ಸೌಜನ್ಯಾ ಮರಣೋತ್ತರ ಪರೀಕ್ಷೆೆ ಸಂದರ್ಭದಲ್ಲಿ ಲೋಪ: ಸರಕಾರಕ್ಕೆ 9 ವರ್ಷಗಳ ಹಿಂದೆಯೇ ಪತ್ರ ಬರೆದಿದ್ದ ಸಿಬಿಐ

ಬೆಂಗಳೂರು: ಉಜಿರೆಯ ಸೌಜನ್ಯಾ ಮರಣೋತ್ತರ ಪರೀಕ್ಷೆ ಸಂದರ್ಭದಲ್ಲಿ ಡಾ.ಆದಂ ಉಸ್ಮಾನ್ ಮತ್ತು ಡಾ.ಎನ್.ರಶ್ಮಿ ಅವರು ಒಳಾಂಗಗಳನ್ನು ಸಂಗ್ರಹಿಸಿ ಸಂರಕ್ಷಿಸಿಡುವಲ್ಲಿ ವಿಫಲರಾಗಿರುವುದೂ ಸೇರಿದಂತೆ ಹಲವು ಲೋಪಗಳ ಕುರಿತು ಸಿಬಿಐ ತನಿಖಾ ಸಂಸ್ಥೆಯು ಸರಕಾರಕ್ಕೆ 9 ವರ್ಷಗಳ ಹಿಂದೆಯೇ ಬರೆದಿದ್ದ ಗೌಪ್ಯ ಪತ್ರವನ್ನು "the-file.in" ಇದೀಗ ಹೊರಗೆಡವುತ್ತಿದೆ.
ಡಾ.ಆದಂ ಉಸ್ಮಾನ್ ಮತ್ತು ಡಾ.ಎನ್.ರಶ್ಮಿ ಅವರ ವಿರುದ್ಧ ಕಠಿಣ ದಂಡನೆಗೆ ಶಿಫಾರಸು ಮಾಡಿ ಸಿಬಿಐ ಬರೆದಿದ್ದ ಪತ್ರವನ್ನು ಮಾಹಿತಿ ಹಕ್ಕಿನ ಅಡಿಯಲ್ಲಿ ಒದಗಿಸಬೇಕೆ ಬೇಡವೇ ಎಂಬ ಕುರಿತು ಆರೋಗ್ಯ ಇಲಾಖೆಯು ಸಿಬಿಐಗೆ 2 ಬಾರಿ ಪತ್ರ ಬರೆದಿತ್ತು. ಆದರೀಗ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆಯು ಆರ್‌ಟಿಐ ಅಡಿಯಲ್ಲಿ ನೀಡಿರುವ ಕಡತದಲ್ಲಿ ಸಿಬಿಐ ಬರೆದಿದ್ದ ಗೌಪ್ಯ ಪತ್ರವೂ ಇದೆ.
ಡಾ.ಆದಂ ಉಸ್ಮಾನ್ ಮತ್ತು ಡಾ.ಎನ್.ರಶ್ಮಿ ಅವರ ವಿರುದ್ಧ ಕಠಿಣ ದಂಡನೆ ಮತ್ತು ಇಲಾಖೆ ವಿಚಾರಣೆ ನಡೆಸುವ ಸಂಬಂಧ ಸಿಬಿಐ ಸಂಸ್ಥೆಯು 2016ರ ಮಾರ್ಚ್ 7ರಂದು ಗೃಹ ಇಲಾಖೆಗೆ ಗೌಪ್ಯ ಪತ್ರ ಬರೆದಿತ್ತು. 184 ಪುಟಗಳನ್ನು ಒಳಗೊಂಡಿರುವ ಕಡತವನ್ನು "ಣhe-ಜಿiಟe", ಆರ್‌ಟಿಐ ಅಡಿಯಲ್ಲಿ ಪಡೆದುಕೊಂಡಿದೆ.
ಸೌಜನ್ಯಾಳ ಮರಣೋತ್ತರ ಪರೀಕ್ಷೆಯ ವರದಿಯು ಆಕೆಯ ಸಾವಿಗೆ ಕಾರಣವನ್ನು ತಿಳಿಸುತ್ತದೆ ಮತ್ತು ಅತ್ಯಾಚಾರ ಮತ್ತು ಕೊಲೆಯಂತಹ ಆರೋಪಗಳನ್ನು ಪರಿಶೀಲಿಸಲು ಸಹಾಯ ಮಾಡುತ್ತದೆ. ಮರಣೋತ್ತರ ಪರೀಕ್ಷೆ ವರದಿಯು ತನಿಖೆಯ ಪ್ರಮುಖ ಭಾಗವಾಗಿದೆ. ಅತ್ಯಾಚಾರ ಮತ್ತು ಕೊಲೆಯ ಆರೋಪಗಳನ್ನು ಪರಿಶೀಲಿಸಲು ಮರಣೋತ್ತರ ಪರೀಕ್ಷೆಯು ಸಹಾಯ ಮಾಡಲಿದೆ.
ಧರ್ಮಸ್ಥಳದಲ್ಲಿ ಹಲವು ಶವಗಳನ್ನು ಹೂತು ಹಾಕಿರುವುದಾಗಿ ಹೇಳಿಕೆ ನೀಡಿದ್ದ ವ್ಯಕ್ತಿಯ ಪರವಾಗಿ ವಕೀಲರು ಪೊಲೀಸರಿಗೆ ಕಳೇಬರದ ಫೋಟೊಗಳನ್ನು ನೀಡಿರುವ ಬೆನ್ನಲ್ಲೇ ಸೌಜನ್ಯಾ ಮರಣೋತ್ತರ ಪರೀಕ್ಷೆಯಲ್ಲಿನ ಲೋಪಗಳ ಕುರಿತು ಸಿಬಿಐ ಸಂಸ್ಥೆಯು ಸರಕಾರಕ್ಕೆ ಬರೆದಿದ್ದ ಗೌಪ್ಯ ಪತ್ರವು ಮುನ್ನೆಲೆಗೆ ಬಂದಿದೆ.
ಸಿಬಿಐ ಗೌಪ್ಯ ಪತ್ರದಲ್ಲೇನಿದೆ?
ಸೌಜನ್ಯಾಳ ಮರಣೋತ್ತರ ಪರೀಕ್ಷೆಯನ್ನು ಡಾ.ಆದಂ ಉಸ್ಮಾನ್ ಮತ್ತು ಡಾ.ಎನ್.ರಶ್ಮಿ ಅವರು 2012ರ ಅಕ್ಟೋಬರ್ 10ರಂದು ಸಂಜೆ 6ರಿಂದ 7:30ರವರೆಗೆ ನಡೆಸಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ ಡಾ.ಆದಂ ಮತ್ತು ಡಾ. ರಶ್ಮಿ ಅವರು ವಜಿನಲ್ ಸ್ವಾಬ್‌ಅನ್ನು ಸರಿಯಾಗಿ ಸಂಗ್ರಹಿಸಲು ವಿಫಲರಾದರು. ಇದರಿಂದಾಗಿ ಬೆಂಗಳೂರಿನಲ್ಲಿರುವ ಡಿಎನ್‌ಎ ಕೇಂದ್ರಕ್ಕೆ ಮಹಿಳೆಯ ವಜಿನಲ್ ಸ್ವಾಬ್ ಸಿಗಲಿಲ್ಲ ಎಂಬದು ತನಿಖೆ ವೇಳೆ ಗೊತ್ತಾಗಿದೆ ಎಂದು ಪತ್ರದಲ್ಲಿ ಸಿಬಿಐ ಹೇಳಿದೆ.
2012 ಅಕ್ಟೋಬರ್ 9ರಂದು ಸೌಜನ್ಯಾ ತನ್ನ ಊಟದ ಡಬ್ಬಿಯನ್ನು ತೆಗೆದುಕೊಂಡು ಹೋಗಿರಲಿಲ್ಲ. ಊಟದ ವಿರಾಮದ ಸಮಯದಲ್ಲಿ ತನ್ನ ಸಹಪಾಠಿಗಳು ನೀಡಿದ್ದ ಆಹಾರವನ್ನೂ ಸ್ವೀಕರಿಸಲಿಲ್ಲ. ತನ್ನ ಮನೆಗೆ ಹಿಂದಿರುಗಿದ್ದಳು. ಹಾಗೂ ಅಜ್ಜನ ಮನೆಯಲ್ಲಿ ನಿಗದಿಯಾಗಿದ್ದ ಸಮಾರಂಭದಲ್ಲಿ ಊಟ ಮಾಡುವ ಉದ್ದೇಶದಿಂದ ಸಹಪಾಠಿಗಳು ನೀಡಿದ್ದ ಊಟ ಮಾಡಿರಲಿಲ್ಲ.
ಆದರೆ ಡಾ.ಆದಂ ಉಸ್ಮಾನ್ ಮತ್ತು ಡಾ.ಎನ್.ರಶ್ಮಿ ಅವರು ಮರಣೋತ್ತರ ಪರೀಕ್ಷೆ ವೇಳೆಯಲ್ಲಿ ಸೌಜನ್ಯಾಳ ಹೊಟ್ಟೆಯಲ್ಲಿ ಜೀರ್ಣವಾಗದ ಆಹಾರ ಕಣಗಳು ಮತ್ತು ಸಣ್ಣ ಕರುಳಿನಲ್ಲಿ ಅರೆ-ಜೀರ್ಣವಾದ ಆಹಾರ ಕಣಗಳು ಕಂಡುಬಂದಿವೆ ಎಂದು ಅಭಿಪ್ರಾಯಿಸಿದ್ದರು. ಆದರೆ ಅದು ಅಸಂಭವ. ಏಕೆಂದರೆ ಅರೆ-ಜೀರ್ಣವಾದ ಆಹಾರ ಕಣಗಳನ್ನು ಹೊಂದಿರುವ ಸಣ್ಣ ಕರುಳು ವೈದ್ಯಕೀಯವಾಗಿ ನಿರ್ಣಾಯಕವಲ್ಲ. ಏಕೆಂದರೆ ಸಣ್ಣ ಕರುಳಿನಲ್ಲಿ ಹೀರಿಕೊಳ್ಳುವಿಕೆ ನಡೆದ ನಂತರ ಆಹಾರ ಕಣಗಳನ್ನು ಗುರುತಿಸಲು ಸಾಧ್ಯವಿಲ್ಲ. ಪಿತ್ತರಸದ ಮಿಶ್ರಣದಿಂದಾಗಿ (ರಸದಿಂದ) ವಿಷಯಗಳು ಅರೆ-ಲೋಳೆ ರಸ ವಸ್ತುವಾಗಿ ಪರಿವರ್ತನೆಗೊಳ್ಳುತ್ತವೆ ಎಂದು ಸಿಬಿಐ ಸಂಸ್ಥೆಯು ತನ್ನ ಪತ್ರದಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಅಲ್ಲದೆ ಡಾ.ಆದಂ ಉಸ್ಮಾನ್ ಮತ್ತು ಡಾ.ಎನ್.ರಶ್ಮಿ ಅವರು ಸೌಜನ್ಯಾಳ ಒಳಾಂಗಗಳನ್ನು ಸಂಗ್ರಹಿಸಲು ಮತ್ತು ಸಂರಕ್ಷಿಸಲು ವಿಫಲರಾದರು. ಮತ್ತು ಮರಣೋತ್ತರ ಪ್ರಕ್ರಿಯೆಗಳನ್ನು ವೀಡಿಯೊ-ಚಿತ್ರೀಕರಿಸಲಿಲ್ಲ. ಬಲಿಪಶುವಿನ ಬಲ ಮಣಿಕಟ್ಟಿನ ಮೇಲಿನ ವೃತ್ತಾಕಾರದ ಒತ್ತಡದ ಸವೆತವನ್ನು ಮರಣೋತ್ತರ ವರದಿಯಲ್ಲಿ ದಾಖಲಿಸಲು ಅವರು ವಿಫಲರಾಗಿದ್ದಾರೆ. ಇದು ಬಲಿಪಶುವಿನ ಛಾಯಾಚಿತ್ರಗಳಿಂದ ಬರಿಗಣ್ಣಿಗೆ ಗೋಚರಿಸುತ್ತದೆ ಎಂದು ಪತ್ರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಕತ್ತು ಹಿಸುಕಿದ ಗುರುತು ಹೊಂದಿರುವ ಚರ್ಮವನ್ನು ಸಂರಕ್ಷಿಸಲು ಮತ್ತು ಬಲಿಪಶುವಿನ ಕುತ್ತಿಗೆ ಅಂಗಾಂಶದೊಂದಿಗೆ ಹಿಸ್ಟೋಪಥಾಲಾಜಿಕಲ್ ಪರೀಕ್ಷೆಗೆ ಕಳಿಸುವಲ್ಲಿಯೂ ವಿಫಲರಾದರು ಎಂದು ಸಿಬಿಐ ತನ್ನ ಪತ್ರದಲ್ಲಿ ದಾಖಲಿಸಿರುವುದು ಗೊತ್ತಾಗಿದೆ.
ಮರಣೋತ್ತರ ಪರೀಕ್ಷೆ ನಡೆಸಿರುವ ಕುರಿತಾದ ಎಲ್ಲ ದಾಖಲೆ, ವರದಿಗಳ ತನಿಖೆ ಪೂರ್ಣಗೊಂಡ ನಂತರ ಸಿಬಿಐ ಸಂಸ್ಥೆಯು ಡಾ.ಆದಂ ಉಸ್ಮಾನ್ ಮತ್ತು ಡಾ.ಎನ್.ರಶ್ಮಿ ಅವರ ವೃತ್ತಿಪರ ಲೋಪಗಳನ್ನು ಸಾಬೀತುಪಡಿಸಿತ್ತು. ಇದನ್ನಾಧರಿಸಿಯೇ ಕಠಿಣ ದಂಡ ವಿಧಿಸಬೇಕು ಎಂದು ಸರಕಾರಕ್ಕೆ ಶಿಫಾರಸು ಮಾಡಿತ್ತು ಎಂಬುದು ಪತ್ರದಿಂದ ತಿಳಿದು ಬಂದಿದೆ.
ಆರೋಪಿ ಸಂತೋಷ್ ರಾವ್ ವಿರುದ್ಧ ಐಪಿಸಿ ಸೆಕ್ಷನ್ 376 ಮತ್ತು 302 ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಡಾ.ಆದಂ ಉಸ್ಮಾನ್ ಮತ್ತು ಡಾ.ಎನ್.ರಶ್ಮಿ ಅವರು ಮಾಡಿರುವ ಲೋಪಗಳಿಗಾಗಿ ಅವರ ವಿರುದ್ಧ ಕಠಿಣ ದಂಡನೆ ವಿಧಿಸುವ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಶಿಫಾರಸು ಮಾಡಿರುವ ಸಿಬಿಐ ಸಂಸ್ಥೆಯು, ಸರಕಾರವು 1972ರ ಇಲಾಖೆ ವಿಚಾರಣೆ (ಸಾಕ್ಷಿಗಳ ಹಾಜರಾತಿ ಮತ್ತು ದಾಖಲೆಗಳ ಸಲ್ಲಿಕೆ ) ಕಾಯ್ದೆ ಅಡಿಯಲ್ಲಿ ನೀಡಿರುವ ಅಧಿಕಾರ ಬಳಸಬಹುದು. ಈ ಮೂಲಕ ಸಾಕ್ಷಿಗಳಿಗೆ ಸಮನ್ಸ್ ನೀಡಬಹುದು ಎಂದೂ ಸಿಬಿಐ ಪತ್ರದಲ್ಲಿ ಶಿಫಾರಸು ಮಾಡಿರುವುದು ಗೊತ್ತಾಗಿದೆ.
ಸಿಬಿಐ ಸಂಸ್ಥೆಯು ನೀಡಿರುವ ಈ ವರದಿಯನ್ನು ಗೌಪ್ಯ ಎಂದು ಪರಿಗಣಿಸಬೇಕು. ಆರ್‌ಟಿಐ ಅಡಿಯಲ್ಲಿ ಮಾಹಿತಿ ಕೋರಿದರೆ, ಸಿಬಿಐಗೆ ಮಾಹಿತಿ ತಿಳಿಸಬೇಕು ಎಂದು ಹೇಳಿರುವುದು ತಿಳಿದು ಬಂದಿದೆ.
ಸೌಜನ್ಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಾ.ಆದಂ ಉಸ್ಮಾನ್ ಮತ್ತು ಡಾ.ಎನ್.ರಶ್ಮಿ ಅವರ ವಿರುದ್ಧ ಕಠಿಣ ದಂಡನೆ ವಿಧಿಸಬೇಕು ಎಂದು ಸಿಬಿಐ ಸಂಸ್ಥೆಯು ಮಾಡಿದ್ದ ಶಿಫಾರಸಿನ ಕುರಿತು ಕೈಗೊಂಡಿರುವ ಕ್ರಮಗಳ ಕುರಿತಾದ ಮಾಹಿತಿಯನ್ನು ಸಾರ್ವಜನಿಕಗೊಳಿಸಬಹುದೇ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಸಿಬಿಐ ಸಂಸ್ಥೆಗೆ ಪತ್ರ ಬರೆದಿದೆ.