4,134 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಆದೇಶ ಹಿಂಪಡೆಯದಿರಲು ರಾಜ್ಯ ಸರಕಾರ ನಿರ್ಧಾರ

ಸಾಂದರ್ಭಿಕ ಚಿತ್ರ
ಬೆಂಗಳೂರು, ಜು.7: ರಾಜ್ಯದ 4,134 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನು ಆರಂಭಿಸಲು ಹೊರಡಿಸಿರುವ ಆದೇಶವನ್ನು ಹಿಂಪಡೆಯದಿರಲು ತೀರ್ಮಾನಿಸಿದೆ. ಸುಪ್ರೀಂ ಕೋರ್ಟ್ ನೀಡಿರುವ ಹಲವು ತೀರ್ಪುಗಳನ್ನು ಉಲ್ಲೇಖಿಸಿರುವ ರಾಜ್ಯ ಸರಕಾರವು ತನ್ನ ನಿಲುವುನ್ನು ಸಮರ್ಥಿಸಿಕೊಂಡಿದೆ.
ಅದೇ ರೀತಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕ 2015ನ್ನು ಅನುಷ್ಠಾನಗೊಳಿಸಲು ಅವಕಾಶವಿಲ್ಲ ಎಂದು ಪ್ರತಿಪಾದಿಸಿದೆ. ಹಾಗೂ ಈ ತಿದ್ದುಪಡಿ ಮಸೂದೆಯನ್ನು ಕೈಬಿಡಲು ಸಚಿವರಿಗೆ ಕಡತ ಮಂಡಿಸಿದೆ.
ರಾಜ್ಯದ 4,134 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಯನ್ನು ಪ್ರಾರಂಭಿಸಲು ಹೊರಡಿಸಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಆಗ್ರಹಿಸಿತ್ತು. ಆದರೀಗ ಸರಕಾರವು ತನ್ನ ನಿಲುವಿಗೆ ಬದ್ಧವಾಗಿರುವುದರಿಂದ ಪ್ರಾಧಿಕಾರಕ್ಕೆ ನಿರಾಸೆಯುಂಟಾಗಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು 2025ರ ಜುಲೈ 4ರಂದು ಬರೆದಿದ್ದ ಪತ್ರದಲ್ಲಿನ ಅಂಶಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಅನುಪಾಲನ ಉತ್ತರವನ್ನು ಸಿದ್ಧಪಡಿಸಿದೆ. ಈ ಸಂಬಂಧ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆಯಲಿರುವ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯು ಸಿದ್ಧಪಡಿಸಿರುವ ಅನುಪಾಲನಾ ಉತ್ತರದ ಪ್ರತಿಯು "the-file.in"ಗೆ ಲಭ್ಯವಾಗಿದೆ.
ಇಲಾಖೆಯ ಉತ್ತರದಲ್ಲೇನಿದೆ?: ಸರಕಾರವು ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಕಲಿಸುವುದಕ್ಕಾಗಿ ಮಾತೃಭಾಷೆಯನ್ನು ಹೇರುವಂತಿಲ್ಲ ಎಂದು ಸುಪ್ರೀಂ ಕೋರ್ಟ್ (ಸಿವಿಲ್ ಅಪೀಲು ಸಂಖ್ಯೆ; 5166, 5190/2013 ದಿನಾಂಕ 06/05/2014) ತೀರ್ಪು ನೀಡಿದೆ.
ರಾಜ್ಯದಲ್ಲಿ ಹಂತ ಹಂತವಾಗಿ ಈವರೆಗೆ ಒಟ್ಟು 7,137 ಸರಕಾರಿ ಶಾಲೆಗಳಲ್ಲಿ ಪ್ರಸ್ತುತ ಇರುವ ಕನ್ನಡ, ಇತರ ಮಾಧ್ಯಮದ ಜತೆಗೆ ಹೊಸದಾಗಿ ಆಂಗ್ಲ ಮಾಧ್ಯಮ (ದ್ವಿಭಾಷಾ ಮಾಧ್ಯಮ) ತರಗತಿಗಳನ್ನು ಆರಂಭಿಸಲು ಈಗಾಗಲೇ ಅಗತ್ಯ ಕ್ರಮ ವಹಿಸಿರುತ್ತದೆ. ಇದಕ್ಕೆ ವಿದ್ಯಾರ್ಥಿಗಳ ಪೋಷಕರಿಂದ, ಸಾರ್ವಜನಿಕರಿಂದ ಮತ್ತು ಜನಪ್ರತಿನಿಧಿಗಳಿಂದ ಉತ್ತಮ ಪ್ರತಿಕ್ರಿಯೆ, ಸ್ಪಂದನ ವ್ಯಕ್ತವಾಗಿದೆ ಎಂದು ಸಮರ್ಥಿಸಿಕೊಂಡಿರುವುದು ಉತ್ತರದಿಂದ ತಿಳಿದು ಬಂದಿದೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಮಾತೃಭಾಷೆ ಜತೆಗೆ ಆಂಗ್ಲ ಭಾಷೆಯ ಕೌಶಲ್ಯ ಬೆಳೆಸಲು ರಾಜ್ಯದ 4,000 ಸರಕಾರಿ ಶಾಲೆಗಳಲ್ಲಿ ದ್ವಿಭಾಷಾ ವಿಭಾಗವನ್ನು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅವರು 2025-26ನೇ ಸಾಲಿನ ಆಯವ್ಯಯ ಭಾಷಣದಲ್ಲಿ (ಕಂಡಿಕೆ 113) ಘೋಷಿಸಿದ್ದಾರೆ.
ಅದರಂತೆ ಸರಕಾರವು (ಆದೇಶ ಸಂಖ್ಯೆ ಇಪಿ 231 ಪಿಜಿಸಿ 2025, 02.07.2025) ಮತ್ತು ರಾಜ್ಯದ ಒಟ್ಟು 4,134 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 2025-26ನೇ ಸಾಲಿನಿಂದ ಒಂದನೇ ತರಗತಿಯಿಂದ ಪ್ರಸ್ತುತ ನಡೆಯುತ್ತಿರುವ ಕನ್ನಡ, ಇತರ ಮಾಧ್ಯಮದ ಜತೆಗೆ ಹೊಸದಾಗಿ ಆಂಗ್ಲ ಮಾಧ್ಯಮ (ದ್ವಿಭಾಷಾ ಮಾಧ್ಯಮ) ತರಗತಿಗಳನ್ನು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಪ್ರಾರಂಭಿಸಲು ಷರತ್ತುಬದ್ಧವಾಗಿ ಅನುಮತಿ ನೀಡಲಾಗಿದೆ ಎಂದು ತಿಳಿಸಿದೆ.
ಈ ಶಾಲೆಗಳಲ್ಲಿನ ವಿದ್ಯಾರ್ಥಿಗಳು ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಕನ್ನಡ, ಇತರ ಮಾಧ್ಯಮದ ಜತೆಗೆ ಆಂಗ್ಲ ಮಾಧ್ಯಮದಲ್ಲಿ ಸಹ ವ್ಯಾಸಂಗ ಮಾಡುತ್ತಾರೆ. ಇದರಿಂದಾಗಿ ಕನ್ನಡ ಭಾಷೆ ಮತ್ತು ಮಾಧ್ಯಮದ ಕಲಿಕೆಗೆ ಹಾಗೂ ಅಸ್ಮಿತೆಗೆ ಯಾವುದೇ ರೀತಿಯ ಧಕ್ಕೆ ಉಂಟಾಗುವುದಿಲ್ಲ ಎಂದು ಪ್ರತಿಪಾದಿಸಿರುವುದು ಗೊತ್ತಾಗಿದೆ.
ಮುಂದುವರಿದು ಪ್ರಸ್ತುತ ಇರುವ ಸ್ಥಳೀಯ, ಜಾಗತಿಕ ಸನ್ನಿವೇಶಗಳು, ಸ್ಪರ್ಧಾತ್ಮಕತೆ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಮಾತೃ ಭಾಷೆಯ ಶಿಕ್ಷಣದೊಂದಿಗೆ ಆಂಗ್ಲ ಭಾಷೆಯ ಕಲಿಕೆ ಅಗತ್ಯವಿರುವುರಿಂದ ರಾಜ್ಯದ ಮಕ್ಕಳನ್ನು ಸನ್ನದ್ಧಗೊಳಿಸಲು ಇಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ ಸರಕಾರಿ ಆದೇಶವನ್ನು ಹೊರಡಿಸಿ ಅನುಷ್ಠಾನಗೊಳಿಸಿದೆ.
‘ಇದನ್ನೀಗ ಹಿಂಪಡೆದಲ್ಲಿ ಹಿನ್ನಡೆಯುಂಟಾಗುತ್ತದೆ. ಆದ್ದರಿಂದ ಈಗಾಗಲೇ ಪ್ರಾರಂಭಿಸಿರುವ ದ್ವಿಭಾಷಾ ಮಾಧ್ಯಮದ ತರಗತಿಗಳನ್ನು ಮುಂದುವರಿಸುವುದು ಸೂಕ್ತವಾಗಿರುತ್ತದೆ’ ಎಂದು ಉತ್ತರದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಹಿಂದಿನ ಅಧ್ಯಕ್ಷರಾಗಿದ್ದ ಎಸ್.ಜಿ.ಸಿದ್ದರಾಮಯ್ಯ ಅವರ ಅಧ್ಯಕ್ಷತೆಯ ಸರಕಾರಿ ಶಾಲೆಗಳ ಸಬಲೀಕರಣ ಸಮಿತಿಯು ಮಾಡಿದ್ದ 21 ಶಿಫಾರಸುಗಳ ಪೈಕಿ 18 ಶಿಫಾರಸುಗಳನ್ನು ಈಗಾಗಲೇ ಅನುಷ್ಠಾನಗೊಳಿಸಿದೆ. ಉಳಿದ 3 ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಶಾಲಾ ಶಿಕ್ಷಣ, ಸಾಕ್ಷರತೆ ಇಲಾಖೆ ಮತ್ತು ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಗಳ ಹಂತದಲ್ಲಿ ಕ್ರಮವಹಿಸಲಾಗುವುದು ಎಂದು ಉತ್ತರದಲ್ಲಿ ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.
ರಾಜ್ಯ ಸರಕಾರವು 1994ರ ಎ.29ರಂದೇ ಭಾಷಾ ನೀತಿಯನ್ನು ರೂಪಿಸಿ ಆದೇಶ ಹೊರಡಿಸಿದೆ. ಇದರ ಪ್ರಕಾರ 1994-95ನೇ ಶೈಕ್ಷಣಿಕ ವರ್ಷದಿಂದ ರಾಜ್ಯ ಸರಕಾರದಿಂದ ಅಂಗೀಕೃತವಾದ ಶಾಲೆಗಳಲ್ಲಿ 1ರಿಂದ 5ನೇ ತರಗತಿವರೆಗೆ ಶಿಕ್ಷಣ ಮಾಧ್ಯಮವು ಮಗುವಿನ ಮಾತೃಭಾಷೆ ಅಥವಾ ಕನ್ನಡ ಭಾಷೆಯೇ ಆಗಿರಬೇಕು ಎಂದು ಆದೇಶಿಸಿತ್ತು. ಇದನ್ನು ಕರ್ನಾಟಕ ರಾಜ್ಯ ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘವು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತ್ತು. ಈ ಕುರಿತು 2008ರಂದು ನ್ಯಾಯಾಲಯವು ಭಾಷಾ ನೀತಿಗೆ ಹೊರಡಿಸಿದ್ದ 1994ರ ಆದೇಶವನ್ನು ರದ್ದುಗೊಳಿಸಿ ಆದೇಶಿಸಿದೆ ಎಂದು ತಿಳಿಸಿದೆ.
2008ರಲ್ಲಿ ಹೈಕೋರ್ಟ್ ನೀಡಿರುವ ತೀರ್ಪು, ರಾಜ್ಯದ ಭಾಷಾ ನೀತಿಗೆ ಬಾಧಕವಾಗಿದೆ. ಇದನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯದಲ್ಲಿಯೂ (ಎಸ್ಎಲ್ಪಿ 290/2009) ವಿಶೇಷ ಮೇಲ್ಮನವಿ ಸಲ್ಲಿಸಿತ್ತು. ಈ ಸಂಬಂಧ ಸರ್ವೋಚ್ಛ ನ್ಯಾಯಾಲಯವು 2009ರ ಜುಲೈ 21ರಂದು ಮಧ್ಯಂತರ ಆದೇಶ ಹೊರಡಿಸಿತ್ತು. ಯಥಾ ಸ್ಥಿತಿ ಕಾಯ್ದುಕೊಳ್ಳುವಂತೆ ಸೂಚಿಸಿದೆ. ನಂತರ 2012ರ ಜನವರಿ 6ರಂದು ಹೊರಡಿಸಿದ್ದ ಅಂತಿಮ ಆದೇಶದಲ್ಲಿ ಎಸ್ಎಲ್ಪಿಯನ್ನು ವಜಾಗೊಳಿಸಿದೆ.
ಈ ಆದೇಶವನ್ನೂ ಸರಕಾರವು ಪ್ರಶ್ನಿಸಿತ್ತು. 2014ರಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಲ್ಲಿ ಸರಕಾರವು ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಕಲಿಸುವುದಕ್ಕಾಗಿ ಮಾತೃಭಾಷೆಯನ್ನು ಹೇರುವಂತಿಲ್ಲ ಎಂದು ತೀರ್ಪು ನೀಡಿದೆ. ಹೀಗಾಗಿ ಉಚಿತ ಮತ್ತು ಕಡ್ಡಾಯ ಶಿಕ್ಷಣ ಪಡೆಯಲು ಮಕ್ಕಳ ಹಕ್ಕು (ಕರ್ನಾಟಕ ತಿದ್ದುಪಡಿ) ವಿಧೇಯಕ 2015ನ್ನು ಅನುಷ್ಠಾನಗೊಳಿಸಲು ಅವಕಾಶವಿಲ್ಲ. ಹೀಗಾಗಿ ಈ ತಿದ್ದುಪಡಿ ಮಸೂದೆಯನ್ನು ಕೈಬಿಡುವ ಸಂಬಂಧ ಸಚಿವರಿಗೆ ಕಡತವನ್ನು ಮಂಡಿಸಿದೆ ಎಂದು ಮಾಹಿತಿ ಒದಗಿಸಿರುವುದು ಗೊತ್ತಾಗಿದೆ.
ರಾಜ್ಯದಲ್ಲಿ ಪ್ರಸಕ್ತ 41,735 ಸರಕಾರಿ ಶಾಲೆಗಳು, ಒಟ್ಟು 5,674 ಅನುದಾನಿತ ಶಾಲೆಗಳು, 4,777 ಅನುದಾನ ರಹಿತ ಶಾಲೆ ಮತ್ತು ಒಟ್ಟು 262 ಇತರ ಶಾಲೆಗಳು ಸೇರಿದಂತೆ ಒಟ್ಟು 52,448 ಶಾಲೆಗಳು ಕನ್ನಡ ಮಾಧ್ಯಮದಲ್ಲಿ ನಡೆಯುತ್ತಿವೆ.
ರಾಜ್ಯ ಸರಕಾರದ ನಿರ್ಧಾರ ಸಂಬಂಧ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಮತ್ತು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿದ್ದು, ಕನ್ನಡವನ್ನು ಬದಿಗಿಡಲಾಗುತ್ತಿರುವ ಈ ಉಪಕ್ರಮವನ್ನು ಕೆಡಿಎ ಒಪ್ಪುವುದಿಲ್ಲ ಎಂದು ಹೇಳಿದ್ದನ್ನು ಸ್ಮರಿಸಬಹುದು.