ಪ್ರಗತಿ ಕಾಣದ ಪ್ರಧಾನಮಂತ್ರಿ ಆವಾಸ್ ಮತ್ತಿತರ ವಸತಿ ಯೋಜನೆ
ಉಡುಪಿ, ಬೆಂಗಳೂರು ನಗರ ಜಿಲ್ಲೆಯಲ್ಲಿ ತಲುಪದ ಗುರಿ

ಬೆಂಗಳೂರು: ಪ್ರಧಾನಮಂತ್ರಿ ಆವಾಸ್ ಮತ್ತು ವಿವಿಧ ವಸತಿ ಯೋಜನೆಗಳಡಿಯಲ್ಲಿ ನಗರ ಮತ್ತು ಗ್ರಾಮೀಣ ನಿವೇಶನ ಯೋಜನೆಯಡಿ ರಾಜ್ಯದ ಹಲವು ಜಿಲ್ಲೆಗಳು ನಿರೀಕ್ಷಿತ ಪ್ರಗತಿಯನ್ನು ಸಾಧಿಸಿಲ್ಲ. ವಿಶೇಷವಾಗಿ ಉಡುಪಿ ಮತ್ತು ಬೆಂಗಳೂರು ನಗರ ಜಿಲ್ಲೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಫಲಾನುಭವಿಗಳ ಆಯ್ಕೆಗೆ ನೀಡಿದ್ದ ಗುರಿಯನ್ನೇ ತಲುಪಿಲ್ಲ. ರಾಜ್ಯದ 31 ಜಿಲ್ಲೆಗಳಲ್ಲಿ ಈ ಯೋಜನೆಯಡಿ ಒಟ್ಟು ಶೇ. 26ರಷ್ಟು ಮಾತ್ರ ಪ್ರಗತಿ ಸಾಧಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಡಾ.ಎಚ್‌ಸಿ ಮಹದೇವಪ್ಪ, ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಅವರ ತವರು ಮೈಸೂರು ಜಿಲ್ಲೆಯಲ್ಲಿಯಲ್ಲಿಯೇ ಶೇ. 28ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ವಸತಿ ಸಚಿವ ಬಿ.ಝೆಡ್. ಝಮೀರ್ ಅಹ್ಮದ್ ಖಾನ್ ಅವರ ತವರು ಕ್ಷೇತ್ರವನ್ನು ಹೊಂದಿರುವ ಬೆಂಗಳೂರು ನಗರ ಜಿಲ್ಲೆಯಲ್ಲಿ ಶೂನ್ಯ ಪ್ರಗತಿ ಆಗಿದೆ. ಅದೇ ರೀತಿ ಝಮೀರ್ ಅಹ್ಮದ್ ಖಾನ್ ಅವರು ಉಸ್ತುವಾರಿ ಹೊಂದಿರುವ ವಿಜಯನಗರ ಜಿಲ್ಲೆಯಲ್ಲಿ ಶೇ.58ರಷ್ಟು ಪ್ರಗತಿ ಸಾಧಿಸಿದೆ.
ವಸತಿ ಇಲಾಖೆಯಡಿಯಲ್ಲಿನ ಮನೆಗಳ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿರುವ ಅಳಂದ ಶಾಸಕ ಬಿ.ಆರ್. ಪಾಟೀಲ್ ಅವರ ತವರು ಜಿಲ್ಲೆ ಕಲಬುರಗಿಯಲ್ಲಿ ಶೇ.34ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ವಸತಿ ಯೋಜನೆಗಳಡಿಯಲ್ಲಿ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರು ನೀಡಿರುವ ಹೇಳಿಕೆಯನ್ನು ಪ್ರತಿಪಕ್ಷಗಳು ಅಸ್ತ್ರವನ್ನಾಗಿಸಿಕೊಂಡು ಮುಗಿಬಿದ್ದಿವೆ. ಸಚಿವ ಝಮೀರ್ ಅಹ್ಮದ್ ಖಾನ್ ಅವರ ರಾಜೀನಾಮೆಗೂ ಒತ್ತಾಯಿಸಿವೆ. ಈ ಕುರಿತು ಸಚಿವರು ಸಮಜಾಯಿಷಿಯನ್ನೂ ನೀಡಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಪ್ರಧಾನ ಮಂತ್ರಿ ಆವಾಸ್ ಯೋಜನೆ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಜಾರಿಗೊಂಡಿರುವ ವಿವಿಧ ವಸತಿ ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆಗೆ ನೀಡಿದ್ದ ಗುರಿ, ಸಾಧನೆಯ ಸಮಗ್ರ ವಿವರಗಳು ಮುನ್ನೆಲೆಗೆ ಬಂದಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನ ಸೌಧದಲ್ಲಿ 2025ರ ಮೇ 30, 31 ರಂದು ನಡೆದಿದ್ದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಸಮ್ಮೇಳನಕ್ಕೆ ವಸತಿ ಇಲಾಖೆಯು ಈ ಕುರಿತಾದ ಸಮಗ್ರ ವಿವರ, ಮಾಹಿತಿಗಳನ್ನು ನೀಡಿತ್ತು. ಈ ಮಾಹಿತಿ ಮತ್ತು ವಿವರಗಳ ಪ್ರಕಾರ ವಸತಿ ಇಲಾಖೆಯು ವಿವಿಧ ನಿವೇಶನ ಯೋಜನೆಗಳಡಿಯಲ್ಲಿ ಕನಿಷ್ಟ ಪ್ರಗತಿ ಸಾಧಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ವಸತಿ ಇಲಾಖೆಯು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ಗಳ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಸಮ್ಮೇಳನಕ್ಕೆ ನೀಡಿರುವ ಸಮಗ್ರ ವಿವರಗಳು ‘the-file.in’ಗೆ ಲಭ್ಯವಾಗಿವೆ.
ಜಿಲ್ಲಾವಾರು ಪಟ್ಟಿ
ಕೊಡಗು ಜಿಲ್ಲೆಗೆ 8,862 ಗುರಿ ನಿಗದಿಪಡಿಸಿತ್ತು. ಈ ಪೈಕಿ 73 ಮಂದಿ ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. 8,789 ಮಂದಿಯನ್ನು ಆಯ್ಕೆ ಮಾಡಲು ಬಾಕಿ ಇದೆ. ಶೇ. 1ರಷ್ಟು ಮಾತ್ರ ಪ್ರಗತಿ ಆಗಿದೆ. ದಕ್ಷಿಣ ಕನ್ನಡಕ್ಕೆ 1,948 ಗುರಿ ನಿಗದಿಪಡಿಸಿತ್ತು. ಆದರೆ ಕೇವಲ 33 ಮಂದಿಯನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಆಯ್ಕೆಗೆ ಇನ್ನೂ 1,915 ಬಾಕಿ ಇದೆ. ಶೇ. 2ರಷ್ಟು ಪ್ರಗತಿ ಸಾಧಿಸಿದೆ. ರಾಮನಗರ ಜಿಲ್ಲೆಯಲ್ಲಿ 1,008 ನಿಗದಿಪಡಿಸಿದ್ದರೆ ಆಯ್ಕೆ ಮಾಡಿದ್ದು ಕೇವಲ 86 ಮಾತ್ರ. ಶೇ.9ರಷ್ಟು ಮಾತ್ರ ಪ್ರಗತಿ ಸಾಧಿಸಿರುವುದು ತಿಳಿದು ಬಂದಿದೆ.
ಚಿತ್ರದುರ್ಗಕ್ಕೆ ನಿಗದಿಪಡಿಸಿದ್ದ 40,461 ಗುರಿಯ ಪೈಕಿ 4,733 ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಆಯ್ಕೆಗೆ ಇನ್ನೂ 35,728 ಬಾಕಿ ಇದೆ. ಮಂಡ್ಯದಲ್ಲಿ 24,610 ಗುರಿಯ ಪೈಕಿ 3,536 ಮಾತ್ರ ಆಯ್ಕೆ ಮಾಡಿದೆ. ಆಯ್ಕೆಗಿನ್ನೂ 21,074 ಬಾಕಿ ಇದೆ. ಹಾಸನದಲ್ಲಿ 30,689 ಗುರಿ ಪೈಕಿ 4,842 ಮಾತ್ರ ಆಯ್ಕೆ ಮಾಡಿ ಇನ್ನೂ 25,847 ಫಲಾನುಭವಿಗಳನ್ನು ಆಯ್ಕೆ ಮಾಡಲು ಬಾಕಿ ಇರಿಸಿಕೊಂಡಿದೆ. ಬೆಳಗಾವಿಯಲ್ಲಿ 67,627 ಗುರಿ ನಿಗದಿಪಡಿಸಿತ್ತು. ಈ ಪೈಕಿ 10,758 ಫಲಾನುಭವಿಗಳನ್ನು ಆಯ್ಕೆ ಮಾಡಿರುವ ಇಲಾಖೆಯು ಇನ್ನೂ 56,869 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಬಾಕಿ ಉಳಿಸಿಕೊಂಡಿರುವುದು ಗೊತ್ತಾಗಿದೆ.
ಉತ್ತರ ಕನ್ನಡದಲ್ಲಿ 14,351ರ ಪೈಕಿ 2,350 ಮಾತ್ರ ಆಯ್ಕೆ ಮಾಡಲಾಗಿದೆ. ಆಯ್ಕೆಗೆ ಇನ್ನೂ 12,001 ಬಾಕಿ ಇದೆ. ತುಮಕೂರು ಜಿಲ್ಲೆಯಲ್ಲಿ 32,603 ಫಲಾನುಭವಿಗಳನ್ನು ಆಯ್ಕೆ ಮಾಡಬೇಕಿತ್ತು. ಆದರೆ 5,416 ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಆಯ್ಕೆಗೆ ಇನ್ನೂ 27,187 ಬಾಕಿ ಉಳಿಸಿಕೊಂಡಿದೆ. ಹಾವೇರಿ ಜಿಲ್ಲೆಯಲ್ಲಿ 26,477 ಫಲಾನುಭವಿಗಳನ್ನು ಆಯ್ಕೆ ಮಾಡಬೇಕಿದ್ದ ವಸತಿ ಇಲಾಖೆಯು 4,493 ಮಾತ್ರ ಆಯ್ಕೆ ಮಾಡಿದೆ. ಆಯ್ಕೆಗೆ ಇನ್ನೂ 21,984 ಬಾಕಿ ಇರಿಸಿಕೊಂಡಿದೆ.
ಬಳ್ಳಾರಿ ಜಿಲ್ಲೆಗೆ 24,749 ಗುರಿ ನಿಗದಿಪಡಿಸಿತ್ತು. 4,275 ಫಲಾನುಭವಿಗಳನ್ನು ಆಯ್ಕೆ ಮಾಡಿದೆ. ಆಯ್ಕೆಗೆ ಇನ್ನೂ 20,474 ಫಲಾನುಭವಿಗಳು ಕಾಯುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ 40,225 ಫಲಾನುಭವಿಗಳ ಆಯ್ಕೆಗೆ ಗುರಿ ನಿಗದಿಯಾಗಿದ್ದು, 8,355 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಈ ಯೋಜನೆಗೆ ಆಯ್ಕೆಯಾಗಲು ಇನ್ನೂ 31,870 ಮಂದಿ ಎದುರು ನೋಡುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 3,016 ಗುರಿ ನಿಗದಿಪಡಿಸಿದ್ದು, ಈ ಪೈಕಿ 694 ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. 2,322 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಬಾಕಿ ಇರುವುದು ಗೊತ್ತಾಗಿದೆ.
ಗದಗ ಜಿಲ್ಲೆಯಲ್ಲಿ 20,554 ಗುರಿ ನಿಗದಿಪಡಿಸಿತ್ತು. ಇದರಲ್ಲಿ 4,828 ಮಂದಿಯನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಆಯ್ಕೆಗೆ ಇನ್ನೂ 15,726 ಬಾಕಿ ಇದೆ. ಧಾರವಾಡದಲ್ಲಿ 22,816 ಗುರಿ ನಿಗದಿಯಾಗಿದೆ. ಈ ಪೈಕಿ 5,377 ಮಾತ್ರ ಆಯ್ಕೆ ಮಾಡಿದೆ. 17,439 ಮಂದಿ ಆಯ್ಕೆ ಪಟ್ಟಿ ಸೇರಲು ಕಾಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಗೆ 12,695 ಗುರಿ ನಿಗದಿಪಡಿಸಿದೆ. 3,139 ಆಯ್ಕೆ ಮಾಡಲಾಗಿದೆ. ಆಯ್ಕೆಗೆ ಇನ್ನೂ 9,556 ಬಾಕಿ ಇದೆ. ಶಿವಮೊಗ್ಗ ಜಿಲ್ಲೆಯಲ್ಲಿ 7,507 ಗುರಿ ಪೈಕಿ 2,011 ಮಾತ್ರ ಆಯ್ಕೆ ಮಾಡಲಾಗಿದೆ. 5,496 ಫಲಾನುಭವಿಗಳನ್ನು ಆಯ್ಕೆ ಮಾಡಲು ಬಾಕಿ ಇದೆ.
ಮೈಸೂರು ಜಿಲ್ಲೆಗೆ 30,366 ಫಲಾನು ಭವಿಗಳನ್ನು ಆಯ್ಕೆ ಮಾಡಬೇಕಿತ್ತು. 8,377 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.
21,989 ಫಲಾನುಭವಿಗಳನ್ನು ಆಯ್ಕೆ ಮಾಡಬೇಕಿದೆ. ಈ ಜಿಲ್ಲೆಯಲ್ಲಿ ಶೇ.28ರಷ್ಟು ಮಾತ್ರ ಪ್ರಗತಿ ಸಾಧಿಸಿದೆ. ಬಾಗಲಕೋಟೆಯಲ್ಲಿ 27,681 ಫಲಾನುಭವಿಗಳನ್ನು ಆಯ್ಕೆ ಮಾಡಬೇಕಿದ್ದ ವಸತಿ ಇಲಾಖೆಯು 8,256 ಫಲಾನುಭವಿಗಳನ್ನು ಮಾತ್ರ ಆಯ್ಕೆ ಮಾಡಿದೆ. 19,425 ಫಲಾನುಭವಿಗಳು ಆಯ್ಕೆಪಟ್ಟಿಯನ್ನು ಸೇರಲು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ 52,530 ಫಲಾನುಭವಿಗಳನ್ನು ಆಯ್ಕೆ ಮಾಡಲು ಗುರಿ ನಿಗದಿಪಡಿಸಿತ್ತು. 15,784 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. 36,746 ಫಲಾನುಭವಿಗಳು ಆಯ್ಕೆಗೆ ಎದುರು ನೋಡುತ್ತಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ 48,811 ಫಲಾನುಭವಿಗಳನ್ನು ಆಯ್ಕೆ ಮಾಡಲು ಗುರಿ ನೀಡಿತ್ತು. ಈ ಪೈಕಿ 16,818 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇನ್ನೂ 31,993 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಬಾಕಿ ಇರಿಸಿಕೊಂಡಿರುವುದು ತಿಳಿದು ಬಂದಿದೆ.
ಕೋಲಾರದಲ್ಲಿ 10,345 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲು ಗುರಿ ನಿಗದಿ ಮಾಡಿತ್ತಾದರೂ 3,736 ಫಲಾನುಭವಿಗಳನ್ನಷ್ಟೇ ಆಯ್ಕೆ ಮಾಡಲಾಗಿದೆ. 6,609 ಫಲಾನುಭವಿಗಳು ಆಯ್ಕೆ ಪಟ್ಟಿಗೆ ಸೇರ್ಪಡೆಯಾಗಲು ಬಾಕಿ ಇದ್ದಾರೆ. ಕೊಪ್ಪಳದಲ್ಲಿ 29,170 ಫಲಾನುಭವಿಗಳನ್ನು ಆಯ್ಕೆ ಮಾಡಲು ಗುರಿ ನೀಡಲಾಗಿತ್ತು. 10,896 ಫಲಾನುಭವಿಗಳನ್ನಷ್ಟೇ ಆಯ್ಕೆ ಮಾಡಲಾಗಿದೆ. 18,274 ಫಲಾನುಭವಿಗಳು ಆಯ್ಕೆಗೆ ಎದುರು ನೋಡುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರಕ್ಕೆ ಕೇವಲ 861 ಮಾತ್ರ ಗುರಿ ನಿಗದಿಪಡಿಸಿತ್ತು. ಇದರಲ್ಲಿ 331 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಇನ್ನೂ 528 ಮಂದಿಯನ್ನು ಆಯ್ಕೆ ಮಾಡಬೇಕಿದೆ.
ಚಿಕ್ಕಬಳ್ಳಾಪುರದಲ್ಲಿ 6,093 ಫಲಾನು ಭವಿಗಳನ್ನು ಆಯ್ಕೆ ಮಾಡಬೇಕಿದ್ದು, 2,439 ಮಾತ್ರ ಆಯ್ಕೆ ಮಾಡಲಾಗಿದೆ. 3,654 ಫಲಾನುಭವಿಯನ್ನು ಆಯ್ಕೆ ಮಾಡಲು ಬಾಕಿ ಇದೆ. ಬೀದರ್‌ನಲ್ಲಿ 42,750 ಫಲಾನು ಭವಿಗಳನ್ನು ಆಯ್ಕೆ ಮಾಡಬೇಕಿತ್ತಾದರೂ 17,121 ಮಂದಿಯನ್ನು ಮಾತ್ರ ಆಯ್ಕೆ ಮಾಡಲಾಗಿದೆ. 25,629 ಫಲಾನುಭವಿಗಳು ಆಯ್ಕೆ ಪಟ್ಟಿ ಸೇರಲು ಬಾಕಿ ಇದ್ದಾರೆ. ಯಾದಗಿರಿಯಲ್ಲಿ 27,275 ಫಲಾನುಭವಿಗಳನ್ನು ಆಯ್ಕೆ ಮಾಡಲು ಗುರಿ ನಿಗದಿಪಡಿಸಿದೆ. 11,064 ಮಂದಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. 16,211 ಮಂದಿ ಆಯ್ಕೆ ಪಟ್ಟಿ ಸೇರಲು ಬಾಕಿ ಇದ್ದಾರೆ. ವಿಜಯಪುರದಲ್ಲಿ 36,364 ಫಲಾನುಭವಿಗಳ ಆಯ್ಕೆಗೆ ಗುರಿ ನೀಡಿದ್ದರೂ ಸಹ 18,666 ಮಂದಿಯನ್ನಷ್ಟೇ ಆಯ್ಕೆ ಮಾಡಲಾಗಿದೆ. 17,968 ಮಂದಿ ಆಯ್ಕೆಪಟ್ಟಿ ಸೇರಲು ಕಾದು ಕುಳಿತಿದ್ದಾರೆ. ವಿಜಯನಗರ ಜಿಲ್ಲೆಯಲ್ಲಿ 3,594 ಗುರಿ ಪೈಕಿ 2,080 ಮಂದಿಯನ್ನಷ್ಟೇ ಆಯ್ಕೆ ಮಾಡಿದೆ. ಆಯ್ಕೆಗೆ ಇನ್ನೂ 1,514 ಮಂದಿ ಬಾಕಿ ಇರುವುದು ಗೊತ್ತಾಗಿದೆ.
ಪಿಎಂಎವೈಯಲ್ಲಿ ಕೇವಲ ಶೇ.26ರಷ್ಟು ಪ್ರಗತಿ
ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಗೆ ರಾಜ್ಯದ 31 ಜಿಲ್ಲೆಗಳಲ್ಲೂ ಫಲಾನುಭವಿಗಳನ್ನು ಆಯ್ಕೆ ಮಾಡಲು ವಸತಿ ಇಲಾಖೆಯು, ಪ್ರತೀ ಜಿಲ್ಲೆಗೂ ಗುರಿ ನಿಗದಿಪಡಿಸಿತ್ತು. ಇದರ ಪ್ರಕಾರ ರಾಜ್ಯದ 31 ಜಿಲ್ಲೆಗಳಿಗೆ 7,02,731 ಗುರಿ ನಿಗದಿಪಡಿಸಿತ್ತು. ಈ ಪೈಕಿ ವಸತಿ ಇಲಾಖೆಯು ಈ ಯೋಜನೆಗೆ ಆಯ್ಕೆ ಮಾಡಿದ್ದು 1,80,571 ಮಾತ್ರ. ಈ ಯೋಜನೆಗೆ ಇನ್ನೂ 5,22,160 ಫಲಾನುಭವಿಗಳನ್ನು ಆಯ್ಕೆ ಮಾಡಲು ಬಾಕಿ ಇರಿಸಿಕೊಂಡಿರುವುದು ದಾಖಲೆಗಳಿಂದ ತಿಳಿದು ಬಂದಿದೆ.
ಉಡುಪಿ ಜಿಲ್ಲೆಗೆ 4,566, ಬೆಂಗಳೂರು ನಗರ ಜಿಲ್ಲೆಗೆ 1,857 ಗುರಿ ನಿಗದಿಪಡಿಸಿತ್ತು. ಆದರೆ ಇಲಾಖೆಯು ಆಯ್ಕೆ ಮಾಡಿದ್ದು ಕೇವಲ ಒಬ್ಬರನ್ನು ಮಾತ್ರ. ಉಡುಪಿ ಜಿಲ್ಲೆಯಲ್ಲಿ 4,565, ಬೆಂಗಳೂರು ನಗರ ಜಿಲ್ಲೆಯಲ್ಲಿ 1,856 ಫಲಾನುಭವಿಗಳನ್ನು ಆಯ್ಕೆ ಮಾಡಲು ಬಾಕಿ ಇದೆ. ಈ ದತ್ತಾಂಶದ ಪ್ರಕಾರ ಈ ಎರಡೂ ಜಿಲ್ಲೆಗಳಲ್ಲಿ ಶೂನ್ಯ ಸಂಪಾದನೆ ಮಾಡಿರುವುದು ಗೊತ್ತಾಗಿದೆ.