40 ವರ್ಷಗಳಿಂದಲೂ ತಪ್ಪದ ಬಗರ್ ಹುಕುಂ ಅರ್ಜಿದಾರರ ಅಲೆದಾಟ
• ಸ್ವೀಕೃತ ಅರ್ಜಿಗಳಿಗಿಂತ ತಿರಸ್ಕೃತ ಅರ್ಜಿಗಳೇ ಹೆಚ್ಚು • ಕಾನೂನು ಸಡಿಲಕ್ಕೆ ರೈತರ ಒತ್ತಾಯ

PC: freepik
ಬೆಂಗಳೂರು: ಸುಮಾರು 40 ವರ್ಷಗಳಿಂದ ಬಗರ್ ಹುಕುಂ ಸಾಗುವಳಿದಾರರು ಅರ್ಜಿಗಳನ್ನು ಹಾಕಿಕೊಂಡು ತುಂಡು ಭೂಮಿಗಾಗಿ ಕಾಯುತ್ತಿದ್ದು, ಅರ್ಜಿದಾರರಿಗೆ ಸರಕಾರ ಭೂ ಮಂಜೂರಾತಿ ಮಾಡದೇ, ಸರಕಾರದಲ್ಲಿರುವ ಭೂಮಿ ಅಭಿವೃದ್ಧಿಗೆ ಬೇಕು, ಅರಣ್ಯ ಇಲಾಖೆಗೆ ಸೇರಿದೆ, ಗೋಮಾಳಕ್ಕೊಳಪಟ್ಟಿದೆ, ಬಂಜರು ಭೂಮಿಯಾಗಿದೆ ಎಂಬಿತ್ಯಾದಿ ಕುಂಟು ನೆಪಗಳನ್ನು ಹೇಳಿ ಕಡೆಗಣಿಸುತ್ತಿದ್ದು, ಇತ್ತ ತುಂಡು ಭೂಮಿಗಾಗಿ ರೈತರು ಸರಕಾರಿ ಕಚೇರಿಗಳಿಗೆ ಅಲೆದಾಡುವಂತಹ ಯಥಾಸ್ಥಿತಿ ಮುಂದುವರಿದಿದೆ.
ಬಗರ್ ಹುಕುಂ ಸಾಗುವಳಿ ನಮೂನೆ-50, 53 ಮತ್ತು 57ರಲ್ಲಿ ಬಗರ್ ಹುಕುಂ ಸಾಗುವಳಿದಾರರು ಅರ್ಜಿಗಳನ್ನು ಹಾಕಿಕೊಂಡಿದ್ದು, ಅರ್ಜಿ ಹಾಕಿದವರಲ್ಲಿ ಇಂದು ಸಾಕಷ್ಟು ಜನ ಮೃತಪಟ್ಟಿದ್ದಾರೆ. ಇದೀಗ ಅವರ ಮಕ್ಕಳು, ಮೊಮ್ಮಕ್ಕಳು ಅರ್ಜಿಗಳನ್ನು ಹಿಡಿದು ಕಚೇರಿಗಳತ್ತ ಮುಖ ಮಾಡಿದ್ದು, ಸರಕಾರಗಳು ಬಗರ್ ಹುಕುಂ ಕಾನೂನುಗಳನ್ನು ಸಡಿಲಗೊಳಿಸಬೇಕು. ದಲಿತರಿಗೆ, ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಭೂಮಿ ಕೊಡದೇ ಯಾವ ಸರಕಾರವೂ ಸಾಮಾಜಿಕ ನ್ಯಾಯ ಒದಗಿಸಲು ಸಾಧ್ಯವಿಲ್ಲ ಎಂದು ಹಿಡಿಶಾಪ ಹಾಕುತ್ತಿದ್ದಾರೆ.
ಸರಕಾರದ ಅಂಕಿ ಅಂಶಗಳ ಪ್ರಕಾರ, 2024ರವರೆಗೂ ಬಗರ್ ಹುಕುಂ ಸಾಗುವಳಿಗೆ 33 ಲಕ್ಷಕ್ಕೂ ಹೆಚ್ಚಿನ ಜನರು ಅರ್ಜಿಗಳನ್ನು ಹಾಕಿದ್ದಾರೆ. 33 ಲಕ್ಷ ಅರ್ಜಿಗಳೆಂದರೆ, 33 ಲಕ್ಷ ಕುಟುಂಬಗಳು. ಈ ಪೈಕಿ ಶೇ.90ರಷ್ಟು ಅರ್ಜಿಗಳನ್ನು ಹಾಕಿದವರು ದಲಿತರು, ಆದಿವಾಸಿಗಳು, ಅತಿ ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರು. ಉಳಿದಂತೆ 1.5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವರೂ ಸಹ ಅರ್ಜಿಗಳನ್ನು ಹಾಕಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಇದೀಗ ರಾಜ್ಯ ಸರಕಾರ ಅರ್ಹರಿಗೆ ಭೂಮಿ ಕೊಡಬೇಕೆನ್ನುವ ಪ್ರಕ್ರಿಯೆಯನ್ನು ಪ್ರಾರಂಭ ಮಾಡಿದ್ದರೂ, ಸಲ್ಲಿಸಿರುವ ಅರ್ಜಿಗಳಲ್ಲಿ ಸ್ವೀಕರಿಸಿರುವ ಅರ್ಜಿಗಳಿಗಿಂತ ತಿರಸ್ಕೃತ ಅರ್ಜಿಗಳೇ ಹೆಚ್ಚಾಗಿವೆ. 33 ಲಕ್ಷ ಅರ್ಜಿಗಳ ಪೈಕಿ ಇಲ್ಲಿಯವರೆಗೂ ಹೆಚ್ಚೆಂದರೆ 5 ರಿಂದ 6 ಸಾವಿರ ಅರ್ಜಿದಾರರಿಗೆ ಮಾತ್ರ ಹಕ್ಕು ಪತ್ರಗಳು ಸಿಕ್ಕಿವೆ ಎಂದು ಅರ್ಜಿದಾರರು ಹೇಳುತ್ತಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಒಂದರಲ್ಲೇ ಸಲ್ಲಿಕೆಯಾಗಿರುವ 42,350 ಅರ್ಜಿಗಳಲ್ಲಿ 33,499 ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಸದನದಲ್ಲಿ ಮಾಹಿತಿ ನೀಡಿದ್ದರು.
ಕಂದಾಯ ಸಚಿವರು ಅಧಿವೇಶನದಲ್ಲಿ ತಿಳಿಸಿದಂತೆ, ಬಗರ್ ಹುಕುಂನ ನಮೂನೆ-50, 53 ಮತ್ತು 57ರ ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು 20 ಮಾನದಂಡಗಳ ಆಧಾರದಲ್ಲಿ ಪರಿಶೀಲಿಸಲಾಗುತ್ತಿದೆ. ಅನರ್ಹ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿದೆ. 18 ವರ್ಷ ವಯಸ್ಸಾಗದ 7 ಸಾವಿರಕ್ಕೂ ಹೆಚ್ಚು ಜನರು ಸಲ್ಲಿಸಿರುವ ಅರ್ಜಿಗಳು ಕೆರೆ, ರಸ್ತೆ, ಗುಂಡು ತೋಪು, ದೇವರಕಾಡು ಸೇರಿದಂತೆ ಸಾರ್ವಜನಿಕ ಉದ್ದೇಶಕ್ಕೆ ಮೀಸಲಾದ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವುದಾಗಿ ಸಲ್ಲಿಸಿದ್ದ 27,452 ಅರ್ಜಿಗಳು, ನಗರ ಮತ್ತು ಪಟ್ಟಣಗಳ ಬಫರ್ ವಲಯದ ವ್ಯಾಪ್ತಿಯಲ್ಲಿ ಸಾಗುವಳಿ ಮಾಡುತ್ತಿರುವುದಾಗಿ ಸಲ್ಲಿಸಿದ್ದ 33 ಸಾವಿರ ಅರ್ಜಿಗಳು ಮತ್ತು ಅರಣ್ಯ ಭೂಮಿಗೆ ಸಂಬಂಧಿಸಿದ 12 ಸಾವಿರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಿದ್ದರು.
ಜಾನುವಾರುಗಳಿಗೆ ಭೂಮಿ ಮೀಸಲಿಡುವ ಸರಕಾರ ಜನರಿಗೆ ಯಾಕೆ ಮೀಸಲಿಡುವುದಿಲ್ಲ?
ಪ್ರತೀ 100 ರಾಸುಗಳಿಗೆ 30 ಎಕರೆ ಭೂಮಿಯ ಲೆಕ್ಕಾಚಾರದಲ್ಲಿ ಗೋಮಾಳ ನಿಗದಿಪಡಿಸಿದಂತೆ, ಪ್ರತೀ ಕುಟುಂಬಕ್ಕೆ/ರೈತನಿಗೆ ಕನಿಷ್ಠ ಭೂಮಿಯನ್ನೂ ಯಾಕೆ ನಿಗದಿ ಮಾಡಿಲ್ಲ? ಎಂಬುದು ರೈತರ ಆಕ್ರೋಶವಾಗಿದೆ.
ಕೃಷಿಗೆ ಆಧುನಿಕ ಸ್ಪರ್ಶ ಸಿಕ್ಕಿ ಯಾಂತ್ರೀಕರಣಗೊಂಡ ನಂತರ ರಾಸುಗಳ ಸಂಖ್ಯೆ ಕ್ರಮೇಣ ಕಡಿಮೆ ಆಗಿದೆ. ಈಗ ಹಳ್ಳಿಗಳಲ್ಲಿ ಹಸು, ಎತ್ತು, ಎಮ್ಮೆ, ಕೋಣಗಳ ಪ್ರಮಾಣ ಕಡಿಮೆಯಾಗಿವೆ. ಆದ್ದರಿಂದ ಗೋಮಾಳ ಕಾನೂನನ್ನು ತಿದ್ದುಪಡಿ ಮಾಡಿ, ಭೂಮಿ ಇಲ್ಲದವರಿಗೆ ಮತ್ತು ಅರ್ಜಿ ಹಾಕಿದವರಿಗೆ ಭೂಮಿ ಕೊಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಕಾನೂನುಗಳಿಗೆ ತಿದ್ದುಪಡಿ ತರಲಿ
ತಂತ್ರಜ್ಞಾನ/ಯಂತ್ರಗಳ ಸಹಾಯದೊಂದಿಗೆ ಬಂಜರು ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಮಾಡಿಕೊಳ್ಳಲು ಸಾಧ್ಯವಿರುವುದರಿಂದ ಸರಕಾರ ಬಂಜರು ಭೂಮಿಗೆ ಕಾನೂನನ್ನು ತಿದ್ದುಪಡಿ ಮಾಡಬೇಕು. ಕೃಷಿ ಭೂಮಿಯನ್ನು ಕೃಷಿಕನೇ ಕೊಂಡುಕೊಳ್ಳಬೇಕು, ಬೇರೆಯವರಿಗೆ ಮಾರಾಟ ಮಾಡುವಂತಿಲ್ಲ ಎನ್ನುವ ಕಾನೂನನ್ನು ಮರು ಜಾರಿಗೊಳಿಸುವ ಮೂಲಕ ಬಂಡವಾಳಶಾಹಿಗಳ ಹಾವಳಿಯನ್ನು ತಪ್ಪಿಸಬೇಕು. ಅದೇ ರೀತಿ ಅರಣ್ಯ ಭೂಮಿ ಕಾಯ್ದೆಯನ್ನೂ ತಿದ್ದುಪಡಿ ಮಾಡಬೇಕು. ಸರಕಾರ ಅಗತ್ಯವಾಗಿ ಕೆಲವು ಕಾನೂನುಗಳನ್ನು ತಿದ್ದುಪಡಿ ಮಾಡದೇ, ಭೂಮಿ ಹಂಚಿಕೆ ಅಥವಾ ಮಂಜೂರಾತಿ ಮಾಡಲು ಸಾಧ್ಯವೇ ಇಲ್ಲ ಎಂದು ರೈತ ಹೋರಾಟಗಾರ ಕಂದೇಗಾಲ ಶ್ರೀನಿವಾಸ್ ಸರಕಾರಕ್ಕೆ ಒತ್ತಾಯಿಸುತ್ತಾರೆ.
ಯಾವ ಕಾರಣಕ್ಕೆ ಅನರ್ಹರು?
1 ಅರ್ಜಿ ನಕಲು ಆಗಿರುವುದು.
2 ಕೃಷಿಕರೇ ಅಲ್ಲದವರು.
3 ಗೋಮಾಳ ಭೂಮಿಯನ್ನು ಅಧಿಕ ಪ್ರಮಾಣದಲ್ಲಿ ಒತ್ತುವರಿ ಮಾಡಿಕೊಂಡಿರುವುದು.
4 ಅರಣ್ಯ ಭೂಮಿಗೆ ಅರ್ಜಿ ಸಲ್ಲಿಸಿರುವುದು.
5 ಅರ್ಜಿದಾರರ ಹೆಸರಿನಲ್ಲಿ 4.38 ಎಕರೆಗಿಂತಲೂ ಹೆಚ್ಚು ಭೂಮಿ ಹೊಂದಿರುವುದು.
6 ಅರ್ಜಿದಾರರು ಸಲ್ಲಿಸಿರುವ ಪ್ರದೇಶದಲ್ಲಿ ವಾಸವಿರದೇ ಇರುವುದು.
7 ಅರ್ಜಿಯಲ್ಲಿ ಉಲ್ಲೇಖಿಸಿದ ಜಮೀನುಗಳಲ್ಲಿ ಸಾಗುವಳಿ ಮಾಡದವರು.
8 ಒಂದು ಕುಟುಂಬದಲ್ಲಿ 5 ಎಕರೆಗಿಂತ ಹೆಚ್ಚು ಜಮೀನು ಹೊಂದಿರುವವರು.
9 ನಮೂನೆ 50ರಲ್ಲಿ ಹಾಕಿರುವ ಅರ್ಜಿದಾರರು, ನಮೂನೆ 53, 57ರಲ್ಲಿ ಮತ್ತೆ ಅರ್ಜಿ ಸಲ್ಲಿಸಿರುವುದನ್ನು ಪರಿಗಣಿಸುತ್ತಿಲ್ಲ.
10,651 ಅರ್ಜಿಗಳು ಮಂಜೂರಾಗಿದ್ದರೂ ಖಾತೆ ಮಾಡಿಲ್ಲ
ಬಗರ್ ಹುಕುಂ ಸಾಗುವಳಿ ಅರ್ಜಿ ದಾರರ ಮಾಹಿತಿಯಂತೆ, ಸರಕಾರದ ನಿರ್ಣ ಯಾನುಸಾರವಾಗಿ ಭೂ ಮಂಜೂರಾತಿಯಾಗಿರುವ 10,651 ಅರ್ಜಿಗಳಲ್ಲಿ ಈವರೆಗೂ ಯಾವೊಬ್ಬ ರೈತನ ಹೆಸರಿಗೂ ಖಾತೆ ಮಾಡಿಲ್ಲ, ಪಹಣಿಯೂ ಸಿಕ್ಕಿಲ್ಲ. ಆ ಪೈಕಿ ತುಮಕೂರು ಜಿಲ್ಲೆಯಲ್ಲಿ 2,749, ಹಾಸನ ಜಿಲ್ಲೆಯಲ್ಲಿ 2,679, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 1,527 ಮತ್ತು ರಾಮನಗರ ಜಿಲ್ಲೆಯಲ್ಲಿ 1,144 ಪ್ರಕರಣಗಳಲ್ಲಿ ಖಾತೆಯಾಗಿಲ್ಲ.
ಎಲ್ಲೆಲ್ಲಿ ಸರಕಾರಿ ಭೂಮಿ ಇದೆ?
1 ಕರ್ನಾಟಕದಲ್ಲಿ ಎ-ಕರಾಬ್, ಬಿ-ಕರಾಬ್(ಬೆಟ್ಟಗುಡ್ಡಗಳು) ಭೂಮಿ ಕನಿಷ್ಟವೆಂದರೂ ರಾಜ್ಯಾದ್ಯಂತ 30 ಲಕ್ಷಕ್ಕೂ ಹೆಚ್ಚು ಎಕರೆ ಭೂಮಿ ಇದೆ.
2 ಸರಕಾರಿ ಗೋಮಾಳ ಕನಿಷ್ಠ 15 ಲಕ್ಷ ಎಕರೆಗಿಂತಲೂ ಹೆಚ್ಚು ಭೂಮಿ ಇದೆ.
3 ಸರಕಾರ ಸಾಮಾಜಿಕ ಅರಣ್ಯ ಕಂದಾಯ ಭೂಮಿಯಾಗಿದ್ದ 6.50 ಲಕ್ಷ ಎಕರೆ ಭೂಮಿಯನ್ನು 1980ರಿಂದ 2004ರವರೆಗೆ 30 ವರ್ಷಗಳ ಕಾಲಕ್ಕೆ ಅರಣ್ಯ ಇಲಾಖೆಗೆ ಹಸ್ತಾಂತರಿಸಿತ್ತು. ಅವಧಿ ಮುಗಿದಿದ್ದರೂ, ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ವಶಪಡಿಸಿಕೊಂಡಿಲ್ಲ. ಕಂದಾಯ ಇಲಾಖೆ 2006ರಲ್ಲಿ ಸುತ್ತೋಲೆಯನ್ನು ಹೊರಡಿಸಿ, ಈ ಭೂಮಿಯನ್ನು ಇಲಾಖೆಯು ಅರಣ್ಯ ಭೂಮಿ ಎಂದು ಪರಿಗಣಿಸದೆ, ಕಂದಾಯ ಇಲಾಖೆಗೆ ನೀಡಬೇಕು ಎಂದು ಹೇಳಿತ್ತು.
4 ಭೂ ಗುತ್ತಿಗೆ ಪದ್ದತಿಯಲ್ಲಿ 99 ವರ್ಷಗಳವರೆಗೆ 1904ರಲ್ಲಿ ಬ್ರಿಟಿಷರಿಗೆ ಮತ್ತು ಉದ್ದಿಮೆಗಳಿಗೆ ಗುತ್ತಿಗೆ ಆಧಾರದಲ್ಲಿ ಭೂಮಿಯನ್ನು ಕೊಟ್ಟಿತ್ತು. ಈಗ ಆ ಅವಧಿಯು 2004ಕ್ಕೆ ಮುಗಿದಿದ್ದರೂ, ಸರಕಾರ ಭೂಮಿಯನ್ನು ವಶಪಡಿಸಿಕೊಂಡಿಲ್ಲ. ಅದರ ಮಾಹಿತಿಯಂತೆ 4ಮಲೆನಾಡಿನಲ್ಲಿ ಸರಕಾರ ಟಾಟಾ ಅವರಿಗೆ ನೀಡಿರುವ 35 ಸಾವಿರ ಎಕರೆಗಿಂತಲೂ ಹೆಚ್ಚಿನ ಭೂಮಿ ಇದೆ.
5 ಮಲೆನಾಡಿನಲ್ಲಿ ಸರಕಾರದ ಹೆಚ್ಚುವರಿ ಭೂಮಿ 4.76ಲಕ್ಷ ಸಾವಿರ ಎಕರೆ ಇದೆ. ಒಬ್ಬರೇ ಸಾವಿರಾರು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡಿರುವರು ಇದ್ದಾರೆ. ಮಲೆನಾಡಿನಲ್ಲಿ ಭೂ-ಮಿತಿ ಕಾಯ್ದೆ ಯಾಕೆ ಜಾರಿ ಮಾಡಿಲ್ಲ ಎನ್ನುವುದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪ್ರಶ್ನೆಯಾಗಿದೆ.
ಹಲವು ವರ್ಷಗಳಿಂದ ಭೂಮಿಯಲ್ಲಿ ಕೃಷಿ ಮಾಡಿಕೊಂಡಿರುವರನ್ನು ಒಕ್ಕಲೆಬ್ಬಿಸಲು ಸಾಧ್ಯವಿಲ್ಲ. ಸರಕಾರದಲ್ಲಿರುವ ಅನೇಕ ತಹಶೀಲ್ದಾರರಿಗೆ ಕಂದಾಯ ಭೂಮಿ ತಾಲೂಕಿನಲ್ಲಿ ಎಷ್ಟಿದೆ? ಎಲ್ಲಿದೆ? ಎನ್ನುವುದರ ಸರಿಯಾದ ಮಾಹಿತಿಯೇ ಇಲ್ಲ. ಮೊದಲು ರಾಜ್ಯಾದ್ಯಂತ ಸರಕಾರದ ಭೂಮಿ ಎಷ್ಟಿದೆ ಎಂದು ತಿಳಿದುಕೊಳ್ಳಲು ಭೂಮಿ ಸರ್ವೇ ಆಗಬೇಕು. ಹಳ್ಳಿಗಳಲ್ಲಿ ಎಷ್ಟು ಜಾನವಾರುಗಳು ಇವೆ ಎಂದು ತಿಳಿದುಕೊಳ್ಳಲು ಪಶುಗಣತಿ ನಡೆಯಬೇಕು. ಗೋಮಾಳ ಕಾನೂನನ್ನು ತಿದ್ದುಪಡಿ ಮಾಡಿ, ಅದರಲ್ಲಿ ಎಷ್ಟು ರೈತರಿಗೆ ಭೂಮಿ ಕೊಡುವುದಕ್ಕೆ ಸಾಧ್ಯವಾಗುತ್ತದೋ, ಅಷ್ಟೂ ಕೊಡಲಿ. ಸರ್ವೇ ಆದ ನಂತರದಲ್ಲಿ ಭೂಮಿ ಕೊಡಲು ಕಡಿಮೆಯಾದರೆ, ಒಬ್ಬ ವ್ಯಕ್ತಿಗೆ 5 ಎಕರೆ ಭೂಮಿ ಕೊಡುವ ಬದಲಿಗೆ, 2 ಎಕರೆ ಭೂಮಿ ಕೊಟ್ಟು ಅರ್ಜಿ ಹಾಕಿದ ಎಲ್ಲ ರೈತರಿಗೂ ನ್ಯಾಯ ಕೊಡಬೇಕು.
-ದರ್ಶನ್ ಪುಟ್ಟಣ್ಣಯ್ಯ, ಶಾಸಕ
ಬಗರ್ ಹುಕುಂ ಅರ್ಜಿದಾರರ ಸಮಸ್ಯೆಗಳನ್ನು ಇಷ್ಟು ವರ್ಷಗಳಿಂದ ಬಾಕಿ ಇಟ್ಟುಕೊಂಡಿರುವುದೇ ಮಹಾಪಾಪ. ಬಡವರಿಗೆ ಭೂಮಿ ಮಂಜೂರಾತಿ ನೀಡಲು ತೊಡಕಾಗಿರುವ ಕಾನೂನುಗಳನ್ನು ಕೂಡಲೇ ಬದಲಾವಣೆ ಮಾಡಲೇಬೇಕು. ಇಲ್ಲದಿದ್ದರೆ ಜನರೇ ಕಾನೂನು ಬದಲಾಯಿಸುತ್ತಾರೆ. ಮಾರ್ಚ್ನಲ್ಲಿ ರಾಜ್ಯಾದ್ಯಂತ ಅನಿರ್ಧಿಷ್ಟಾವಧಿ ಹೋರಾಟ ಮಾಡುತ್ತೇವೆ.
-ಕುಮಾರ್ ಸಮತ, ಕಾರ್ಯಕಾರಿ ಮಂಡಳಿ ಸದಸ್ಯ, ಭೂಮಿ-ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ
ಬಗರ್ ಹುಕುಂ ಭೂಮಿಗೆ ಅರ್ಜಿ ಹಾಕಿ 20 ವರ್ಷಗಳು ಕಳೆಯಿತು. 40 ವರ್ಷಗಳಿಂದ ಉಳುಮೆ ಮಾಡಿಕೊಂಡು ಬಂದಿದ್ದೇನೆ. ಕೃಷಿಯನ್ನೂ ಬಿಟ್ಟು ಭೂಮಿ ಪಡೆದುಕೊಳ್ಳಲು ತಾಲೂಕು ಕಚೇರಿಗಳಿಗೆ ಅಲೆಯುವಂತಾಗಿದೆ. ಯಾವ ಸರಕಾರಕ್ಕೂ ಬಡವರಿಗೆ ಭೂಮಿ ಕೊಡಬೇಕೆನ್ನುವ ಮನಸ್ಸಾಗಲಿ, ಆಸಕ್ತಿಯಾಗಲಿ ಇಲ್ಲದಿರುವುದರಿಂದಲೇ ಭೂಮಿ ಮಂಜೂರಾತಿ ಮಾಡಲು ಸರಕಾರಗಳು ಇಷ್ಟೊಂದು ಅಲೆದಾಡಿಸುತ್ತಿವೆ.
-ಗಿರಿಯಪ್ಪ, ಬಗರ್ ಹುಕುಂ ಅರ್ಜಿದಾರ, ತುಮಕೂರು.
ಭೂ ಮಂಜೂರಾತಿಯಲ್ಲಿ ಬಡವರಿಗೆ ಹಂಚಲು ಭೂಮಿ ಇಲ್ಲವೆಂದರೆ ಅರ್ಜಿ ಹಾಕಿರುವ ರೈತರು ಉಳುಮೆ ಮಾಡದೆ ಅರ್ಜಿ ದಾಖಲಿಸಿದ್ದಾರೆಯೇ.?. ಕರ್ನಾಟಕದಲ್ಲಿ ಮೊದಲು ಭೂಮಿಯನ್ನು ಆಡಿಟಿಂಗ್ ಮಾಡಬೇಕು. ಕರ್ನಾಟಕ ಕಂದಾಯ ಭೂ ಮಂಜೂರಾತಿ ನಿಯಮದ ಪ್ರಕಾರ ಹಂಚಿಕೆ ಮಾಡುವ ಭೂಮಿ ವಿವರ ಪ್ರತಿ ವರ್ಷ ಪ್ರಕಟನೆ ಮಾಡಬೇಕು. ಮಲೆನಾಡಿನ ಭೂಮಿಗೆ ಭೂ-ಮಿತಿ ಜಾರಿಯಾಗಬೇಕು.
-ಕಂದೇಗಾಲ ಶ್ರೀನಿವಾಸ್, ಸದಸ್ಯರು, ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ