ಮುದ್ರಾಂಕ ಸುಂಕ, ನೋಂದಣಿ ಶುಲ್ಕ ವಿಧಿಸುವಾಗ ದಾಖಲೆಗಳ ತಪ್ಪು ವರ್ಗೀಕರಣ

ಸಾಂದರ್ಭಿಕ ಚಿತ್ರ
ಬೆಂಗಳೂರು: ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕ ವಿಧಿಸುವ ಸಂದರ್ಭದಲ್ಲಿ ದಾಖಲೆಗಳನ್ನು ತಪ್ಪುವರ್ಗೀಕರಣ ಮಾಡುತ್ತಿರುವುದರಿಂದಾಗಿಯೇ ಸರಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ತೆರಿಗೆ ಸೋರಿಕೆಯಾಗುತ್ತಿದೆ ಎಂದು ಪ್ರಧಾನ ಮಹಾಲೇಖಪಾಲರು ಬಹಿರಂಗಗೊಳಿಸಿದ್ದಾರೆ.
ಕರ್ನಾಟಕ ಮುದ್ರಾಂಕ ಅಧಿನಿಯಮ 1957ರ ಪರಿಚ್ಛೇದ 3ನ್ನು ಉಲ್ಲಂಘಿಸಿರುವ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿರುವ ಪ್ರಧಾನ ಮಹಾಲೇಖಪಾಲರು, ನೋಂದಣಿಯ ದಸ್ತಾವೇಜುಗಳು, ನೋಂದಣಿ ಶುಲ್ಕ, ತಿಳಿವಳಿಕೆ ಪತ್ರ, ಮಾರಾಟ ಒಪ್ಪಂದಗಳಿಗೆ ಸಂಬಂಧಿಸಿದಂತೆ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ದಾಖಲೆಗಳ ಪರಿಶೀಲನೆ ಕಾರ್ಯಚಟುವಟಿಕೆಗಳನ್ನು ತಪಾಸಣೆಗೆ ಒಳಪಡಿಸಿದ್ದಾರೆ.
2025ರ ಆಗಸ್ಟ್ನಲ್ಲಿ ನಡೆದ ಕರ್ನಾಟಕ ವಿಧಾನಮಂಡಲದಲ್ಲಿ ನಡೆದ ಅಧಿವೇಶನದಲ್ಲಿ ಮಂಡನೆಯಾಗಿರುವ ಸಿಎಜಿ ವರದಿಯು ನೋಂದಣಿ ಮುದ್ರಾಂಕ ಇಲಾಖೆಯಲ್ಲಿನ ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ ಸರಕಾರದ ಬೊಕ್ಕಸಕ್ಕೆ ಆಗಿರುವ ನಷ್ಟ, ತೆರಿಗೆ ಸೋರಿಕೆ ಪ್ರಕರಣಗಳನ್ನು ವಿವರಿಸಿದೆ.
2019ರ ಜೂನ್ ಮತ್ತು 2022ರ ಜನವರಿ ಮಧ್ಯೆ ಬೆಂಗಳೂರಿನ ಮಹದೇವಪುರ, ನೆಲಮಂಗಲ, ಶ್ರೀರಾಂಪುರದಲ್ಲಿರುವ ಉಪ ನೋಂದಣಿ ಅಧಿಕಾರಿಗಳ ಕಚೇರಿಗಳನ್ನು ಲೆಕ್ಕ ಪರಿಶೋಧನೆಗೆ ಒಳಪಡಿಸಿತ್ತು. ಈ ವೇಳೆ 167 ದಾಖಲೆಗಳನ್ನು ಲೆಕ್ಕ ಪರಿಶೋಧನೆ ತಂಡವು ಪರಿಶೀಲನೆ ನಡೆಸಿತ್ತು. ಅದರಲ್ಲೂ ವಿಶೇಷವಾಗಿ ಮಾರಾಟ ಒಪ್ಪಂದ ಮತ್ತು ಎಂದು ವರ್ಗೀಕರಿಸಲಾಗಿದ್ದ ಜಂಟಿ ಅಭಿವೃದ್ದಿ ಒಪ್ಪಂದಗಳನ್ನು ತಪಾಸಣೆಗೆ ಒಳಪಡಿಸಿರುವುದು ಸಿಎಜಿ ವರದಿಯಿಂದ ಗೊತ್ತಾಗಿದೆ.
ಮಹದೇವಪುರ ಮತ್ತು ನೆಲಮಂಗಲದ ಉಪ ನೋಂದಣಿ ಕಚೇರಿಗಳ ಲೆಕ್ಕ ಪರಿಶೋಧನೆಯ ಸಮಯದಲ್ಲಿ ಪ್ರತಿ ಕಚೇರಿಯಲ್ಲಿ ಜಂಟಿ ಅಭಿವೃದ್ಧಿ ಒಪ್ಪಂದಗಳನ್ನು ಸ್ವಾಧೀನವಿಲ್ಲದೇ ಮಾರಾಟ ಒಪ್ಪಂದವಾಗಿ ನೋಂದಾಯಿಸಿರುವ ಪ್ರಕರಣಗಳನ್ನು ಪತ್ತೆ ಹಚ್ಚಿದೆ.
ಎರಡನೇ ಪ್ರಕರಣದಲ್ಲಿಯೂ ಸಹ ಭೂಮಿಯನ್ನು ವಸತಿ ನಿವೇಶನಗಳ ವಿನ್ಯಾಸವಾಗಿ ಅಭಿವೃದ್ಧಿ ಪಡಿಸಲು ಒಪ್ಪಿಕೊಂಡಿವೆ. ಮತ್ತು ಅಭಿವೃದ್ಧಿ ವಿಧಾನಗಳನ್ನು ವಿವರಿಸಿದೆ. ಅಭಿವೃದ್ಧಿ ಹೊಂದಿದ ನಿವೇಶನಗಳ ಪ್ರತಿ ಚದರ ಅಡಿಗೆ ಮಾಲಕರು ಪಾಲು 1,008 ರೂ.ಎಂದು ಹೇಳಿದೆ. ಈ ಎರಡೂ ಪ್ರಕರಣಗಳಲ್ಲಿ ಭೂಮಿಯ ಅಭಿವೃದ್ಧಿ ಮತ್ತು ಅವುಗಳ ನಂತರದ ಹಂಚಿಕೆಯ ವಿಧಾನಗಳನ್ನು ದಾಖಲೆಗಳಲ್ಲಿ ತರಲಾಗಿದೆ. ಆದರೂ ಉಪ ನೋಂದಣಾಧಿಕಾರಿಗಳು ಕರ್ನಾಟಕ ಮುದ್ರಾಂಕ ಅಧಿನಿಯಮ ಕಲಂ 5 (ಇ) () ಅಡಿಯಲ್ಲಿ ಮತ್ತು ನೋಂದಣಿ ಅಧಿನಿಯಮ ಕಲಂ 1ರ ಟಿಪ್ಪಣಿ 7ರ ಷರತ್ತು (ಎ) ಅಡಿಯಲ್ಲಿ ತಪ್ಪಾಗಿ ವರ್ಗೀಕರಿಸಿದ್ದನ್ನು ಸಿಎಜಿಯು ಲೆಕ್ಕ ಪರಿಶೋಧನೆ ವೇಳೆ ಪತ್ತೆ ಹಚ್ಚಿರುವುದು ವರದಿಯಿಂದ ತಿಳಿದು ಬಂದಿದೆ.
ಉಪ ನೊಂದಣಾಧಿಕಾರಿಗಳ ಈ ಕ್ರಮದಿಂದಾಗಿ ಮೊದಲ ಪ್ರಕರಣದಲ್ಲಿ ಕ್ರಮವಾಗಿ 9.20 ಲಕ್ಷ ರೂ.ಮತ್ತು 4.60 ಲಕ್ಷ ರೂ. ಬದಲಿಗೆ 500 ರೂ. (ಮುದ್ರಾಂಕ ಸುಂಕ) ಮತ್ತು 200 ರೂ. (ನೋಂದಣಿ ಶುಲ್ಕ) ವಿಧಿಸಲಾಗಿತ್ತು. ಮತ್ತು ಎರಡನೇ ಪ್ರಕರಣದಲ್ಲಿ ಕ್ರಮವಾಗಿ 89.61 ಲಕ್ಷ ಮತ್ತು 44.80 ಲಕ್ಷದ ಬದಲಿಗೆ 20,000 ರೂ. ಮುದ್ರಾಂಕ ಸುಂಕ ಮತ್ತು 200 ರೂ. ನೋಂದಣಿ ಶುಲ್ಕವನ್ನು ವಿಧಿಸಲಾಗಿತ್ತು.
ಹೀಗಾಗಿ ಮುದ್ರಾಂಕದ ಅಧಿನಿಯಮದ ಕಲಂ 5 (ಎಫ್) ಮತ್ತು ನೋಂದಣಿ ಅಧಿನಿಯಮದ ಕಲಂ (ಎ) ಅಡಿಯಲ್ಲಿ ಈ ದಾಖಲೆಗಳನ್ನು ಸರಿಯಾಗಿ ವರ್ಗೀಕರಿಸುವ ಬದಲು ತಪ್ಪಾಗಿ ವರ್ಗೀಕರಿಸಲಾಗಿತ್ತು.ಇದರಿಂದಾಗಿ 1.48 ಕೋಟಿ ರೂ.ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕ ಕಡಿಮೆ ತೆರಿಗೆಗೆ ಕಾರಣವಾಯಿತು,’ ಎಂದು ಸಿಎಜಿಯು ಅಭಿಪ್ರಾಯಿಸಿರುವುದು ಗೊತ್ತಾಗಿದೆ.
ಶ್ರೀರಾಂಪುರ ಉಪ ನೋಂದಣಿ ಕಚೇರಿಯಲ್ಲಿ ಲೆಕ್ಕ ಪರಿಶೋಧನೆ ನಡೆಸಿದ್ದ ಪ್ರಧಾನ ಮಹಾಲೇಖಪಾಲರು ಒಬ್ಬ ಮಾರಾಟಗಾರ ಆರು ಖರೀದಿದಾರರ ಪರವಾಗಿ ಆರು ಮಾರಾಟ ಒಪ್ಪಂದಗಳನ್ನು ಮಾಡಿಕೊಂಡಿರುವುದನ್ನು ಪತ್ತೆ ಹಚ್ಚಿದೆ.
ಅದರಲ್ಲಿ ಆರು ವಿಭಿನ್ನ ಭೂಮಿಯನ್ನು ಮಾರಾಟಗಾರರ ಮಾಲಕತ್ವಕ್ಕೆ ವರ್ಗಾಯಿಸಲು ಒಪ್ಪಿಕೊಂಡಿತ್ತು. ಈ ಮಾರಾಟ ಒಪ್ಪಂದಗಳೊಂದಿಗೆ ಖರೀದಿದಾರರಿಗೆ ಅವರ ಭೂ ಭಾಗಗಳಿಗೆ ನೀಡಲಾಗಿದ್ದ 6 ವ್ಯವಹಾರಾಧಿಕಾರದ ದಾಖಲೆಗಳನ್ನೂ ನೀಡಲಾಗಿತ್ತು ಎಂದು ವರದಿಯಲ್ಲಿ ವಿವರಿಸಿದೆ.
ಈ ಪ್ರಕರಣದಲ್ಲಿಯೂ ದಾಖಲೆಗಳನ್ನು ತಪ್ಪಾಗಿ ವರ್ಗೀಕರಣ ಮಾಡಲಾಗಿದೆ. ಇದರಿಂದಾಗಿ 10.36 ಲಕ್ಷ ರೂ. ನೋಂದಣಿ ಶುಲ್ಕದ ಕೊರತೆಯುಂಟಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಚಿಕ್ಕಮಗಳೂರು, ಕಡೂರು, ಸಿಂಧನೂರು, ಶ್ರೀರಂಗಪಟ್ಟಣ, ವರ್ತೂರು ಮತ್ತು ಯಲಹಂಕದ ಉಪ ನೋಂದಣಿ ಕಚೇರಿಗಳು ವಿಶೇಷ ಸೂಚನೆಯನ್ನು ಪಾಲಿಸಿಲ್ಲ. ಹೀಗಾಗಿ ಮುದ್ರಾಂಕ ಸುಂಕ ಮತ್ತು ನೋಂದಣಿ ಶುಲ್ಕವನ್ನು ಕಡಿಮೆ ಪ್ರಮಾಣದಲ್ಲಿ ವಿಧಿಸಿತ್ತು.
ರಾಜ್ಯದಲ್ಲಿ ನೆಲೆಗೊಂಡಿರುವ ಆಸ್ತಿಗಳಿಗೆ ಮಾರುಕಟ್ಟೆ ಮೌಲ್ಯಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಕೇಂದ್ರ ಮೌಲ್ಯಮಾಪನ ಸಮಿತಿಯು ನಿಗದಿಪಡಿಸುತ್ತದೆ. ಇದು ಪ್ರತಿ ಉಪ ನೋಂದಣಾಧಿಕಾರಿಗಳ ಅಧಿಕಾರ ವ್ಯಾಪ್ತಿಯಲ್ಲಿರುವ ಪ್ರದೇಶಗಳಲ್ಲಿನ ಆಸ್ತಿಗಳ ಸಾಮಾನ್ಯ ದರಗಳನ್ನು ನಿಗದಿಪಡಿಸಿದೆ.