ಪ್ರವಾಸಿಗರನ್ನು ಸೆಳೆಯುತ್ತಿದೆ ಚಿತ್ತಾಪುರದ ಲುಂಬಿನಿ ಉದ್ಯಾನವನ

ಕಲಬುರಗಿ: ಇಲ್ಲಿನ ಚಿಂಚೋಳಿ ವನ್ಯಜೀವಿ ಧಾಮ, ಜಲಪಾತಗಳು, ದೇವಸ್ಥಾನ, ದರ್ಗಾ, ಜಾಮಿಯಾ ಮಸೀದಿ, ಬೌದ್ಧ ವಿಹಾರ, ಐತಿಹಾಸಿಕ ಕಟ್ಟಡಗಳು ಸೇರಿದಂತೆ ವಿವಿಧ ಪ್ರವಾಸಿ ತಾಣಗಳು ರಾಜ್ಯದ, ಹೊರ ರಾಜ್ಯ, ವಿದೇಶಿ ಪ್ರವಾಸಿಗರಿಗೆ ‘ಹಾಟ್ ಸ್ಪಾಟ್’ ಕೇಂದ್ರಗಳಾಗಿ ಆಕರ್ಷಿಸುತ್ತಿವೆ. ಅದರ ಜೊತೆಗೆ ಇತ್ತೀಚೆಗೆ ಕಣ್ಮನ ಸೆಳೆಯುತ್ತಿರುವ ಚಿತ್ತಾಪುರದ ಲುಂಬಿನಿ ಉದ್ಯಾನವನ ಕೂಡ ಪ್ರವಾಸಿಗರನ್ನು ಸೆಳೆಯುತ್ತಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಸಮೀಪ ನಿರ್ಮಾಣಗೊಂಡಿರುವ ಲುಂಬಿನಿ ಪಾರ್ಕ್ ಪ್ರವಾಸಿಗರು, ಸಾರ್ವಜನಿಕರು, ಕಲಾವಿದರನ್ನು ಸೇರಿದಂತೆ ಮಕ್ಕಳನ್ನೂ ಕೈ ಬೀಸಿ ಕರೆಯುತ್ತಿದೆ. ಸುಮಾರು 17 ಎಕರೆ ವಿಸ್ತಾರದ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಆಕರ್ಷಕ ಲುಂಬಿನಿ ಉದ್ಯಾನವನ ತನ್ನ ಚಿತ್ತಾಕರ್ಷಕ ಮರಗಿಡಗಳಿಂದ, ಹೂ ಬಳ್ಳಿಗಳಿಂದ, ಸಣ್ಣಗೆ ಹರಿಯುವ ಝರಿಯಿಂದಾಗಿ ಪರಿಸರ ಪ್ರೇಮಿಗಳನ್ನೂ ಸ್ವಾಗತಿಸುತ್ತಿದೆ.
ಲುಂಬಿನಿ ಉದ್ಯಾನವನದಲ್ಲೇನಿವೆ? :
ಅಂದಾಜು 2.14 ಕೋಟಿ ರೂ. ವೆಚ್ಚದಲ್ಲಿ ಸುಮಾರು 17 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ಪಾರ್ಕ್‌ನಲ್ಲಿ ಸಾಂಸ್ಕೃತಿಕ, ಕಲೆ, ಸಾಹಿತ್ಯ ಹಾಗೂ ರಂಗಚಟುವಟಿಕೆಗಳಿಗಾಗಿ ಬಯಲು ರಂಗಮಂದಿರ ನಿರ್ಮಾಣ ಮಾಡಲಾಗಿದೆ, ಪುಟ್ಟ ಗ್ರಂಥಾಲಯ, ಚಿಟ್ಟೆ ಪಾರ್ಕ್, 50 ಸ್ಥಳೀಯ ಜಾತಿಯ 2,000ಕ್ಕೂ ಅಧಿಕ ಸಸಿ ನೆಟ್ಟು ಮಿಯಾವಾಕಿ ಅರಣ್ಯ ನಿರ್ಮಾಣ, ವನ್ಯಜೀವಿ ಮೂರ್ತಿಗಳು, ಮಕ್ಕಳಿಗೆ ಆಟವಾಡಲು ಬೇಕಾಗುವ ಜೋಕಾಲಿ, ಜಾರುಬಂಡಿ ಮುಂತಾದ ಆಟೋಪಕರಣಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಶುದ್ಧ ಕುಡಿಯುವ ನೀರು, ಶೌಚಾಲಯ ಇತ್ಯಾದಿ ಸೌಲಭ್ಯ ಒದಗಿಸಲಾಗಿದೆ. ಕಲಬುರಗಿ ನಗರದಿಂದ ಸೇಡಂ ಪಟ್ಟಣಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಸುಮಾರು 25 ಕಿ.ಮೀ. ಸಾಗಿದರೆ ಗುಂಡಗುರ್ತಿ ಗ್ರಾಮದ ಸಮೀಪ ಈ ಉದ್ಯಾನವನ ನೋಡಬಹುದು.
ಚಿಟ್ಟೆ ಪಾರ್ಕ್ ಪ್ರಮುಖ ಆಕರ್ಷಣೆ :
ಚಿಟ್ಟೆ ವನ ಈ ಲುಂಬಿನಿ ಉದ್ಯಾನದವನ ಪ್ರಮುಖ ಆಕರ್ಷಣೆಯಾಗಿದೆ. ಇದು ಕೂಡಾ ಚಿಟ್ಟೆ ಆಕಾರದಲ್ಲಿಯೇ ನಿರ್ಮಾಣ ಮಾಡಲಾಗಿದೆ. 51 ವಿಭಿನ್ನ ಪ್ರಭೇದದ ಚಿಟ್ಟೆಗಳನ್ನು ತಂದು ಇಲ್ಲಿ ಬಿಡಲಾಗಿದೆ. ಇಲ್ಲಿನ ಚಿಟ್ಟೆಗಳಿಗೆ ಆಹಾರ ಒದಗಿಸಲು ಹಾಗೂ ಸಂತಾನೋತ್ಪತ್ತಿಗೆ ಸಹಕಾರಿಯಾಗಲು ಅನುಕೂಲವಾಗುವಂತ ಹೋಸ್ಟ್ ಹಾಗೂ ನೆಕ್ಟರ್ ಜಾತಿಯ ಗಿಡಗಳನ್ನು ಆಂಧ್ರಪ್ರದೇಶದ ರಾಜಮಂಡ್ರಿಯಿಂದ ತರಿಸಿ ನೆಡಲಾಗಿದೆ. ಉದ್ಯಾನವನಕ್ಕೆ ಭೇಟಿ ನೀಡುವ ಸಾರ್ವಜನಿಕರಿಗೆ ಮೃಗಾಲಯದಲ್ಲಿ ಲಭ್ಯವಿರುವ ವನ್ಯಜೀವಿಗಳ ಪರಿಕಲ್ಪನೆ ಮೂಡಿಸಲು ಅದೇ ಮಾದರಿಯ ಚಿರತೆ, ಜಿಂಕೆ, ನವಿಲು, ಕರಡಿ, ಕೃಷ್ಣಮೃಗ ಸೇರಿದಂತೆ ಬೇರೆ ಬೇರೆ ಪ್ರಾಣಿಗಳ ಮೂರ್ತಿಗಳನ್ನು ನಿರ್ಮಾಣ ಮಾಡಲಾಗಿದೆ. ಇದು ವನ್ಯಜೀವಿಗಳ ಬಗ್ಗೆ ಪ್ರವಾಸಿಗರಿಗೆ ಅರಿವು ಮೂಡಿಸುವುದರ ಜೊತೆಗೆ ಅವುಗಳ ಸಂರಕ್ಷಣೆಯ ಮಹತ್ವವನ್ನು ತಿಳಿಸುವ ಉದ್ದೇಶ ಹೊಂದಲಾಗಿದೆ.
ಪ್ರಿಯಾಂಕ್ ಖರ್ಗೆ ಕನಸಿನ ಪುಟ್ಟ ಗ್ರಂಥಾಲಯ :
ವಿದ್ಯೆ, ಓದಿಗೆ ಹಾಗೂ ಜ್ಞಾನಾರ್ಜನೆಗೆ ಪುಸ್ತಕಗಳು ಅತ್ಯವಶ್ಯ ಎಂದು ಬಲವಾಗಿ ಪ್ರತಿಪಾದಿಸುವ ಸಚಿವ ಪ್ರಿಯಾಂಕ್ ಖರ್ಗೆ ಅವರ ಕನಸಿನಂತೆ ಉದ್ಯಾನವನದಲ್ಲಿ ಪುಟ್ಟ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ. ಇಲ್ಲಿ ಎಲ್ಲ ತರದ ಪುಸ್ತಕಗಳನ್ನು ಇರಿಸಲಾಗಿದ್ದು, ಪ್ರವಾಸಿಗರು ಸುಂದರ ಪರಿಸರದ ಸವಿಯ ಜೊತೆಗೆ ಜ್ಞಾನದ ಹಸಿವನ್ನು ನೀಗಿಸಿಕೊಳ್ಳುಲು ಅನುಕೂಲವಾಗುವಂತೆ ಈ ಗ್ರಂಥಾಲಯ ನಿರ್ಮಾಣ ಮಾಡಲಾಗಿದೆ. ಸಚಿವರು ತಮ್ಮ ಭೇಟಿಗೆ ಬರುವವರಿಂದ ಉಡುಗೊರೆಯಾಗಿ ಪಡೆದ ಪುಸ್ತಕಗಳನ್ನು ಇಲ್ಲಿಗೆ ನೀಡಿದ್ದಾರೆ.
ಲುಂಬಿನಿ ಉದ್ಯಾನವನದಲ್ಲಿ ಚಿಟ್ಟೆ ಪಾರ್ಕ್, ಗ್ರಂಥಾಲಯ, ವಿಭಿನ್ನ ಬಗೆಯ ಮರಗಿಡಗಳು, ಹೂವುಗಳು ಇತ್ಯಾದಿ ಪ್ರವಾಸಿಗರ ಮನಸೆಳೆಯುತ್ತವೆ. ಸುಸಜ್ಜಿತ ಹಾಗೂ ಸುಂದರ ಉದ್ಯಾನವನ ನಿರ್ಮಾಣದ ಕನಸು ನನಸಾಗಿದೆ.
-ಪ್ರಿಯಾಂಕ್ ಖರ್ಗೆ, ಕಲಬುರಗಿ ಉಸ್ತುವಾರಿ ಸಚಿವ
ಲುಂಬಿನಿ ಉದ್ಯಾನವನಕ್ಕೆ ಬೇಕಾಗುವ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಲಾಗಿದೆ. ಜಿಲ್ಲಾಡಳಿತ ಮತ್ತಷ್ಟು ಸೌಲಭ್ಯಗಳನ್ನು ಬೇಡಿಕೆಗೆ ಅನುಗುಣವಾಗಿ ಒದಗಿಸಲಿದೆ.
-ಫೌಝಿಯಾ ತರನ್ನುಮ್, ಜಿಲ್ಲಾಧಿಕಾರಿ
ಲುಂಬಿನಿ ಉದ್ಯಾನವನಕ್ಕೆ ಪ್ರತಿನಿತ್ಯ ಸುಮಾರು 100ಕ್ಕೂ ಅಧಿಕ ಪ್ರವಾಸಿಗರು, ವೀಕ್ಷಕರು ಆಗಮಿಸಿ ಇಲ್ಲಿನ ಪರಿಸರವನ್ನು ಆಸ್ವಾದಿಸುತ್ತಿದ್ದಾರೆ. ರಜಾ ದಿನಗಳಲ್ಲಿ ಹಾಗೂ ವಾರದ ಕೊನೆಯಲ್ಲಿ ಈ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ.
-ಸುಮೀತ್ ಪಾಟೀಲ್, ಡಿಎಫ್‌ಒ, ಕಲಬುರಗಿ