ವಿಜಯನಗರ | 'ನನ್ನ ಮತ, ನನ್ನ ಹಕ್ಕು’ ಜನಜಾಗೃತಿಗೆ ಪ್ರಜಾಪ್ರಭುತ್ವ ದಿನಾಚರಣೆ ಸಹಕಾರಿ : ಡಿಸಿ ಕವಿತಾ ಮನ್ನಿಕೇರಿ

ವಿಜಯನಗರ (ಹೊಸಪೇಟೆ): ಪ್ರಜಾಪ್ರಭುತ್ವವು ಜನರಿಂದಲೇ ಶಕ್ತಿಯನ್ನು ಪಡೆಯುತ್ತದೆ. ಜನರ ಧ್ವನಿಗಳು, ಅವರ ಆಯ್ಕೆಗಳು ಮತ್ತು ಸಮಾಜ ರೂಪಿಸುವಲ್ಲಿ ಭಾಗವಹಿಸುವಿಕೆ ಜತೆಗೆ ಹಕ್ಕುಗಳನ್ನು ರಕ್ಷಿಸಿದಾಗ ಮಾತ್ರ ಅದು ಅಭಿವೃದ್ಧಿ ಹೊಂದುತ್ತದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು.
‘ನನ್ನ ಮತ – ನನ್ನ ಹಕ್ಕು’ ಕುರಿತು ಜನಜಾಗೃತಿ ಮೂಡಿಸುವಲ್ಲಿ ಈ ದಿನಾಚರಣೆ ಸಹಕಾರಿಯಾಗಿದೆ. ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬ ಭಾರತೀಯರು ಗೌರವಿಸಬೇಕು ಮತ್ತು ರಕ್ಷಿಸಬೇಕು. ಪ್ರಜಾಪ್ರಭುತ್ವವು ಜನಸಾರ್ವಭೌಮತ್ವವನ್ನು ಎತ್ತಿಹಿಡಿದು, ನಾಗರಿಕರ ಹಕ್ಕು-ಸ್ವಾತಂತ್ರ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ. ಇದು ಜವಾಬ್ದಾರಿಯುತ ಸರ್ಕಾರಗಳನ್ನು ನಿರ್ಮಿಸಲು, ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಬಗೆಹರಿಸಲು ಮತ್ತು ಸಮಾನತೆಯನ್ನು ಉತ್ತೇಜಿಸಲು ಮಹತ್ವದ್ದಾಗಿದೆ” ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಂಗ್ಜಾಯ್ ಮುಹಮ್ಮದ್ ಅಕ್ರಮ್ ಅಲಿ ಷಾ ಮಾತನಾಡಿ, ಪ್ರಜಾಪ್ರಭುತ್ವವು ನಾಗರಿಕರಿಗೆ ಘನತೆಯ ಜೀವನ ಹಾಗೂ ನ್ಯಾಯಯುತ ಆಡಳಿತ ಒದಗಿಸುವ ವ್ಯವಸ್ಥೆ. ಆದರೆ ಭ್ರಷ್ಟಾಚಾರ, ಅಸಮಾನತೆ ಮತ್ತು ನಿರಂಕುಶಾಧಿಕಾರ ಇತ್ಯಾದಿ ಸವಾಲುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳು ಪ್ರಜಾಪ್ರಭುತ್ವ ದಿನ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು. ನಂತರ ಹಸಿರು ನಿಶಾನೆ ಪ್ರದರ್ಶಿಸಿ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಾರಂಭವಾದ ಸೈಕಲ್ ಜಾಥಾ ಸಾಯಿಬಾಬಾ ಸರ್ಕಲ್, ಎಪಿಎಂಸಿ ಸರ್ಕಲ್, ವಾಲ್ಮೀಕಿ ಸರ್ಕಲ್, ಮದಕರಿ ನಾಯಕ ಸರ್ಕಲ್, ಏಕ್ ಮಿನಾರ್, ಮಸೀದಿ, ಗಾಂಧಿ ಚೌಕ್, ಪುಣ್ಯಮೂರ್ತಿ ಸರ್ಕಲ್, ಪುನೀತ್ ರಾಜಕುಮಾರ ಸರ್ಕಲ್, ಡಾ.ಬಿ.ಆರ್. ಅಂಬೇಡ್ಕರ್ ಸರ್ಕಲ್ ಮೂಲಕ ಜಿಲ್ಲಾ ಒಳಾಂಗಣ ಕ್ರೀಡಾಂಗಣದವರೆಗೆ ಸಾಗಿತು. ಐದನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೈಕಲ್ ಜಾಥಾದಲ್ಲಿ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎನ್.ಎಫ್. ಇಮಾಮ್ ನಿಯಾಜಿ, ಸಹಾಯಕ ಆಯುಕ್ತ ಪಿ. ವಿವೇಕಾನಂದ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ. ಮಂಜುನಾಥ, ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ, ಡಿಡಿಪಿಯು ನಾಗರಾಜ ಹವಲ್ದಾರ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪಿ.ಜಿ. ಚಿದಾನಂದ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ವೈ.ಎ. ಕಾಳೆ, ಬಿಇಒ ಶೇಖರಪ್ಪ ಹೊರಪೇಟೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದರು.