ಗರಿಗೆದರಿದ ‘ಪಂಚಮ’ ಪತ್ರಿಕೆಯ ಸಂಪುಟ ಕೆಲಸ
ಓದುಗರ ಕೈ ಸೇರುವುದೇ ‘ಪಂಚಮ’?

ಬೆಂಗಳೂರು, ಮೇ 7: 70ರ ದಶಕದಲ್ಲಿ ದಲಿತ ಚಳವಳಿಗಳ ಶಕ್ತಿಯಾಗಿದ್ದ ಪಂಚಮ ಪತ್ರಿಕೆಯನ್ನು ಸಂಪುಟ ರೂಪದಲ್ಲಿ ಪ್ರಕಟಿಸುವ ಯೋಜನೆಯನ್ನು 2018ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿದ್ದ ಡಾ.ಅರವಿಂದ ಮಾಲಗತ್ತಿ ಅವರು ಹಾಕಿಕೊಂಡಿದ್ದರು. ಇದೀಗ ಸುಮಾರು 7 ವರ್ಷಗಳ ನಂತರ ಪಂಚಮ ಪತ್ರಿಕೆ ಸಂಪುಟದ ಕೆಲಸಗಳು ಗರಿಗೆದರಿವೆ.
ದಲಿತರ ನೋವು-ನಲಿವು ಮತ್ತು ಪ್ರತಿಭಟನೆಗಳ ಬಗ್ಗೆ ಅಗತ್ಯವಾದ ಬರಹಗಳನ್ನು ಪ್ರಕಟಿಸುವ ಮೂಲಕ ದಲಿತರ ಮುಖವಾಣಿ ಎಂಬಂತೆ ಪಂಚಮ ಪತ್ರಿಕೆ ಕೆಲಸ ಮಾಡಿತ್ತು. ಪಂಚಮ ಪತ್ರಿಕೆಯನ್ನು ಯಥಾವತ್ತಾಗಿ ಸಂಪುಟ ರೂಪದಲ್ಲಿ ಪ್ರಕಟಿಸಿ, ದಾಖಲೀಕರಣ ಮಾಡುವುದು ಮತ್ತು ಓದುಗರ ಕೈಗಿಡುವ ಯೋಜನೆಯನ್ನು ಕರ್ನಾಟಕ ಸಾಹಿತ್ಯ ಅಕಾಡಮಿ ಹಾಕಿಕೊಂಡಿತ್ತು. ಆದರೆ, ಕಾರಣಾಂತರಗಳಿಂದ ಸಂಪುಟದ ಕೆಲಸಗಳು ಅರ್ಧದಲ್ಲೇ ನಿಂತಿದ್ದವು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆಯ ಅನುದಾನವನ್ನು ಬಳಸಿಕೊಂಡು, 6 ತಿಂಗಳಲ್ಲೇ ಪಂಚಮ ಪತ್ರಿಕೆಯನ್ನು ಮುದ್ರಣ ಮಾಡಲು ನಿರ್ಧರಿಸಲಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ಸಲಹಾ ಸಮಿತಿಯನ್ನು ಕೂಡ ರಚನೆ ಮಾಡಿ, ಮುದ್ರಣ ಹಂತದ ವರೆಗೆ ಕೆಲಸ ಮಾಡಲಾಗಿತ್ತು. ಆದರೆ 7 ವರ್ಷ ಕಳೆದರೂ ಪತ್ರಿಕೆ ಮುದ್ರಣವಾಗದೇ ಹಾಗೇ ಉಳಿದಿತ್ತು.
ಇದೀಗ ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಪ್ರೊ. ಎಲ್.ಎನ್.ಮುಕುಂದರಾಜ್ ನೇತೃತ್ವದಲ್ಲಿ ಪಂಚಮ ಪತ್ರಿಕೆ ಸಂಪುಟವು ಮುದ್ರಣಕ್ಕೆ ಸಿದ್ಧವಾಗಿದ್ದು, ಪತ್ರಿಕೆಯ ಯಥಾಸ್ಥಿತಿಯನ್ನು ಕಾಯ್ದುಕೊಂಡು ಮುದ್ರಣ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಓದುಗರ ಕೈಗೆ ಪಂಚಮ ಪತ್ರಿಕೆ ಸಂಪುಟ ಸಿಗುತ್ತದೆಯೇ ಎಂದು ಕಾದು ನೋಡಬೇಕಿದೆ.
ಪಂಚಮ ಪತ್ರಿಕೆ ಸಂಪುಟ ಮುದ್ರಣವು ಚಾರಿತ್ರಿಕ ಮೈಲಿಗಲ್ಲಾದ ಯೋಜನೆಯಾಗಿದೆ. ಈಗಿನ ಅಧ್ಯಕ್ಷರು ಅದನ್ನು ಮುದ್ರಿಸುವ ಕಡೆಗೆ ಗಮನಹರಿಸಬೇಕು ಎನ್ನುವುದು ಕರ್ನಾಟಕ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಅವರ ಅಭಿಪ್ರಾಯವಾಗಿದೆ.
‘ಪಂಚಮ’ ಸಂಪುಟಕ್ಕೆ ಹಣ ಮೀಸಲಿಟ್ಟಿದ್ದೆ: ಡಾ.ಅರವಿಂದ ಮಾಲಗತ್ತಿ
ನಾನು ಸಾಹಿತ್ಯ ಅಕಾಡಮಿಯ ಅಧ್ಯಕ್ಷನಾಗಿದ್ದಾಗ ಮೊದಲನೇ ಸಂಪುಟವನ್ನು ಮುದ್ರಣಕ್ಕೆ ನೀಡಿದ್ದೆವು. ಮಾದರಿ ಮುದ್ರಣ ಮಾಡಿ ತೆಗೆದುಕೊಂಡು ಬಂದಾಗ ಅದರ ಅಳತೆ ಬದಲಾಗಿತ್ತು. ಆದರೆ ಪತ್ರಿಕೆ ಎ4 ಅಳತೆಯಲ್ಲಿ ಬರುತ್ತಿತ್ತು. ಆ ಅಳತೆಯಲ್ಲೇ ಮುದ್ರಿಸಿಬೇಕು ಎಂದು ತೀರ್ಮಾನಿಸಿದ್ದೆವು. ಇಷ್ಟೊತ್ತಿಗೆ ಸಂಪುಟ ಬರಬೇಕಿತ್ತು. 7- 8 ವರ್ಷವಾದರೂ ಚಾರಿತ್ರಿಕವಾದ ಪತ್ರಿಕೆಯ ಸಂಪುಟ ಬರಲಿಲ್ಲ. ಇದರ ಮಹತ್ವವನ್ನು ಗೊತ್ತಿರುವ ಯಾವುದೇ ವ್ಯಕ್ತಿ ಅದನ್ನು ನಿಲ್ಲಿಸುತ್ತಿರಲಿಲ್ಲ. ಪಂಚಮ ಪತ್ರಿಕೆ ಸಂಪುಟಕ್ಕೆ ಎಷ್ಟು ಹಣ ಬೇಕಾಗುತ್ತೋ ಅಷ್ಟು ಹಣವನ್ನು ತೆಗೆದಿಟ್ಟಿದ್ದೆ. ಎಲ್ಲ ಯೋಜನೆಗೂ ನಾನು ಹಣವನ್ನು ಮೀಸಲು ಇಟ್ಟಿದ್ದೆ. ನಂತರ ಬಂದ ಅಧ್ಯಕ್ಷರು ಮೀಸಲಿಟ್ಟಿದ್ದ ಹಣವನ್ನು ಬೇರೆ ಯೋಜನೆಗೆ ಬಳಸಿಕೊಂಡು ಖಾಲಿ ಮಾಡಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಅರವಿಂದ ಮಾಲಗತ್ತಿ ಬೇಸರ ವ್ಯಕ್ತಪಡಿಸಿದ್ದಾರೆ.
ಪಂಚಮ ಪತ್ರಿಕೆಯಲ್ಲಿ ಸುಮಾರು 600 ಪುಟಗಳು ಇವೆ. ಈಗಾಗಲೇ ಮುದ್ರಣಕ್ಕೆ ಸಿದ್ಧವಾಗಿದೆ. ನಮಗೆ ಸಿಬ್ಬಂದಿ ಕೊರತೆ ಇರುವುದರಿಂದ ಸ್ವಲ್ಪತಡವಾಗುತ್ತದೆ. ಈಗಾಗಲೇ ಪಂಚಮ ಪತ್ರಿಕೆಯ ಸಂಪಾದಕರಾಗಿದ್ದ ರಾಮ್‌ದೇವ್ ರಾಖೆ, ಇತರರ ಜತೆಗೆ ಸಭೆ ಮಾಡಿದ್ದೇವೆ. ಪಂಚಮ ಪತ್ರಿಕೆಯ ಸಂಪುಟ ಮುದ್ರಣ ಆಗಿಯೇ ತೀರುತ್ತದೆ.
-ಪ್ರೊ. ಎಲ್.ಎನ್.ಮುಕುಂದರಾಜ್, ಕರ್ನಾಟಕ ಸಾಹಿತ್ಯ ಅಕಾಡಮಿಯ ಅಧ್ಯಕ್ಷ
ಪಂಚಮ ಪತ್ರಿಕೆ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಯಾರ ಹತ್ತಿರ ಇದ್ದವೋ ಅವುಗಳನ್ನು ಸಂಗ್ರಹಿಸಿ, ಪತ್ರಿಕೆ ಹೇಗಿದೆಯೋ ಹಾಗೆಯೇ ಸ್ಕ್ಯಾನ್ ಮಾಡಿಸಿ, ಒಂದು ಸಂಪುಟ ರೀತಿಯಲ್ಲಿ ಮಾಡುತ್ತೇವೆ. ಬಹುತೇಕ ಎಲ್ಲ ಪ್ರತಿಗಳು ಸಿಕ್ಕಿವೆ. ಸಂಪುಟ ಮುದ್ರಣಕ್ಕೆ ತಯಾರಾಗಿದೆ. ಸಮಿತಿ ಸಭೆ ನಡೆಸಿ, ಸಮಿತಿ ಸದಸ್ಯರು ನೋಡಿದ ಮೇಲೆ ಮುದ್ರಿಸಲಾಗುವುದು. ಸುಮಾರು 2 ತಿಂಗಳಲ್ಲಿ ಈ ಕಾರ್ಯ ಮುಗಿಯುತ್ತದೆ.
- ಕರಿಯಪ್ಪ ಎನ್., ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್
ಪಂಚಮ ಪತ್ರಿಕೆ ಮುದ್ರಣದ ಕುರಿತು ನಮ್ಮ ಜತೆಗೆ ಚರ್ಚೆ ಮಾಡಿಲ್ಲ. ಪತ್ರಿಕೆಯನ್ನು ಪ್ರಾರಂಭಿಸಿದವರು ನಾವು. ಅವರಿಗೆ ಬೇಕಾದ ಹಾಗೆ ಮಾಡುವುದಕ್ಕೆ ಆಗುವುದಿಲ್ಲ. ಮುದ್ರಣದ ಬಗ್ಗೆ ನಮ್ಮ ಗಮನಕ್ಕೆ ಇನ್ನೂ ತಂದಿಲ್ಲ. ಅದಕ್ಕೆ ಒಂದು ಸಮಿತಿ ಇತ್ತು. ಹಿಂದೆ ಅದನ್ನು ಸ್ಕ್ಯಾನ್ ಕೂಡ ಮಾಡಲಾಗಿತ್ತು. ಈಗ ಏನೇನು ಆಗಿದೆ ಎಂದು ನಮಗೆ ಗೊತ್ತಿಲ್ಲ. ವಿಚಾರಿಸಬೇಕು. ನಮ್ಮ ಜತೆಗೆ ಚರ್ಚೆ ಮಾಡದೇ ಮುದ್ರಣ ಮಾಡಬಾರದು.
-ಇಂದೂಧರ ಹೊನ್ನಾಪುರ, ಹಿರಿಯ ಪತ್ರಕರ್ತ