿ ಬಂದು ಪ್ರವಾದಿ ಮತ್ತವರ ಸಂಗಾತಿಗಳ ಸಭೆಯನ್ನು ಕಂಡವರಿಗೆ, ಅಲ್ಲಿ ನಾಯಕ ಯಾರು ಎಂಬುದು ಮೊದಲ ನೋಟಕ್ಕೆ ತಿಳಿಯುತ್ತಿರಲಿಲ್ಲ. ಏಕೆಂದರೆ, ಅಲ್ಲಿ ಪ್ರವಾದಿಯವರಿಗೆ ಯಾವುದೇ ಪ್ರತ್ಯೇಕ ಪೀಠ ಅಥವಾ ಆಸನ ಇರಲಿಲ್ಲ. ಅವರು ತಮ್ಮ ಸಂಗಾತಿಗಳ ಜೊತೆಗೆ ಬೆರೆತು ಕುಳಿತಿರುತ್ತಿದ್ದರು. ಅವರ ಜೊತೆಗೆ, ಅವರ ಆಹಾರವನ್ನೇ ತಾವೂ ಸೇವಿಸುತ್ತಿದ್ದರು. ಕೆಲಸಗಳಿರುವಾಗ ತಾವೂ ಆ ಕೆಲಸಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ಅವರಿಗೆ ಪ್ರವಾದಿವರ್ಯರು (ಸ) ಪರಿಚಯಿಸಿದ ಸಂಸ್ಕೃತಿಯಲ್ಲಿ ಗುರುವಂದನೆ, ಗುರುವಿನ ಪಾದ ಸ್ಪರ್ಶ, ಗುರುದಕ್ಷಿಣೆ ಇತ್ಯಾದಿಗೆ ಯಾವುದೇ ಪಾತ್ರವಿರಲಿಲ್ಲ. ಅವರು ಎಂದೂ ಯಾರಿಗೂ ತನ್ನ ಮುಂದೆ ತಲೆಬಾಗಲು ಆದೇಶಿಸಲಿಲ್ಲ, ಅದಕ್ಕೆ ಅನುಮತಿಯನ್ನೂ ನೀಡಲಿಲ್ಲ.

ಒಮ್ಮೆ ಒಂದು ಪ್ರಯಾಣದ ವೇಳೆ ಪ್ರವಾದಿ ಮುಹಮ್ಮದ್ (ಸ) ಮತ್ತು ಅವರ ಸಂಗಾತಿಗಳು ಒಂದೆಡೆ ಶಿಬಿರ ಹೂಡಿದ್ದರು. ಅಲ್ಲಿ ಭೋಜನದ ಸಮಯವಾದಾಗ, ಭೋಜನ ತಯಾರಿಸುವುದಕ್ಕೆ ಸಂಬಂಧಿಸಿದ ವಿವಿಧ ಹೊಣೆಗಾರಿಕೆಗಳನ್ನು ಬೇರೆಬೇರೆ ವ್ಯಕ್ತಿಗಳಿಗೆ ವಹಿಸಿಕೊಡಲಾಯಿತು. ಉರುವಲು ಸಂಗ್ರಹಿಸಿ ತರುವ ಕೆಲಸವನ್ನು ಪ್ರವಾದಿ (ಸ) ಸ್ವತಃ ವಹಿಸಿಕೊಂಡರು. ಆ ಕೆಲಸವನ್ನು ನಾವು ಮಾಡುತ್ತೇವೆ, ತಾವು ವಿಶ್ರಾಂತಿ ಪಡೆಯಿರಿ ಎಂದು ಸಂಗಾತಿಗಳು ಎಷ್ಟು ಒತ್ತಾಯಿಸಿದರೂ ಪ್ರವಾದಿ (ಸ) ಕೇಳಲಿಲ್ಲ. ಅವರು ತಮ್ಮ ಪಾಲಿನ ಕೆಲಸವನ್ನು ಸ್ವತಃ ಮಾಡಿದರು.

(ಖುಲಾಸಹ್ ಅಲ್ ಸಿಯರ್)

ಒಂದು ಐತಿಹಾಸಿಕ ವರದಿಯ ಪ್ರಕಾರ, ಒಮ್ಮೆ ಪ್ರವಾದಿ ಮುಹಮ್ಮದ್ (ಸ) ಮದೀನಾದ ಮಸೀದಿಯನ್ನು ಪ್ರವೇಶಿಸಿದಾಗ ಅಲ್ಲಿ ಅವರ ಅನುಯಾಯಿಗಳು ಎರಡು ಪ್ರತ್ಯೇಕ ವೃತ್ತಗಳನ್ನು ನಿರ್ಮಿಸಿ ಕುಳಿತಿದ್ದರು. ಒಂದು ವೃತ್ತದಲ್ಲಿದ್ದವರು ಕುರ್ ಆನ್ ಪಠಣ, ಪ್ರಾರ್ಥನೆ ಮುಂತಾದ ಚಟುವಟಿಕೆಗಳಲ್ಲಿ ಮಗ್ನರಾಗಿದ್ದರು. ಇನ್ನೊಂದು ವೃತ್ತದಲ್ಲಿದ್ದವರು ಕಲಿಯುವ ಮತ್ತು ಕಲಿಸುವ ಚಟುವಟಿಕೆಯಲ್ಲಿ ತಲ್ಲೀನರಾಗಿದ್ದರು. ‘‘ಅವರಿಬ್ಬರೂ ಸತ್ಕಾರ್ಯದಲ್ಲಿ ನಿರತರಾಗಿದ್ದಾರೆ’’ ಎಂದ ಪ್ರವಾದಿ (ಸ) ‘‘ನನ್ನನ್ನು ಶಿಕ್ಷಕನಾಗಿ ಕಳಿಸಲಾಗಿದೆ’’ ಎನ್ನುತ್ತಾ ಕಲಿಯುವ ಮತ್ತು ಕಲಿಸುವ ಚಟುವಟಿಕೆಯಲ್ಲಿದ್ದವರ ಬಳಿಗೆ ಹೋಗಿ ಅವರ ಜೊತೆ ಕುಳಿತುಕೊಂಡರು.

(ವರದಿ - ಅಬ್ದುಲ್ಲಾಹ್ ಬಿನ್ ಅಮ್ರ್. ಸಂಗ್ರಹ ಸುನನ್ ಇಬ್ನುಮಾಜಃ - 229)

ಒಮ್ಮೆ ಒಬ್ಬ ಮಹಿಳೆ ಪ್ರವಾದಿ ಮುಹಮ್ಮದ್ (ಸ) ಅವರ ಬಳಿಗೆ ಬಂದು ‘‘ಅಲ್ಲಾಹನ ದೂತರೇ, ನಿಮ್ಮ ಶಿಕ್ಷಣದಿಂದ ಪುರುಷರಷ್ಟೇ ಲಾಭ ಪಡೆಯುತ್ತಿದ್ದಾರೆ. ನಮಗೂ ನಿಮ್ಮ ಸಮಯ ನೀಡಿ. ನಾವು ನಿಮ್ಮ ಬಳಿಗೆ ಬಂದು, ಅಲ್ಲಾಹನು ನಿಮಗೆ ಕಲಿಸಿದ್ದನ್ನು ನೀವು ನಮಗೆ ಕಲಿಸುವಂತಾಗಲು ನಮಗಾಗಿ ಒಂದು ದಿನ ನಿಗದಿ ಮಾಡಿ’’ ಎಂದು ಮನವಿ ಮಾಡಿಕೊಂಡರು. ಅದಕ್ಕುತ್ತರವಾಗಿ ಪ್ರವಾದಿವರ್ಯರು ‘‘ಇಂತಿಂತಹ ನಿರ್ದಿಷ್ಟ ದಿನ, ಇಂತಿಂತಹ ನಿರ್ದಿಷ್ಟ ಸ್ಥಳದಲ್ಲಿ ನೀವೆಲ್ಲಾ ಸೇರಿರಿ’’ ಎಂದರು. ಆ ನಿರ್ದಿಷ್ಟ ದಿನ ಮಹಿಳೆಯರು ಸೇರಿದ್ದ ಸ್ಥಳಕ್ಕೆ ಹೋದ ಪ್ರವಾದಿ (ಸ), ಮಹಿಳೆಯರಿಗೆ ಧರ್ಮದ ಕುರಿತು ತಿಳುವಳಿಕೆ ನೀಡಿದರು.....

(ವರದಿ: ಅಬೂ ಸಈದ್ (ರ) ಸಂಗ್ರಹ: ಸಹೀಹ್ ಅಲ್ ಬುಖಾರಿ - 7310)

ಇದು ಪ್ರವಾದಿವರ್ಯರು (ಸ) ಮದೀನಾ ನಗರಕ್ಕೆ ಬಂದು ನೆಲೆಸಿದ ಆರಂಭದ ದಿನಗಳ ಘಟನೆ. ಮುಂದೆ ಪ್ರವಾದಿಯ ಗುಡಿಸಲುಗಳು ಅವರ ಮಹಿಳಾ ಸಂಗಾತಿಗಳ ವಿದ್ಯಾಲಯಗಳಾದವು. ಪ್ರವಾದಿಯ ಮಗಳು ಫಾತಿಮಾ ಮತ್ತು ಪ್ರವಾದಿಯ ಪತ್ನಿಯರು ಸಮಾಜದ ಶಿಕ್ಷಕಿಯರಾದರು. ಕ್ರಮೇಣ ಆ ಸಮಾಜದಲ್ಲಿ ಶಿಕ್ಷಿತ ಹಾಗೂ ಶಿಕ್ಷಕ ಮಹಿಳೆಯರ ಒಂದು ಪೀಳಿಗೆಯೇ ನಿರ್ಮಾಣವಾಯಿತು. ಆಯಿಷಾ (ರ) ಮದೀನಾದ ಒಬ್ಬ ಪ್ರಮುಖ ಶಿಕ್ಷಕಿಯಾದರು. ಸಾವಿರಾರು ಮಹಿಳೆಯರು ಮಾತ್ರವಲ್ಲ ಅನೇಕ ಪುರುಷರು ಕೂಡಾ ಅವರ ವಿದ್ವತ್ತಿನ ಫಲಾನುಭವಿಗಳಾದರು. ಪ್ರವಾದಿವರ್ಯರ ಸಂಗಾತಿ, ಮುಸ್ಲಿಮ್ ಇತಿಹಾಸದ ಪ್ರಥಮ ಕುರ್ ಆನ್ ವ್ಯಾಖ್ಯಾನಕಾರ ಹಾಗೂ ತಮ್ಮ ಕಾಲದ ಪ್ರಖ್ಯಾತ ವಿದ್ವಾಂಸರಾಗಿದ್ದ ಅಬ್ದುಲ್ಲಾಹ್ ಬಿನ್ ಅಬ್ಬಾಸ್ (ರ), ಅನೇಕ ಧರ್ಮಸೂಕ್ಷ್ಮಗಳ ಕುರಿತು ಆಯಿಷಾ (ರ) ಜೊತೆ ಸಮಾಲೋಚಿಸುತ್ತಿದ್ದರು. ಪ್ರವಾದಿಯ ಮಾತು-ಕೃತಿಗಳ ಕುರಿತಾದ ಎರಡು ಸಾವಿರಕ್ಕೂ ಹೆಚ್ಚಿನ ವರದಿಗಳು ಆಯಿಷಾ (ರ) ಅವರ ಮೂಲಕ ಮಾನವ ಕುಲಕ್ಕೆ ತಲುಪಿದವು.

ಪ್ರವಾದಿವರ್ಯರು (ಸ) ಮಾತಿಗಿಂತ ಹೆಚ್ಚಾಗಿ ಕೃತಿಯ ಮೂಲಕ ಕಲಿಸುತ್ತಿದ್ದರು. ಜನರಿಗೆ ಸನ್ನಡತೆ, ಚಾರಿತ್ರ್ಯಗಳನ್ನು ಅವರು ಸ್ವತಃ ತಮ್ಮ ಸನ್ನಡತೆ, ತಮ್ಮ ಸಚ್ಚಾರಿತ್ರ್ಯ ಮತ್ತು ಸದಾಚಾರಗಳ ಮೂಲಕ ಕಲಿಸುತ್ತಿದ್ದರು. ‘‘ಸದಾಚಾರದ ಪೂರ್ತೀಕರಣಕ್ಕಾಗಿ ನನ್ನನ್ನು ಕಳುಹಿಸಲಾಗಿದೆ’’ ಎಂದು ಅವರು ಹೇಳುತ್ತಿದ್ದರು.

ಪ್ರವಾದಿವರ್ಯರ ಚರಿತ್ರೆ ಓದಿದವರು ಗಮನಿಸಬಹುದಾದ ಒಂದು ಸಂಗತಿಯೇನೆಂದರೆ ಅವರ ಮಾತುಗಳು ಯಾವಾಗಲೂ ತುಂಬಾ ಸಂಕ್ಷಿಪ್ತವಾಗಿರುತ್ತಿದ್ದವು. ಅವರೆಂದೂ ಉದ್ದುದ್ದ ಭಾಷಣಗಳನ್ನು ಮಾಡುತ್ತಿರಲಿಲ್ಲ. ಹಿಜರಿ 10ನೇ ವರ್ಷ, ತಮ್ಮ ಮರಣಕ್ಕೆ ಕೆಲವೇ ಸಮಯ ಮುನ್ನ ತಮ್ಮ ಜೀವನದ ಮೊದಲ ಹಾಗೂ ಕೊನೆಯ ಹಜ್ ಯಾತ್ರೆಯ ಸಂದರ್ಭದಲ್ಲಿ ಅವರು ಮಾಡಿದ ಭಾಷಣವನ್ನು ಮಾನವ ಇತಿಹಾಸದ ಅತ್ಯಂತ ಪ್ರಮುಖ, ಪ್ರಭಾವಶಾಲಿ ಭಾಷಣಗಳ ಸಾಲಲ್ಲಿ ಗಣಿಸಲಾಗುತ್ತದೆ. ‘ವಿದಾಯ ಭಾಷಣ’ (Farwell Sermon) ಎಂದೇ ಖ್ಯಾತವಾಗಿರುವ ಆ ಭಾಷಣವನ್ನು ಪ್ರವಾದಿ ಮುಹಮ್ಮದ್ (ಸ) ಅವರ ಅತ್ಯಂತ ಸುದೀರ್ಘ ಭಾಷಣ ಎಂದೂ ಗುರುತಿಸಲಾಗುತ್ತದೆ. ಲಿಖಿತ ರೂಪದಲ್ಲಿ ಲಭ್ಯವಿರುವ ಆ ‘ದೀರ್ಘ’ ಭಾಷಣ ಕೂಡ ಹೆಚ್ಚೆಂದರೆ 6 ರಿಂದ 8 ನಿಮಿಷದಷ್ಟು ಮಾತ್ರ ದೀರ್ಘವಿದೆ. ಹಾಗಾದರೆ, ಅವರ ಇತರ ಭಾಷಣಗಳು ಎಷ್ಟು ಸಂಕ್ಷಿಪ್ತವಿದ್ದಿರಬಹುದು!

ಪ್ರವಾದಿ (ಸ) ದೀರ್ಘ ಪ್ರಶ್ನೆಗಳಿಗೂ ಚುಟುಕಾದ ಉತ್ತರ ನೀಡುತ್ತಿದ್ದರು. ಅವರು ತತ್ವ ಶಾಸ್ತ್ರಜ್ಞರಂತೆ ಸಂಕೀರ್ಣ ಭಾಷೆಯಲ್ಲಿ ಮಾತನಾಡುತ್ತಿರಲಿಲ್ಲ. ಅವರು ಸಾಮಾನ್ಯವಾಗಿ, ತೀರಾ ಸಾಮಾನ್ಯ ವ್ಯಕ್ತಿಗೂ ಅರ್ಥವಾಗುವಂತಹ ಸರಳ ಭಾಷೆಯಲ್ಲಿ ಮಾತನಾಡುತ್ತಿದ್ದರು. ಅವರ ಮಾತುಗಳು ಯಾವುದೇ ವಿವರಣೆಯ ಅಗತ್ಯವಿಲ್ಲದಷ್ಟು ನೇರ ಹಾಗೂ ಸ್ಪಷ್ಟವಾಗಿರುತ್ತಿದ್ದವು. ಅವರು ತಮ್ಮ ಬಳಿಗೆ ಶಿಕ್ಷಣ ಅರಸಿ ಬಂದವರಿಗೆ ಶಿಕ್ಷಣ ನೀಡುತ್ತಿದ್ದುದು ಮಾತ್ರವಲ್ಲ, ಅವರಲ್ಲಿ ಹೆಚ್ಚಿನವರನ್ನು ಶಿಕ್ಷಕರಾಗಿಯೂ ಪರಿವರ್ತಿಸಿ ಬಿಡುತ್ತಿದ್ದರು. ಅವರು ಒಂದು ಸಭೆಯಲ್ಲಿ ಒಂದು ಸಂದೇಶವನ್ನು ನೀಡಿದ ಬಳಿಕ, ಸಾಮಾನ್ಯವಾಗಿ ʼʼಈ ಸಂದೇಶವನ್ನು ಇಲ್ಲಿ ಇರುವವರು ಇಲ್ಲಿ ಇಲ್ಲದವರಿಗೆ ತಲುಪಿಸಿʼʼ ಎಂದು ಉಪದೇಶಿಸುತ್ತಿದ್ದರು.

ಹೆಚ್ಚು ಮಹತ್ವದ ವಿಷಯಗಳನ್ನು ಕಲಿಸುವಾಗ ಪ್ರವಾದಿವರ್ಯರು (ಸ) ಆ ವಿಷಯವನ್ನು ಚುಟುಕಾಗಿ ಹೇಳಿ, ಅದನ್ನು ಮೂರು ಬಾರಿ ಆವರ್ತಿಸುತ್ತಿದ್ದರು. ಹೀಗೆ, ಆ ಮಾತನ್ನು ಪ್ರಥಮ ಬಾರಿಗೆ ಕೇಳಿದವರಿಗೂ ಅದು ಅರ್ಥವಾಗಿ ಬಿಡುತ್ತಿತ್ತು ಮತ್ತು ಆ ಮಾತು ಅವರ ನೆನಪಿನಲ್ಲೂ ಉಳಿದು ಬಿಡುತ್ತಿತ್ತು. ಉಪಮೆಗಳು, ಉದಾಹರಣೆಗಳು, ಕಥೆಗಳು, ಐತಿಹಾಸಿಕ ಘಟನೆಗಳು ಮತ್ತು ಹಾಸ್ಯ - ಇವೆಲ್ಲಾ ಅವರ ಉಪದೇಶಗಳ ಭಾಗಗಳಾಗಿರುತ್ತಿದ್ದವು. ಕೆಲವೊಮ್ಮೆ ಅವರು ಚಿತ್ರಗಳನ್ನು ಬಿಡಿಸಿ ಆ ಮೂಲಕ ಜನರಿಗೆ ವಿಷಯ ಮನದಟ್ಟು ಮಾಡಿಸಿದ್ದೂ ಇದೆ.

ಜ್ಞಾನಕ್ಕಾಗಿ ಪ್ರಶ್ನೆ ಕೇಳುವುದನ್ನು ಕುರ್ ಆನ್‌ನಲ್ಲಿ ಪ್ರೋತಾಹಿಸಲಾಗಿದೆ:

‘‘... ... ನಿಮಗೆ ತಿಳಿದಿಲ್ಲವಾದರೆ ಬಲ್ಲವರೊಡನೆ ಕೇಳಿ ನೋಡಿರಿ.’’ (ಕುರ್ ಆನ್ - 16:43)

ಪ್ರವಾದಿ (ಸ) ಕೂಡಾ ಅರಿವಿಗಾಗಿ ಪ್ರಶ್ನೆ ಕೇಳುವ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿದ್ದರು. ತೀರಾ ಅಪರಿಚಿತ ವ್ಯಕ್ತಿಗಳು ಬಂದು ಪ್ರಶ್ನೆಗಳನ್ನು ಕೇಳಿದರೂ ಅವರು ಅವರ ಮಾತನ್ನು ಗಮನವಿಟ್ಟು, ಏಕಾಗ್ರತೆಯೊಂದಿಗೆ ಆಲಿಸುತ್ತಿದ್ದರು. ಆ ಬಳಿಕ ಸಮಾಧಾನದೊಂದಿಗೆ ಅವರಿಗೆ ಉತ್ತರ ನೀಡುತ್ತಿದ್ದರು. ಅವರ ಸಭೆಗಳಿಗೆ ಎಲ್ಲ ತರದ ಜನರು ಬರುತ್ತಿದ್ದರು. ಅವರಲ್ಲಿ ಕೆಲವರ ವರ್ತನೆ ಮತ್ತು ಮಾತಿನ ಧಾಟಿ ತೀರಾ ಒರಟಾಗಿರುತ್ತಿತ್ತು. ಆದರೆ ಪ್ರವಾದಿ ಮಾತ್ರ ಎಲ್ಲರ ಜೊತೆ ಬಹಳ ಸೌಮ್ಯವಾಗಿ ಪ್ರೀತಿ, ವಾತ್ಸಲ್ಯದೊಂದಿಗೆ ವ್ಯವಹರಿಸುತ್ತಿದ್ದರು. ತೀರಾ ಅನಗತ್ಯ ವಿಷಯಗಳ ಬಗ್ಗೆ ಹಾಗೂ ಕಾಲ್ಪನಿಕ ಸನ್ನಿವೇಶಗಳ ಕುರಿತು ಪ್ರಶ್ನೆಗಳನ್ನು ಕೇಳುವುದನ್ನು ಮಾತ್ರ ಅವರು ನಿರುತ್ತೇಜಿಸುತ್ತಿದ್ದರು. ಹಿಂದೆ ಸತ್ತುಹೋದ ವ್ಯಕ್ತಿಗಳನ್ನು ಹೆಸರಿಸಿ ಅವರು ಸ್ವರ್ಗಕ್ಕೆ ಹೋದರೋ, ನರಕಕ್ಕೆ ಹೋದರೋ ಎಂಬಂತಹ ಪ್ರಶ್ನೆಗಳನ್ನು ಯಾರಾದರೂ ಕೇಳಿದರೆ ಅಥವಾ ಭವಿಷ್ಯದ ಕುರಿತು ನಿರ್ದಿಷ್ಟ ಪ್ರಶ್ನೆಗಳನ್ನು ಕೇಳಿದರೆ ಅವರು ಉತ್ತರಿಸುತ್ತಿರಲಿಲ್ಲ.

ಅನೇಕ ವಿಷಯಗಳನ್ನು ಕಲಿಸುವುದಕ್ಕೆ ಪ್ರವಾದಿ (ಸ) ಏಕ ಪಕ್ಷೀಯ ಭಾಷಣದ ಬದಲು, ಸಂಭಾಷಣೆ ಅಥವಾ ಪ್ರಶ್ನೋತ್ತರದ ವಿಧಾನವನ್ನು ಅನುಸರಿಸುತ್ತಿದ್ದರು. ಪ್ರವಾದಿ (ಸ) ಜನರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದುದು ಮಾತ್ರವಲ್ಲದೆ ಸ್ವತಃ ಜನರೊಡನೆ ವಿಚಾರ ಪ್ರಚೋದಕ ಪ್ರಶ್ನೆಗಳನ್ನೂ ಕೇಳುತ್ತಿದ್ದರು. ಅದು ಅವರ ಶಿಕ್ಷಣ ವಿಧಾನಗಳಲ್ಲೊಂದಾಗಿತ್ತು. ಒಮ್ಮೆ ಅವರು ತಮ್ಮ ಸಂಗಾತಿಗಳ ಸಮೂಹವನ್ನುದ್ದೇಶಿಸಿ, ‘‘ನಿಮ್ಮಲ್ಲಿ ಯಾರಾದರೂ ನಿಮ್ಮ ಸ್ವಂತ ಸಂಪತ್ತಿಗಿಂತ ಹೆಚ್ಚಾಗಿ ನಿಮ್ಮ ಉತ್ತರಾಧಿಕಾರಿಗಳ (ವಾರಸುದಾರರ) ಸಂಪತ್ತನ್ನು ಪ್ರೀತಿಸುತ್ತಾರೆಯೇ?’’ ಎಂದು ವಿಚಾರಿಸಿದರು. ‘‘ಇಲ್ಲ. ನಾವೆಲ್ಲಾ ನಮ್ಮ ಸ್ವಂತ ಸಂಪತ್ತನ್ನೇ ಹೆಚ್ಚು ಪ್ರೀತಿಸುತ್ತೇವೆ’’ ಎಂದು ಸಂಗಾತಿಗಳು ಉತ್ತರಿಸಿದರು. ಆಗ ಪ್ರವಾದಿ (ಸ) ಹೇಳಿದರು: ‘‘ಒಬ್ಬ ವ್ಯಕ್ತಿ ತಾನು ಜೀವಂತ ಇರುವಾಗ (ಸತ್ಕಾರ್ಯದಲ್ಲಿ) ಖರ್ಚು ಮಾಡಿದ ಸಂಪತ್ತು ಮಾತ್ರ ಅವನ ಸಂಪತ್ತಾಗಿರುತ್ತದೆ. ಸಾಯುವಾಗ ಬಿಟ್ಟು ಹೋದ ಸಂಪತ್ತು ಅವನ ವಾರಸುದಾರರ ಸಂಪತ್ತಾಗಿರುತ್ತದೆ.’’ ಈ ಮೂಲಕ ಅವರು ಸಂಪತ್ತನ್ನು ಸಂಗ್ರಹಿಸಿಡುವ ಪ್ರವೃತ್ತಿಯನ್ನು ನಿರುತ್ತೇಜಿಸಿ, ಸತ್ಕಾರ್ಯಕ್ಕಾಗಿ ಖರ್ಚು ಮಾಡುವ ಪ್ರವೃತ್ತಿಯನ್ನು ಪ್ರೋತ್ಸಾಹಿಸಿದ್ದರು.

(ವರದಿ: ಅಬ್ದುಲ್ಲಾಹ್, ಸಂಗ್ರಹ: ಸಹೀಹ್ ಅಲ್ ಬುಖಾರಿ - 6442)

ಒಮ್ಮೆ ಪ್ರವಾದಿ ಮುಹಮ್ಮದ್ (ಸ) ತಮ್ಮ ಸಂಗಾತಿಗಳ ಒಂದು ಸಭೆಯಲ್ಲಿ ‘‘ಮುಸ್ಲಿಮ್ ಅಂದರೆ ಯಾರು ಗೊತ್ತೇ?’’ ಎಂದು ಪ್ರಶ್ನಿಸಿದರು. ಆ ಬಳಿಕ ಅವರೇ, ‘‘ಯಾರ ಕೈ ಮತ್ತು ಬಾಯಿಯ ಕಿರುಕುಳದಿಂದ ಇತರರು ಸುರಕ್ಷಿತರೋ, ಅವನೇ ಮುಸ್ಲಿಮ್’’ ಎಂದು ಉತ್ತರಿಸಿದರು.

ಒಮ್ಮೆ ಪ್ರವಾದಿ (ಸ) ‘‘ಮುಹಾಜಿರ್ (ವಲಸಿಗ) ಅಂದರೆ ಯಾರು?’’ ಎಂದು ತಮ್ಮ ಅನುಯಾಯಿಗಳೊಡನೆ ವಿಚಾರಿಸಿದರು. (ಸಾಮಾನ್ಯವಾಗಿ, ಆ ಕಾಲದಲ್ಲಿ ಮಕ್ಕಾದಿಂದ ಮದೀನಾ ನಗರಕ್ಕೆ ವಲಸೆ ಹೋದವರನ್ನು ಮುಹಾಜಿರ್ ಎನ್ನಲಾಗುತ್ತಿತ್ತು.) ಆಬಳಿಕ ಅವರೇ, ‘‘ಅಲ್ಲಾಹನು ನಿಷೇಧಿಸಿರುವ ಚಟುವಟಿಕೆಗಳನ್ನು ಬಿಟ್ಟು ಹೊರಟವನೇ ಮುಹಾಜಿರ್’’ ಎಂದುತ್ತರಿಸಿದರು.

ಒಮ್ಮೆ ಪ್ರವಾದಿ (ಸ) ತಮ್ಮ ಜೊತೆಗಾರರೊಡನೆ, ‘‘ನನ್ನ ಸಮುದಾಯದ ದಿವಾಳಿ ವ್ಯಕ್ತಿ ಯಾರೆಂದು ನಿಮಗೆ ಗೊತ್ತೇ?’’ ಎಂದು ಪ್ರಶ್ನಿಸಿದರು. ‘‘ದೂತರೇ, ಧನವಾಗಲಿ ಸಂಪತ್ತಾಗಲಿ ಇಲ್ಲದವನನ್ನು ನಾವು ದಿವಾಳಿಯಾದವನು ಎನ್ನುತ್ತೇವೆ’’ ಎಂದು ಜೊತೆಗಾರರು ಹೇಳಿದರು. ಕೊನೆಗೆ ಈ ಪ್ರಶ್ನೆಗೆ ಅವರೇ ನೀಡಿದ ಉತ್ತರ ಹೀಗಿತ್ತು:

‘‘ಪುನರುತ್ಥಾನ ದಿನ ಒಬ್ಬ ವ್ಯಕ್ತಿ ನಮಾಝ್, ಉಪವಾಸ, ಝಕಾತ್ ಮುಂತಾದ ಧಾರಾಳ ಸತ್ಕರ್ಮಗಳೊಂದಿಗೆ ಹಾಜರಾಗುವನು. ಆದರೆ ಅವನು ಒಬ್ಬನನ್ನು ದೂಷಿಸಿರುವನು, ಒಬ್ಬನ ಮೇಲೆ ಸುಳ್ಳಾರೋಪ ಹೊರಿಸಿರುವನು, ಒಬ್ಬರ ಸಂಪತ್ತನ್ನು ಅಕ್ರಮವಾಗಿ ಕಬಳಿಸಿರುವನು, ಅಕ್ರಮವಾಗಿ ಯಾರದಾದರೂ ರಕ್ತ ಹರಿಸಿರುವನು, ಯಾರ ಮೇಲಾದರೂ ಹಲ್ಲೆ ನಡೆಸಿರುವನು. ಅವನನ್ನು ಕೂರಿಸಿ ಅವನ ಸತ್ಕರ್ಮಗಳ ಪ್ರತಿಫಲವನ್ನು, ಅವನಿಂದ ಅನ್ಯಾಯಕ್ಕೊಳಗಾದವರಿಗೆ ಪರಿಹಾರ ರೂಪದಲ್ಲಿ ನೀಡಲಾಗುವುದು. ಅವನ ಪಾಪಗಳಿಗೆ ಸಮನಾಗುವ ಮುನ್ನವೇ ಅವನ ಸತ್ಫಲಗಳೆಲ್ಲಾ ಮುಗಿದು ಬಿಟ್ಟರೆ ಅವನಿಂದ ಸಂತ್ರಸ್ತರಾದವರ ಪಾಪಗಳನ್ನು ಅವನ ಖಾತೆಗೆ ವರ್ಗಾಯಿಸಲಾಗುವುದು. ಕೊನೆಗೆ ಅವನನ್ನು ನರಕಾಗ್ನಿಗೆ ಎಸೆಯಲಾಗುವುದು - ಅವನೇ ನಿಜವಾದ ದಿವಾಳಿ ವ್ಯಕ್ತಿ.’’

(ವರದಿ : ಅಬೂ ಹುರೈರ (ರ) ಸಂಗ್ರಹ: ಜಾಮಿಯ್ ತಿರ್ಮಿಝಿ - 2418)

ಪ್ರವಾದಿವರ್ಯರು ಒಂದು ಪ್ರಶ್ನೆಗೆ ಉತ್ತರವಾಗಿ ವಿಚಾರಪ್ರಚೋದಕವಾದ ಇನ್ನೊಂದು ಪ್ರಶ್ನೆ ಕೇಳಿದ್ದೂ ಇದೆ. ಉದಾ:

ಒಮ್ಮೆ ಒಬ್ಬ ವ್ಯಕ್ತಿ ಪ್ರವಾದಿಯೊಡನೆ, ‘‘ಅಂತಿಮ ವಿಚಾರಣೆಯ ದಿನ ಯಾವಾಗ ಬರಲಿದೆ?’’ ಎಂದು ವಿಚಾರಿಸಿದರು.

ಅದಕ್ಕೆ ಪ್ರವಾದಿಯ ಪ್ರತಿಕ್ರಿಯೆ ಹೀಗಿತ್ತು: ‘‘ನೀನು ಆ ದಿನಕ್ಕಾಗಿ ಎಂತಹ ಸಿದ್ಧತೆ ನಡೆಸಿರುವೆ?’’

ಈ ಉತ್ತರವು, ತನ್ನ ಜೀವನದ ಸಾಧನೆಗಳ ಬಗ್ಗೆ ಚಿಂತನೆ ನಡೆಸುವುದಕ್ಕೆ ಆ ವ್ಯಕ್ತಿಯನ್ನು ಪ್ರೇರೇಪಿಸಿತು.

ಆ ವ್ಯಕ್ತಿ ಹೇಳಿದರು: ‘‘ನಾನು ಹೆಚ್ಚೇನೂ ಸಿದ್ಧತೆ ನಡೆಸಿಲ್ಲ. ಆದರೆ ನಾನು ಅಲ್ಲಾಹನನ್ನು ಮತ್ತು ಅವನ ದೂತರನ್ನು ತುಂಬಾ ಪ್ರೀತಿಸುತ್ತೇನೆ.’’

ಆಗ ಪ್ರವಾದಿ (ಸ) ಹೇಳಿದರು: ‘‘ನೀನು ಯಾರನ್ನು ಪ್ರೀತಿಸುವೆಯೋ ಅವರ ಜೊತೆಗಿರುವೆ.’’

(ವರದಿ - ಅನಸ್ (ರ) ಸಂಗ್ರಹ - ಸಹೀಹ್ ಅಲ್ ಬುಖಾರಿ - 3688)

ಇನ್ನೊಂದು ಸಂದರ್ಭದಲ್ಲಿ ಪ್ರವಾದಿ (ಸ) ಒಂದು ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಒಬ್ಬ ಹಳ್ಳಿಗ ವ್ಯಕ್ತಿ ಎದ್ದು ಪ್ರಶ್ನಿಸಿದರು. ಪ್ರವಾದಿ (ಸ) ತಮ್ಮ ಮಾತು ಮುಂದುವರಿಸಿದರು. ಮಾತು ಮುಗಿದ ಬಳಿಕ "ಅಂತಿಮ ವಿಚಾರಣೆಯ ಕುರಿತು ಪ್ರಶ್ನಿಸಿದವರು ಯಾರು?’’ ಎಂದು ವಿಚಾರಿಸಿದರು. ‘‘ದೂತರೇ, ನಾನು ಇಲ್ಲಿದ್ದೇನೆ’’ ಎಂದು ಆ ವ್ಯಕ್ತಿ ಉತ್ತರಿಸಿದರು. ಪ್ರವಾದಿ (ಸ) ಹೇಳಿದರು: ‘‘ಲೋಕದಲ್ಲಿ ವಿಶ್ವಾಸಾರ್ಹತೆಯು ಇಲ್ಲವಾಗಿ ಬಿಟ್ಟಾಗ ಅಂತಿಮ ದಿನಕ್ಕಾಗಿ ಕಾಯಿರಿ.’’ ‘‘ವಿಶ್ವಾಸಾರ್ಹತೆಯು ಇಲ್ಲವಾಗುವುದು ಹೇಗೆ?’’ ಎಂದು ಆ ವ್ಯಕ್ತಿ ಮತ್ತೆ ಪ್ರಶ್ನಿಸಿದಾಗ ಪ್ರವಾದಿ (ಸ) ಹೇಳಿದರು: ‘‘ಅಧಿಕಾರವು ಅನರ್ಹ ವ್ಯಕ್ತಿಗಳ ಕೈಗೆ ಹೋದಾಗ ಅಂತಿಮ ದಿನವನ್ನು ನಿರೀಕ್ಷಿಸಿರಿ.’’

(ವರದಿ: ಅಬೂ ಹುರೈರ (ರ) ಸಂಗ್ರಹ: ಸಹೀಹ್ ಅಲ್ ಬುಖಾರಿ - 59)

ತಾನು ಸರ್ವಜ್ಞ ಎಂದು ಮುಹಮ್ಮದರು (ಸ) ಎಂದೂ ಹೇಳಿಕೊಂಡದ್ದಿಲ್ಲ. ಅದೆಷ್ಟೋ ಪ್ರಶ್ನೆಗಳಿಗೆ ಉತ್ತರವಾಗಿ ಅವರು ‘‘ನನಗೆ ಗೊತ್ತಿಲ್ಲ’’ ಎಂದು ಹೇಳಿದ್ದುಂಟು. ತಮಗೆ ಗೊತ್ತಿಲ್ಲದ ವಿಷಯಗಳ ಕುರಿತು, ‘‘ನನಗೆ ಗೊತ್ತಿಲ್ಲ’’ ಎನ್ನಲು ಅವರು ಸ್ವಲ್ಪವೂ ಅಳುಕುತ್ತಿರಲಿಲ್ಲ. ಅವರು ಎಲ್ಲವನ್ನೂ ಖಚಿತ ಜ್ಞಾನದ ಆಧಾರದಲ್ಲಿ ಹೇಳುತ್ತಿದ್ದರು. ಕೇವಲ ಊಹೆಯ ಆಧಾರದಲ್ಲಿ ಏನನ್ನೂ ಹೇಳುತ್ತಿರಲಿಲ್ಲ. ಒಂದು ಸಂದರ್ಭದಲ್ಲಿ ಅವರು ಹೇಳಿದರು:

‘‘ಅಲ್ಲಾಹನಾಣೆ, ನಾನು ಅಲ್ಲಾಹನ ದೂತ. ಆದರೆ ಅಲ್ಲಾಹನು ನನಗೇನು ಮಾಡುವನು ಎಂಬುದು ನನಗೆ ತಿಳಿಯದು.’’

(ಸಂಗ್ರಹ: ಸಹೀಹ್ ಅಲ್ ಬುಖಾರಿ - 3929)

ಪವಿತ್ರ ಕುರ್ ಆನ್‌ನಲ್ಲಿ ಪ್ರವಾದಿಯವರನ್ನುದ್ದೇಶಿಸಿ ಹೀಗೆ ಆದೇಶಿಸಲಾಗಿದೆ:

‘‘(ದೂತರೇ), ಹೇಳಿರಿ; ನನ್ನ ಬಳಿ ಅಲ್ಲಾಹನ ಭಂಡಾರಗಳಿವೆ ಎಂದಾಗಲಿ, ಗುಪ್ತ ವಿಷಯಗಳ ಜ್ಞಾನ ನನಗಿದೆ ಎಂದಾಗಲಿ ನಾನು ನಿಮ್ಮೊಡನೆ ಹೇಳಿಲ್ಲ. ಹಾಗೆಯೇ ನಾನು ಮಲಕ್ ಎಂದು ಕೂಡಾ ನಿಮ್ಮೊಡನೆ ನಾನು ಹೇಳಿಕೊಂಡಿಲ್ಲ. ನಾನಂತೂ, ನನ್ನೆಡೆಗೆ ಕಳಿಸಲಾಗುತ್ತಿರುವ ದಿವ್ಯ ಸಂದೇಶವನ್ನಷ್ಟೇ ಅನುಸರಿಸುತ್ತಿದ್ದೇನೆ.....’’(ಕುರ್ ಆನ್ - 6:50)

‘‘(ದೂತರೇ), ಹೇಳಿರಿ; ನಾನಂತೂ ನಿಮ್ಮಂತೆ ಒಬ್ಬ ಮಾನವ ಮಾತ್ರನಾಗಿದ್ದೇನೆ. ಪೂಜೆಗರ್ಹನಾದ ನಿಮ್ಮ ದೇವನು ಒಬ್ಬನು ಮಾತ್ರನೆಂದು ನನಗೆ ದಿವ್ಯಸಂದೇಶವನ್ನು ನೀಡಲಾಗಿದೆ......’’ (ಕುರ್ ಆನ್ - 18:110)

‘‘(ದೂತರೇ), ಹೇಳಿರಿ; ನಾನೊಬ್ಬ ಹೊಸ ಬಗೆಯ ದೂತನೇನೂ ಅಲ್ಲ. ನಾಳೆ ನನಗೇನಾಗಲಿದೆ ಎಂಬುದಾಗಲಿ ನಿಮಗೇನಾಗಲಿದೆ ಎಂಬುದಾಗಲಿ ನನಗೆ ತಿಳಿಯದು. ನಾನಂತೂ ನನಗೆ ಇಳಿಸಿ ಕೊಡಲಾಗಿರುವ ಸಂದೇಶವನ್ನಷ್ಟೇ ಅನುಸರಿಸುತ್ತೇನೆ. ನಾನು ಸ್ಪಷ್ಟವಾಗಿ ಎಚ್ಚರಿಸುವವನೇ ಹೊರತು ಬೇರೇನೂ ಅಲ್ಲ.’’(ಕುರ್ ಆನ್ - 46:9)

ಒಮ್ಮೆ ಮದೀನಾದ ಮಸೀದಿಗೆ ಬಂದ ಗ್ರಾಮಸ್ಥನೊಬ್ಬ, ಮಸೀದಿಯಲ್ಲೇ ನಿಂತು, ಮೂತ್ರ ವಿಸರ್ಜನೆ ಮಾಡತೊಡಗಿದ. ಜನರೆಲ್ಲಾ ಅವನನ್ನು ತಡೆಯಲು ಧಾವಿಸಿದರು. ಪ್ರವಾದಿ (ಸ) ಅವರನ್ನೆಲ್ಲ ತಡೆದರು. ‘‘ಅವನನ್ನು ತಡೆಯಬೇಡಿ. ಅವನನ್ನು ಅವನ ಪಾಡಿಗೆ ಬಿಟ್ಟುಬಿಡಿ’’ ಎಂದು ಆದೇಶಿಸಿದರು. ಅವರು ಅವನನ್ನು ಬಿಟ್ಟು ಬಿಟ್ಟರು. ಆ ವ್ಯಕ್ತಿ ಮೂತ್ರವಿಸರ್ಜನೆ ಮುಗಿಸಿದ ಬಳಿಕ ಪ್ರವಾದಿ (ಸ) ಅವನ ಬಳಿಗೆ ಹೋಗಿ ‘‘ಇಂತಹ ಮಸೀದಿಗಳಲ್ಲಿ ಮಲ ಅಥವಾ ಮೂತ್ರ ವಿಸರ್ಜನೆ ಮಾಡುವುದು ಸರಿಯಲ್ಲ. ಇವು ಅಲ್ಲಾಹನನ್ನು ಸ್ಮರಿಸುವುದಕ್ಕೆ, ಪ್ರಾಥಿಸುವುದಕ್ಕೆ ಮತ್ತು ಕುರ್ ಆನ್ ಓದುವುದಕ್ಕೆ ಇರುವ ಸ್ಥಳಗಳು’’ ಎಂದು ಸೌಮ್ಯವಾಗಿ ಉಪದೇಶಿಸಿದರು. ಆ ಬಳಿಕ ನೀರು ತರಿಸಿ, ಮಸೀದಿಯ ಆ ಭಾಗವನ್ನು ಶುಚಿಗೊಳಿಸಿದರು

(ವರದಿ: ಅನಸ್ ಬಿನ್ ಮಾಲಿಕ್. ಗ್ರಂಥ: ಸಹೀಹ್ ಮುಸ್ಲಿಮ್ - 285)

ಶಿಕ್ಷಕರಾಗಿ ಪ್ರವಾದಿವರ್ಯರು (ಸ) ಜನರಿಗೆ ಕೇವಲ ಮಾಹಿತಿಗಳನ್ನು ತಲುಪಿಸಿದ್ದಲ್ಲ. ಅವರ ಗುರಿ ಚಾರಿತ್ರ್ಯ ನಿರ್ಮಾಣವಾಗಿತ್ತು. ಅವರು ತಮ್ಮ ಜೊತೆಗಾರರನ್ನು ಅತ್ಯುನ್ನತ ಚಾರಿತ್ರ್ಯವಂತರಾಗಿ ಪರಿವರ್ತಿಸಿದರು. ಅಷ್ಟೇ ಅಲ್ಲ, ಸಮಾಜದ ಪರಿಷ್ಕರಣೆ ಅವರ ಧ್ಯೇಯವಾಗಿತ್ತು. ತಮ್ಮ ಶಿಕ್ಷಣಗಳ ಮೂಲಕ ಅವರು ಜಗತ್ತಿನ ಒಂದು ಗಣ್ಯಭಾಗದಲ್ಲಿ ಒಂದು ಸತ್ಯವಂತ, ನ್ಯಾಯಶೀಲ, ಅನುಕಂಪ ಭರಿತ, ಸುಶೀಲ, ಸಂವೇದನಾಶೀಲ ಸಮಾಜವನ್ನು ನಿರ್ಮಿಸುವಲ್ಲಿ ಯಶಸ್ವಿಯಾದರು.

share
ರೂಹೀ, ಬೋಳಾರ್
ರೂಹೀ, ಬೋಳಾರ್
Next Story
X