ಧರ್ಮಸ್ಥಳ ದೂರು | ಗೃಹ ಸಚಿವರ ಹೇಳಿಕೆ; ಬೆತ್ತಲಾದ ಪ್ರೊಪಗಂಡಾ

ಧರ್ಮಸ್ಥಳ ಪ್ರಕರಣದ ತನಿಖೆ ವಿಚಾರದಲ್ಲಿ ರಾಜ್ಯದ ಟಿವಿ ಚಾನಲ್ ಗಳು, ಬಿಜೆಪಿ ಮುಖಂಡರು, ಪತ್ರಕರ್ತರ ಸೋಗಿನಲ್ಲಿರುವ ಪ್ರೊಪಗಾಂಡಾವಾದಿಗಳು, ಸೋಷಿಯಲ್ ಮೀಡಿಯಾ ಇನ್ ಫ್ಲೆಯೆನ್ಸರ್ ಗಳ ಅಪಪ್ರಚಾರ ಸೋಮವಾರ ರಾಜ್ಯದ ವಿಧಾನಸಭೆಯಲ್ಲಿ ಸಂಪೂರ್ಣವಾಗಿ ಬಯಲಾಗಿದೆ. ಈ ಪ್ರೊಪಗಂಡಾ ವ್ಯವಸ್ಥೆಯ ಆಟವನ್ನು ರಾಜ್ಯದ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ತಮ್ಮ ವಿವರವಾದ ಹೇಳಿಕೆಯ ಮೂಲಕ ಇಡೀ ರಾಜ್ಯದ ಜನರ ಮುಂದೆ ತೆರೆದಿಟ್ಟಿದ್ದಾರೆ. ಎಲ್ಲ ಮಡಿಲ ಮೀಡಿಯಾಗಳು, ಅದರಲ್ಲಿ ಮಿಂಚುವ ನಾಟಕಕೋರರು, ಸುಳ್ಳು ಕೋರರು, ದ್ವೇಷಕೋರರು ಗೃಹ ಸಚಿವರ ಹೇಳಿಕೆಯಿಂದ ಸಂಪೂರ್ಣವಾಗಿ ಬೆತ್ತಲಾಗಿದ್ದಾರೆ.
ದೂರುದಾರನ ವಿಚಾರಣೆಯ ಮೂಲಕ ಗುರುತಿಸಲಾದ ಪ್ರತೀ ಜಾಗದಿಂದ ತೆಗೆದಿರುವ ಮಣ್ಣು, ಮತ್ತು ಸಿಕ್ಕಿದ ಮೂಳೆ ಇತ್ಯಾದಿ ಮಾದರಿಗಳೆಲ್ಲವೂ FSL ವಿಶ್ಲೇಷಣೆಗೆ ಹೋಗಿದ್ದು, ಅಲ್ಲಿಂದ ವರದಿ ಬಂದ ಬಳಿಕ ತನಿಖೆ ಮುಂದುವರಿದು, ನಿಜವಾಗಿಯೂ ಏನು ನಡೆದಿದೆ ಎಂಬುದು ಬಹಿರಂಗಗೊಳ್ಳಲಿದೆ ಎಂದು ಗೃಹಸಚಿವರು ಸದನದಲ್ಲಿ ಹೇಳಿದ್ದಾರೆ.
ಯಾವುದೇ ಪ್ರಕರಣದ ವಿಚಾರಣೆ ನಡೆಯುವುದು ಹೀಗೆಯೇ. ಪ್ರಥಮ ಮಾಹಿತಿದಾರ ವ್ಯಕ್ತಿಗೆ ಸಾಕ್ಷಿ ರಕ್ಷಣಾ ಕಾಯಿದೆಯಡಿ ಹೇಗೆ ರಕ್ಷಣೆ ನೀಡಬೇಕೆಂದು ಜಿಲ್ಲಾ ನ್ಯಾಯಾಲಯದ ನಿರ್ದಿಷ್ಟ ಸಮಿತಿ ಆದೇಶ ನೀಡಿರುವ ಬಗ್ಗೆ ಕೂಡ ಸಚಿವರು ಸದನದಲ್ಲಿ ಹೇಳಿದ್ದಾರೆ.
ಇದು ರಾಜ್ಯದ ಗೃಹ ಸಚಿವರು ನೀಡಿರುವ ಅಧಿಕೃತ ಮಾಹಿತಿ. ಇದರ ಹೊರತಾಗಿ, ಕಳೆದ ಒಂದು ತಿಂಗಳಿನಲ್ಲಿ ಮಡಿಲ ಮೀಡಿಯಾಗಳಲ್ಲಿ , ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಪ್ರಚಾರ ಮಾಡಿದ್ದೆಲ್ಲವೂ ಬರೀ ಪ್ರೊಪಗಂಡಾ. ಮಡಿಲ ಮೀಡಿಯಾಗಳು ಮಾಡಿದ್ದೂ ಪತ್ರಿಕೋದ್ಯಮ ಅಲ್ಲ, ಅದು ಬರೀ ಅಪಪ್ರಚಾರ ಅಭಿಯಾನ ಮಾತ್ರ.
ಒಂದು ಅತ್ಯಂತ ಸೂಕ್ಷ್ಮ ಪ್ರಕರಣದ ತನಿಖೆಯ ಹೊಣೆ ಹೊತ್ತ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದ ತನಿಖಾ ತಂಡ ಪ್ರತಿದಿನ ಪ್ರತಿಕ್ಷಣ ಮಡಿಲ ಮೀಡಿಯಾಗಳಂತೆ ಅಪ್ಡೇಟ್ ಕೊಡಲು ಸಾಧ್ಯವೇ ಇಲ್ಲ ಎಂಬುದು ತಲೆಯಲ್ಲಿ ಒಂದಿಷ್ಟು ಬುದ್ಧಿ ಇರುವ ಯಾರಿಗಾದರೂ ಗೊತ್ತಿರುತ್ತದೆ. ಯಾರಾದರೂ ಹಾಗೆ ತನಿಖೆಯ ಮಾಹಿತಿ ಕೊಟ್ಟಿದ್ದರೂ ಅದೂ ಇನ್ನೊಂದು ಅಪರಾಧ. ಹಾಗಿರುವಾಗ ಇಲ್ಲಿನ ಮಡಿಲ ಮೀಡಿಯಾಗಳು ಹಾಗು ಅಜೆಂಡಾವಾದಿಗಳು ಪ್ರತಿದಿನ ಪ್ರತಿಕ್ಷಣ ಅದೆಲ್ಲಿಂದ ತನಿಖೆಗೆ ಸಂಬಂಧಿಸಿದ ಮಾಹಿತಿ ಕೊಡುತ್ತಿದ್ದರು ? ಹಾಗಿದ್ದರೆ ಅವರೆಲ್ಲ ಕೊಡುತ್ತಿದ್ದುದು ನಿಜವಾದ ಮಾಹಿತಿಯಲ್ಲ, ಅದು ಅಜೆಂಡಾ ಆಧರಿತ ಪಾಯಿಂಟ್ಸ್ ಗಳು ಮಾತ್ರ. ಅಲ್ಲಿ ಹಾಗಾಗಿದೆ, ಅಲ್ಲಿ ಏನೂ ಸಿಕ್ಕಿಲ್ಲ, ಏನೂ ಗೊತ್ತಿಲ್ಲ, ಆರೋಪಗಳಲ್ಲಿ ಹುರುಳಿಲ್ಲ, ಅದಿಲ್ಲ, ಇದಿಲ್ಲ ಎಂದು ಈ ಅಜೆಂಡಾವಾದಿಗಳು ಹೇಳಿದ್ದೇ ಹೇಳಿದ್ದು
ಅದರ ಜೊತೆಗೆ ಕಳೆದೆರಡು ವಾರಗಳಿಂದ ಬಿಜೆಪಿ ನೇತೃತ್ವದಲ್ಲಿ ಇಡೀ ತನಿಖೆಯನ್ನೇ ದಾರಿ ತಪ್ಪಿಸುವ ಬಹಳ ದೊಡ್ಡ ಪ್ರಯತ್ನ ನಡೆಯಿತು. ಅದಕ್ಕೆ ಮಡಿಲ ಮೀಡಿಯಾಗಳು ಸಂಪೂರ್ಣ ಸಹಕಾರ ನೀಡಿದವು. ಕೆಲವು ಪ್ರಮುಖ ಕಾಂಗ್ರೆಸ್ ನಾಯಕರೂ ಸೇರಿಕೊಂಡರು.
ಧರ್ಮಸ್ಥಳದಲ್ಲಿನ ಸಾಮೂಹಿಕ ಸಮಾಧಿ ತನಿಖೆ ವಿಚಾರವಾಗಿ ಗೃಹ ಸಚಿವ
ಜಿ ಪರಮೇಶ್ವರ್ ಸೋಮವಾರ ಸದನದಲ್ಲಿ ಉತ್ತರ ನೀಡಿದ್ದಾರೆ.
ದೂರುದಾರ ತೋರಿಸಿದಂತೆ ಮ್ಯಾಪ್ ಮಾಡಿದ ಸ್ಥಳಗಳನ್ನು ಅಗೆದು ಪರಿಶೀಲನೆ ನಡೆಸಲಾಗಿದೆ.
ಒಂದರಲ್ಲಿ ಅಸ್ಥಿಪಂಜರ ಸಿಕ್ಕಿದೆ. ಮತ್ತೊಂದು ಸ್ಥಳದಲ್ಲಿ ಮೂಳೆಗಳು ಸಿಕ್ಕಿವೆ. ಅದನ್ನು ಎಫ್ಎಸ್ಎಲ್ಗೆ ಕಳುಹಿಸಲಾಗಿದೆ. ವರದಿ ಬರಬೇಕಿದೆ ಎಂದಿದ್ದಾರೆ.
ದೂರುದಾರ ತೋರಿಸಿದ ಎಲ್ಲಾ ಸ್ಥಳಗಳಲ್ಲಿ ಮಣ್ಣಿನ ಮಾದರಿಯನ್ನು ಕೂಡ ಸಂಗೃಹ ಮಾಡಲಾಗಿದೆ ಹಾಗೂ ಎಫ್ಎಸ್ಎಲ್ಗೆ ಕಳುಹಿಸಲಾಗಿದೆ. ಅಸ್ಥಿಪಂಜರದ ವಿಶ್ಲೇಷಣೆ ಆಗಬೇಕು. ಪ್ರತಿಯೊಂದು ಸ್ಥಳಗಳಲ್ಲೂ ಮಣ್ಣಿನ ಮಾದರಿಗಳನ್ನು ಸಂಗೃಹ ಮಾಡಲಾಗಿದ್ದು, ವಿಶ್ಲೇಷಣೆಗೆ ಒಳಪಡಿಸಬೇಕಿದೆ. ವಿಶ್ಲೇಷಣೆ ಆದ ಬಳಿಕವಷ್ಟೇ ತನಿಖೆ ಶುರುವಾಗುತ್ತದೆ ಎಂದಿದ್ಧಾರೆ.
ಮಣ್ಣಿನ ಮಾದರಿಯನ್ನು ವಿಶ್ಲೇಷಣೆ ಮಾಡಿದಾಗ ರಾಸಾಯನಿಕ ಅಂಶಗಳಲ್ಲಿ ಮನುಷ್ಯನ ಮೂಳೆಗಳು ಕರಗಿರುವ ಬಗ್ಗೆ ವರದಿ ಇದೆಯೇ ಎಂಬುದನ್ನು ಕಾಯಬೇಕಿದೆ.
ಅಲ್ಲಿ ಏನೋ ಆಗಿದೆ ಅಂತಾನೂ ಹೇಳಲಾಗದು. ಆಗೇ ಇಲ್ಲ ಅಂತಾನೂ ಹೇಳಲಾಗದು. ತನಿಖೆ ಮುಗಿಯಲಿ, ಸತ್ಯಂಶ ಹೊರಬರಲಿ. ಇದೆಲ್ಲ ಆರೋಪ ಸುಳ್ಳು ಎಂದಾದರೆ ಧರ್ಮಸ್ಥಳದ ಮೇಲಿನ ನಂಬಿಕೆ, ಗೌರವ ಇನ್ನಷ್ಟು ಹೆಚ್ಚುತ್ತದೆ. ಇಲ್ಲ, ಅಲ್ಲಿ ಏನೋ ನಡೆದಿದ್ದು ಹೌದು ಎಂದಾದರೆ ಸತ್ಯ ಹೊರಬರುತ್ತೆ, ಸಂತ್ರಸ್ತರಿಗೆ ನ್ಯಾಯ ಸಿಗುತ್ತೆ.
ನಾವು ಇದನ್ನು ನ್ಯಾಯಕ್ಕೆ, ನೆಲದ ಕಾನೂನಿಗೆ ಬಿಡೋಣ. ಸತ್ಯ ಹೊರಬರಲಿ, ಅದನ್ನು ನಾವು, ನೀವೂ, ಧರ್ಮಸ್ಥಳದವರು, ಜನರು ಎಲ್ಲರೂ ಸ್ವೀಕರಿಸೋಣ. ಆವರೆಗೆ ಏನೇನೋ ಮಾತಾಡೋದು ಸರಿಯಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ
ತನಿಖೆ ನಡೆಯುತ್ತಿರುವಾಗ ನಾವು ಏನೂ ಹೇಳಕ್ಕಾಗಲ್ಲ. ಮಧ್ಯಂತರ ವರದಿಯೂ ನಮಗೆ ಬಂದಿಲ್ಲ , ಹಾಗಾಗಿ ಈಗ ಏನನ್ನೂ ಹೇಳುವಂತಿಲ್ಲ. ಆದಷ್ಟು ಸಮಗ್ರವಾಗಿ, ಆದಷ್ಟು ಶೀಘ್ರವಾಗಿ ತನಿಖೆ ಮಾಡಿ ಎಂದಷ್ಟೇ ಹೇಳಬಹುದೇ ವಿನಃ ಇಷ್ಟೇ ದಿನಗಳಲ್ಲಿ, ಹೀಗೇ ಮುಗಿಸಿ ಎಂದು ನಾವು ಹೇಳಕ್ಕಾಗಲ್ಲ. ವಿರೋಧ ಪಕ್ಷದವರು ಈ ವಿಷಯದಲ್ಲಿ ಸಹಕರಿಸಬೇಕು. ಸರಕಾರ ಯಾರ ದೂಷಣೆಯನ್ನೂ ಮಾಡಲ್ಲ, ರಕ್ಷಣೆಯನ್ನೂ ಮಾಡಲ್ಲ, ನಮಗೆ ಅದರ ಅಗತ್ಯವೂ ಇಲ್ಲ. ನಾವು ಪಕ್ಷಾತೀತವಾಗಿ ನ್ಯಾಯಯುತವಾಗಿ ತನಿಖೆ ನಡೆದು ಸತ್ಯ ಹೊರಬರಲಿ ಎಂದಷ್ಟೇ ಬಯಸುತ್ತೇವೆ ಎಂದು ಗೃಹ ಸಚಿವರು ಹೇಳಿದ್ದಾರೆ
ಈ ನಡುವೆ ಹೇಳಿಕೆಯೊಂದರ ತಿರುಚಿದ ವಿಡಿಯೋ ಇಟ್ಟುಕೊಂಡು ಇಡೀ ತನಿಖೆಯ ದಾರಿ ತಪ್ಪಿಸುವ ವಿಫಲ ಪ್ರಯತ್ನವೂ ನಡೆಯಿತು. ಆದರೆ ಗೃಹ ಸಚಿವರು ಧರ್ಮಸ್ಥಳ ವಿಷಯದಲ್ಲಿ ಮಾತ್ರ ಎಲ್ಲ ವಿವರಗಳನ್ನು ಸದನದ ಮುಂದಿಟ್ಟು ತನಿಖೆ ಈಗಷ್ಟೇ ಪ್ರಾರಂಭವಾಗಿದೆ, ತನಿಖೆ ಸಮಗ್ರವಾಗಿ ನಡೆಯಲಿದೆ, ಎಲ್ಲವನ್ನೂ ನಾವು ನೆಲದ ಕಾನೂನಿಗೆ ಬಿಟ್ಟು ತನಿಖೆ ನಡೆಯಲು ಅನುವು ಮಾಡಿಕೊಡೋಣ ಎಂದು ಸ್ಪಷ್ಟವಾಗಿ ಹೇಳಿ ಅಪಪ್ರಚಾರವಾದಿಗಳ ಬಾಯಿಗೆ ಬೀಗ ಜಡಿದಿದ್ದಾರೆ