ವಿಜಯಪುರ: ಮಾವಾ ಅಡ್ಡಗಳ ಮೇಲೆ ಪೊಲೀಸ್ ದಾಳಿ; ಮೂರು ಆರೋಪಿಗಳ ಬಂಧನ

ವಿಜಯಪುರ: ಮುದ್ದೇಬಿಹಾಳ ಹಾಗೂ ತಾಳಿಕೋಟಿ ಪಟ್ಟಣಗಳಲ್ಲಿ ಅನಧಿಕೃತವಾಗಿ ಮಾವಾ ತಯಾರಿಕೆ ಹಾಗೂ ಮಾರಾಟದ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಹಾಗೂ ಸಾವಿರಾರು ರೂ. ಮೌಲ್ಯದ ಮಾವಾ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮುದ್ದೇಬಿಹಾಳ ಪಟ್ಟಣದ ಸಂಗಮೇಶ್ವರ ನಗರದಲ್ಲಿ ಮಾವಾ ತಯಾರಿಕೆ ವೇಳೆ ದಾಳಿ ನಡೆಸಿದಾಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳನ್ನು ಸಲೀಂ ಖುದಾನಸಾಬ ಪಡೇಕನೂರ, ರಮೇಶ ಗಣಪ್ಪ ಪೂಜಾರಿ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 11,200 ಸಾವಿರ ರೂ. ಮೌಲ್ಯದ 14 ಕೆಜಿ ಕಚ್ಚಾ ಮಾವಾ, ಅಡಿಕೆ ಚೂರು, ಸುಣ್ಣದ ಡಬ್ಬಿ ಸೇರಿದಂತೆ ಸಾವಿರಾರು ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ತಾಳಿಕೋಟೆ ಪಟ್ಟಣದ ಖತ್ರಿ ಬಜಾರ್ ಬಳಿ ಮಾವಾ ಮಾರಾಟದಲ್ಲಿ ತೊಡಗಿದ್ದ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಹಿಬೂಬಸಾಬ ಮಮದಾಪೂರ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಯಿಂದ 22,500 ರೂ. ಮೌಲ್ಯದ 45 ಕೆಜಿ ತಂಬಾಕು, 12,328 ರೂ. ನಗದು ಸೇರಿದಂತೆ 51,628 ರೂ. ಮೌಲ್ಯದ ವಸ್ತುಗಳನ್ನು ಜಪ್ತು ಮಾಡಿಕೊಂಡಿದ್ದಾರೆ.
ಎರಡು ಪ್ರಕರಣಗಳಲ್ಲಿ ಒಟ್ಟು 118.4 ಕೆಜಿ ಮಾವಾ ಹಾಗೂ ಮಾವಾ ತಯಾರಿಸಲು ಬಳಸುವ ಕಚ್ಚಾ ವಸ್ತುಗಳು ಸೇರಿ ಒಟ್ಟು 79,468 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ಈ ಕುರಿತು ಮುದ್ದೇಬಿಹಾಳ ಹಾಗೂ ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.