ವಿಜಯಪುರ | ಆಸ್ಪತ್ರೆ ಆವರಣದಲ್ಲಿಯೇ ಗರ್ಭಿಣಿಗೆ ಹೆರಿಗೆ; ಸಿಬ್ಬಂದಿ ನಿರ್ಲಕ್ಷ್ಯ ಆರೋಪ

ಸಾಂದರ್ಭಿಕ ಚಿತ್ರ
ವಿಜಯಪುರ: ಆಸ್ಪತ್ರೆ ಆವರಣದಲ್ಲಿಯೇ ಗರ್ಭಿಣಿಗೆ ಹೆರಿಗೆ ಆಗಿರುವ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದು, ಸಿಬ್ಬಂದಿ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಲಾಗಿದೆ.
ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದ ಕಾವೇರಿ ಎಂಬ ಗರ್ಭಿಣಿಯನ್ನು ಆಂಬ್ಯುಲೆನ್ಸ್ ನಲ್ಲಿ ಜಿಲ್ಲಾಸ್ಪತ್ರೆ ಆವರಣಕ್ಕೆ ತರಲಾಗಿದ್ದು, ಈ ವೇಳೆ ಮಹಿಳೆ ಅರ್ಧ ಗಂಟೆ ತೀವ್ರನೋವಿನಿಂದ ಬಳಲಿದ್ದರೂ, ಆಸ್ಪತ್ರೆ ಸಿಬ್ಬಂದಿ ಹೆರಿಗೆ ವ್ಯವಸ್ಥೆ ಮಾಡುವಲ್ಲಿ ವಿಳಂಬ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವೇಳೇ ಸ್ಥಳದಲ್ಲಿದ್ದ ಮಹಿಳೆಯರು ಆಸ್ಪತ್ರೆಯ ಬಾಗಿಲು ಪಕ್ಕದಲ್ಲಿಯೇ ಗರ್ಭಿಣಿಯನ್ನು ಸೀರೆಯಿಂದ ಮರೆ ಮಾಡಿ, ಹೆರಿಗೆ ಮಾಡಿಸಲಾಗಿದೆ ಎಂದು ತಿಳಿದು ಬಂದಿದೆ. ಈಗ ತಾಯಿ, ಮಗು ಆರೋಗ್ಯವಾಗಿದ್ದಾರೆ.
ಆಸ್ಪತ್ರೆ ಬಾಗಿಲಿಗೆ ತುಂಬು ಗರ್ಭಿಣಿಯನ್ನು ಕರೆತಂದರೂ ತುರ್ತಾಗಿ ಸ್ಪಂದಿಸಿ, ಹೆರಿಗೆ ಮಾಡಿಸದ ಆಸ್ಪತ್ರೆ ಸಿಬ್ಬಂದಿಗಳು ನಿರ್ಲಕ್ಷ್ಯ ಮಾಡಿರುವುದು ಖಂಡನೀಯ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ, "ಗರ್ಭಿಣಿಯನ್ನು ಬಸವನಬಾಗೇವಾಡಿಯಿಂದ ಕರೆತರುವಾಗ ತಡವಾಗಿರಬಹುದು. ಅಲ್ಲಿನವರು ಬೇಗ ಕಳಿಸಿದ್ದರೆ ಇಂತಹ ಸಂದರ್ಭ ಬರುತ್ತಿರಲಿಲ್ಲ. ಕೆಲವೊಮ್ಮೆ ಈ ರೀತಿ ಆಗುತ್ತದೆ. ಸದ್ಯ ತಾಯಿ, ಮಗು ಆರೋಗ್ಯವಾಗಿದ್ದು, ಯಾವುದೇ ರೀತಿ ಆತಂಕ ಪಡುವ ಅಗತ್ಯವಿಲ್ಲ" ಎಂದು ಹೇಳಿದರು.