ವಿಜಯಪುರ | ನಕಲಿ ಕ್ರಿಮಿನಾಶ ತಯಾರಿಕೆ ಅಡ್ಡೆ ಮೇಲೆ ಪೊಲೀಸರ ದಾಳಿ; 1.36 ಕೋಟಿ ರೂ. ಮೌಲ್ಯದ ವಸ್ತು ಜಪ್ತಿ

ವಿಜಯಪುರ : ಪೊಲೀಸರು ಮತ್ತು ಕೃಷಿ ಅಧಿಕಾರಿಗಳು ನಕಲಿ ಕ್ರಿಮಿನಾಶ ತಯಾರಿಕೆ ಅಡ್ಡೆ ಮೇಲೆ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದು, ಈ ದಾಳಿಯಲ್ಲಿ 1.36 ಕೋಟಿ ರೂ. ಮೌಲ್ಯದ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ.
ನಗರದ ಕೈಗಾರಿಕೆ ಪ್ರದೇಶದ ಗೋದಾಮಿನ ಮೇಲೆ ಗುರುವಾರ ಸಂಜೆಯೇ ದಾಳಿ ನಡೆದಿದ್ದು, ಈ ಸಂಬಂಧ ಇದೀಗ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕೊಂಡಗೂಳಿ ಗ್ರಾಮದ ವಿದ್ಯಾಸಾಗರ ಚಿನ್ನಾರೆಡ್ಡಿ ಮಲ್ಲಾಬಾದಿ ಹಾಗೂ ಕಲಬುರಗಿ ಜಿಲ್ಲೆಯ ಬೊಳನಿ ಗ್ರಾಮದ ಅಮರ ಗುರುನಾಥ ರೆಡ್ಡಿ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ ಸುಮಾರು 1,36,98,523 ರೂ. ಮೌಲ್ಯದ ಲೈಫ್ ಅಗೋ ಕೆಮಿಕಲ್ ಹೆಸರಿನಲ್ಲಿರುವ ನಕಲಿ ಕ್ರಿಮಿನಾಶಕ ಔಷಧಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಗೋಲ್ಡನ್ ಡ್ರಾಪ್ ಕ್ರಾಪ್ ಪ್ರೊಟೆಕ್ಷನ್ ಎನ್ನುವ ಕಂಪನಿಯ ಬೋರ್ಡ್ ಹಾಕಿರುವ ಗೋದಾಮಿನಲ್ಲಿ ಲೈಫ್ ಅಗೋ ಕೆಮಿಕಲ್ ಕಂಪನಿಯ ಹೆಸರಿನಲ್ಲಿ ತಾವೇ ತಯಾರಿಸಿದ ನಕಲಿ ಕ್ರಿಮಿನಾಶಕ ಔಷಧಗಳಿಗೆ ಲೈಫ್ ಅಗೋ ಕೆಮಿಕಲ್ ಕಂಪನಿಯ ಲೇಬಲ್‌ಗಳನ್ನು ಅಂಟಿಸಿ, ಅನಧಿಕೃತವಾಗಿ ನಕಲಿ ಕ್ರಿಮಿನಾಶಕ ಔಷಧಗಳನ್ನು ತಯಾರಿಸಿ, ಗೋದಾಮಿನಲ್ಲಿ ಸಂಗ್ರಹಿಸಿಟ್ಟು ಮಾರಾಟ ಮಾಡುತ್ತಿದ್ದ ಅಧಿಕೃತ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿತ್ತು.
ಎಸ್‌ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್‌ಪಿ ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಬಸವರಾಜ ಯಲಿಗಾರ, ಸಿಪಿಐ ಮಲ್ಲಯ್ಯ ಮಠಪತಿ ಮಾರ್ಗದರ್ಶನದಲ್ಲಿ ಎಪಿಎಂಸಿ ಠಾಣೆಯ ಪಿಎಸ್‌ಐ ಬಸವರಾಜ ತಿಪರಡ್ಡಿ ಮತ್ತು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ (ಜಾರಿ ದಳ-1) ಅಮಗೊಂಡ ಬಿರಾದಾರ ಮತ್ತು ಸಹಾಯಕ ಕೃಷಿ ನಿರ್ದೇಶಕಿ (ಜಾರಿ ದಳ-2) ರೇಷ್ಮಾ ಸುತಾರ ಹಾಗೂ ಇತರ ಸಿಬ್ಬಂದಿಯನ್ನೊಳಗೊಂಡ ತಂಡ ಈ ಜಂಟಿ ಕಾರ್ಯಾಚರಣೆ ನಡೆಸಿದೆ. ಈ ಬಗ್ಗೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.