ಭಾರತವನ್ನು ಏಕ ಸಂಸ್ಕೃತಿಯ ದೇಶವನ್ನಾಗಿ ಮಾಡುವ ಪ್ರಯತ್ನಗಳು ಅತ್ಯಂತ ಅಪಾಯಕಾರಿ : ರೋಲೊ ರೋಮಿಗ್

ಅಮೆರಿಕದ ಡೆಟ್ರಾಯಿಟ್ ನಗರದಲ್ಲಿ ಜನಿಸಿರುವ ಪತ್ರಕರ್ತ ಹಾಗೂ ಪ್ರಬಂಧಕಾರ ರೋಲೊ ರೋಮಿಗ್ ಒಂದು ದಶಕಕ್ಕಿಂತಲೂ ಹೆಚ್ಚಿನ ಅವಧಿಯಿಂದ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು ಬೆಂಗಳೂರು ಮತ್ತು ದಕ್ಷಿಣ ಭಾರತದ ಇತರ ನಗರಗಳೊಂದಿಗೆ ಹೆಚ್ಚಿನ ನಂಟು ಹೊಂದಿದ್ದಾರೆ. ‘ನ್ಯೂಯಾರ್ಕ್ ಟೈಮ್ಸ್ ಮ್ಯಾಗಝಿನ್’ ಮತ್ತು ಇತರ ಪ್ರಮುಖ ಪತ್ರಿಕೆಗಳಿಗೆ ನಿಯಮಿತವಾಗಿ ಲೇಖನಗಳನ್ನು ಬರೆಯುತ್ತಿರುವ ರೋಮಿಗ್, ತೀಕ್ಷ್ಣ ವರದಿಗಾರಿಕೆ ಮತ್ತು ದಕ್ಷಿಣ ಭಾರತದೊಂದಿಗಿನ ಗಾಢ ಸಂಬಂಧಕ್ಕೆ ಹೆಸರಾಗಿದ್ದಾರೆ.
ಇತ್ತೀಚೆಗೆ ಅವರ ಪುಸ್ತಕವೊಂದು ಬಿಡುಗಡೆ ಗೊಂಡಿದೆ. ‘ಐ ಆ್ಯಮ್ ಆನ್ ದ ಹಿಟ್ ಲಿಸ್ಟ್: ಎ ಜರ್ನಲಿಸ್ಟ್ಸ್ ಮರ್ಡರ್ ಆಂಡ್ ದ ರೈಸ್ ಆಫ್ ಆಟೊಕ್ರಸಿ ಇನ್ ಇಂಡಿಯಾ’ ಎಂಬ ಶೀರ್ಷಿಕೆಯ ಪುಸ್ತಕವು, 2017ರಲ್ಲಿ ನಡೆದ ಪತ್ರಕರ್ತೆ ಹಾಗೂ ಹೋರಾಟಗಾರ್ತಿ ಗೌರಿ ಲಂಕೇಶ್‌ರ ಹತ್ಯೆಯ ಬಗ್ಗೆ ತನಿಖೆ ನಡೆಸುತ್ತದೆ ಮತ್ತು ಆನಂತರ ನಡೆದ ತನಿಖೆಯ ಬೆನ್ನು ಬೀಳುತ್ತದೆ.
ಈ ಪುಸ್ತಕವನ್ನು 2024ರಲ್ಲಿ ಅಮೆರಿಕದಲ್ಲಿ ಪೆಂಗ್ವಿನ್ ಪ್ರೆಸ್ ಪ್ರಕಟಿಸಿದರೆ, ಭಾರತದಲ್ಲಿ ಭಿನ್ನ ಉಪ-ಶೀರ್ಷಿಕೆಯೊಂದಿಗೆ ವೆಸ್ಟ್ ಲ್ಯಾಂಡ್ ಪ್ರಕಟಿಸಿದೆ. ಈ ಪುಸ್ತಕವು ಸಾಮಾನ್ಯ ಕತೆಯೇತರ ವಿಭಾಗದಲ್ಲಿ 2025ರ ಪುಲಿಟ್ಝರ್ ಪ್ರಶಸ್ತಿಗೆ ನಾಮಕರಣಗೊಂಡಿದ್ದು, ಸಂಭಾವ್ಯರ ಕಿರುಪಟ್ಟಿಯಲ್ಲಿ ಸ್ಥಾನ ಪಡೆದಿತ್ತು.
ನೈಜ ಅಪರಾಧ, ಆತ್ಮಚರಿತ್ರೆ ಮತ್ತು ರಾಜಕೀಯ ಇತಿಹಾಸವನ್ನು ಬೆಂಗಳೂರು ನಗರ ಮತ್ತು ಅದರ ಬದಲಾಗುತ್ತಿರುವ ಕಾಲದೊಂದಿಗೆ ಪರಿಪೂರ್ಣವಾಗಿ ಸಮ್ಮಿಳಿತಗೊಳಿಸಿರುವುದಕ್ಕಾಗಿ ಈ ಪುಸ್ತಕವು ವ್ಯಾಪಕ ಪ್ರಶಂಸೆಗೆ ಒಳಗಾಗಿದೆ.
ತಾವು ಏನನ್ನು ಕಂಡುಕೊಂಡಿದ್ದಾರೋ ಅದರ ಬಗ್ಗೆ ರೋಮಿಗ್ ಸ್ಪಷ್ಟತೆ ಮತ್ತು ಪ್ರಾಮಾಣಿಕತೆ ಹೊಂದಿದ್ದಾರೆ ಮತ್ತು ಸನ್ನಿವೇಶಗಳು ಎಷ್ಟೇ ನಿರುತ್ತೇಜಕ ಎಂಬಂತೆ ಕಂಡರೂ ಅದರ ಬಗ್ಗೆ ಅವರು ಸಿನಿಕ ಭಾವನೆ ಹೊಂದುವುದಿಲ್ಲ. ವಿವಿಧ ವಿಷಯಗಳು ಮತ್ತು ಆತಂಕಗಳ ಬಗ್ಗೆ ಅವರು ಕಾರ್ತಿಕ್ ವೆಂಕಟೇಶ್‌ರೊಂದಿಗೆ ಮಾತುಕತೆ ನಡೆಸಿದ್ದಾರೆ. ಆ ಸಂಭಾಷಣೆಯ ಆಯ್ದ ಭಾಗಗಳು ಇಲ್ಲಿವೆ:
ಭಾರತದ ಬಗ್ಗೆ ನಿಮ್ಮ ಆಸಕ್ತಿ ಯಾವಾಗ ಮತ್ತು ಹೇಗೆ ಆರಂಭವಾಯಿತು? ಯಾವುದು ನಿಮ್ಮನ್ನು ಭಾರತೀಯ ಸಾಂಸ್ಕೃತಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ಸೆಳೆಯಿತು?
ರೋಲೊ ರೋಮಿಗ್ : ನನ್ನ ಪತ್ನಿ ಮೂಲತಃ ಕೇರಳದವರು. ನಾನು ಅವರನ್ನು ನ್ಯೂಯಾರ್ಕ್ ಸಿಟಿಯಲ್ಲಿ ಭೇಟಿಯಾಗಿದ್ದೆ. ನಮ್ಮ ಮದುವೆಯಾದಾಗ, ನಾನು ಫ್ರೀಲಾನ್ಸ್ ಪತ್ರಕರ್ತನಾಗಿ ಕೆಲಸ ಆರಂಭಿಸಿದ್ದು ಮಾತ್ರ. ಕೌಟುಂಬಿಕ ಭೇಟಿಗಳ ಭಾಗವಾಗಿ ನಾನು ಭಾರತಕ್ಕೆ ಹೋದಾಗ, ನಾನು ಮಾಡಬಹುದಾದ ಆಕರ್ಷಕ ಪತ್ರಕರ್ತನ ಕೆಲಸ ಅಲ್ಲಿ ತುಂಬಾ ಇರುವುದನ್ನು ಕಂಡುಕೊಂಡೆ. ಇಲ್ಲೊಂದು ಕುತೂಹಲದ ವಿಷಯವನ್ನು ಗಮನಿಸಬಹುದಾಗಿದೆ. ಅಮೆರಿಕದ ಮಾಧ್ಯಮಗಳು ಭಾರತದ ಬಗ್ಗೆ ಗಮನ ಹರಿಸಿದಾಗಲೆಲ್ಲ, ಅವುಗಳ ಗಮನ ಯಾವಾಗಲೂ ಬಹುತೇಕ ಹರಿಯುವುದು ಉತ್ತರ ಭಾರತದತ್ತ. ಸಾಮಾನ್ಯವಾಗಿ ಪತ್ರಕರ್ತರು ದಿಲ್ಲಿಯಲ್ಲಿ ನೆಲೆಸುತ್ತಾರೆ. ಅವರು ಸಾಮಾನ್ಯವಾಗಿ ದಿಲ್ಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುವ ವಿಷಯಗಳ ಬಗ್ಗೆ ಗಮನ ಹರಿಸುತ್ತಾರೆ. ಕೆಲವೊಂದು ಸಲ ಇನ್ನಷ್ಟು ದೂರ ಹೋಗುತ್ತಾರೆ. ಭಾರತ ಒಂದು ಅಸಾಮಾನ್ಯ ವೈವಿಧ್ಯಮಯ ದೇಶವಾಗಿದೆ ಎನ್ನುವ ವಾಸ್ತವ ನನಗೆ ಅರಿವಾಗಿತ್ತು. ಅದನ್ನು ಒಂದು ದೇಶವೆನ್ನುವುದಕ್ಕಿಂತ ಹೆಚ್ಚಾಗಿ ಖಂಡ ಎನ್ನಬಹುದು. ನಾನು ನನ್ನ ಹೆಚ್ಚಿನ ಸಮಯವನ್ನು ದಕ್ಷಿಣ ಭಾರತದಲ್ಲಿ ಕಳೆಯುತ್ತೇನೆ. ದಕ್ಷಿಣ ಭಾರತವು ದಿಲ್ಲಿ ಮತ್ತು ಅದರ ಸುತ್ತಮುತ್ತಲ ಪ್ರದೇಶಕ್ಕಿಂತ ಬಹುತೇಕ ಎಲ್ಲಾ ವಿಧಗಳಲ್ಲಿ ಸಂಪೂರ್ಣವಾಗಿ ಭಿನ್ನವಾಗಿದೆ. ಹಾಗಾಗಿ, ಜಗತ್ತಿನಲ್ಲಿರುವ ಈ ನಿರ್ದಿಷ್ಟ ಸ್ಥಳ ಅಥವಾ ಸ್ಥಳಗಳ ಬಗ್ಗೆ ಎಷ್ಟು ಸಾಧ್ಯವೋ ಅಷ್ಟು ವರದಿಗಳನ್ನು ಮಾಡುವುದನ್ನು ನನ್ನ ಗುರಿಯನ್ನಾಗಿ ಮಾಡಿಕೊಂಡೆ. ಅಮೆರಿಕದ ಮಾಧ್ಯಮಗಳಲ್ಲಿ ಕಾಣಲು ಸಿಗದ ಲೇಖನಗಳನ್ನು ಬರೆಯಲು ನಿರ್ಧರಿಸಿದೆ. ಒಂದು ದಶಕದ ಕಾಲ, ದಕ್ಷಿಣ ಭಾರತದಿಂದ ನಾನು ಹಲವಾರು ವರದಿಗಳನ್ನು ಬರೆದೆ. ಅವುಗಳ ಪೈಕಿ ಹೆಚ್ಚಿನವುಗಳನ್ನು ‘ನ್ಯೂಯಾರ್ಕ್ ಟೈಮ್ಸ್’ ಮ್ಯಾಗಝಿನ್‌ಗೆ ಬರೆದೆ.
ಓರ್ವ ಸಾಮಾನ್ಯ ಅಮೆರಿಕನ್ ಪ್ರಜೆಗೆ ಭಾರತವು ಒಂದು ದೊಡ್ಡ ಜನಜಂಗುಳಿಯಂತೆ ಕಾಣುವ ಸಾಧ್ಯತೆಯಿದೆ (ಬಹುಷಃ ಈಶಾನ್ಯವನ್ನು ಹೊರತುಪಡಿಸಿ). ಆದರೆ, ನೀವು ವಿಶೇಷ ಎಂಬುದಾಗಿ ಅನಿಸುವ ವಿಷಯವೊಂದನ್ನು ಹೇಳಿದಿರಿ. ಅಂದರೆ ದಕ್ಷಿಣ ಭಾರತವು ಭಿನ್ನವಾಗಿದೆ ಎಂದು ಹೇಳಿದಿರಿ. ನಿಮ್ಮ ಪತ್ನಿಯವರಿಂದಾಗಿ ನಿಮಗೆ ಇದು ಭಿನ್ನ ಎಂದು ಅನಿಸಿದೆಯೇ ಅಥವಾ ಇದು ಭಿನ್ನವೆಂಬಂತೆ ಕಾಣಲು ಬೇರೇನಾದರೂ ಇದೆಯೇ?
ರೋಲೊ ರೋಮಿಗ್ : ಭಾರತದ ಕುರಿತ ನನ್ನ ಹೆಚ್ಚಿನ ಗ್ರಹಿಕೆಗಳಿಗೆ ನನ್ನ ಪತ್ನಿಯೇ ಕಾರಣ. ಪ್ರತಿಯೊಂದು ಹಂತದಲ್ಲೂ ನಾನು ಪಡೆದಿರುವ ತಿಳುವಳಿಕೆಗಳನ್ನು ನನ್ನ ಪತ್ನಿಯ ನೆರವಿಲ್ಲದೆ ಗಳಿಸಲು ಸಾಧ್ಯವಿರಲಿಲ್ಲ. ಆದರೆ ಯಾವ ಸ್ಥಳಕ್ಕೆ ಹೋದರೂ, ಆ ಸ್ಥಳದ ಬಗ್ಗೆ ನಮಗೆ ಗೊತ್ತಿದೆ ಎಂಬುದಾಗಿ ನಾವು ಏನು ಭಾವಿಸುತ್ತೇವೆಯೋ ಅದು ಎಲ್ಲಿಗೂ ಸಾಕಾಗುವುದಿಲ್ಲ ಎಂಬ ಮನೋಭಾವದೊಂದಿಗೆ ನಾನು ಹೋಗುತ್ತೇನೆ. ವಾಸ್ತವವಾಗಿ, ನಾವು ದೂರದಿಂದ ಒಂದು ಸ್ಥಳದ ಬಗ್ಗೆ ಯೋಚಿಸುವಾಗ ಆ ಸ್ಥಳ ಎಷ್ಟು ಸಂಕೀರ್ಣವಾಗಿದೆ ಎಂದು ಭಾವಿಸುತ್ತೇವೆಯೋ ಅದಕ್ಕಿಂತ ಹೆಚ್ಚು ಅದು ಸಂಕೀರ್ಣವಾಗಿರುತ್ತದೆ. ನಾನು ಎಲ್ಲಿ ಹೋಗುತ್ತೇನೆಯೋ, ಅಲ್ಲಿಂದ ಹೆಚ್ಚು ಸಂಕೀರ್ಣ ಮತ್ತು ಹೆಚ್ಚು ಸೂಕ್ಷ್ಮ ವರದಿಗಳನ್ನು ಎದುರು ನೋಡುತ್ತೇನೆ.
ನೀವು ಒಂದು ದಶಕಕ್ಕಿಂತಲೂ ಅಧಿಕ ಸಮಯದಿಂದ ಭಾರತದ ಬಗ್ಗೆ ವರದಿ ಮಾಡುತ್ತಿದ್ದೀರಿ. ಕಳೆದ ಒಂದು ದಶಕದ ಅವಧಿಯನ್ನು ಒಮ್ಮೆ ಹಿಂದೆ ತಿರುಗಿ ನೋಡುವುದಾರೆ, ಈ ಅವಧಿಯಲ್ಲಿ ಭಾರತವು ಜರ್ಝರಿತವಾಗಿದೆ ಎಂದು ಅನಿಸುತ್ತದೆ. ಬಹುಸಂಖ್ಯಾತರ ರಾಜಕಾರಣವು ಪ್ರತಿಯೊಂದರಲ್ಲೂ ಎದ್ದು ಕಾಣುತ್ತದೆ. ವಿರೋಧ ಪಕ್ಷಗಳೂ ಒಂದು ಹಂತದವರೆಗೆ ಇದನ್ನೇ ಅನುಸರಿಸುತ್ತಿವೆ. ಇದೇ ರೀತಿಯ ಬೆಳವಣಿಗೆಗಳು ಅಮೆರಿಕದಲ್ಲೂ ಆಗುತ್ತಿವೆ. ಇವೆಲ್ಲಾ ಎಲ್ಲಿಂದ ಬರುತ್ತಿವೆ ಎಂದು ನಿಮಗೆ ಅನಿಸುತ್ತದೆ? ಮಹತ್ವದ ಪ್ರಜಾಪ್ರಭುತ್ವಗಳೆಂದು ಪರಿಗಣಿಸಲಾಗಿರುವ ಭಾರತ ಮತ್ತು ಅಮೆರಿಕ ಎರಡರಲ್ಲೂ ಕಳೆದ ದಶಕದಲ್ಲೇ ಈ ಪ್ರವೃತ್ತಿ ಹೊರಹೊಮ್ಮಲು ಕಾರಣವೇನು?
ರೋಲೊ ರೋಮಿಗ್: ಭಾರತವು ಯಾವತ್ತೂ ನನ್ನ ಮೇಲೆ ಪ್ರಭಾವ ಬೀರಿದ್ದು ತನ್ನ ಅಸಾಧಾರಣ ವೈವಿಧ್ಯತೆ ಮತ್ತು ಬಹುತ್ವದಿಂದಾಗಿ. ಇವುಗಳಿಂದಾಗಿಯೇ ಭಾರತವು ಈಗ ಏನಾಗಿದೆಯೋ ಹಾಗೆ ಆಗಿದೆ. ಇವುಗಳೇ ಭಾರತದ ವಿಜೃಂಭಣೆಗೆ ಕಾರಣವಾಗಿದೆ. ಬಹುತ್ವದ ಅವನತಿ ಮತ್ತು ಭಾರತವನ್ನು ಏಕ ಸಂಸ್ಕೃತಿಯ ದೇಶವನ್ನಾಗಿ ಮಾಡುವ ಪ್ರಯತ್ನಗಳು ಅಪಾಯಕಾರಿ ಮತ್ತು ಬೇಸರದ ಸಂಗತಿಯಾಗಿದೆ. ಈಗ, ಈ ಅತ್ಯುಗ್ರ ರಾಷ್ಟ್ರೀಯತೆ ಎನ್ನುವುದು ಜಾಗತಿಕ ಪ್ರವೃತ್ತಿಯಾಗಿದೆ.
ಅತ್ಯುಗ್ರ ರಾಷ್ಟ್ರೀಯತೆಯ ಪ್ರವೃತ್ತಿಯು ರಾಜಕೀಯದಲ್ಲಿ ಯಾವತ್ತೂ ಅಡಗಿಕೊಂಡೇ ಬಂದಿತ್ತು ಮತ್ತು ಹೊರಬರಲು ಸರಿಯಾದ ಸಮಯಕ್ಕಾಗಿ ಕಾಯುತ್ತಿತ್ತು. ಬ್ರೂಕ್ಲಿನ್‌ನಲ್ಲಿ ನಡೆದ ಸಾಹಿತ್ಯ ಹಬ್ಬವೊಂದರಲ್ಲಿ ರಘು ಕಾರ್ನಾಡ್ ಹೇಳಿರುವ ಮಾತೊಂದು ನನಗೆ ನೆನಪಾಗುತ್ತಿದೆ. ಅವರು ಎರಡನೇ ಮಹಾಯುದ್ಧದ ಬಗ್ಗೆ ಪುಸ್ತಕವೊಂದನ್ನು ಬರೆದಿದ್ದಾರೆ ಹಾಗೂ ಎರಡನೇ ಮಹಾಯುದ್ಧದಲ್ಲಿ ಯಾವುದೇ ಪಾತ್ರ ಹೊಂದಿಲ್ಲ ಎಂಬುದಾಗಿ ಯುರೋಪ್ ದೇಶಗಳು ಮತ್ತು ಅಮೆರಿಕ ಭಾವಿಸುತ್ತಿರುವ ದೇಶಗಳ ಜನರೊಂದಿಗೆ ಸಂದರ್ಶನ ಮಾಡಿದ್ದಾರೆ. ಅವರು ಹೀಗೆ ಹೇಳುತ್ತಾರೆ: ಎರಡನೇ ಮಹಾಯುದ್ಧವು 1945ರಲ್ಲಿ ಕೊನೆಗೊಂಡಿತು ಎಂಬುದಾಗಿ ನಾವು ಭಾವಿಸಿದ್ದೇವೆ, ಆದರೆ, ಜಗತ್ತಿನ ಹೆಚ್ಚಿನ ಭಾಗಗಳಲ್ಲಿ ಅದು ಕೊನೆಗೊಂಡಿಲ್ಲ. ಅದು ಮುಂದುವರಿದಿದೆ. ಇದು ನಮ್ಮ ರಾಜಕೀಯಕ್ಕೂ ಅನ್ವಯಿಸುತ್ತದೆ ಎಂದು ನನಗನಿಸುತ್ತದೆ. ಫ್ಯಾಶಿಸ್ಟ್ ಗಳನ್ನು ನಿರ್ಣಾಯಕವಾಗಿ ಸೋಲಿಸಲಾಗಿದೆ ಎಂದು ನಾವು ಭಾವಿಸಿದ್ದೆವು. ಆದರೆ, ಅದೊಂದು ದೊಡ್ಡ ತಪ್ಪು ತಿಳುವಳಿಕೆಯಾಗಿತ್ತು. ನನ್ನ ಜೀವಮಾನದಲ್ಲಿ ನಾಝಿಗಳು ಮತ್ತೊಮ್ಮೆ ಬರುತ್ತಾರೆ ಎಂದು ನಾನು ಯಾವತ್ತೂ ಊಹಿಸಿರಲಿಲ್ಲ. ಅವರು ಅಮೆರಿಕಕ್ಕೆ ಬಂದಿದ್ದಾರೆ. ಆದರೆ ಅವರು ಸರಿಯಾದ ಸಮಯಕ್ಕಾಗಿ ಕಾಯುತ್ತಿದ್ದಾರೆ. ಅದೇ ರೀತಿ, ಭಾರತದಲ್ಲಿರುವ ಅತ್ಯುಗ್ರ ರಾಷ್ಟ್ರೀಯವಾದಿ ಗುಂಪುಗಳ ಮೂಲವು ಮುಖ್ಯವಾಗಿ ನೂರು ವರ್ಷಗಳ ಹಿಂದಿನ ಯುರೋಪಿಯನ್ ಫ್ಯಾಶಿಸಮ್‌ನಲ್ಲಿದೆ. ಆ ಸಮಯದಲ್ಲಿ (ನೂರು ವರ್ಷಗಳ ಹಿಂದೆ), ಮುಸ್ಸೋಲಿನಿಯ ಸಂಘಟನೆಗಳ ಮಾದರಿಯಲ್ಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ವು ತನ್ನನ್ನು ರೂಪಿಸಿಕೊಂಡಿತು ಎನ್ನುವುದು ವಾಸ್ತವವಾಗಿದೆ. ಆ ಸಂಘಟನೆಯ ಕೆಲವು ನಾಯಕರು ಮುಸ್ಸೋಲಿನಿಯನ್ನು ವೈಯಕ್ತಿಕವಾಗಿ ಭೇಟಿಯಾದರು. ಹಾಗಾಗಿ, ಆರೆಸ್ಸೆಸ್‌ನ ಮೂಲ ಯುರೋಪಿಯನ್ ಫ್ಯಾಶಿಸಮ್‌ನಲ್ಲಿದೆ ಎನ್ನುವುದು ರೂಪಕವಲ್ಲ. ಅದು ನೈಜ ವಿಷಯ.
ಗಡಿಯಾರದ ಲೋಲಕ (ಪೆಂಡ್ಯುಲಮ್) ನಂತೆ ರಾಜಕೀಯದಲ್ಲಿ ಎರಡು ಧ್ರುವಗಳಿವೆ. ಸರ್ವಾಧಿಕಾರ ಮತ್ತು ಏಕವ್ಯಕ್ತಿ ಅಧಿಕಾರಕ್ಕೆ ಜನರ ಒಂದು ಗುಂಪಿನ ಕಟ್ಟಾ ಬೆಂಬಲವಿದೆ ಎನ್ನುವುದನ್ನು ಅಮೆರಿಕ ಮತ್ತು ಭಾರತದಲ್ಲಿ ನನ್ನ ಕಣ್ಣಾರೆ ನೋಡುವವರೆಗೂ ನನಗೆ ಈ ವಿಷಯವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿರ ಲಿಲ್ಲ. ನಾನು ಚಿಕ್ಕವನಾಗಿದ್ದಾಗ ಇದು ನನಗೆ ಅರ್ಥವಾಗಿರಲಿಲ್ಲ. ಸರ್ವಾಧಿಕಾರಿ ನಾಯಕರು ಇರುವ ದೇಶಗಳಿಗೆ ಆ ಪರಿಸ್ಥಿತಿ ಬರಲು ಬಲವಂತ ಕಾರಣವಾಗಿತ್ತು ಮತ್ತು ಜನರು ಬಲವಂತಕ್ಕೊಳಗಾಗಿ ಸರ್ವಾಧಿಕಾರವನ್ನು ಬೆಂಬಲಿಸಿದರು ಎಂದು ನಾನು ಭಾವಿಸಿದ್ದೆ. ಆದರೆ, ನಾನೊಬ್ಬನೇ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಬಲ್ಲೆ ಎಂದು ಹೇಳಿಕೊಳ್ಳುವ ಸರ್ವಾಧಿಕಾರಿ ಗಳನ್ನು ಬೆಂಬಲಿಸುವ ಜನರ ದೊಡ್ಡ ಗುಂಪನ್ನು ನಾನು ಜಗತ್ತಿನಾದ್ಯಂತ ನೋಡುತ್ತಿದ್ದೇನೆ. ಈ ಪ್ರವೃತ್ತಿಯು ಯಾವಾಗಲೂ ವ್ಯವಸ್ಥೆಯಲ್ಲೇ ಇತ್ತು ಹಾಗೂ ಸರಿಯಾದ ಸಮಯಕ್ಕಾಗಿ ಕಾಯುತ್ತಿತ್ತು ಎನ್ನುವುದನ್ನು ನಾವು ತಿಳಿದುಕೊಳ್ಳಬೇಕಾಗಿತ್ತು. ಸರ್ವಾಧಿಕಾರ ತಲೆಯೆತ್ತಿರುವ ಹಾಗೂ ಪ್ರಜಾಪ್ರಭುತ್ವ ಪತನಗೊಂಡಿರುವ ಪ್ರತಿಯೊಂದು ಸ್ಥಳದಲ್ಲೂ, ಈ ವ್ಯವಸ್ಥೆಯನ್ನು ತರುವುದಕ್ಕಾಗಿ ದಶಕಗಳಿಂದ ಸಂಘಟಿತ ಚಳವಳಿಗಳು ತಾಳ್ಮೆಯಿಂದ ನಡೆಯುತ್ತಿದ್ದವು ಎನ್ನುವುದನ್ನು ನಾವು ಗಮನಿಸಬೇಕು.
ತುಂಬಾ ಜನ ಸರ್ವಾಧಿಕಾರದತ್ತ ಆಕರ್ಷಿತರಾಗುತ್ತಿರುವ ಈ ಹಂತದಲ್ಲಿ, ಅಧಿಕಾರದಲ್ಲಿದ್ದ ಸರಕಾರಗಳು ಪ್ರಜಾಪ್ರಭುತ್ವವನ್ನು ಬಲಪಡಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡದಿರುವುದು ಇದಕ್ಕೆ ಒಂದು ಕಾರಣ ಎಂಬುದಾಗಿ ನೀವು ಭಾವಿಸುತ್ತೀರಾ? ಭಾರತದ ಬಗ್ಗೆ ಹೇಳುವುದಾದರೆ, ಕೇಂದ್ರದಲ್ಲಿ ಅಥವಾ ರಾಜ್ಯಗಳ ರಾಜಧಾನಿಗಳಲ್ಲಿ ಪ್ರಜಾಪ್ರಭುತ್ವವಿದೆಯಾದರೂ, ಜಿಲ್ಲೆಗಳಲ್ಲಿ ಅಥವಾ ಗ್ರಾಮಗಳಲ್ಲಿ ಶತಮಾನಗಳ ಹಳೆಯ ಊಳಿಗಮಾನ್ಯ ವ್ಯವಸ್ಥೆಯು ಈಗಲೂ ವಿಜೃಂಭಿಸುತ್ತಿದೆ. ಪ್ರಜಾಪ್ರಭುತ್ವವು ರಾಷ್ಟ್ರ ಮತ್ತು ರಾಜ್ಯ ರಾಜಧಾನಿಗಳಿಂದ ಕೆಳಗಿನ ಹಂತಗಳಿಗೆ ಹೆಚ್ಚಾಗಿ ಇಳಿಯಲಿಲ್ಲ. ಇದು ಒಂದು ಕಾರಣವಾಗಿರಬಹುದೇ?
ರೋಲೊ ರೋಮಿಗ್: ಖಂಡಿತವಾಗಿಯೂ. ಇದೊಂದು ಮುಖ್ಯವಾದ ಅಂಶ. ಹೆಚ್ಚಿನ ಸ್ಥಳಗಳಲ್ಲಿ ಪ್ರಜಾಪ್ರಭುತ್ವವನ್ನು ಅಸ್ಥಿರಗೊಳಿಸುವುದು ಇಷ್ಟೊಂದು ಸುಲಭವಾಗಿದೆ ಯಾಕೆಂದರೆ, ಮೊದಲನೆಯದಾಗಿ ಪ್ರಜಾಪ್ರಭುತ್ವವು ಕಳವಳಪಡುವಷ್ಟು ಅಪೂರ್ಣವಾಗಿದೆ. ಪ್ರಜಾಪ್ರಭುತ್ವವೆಂದರೆ ಮತದಾನ ಮಾಡುವುದು ಮತ್ತು ನಮ್ಮ ನಾಯಕರ ಪರವಾಗಿ ಮತ ಹಾಕುವವರೆಗೆ ನಾವು ಪ್ರಜಾಸತ್ತಾತ್ಮಕ ದೇಶದಲ್ಲಿದ್ದೇವೆ ಎಂಬ ಕಲ್ಪನೆಯನ್ನು ನಮ್ಮ ತಲೆಗೆ ತುಂಬಿಸಲಾಗಿದೆ. ಪ್ರಜಾಪ್ರಭುತ್ವದ ಪತನಕ್ಕೆ ಹಲವು ಕಾರಣಗಳ ಪೈಕಿ ಇದು ಒಂದು ಮಾತ್ರ. ಎಲ್ಲಾ ಪ್ರಜಾಪ್ರಭುತ್ವದ ಸಂಸ್ಥೆಗಳು ಮತ್ತು ಸಮಗ್ರ ನಾಗರಿಕ ಸಮಾಜ- ಇವೆಲ್ಲವೂ ಪ್ರಜಾಪ್ರಭುತ್ವದ ಆಧಾರಸ್ತಂಭಗಳು. ಅಮೆರಿಕ ಮತ್ತು ಭಾರತವು ಪರಿಪೂರ್ಣ ಪ್ರಜಾಸತ್ತೆಗಳು ಎಂಬ ಹೊಗಳಿಕೆಯ ಮಾತುಗಳನ್ನು ಕೇಳಿದಾಗ ನನಗೆ ಸ್ವಲ್ಪ ಕಸಿವಿಸಿಯಾಗುತ್ತದೆ. ಅವುಗಳು ಯಾವತ್ತೂ ಪರಿಪೂರ್ಣ ಪ್ರಜಾಸತ್ತೆಗಳಾಗಿರಲಿಲ್ಲ. ಅವುಗಳು ಯಾವತ್ತೂ ಅಪರಿಪೂರ್ಣ ಪ್ರಜಾಸತ್ತೆಗಳಾಗಿದ್ದವು. ಅಲ್ಲಿ ಪ್ರಜಾಪ್ರಭುತ್ವ ನಿರ್ಮಾಣದ ಕೆಲಸ ಯಾವತ್ತೂ ಚಾಲ್ತಿಯಲ್ಲಿತ್ತು. ಈಗ ಪ್ರಜಾಪ್ರಭುತ್ವವು ಕುಸಿತದ ದಾರಿಯಲ್ಲಿರುವುದನ್ನು ನೋಡಿದಾಗ ನಿರಾಶೆಯಾಗುತ್ತದೆ.
ಈಗ ಅಮೆರಿಕ ಮತ್ತು ಭಾರತದಲ್ಲಿ ಈ ದ್ವೇಷದ ವಾತಾವರಣ ಹರಡಿದೆ. ಹದಿನೈದು ಅಥವಾ 20 ವರ್ಷಗಳ ಹಿಂದೆ ಪಿಸುಗುಟ್ಟಲೂ ಸಾಧ್ಯವಾಗದ ಸಂಗತಿಗಳನ್ನು ಈಗ ಸಾರ್ವಜನಿಕವಾಗಿ ಹೇಳಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ಪತನದ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ಜನರು ಭರವಸೆ ಹೊಂದಲು ಹೇಗೆ ಸಾಧ್ಯ?
ರೋಲೊ ರೋಮಿಗ್: ದ್ವೇಷವು ಸರ್ವೇಸಾಮಾನ್ಯವಾಗುತ್ತಿರುವುದನ್ನು ನೋಡಲು ವಿಷಾದವಾಗುತ್ತದೆ. ದ್ವೇಷ ಪ್ರಚೋದನೆ ಮತ್ತು ದ್ವೇಷ ಭಾಷಣ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮರಳಿ ಬರುತ್ತದೆ ಎನ್ನುವುದನ್ನು ನಾನು ಯಾವತ್ತೂ ನಿರೀಕ್ಷಿಸಿರಲಿಲ್ಲ. ದ್ವೇಷ ಪ್ರವೃತ್ತಿಯ ವಿಜೃಂಭಣೆಯನ್ನು ನೋಡಿದಾಗ ನಿರುತ್ಸಾಹಗೊಳ್ಳುವುದು ಮತ್ತು ಸಿನಿಕನಾಗುವುದು ಈಗ ಸಾಮಾನ್ಯವಾಗಿ ಬಿಟ್ಟಿದೆ. ಇಂಥ ಪರಿಸ್ಥಿತಿಯನ್ನು ನಾನೀಗ ಪ್ರತೀ ಕ್ಷಣವೂ ಎದುರಿಸುತ್ತಿದ್ದೇನೆ. ನಾನೇ ಹಲವು ಬಾರಿ ಅಧೀರನಾಗುತ್ತೇನೆ. ಆದರೆ, ನಾವು ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು- ನಮ್ಮನ್ನು ಅಧೀರರನ್ನಾಗಿಸಲೆಂದೇ ಈ ತರದ ತಂತ್ರಗಳನ್ನು ಮಾಡಲಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವ ಜನರನ್ನು ಅಧೀರರಾಗಿಸಲು ಮತ್ತು ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸಲಿಕ್ಕಾಗಿಯೇ ಟ್ರಾಲಿಂಗ್ ನಡೆಸಲಾಗುತ್ತಿದೆ ಹಾಗೂ ಇದಕ್ಕೆ ಪ್ರತಿಯಾಗಿ ಅವರು ಏನೂ ಮಾಡಲಾರದಂಥ ಪರಿಸ್ಥಿತಿಯನ್ನು ನಿರ್ಮಿಸಲಾಗುತ್ತಿದೆ. ಹಾಗಾಗಿ, ಸಿನಿಕತೆಯ ಭಾವನೆಯಿಂದ ಹೊರಬರುವುದನ್ನು ತುರ್ತಾಗಿ ಮಾಡಬೇಕಾಗಿದೆ. ಅಂತಿಮವಾಗಿ, ಸಿನಿಕತೆಯು ನಾವು ತೆಗೆದುಕೊಳ್ಳಬಹುದಾದ ಅತ್ಯಂತ ನಿರುಪಯುಕ್ತ ನಿಲುವಾಗಿದೆ. ಅದು ನಮ್ಮನ್ನು ನಿಷ್ಕ್ರಿಯತೆಯತ್ತ ಒಯ್ಯುತ್ತದೆ.
ನಾನು ಭರವಸೆಯನ್ನು ನೋಡುತ್ತಿದ್ದೇನೆ. ಸಾಮಾಜಿಕ ಹಂದರವನ್ನು ಮರುನಿರ್ಮಿಸುವುದು ಎಷ್ಟೊಂದು ಕಷ್ಟ ಎನ್ನುವುದು ಎದೆಗುಂದಿಸುವ ವಿಚಾರವೇ ಆಗಿದೆ. ಆದರೆ, ನನ್ನ ಸ್ಥಳದಲ್ಲಿ ನಡೆದಾಡಿ ಸಾಮಾನ್ಯ ಜನರೊಂದಿಗೆ ಮಾತನಾಡಿದಾಗಲೆಲ್ಲ ನಾನು ಭರವಸೆಯನ್ನು ಕಾಣುತ್ತೇನೆ. ಭರವಸೆಯನ್ನು ಕಾಣುವ ಒಂದು ವಿಧಾನವೆಂದರೆ, ಇಂಟರ್‌ನೆಟ್‌ನಿಂದ ಹೊರಬಂದು ನಿಜ ಜೀವನದಲ್ಲಿ ಜನರೊಂದಿಗೆ ಮಾತನಾಡುವುದು. ಆನ್‌ಲೈನ್‌ನಲ್ಲಿ ಪ್ರತಿಯೊಂದೂ ಅತಿ ಧ್ರುವೀಕರಣಗೊಂಡಿದೆ ಮತ್ತು ಆಳವಾಗಿ ಬೇರೂರಿದೆ ಎಂಬಂತೆ ಕಾಣುತ್ತದೆ. ಆದರೆ, ನೈಜ ಜಗತ್ತು ಎಷ್ಟು ಭಿನ್ನವಾಗಿದೆ ಎನ್ನುವುದನ್ನು ನೋಡುವಾಗ ಆಶ್ಚರ್ಯವಾಗುತ್ತದೆ. ನಾವು ಸಾಮಾನ್ಯ ಜನರೊಂದಿಗೆ ಮಾತನಾಡಿದಾಗ, ಪರಿಸ್ಥಿತಿಯು ಹೆಚ್ಚು ಸಂಕೀರ್ಣವಾಗಿದೆ ಮತ್ತು ಜನರು ನಾವು ಭಾವಿಸಿರುವುದಕ್ಕಿಂತ ಹೆಚ್ಚು ಮುಕ್ತ ಮನೋಭಾವ ಹೊಂದಿದ್ದಾರೆ ಎನ್ನುವುದು ಗಮನಕ್ಕೆ ಬರುತ್ತದೆ.
ನ್ಯೂಯಾರ್ಕ್ ನಗರದ ಮೇಯರ್ ಚುನಾವಣೆಗೆ ಟಿಕೆಟ್ ಪಡೆಯುವ ಪೂರ್ವಭಾವಿ ಚುನಾವಣೆಯಲ್ಲಿ ಸ್ಪರ್ಧಿಸಲು ರೊಹ್ರಾನ್ ಮಮ್ದಾನಿಗೆ ಡೆಮಾಕ್ರಟಿಕ್ ಪಕ್ಷ ಆಹ್ವಾನ ನೀಡಿದಾಗ, ಅವರ ಪರವಾಗಿ ಪ್ರಚಾರ ಮಾಡಲು ಸ್ವಯಂಸೇವಕರು ಭಾರೀ ಸಂಖ್ಯೆಯಲ್ಲಿ ಮುಂದೆ ಬಂದರು. ಅವರು ರಸ್ತೆಗಳಲ್ಲಿ ಪ್ರಚಾರ ಮಾಡಿದರು. ಇದೊಂದು ಅವಿಸ್ಮರಣೀಯ ಘಟನೆಯಾಗಿದೆ. ನಾನೂ ಅವರೊಂದಿಗೆ ಇದ್ದೆ. ಮಮ್ದಾನಿಯ ಆಶ್ವಾಸನೆಗಳ ಬಗ್ಗೆ ನಾನು ನನ್ನ ನೆರೆಯವರೊಂದಿಗೆ ಮಾತನಾಡಿದೆ. ಅದೊಂದು ಅಮೋಘ ಅನುಭವವಾಗಿತ್ತು ಮತ್ತು ಭರವಸೆ ಮೂಡಿಸುವ ಕ್ಷಣಗಳಾಗಿದ್ದವು. ಈ ಸಂವಹನವು, ನಾವು ಹೊರಬರಲಾಗದ ಈ ಎರಡು ಶಿಬಿರಗಳಲ್ಲಿ, ಎರಡು ವಾಸ್ತವಗಳಲ್ಲಿ ಇದ್ದೇವೆ ಎನ್ನುವ ಸುಳ್ಳನ್ನು ಬಹಿರಂಗಪಡಿಸಿತು. ನಾವು ನಿಜ ಜೀವನದಲ್ಲಿ ಜನರೊಂದಿಗೆ ಮಾತನಾಡಿದಾಗ ಮಾತ್ರ ಅವುಗಳು ಸುಳ್ಳೆಂದು ಅರಿವಾಗುತ್ತದೆ. ಇಂಥ ಸಂಗತಿಗಳು ನನ್ನಲ್ಲಿ ಭರವಸೆಯನ್ನು ಹುಟ್ಟಿಸಿವೆ.
ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದ ಸುದ್ದಿಗಳು ನನ್ನನ್ನು ಅಧೀರನಾಗಿಸುತ್ತವೆ. ಆದರೆ ಅದಕ್ಕೆ ಪರಿಹಾರವೆಂದರೆ, ಸ್ಥಳೀಯರೊಂದಿಗೆ ಬೆರೆಯುವುದು. ಭಾರತದ ಮಟ್ಟಿಗೆ ಹೇಳುವುದಾದರೆ, ಸಾಕ್ಷ್ಯಚಿತ್ರ ನಿರ್ಮಾಪಕ ಆನಂದ್ ಪಟವರ್ಧನ್‌ರ ಚಿತ್ರ ‘ವಿವೇಕ್’, ಬಲಪಂಥೀಯ ಉಗ್ರವಾದಿಗಳಿಂದ ಹತರಾದ ಲೇಖಕರ ಸಾವಿನ ಕತೆಗಳನ್ನು ಹೇಳುತ್ತದೆ. ಆ ಚಿತ್ರದ ಒಂದು ವೈಶಿಷ್ಟ್ಯವೆಂದರೆ, ನನ್ನ ಪುಸ್ತಕದಂತೆಯೇ ಅದು ಭಾರತದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಸರ್ವಾಧಿಕಾರದ ಕತೆಯನ್ನು ಹೇಳುತ್ತದೆ. ಇದಕ್ಕೆ ಪ್ರತಿರೋಧ ಒಡ್ಡುವ ಉಪಕ್ರಮಗಳ ಬಗ್ಗೆ ಶೋಧಿಸುತ್ತಾ ಚಿತ್ರವು ತೀರಾ ಸ್ಥಳೀಯ ಚಳವಳಿಗಳ ಮಟ್ಟಕ್ಕೆ ಇಳಿಯುತ್ತದೆ. ಅದು ಅಂತಿಮವಾಗಿ ಸಂಗೀತ ಮತ್ತು ಬೀದಿ ನಾಟಕದವರೆಗೆ ಬರುತ್ತದೆ. ಈ ಚಳವಳಿಗಳ ಉಪಸ್ಥಿತಿಯು ಸಾರ್ವಜನಿಕ ಕ್ಷೇತ್ರದಲ್ಲಿ ಯಾವತ್ತೂ ಇದೆ. ಈ ಚಳವಳಿಗಳು ಗ್ರಾಮ ಮಟ್ಟದಲ್ಲಿ ಸ್ಥಳೀಯ ಜನರೊಂದಿಗೆ ನೇರವಾಗಿ ಮಾತನಾಡುತ್ತವೆ. ಇಲ್ಲಿಯೇ ಭರವಸೆಯು ಜೀವಂತವಾಗಿ ಉಳಿದಿದೆ. ರಾಷ್ಟ್ರೀಯ ರಾಜಕೀಯ ಪಕ್ಷಗಳಲ್ಲಿ ಭರವಸೆಯು ಜೀವಂತವಾಗಿ ಉಳಿದಿಲ್ಲ. ಅದು ಭಿನ್ನ ಭವಿಷ್ಯವೊಂದನ್ನು ನೋಡುವ ಜನರ ಸ್ಥಳೀಯ ಚಳವಳಿಗಳಲ್ಲಿ ಜೀವಂತವಾಗಿದೆ. ಇಂಥ ಭವಿಷ್ಯವನ್ನು ರಾಷ್ಟ್ರೀಯ ಪಕ್ಷಗಳು ಇನ್ನಷ್ಟೇ ಕಲ್ಪಿಸಿಕೊಳ್ಳಬೇಕಾಗಿದೆ.