ಪ್ಲಾಸ್ಟಿಕ್ ಬಳೆ ಮಾರುಕಟ್ಟೆಗೆ ಲಗ್ಗೆ: ಸಂಕಷ್ಟದಲ್ಲಿ ಗಾಜಿನ ಬಳೆ ವ್ಯಾಪಾರಿಗಳು

ಹೊಸಕೋಟೆ: ದೇಶದ ಮಹಿಳೆಯರ ಸಾಂಪ್ರದಾಯಿಕ ಆಭರಣ ಗಾಜಿನ ಬಳೆಗಳು ಇಂದು ಮಾರುಕಟ್ಟೆಯಲ್ಲಿ ತಮ್ಮ ಸ್ಥಾನ ಕಳೆದುಕೊಳ್ಳುತ್ತಿವೆ. ಲೋಹ, ಪ್ಲಾಸ್ಟಿಕ್ ಹಾಗೂ ಇತರ ವಸ್ತುಗಳಿಂದ ತಯಾರಿಸಿದ ಬಳೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದರಿಂದ ಗಾಜಿನ ಬಳೆಗಳ ವ್ಯಾಪಾರ ತೀವ್ರ ಕುಸಿತ ಕಂಡಿದೆ.
ಗಾಜಿನ ಬಳೆ ತಯಾರಿಕೆ ಮತ್ತು ಮಾರಾಟವು ಬಳೆಬಣಜಿಗರಿಗೆ ಶತಮಾನಗಳಿಂದ ಕುಲಕಸುಬಾಗಿದ್ದು, ಅವರ ಜೀವನೋಪಾಯಕ್ಕೆ ಆಧಾರವಾಗಿತ್ತು. ಆದರೆ, ಇತ್ತೀಚೆಗೆ ಇತರ ವರ್ಗದವರೂ ಈ ವ್ಯಾಪಾರಕ್ಕೆ ಪ್ರವೇಶಿಸಿರುವುದು ಸಾಂಪ್ರದಾಯಿಕ ವ್ಯಾಪಾರಿಗಳಿಗೆ ಭಾರೀ ಹೊಡೆತ ನೀಡಿದೆ. ವ್ಯಾಪಾರ ಕುಸಿತದಿಂದಾಗಿ ಇವರ ಬದುಕು ಕಷ್ಟಕರವಾಗಿದೆ.
ಕೆಲವು ಕಾರ್ಖಾನೆಗಳು, ಹೋಟೆಲ್‌ಗಳು ಸಹಿತ ಇತರೆಡೆಗಳಲ್ಲಿ ಗಾಜಿನ ಬಳೆಗಳಿಗೆ ನಿಷೇಧವಿರುವುದು ಅವುಗಳ ಬೇಡಿಕೆಯನ್ನು ಕಡಿಮೆ ಮಾಡಿದೆ. ಜೊತೆಗೆ, ಪ್ಲಾಸ್ಟಿಕ್ ಮತ್ತು ಲೋಹದ ಬಳೆಗಳೊಂದಿಗೆ ಬೆಲೆ, ವೈವಿಧ್ಯಮಯ ವಿನ್ಯಾಸ ಮತ್ತು ಬಾಳಿಕೆಯ ವಿಷಯದಲ್ಲಿ ಸ್ಪರ್ಧಿಸಲು ಗಾಜಿನ ಬಳೆಗಳು ವಿಫಲವಾಗಿವೆ. ಹೊಲಗದ್ದೆಗಳಲ್ಲಿ ದುಡಿಯುವ ರೈತ ಮಹಿಳೆಯರೂ ಗಾಜಿನ ಬಳೆಗಳು ಒಡೆಯುವ ಭೀತಿಯಿಂದ ಅವುಗಳ ಬಳಕೆಯನ್ನು ಕಡಿಮೆ ಮಾಡಿದ್ದಾರೆ. ಮದುವೆ, ಹಬ್ಬ, ಹರಿದಿನಗಳಂತಹ ಶುಭ ಸಮಾರಂಭಗಳಲ್ಲಿ ಮಾತ್ರ ಶಾಸ್ತ್ರ ಮತ್ತು ಸಂಪ್ರದಾಯಕ್ಕಾಗಿ ಗಾಜಿನ ಬಳೆಗಳನ್ನು ಧರಿಸುತ್ತಿದ್ದಾರೆ.
ಗಾಜಿನ ಬಳೆಗಳ ಬೆಲೆ ಹೆಚ್ಚಾಗಿದ್ದು, ಬೇಡಿಕೆ ಕುಸಿದಿರುವುದರಿಂದ ವ್ಯಾಪಾರ ಕಡಿಮೆ ಆಗಿದೆ. ಅಂಗಡಿಗಳಿಗೆ ದುಬಾರಿ ಬಾಡಿಗೆ ಭರಿಸಲು ಸಾಧ್ಯವಾಗದೆ, ಅನೇಕ ಗಾಜಿನ ಬಳೆ ವ್ಯಾಪಾರಿಗಳು ಬೀದಿಬದಿಯಲ್ಲೇ ಅಂಗಡಿಗಳನ್ನು ಇಟ್ಟುಕೊಂಡಿದ್ದಾರೆ. ಆದರೆ, ಸ್ಥಳೀಯ ಆಡಳಿತ ಸಂಸ್ಥೆಗಳು ಮತ್ತು ಪೊಲೀಸರು ಆಗಾಗ್ಗೆ ಇವರನ್ನು ತೆರವುಗೊಳಿಸುವುದರಿಂದ ತೀವ್ರ ತೊಂದರೆಯಾಗುತ್ತಿದೆ ಎಂಬುದು ವ್ಯಾಪಾರಿಗಳ ಅಳಲಾಗಿದೆ.
ಗಾಜಿನ ಬಳೆ ಉತ್ಪಾದಕರಿಗೆ ಮತ್ತು ಮಾರಾಟಗಾರರಿಗೆ ಸರಕಾರದಿಂದ ಯಾವುದೇ ಪ್ರತ್ಯೇಕ ಸಾಲ ಸೌಲಭ್ಯ, ಪ್ರೋತ್ಸಾಹ ಧನ ಅಥವಾ ಇತರ ಸೌಲಭ್ಯಗಳು ಸಿಗದಿರುವುದು ವ್ಯಾಪಾರ ಕುಸಿತಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಗಾಜಿನ ಬಳೆ ಉದ್ಯಮ ಮತ್ತು ವ್ಯಾಪಾರಿಗಳು ತೀವ್ರ ಸಂಕಷ್ಟದಲ್ಲಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ, ಮುಂದೊಂದು ದಿನ ಗಾಜಿನ ಬಳೆ ಉದ್ಯಮ ಸಂಪೂರ್ಣವಾಗಿ ನಶಿಸಿ ಹೋಗುವ ಸಾಧ್ಯತೆಯಿದೆ. ಆದ್ದರಿಂದ, ಸರಕಾರ ಈ ಉದ್ಯಮವನ್ನು ಉಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕದೆ.
ಬಳೆ ವ್ಯಾಪಾರ ನಮ್ಮ ಕುಲಕಸುಬು. ನನ್ನ ತಾತ, ತಂದೆ ಕೂಡ ಬಳೆ ವ್ಯಾಪಾರ ಮಾಡುತ್ತಿದ್ದರು. ನನಗೆ 80 ವರ್ಷ ಆಗಿದ್ದು ಈಗಲೂ ವ್ಯಾಪಾರ ಮಾಡುತ್ತಿದ್ದೇನೆ. ಆದರೆ, ಗ್ರಾಹಕರು ಕಡಿಮೆಯಾಗುತ್ತಿರುವ ಕಾರಣ ನಮ್ಮ ಮಕ್ಕಳು, ಮೊಮ್ಮಕ್ಕಳು ವ್ಯಾಪಾರ ಮಾಡುತ್ತಿಲ್ಲ.
-ಅಕ್ಕಯಮ್ಮ, ಬಳೆ ವ್ಯಾಪಾರಿ ಸೂಲಿಬೆಲೆ
ಗಾಜಿನ ಬಳೆಗಳು ಹೆಚ್ಚಾಗಿ ಗುಜರಾತ್, ಫಿರೋಝಾಬಾದ್‌ನಲ್ಲಿ ತಯಾರಾಗುತ್ತವೆ. ನಾವು ಹೋಲ್‌ಸೇಲ್ ದರದಲ್ಲಿ ಖರೀದಿಸಿದರೂ ಉತ್ಪಾದನಾ ಮತ್ತು ಸಾಗಾಟ ವೆಚ್ಚ ಹೆಚ್ಚಾಗುತ್ತದೆ. ಸಾಗಾಟದಲ್ಲಿ ಬಳೆಗಳು ಒಡೆಯುವ ಕಾರಣದಿಂದಾಗಿ ಬೆಲೆ ಹೆಚ್ಚಾಗಿದ್ದು, ಪರ್ಯಾಯವಾಗಿ ಅಗ್ಗದ ಬೆಲೆಗೆ ಲೋಹ ಮತ್ತು ಪ್ಲಾಸ್ಟಿಕ್ ಬಳೆಗಳತ್ತ ಗ್ರಾಹಕರು ಮಾರು ಹೋಗಿದ್ದಾರೆ.
-ಮುಬಾರಕ್, ಬಳೆ ವ್ಯಾಪಾರಿ
ಹೊಲ ತೋಟಗಳಲ್ಲಿ ಕೆಲಸ ಮಾಡುವಾಗ ಗಾಜಿನ ಬಳೆ ಒಡೆದು ಹೋಗುವುದಲ್ಲದೆ, ಗಾಜಿನ ಬಳೆ ಸ್ವಲ್ಪ ದುಬಾರಿಯಾದ ಕಾರಣ ದಿನನಿತ್ಯ ಪ್ಲಾಸ್ಟಿಕ್ ಮತ್ತು ಲೋಹದ ಬಳೆಗಳನ್ನು ಬಳಸುತ್ತೇವೆ. ಹಬ್ಬ ಹರಿದಿನ ಮದುವೆಗಳಲ್ಲಿ ಮಾತ್ರ ಗಾಜಿನ ಬಳೆ ಬಳಸುತ್ತೇವೆ.
-ರಂಜಿತಾ, ಗೃಹಿಣಿ