ಹರಪನಹಳ್ಳಿ | ಬೋರ್ವೆಲ್ ಕೊರೆಸಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ ಗ್ರಾಮ ಪಂಚಾಯತ್

ಹರಪನಹಳ್ಳಿ: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಅಗ್ರಹಿಸಿ ತಾಲ್ಲೂಕಿನ ಅರಸೀಕೆರೆ ಗ್ರಾಮದಲ್ಲಿ ಸಾರ್ವಜನಿಕರು ಇತ್ತೀಚಿಗೆ ಗ್ರಾಮ ಪಂಚಾಯತ್ ಮುಂದೆ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದ್ದ ಹಿನ್ನಲೆಯಲ್ಲಿ ಅರಸೀಕೆರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ.ಕೆಂಚವ್ವ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ಶಾಸಕರ ವಿಶೇಷ ಅನುದಾನದಡಿಯಲ್ಲಿ ಶುಕ್ರವಾರ ತುರ್ತು ಬೋರ್ವೆಲ್ ಕೊರೆಸಿ ಕುಡಿಯುವ ನೀರಿಗಾಗಿ ಪೈಪ್ ಲೈನ್ ಅಳವಡಿಸಿ ಸಮಸ್ಯೆ ಬಗೆಹರಿಸಿದರು.
ಅರಸೀಕೆರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಪಿ.ಕೆಂಚವ್ವ ಮಾತನಾಡಿ, ಗ್ರಾಮದ 1ನೇ ಮತ್ತು 2ನೇ ವಾರ್ಡಿಗೆ ತೆರೆದ ಭಾವಿಯಲ್ಲಿ ಪೂರೈಕೆಯಾಗುತ್ತಿದ್ದ ನೀರಿನಲ್ಲಿ ಕೆರೆ ನೀರು ಕಲುಷಿತಗೊಂಡಿದ್ದರಿಂದ ಕುಡಿಯುವುದಕ್ಕೆ ಈ ನೀರು ಯೋಗ್ಯವಲ್ಲ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ್ದರು. ಕೂಡಲೇ ಸಂಬಂದಿಸಿದ ಅಧಿಕಾರ ಮೂಲಕ ಪರಿಶೀಲನೆ ನಡೆಸಿ ಗ್ರಾಮ ಪಂಚಾಯತಿಯಿಂದ ಮತ್ತು ಸ್ಥಳೀಯ ಶಾಸಕರ ವಿಶೇಷ ಅನುದಾನದಡಿಯಲ್ಲಿ ಕುಡಿಯುವ ನೀರಿಗಾಗಿ ತುರ್ತು ಬೋರ್ವೆಲ್ ಕೊರೆಸಲಾಗಿದ್ದು, 5 ಇಂಚಿನಷ್ಟು ನೀರು ಸಿಕ್ಕಿದೆ. ಸಂಬಂದಿಸಿದ ವಾರ್ಡ್ಗಳಿಗೆ ಪೈಪ್ ಲೈನ್ ಅಳವಡಿಸಿ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಈ ವೇಳೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವೈ.ಡಿ.ಅಣ್ಣಪ್ಪನ ಮಾತನಾಡಿದರು.