ಮಳೆಯ ಹನಿಗಳ ದ್ವಿಮುಖ ಪಯಣ: ಸಕಲೇಶಪುರದ ರಿಡ್ಜ್ ಪಾಯಿಂಟ್ ವೈಶಿಷ್ಟ್ಯ

ಸಕಲೇಶಪುರದ ಹಸಿರು ಹೊದಿಕೆಯ ಮಡಿಲಲ್ಲಿನ ಮಂಕನಹಳ್ಳಿ ಗ್ರಾಮದ ಸುತ್ತಮುತ್ತ ಒಂದೊಂದು ಹನಿ ಮಳೆಯು ತನ್ನ ಜೀವನದ ಕಥೆಯನ್ನು ಹೇಳುವಂತೆ ಕಾಣುವ ವಿಶಿಷ್ಟ ತಾಣವಿದೆ.
ಈ ತಾಣವನ್ನು ಸ್ಥಳೀಯರು ರಿಡ್ಜ್ ಪಾಯಿಂಟ್ ಎಂದು ಕರೆಯುತ್ತಾರೆ. ಇದರ ವೈಜ್ಞಾನಿಕ ಮಹತ್ವ ಜಗತ್ತಿನಲ್ಲೇ ಅಪರೂಪದ್ದು.
ಈ ಪ್ರದೇಶದಲ್ಲಿ ಬರುವ ಮಳೆಯ ನೀರಿಗೆ ಎರಡು ಬಗೆಯ ಗಮ್ಯಸ್ಥಾನ. ಈ ಹಸಿರು ಪರ್ವತಗಳಲ್ಲಿ ಬೀಳುವ ಮಳೆಯ ಹನಿ ಒಂದೆಡೆ ಅರಬ್ಬೀ ಸಮುದ್ರದತ್ತ ಪಶ್ಚಿಮಕ್ಕೆ ಹರಿಯುವುದಾದರೆ, ಇನ್ನೊಂದೆಡೆ ಬಂಗಾಳಕೊಲ್ಲಿಯತ್ತ ಪೂರ್ವಕ್ಕೆ ಪ್ರಯಾಣ ಆರಂಭಿಸುತ್ತದೆ. ಇಂತಹ ಸ್ಥಳವನ್ನು ಜಲವಿಭಜಕ ರೇಖೆ ಅಥವಾ ವಾಟರ್ ಡಿವೈಡ್ ಎಂದು ಕರೆಯುತ್ತಾರೆ.
ಮಂಕನಹಳ್ಳಿ ರಿಡ್ಜ್ ಪಾಯಿಂಟ್‌ನಲ್ಲಿ ನೀರು ಪಶ್ಚಿಮಕ್ಕೆ ಹರಿಯುವುದಾದರೆ ಅದು ಕುಮಾರಧಾರಾ, ನೇತ್ರಾವತಿ ನದಿಗಳ ಮೂಲಕ ಪಶ್ಚಿಮ ಕರಾವಳಿಯ ಅರಬ್ಬಿ ಸಮುದ್ರ ತಲುಪುತ್ತದೆ. ಇನ್ನೊಂದೆಡೆ, ಪೂರ್ವದತ್ತ ಹರಿಯುವ ನೀರು ಹೇಮಾವತಿ, ಕಾವೇರಿ ನದಿಗಳ ಮೂಲಕ ಬಂಗಾಳಕೊಲ್ಲಿಯನ್ನು ಸೇರುತ್ತದೆ. ಒಂದೇ ಸ್ಥಳದಲ್ಲಿ ಹುಟ್ಟಿದ ಹನಿಗಳು ಎರಡು ದಿಕ್ಕಿಗೆ ಹರಿದು ಎರಡು ವಿಭಿನ್ನ ಸಮುದ್ರಗಳಲ್ಲಿ ತಮ್ಮ ಅಂತ್ಯ ಕಂಡುಕೊಳ್ಳುವುದು ಭೂಗೋಳ ಶಾಸ್ತ್ರದ ಅದ್ಭುತ ಅಂಶಗಳಲ್ಲಿ ಒಂದು.
ಈ ಪ್ರದೇಶ ಪಶ್ಚಿಮಘಟ್ಟದ ಜೀವ ವೈವಿಧ್ಯ ಹಾಟ್‌ಸ್ಪಾಟ್. ಅಪಾರ ಮಳೆ, ದಟ್ಟ ಅರಣ್ಯ, ಅಪರೂಪದ ಪ್ರಾಣಿಗಳು, ಪಕ್ಷಿಗಳು, ಸಸ್ಯಗಳು ಇಲ್ಲಿ ತಮ್ಮ ಮನೆ ಮಾಡಿಕೊಂಡಿವೆ. ಹವಾಮಾನ ಬದಲಾವಣೆ ಮತ್ತು ಅರಣ್ಯ ನಾಶದಿಂದ ಈ ಜಲವಿಭಜಕ ಪ್ರದೇಶದ ಸಂರಕ್ಷಣೆ ಇಂದು ಅತ್ಯಂತ ಅಗತ್ಯವಾಗಿದೆ. ನೀರಿನ ಈ ದ್ವಿಮುಖ ಪಯಣವನ್ನು ಕಾಪಾಡುವುದು ನಮ್ಮ ಹೊಣೆಗಾರಿಕೆಯಾಗಿದೆ. ಮಳೆಯ ಹನಿ ಎರಡು ದಿಕ್ಕಿಗೆ ಹರಿಯುವ ದೃಶ್ಯ ನೋಡಲು ಹಲವಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಕೆಲವರು ಸಣ್ಣ ಹಳ್ಳಗಳಲ್ಲಿ ನೀರು ಸುರಿದು ಅದರ ದಿಕ್ಕು ನೋಡುತ್ತ ಕುತೂಹಲದಿಂದ ಕಣ್ತುಂಬಿಕೊಳ್ಳುತ್ತಾರೆ. ಪರ್ವತಗಳ ನಡುವೆ ಮಳೆಯ ಹನಿ ಗಾಳಿಯ ಜೊತೆ ಕುಣಿಯುತ್ತಾ ಅರಬ್ಬೀ ಸಮುದ್ರವೋ, ಬಂಗಾಳಕೊಲ್ಲಿಯೋ ಎಂಬ ನಿರ್ಧಾರ ಕೈಗೊಳ್ಳುವಂತೆ ತೋರುವುದು ಪ್ರಕೃತಿಯ ಅದ್ಭುತ ಸೌಂದರ್ಯ.
ಮಂಕನಹಳ್ಳಿಯ ಈ ರಿಡ್ಜ್ ಪಾಯಿಂಟ್ ನಮಗೆ ಭೂಮಿಯ ಜಲಚಕ್ರದ ವೈಭವದ ನೋಟ ನೀಡುತ್ತದೆ. ಮಳೆಯ ಹನಿ ಕೇವಲ ಹನಿಯಲ್ಲ, ಅದು ಪ್ರಕೃತಿಯ ಜಾಲವನ್ನು ಜೋಡಿಸುವ ಜೀವನಾಡಿ.