Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ...

ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ಎನ್‌ಆರ್‌ಸಿ ಜಾರಿಯಾಗುತ್ತಿದೆಯೇ?

ಹರೀಶ್ ಎಚ್.ಕೆ.ಹರೀಶ್ ಎಚ್.ಕೆ.29 Jun 2025 11:28 AM IST
share
ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಹೆಸರಿನಲ್ಲಿ ಎನ್‌ಆರ್‌ಸಿ ಜಾರಿಯಾಗುತ್ತಿದೆಯೇ?
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಮುಂದಾಗಿರುವ ಚುನಾವಣಾ ಆಯೋಗದ ನಡೆ ಬಿಹಾರದಲ್ಲಿ ದೊಡ್ಡ ಸಂಖ್ಯೆಯ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಕಾರಣವಾಗಬಹುದು. ಇದಲ್ಲದೆ, ಅರ್ಜಿದಾರರ ಪೋಷಕರ ದಾಖಲೆ ಸಲ್ಲಿಕೆ ಪ್ರಶ್ನೆಯನ್ನು ಎತ್ತಿರುವುದು, ಪರಿಷ್ಕರಣೆ ಹೆಸರಲ್ಲಿನ ಬೇರೆಯದೇ ತಂತ್ರದ ಹಾಗೆಯೂ ಕಾಣತೊಡಗಿದೆ. ಇದು ಮತದಾರರ ಪಟ್ಟಿ ಪರಿಷ್ಕರಣೆಯೇ ಅಥವಾ ಇದು ಎನ್‌ಆರ್‌ಸಿ ಆಗಿದೆಯೇ ಎಂಬುದು ಈಗ ಎದ್ದಿರುವ ದೊಡ್ಡ ಅನುಮಾನ.

ಬಿಹಾರದಲ್ಲಿ ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯುತ್ತಿದೆ. ಈಗ ಚುನಾವಣಾ ಆಯೋಗ ಹೊಸ ವರಸೆಯೊಂದನ್ನು ತೆಗೆದಿದೆ. ಮತದಾರರ ಪಟ್ಟಿ ಪರಿಷ್ಕರಣೆಗೆ ಅದು ಮುಂದಾಗಿದ್ದು, ಮನೆಮನೆಗೂ ತೆರಳಿ ಪರಿಶೀಲನೆ ನಡೆಸಲು ಉದ್ದೇಶಿಸಿದೆ. ಮನೆಮನೆಗೆ ತೆರಳಿ ಪರಿಶೀಲಿಸಿದ ಬಳಿಕವಷ್ಟೇ ಅದು ಮತದಾರರ ಪಟ್ಟಿ ಪರಿಷ್ಕರಣೆ ಮಾಡಲಿದೆ ಎನ್ನಲಾಗುತ್ತಿದೆ. ಆದರೆ, ಪ್ರಶ್ನೆ ಎದ್ದಿರುವುದು ಪರಿಷ್ಕರಣೆಗೆ ಅದು ನಿಗದಿಪಡಿಸಿದ ಕಾರ್ಯವಿಧಾನದ ಬಗ್ಗೆ.

ಅಸ್ತಿತ್ವದಲ್ಲಿರುವ ಕಾನೂನು ನಿಬಂಧನೆಗಳನ್ನು ಚುನಾವಣಾ ಆಯೋಗ ಉಲ್ಲಂಘಿಸುತ್ತಿದೆ ಎಂಬ ಆಕ್ಷೇಪಗಳು ಬರುತ್ತಿವೆ. ಈ ವೇಳಾಪಟ್ಟಿ ಅಪ್ರಾಯೋಗಿಕವಾಗಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇದು ಬಿಹಾರದ ಗಣನೀಯ ಸಂಖ್ಯೆಯ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳಲಿದೆಯೇ ಎಂಬ ಆತಂಕ ಮೂಡಿದೆ.

1950ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 21(3)ರ ಪ್ರಕಾರ, ಯಾವುದೇ ಕ್ಷೇತ್ರ ಅಥವಾ ಕ್ಷೇತ್ರದ ಯಾವುದೇ ಭಾಗದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ತನಗೆ ಸೂಕ್ತವೆನ್ನಿಸಿದಂತೆ ಯಾವುದೇ ಸಮಯದಲ್ಲಿ ಮಾಡಲು ತನಗೆ ಅಧಿಕಾರವಿದೆ ಎಂಬುದು ಆಯೋಗದ ಪ್ರತಿಪಾದನೆಯಾಗಿದೆ.

1960ರ ಮತದಾರರ ನೋಂದಣಿ ನಿಯಮಗಳ ನಿಯಮ 25ನ್ನು ಉಲ್ಲೇಖಿಸುವುದರೊಂದಿಗೆ ತನ್ನ ಈ ಅಧಿಕಾರವನ್ನು ಆಯೋಗ ಇನ್ನೂ ಬಲವಾಗಿ ಪ್ರತಿಪಾದಿಸುತ್ತಿದೆ. ಅದರಂತೆ, ಪ್ರತಿಯೊಂದು ಕ್ಷೇತ್ರದ ಪಟ್ಟಿಯನ್ನು ಚುನಾವಣಾ ಆಯೋಗ ಸೆಕ್ಷನ್ 21ರ ಉಪ ವಿಭಾಗ (2)ರ ಅಡಿಯಲ್ಲಿ ತೀವ್ರ ಪರಿಷ್ಕರಣೆ ಅಥವಾ ಸಂಕ್ಷಿಪ್ತ ಪರಿಷ್ಕರಣೆ ಅಥವಾ ಭಾಗಶಃ ತೀವ್ರ ಪರಿಷ್ಕರಣೆ ಮತ್ತು ಭಾಗಶಃ ಸಂಕ್ಷಿಪ್ತ ಪರಿಷ್ಕರಣೆ ಮಾಡುತ್ತದೆ ಎಂಬ ನಿಯಮಗಳನ್ನು ಇದೇ ಜೂನ್ 24ರ ಪ್ರಕಟಣೆಯಲ್ಲಿ ಅದು ಮುಂದೆ ಮಾಡಿದೆ.

ಬಿಹಾರ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಾರಂಭಿಸುವ ಬಗ್ಗೆ ಅದು ನಾಲ್ಕು ಪುಟಗಳ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

ತೀವ್ರಗತಿಯ ನಗರೀಕರಣ, ವಲಸೆ, ಮತದಾನಕ್ಕೆ ಅರ್ಹರಾಗುವ ಯುವಜನತೆ, ಮೃತರ ಹೆಸರು ತೆಗೆಯುವುದು, ವಿದೇಶಿ ಅಕ್ರಮ ವಲಸಿಗರು ಈ ಮೊದಲಾದ ಕಾರಣಗಳ ಹಿನ್ನೆಲೆಯಲ್ಲಿ ಪರಿಷ್ಕರಣೆ ಅಗತ್ಯ ಎನ್ನುವುದನ್ನು ಅದು ಹೇಳಿದೆ. ದೋಷರಹಿತ ಮತದಾರರ ಪಟ್ಟಿ ತಯಾರಿಸುವ ಬಗ್ಗೆ ಹೇಳಿಕೊಂಡಿದೆ.

ಆಯೋಗ ಈ ಹಿಂದೆ ಕೂಡ ಕಾನೂನುಗಳ ಪ್ರಕಾರ ತನ್ನ ಅಧಿಕಾರ ಚಲಾಯಿಸಿದೆ ಎಂದಿರುವ ಅದು, ಬಿಹಾರದಲ್ಲಿ ಕೊನೆಯ ತೀವ್ರ ಪರಿಷ್ಕರಣೆಯನ್ನು 2003ರಲ್ಲಿ ನಡೆಸಿದ್ದರ ಬಗ್ಗೆ ಹೇಳಿದೆ.

ಇದು ಈಗ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಕ್ಷಿಪ್ರ ನಗರೀಕರಣ, ಆಗಾಗ ವಲಸೆ, ಯುವ ನಾಗರಿಕರು ಮತದಾನಕ್ಕೆ ಅರ್ಹರಾಗುವುದು, ಸಾವುಗಳನ್ನು ವರದಿ ಮಾಡದಿರುವುದು ಮತ್ತು ವಿದೇಶಿ ಅಕ್ರಮ ವಲಸಿಗರ ಹೆಸರುಗಳನ್ನು ಸೇರಿಸುವುದು ಇವು ಕಳೆದ ಕೆಲ ವರ್ಷಗಳಲ್ಲಿ ಹೆಚ್ಚಿವೆಯೇ ಅಥವಾ ಅವು ನಡೆಯುತ್ತಿವೆಯೆ?

1952ರಿಂದ 2004ರವರೆಗೆ ಅಂತಹ ಪರಿಷ್ಕರಣೆಗಳನ್ನು ಹೆಚ್ಚಾಗಿ ಮಾಡಲಾಗಿದೆ ಎಂದು ಕಂಡರೂ, ಕಳೆದ 21 ವರ್ಷಗಳಿಂದ ಹಾಗೆ ಮಾಡುವ ಅಗತ್ಯ ಆಯೋಗಕ್ಕೆ ಏಕೆ ಕಾಣಿಸಲಿಲ್ಲ?

2004ರಿಂದ ಆನಂತರ ಇದ್ದಕ್ಕಿದ್ದಂತೆ ಏನಾಯಿತು? 21 ವರ್ಷಗಳು ಯಾವುದೇ ಮಾನದಂಡದಿಂದ ನೋಡಿದರೂ ಸಣ್ಣ ಅವಧಿಯಲ್ಲ. ಹೀಗಿರುವಾಗ, ಏಕೆ ಪರಿಷ್ಕರಣೆ ಮಾಡದೆ ಬಿಡಲಾಗಿತ್ತು?

ಇದನ್ನು ಗಮನಿಸಿದರೆ ಮತ್ತು ಈಗಿನ ಸಮಯವನ್ನು ಗಮನಿಸಿದರೆ, ಆಯೋಗದ ಈಗಿನ ಕಸರತ್ತಿನ ಹಿಂದೆ ಯಾವುದೋ ಉದ್ದೇಶ ಇದ್ದಂತಿದೆ ಎಂಬ ಅನುಮಾನ ಈಗ ವಿಪಕ್ಷಗಳಿಂದ ವ್ಯಕ್ತವಾಗುತ್ತಿವೆ.

ಜೂನ್ 24ರ ಆಯೋಗದ ಪತ್ರಿಕಾ ಹೇಳಿಕೆ ಪ್ರಕಾರ, ಬಿಹಾರದಲ್ಲಿ ಕೊನೆಯ ತೀವ್ರ ಪರಿಷ್ಕರಣೆ ನಡೆದದ್ದು 2003ರಲ್ಲಿ. ಹಾಗಾಗಿ, ಇಆರ್‌ಒಗಳು 2003ರ ಮತದಾರರ ಪಟ್ಟಿಯನ್ನು ಅರ್ಹತೆಯ ಪುರಾವೆಯಾಗಿ ತೆಗೆದುಕೊಳ್ಳುತ್ತಾರೆ.

2003ರ ಮತದಾರರ ಪಟ್ಟಿಯಲ್ಲಿ ಹೆಸರು ದಾಖಲಿಸದ ಯಾವುದೇ ವ್ಯಕ್ತಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಆಯೋಗ ಸೂಚಿಸುವ ಹಲವಾರು ಸರಕಾರಿ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ.

ಅಂದರೆ ಜನವರಿ 1, 2003ರ ನಂತರ ಮತದಾರರಾಗಿ ನೋಂದಾಯಿಸಲ್ಪಟ್ಟ ಎಲ್ಲರೂ ನೋಂದಾಯಿತ ಮತದಾರರಲ್ಲ ಮತ್ತು ಭಾರತದ ನಾಗರಿಕರೆಂದು ಭಾವಿಸಲಾಗುವುದಿಲ್ಲ. ಅಂಥವರು, ಅಂದರೆ ಜನವರಿ 1, 2003ರಂದು ಮತದಾರರಾಗಿ ದಾಖಲಾಗದೇ ಇರದವರು ಸಾಕಷ್ಟು ಸರಕಾರಿ ದಾಖಲೆಗಳನ್ನು ಸಲ್ಲಿಸಿ ತಮ್ಮ ಅರ್ಹತೆ ಸಾಬೀತುಪಡಿಸಬೇಕಾಗುತ್ತದೆ. ಅಂದರೆ, ಈ ದಾಖಲೆಗಳು ಒಬ್ಬರ ಪೌರತ್ವ ಸಾಬೀತುಪಡಿಸಲು ಬೇಕಾದ ಮಟ್ಟದ ದಾಖಲೆಗಳಾಗಿರುವುದು ಅವಶ್ಯ.

ಭಾರತದ ಸಂವಿಧಾನದ 326ನೇ ವಿಧಿ ಭಾರತದ ನಾಗರಿಕರಾಗಿರುವ ಪ್ರತಿಯೊಬ್ಬ ವ್ಯಕ್ತಿ ಯಾವುದೇ ಚುನಾವಣೆಯಲ್ಲಿ ಮತದಾರರಾಗಿ ನೋಂದಾಯಿಸಿಕೊಳ್ಳಲು ಅರ್ಹನಾಗಿರುತ್ತಾನೆ ಎಂದು ಹೇಳಿದೆ. ಆದರೆ ಇಲ್ಲಿ ಮತದಾರರ ಪಟ್ಟಿಯಲ್ಲಿ ಸೇರಲು ಪೌರತ್ವ ಸಾಬೀತಿನ ಪ್ರಶ್ನೆಯನ್ನು ಆಯೋಗ ಮುಂದೆ ಮಾಡುವ ತಯಾರಿಯಲ್ಲಿರುವುದು ಕಾಣಿಸುತ್ತದೆ.

ಇಲ್ಲಿ ಮೂರು ಪ್ರಶ್ನೆಗಳು ಬರುತ್ತವೆ.

ಮೊದಲನೆಯದಾಗಿ, ಜನವರಿ 1, 2003ರಂದು ಮತದಾರರಾಗಿ ನೋಂದಾಯಿಸಿಕೊಳ್ಳದ, ಆದರೆ ನಂತರ ನೋಂದಾಯಿಸಲ್ಪಟ್ಟ ಈ ವ್ಯಕ್ತಿಗಳನ್ನು ಈಗ ನೋಂದಾಯಿತ ಮತದಾರರೆಂದು ಪರಿಗಣಿಸದೇ ಇದ್ದರೆ, ಜನವರಿ 2003ರಿಂದ ಇಲ್ಲಿಯವರೆಗೆ ನಡೆದ ಚುನಾವಣೆಗಳಲ್ಲಿ ಅವರು ಚಲಾಯಿಸಿದ ಮತಗಳಿಗೆ ಏನರ್ಥ? ಆ ಎಲ್ಲಾ ಮತಗಳು ಮತ್ತು ಆ ಮತಗಳ ಆಧಾರದಲ್ಲಿ ಬಂದ ಚುನಾವಣಾ ಫಲಿತಾಂಶಗಳು ಅಮಾನ್ಯವಾಗಿವೆಯೇ? ಇದನ್ನು ಹೇಗೆ ನೋಡಬೇಕು?

ಎರಡನೆಯದಾಗಿ, ಜನವರಿ 1, 2003ರಂದು ಮತದಾರರಾಗಿ ನೋಂದಾಯಿಸಿಕೊಳ್ಳದ, ಆದರೆ ಆನಂತರ ನೋಂದಾಯಿಸಲ್ಪಟ್ಟ ಈ ವ್ಯಕ್ತಿಗಳನ್ನು ಈಗ ನೋಂದಾಯಿತ ಮತದಾರರೆಂದು ಪರಿಗಣಿಸದಿದ್ದರೆ, ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂದು ಇದರ ಅರ್ಥವಲ್ಲವೇ?

ಮತದಾರರ ನೋಂದಣಿ ನಿಯಮಗಳ ಪ್ರಕಾರ, ಯಾವುದೇ ವ್ಯಕ್ತಿಯನ್ನು ಮತದಾರರ ಪಟ್ಟಿಯಿಂದ ತೆಗೆಯುವ ಮೊದಲು, ಅದು ಸರಿಯಲ್ಲ ಎಂದು ಮತದಾರ ಸಾಬೀತುಪಡಿಸಲು ಮತ್ತು ಸೂಕ್ತ ಕಾರಣ ತೋರಿಸಲು ಆತನಿಗೆ ಅವಕಾಶ ನೀಡಬೇಕಿರುತ್ತದೆ.ಹಾಗಿರುವಾಗ, ಜನವರಿ 1, 2003ರಂದು ಮತದಾರರಾಗಿ ನೋಂದಾಯಿಸಲ್ಪಡದ ಆದರೆ ಆನಂತರ ನೋಂದಾಯಿಸಲ್ಪಟ್ಟ ಎಲ್ಲಾ ವ್ಯಕ್ತಿಗಳು, ಈಗ ಈ ಸಮಂಜಸ ಅವಕಾಶದಿಂದ, ತಮ್ಮ ಕಾನೂನುಬದ್ಧ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದಾಯಿತಲ್ಲವೆ? ಈ ವಂಚಿತರಲ್ಲಿ ಯಾರಾದರೂ ಇದರ ಬಗ್ಗೆ ನ್ಯಾಯಾಲಯಕ್ಕೆ ಹೋಗಲು ನಿರ್ಧರಿಸಿದರೆ ನ್ಯಾಯಾಲಯಗಳು ಈ ಸಮಸ್ಯೆ ಬಗ್ಗೆ ನಿರ್ಧರಿಸಬೇಕಾಗುತ್ತವೆ.

ಮೂರನೆಯದಾಗಿ, ಮತದಾರರ ನೋಂದಣಿ ಕಾರ್ಯವಿಧಾನದಲ್ಲಿ ಬದಲಾವಣೆಗೆ ಕಾರಣವೇನು ಎಂಬುದು.

ಜೂನ್ 24, 2025ರ ಮೊದಲು ಮತದಾರರಾಗಿ ನೋಂದಾಯಿಸಿಕೊಳ್ಳಲು ಬಯಸುವ ವ್ಯಕ್ತಿ 1960ರ ಮತದಾರರ ನೋಂದಣಿ ನಿಯಮಗಳಲ್ಲಿ ನೀಡಲಾದ ಫಾರ್ಮ್ 6ನ್ನು ಭರ್ತಿ ಮಾಡಬೇಕಾಗಿತ್ತು ಮತ್ತು ತನ್ನ ವಿಳಾಸ, ಎಷ್ಟು ಸಮಯದಿಂದ ವಾಸವಾಗಿದ್ದೇನೆ ಎಂಬ ಮಾಹಿತಿ ಕೊಡಬೇಕಿತ್ತು.

ಅರ್ಜಿ ನಮೂನೆ 6 ಅರ್ಜಿದಾರರ ಪೋಷಕರ ಬಗ್ಗೆ ಯಾವುದೇ ಮಾಹಿತಿ ಕೇಳುವುದಿಲ್ಲ. ಆದರೆ, ಈಗ, ಪೋಷಕರ ದಾಖಲೆಗಳು ಮತ್ತು ಬೆಂಬಲವಾಗಿ ಸಲ್ಲಿಸಬೇಕಾದ ದಾಖಲೆಗಳ ಪಟ್ಟಿಯನ್ನೇ ಕೊಡಲಾಗಿದೆ.

ಇದು ಇಷ್ಟು ವರ್ಷಗಳಿಂದ ಇದ್ದ ರೂಢಿಗಿಂತ ಬೇರೆಯೇ ಆಗಿದೆ ಮತ್ತು ಈ ಪ್ರಮುಖ ಬದಲಾವಣೆಗೆ ಯಾವುದೇ ನಿರ್ದಿಷ್ಟ ವಿವರಣೆಯನ್ನು ಆಯೋಗ ನೀಡಿಲ್ಲ.

ವಾಸ್ತವವಾಗಿ ಏನಾಗಲಿದೆ ಎಂಬುದರ ಬಗ್ಗೆ ಯೋಚಿಸಬೇಕಿದೆ.

ಬಿಹಾರದ ಗ್ರಾಮೀಣ ಪ್ರದೇಶದ ಪರಿಸ್ಥಿತಿ ನೋಡಿದರೆ, ಸಾಕ್ಷರತೆ, ಕಂಪ್ಯೂಟರ್ ಸಾಕ್ಷರತೆ ಇಲ್ಲದಿರುವ ಅಥವಾ ವಿದ್ಯುತ್ ಕೊರತೆಯಿರುವ ಸ್ಥಿತಿಯಲ್ಲಿ, ಆಯೋಗದ ಈ ಬದಲಾವಣೆಗಳೆಲ್ಲ ಮತದಾರರಿಗೆ ತಿಳಿಯುವುದು, ಅರ್ಥವಾಗುವುದು ಸಾಧ್ಯವೆ? ಬಿಹಾರದ ಗ್ರಾಮೀಣ ಪ್ರದೇಶಗಳಲ್ಲಿ ಎಷ್ಟು ಮತದಾರರು ಇದನ್ನೆಲ್ಲ ಡೌನ್‌ಲೋಡ್ ಮಾಡಲು ಗೊತ್ತಿರುವಷ್ಟು ಕಂಪ್ಯೂಟರ್ ತಿಳುವಳಿಕೆ ಉಳ್ಳವರಾಗಿರಲು ಸಾಧ್ಯ? ಎಷ್ಟು ಜನರ ಬಳಿ ಕಂಪ್ಯೂಟರ್ ಇರಲು ಸಾಧ್ಯ? ಇದ್ದರೂ, ಅಲ್ಲಿ ವಿದ್ಯುತ್ ಕೊರತೆ ದೊಡ್ಡ ಪ್ರಮಾಣದಲ್ಲಿದೆಯಲ್ಲವೆ? ಇವೆಲ್ಲ ಪ್ರಶ್ನೆಗಳು ಉದ್ಭವಿಸುತ್ತವೆ.

ಆನಂತರ ವಲಸೆಯ ಸಮಸ್ಯೆ.

ಜೀವನೋಪಾಯ ಹುಡುಕಿಕೊಂಡು ಬಿಹಾರದ ಜನರು ಇತರ ರಾಜ್ಯಗಳಿಗೆ ವಲಸೆ ಹೋಗುವ ವಿಚಾರ ಗೊತ್ತೇ ಇದೆ. ರಾಜ್ಯದ ಹೊರಗೆ ಕೆಲಸ ಮಾಡುವ ವಲಸಿಗರು ತಮ್ಮನ್ನು ಹುಡುಕಿಕೊಂಡು ಹಳ್ಳಿಗಳಿಗೆ ಹೋಗುವ ಅಧಿಕಾರಿಗಳಿಗೆ ಮಾಹಿತಿ ಕೊಡಲು ಹೇಗೆ ಸಾಧ್ಯವಾಗುತ್ತದೆ?

ಎಲ್ಲೋ ಹೊಟ್ಟೆಪಾಡಿಗಾಗಿ ಕೆಲಸ ಮಾಡಿಕೊಂಡಿರುವ ಅವರು ಆಯೋಗದ ಈ ನಮೂನೆಗಳನ್ನೆಲ್ಲ ಡೌನ್‌ಲೋಡ್ ಮಾಡಿಕೊಂಡು ಇರಲು ಸಾಧ್ಯವಾಗುತ್ತದೆಯೆ?

ಹಾಗಾದರೆ, ಇಂಥ ಪ್ರಾಕ್ಟಿಕಲ್ ಅಲ್ಲದ ನಿಬಂಧನೆಗಳನ್ನು ಏಕೆ ತರಲಾಗುತ್ತಿದೆ? ಮತ್ತು ಅದನ್ನು ಪೂರೈಸಲಾರದವರು ಮತದಾನದಿಂದ ವಂಚಿತರಾಗುತ್ತಾರೆ ಎಂಬುದು ಯಾರ ನಿರ್ಧಾರವಾಗಲಿದೆ?

2004ರ ನಂತರ ಜನಿಸಿದವರಿಗೆ, ಪೌರತ್ವದ ಪುರಾವೆಯಾಗಿ ಪೋಷಕರ ದಾಖಲೆ ಒದಗಿಸಬೇಕಾದವರಿಗೆ ಜನನ ಪ್ರಮಾಣಪತ್ರಗಳ ಸಮಸ್ಯೆ ಎದುರಾಗುತ್ತದೆ.

ಈಗಾಗಲೇ, ಜಾರ್ಖಂಡ್‌ನಲ್ಲಿ ಆಗಿರುವಂತೆ, ಮುಸ್ಲಿಮರನ್ನು ಈ ನೆಪದಲ್ಲಿ ಅಕ್ರಮ ವಲಸಿಗರು ಎಂದು ಹಣೆಪಟ್ಟಿ ಕಟ್ಟುವ ಆತಂಕವೂ ಎದುರಾಗಿದೆ.

ಇನ್ನು, ಮಳೆಗಾಲವೆಂದರೆ ಬಿಹಾರದ ಕಥೆ ಇನ್ನೂ ಕಷ್ಟದ್ದು. ಬಿಹಾರದ ಗ್ರಾಮಗಳು ಬಹುತೇಕ ಪ್ರವಾಹದಲ್ಲಿ ನರಳುವ ಸಮಯ ಇದು. ಅದು, ಬಿಹಾರದ ಬಡ ಮತದಾರರು ತಮ್ಮ ಮತದಾರರ ಅರ್ಹತೆ ತೋರಿಸಲು ದಾಖಲೆಗಳಿಗಾಗಿ ಅಲೆದಾಡುವ ಸಮಯ ಖಂಡಿತ ಅಲ್ಲ.

ಇದನ್ನೆಲ್ಲ ಗಮನಿಸಿದರೆ, ಆಯೋಗದ ಈ ತೀವ್ರ ಪರಿಷ್ಕರಣೆ ಪ್ರಸ್ತಾವವೇ ಆಯೋಗ ಸ್ವತಃ ನಿಗದಿಪಡಿಸಿದ ಸಮಯವನ್ನು ನೋಡಿದರೆ ಅಪ್ರಾಯೋಗಿಕವಾಗಿದೆ.

ಇದು ಬಿಹಾರದಲ್ಲಿ ದೊಡ್ಡ ಸಂಖ್ಯೆಯ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಕಾರಣವಾಗಬಹುದು. ಇದಲ್ಲದೆ, ಅರ್ಜಿದಾರರ ಪೋಷಕರ ದಾಖಲೆ ಸಲ್ಲಿಕೆ ಪ್ರಶ್ನೆಯನ್ನು ಎತ್ತಿರುವುದು, ಪರಿಷ್ಕರಣೆ ಹೆಸರಲ್ಲಿನ ಬೇರೆಯದೇ ತಂತ್ರದ ಹಾಗೆಯೂ ಕಾಣತೊಡಗಿದೆ.

ಇದು ಮತದಾರರ ಪಟ್ಟಿ ಪರಿಷ್ಕರಣೆಯೇ ಅಥವಾ ಇದು ಎನ್‌ಆರ್‌ಸಿ ಆಗಿದೆಯೇ ಎಂಬುದು ಈಗ ಎದ್ದಿರುವ ದೊಡ್ಡ ಅನುಮಾನ.

ಆಯೋಗದ ಈ ಪ್ರಸ್ತಾವವನ್ನು ‘ಇಂಡಿಯಾ’ ಮೈತ್ರಿಕೂಟ ತಿರಸ್ಕರಿಸಿದೆ. ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಆಗಿದ್ದು, ಲಕ್ಷಾಂತರ ಜನರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಬೆದರಿಕೆ ಯಾಗಿದೆ. ವಿಶೇಷವಾಗಿ ಹಿಂದುಳಿದ ಗುಂಪುಗಳ ಮತದಾನದ ಹಕ್ಕನ್ನು ಕಸಿಯಲಾಗುತ್ತದೆ ಎಂದು ಅದು ಆರೋಪಿಸಿದೆ.

ಚುನಾವಣೆಗಳಿಗೆ ಕೇವಲ ಮೂರು ತಿಂಗಳು ಬಾಕಿ ಇರುವಾಗ ಆಯೋಗ ಈ ಪರಿಷ್ಕರಣೆ ಮಾಡಲು ಹೊರಟಿರುವುದರ ಉದ್ದೇಶವೇನು ಎಂದು ‘ಇಂಡಿಯಾ’ ಮೈತ್ರಿಕೂಟ ಪ್ರಶ್ನಿಸಿದೆ.

ಸಿಪಿಐ (ಎಂಎಲ್) ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಬಿಹಾರದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ ಆಯೋಗ ಮುಂದಾಗಿರುವ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಇದು ಎನ್‌ಆರ್‌ಸಿ ಅನ್ನೇ ಬಿಂಬಿಸುವ ಪ್ರಕ್ರಿಯೆ ಎಂದು ಅವರು ಆರೋಪಿಸಿದ್ದಾರೆ. ಈ ಕ್ರಮ, ಅಸ್ಸಾಮಿನ ಎನ್‌ಆರ್‌ಸಿಯ ನೆನಪುಗಳೇ ಮರುಕಳಿಸುವಂತೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಸಾಮಾನ್ಯ ನಾಗರಿಕರನ್ನು, ವಿಶೇಷವಾಗಿ ಬಡವರು, ದಲಿತರು, ಆದಿವಾಸಿಗಳು ಮತ್ತು ಮುಸ್ಲಿಮರು ಸೇರಿದಂತೆ ಅಂಚಿನಲ್ಲಿರುವ ಸಮುದಾಯಗಳ ಜನರನ್ನು ವ್ಯಾಪಕವಾಗಿ ಹೊರಗಿಡಲು ಇದು ಕಾರಣವಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಪಡಿಸಿದ್ದಾರೆ.

ಅನುಮಾನದ ಆರೋಪ ಮತ್ತು ದ್ವಿಪೌರತ್ವ ಪರಿಶೀಲನೆಗಳ ಮೂಲಕ ಜನರನ್ನು ಹೆದರಿಸದೆ, ನ್ಯಾಯಯುತವಾಗಿ ಎಲ್ಲರನ್ನೂ ಒಳಗೊಂಡಂತೆ ಮತ್ತು ಪ್ರಜಾಸತ್ತಾತ್ಮಕವಾಗಿ ಚುನಾವಣೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸಿರುವಾಗ ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಅಪ್ರಾಯೋಗಿಕವಾಗಿದೆ ಎಂದು ಆರ್‌ಜೆಡಿ ವಕ್ತಾರ ಚಿತ್ತರಂಜನ್ ಗಗನ್ ವಾದಿಸಿದ್ದಾರೆ.

ಈ ಪ್ರಕ್ರಿಯೆ ರಾಜ್ಯದ ಲಕ್ಷಾಂತರ ಕುಟುಂಬಗಳಲ್ಲಿ ಅನೇಕರ ಬಳಿ ಇಲ್ಲದೇ ಇರುವ ದಾಖಲೆಗಳಿಗಾಗಿ ಕೇಳುತ್ತದೆ. ಇದರ ಪರಿಣಾಮವಾಗಿ, ಬಿಹಾರದಲ್ಲಿ ಲಕ್ಷಾಂತರ ಬಡ ನಿವಾಸಿಗಳ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಸರಕಾರ ಉದ್ದೇಶಪೂರ್ವಕ ಪ್ರಯತ್ನ ಮಾಡುತ್ತಿದೆ ಎಂದು ಗಗನ್ ಆರೋಪಿಸಿದ್ದಾರೆ. ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿರುವ ಸಮಯದ ಬಗ್ಗೆ ಕೂಡ ಅವರು ಪ್ರಶ್ನೆ ಎತ್ತಿದ್ದಾರೆ.

ಸಿಪಿಐ(ಎಂ) ಕೂಡ ಇದನ್ನು ಎನ್‌ಆರ್‌ಸಿಯದ್ದೇ ರೂಪವೆಂದು ಕರೆದಿದ್ದು, ನಿರ್ದಿಷ್ಟ ವರ್ಗದ ಮತದಾರರನ್ನು ಗುರಿಯಾಗಿಸಲು ಇದನ್ನು ಬಳಸುವಂತೆ ಕಾಣುತ್ತದೆ ಎಂಬ ಆತಂಕವನ್ನು ವ್ಯಕ್ತಪಡಿಸಿದೆ.

share
ಹರೀಶ್ ಎಚ್.ಕೆ.
ಹರೀಶ್ ಎಚ್.ಕೆ.
Next Story
X