ವಿಜಯಪುರಕ್ಕೆ 371 ಜೆ ಮೀಸಲಾತಿ ನೀಡುವಂತೆ ಆಗ್ರಹಿಸಿ ಧರಣಿ
ವಿಜಯಪುರ : ಉತ್ತರ ಕರ್ನಾಟಕದ ಅತೀ ಹಿಂದುಳಿದ ಜಿಲ್ಲೆಯಾಗಿರುವ ವಿಜಯಪುರಕ್ಕೆ 371 ಜೆ ಮೀಸಲಾತಿ ನೀಡುವಂತೆ ಆಗ್ರಹಿಸಿ ರೈತ ಭಾರತ ಪಕ್ಷದ ಪದಾಧಿಕಾರಿಗಳು ನಗರದ ಜಲನಗರ ಬುದ್ಧವಿಹಾರದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕುದುರೆ ಟಾಂಗಾಗಳಿಗೆ ಜಿಲ್ಲೆಯ ಸಚಿವರು, ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ತಿನ ಸದಸ್ಯರ ಹೆಸರುಗಳುಳ್ಳ ಬಿತ್ತಿ ಪತ್ರಗಳನ್ನು ಕಟ್ಟಿ ಟಾಂಗಾ ಮೆರವಣಿಗೆ ನಡೆಸಿ ವಿನೂತನ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ರೈತ ಭಾರತ ಪಕ್ಷದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ವಿಜಯಪುರ ಜಿಲ್ಲೆಗೆ ನ್ಯಾಯಯುತವಾಗಿ ದೊರಕಬೇಕಾಗಿದ್ದ 371ಜೆ ಮೀಸಲಾತಿ ತಪ್ಪಿದ್ದಕ್ಕೆ ಜಿಲ್ಲೆಯನ್ನು ಪ್ರತಿನಿಧಿಸುವ ಶಾಸಕರು, ಸಂಸದರು ಹಾಗೂ ಸಚಿವರು ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಧ್ವನಿ ಎತ್ತದೆ ಇರುವುದೇ ಮೂಲ ಕಾರಣ ಎಂದು ಆರೋಪಿಸಿದರು.
ಜಿಲ್ಲೆಯ ಜನಪ್ರತಿನಿಧಿಗಳು ಸ್ವಾರ್ಥ ರಾಜಕಾರಣದಲ್ಲಿ ಮುಳುಗಿರುವುದರಿಂದ ಜಿಲ್ಲೆಗೆ ದೊಡ್ಡ ಅನ್ಯಾಯವಾಗಿದೆ. ನಿಮ್ಮ ಕುತಂತ್ರವನ್ನು ಪ್ರಜ್ಞಾವಂತ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕೂಡಲೇ ಎಡಬಿಡಂಗಿ ನಾಟಕಗಳನ್ನು ಬಿಡಿ ವಿಜಯಪುರ ಜಿಲ್ಲೆಗೆ 371ಜೆ ಕೊಡಬೇಕು. ಜಿಲ್ಲೆಯ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸಚಿವ ಶಿವಾನಂದ ಪಾಟೀಲ ಇಬ್ಬರೂ ರಾಜ್ಯದ ಪ್ರಭಾವಿ ರಾಜಕಾರಣಿಗಳು ಸ್ವಹಿತಾಸಕ್ತಿಯನ್ನು ಬಿಟ್ಟು ಜಿಲ್ಲೆಯ ಯುವ ಜನರ ಹಿತಕ್ಕಾಗಿ 371ಜೆ ವಿಷಯವನ್ನು ಸಚಿವ ಸಂಪುಟದಲ್ಲಿ ವಿಜಯಪುರ ಜಿಲ್ಲೆಗೆ ಮೀಸಲಾತಿ ಕಲ್ಪಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ಒತ್ತಾಯಿಸಿದರು.
ಹೋದಲ್ಲಿ ಬಂದಲ್ಲಿ ದೊಡ್ಡ ದೊಡ್ಡ ಭಾಷಣ ಮಾಡುವ ವಿಜಯಪುರ ನಗರ ಶಾಸಕ ಬಸನಗೌಡ ರಾಮನಗೌಡ ಪಾಟೀಲ ಯತ್ನಾಳ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು ತಮ್ಮ ಭಾಷಣಗಳಿಗೆ ಕೇಕೆ ಹಾಕಲು ಸಭೆ ಸಮಾರಂಭಗಳಗೆ ಚಪ್ಪಾಳೆ ತಟ್ಟಲು ಬರುವ ವಿದ್ಯಾರ್ಥಿಗಳು ಹಾಗೂ ಯುವ ಜನರ ಪರವಾಗಿ ಧ್ವನಿ ಎತ್ತದೆ ದೊಡ್ಡ ಅನ್ಯಾಯ ಮಾಡುತ್ತಿದ್ದೀರಿ. ನಿಮಗೆ ಯುವ ಜನರ ಬಗ್ಗೆ ಕಾಳಜಿ ಇದ್ದರೆ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಯುವ ಜನತೆಗೆ ಉದ್ಯೋಗದಲ್ಲಿ ಸಿಗುವ ಮೀಸಲಾತಿಗಾಗಿ ಸರ್ಕಾರವನ್ನು ಒತ್ತಾಯಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರತಿಗ್ರಾಮ, ಹೋಬಳಿ ತಾಲೂಕು ನಗರಗಳಲ್ಲಿ ಜಿಲ್ಲೆಯ ಜನತೆಗೆ ನೀವು ಮಾಡಿದ ಅನ್ಯಾಯವನ್ನು ದಾಖಲೆ ಸಮೇತ ಬಿಡುಗಡೆಗೊಳಿಸಿ ಮನವರಿಕೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪಕ್ಷದ ಹಿರಿಯ ಮುಖಂಡ ಮಲ್ಲನಗೌಡ ಪಾಟೀಲ (ಕೊಣ್ಣೂರ) ಮಾತನಾಡಿ, ಪಕ್ಷಬೇದ ಮರೆತು ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದ್ದ ಎಲ್ಲ ಜನಪ್ರತಿನಿಧಿಗಳು ಪಕ್ಷ ಬೇಧ ಮರೆತು ಜಿಲ್ಲೆಗೆ ಅನ್ಯಾಯ ಮಾಡಲು ಒಂದಾಗಿದ್ದಾರೆ. 371ಜೆ ಜಾರಿಗೊಳ್ಳುವಾಗ ಒಬ್ಬರೇ ಒಬ್ಬರು ಧ್ವನಿ ಎತ್ತದೆ ಇರುವುದು ಇದಕ್ಕೆ ನಿದರ್ಶನವಾಗಿದೆ. ಕಳೆದ ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದ್ದರೂ ತಮಗೇನು ಗೊತ್ತಿಲ್ಲದಂತೆ ವರ್ತಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಕೂಡಲೇ ನೀವು ಮಾಡಿರುವ ತಪ್ಪಿನಿಂದ ಜಿಲ್ಲೆಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಲು ಮೀಸಲಾತಿ ಒದಗಿಸಬೇಕು. ಇಲ್ಲವಾದಲ್ಲಿ ಮುಂಬರುವ ಚುನಾವಣೆಗಳಲ್ಲಿ ಜನಪ್ರತಿನಿದಿಗಳಿಗೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಂಬಾಜಿ ನಾರಾಯಣಕರ, ಸಿದ್ದಪ್ಪ ಪೂಜಾರಿ, ರಮೇಶ ಬಿರಾದಾರ, ಹೊನ್ನಪ್ಪ ಏಗೆಪ್ಪ ವಾಗ್ಮೋರೆ, ಮಲ್ಲೇಶಿ ದೇಸಾಯಿ, ದಾವಸಲಾಬ ಕೊರಬು, ಗಂಗಾ ಮೋರೆ, ಶಂಕರ ಪರನಾಕರ, ಶಿವರಾಜ ಕರಾಳ, ರೇಣುಕಾ ಪಾಟೀಲ, ಸಿದ್ಧರಾಮ ಚಟ್ನಿ, ವನಿತಾ ರಾಜನ ಧೋಂಜೆ, ಶಂಕ್ರೆಪ್ಪ ಸುರಪುರ, ಭೀಮು ಬಾಗೇವಾಡಿ, ಪಾರ್ವತಿ ಮಾದರ, ಪವಿತ್ರಾ ಮನಗೂಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.