ವಿಜಯನಗರ | ಅ.9ರಂದು ವಿಶ್ವ ಹಿರಿಯ ನಾಗರಿಕರ ದಿನಾಚರಣೆ : ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ

ವಿಜಯನಗರ (ಹೊಸಪೇಟೆ), ಸೆ.16: ಹಿರಿಯ ನಾಗರಿಕರಲ್ಲಿ ನವಚೈತನ್ಯ ಮೂಡಿಸಲು ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಿ ಅವರ ಭಾಗವಹಿಸುವಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪೂರ್ವಸಿದ್ಧತಾ ಸಭೆಯಲ್ಲಿ ಅವರು ಮಾತನಾಡಿ, ಅ.9ರಂದು ದಿನಾಚರಣೆ, ಸೆ.20ರಂದು ಜಿಲ್ಲಾ ಮಟ್ಟದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ ಎಂದರು.
ಆಯೋಜಿಸಲಿರುವ ಸ್ಪರ್ಧೆಗಳು:
ಕ್ರೀಡೆ : ಮ್ಯೂಸಿಕಲ್ ಚೇರ್, ಬಿರುಸಿನ ನಡಿಗೆ, ಬಕೆಟ್‌ನಲ್ಲಿ ಬಾಲ್ ಎಸೆಯುವುದು
ಸಾಂಸ್ಕೃತಿಕ : ಗಾಯನ, ಏಕಪಾತ್ರಾಭಿನಯ
ಹಿರಿಯ ನಾಗರಿಕರ ಬೇಡಿಕೆಯನ್ನು ಮನ್ನಿಸಿ: ಚೆಸ್, ಕೇರಂ ಮತ್ತು “ವೃದ್ಧಾಪ್ಯದ ಅನುಭವ ಹಾಗೂ ಸಂಕಷ್ಟಗಳು” ಕುರಿತು ಪ್ರಬಂಧ ಸ್ಪರ್ಧೆ
ಹಿರಿಯರ ಆಶಯಗಳಿಗೆ ಗೌರವ ನೀಡಿ, ಅವರು ಕ್ರೀಡಾ ಮನೋಭಾವದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಉಪನಿರ್ದೇಶಕಿ ಶ್ವೇತಾ, ಅಂಗವಿಕಲ ಕಲ್ಯಾಣಾಧಿಕಾರಿ ರಾಮಾಂಜನೇಯ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಅಧಿಕಾರಿಗಳು ಹಾಜರಿದ್ದರು.