ಕಲಬುರಗಿ: ಮಳೆ ನೀರಿನಿಂದ ಶಿಥಿಲಗೊಂಡ ವಿಶ್ವದ ಮೊಟ್ಟ ಮೊದಲ ಇಕೋ ಸೌಂಡ್ ಜಾಮಿಯಾ ಮಸೀದಿ
ಮೇಲ್ಪಾವಣಿಯಿಂದ ಮಳೆ ನೀರು ಸೋರಿಕೆ; ದುರಸ್ತಿಗೆ ಆಗ್ರಹ

ಕಲಬುರಗಿ: ಬಹಮನಿ ಸಾಮ್ರಾಜ್ಯದ ಮೊದಲನೇ ಸುಲ್ತಾನ್ ಮುಹಮ್ಮದ್ ಶಾ ಅವರಿಂದ 1367ರಲ್ಲಿ ಕಲಬುರಗಿ ಕೋಟೆ ಆವರಣದಲ್ಲಿ ನಿರ್ಮಿಸಲಾದ ಖಿಲಾ ಎ ಹುಶಾಮ್ ಜುಮಾ ಜಾಮಿಯಾ ಮಸೀದಿ, ಏಶಿಯಾದ ಅತಿದೊಡ್ಡ ಮಸೀದಿಯಲ್ಲಿ ಒಂದಾಗಿದ ಮತ್ತು ವಿಶ್ವದ ಮೊದಲ ಇಕೋ ಸೌಂಡ್ ಹೊಂದಿರುವ ಮೊಟ್ಟಮೊದಲ ಮಸೀದಿ ಎಂದೇ ಕರೆಯಲ್ಪಡುತ್ತದೆ. ಈ ಪ್ರಖ್ಯಾತ ಮಸೀದಿಯ ಮೇಲ್ಛಾವಣಿ ಶಿಥಿಲಗೊಂಡು ಮಳೆ ನೀರು ಸೋರುತ್ತಿದೆ.
ಒಟ್ಟು 136 ಪಿಲ್ಲರ್‌ಗಳು, 107 ಡೊಮ್ (ಗೋಪುರ) ಮತ್ತು ಒಂದೇ ಛಾವಣಿಯಲ್ಲಿ ಪರ್ಶಿಯನ್ ವಾಸ್ತುಶಿಲ್ಪ ಕಲೆಯ ವೈಶಿಷ್ಟ್ಯ ಹೊಂದಿರುವ ಬಹುಮನಿ ಕೋಟೆಯ ಒಳಗೆ ವಿಶಾಲವಾಗಿ ಈ ಮಸೀದಿಯನ್ನು ನಿರ್ಮಿಸಲಾಗಿದೆ. ಈ ಮಸೀದಿಯ ವೈಶಿಷ್ಟ್ಯವನ್ನು ನೋಡಲು ದೇಶ, ವಿದೇಶಗಳ ಸಾವಿರಾರು ಪ್ರವಾಸಿಗರು ಬರುತ್ತಾರೆ.
650 ವರ್ಷಗಳ ಇತಿಹಾಸವಿರುವ ಜಾಮಿಯಾ ಮಸೀದಿಯ ಕಟ್ಟಡದ ಗೋಡೆಗಳು, ವರ್ಷದ ಮಳೆಗಾಲದಿಂದ ಈ ವರ್ಷದ ಮಳೆಗಾಳದ ವರೆಗೆ 12 ಪಿಲ್ಲರ್‌ಗಳ ಮೇಲ್ಛಾವಣಿಯಿಂದ ಮಳೆ ನೀರು ಸೋರಿ, ನೆಲಕ್ಕೆ ತಲುಪುತ್ತಿದೆ. ಪ್ರವೇಶ ದ್ವಾರದ ಪ್ಲಾಸ್ಟರ್ ಉದುರುತ್ತಿದೆ. ನೆಲದ ಮೇಲಿನ ಫ್ಲೋರಿಂಗ್ ಸಿಮೆಂಟ್ ಕಿತ್ತುಕೊಂಡು ಬರುತ್ತಿದೆ. ಕುಡಿಯಲು ನೀರಿನ ವ್ಯವಸ್ಥೆ ಇದೆ. ಸೆಕ್ಯುರಿಟಿ ಗಾರ್ಡ್ ಇಲ್ಲ. ಸ್ಮಾರಕದ ನಾಮಫಲಕದಲ್ಲಿ ಗೊಂದಲ ಮಾಹಿತಿ ಹಾಕಲಾಗಿದೆ.
ವಕ್ಫ್ ಮಂಡಳಿ, ಇತಿಹಾಸಕಾರರು, ರಾಜ್ಯ ಪುರಾತತ್ವ ಇಲಾಖೆ ಹಾಗೂ ಎಎಸ್‌ಐ ಟೂರಿಸಮ್ ಇಲಾಖೆಯ ನಿರ್ಲಕ್ಷ್ಯಕ್ಕೆ ಒಳಗಾಗಿ ಈ ಸ್ಮಾರಕ ದುಸ್ಥಿತಿಗೆ ತಲುಪಿದೆ. ಈ ಬಾರಿಯ ಮಳೆಗಾಲದಲ್ಲಿ ಮತ್ತಷ್ಟು ಹಾನಿಯಾಗುವ ಮುನ್ನ ಸಚಿವರು ಮತ್ತು ಸ್ಥಳೀಯ ಶಾಸಕರು, ರಾಜ್ಯ ಮತ್ತು ಕೇಂದ್ರದ ಟೂರಿಸಮ್ ನಿರ್ದೇಶಕರು ಎಚ್ಚೆತುಕೊಂಡು ದುರಸ್ತಿ ನಡೆಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಐತಿಹಾಸಿಕ ಸ್ಮಾರಕಗಳ ಹಾನಿ ತಡೆಯಲು ಸರಕಾರ ಮತ್ತು ಜಿಲ್ಲಾಡಳಿತ ವಿಶೇಷ ಕಾಳಜಿವಹಿಸಿ, ಸಂಬಂಧಪಟ್ಟ ಇಲಾಖೆಗಳ ಮೂಲಕ ಅಭಿವೃದ್ಧಿ ಕಾರ್ಯಗಳು ನಡೆಸಿ ಕಲ್ಯಾಣ ಕರ್ನಾಟಕ ಭಾಗವನ್ನು ಪ್ರವಾಸಿ ತಾಣವಾಗಿಸಲು ಮುಂದಾಗಬೇಕೆಂದು ಸಂಶೋಧಕರಾದ ಮುಹಮ್ಮದ್ ಅಯಾಝುದ್ದೀನ್ ಪಟೇಲ್ ಒತ್ತಾಯಿಸಿದ್ದಾರೆ.
ಹಣಕಾಸಿನ ಕೊರತೆಯಿಂದ ಕಳೆದ ವರ್ಷ ದುರಸ್ತಿ ಮಾಡಲು ಸಾಧ್ಯವಾಗಿಲ್ಲ. ಹಣಕಾಸಿಗಾಗಿ ಮತ್ತು ಸೆಕ್ಯುರಿಟಿ ಗಾರ್ಡ್ ನೇಮಕಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವ ಕಳುಸಿದ್ದೇವೆ. ಅನುಮತಿ ಸಿಕ್ಕಿದ ತಕ್ಷಣ ಅಭಿವೃದ್ಧಿ ಕೆಲಸ ಮಾಡುತ್ತೇವೆ. ಕೆಕೆಆರ್‌ಡಿಬಿ ವತಿಯಿಂದ ರಾಜ್ಯ ಸರಕಾರ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಆದರೆ ಇನ್ನೂ ಲೋಕಾರ್ಪಣೆಗೊಂಡಿಲ್ಲ.
-ವಿನಾಯಕ ಶಿರಹಟ್ಟಿ, ಭಾರತೀಯ ಪುರಾತತ್ವ ಸಂರಕ್ಷಣಾ ಇಲಾಖೆಯ ಅಧಿಕಾರಿ
ನಮ್ಮ ಭಾಗದ ಇತಿಹಾಸವನ್ನು ತಿಳಿದುಕೊಳ್ಳಲು ಸ್ಮಾರಕಗಳು ಮುಂದಿನ ಪೀಳಿಗೆಗೆ ಸಹಕಾರಿಯಾಗಿವೆ. 2014ರಲ್ಲಿ, ಯುನೆಸ್ಕೋ ಈ ಕಟ್ಟಡ ಮತ್ತು ಹಫ್ತ್ ಗುಂಬಜ್ ವಿಶ್ವ ಪಾರಂಪರಿಕ ಸ್ಥಳವಾಗಿಸಲು ತನ್ನ ತಾತ್ಕಾಲಿಕ ಪಟ್ಟಿಗೆ ಕೋರಿ ಅದನ್ನು ಡಕ್ಕನ್‌ನ ಸ್ಮಾರಕಗಳು ಮತ್ತು ಕೋಟೆಗಳು ಎಂಬ ಹೆಸರಿನಲ್ಲಿ ಪಟ್ಟಿ ಮಾಡಿದೆ. ಆದರೆ ಇಲ್ಲಿನ ಟೂರಿಸಮ್ ಇಲಾಖೆಯ ಅಧಿಕಾರಿಗಳ ಸ್ಪಂದನೆ ಸಿಗುತ್ತಿಲ್ಲ. ಹಿರಿಯ ಅಧಿಕಾರಿಗಳ ರಾಜಕೀಯ ನಾಯಕರ ಆಸಕ್ತಿ ಕೊರತೆಯಿಂದ ಜಿಲ್ಲೆಯ ಸಾಕಷ್ಟು ಸ್ಮಾರಕಗಳ ಸ್ಥಿತಿ ಇಂದು ಶೋಚನೀಯವಾಗಿದೆ. ತಕ್ಷಣ ಜಿಲ್ಲಾಡಳಿತ, ಕೇಂದ್ರ ಮತ್ತು ರಾಜ್ಯದ ಟೂರಿಸಮ್ ಅಧಿಕಾರಿಗಳು ಈ ಸ್ಮಾರಕಗಳನ್ನು ಯುನೆಸ್ಕೋ ಸೇರಿಸಲು ಕ್ರಮ ಕೈಗೊಳ್ಳಬೇಕು.
-ಮುಹಮ್ಮದ್ ಅಯಾಝುದ್ದೀನ್ ಪಟೇಲ್, ಹಿರಿಯ ಕಲಾವಿದ ಮತ್ತು ಸಂಶೋಧಕ