ಬಸ್ ನಿಲ್ದಾಣ ಶೌಚಾಲಯದಲ್ಲಿ ಅಕ್ರಮ ವಸೂಲಿ

ಯಾದಗಿರಿ, ಸೆ5: ನಗರ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿ ಅಧಿಕ ದರ ವಸೂಲಿ ನಡೆಯುತ್ತಿದ್ದು, ದಿನನಿತ್ಯ ಪ್ರಯಾಣಿಕರಿಂದ 3 ರೂಪಾಯಿಯ ಬದಲು 10 ರೂಪಾಯಿ ವಸೂಲಿ ಮಾಡುತ್ತಿರುವುದು ದಿನದಿಂದ ದಿನಕ್ಕೆ ವಸೂಲಿ ಜೋರಾಗಿದೆ ಎಂಬ ಆರೋಪಗಳು ಕೇಳಿಬರುತ್ತಿದೆ.
ಜಿಲ್ಲೆಯ ಬಸ್ ನಿಲ್ದಾಣ ಶೌಚಾಲಯದಲ್ಲಿ ನಡೆಯುತ್ತಿರುವ ಶೌಚಾಲಯದ ದರದಲ್ಲಿ ಗೋಲ್ ಮಾಲ್ ನಡೆಯುತ್ತಿದ್ದು, ಸರಕಾರ ನಿಗದಿಪಡಿಸಿದ ಶುಲ್ಕ 3 ರೂ. ಇದ್ದರೂ, ಸಾರ್ವಜನಿಕರಿಂದ 10 ರೂ.ವರೆಗೆ ಬಲವಂತವಾಗಿ ವಸೂಲಿ ಮಾಡಲಾಗುತ್ತಿದೆ. ಈ ಅಕ್ರಮದ ಬಗ್ಗೆ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ. ಇದಕ್ಕೆ ಜಿಲ್ಲಾಡಳಿತದ ಮೌನ ಪ್ರಶ್ನೆಗೆ ಗುರಿಯಾಗಿದೆ.
ಪ್ರಯಾಣಿಕರ ಸೌಕರ್ಯಕ್ಕಾಗಿ ಸರಕಾರ ಶೌಚಾಲಯದ ದರವನ್ನು ಕೇವಲ 3 ರೂಪಾಯಿಯಷ್ಟೇ ನಿಗದಿ ಪಡಿಸಿದೆ. ಆದರೆ ಅಲ್ಲಿ ಕೆಲಸ ಮಾಡುವ ಸಿಬ್ಬಂದಿ ಯಾವುದೇ ರಸೀದಿ ನೀಡದೇ 10 ರೂಪಾಯಿ ವಸೂಲಿ ಮಾಡುತ್ತಿರುವುದರಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸಾರಿಗೆ ಇಲಾಖೆಯ ನಿರ್ಲಕ್ಷ್ಯವನ್ನು ಜನರು ತೀವ್ರವಾಗಿ ಟೀಕಿಸಿದ್ದು ಶೌಚಾಲಯವನ್ನು ಗುತ್ತಿಗೆಯ ಆಧಾರದ ಮೇಲೆ ಕೊಟ್ಟವರ ಮೇಲೆ ಯಾವುದೇ ರೀತಿಯು ಕಾನೂನು ಕ್ರಮವಿಲ್ಲ ಎಂದು ದೂರುತ್ತಿದ್ದಾರೆ.
ಸ್ಥಳೀಯರು ಹೇಳುವಂತೆ, ಬಸ್ ನಿಲ್ದಾಣದಲ್ಲಿ ಪ್ರತಿದಿನ ಸಾವಿರಾರು ಮಂದಿ ಓಡಾಟ ಮಾಡುತ್ತಾರೆ. ಇಷ್ಟೊಂದು ಜನರಿಗೆ ಮೂಲಸೌಕರ್ಯ ಒದಗಿಸುವಲ್ಲಿ ನಿರ್ಲಕ್ಷ್ಯ ತೋರಿಸುತ್ತಿರುವುದು ವಿಷಾದನೀಯ.
ಮಹಿಳೆಯರು ಹಾಗೂ ವಯೋವೃದ್ಧರಿಗೆ ಇದು ಮತ್ತಷ್ಟು ತೊಂದರೆಯಾಗಿದೆ. ಪ್ರತೀ ಬಾರಿ 10 ರೂಪಾಯಿ ಕಟ್ಟುವುದು ಅವರಿಗೆ ಭಾರವಾಗುತ್ತಿದೆ. ‘‘ಸರಕಾರಿ ದರದಲ್ಲಿ ಸೌಲಭ್ಯ ದೊರೆಯಬೇಕಾದರೆ, ನಾವೇಕೆ ಹೆಚ್ಚಾಗಿ ಹಣ ಕೊಡಬೇಕು?’’ ಎಂಬುದಾಗಿ ಪ್ರಶ್ನಿಸುತಿದ್ದಾರೆ.
ಇನ್ನು ಕೆಲವರು ಈ ಅಕ್ರಮದ ಹಿಂದೆ ಪ್ರಭಾವಿ ಜನರ ಬೆಂಬಲ ಇರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ‘‘ಅಧಿಕಾರಿಗಳ ಆಶ್ರಯ ಇಲ್ಲದೆ ಅಕ್ರಮದಂಧೆ ನಡೆಯುವುದು ಅಸಾಧ್ಯ’’ ಎಂದು ಪ್ರಯಾಣಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಹೆಚ್ಚುವರಿ ಹಣ ವಸೂಲು ಮಾಡುತ್ತಿರುವುದನ್ನು ಕೆಲವರು ಮೊಬೈಲ್‌ನಲ್ಲಿ ವೀಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುತ್ತಿರುವುದು ವರದಿಯಾಗಿದ್ದು, ಇದರಿಂದ ವಿಷಯ ಹೆಚ್ಚು ಜನರ ಗಮನ ಸೆಳೆದಿದೆ.
ಸರಕಾರದ ದರ 3 ರೂ. ಇದೆ. 10 ರೂ. ತೆಗೆದುಕೊಳ್ಳುವುದು ನಮ್ಮ ಗಮನಕ್ಕೆ ಬಂದಿದೆ. ಸಂಬಂಧಪಟ್ಟವರಿಗೆ ಸಾಕಷ್ಟು ಬಾರಿ ನೋಟಿಸ್ ಕಳುಹಿಸಿದ್ದರೂ ಮತ್ತೆ ಅದೇ ರೀತಿ ಮುಂದುವರಿಸಿದ್ದಾರೆ. ಈ ಪ್ರಕರಣವನ್ನು ನಾನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವೆ.
-ಶಶಾಂಕ್, ಬಸ್ ಡಿಪೊ ವ್ಯವಸ್ಥಾಪಕ
ಪ್ರತಿ ದಿನ ನಮ್ಮ ಬಳಿ ಹೆಚ್ಚುವರಿ ದರ ತೆಗೆದುಕೊಳ್ಳುವುದು ದೊಡ್ಡ ವಸೂಲಿ ದಂಧೆಯಾಗಿದೆ. ಜಿಲ್ಲಾಡಳಿತ ಹಾಗೂ ಸಾರಿಗೆ ಇಲಾಖೆ ಮೌನ ವಹಿಸಿರುವುದು ಬೇಸರದ ಸಂಗತಿ. ಅಧಿಕಾರಿಗಳು ಬಂದು ನೋಡಿದಾಗ ಮಾತ್ರ ನಿಗದಿತ ದರ ಪಾಲನೆ ಮಾಡುತ್ತಾರೆ. ಆದರೆ ಅವರು ಹಿಂದಿರುಗಿದ ತಕ್ಷಣ ಮತ್ತೆ ಗೋಲ್ ಮಾಲ್ ಆರಂಭವಾಗುತ್ತದೆ.
-ರಾಹುಲ್, ಸಾರ್ವಜನಿಕ