ವಾರ್ತಾಭಾರತಿ - ನಿರ್ಲಕ್ಷ್ಯಕ್ಕೆ ಒಳಗಾದವರ ಧ್ವನಿ..

22 ವರ್ಷಗಳನ್ನು ಪೂರೈಸಿರುವ 'ವಾರ್ತಾಭಾರತಿ'ಯು 23ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಓದುಗರು ತಮ್ಮ ಸಂಭ್ರಮವನ್ನು ಪತ್ರಿಕೆಯ ಜೊತೆಗಿನ ತಮ್ಮ ಅನುಭವ, ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಸಲಹೆ, ಸೂಚನೆಗಳನ್ನು ನೀಡಿ ಪತ್ರಿಕೆಗೆ ಶುಭ ಹಾರೈಸಿದ್ದಾರೆ. ಈ ಪೈಕಿ ಆಯ್ದ ಬರಹಗಳು ಇಲ್ಲಿವೆ.
ನಿರ್ಲಕ್ಷ್ಯಕ್ಕೆ ಒಳಗಾದವರ ಧ್ವನಿ..
ವಾರ್ತಾಭಾರತಿ ಪತ್ರಿಕೆ ಎರಡು ದಶಕಗಳ ಕಾಲ ಕನ್ನಡದ ಪತ್ರಿಕೋದ್ಯಮದಲ್ಲಿ ವಿಶಿಷ್ಟ ಗುರುತು ಮೂಡಿಸಿದೆ. ಸಮಾಜದ ಅತಿ ಹಿಂದುಳಿದವರ ಧ್ವನಿಯನ್ನು, ನಿರ್ಲಕ್ಷ್ಯಕ್ಕೆ ಒಳಗಾದವರನ್ನು ಪ್ರಜಾಪ್ರಭುತ್ವದ ವೇದಿಕೆಯಲ್ಲಿ ಗುರುತಿಸುವಲ್ಲಿ ಈ ಪತ್ರಿಕೆ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದೆ. ಪತ್ರಿಕೆಯ ಸಂಪಾದಕೀಯ ಧೋರಣೆ ಯಾವಾಗಲೂ ನ್ಯಾಯ, ಸತ್ಯ ಮತ್ತು ಮಾನವೀಯತೆಯ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡಿದೆ. ಇಂದಿನ ವೇಗದ ಮಾಧ್ಯಮ ಜಗತ್ತಿನಲ್ಲಿ ಅಲ್ಪಸಂಖ್ಯಾತರು, ಬಡವರು ಮತ್ತು ಹಕ್ಕು ಕಳೆದುಕೊಂಡವರು ಯಾವಾಗಲೂ ಅಂಚಿನಲ್ಲೇ ಉಳಿಯುವ ಸಾಧ್ಯತೆ ಇದೆ. ಆದರೆ ವಾರ್ತಾಭಾರತಿ ಆ ಅಂಚಿನ ಧ್ವನಿಗಳಿಗೆ ಪ್ರಾಮುಖ್ಯತೆ ನೀಡಿದೆ. ಜನಸಾಮಾನ್ಯರ ಸಮಸ್ಯೆಗಳನ್ನು ಬೆಳಕಿಗೆ ತರುವಲ್ಲಿ ಮತ್ತು ಆ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬದ್ಧತೆಯಲ್ಲಿ ಈ ಪತ್ರಿಕೆಯ ಪಾತ್ರ ಮಹತ್ವದ್ದಾಗಿದೆ. ನಾನು ಬರಹಗಾರ್ತಿಯಾಗಿ ಕಂಡುಕೊಂಡಂತೆ, ಪತ್ರಿಕೆ ಎಂದರೆ ಕೇವಲ ಸುದ್ದಿ ಪ್ರಕಟಿಸುವ ಮಾಧ್ಯಮವಲ್ಲ, ಅದು ಒಂದು ಸಾಮಾಜಿಕ ಚಳವಳಿಯಂತೆ. ಜನರ ಹಕ್ಕು-ಸ್ವರವನ್ನು ಪ್ರತಿಧ್ವನಿಸುವ ಸಾಧನ. ವಾರ್ತಾಭಾರತಿ ಇದೇ ಅರ್ಥದಲ್ಲಿ ನನಗೆ ಸ್ಫೂರ್ತಿ ನೀಡುವ ಮಾಧ್ಯಮವಾಗಿದೆ. ಅದರ ಪುಟಗಳನ್ನು ಓದಿದಾಗ ಜನಜೀವನದ ಕಷ್ಟ-ಸುಖಗಳು, ಹೋರಾಟಗಳು ಮತ್ತು ಕನಸುಗಳು ಸ್ಪಷ್ಟವಾಗಿ ಕಾಣುತ್ತವೆ. 23ನೇ ವರ್ಷದ ಸಂಭ್ರಮದ ಸಂದರ್ಭದಲ್ಲಿ, ವಾರ್ತಾಭಾರತಿ ಇನ್ನಷ್ಟು ಜನಪ್ರಿಯತೆ ಪಡೆದು ಕನ್ನಡ ಪತ್ರಿಕೋದ್ಯಮದಲ್ಲಿ ಪ್ರಜಾಪ್ರಭುತ್ವದ ದೀಪವಾಗಿ ಬೆಳಗಲಿ. ಸಾಮಾಜಿಕ ನ್ಯಾಯ, ಸಾಹಿತ್ಯ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಬಲಪಡಿಸುವ ದಾರಿಯಲ್ಲಿ ಇದು ಸದಾ ಮುಂಚೂಣಿಯಲ್ಲಿರಲಿ.
ಬಾನು ಮುಷ್ತಾಕ್, ಹಿರಿಯ ಸಾಹಿತಿ, ಅಂತರ್‌ರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ
ಸಾಮಾಜಿಕ ನ್ಯಾಯ ಎತ್ತಿಹಿಡಿದ ಪತ್ರಿಕೆ
ನನಗೆ ವಾರ್ತಾಭಾರತಿ ದಿನ ಪತ್ರಿಕೆ ತುಂಬಾ ಇಷ್ಟ ಏಕೆಂದರೆ ಇದು ನಮ್ಮ ಸಂವಿಧಾನ ಪರವಾದ ಲೇಖನಗಳು, ಅಂಬೇಡ್ಕರ್ ವಿಚಾರಗಳು ಹಾಗೂ ಶೋಷಿತ ಸಮಾಜದ ಪರಿಚಯದ ಜೊತೆಗೆ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತದೆ. ಪತ್ರಿಕೋದ್ಯಮ ಅತ್ಯಂತ ಅಪೇಕ್ಷಿತ ಮತ್ತು ಗೌರವಾನ್ವಿತ ವೃತ್ತಿಗಳಲ್ಲಿ ಒಂದಾಗಿದೆ. ಇದು ವ್ಯಕ್ತಿಯನ್ನು ಜಗತ್ತಿಗೆ ಪರಿಚಯಿಸುತ್ತದೆ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪತ್ರಿಕೆಗಳ ಮೂಲಕ ದೇಶದ ಮತ್ತು ಇಡೀ ಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ನಮಗೆ ಸ್ಪಷ್ಟ ಕಲ್ಪನೆ ಹಾಗೂ ತಿಳುವಳಿಕೆ ಮೂಡಿಸುತ್ತದೆ. ಈ ನಿಟ್ಟಿನಲ್ಲಿ ವಾರ್ತಾಭಾರತಿಯ ಕಾರ್ಯವೈಖರಿ ಶ್ಲಾಘನಾರ್ಹ.
ಕೆ. ಸತೀಶ್ ಅರಳ, ದಲಿತ ಮುಖಂಡ, ಸಾಮಾಜಿಕ ಕಾರ್ಯಕರ್ತ, ಮಂಗಳೂರು
ನಿಷ್ಪಕ್ಷ ವರದಿ
ವಾರ್ತಾಭಾರತಿ ಪತ್ರಿಕೆಯು ಧರ್ಮ, ಜಾತಿ, ಭಾಷೆಗಳ ತಾರತಮ್ಯವಿಲ್ಲದೆ ನಿಷ್ಪಕ್ಷ ವರದಿ ನೀಡುವುದರಲ್ಲಿ ಖ್ಯಾತಿ ಪಡೆದ ಕನ್ನಡಿಗರ ಪತ್ರಿಕೆ. ಇದರಲ್ಲಿ ವರದಿಯಾಗುವ ವಿಚಾರಗಳು ನಂಬಲಾರ್ಹವಾಗಿದ್ದು, ಯಾವುದೇ ಊಹೆ ಅಥವಾ ಕಲ್ಪನೆಗಳಿಗೆ ಆಸ್ಪದ ನೀಡುವುದಿಲ್ಲ ಎಂಬುದು ನಮ್ಮ ನಂಬಿಕೆ. ದೇಶದ ರಾಷ್ಟ್ರೀಯತೆಯನ್ನು, ಸೌಹಾರ್ದವನ್ನು ಗೌರವಿಸುವ ಒಂದು ವಿಶಿಷ್ಟ ಪತ್ರಿಕೆ ವಾರ್ತಾಭಾರತಿ.
ಶಿವಾನಂದ ಯಡಹಳ್ಳಿ, ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ, ವಿಜಯಪುರ
ಸತ್ಯದರ್ಶನ
ಸಮಾಜಘಾತುಕ, ರಾಜಕೀಯ ಹಿತಾಸಕ್ತಿಯಿಂದ ಹಂಚುವ ಸುಳ್ಳು-ಹುನ್ನಾರಗಳನ್ನು ಬಗೆದು ಸತ್ಯವನ್ನು ಓದುಗರು, ಸಮಾಜಕ್ಕೆ ಕಾಣಿಸುವಲ್ಲಿ ವಾರ್ತಾಭಾರತಿ ವಿಶ್ವಾಸನೀಯ ಪಾತ್ರ ವಹಿಸಿದೆ. ಇದು ಹೀಗೆ ಮುನ್ನಡೆಯಲಿ.
ಎನ್.ರವಿಕುಮಾರ್(ಟೆಲೆಕ್ಸ್) ಶಿವಮೊಗ್ಗ
ಕಣ್ಣು ತೆರೆಸುವ ಪತ್ರಿಕೆ
ಪ್ರಜಾಪ್ರಭುತ್ವದ ನಾಲ್ಕನೆ ಅಂಗವೆಂದು ಕರೆಸಿಕೊಳ್ಳುತ್ತಿರುವ ಪತ್ರಿಕಾ ಮಾಧ್ಯಮದಲ್ಲಿ ನೈಜ, ಸತ್ಯ, ನಿಖರವಾದ ಸುದ್ದಿಗಳನ್ನು ಜನರಿಗೆ ತಲುಪಿಸಿ ಜನಾಭಿಪ್ರಾಯ ರೂಪಿಸಿ ಸರಕಾರ ಹಾಗೂ ಜನಪ್ರತಿನಿಧಿಗಳ ಕಣ್ಣು ತೆರೆಸುವಲ್ಲಿ ವಾರ್ತಾಭಾರತಿ ದೇಶದಲ್ಲಿ ನಂಬರ್ ಒನ್ ಪತ್ರಿಕೆ ಎಂದರೂ ತಪ್ಪಾಗಲಾರದು. ತಳ ಸಮುದಾಯಗಳ ಕಷ್ಟ ಕಾರ್ಪಣ್ಯಗಳು, ಹೋರಾಟಗಳ ಬಗ್ಗೆ ವರದಿ, ಲೇಖನ, ವಿಶೇಷ ವರದಿಗಳನ್ನು ಪ್ರಕಟಿಸುವ ಮೂಲಕ ಸಮಾಜದ ಮುಂದೆ ದಮನಿತರ ಸಮಸ್ಯೆಗಳನ್ನು ತೆರೆದಿಡುತ್ತಿದೆ. ಮಾರಿಕೊಂಡ ಕೆಲ ಮಾಧ್ಯಮಗಳು ಇಂದು ಜಾತಿ-ಧರ್ಮ, ಹಣಬಲಕ್ಕೆ ಸತ್ಯ ವಿಚಾರಗಳನ್ನು ಮರೆಮಾಚಿ, ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಈ ಕಾಲಘಟ್ಟದಲ್ಲಿ ಜನರಿಗೆ ವಿವಿಧ ವಿಚಾರಧಾರೆ, ಸೈದ್ಧಾತಿಕ ಚಿಂತನೆಗಳನ್ನು ಸಮಾಜಕ್ಕೆ ತಿಳಿಸುವ ಜವಾಬ್ದಾರಿಯುತ ಪತ್ರಿಕೆಯಾಗಿ ‘ವಾರ್ತಾಭಾರತಿ’ ಮಾದರಿಯಾಗಿದೆ.
ಸುಶೀಲಾ ನಾಡ, ಅಧ್ಯಕ್ಷೆ, ಕೊರಗಾಭಿವೃದ್ಧಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ-ಕೇರಳ.
ಪ್ರಗತಿಪರ ಮಾಧ್ಯಮ
ಹಲವು ವರ್ಷಗಳಿಂದ ವಾರ್ತಾಭಾರತಿ ಪತ್ರಿಕೆಯನ್ನು ಓದುತ್ತಿದ್ದು, ಅದರಲ್ಲಿ ಬರುವ ಸುದ್ದಿಗಳು, ನಿರ್ಭೀತಿಯಿಂದ ಕೂಡಿರುತ್ತದೆ. ಪತ್ರಿಕೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ, ನಾಡು, ದೇಶ, ಸಮಾಜದ ಅಭಿವೃದ್ಧಿಗಾಗಿ ಹೀಗೆ ನಿರಂತರವಾಗಿ ಸುದ್ದಿಗಳನ್ನು ಪ್ರಕಟಿಸುತ್ತಾ ಓದುಗರ ಅಚ್ಚುಮೆಚ್ಚಿನ ಪತ್ರಿಕೆಯಾಗಿ ಮುಂದುವರಿಯಲಿ.
ಮಾಳಪ್ಪ ಕಿರದಹಳ್ಳಿ, ಜಿಲ್ಲಾ ಸಂಚಾಲಕ, ಕ.ರಾ. ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಯಾದಗಿರಿ
ಪಾರದರ್ಶಕ ವರದಿ
ಜಾಗತಿಕ ಬಂಟರ ಸಂಘಗಳ ಒಕ್ಕೂಟದಿಂದ ಊರು ಮತ್ತು ಪರವೂರಿನ ಚಟುವಟಿಕೆಗಳ ಬಗ್ಗೆ ಮಾಧ್ಯಮಗಳಲ್ಲಿ ಬರುವ ವರದಿಗಳು ಇನ್ನಷ್ಟು ಜನರನ್ನು ತಲುಪಲು ಸಾಧ್ಯವಾಗಿದೆ. ನಮ್ಮ ಸಂಘಟನೆಯ ಸಮಾಜ ಸೇವಾ ಮತ್ತು ಸಂಘಟನಾತ್ಮಕ ಕೆಲಸಗಳು ಪಾರದರ್ಶಕವಾಗಿರಲು, ಇನ್ನಷ್ಟು ಸಮಾಜಮುಖಿಯಾಗಲು ಮಾಧ್ಯಮಗಳ ವರದಿಗಳು, ವಿಮರ್ಶೆಗಳು ಸಹಕಾರಿಯಾಗಿದೆ.
ಹಕ್ಲೇಗೌಡ, ಕರ್ನಾಟಕ ರಾಜ್ಯ ರೈತ ಸಂಘದ ಕರ್ನಾಟಕ ರೈತರ ಸಂಘ ಮತ್ತು ಹಸಿರು ಸೇನೆಯ ಹೊಸಕೋಟೆ ತಾಲೂಕು ಅಧ್ಯಕ್ಷ
ದಮನಿತರ ನೋವು, ದುಃಖ, ದುಮ್ಮಾನಗಳಿಗೆ ವೇದಿಕೆ
ಅಸುರಕ್ಷಿತ ಮತ್ತು ಶೋಷಿತ ಸಮುದಾಯದ ಧ್ವನಿಯಾಗಿರುವ ವಾರ್ತಾಭಾರತಿ ಪತ್ರಿಕೆಯು ಸತ್ಯವನ್ನು ಮೊಗೆದು ಬಗೆದು ಎಲ್ಲೆಡೆ ತಲುಪಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಸಮಾಜ ಕೆಡದಂತೆ, ಜನರ ಮನಸ್ಸು ಹಾಳಾಗದಂತೆ, ಹೋಳಾಗದಂತೆ ಒಂದಾಗಿಸುವ ಬಗ್ಗೆ ಅಹರ್ನಿಸಿ ಶ್ರಮಿಸುತ್ತಿರುವ ಪತ್ರಿಕೆಯು ಓದುಗರಲ್ಲಿ ಅಭಿಮಾನ ಮೂಡಿಸಿದೆ ಎಂದರೆ ತಪ್ಪಾಗಲಾರದು. ಬಹುತ್ವದ ನೆಲೆಗಟ್ಟು ಇನ್ನಷ್ಟು ಗಟ್ಟಿಯಾಗಿ ನೆಲೆಯಾಗಿಸುವ ನಿಟ್ಟಿನಲ್ಲಿ ವಾರ್ತಾಭಾರತಿ ವಿಶೇಷವಾದ ಕೆಲಸ ಮಾಡುತ್ತಿದೆ. ಶೋಷಿತ, ದಮನಿತರ ಬದುಕಿನ ಬಗ್ಗೆ ಪತ್ರಿಕೆಯ ಕಾಳಜಿಯನ್ನು ಒಂದೊಂದು ವರದಿಗಳೂ ಓದುಗರಾದ ನಮಗೆ ಮನದಟ್ಟು ಮಾಡಿಸುತ್ತಿದೆ. ದಲಿತರ ಹಾಗೂ ದಮನಿತರ ನೋವು, ದುಃಖ, ದುಮ್ಮಾನಗಳಿಗೆ ವಾರ್ತಾಭಾರತಿ ವೇದಿಕೆಯಾಗಿದೆ.
ಕೃಷ್ಣಪ್ಪ ಬಂಬಿಲ, ರಂಗಕರ್ಮಿ ಪುತ್ತೂರು
ದಿನದ ಮೊದಲ ಗೆಳೆಯ
‘ವಾರ್ತಾಭಾರತಿ’ ಕೇವಲ ದಿನಪತ್ರಿಕೆಯಲ್ಲ, ಅದು ನನ್ನ ಹಲವು ವರ್ಷಗಳ ದಿನದ ಮೊದಲ ಗೆಳೆಯ. ಜೊತೆಗೆ ಈ ನಾಡಿನ ಬಹು ಧರ್ಮಗಳ ಸೌಹಾರ್ದದ ಕೊಂಡಿ. ಈ ರಾಜ್ಯದ ಎಲ್ಲಾ ವರ್ಗದ ಜನರ ನಾಡಿಮಿಡಿತ ಅರಿತುಕೊಂಡ ಮಾಧ್ಯಮ. ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ಹೆಚ್ಚಿನ ಮಾಧ್ಯಮಗಳು ಒಂದು ಪಕ್ಷದ ಮುಖವಾಣಿಯಾಗಿ ನಾಡಿನ ಸೌಹಾರ್ದಕ್ಕೆ ಪದೇ ಪದೇ ದಕ್ಕೆ ತರುವ ಕೋಮುವಾದಿಗಳ ಮುಖಕ್ಕೆ ಮೈಕ್ ಹಿಡಿದು ಪ್ರಚೋದಿಸುವ ಸಂದರ್ಭದಲ್ಲಿ ಎಲ್ಲರನ್ನೂ ಬೆಸೆಯುವ ಕೊಂಡಿಯಾಗಿ, ಜನಸಾಮಾನ್ಯರ ಧ್ವನಿಯಾಗಿ, ಬಂಡವಾಳಶಾಹಿಗಳ ಮರ್ಜಿಗೆ ಬಲಿಯಾಗದೆ ರೈತರ, ದಿನಗೂಲಿ ಕಾರ್ಮಿಕರ, ಮಹಿಳೆಯರ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವ ವಾರ್ತಾಭಾರತಿಯ ಕಾಳಜಿ ಶ್ಲಾಘನೀಯ. ಕಳೆದ ಎರಡು ದಶಕಗಳಿಂದ ಪತ್ರಿಕೆಗಳು ಹೇಗೆ ಜನಸಾಮಾನ್ಯರೊಂದಿಗೆ ನಿಲ್ಲಬೇಕು, ಅವರಲ್ಲಿ ಹೇಗೆ ‘ವೈಚಾರಿಕ ಅರಿವು’ ಮೂಡಿಸಬೇಕು, ಮುಖ್ಯವಾಗಿ ಸಮಾಜದ ಸಾಮರಸ್ಯಕ್ಕೆ ಪೂರಕವಾಗಿ ಹೇಗೆ ಪತ್ರಿಕಾ ಧರ್ಮವನ್ನು ಪಾಲಿಸಬೇಕೆಂದು ‘ವಾರ್ತಾಭಾರತಿ’ ಈ ನಾಡಿನ ಸೌಹಾರ್ದ ಬಯಸುವ ಜನರಿಗೆ ಹೇಳಿಕೊಟ್ಟಿದೆ.
ಯಾಕೂಬ್ ಖಾದರ್ ಗುಲ್ವಾಡಿ, ಸದಸ್ಯರು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಚಲನಚಿತ್ರ ನಿರ್ದೇಶಕ/ನಿರ್ಮಾಪಕ.
ಜನ ಸಾಮಾನ್ಯರ ಬದುಕು ಬವಣೆಗಳ ಕುರಿತು ಸರಕಾರದ ಗಮನ ಹರಿಸುವಲ್ಲಿ ವಾರ್ತಾಭಾರತಿ ಮುಂದಿದೆ. ಸಂಪಾದಕೀಯದಿಂದ ಹಿಡಿದು ಪತ್ರಿಕೆಯ ಪ್ರತೀ ಪುಟಗಳ ಸುದ್ದಿಯನ್ನೂ ನಾನು ಓದುವೆ. ವಸ್ತುನಿಷ್ಠ ವಿಚಾರಗಳು, ಸುದ್ದಿಗಳನ್ನು ವೈಭವೀಕರಿಸದೆ ಪ್ರಕಟಿಸುವಲ್ಲಿ ವಾರ್ತಾಭಾರತಿ ಯಶಸ್ವಿಯಾಗಿದೆ.
ತಾಯರಾಜ್ ಮರ್ಚಟ್ಹಾಳ್, ಸಾಹಿತಿ, ರಾಯಚೂರು
ಸಮಾಜಮುಖಿ ಪತ್ರಿಕೆ
ಜಾತಿ, ಸಮುದಾಯ ಮತ್ತು ಆರ್ಥಿಕ ಬಲಾಢ್ಯರನ್ನು ಓಲೈಸದೆ ನ್ಯಾಯದ ಪರವಾಗಿ ಹಾಗೂ ಸತ್ಯಾಸತ್ಯತೆಯನ್ನು ಎತ್ತಿಹಿಡಿಯುವ ವಾರ್ತಾಭಾರತಿ ಪತ್ರಿಕೆಯ ಕಾರ್ಯವೈಖರಿ ಅಚ್ಚುಮೆಚ್ಚು. ಮುಖ್ಯವಾಗಿ ಸಂಪಾದಕೀಯ ಪ್ರಚಲಿತ ವಿದ್ಯಮಾನಗಳು ಮತ್ತು ಚರ್ಚಿತ ವಿಷಯಗಳತ್ತ ಸವಿಸ್ತಾರವಾಗಿ ಬೆಳಕು ಚೆಲ್ಲುತ್ತದೆ. ವಾರ್ತಾಭಾರತಿಯ ಸಂಪಾದಕಿಯ ಜನದನಿಯ ಸಾರಥಿ ಎಂಬುದರಲ್ಲಿ ಎರಡು ಮಾತಿಲ್ಲ. ವಾರ್ತಾಭಾರತಿ ತಳಸ್ತರ ಸಮುದಾಯಗಳ ಸಮಸ್ಯೆಗಳನ್ನು ಎತ್ತಿ ಹಿಡಿಯುವುದರ ಮೂಲಕ ಸಮಾಜಮುಖಿ ಹಾಗೂ ಜನಸಾಮಾನ್ಯರ ಪತ್ರಿಕೆಯಾಗಿದೆ.
ದಿನಪತ್ರಿಕೆಯು ವೈಚಾರಿಕತೆಯ ಪ್ರಮುಖ ಮಾಧ್ಯಮವಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಬುದ್ಧಿಮತ್ತೆಯನ್ನು ಹೆಚ್ಚಿಸುತ್ತಿವೆ. ಪತ್ರಿಕೆ ಇನ್ನಷ್ಟು ಎತ್ತರಕ್ಕೆ ಬೆಳೆದು ಕಟ್ಟ ಕಡೆಯ ಸಮುದಾಯದ ಧ್ವನಿ ಮತ್ತು ಪಾರದರ್ಶಕತೆಯ ಮಾಧ್ಯಮವಾಗಲಿ ಎಂದು ಆಶಿಸುತ್ತೇನೆ.
ಡಾ.ದಿನಕರ ಕೆಂಜೂರು, ಅತಿಥಿ ಉಪನ್ಯಾಸಕ, ವಾಣಿಜ್ಯ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ
ವಾರ್ತಾಭಾರತಿಯಲ್ಲಿ ಸಾಮಾಜಿಕ ಕಳಕಳಿಯ ಸುದ್ದಿ, ಲೇಖನಗಳು ಹೆಚ್ಚಾಗಿ ಪ್ರಕಟಗೊಳ್ಳುತ್ತಿರುವುದು ಸ್ವಾಗತಾರ್ಹ. ವಿಚಾರವಂತರಿಂದ ಮೂಡಿ ಬರುತ್ತಿರುವ ವಿಚಾರಧಾರೆಗಳು ಅರ್ಥಗರ್ಭಿತವಾಗಿರುತ್ತವೆ. ಸಂವಿಧಾನದ ಆಶಯಕ್ಕೆ ಪೂರಕವಾದ ವಿಚಾರಗಳು ಹಂಚಿಕೆಯಾಗುತ್ತಿರುವುದು ಶ್ಲಾಘನಾರ್ಹ. ಸಮಾಜದಲ್ಲಿ ಪರಿಶಿಷ್ಟರ ಹಾಗೂ ದುರ್ಬಲರ ಸಮಸ್ಯೆಗಳು ಕಡೆಗಣಿಸಲ್ಪಡುತ್ತಿರುವ ಈ ಕಾಲಘಟ್ಟದಲ್ಲಿ ವಾರ್ತಾಭಾರತಿ ನೊಂದವರ ಧ್ವನಿಯಾಗುತ್ತಿದೆ. ಉನ್ನತ ವ್ಯಾಸಂಗ ಮತ್ತು ಹುದ್ದೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸುವ ಕಾರ್ಯ ಮುಂದಿನ ದಿನಗಳಲ್ಲಿ ಆಗಲಿ.
ಪಿ.ಪಿ.ಸುಕುಮಾರ್, ಕೊಡಗು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ
ಪ್ರಜಾಪ್ರಭುತ್ವದ ಮೌಲ್ಯಗಳ ಸಂರಕ್ಷಣೆ
ಜನತೆಯ ಹಿತಾಸಕ್ತಿಗಳಿಗೆ ದನಿಯಾಗುವುದಷ್ಟೇ ಅಲ್ಲ. ಅವರ ಅಂತರಂಗದ ಮುಕ್ತ ಅಭಿವ್ಯಕ್ತಿಯಾಗಿಯೂ ಪತ್ರಿಕೆಗಳು ತಮ್ಮ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಈ ಮಾತುಗಳಿಗೆ ಇಂದಿನ ಸಮೂಹ ಮಾಧ್ಯಮ ಕ್ಷೇತ್ರವು ರಾಷ್ಟ್ರಮಟ್ಟದಲ್ಲಿ ತುಂಬಾ ನಿರಾಸೆ ಮೂಡಿಸಿದೆ. ಇಂತಹ ವಿಷಾದಕರ ಸನ್ನಿವೇಶದಲ್ಲಿ ‘ವಾರ್ತಾಭಾರತಿ’ಯು, ಪ್ರಜಾಪ್ರಭುತ್ವದ ಮೌಲ್ಯಗಳ ಸಂರಕ್ಷಣೆಗಾಗಿ ರಾಜಿಯಿಲ್ಲದೆ ಹೋರಾಟ ನಡೆಸುತ್ತಿರುವುದು ಪ್ರಜಾಪ್ರಭುತ್ವ ಪ್ರೇಮಿಗಳ ಅಂತರಂಗದಲ್ಲಿ ಭರವಸೆಯ ಬೆಳಕು ಮೂಡಿಸಿದೆ.
ಪ್ರೊ.ಹುಲ್ಕೆರೆ ಮಹದೇವ, ಸಂಸ್ಕೃತಿ ಚಿಂತಕ, ಮಂಡ್ಯ
ಬಸವಣ್ಣರ ಆದರ್ಶ ಪಾಲನೆ
ಶೋಷಿತರ, ಬಡವರ, ದಲಿತರ ಧ್ವನಿಯಾಗಿ ಜಾತ್ಯತೀತ ಮನೋಭಾವದಿಂದ ಈ ನಾಡಿನ ನೆಲ-ಜಲವನ್ನು ಪ್ರೀತಿಸುತ್ತಾ ಸರ್ವತೋಮುಖ ಅಭಿವೃದ್ಧಿಗಾಗಿ, ನವ ಯುವಕರಿಗೆ ಸ್ಫೂರ್ತಿಯಾಗಿ, ಕೋಮುವಾದವನ್ನು ವಿರೋಧಿಸುತ್ತಾ, ಬಸವಣ್ಣರ ಆದರ್ಶಗಳನ್ನು ಪಾಲಿಸುತ್ತಾ ಸಾರ್ವಜನಿಕರ ಪತ್ರಿಕೆಯಾಗಿ ವಾರ್ತಾಭಾರತಿ ಹೊರಹೊಮ್ಮಿದೆ.
ಶಬೀರ್ ಎಚ್., ಕರ್ನಾಟಕ ಸೌಹಾರ್ದ ವೇದಿಕೆ ಜಿಲ್ಲಾಧ್ಯಕ್ಷ-ವಿಜಯನಗರ
ಹಿಂದುಳಿದವರ ಧ್ವನಿ
ವಾರ್ತಾಭಾರತಿ ನಮಗೆ ಕೇವಲ ಒಂದು ದಿನಪತ್ರಿಕೆ ಅಲ್ಲ, ಅದು ಸತ್ಯದ ದನಿ ಮತ್ತು ಸಮಾಜದ ಕನ್ನಡಿ. ಪ್ರತಿದಿನ ಬೆಳಗಿನ ಜಾವ ಕೈಗೆ ಸಿಗುವ ವಾರ್ತಾಭಾರತಿ, ನಿಷ್ಪಕ್ಷ ಸುದ್ದಿಗಳ ಮೂಲಕ ನಿಜವಾದ ಜಾಗೃತಿ ಮತ್ತು ಜವಾಬ್ದಾರಿಯ ಭಾವನೆ ಮೂಡಿಸುತ್ತದೆ. ಸಾಮಾನ್ಯ ಜನರ ಹಕ್ಕುಗಳನ್ನು ರಕ್ಷಿಸುವಲ್ಲಿ, ಹಿಂದುಳಿದವರ ಧ್ವನಿಯಾಗಿ ನಿಂತು, ಅಲ್ಪಸಂಖ್ಯಾತರು, ದುಡಿಯುವ ವರ್ಗ, ಬಡವರ ಬದುಕನ್ನು ಬೆಳಕಿಗೆ ತರುವಲ್ಲಿ ವಾರ್ತಾಭಾರತಿ ನಿರಂತರವಾಗಿ ಕಾರ್ಯನಿರ್ವಹಿಸಿದೆ. ಇದು ಕೇವಲ ಸುದ್ದಿ ನೀಡುವುದಲ್ಲ, ಅನುಭವಿಸಿದವರ ನೋವುಗಳನ್ನು ಸಮಾಜದ ಮುಂದಿಡುವ ಮಾನವೀಯತೆಯ ಆಗರ. ನಮ್ಮ ಮುಂದಿನ ಪೀಳಿಗೆಗೆ ಪ್ರಜ್ಞೆ, ಪ್ರೇರಣೆ, ಧೈರ್ಯವನ್ನು ಬಿತ್ತುವ ವಾರ್ತಾಭಾರತಿ ದೀಪವು ದೀರ್ಘಕಾಲ ಬೆಳಗಲಿ ಎಂದು ಆಶಿಸುವೆ.
ಕಲಂದರ್ ಬೀವಿ ಅಮಾನುಲ್ಲಾ, ಮುಖ್ಯ ಶಿಕ್ಷಕಿ, ಅಲ್ ಖೈರ್ ಇಸ್ಲಾಮಿಕ್ ಆಂಗ್ಲ ಮಾಧ್ಯಮ ಶಾಲೆ, ಸೂರಲ್ಪಾಡಿ
ಹೊಸ ತಲೆಮಾರಿನ ಬರಹಗಾರರ ಲೇಖನಗಳನ್ನು ಪ್ರಕಟಿಸಿ ಹೊಸ ಬರಹಗಾರರ ಬಳಗವನ್ನೇ ವಾರ್ತಾಭಾರತಿ ಸೃಷ್ಠಿಸಿದೆ. ರೈತ, ದಲಿತ, ಕಾರ್ಮಿಕ, ಮಹಿಳಾ ಚಳವಳಿಗಳ ಸುದ್ದಿಗಳಿಗೆ ಹೆಚ್ಚಿನ ಒತ್ತು ಕೊಟ್ಟು ಸರಕಾರದ ಕಣ್ತೆರೆಸುತ್ತಿದೆ. ವಿಮರ್ಶಾತ್ಮಕ ಬರಹಗಳನ್ನು ಪ್ರಕಟಿಸಿ ಪತ್ರಿಕೆಯು ಚಳವಳಿಗಳ ಭಾಗವೆನ್ನುವಂತೆ ಗುರುತಿಸಿಕೊಂಡಿದೆ. ವಾರ್ತಾಭಾರತಿಯು 23ನೇ ವರ್ಷದ ವಸಂತಕ್ಕೆ ಕಾಲಿಡುತ್ತಿರುವ ಶುಭ ಸಂದರ್ಭದಲ್ಲಿ ಪತ್ರಿಕೆಯ ದಿಟ್ಟತನ ಇನ್ನಷ್ಟು ಪ್ರಜ್ವಲಿಸಲಿ.
ಪುನೀತ್ ಎನ್., ವಕೀಲ, ಮೈಸೂರು
ಸ್ಥಳೀಯ, ರಾಜ್ಯ, ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಘಟನೆಗಳ ಬಗ್ಗೆ ಅಂಕಿ-ಅಂಶಗಳ ಆಧಾರದ ಮೇಲೆ ವಿಸ್ತೃತ ವರದಿ ವಾರ್ತಾಭಾರತಿಯಲ್ಲಿ ಪ್ರಕಟವಾಗುತ್ತಿದೆ.
ವಿಠಲದಾಸ್ ಪ್ಯಾಗೆ, ಸಿಂಡಿಕೆಟ್ ಸದಸ್ಯ, ಬೀದರ್ ವಿಶ್ವವಿದ್ಯಾನಿಲಯ
ನೈಜತೆ ಅನಾವರಣ
ವಾರ್ತಾಭಾರತಿಯ ದೈನಂದಿನ ಓದುಗರಲ್ಲಿ ಒಬ್ಬನಾಗಿರುವ ನಾನು ಪತ್ರಿಕೆಯ ಬಿಡುಗಡೆಗೂ ಮುನ್ನ ನಡೆದ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಪ್ರತಿನಿಧಿಯಾಗಿ ಭಾಗವಹಿಸಿದ್ದೆ. ಇಂದು ಆ ಪತ್ರಿಕೆ 22 ವರ್ಷಗಳಿಂದ ಕನ್ನಡಿಗರ ದಿನಪತ್ರಿಕೆಯಾಗಿ ಹೆಮ್ಮರವಾಗಿ ಬೆಳೆದು ನೈಜ ಪತ್ರಿಕಾ ಧರ್ಮವನ್ನು ಪಾಲಿಸಿ ಸಮಾಜದ ಶೋಷಿತರ, ದಮನಿತರ ಧ್ವನಿಯಾಗಿ ಸಮಾಜದಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿರುವುದು ಸಂತಸದ ವಿಚಾರ. ಅವಕಾಶ ವಂಚಿತರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ವಾರ್ತಾಭಾರತಿ, ಸಾಂಪ್ರದಾಯಿಕ ಪತ್ರಿಕೋದ್ಯಮದಿಂದ ಹೊರಬಂದು ಆಡಿಯೊ, ವೀಡಿಯೊ, ಡಿಜಿಟಲ್ ತಂತ್ರಜ್ಞಾನಗಳ ಮೂಲಕ ಎಲ್ಲರನ್ನೂ ತಲುಪುವ ಪ್ರಯತ್ನ ಮಾಡುತ್ತಿದೆ. ಸಮಾಜಮುಖಿ ಬರಹಗಳು, ವಿಶ್ಲೇಷಣೆ ಸೇರಿದಂತೆ ವೈಚಾರಿಕತೆ ಮತ್ತು ಜನಜಾಗೃತಿಯ ಪತ್ರಿಕೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕ್ಷಣ ಕ್ಷಣದ ಸುದ್ದಿ-ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಜನಸಾಮಾನ್ಯರ ಧ್ವನಿಯಾಗಿದೆ. ಸುಳ್ಳಿನ ಮಾರುಕಟ್ಟೆಯಲ್ಲಿ ಸತ್ಯದ ಮಾರಾಟ ಸುಲಭದ ಕಾರ್ಯವಲ್ಲ. ನಾಡಿನ ಅಂತರಾತ್ಮವನ್ನು ಕಾಡಿದ ಹಲವು ಘಟನೆಗಳ ಸಂದರ್ಭಗಳಲ್ಲಿ ವಿಷಯದ ನೈಜತೆಯನ್ನು ಅನಾವರಣ ಮಾಡಿದ ಕೀರ್ತಿ ‘ವಾರ್ತಾಭಾರತಿ’ಗೆ ಸಲ್ಲಬೇಕು.
ಮನ್ಸೂರ್ ಅಹ್ಮದ್ ಸಾಮಣಿಗೆ, ಸಾಮಾಜಿಕ ಕಾರ್ಯಕರ್ತ
ಸಮಾಜಮುಖಿ ಸುದ್ದಿಗಳನ್ನು ವಾರ್ತಾಭಾರತಿ ಪ್ರಕಟಿಸುತ್ತಿದೆ. ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಧ್ವನಿ ಎತ್ತುವ, ಅತ್ಯಂತ ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಕಾರ್ಯ ನಿರ್ವಹಿಸುವ, ಯಾರದ್ದೇ ಮುಲಾಜಿಗೂ ಒಳಗಾಗದೆ ಸತ್ಯವನ್ನೇ ವರದಿ ಮಾಡುವ ಈ ಪತ್ರಿಕೆ. 23ನೇ ವರ್ಷಕ್ಕೆ ಕಾಲಿಡುತ್ತಿರುವುದು ಸಂತೋಷದ ವಿಚಾರ.
ಹೊಸ್ಕೋಟೆ ಜಿ.ಶ್ರೀನಿವಾಸ, ಅಧ್ಯಕ್ಷರು, ವಿಶ್ವ ಮಿತ್ರ ಫೌಂಡೇಷನ್ ಹೊಸಕೋಟೆ
ವಾರ್ತಾಭಾರತಿ ದಿನಪತ್ರಿಕೆಯು ಆರಂಭದಿಂದ ಇಂದಿನವರೆಗೂ ಜನಪರ ಪತ್ರಿಕೆಯಾಗಿ ಮೂಡಿಬರುತ್ತಿದೆ. ಮುಖ್ಯವಾಗಿ ಜನರ ಬದುಕಿನ ದಿನನಿತ್ಯದ ಸಮಸ್ಯೆಗಳಿಗೆ ಆದ್ಯತೆ ನೀಡುತ್ತಾ ಜೊತೆಗೆ ಪ್ರಭುತ್ವದ ದೌರ್ಜನ್ಯಗಳು, ದಬ್ಬಾಳಿಕೆಗಳ ವಿರುದ್ಧ ನಿರಂತರ ವರದಿ ಪ್ರಕಟಿಸುವ ಮೂಲಕ ದೌರ್ಜನ್ಯಕ್ಕೆ ಒಳಪಟ್ಟವರಿಗೆ ಧ್ವನಿಯಾಗಿದೆ. ಇಂತಹ ಹಲವಾರು ವರದಿಗಳಿಂದ ಹಲವಾರು ಜನಪರ ಚಳವಳಿಗಳು ಕೂಡಾ ದ್ವನಿ ಎತ್ತಲು ಸಾಧ್ಯವಾಗಿದೆ. ಸುದ್ದಿಗಳ ಜೊತೆಗೆ ವೈಚಾರಿಕ ಲೇಖನಗಳಿಗೆ ಪ್ರಮುಖ ಆದ್ಯತೆ ನೀಡಿರುವುದರಿಂದ ವಿದ್ಯಾರ್ಥಿಗಳು, ಜನಪರ ಚಳುವಳಿಗಳ ಕಾರ್ಯಕರ್ತರಿಗೆ ಬಹಳ ಮಹತ್ವದ ವಿಚಾರಗಳ ಬಗ್ಗೆ ತಿಳಿವಳಿಕೆ ಮೂಡಲು ಸಾದ್ಯವಾಗಿದೆ. ಇಂದು ಸಾಮಾಜಿಕ ಜಾಲತಾಣ ಮೂಲಕ ದಿನ ನಿತ್ಯ ಸುಳ್ಳುಗಳನ್ನೇ ಹರಡುವ ಈ ಸಂಧರ್ಭದಲ್ಲಿ ವಾರ್ತಾಭಾರತಿಯು ಸತ್ಯ ವಿಚಾರಗಳನ್ನು ಜನತೆಯ ಮುಂದಿಡುತ್ತಿರುವುದು ಬಹಳ ಮಹತ್ವದ ಕೆಲಸವಾಗಿದೆ. ದೇಶದ ಸಂವಿಧಾನದ ಆಶಯಗಳನ್ನೇ ನಾಶಮಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿರುವ ಪ್ರಸಕ್ತ ದಿನಗಳಲ್ಲಿ ವಾಸ್ತವ ವಿಚಾರಗಳು ಮತ್ತಷ್ಟು ಜನತೆಗೆ ತಲುಪಿ ಜನಜಾಗೃತಿ ಮೂಡಿಸಲು ವಾರ್ತಾಭಾರತಿ ಮತ್ತಷ್ಟು ಹುರುಪಿನೊಂದಿಗೆ ಜನಪರ ದ್ವನಿಯಾಗಿ ಮೂಡಿಬರಲಿ.
ತುಳಸೀದಾಸ್ ಆರ್., ವಕೀಲರು, ಬಂಟ್ವಾಳ
ಸಾಮಾಜಿಕ, ಸಾಂಸ್ಕೃತಿಕವಾಗಿ ಬಹುತೇಕ ಮಾಧ್ಯಮಗಳು ನಿಜ ಅರ್ಥದಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವ ಕೊರಗನ್ನು ವಾರ್ತಾಭಾರತಿ ನೀಗಿಸಿದೆ. ವರ್ತಮಾನದ ತಲ್ಲಣಗಳ ಸಕಾಲಿಕ ಅಂಕಣಗಳು ಓದುಗರ ಪ್ರಜ್ಞಾವಲಯವನ್ನು ವಿಸ್ತರಿಸುತ್ತಿವೆ. ಇದೊಂದು ಚಿಂತನೆ ಮತ್ತು ಕ್ರಿಯಾಚರಣೆಗಳ ದೀರ್ಘಕಾಲೀನ ಚಳವಳಿ. ಪ್ರಬಲ ವರ್ಗಗಳ ನೆಲೆಯಲ್ಲಿ ನಿಂತು ತೀರ್ಮಾನ ಹೇಳುವ ಇಂದಿನ ಕೆಲ ಮಾಧ್ಯಮಗಳ ಈ ಕಾಲದಲ್ಲಿ ಸುದ್ದಿಗಳ ತಾತ್ವಿಕ ಸ್ವರೂಪವನ್ನು ಗಂಭೀರವಾಗಿ ಗಮನಿಸಿ ವರದಿ ಮಾಡುವುದು ಮತ್ತು ಅದರ ಫಾಲೋ ಅಪ್ ವರದಿಗಳನ್ನೂ ಪ್ರಕಟಿಸುವುದು ವಾರ್ತಾಭಾರತಿಯ ಹೆಗ್ಗಳಿಕೆ.
ಬಿ.ಶ್ರೀನಿವಾಸ, ದಾವಣಗೆರೆ
ಸಾಮಾನ್ಯ ಜನರ ಧ್ವನಿಗೆ ವಾರ್ತಾಭಾರತಿ ಸದಾ ಪ್ರಾಮುಖ್ಯತೆ ನೀಡುತ್ತದೆ. ಕಾರ್ಮಿಕ, ರೈತ, ಬಡವರು, ಮಹಿಳೆಯರ ಸಮಸ್ಯೆ, ಹೋರಾಟಗಳಿಗೆ ಆದ್ಯತೆ ನೀಡುತ್ತಿರುವುದರಿಂದ ಇದು ಜನಪರ ಪತ್ರಿಕೆಯಾಗಿದೆ. ಸಮಾಜದಲ್ಲಿ ಅಸಮಾನತೆ, ಅನ್ಯಾಯ, ಶೋಷಣೆ ನಡೆಯುತ್ತಿರುವ ಸಂದರ್ಭದಲ್ಲಿ ವಾರ್ತಾಭಾರತಿ ನಿರಂತರವಾಗಿ ನ್ಯಾಯದ ಪರ, ಧರ್ಮನಿರಪೇಕ್ಷತೆಯ ಪರವಾಗಿ ನಿಂತಿದೆ. ಸುದ್ದಿ ಕೇವಲ ಮಾಹಿತಿ ಅಲ್ಲ. ಅದು ಬದಲಾವಣೆಯ ಶಕ್ತಿ. ನಾನು ಶಿಕ್ಷಕನಾಗಿ ವಿದ್ಯಾರ್ಥಿಗಳಿಗೆ ಪತ್ರಿಕೆಯನ್ನು ಓದಲು ಪ್ರೇರೇಪಿಸುತ್ತೇನೆ.
ಇಮ್ರಾನ್, ನಿರ್ದೇಶಕ, ರಿವರ್ ವ್ಯೆ ಆಂಗ್ಲ ಮಾಧ್ಯಮ ಶಾಲೆ, ಬಣಕಲ್
ಪತ್ರಿಕೋದ್ಯಮ ವಾಣಿಜ್ಯೀಕರಣಗೊಂಡ ಹೊತ್ತಿನಲ್ಲೂ ‘ವಾರ್ತಾಭಾರತಿ’ ಸತ್ಯ ಮತ್ತು ನ್ಯಾಯವನ್ನು ದಿಟ್ಟವಾಗಿ ಪ್ರತಿಪಾದಿಸುವಲ್ಲಿ ನಿರತವಾಗಿದೆ. ಸಮಾಜವನ್ನು ಪೀಡಿಸುತ್ತಿರುವ ಕೋಮುವಾದ ಮತ್ತು ಧರ್ಮ ರಾಜಕಾರಣದ ಮುಖವಾಡಗಳನ್ನು ಕಳಚಿ ಜನರ ಮುಂದಿಡುವಲ್ಲಿ ಒಂದು ಸುದ್ದಿ ಪತ್ರಿಕೆ ತೋರಬಹುದಾದ ವೃತ್ತಿಪರತೆಯನ್ನು ಈ ಪತ್ರಿಕೆ ತೋರಿಸಿರುವುದು ಬಹುಜನರ ಪಾಲಿನ ಭರವಸೆಯಾಗಿದೆ. ಯಾವುದೇ ಸಿದ್ಧಾಂತಗಳಿಗೆ ಜೋತು ಬೀಳದೆ ಆಳುವ ಸರಕಾರಗಳನ್ನು, ಜನರ ಜವಾಬ್ದಾರಿಗಳನ್ನು ಎಚ್ಚರಿಸುವ ಕೆಲಸ ಮಾಡುತ್ತಿರುವ ಈ ಪತ್ರಿಕೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ.
ಅರ್ಜುನ್, ಅಧ್ಯಕ್ಷ, ಬೆಂಗಳೂರು ವಿವಿ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿ ಒಕ್ಕೂಟ
ಓದುಗರ ಅತ್ಯಂತ ವಿಶ್ವಾಸಾರ್ಹ ದಿನಪತ್ರಿಕೆಯಾಗಿಯೂ ವಾರ್ತಾಭಾರತಿ ಹೊರಹೊಮ್ಮಿದೆ. ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಮಹತ್ವದ ವಿಚಾರಗಳನ್ನು, ನಿರ್ಭೀತಿಯಿಂದ ಜನರ ಆಶಯಗಳನ್ನು ಬಿಂಬಿಸುವ ವಾರ್ತಾಭಾರತಿ, ತನ್ನ ನೇರ ನುಡಿ, ನಿರಂತರ ಪರಿಶ್ರಮದಿಂದ ನಮ್ಮೆಲ್ಲರ ನೆಚ್ಚಿನ ದಿನಪತ್ರಿಕೆಯಾಗಿ ಹೊರಹೊಮ್ಮಿದೆ. ಯಾವುದೇ ವರದಿಗಳಿರಬಹುದು, ಅದರ ಆಳ-ಅಗಲ ವಿಶ್ಲೇಷಣೆಗಳು, ತನಿಖಾ ವರದಿಗಳು ಇವೆಲ್ಲವೂ ಪತ್ರಿಕೆಯ ಹೆಗ್ಗುರುತುಗಳಾಗಿವೆ. ವೆಬ್‌ಸೈಟ್ ಕೂಡ ಓದುಗರಿಗೆ ಉತ್ತಮ ಮಾಹಿತಿ ನೀಡುವಲ್ಲಿ ಯಶಸ್ವಿಯಾಗಿದೆ.
ಝೂರಾಬಿ ಜಮೀಲ್, ಕನ್ನಡ ಶಿಕ್ಷಕಿ, ಶನಿವಾರ ಸಂತೆ ಶ್ರೀ ಬಾಪೂಜಿ ವಿದ್ಯಾ ಸಂಸ್ಥೆ, ಕೊಡಗು
ವಾರ್ತಾಭಾರತಿ ಪತ್ರಿಕೆ ನಿರಂತರವಾಗಿ ಪತ್ರಿಕಾ ಧರ್ಮವನ್ನು ಕಾಪಾಡಿಕೊಂಡು ಬಂದಿದೆ. ದೇಶ, ವಿದೇಶಗಳ ಹಲವಾರು ವಿಷಯಗಳ ಮೇಲೆ ಬೆಳಕು ಚೆಲ್ಲುತ್ತಾ ಓದುಗರಲ್ಲಿ ಪ್ರಶ್ನಿಸುವ ಮನೋಭಾವವನ್ನು ಹೆಚ್ಚಿಸುತ್ತಾ ಬಂದಿದೆ. ಪತ್ರಿಕೆಯ ಸಂಪಾದಕೀಯ ಪುಟಗಳಲ್ಲಿ ಪ್ರಕಟವಾಗುವ ಶಿವಸುಂದರ್, ಸಿ.ಎಸ್.ದ್ವಾರಕನಾಥ್, ಮಾಧವ್ ಐತ್ನಾಳ್, ಅರುಣ್ ಜೋಳದಕೂಡ್ಲಿಗೆ, ನಟರಾಜ್ ಹುಳಿಯಾರ್ ಅವರಂತಹ ಲೇಖಕರ ಬರಹಗಳು ನಮ್ಮಂತಹ ಯುವ ಓದುಗರು, ಬರಹಗಾರರು ಹಾಗೂ ಮುಂದಿನ ಪೀಳಿಗೆಯ ಯುವಪತ್ರಕರ್ತರ ಜ್ಞಾನ ವೃದ್ಧಿಗೆ ಸಹಕಾರಿಯಾಗುತ್ತಿದೆ.
ಆಕಾಶ್ ಆರ್.ಎಸ್., ಶಿವಮೊಗ್ಗ
ವಾರ್ತಾಭಾರತಿ ಪತ್ರಿಕೆ ರಾಜ್ಯ, ದೇಶ, ವಿದೇಶಗಳ ಸುದ್ದಿಗಳು ಸೇರಿದಂತೆ ಎಲ್ಲ ವರ್ಗದ ಸುದ್ದಿಗಳನ್ನು ನೀಡುತ್ತಿರುವುದು ಸ್ವಾಗತಾರ್ಹ. ನಮ್ಮಂತಹ ವಿಕಲಚೇತನರ ಸುದ್ದಿಗಳಿಗೂ ಆದ್ಯತೆ ನೀಡುತ್ತಿರುವುದು ಖುಷಿ ಕೊಟ್ಟಿದೆ. ಜನರ ವಿವಿಧ ಬೇಡಿಕೆಗಳ ಕುರಿತು ಸರಕಾರದ ಗಮನ ಸೆಳೆಯುವ ಸುದ್ದಿ ಮಾಡುತ್ತಿವೆ. ಇನ್ನು ಮುಂದೆಯೂ ಎಲ್ಲ ವರ್ಗದವರ ಸುದ್ದಿಗಳಿಗೆ ಸಮಾನ ಅವಕಾಶಗಳನ್ನು ನೀಡಬೇಕು. ಕೃಷಿಗೆ ಒತ್ತು ನೀಡುವ ಇನ್ನಷ್ಟು ಲೇಖನಗಳನ್ನು ಪ್ರಕಟಿಸಿದರೆ ಕೃಷಿಕರಿಗೆ ಹೆಚ್ಚು ಅನುಕೂಲವಾಗಲಿದೆ.
ಶಂಕರ ನಾರಾಯಣ ಭಟ್, ಕೃಷಿಕ, ಕೊಡಗು
ಜನಪರ ನಿಲುವಿನೊಂದಿಗೆ ಧ್ವನಿ ಇಲ್ಲದ ಜನರ ಧ್ವನಿಯಾಗಿ, ಅಶಕ್ತರ, ಅಸಂಘಟಿತರ ಬಲವಾಗಿ ನೈಜವಾದ ಪತ್ರಿಕಾ ಕಾರ್ಯವನ್ನು ಸತತ 22 ವರ್ಷಗಳ ಕಾಲ ನಿರಂತರ ಬದ್ಧತೆ ಕಾಯ್ದುಕೊಂಡು ಬಂದ ‘ವಾರ್ತಾಭಾರತಿ’ ಕಾರ್ಯ ದಾಖಲಾರ್ಹ. ಜಾಹೀರಾತಿನ ಮರ್ಜಿ, ರಾಜಕಾರಣದ ಒತ್ತಡಕ್ಕೆ ಮಣಿಯದೆ ಪತ್ರಿಕೆಯ ಮೂಲ ಆಶಯಕ್ಕೆ ಒತ್ತು ನೀಡುತ್ತಾ ಸತ್ಯಪರತೆಯ ಮೂಲಕ ಜನಮಾನಸದಲ್ಲಿ ಛಾಪು ಮೂಡಿಸಿದ ಹಿರಿಮೆ ‘ವಾರ್ತಾಭಾರತಿಯದ್ದು. ಪತ್ರಿಕೆಯ ಈ ದಿಟ್ಟ ಹಾದಿ ಮತ್ತಷ್ಟು ಸದೃಢವಾಗಿ ಯಶಸ್ವಿಯಾಗಿ ಸಾಗಲಿ.
ನ.ಲಿ.ಕೃಷ್ಣ, ಮದ್ದೂರು,ಮಂಡ್ಯ
ನಮ್ಮ ಸಂವಿಧಾನದ ಕಲ್ಯಾಣ ರಾಜ್ಯ ನಿರ್ಮಾಣ ಪರಿಕಲ್ಪನೆ, ಈ ಹೊತ್ತಿಗಾಗಲೇ ಪೂರ್ಣಗೊಳ್ಳಬೇಕಾಗಿತ್ತು. ಆದರೆ ನಮ್ಮ ರೀತಿ-ನೀತಿಗಳು ಸಂಪೂರ್ಣ ವಿರುದ್ಧವಾದ ದಿಕ್ಕಿನಲ್ಲಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಾರ್ತಾಭಾರತಿ ಪತ್ರಿಕೆಯು ಕಗ್ಗತ್ತಲ ಮಾಧ್ಯಮ ಲೋಕದ ಒಂದು ಬೆಳಕಿನ ಕಿರಣ. ಸಂವಿಧಾನದ ಪೀಠಿಕೆಯಲ್ಲಿ ಸ್ಪಷ್ಟಪಡಿಸಿಕೊಂಡಿರುವ ಗುರಿ ಮತ್ತು ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ವಾರ್ತಾಭಾರತಿ ಪತ್ರಿಕೆ ವೇಗ ವರ್ಧಕವಾಗಲಿ.
ಟಿ.ಯಶವಂತ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಪ್ರಾಂತ ರೈತ ಸಂಘ, ಬೆಂಗಳೂರು
ವಾರ್ತಾಭಾರತಿ ಪತ್ರಿಕೆ ಸಮಾಜದ ಅರಿವು ಹಾಗೂ ಸಾಮರಸ್ಯಕ್ಕೆ ಪೂರಕವಾಗಿ ಯಾವುದೇ ವಿಷಯವನ್ನು ರಾಜಿ ಮಾಡಿಕೊಳ್ಳದೆ ತನ್ನ ಕಾರ್ಯ ನಿರ್ವಹಿಸುತ್ತಿದೆ. ನಾಡಿನೆಲ್ಲೆಡೆ ಅಕ್ಷರದ ಹಣತೆಯನ್ನು ಬೆಳಗುತ್ತಾ ಜನರ ಸತ್ಯದ ಧ್ವನಿಯಾಗಿದೆ. ಮಾಧ್ಯಮಗಳ ಆರ್ಭಟದ ನಡುವೆಯೂ ತಪ್ಪು ಮಾಡಿದಾಗ ಆಡಳಿತದ ಕಿವಿ ಹಿಂಡುವ ನೈತಿಕತೆಯನ್ನು ಉಳಿಸಿಕೊಂಡಿರುವುದು ವಾರ್ತಾಭಾರತಿಯ ಹೆಗ್ಗಳಿಕೆ.
ಮುಹಮ್ಮದ್ ರಫೀಕ್ ಟಪಾಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಅಲ್ಪಸಂಖ್ಯಾತ ಮುಖಂಡ, ವಿಜಯಪುರ
ಪ್ರತಿ ಕ್ಷಣ ಜಾಗತಿಕ ಕನ್ನಡಿಗರನ್ನು ತಲುಪುತ್ತಿರುವ ಸಮರ್ಥ ಮಾಧ್ಯಮ ವಾರ್ತಾಭಾರತಿ. ತನ್ನ ಧ್ಯೇಯ, ಉದ್ದೇಶ ಹಾಗೂ ಸಿದ್ಧಾಂತದೊಂದಿಗೆ ಮುನ್ನಡೆಯುತ್ತಿದೆ. ಮುದ್ರಣ ಮಾಧ್ಯಮ ಮಾತ್ರವಲ್ಲದೆ ಡಿಜಿಟಲ್ ಹಾಗೂ ದೃಶ್ಯ ಮಾಧ್ಯಮಗಳಲ್ಲೂ ವಾರ್ತಾಭಾರತಿ ಗಳಿಸಿರುವ ಅಪಾರ ಜನಮನ್ನಣೆ ಅದರ ನಿತ್ಯ ಓದುಗ ಹಾಗೂ ಹಿತೈಷಿಯಾಗಿ ನನಗೆ ಅತ್ಯಂತ ಖುಷಿಯ ವಿಚಾರ. ದುರ್ಬಲ ವರ್ಗಗಳ ಧ್ವನಿಯಾಗಿ ವಾರ್ತಾಭಾರತಿ ಇನ್ನೂ ಹತ್ತಾರು ದಶಕಗಳ ಕಾಲ ಬೆಳೆಯಲಿ. ಇಡೀ ದೇಶಕ್ಕೆ ಅದರ ವ್ಯಾಪ್ತಿ ಹಬ್ಬಲಿ ಎಂದು ಹಾರೈಸುತ್ತೇನೆ.
ಹಾಶಿಂ ಪೀರ ವಾಲೀಕಾರ, ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ, ವಿಜಯಪುರ
ನಾನು ಪ್ರತಿದಿನವೂ ವಾರ್ತಾಭಾರತಿಯನ್ನು ಓದುವೆ. ಪತ್ರಿಕೆಯಲ್ಲಿ ಪ್ರಕಟವಾಗುವ ಸಂಪಾದಕೀಯ ಜನರ ಅಭಿಪ್ರಾಯಗಳ ಪ್ರತಿರೂಪದಂತಿದ್ದು, ಸಾಮಾಜಿಕ ಚಿಂತನೆಗೆ ದಾರಿ ಮಾಡಿಕೊಡುತ್ತವೆ. ಗ್ರಾಮೀಣ ಪ್ರದೇಶಗಳ ಬೆಳವಣಿಗೆಯ ಕುರಿತಾದ ವರದಿಗಳು, ಸ್ಥಳೀಯ ಸಮಸ್ಯೆಗಳ ಪ್ರಸ್ತಾವಗಳು ಮತ್ತು ಸಾರ್ವಜನಿಕರ ಧ್ವನಿಗೆ ಆದ್ಯತೆ ನೀಡುವ ರೀತಿ ವಿಶಿಷ್ಟವಾಗಿದೆ. ರಾಷ್ಟ್ರೀಯ, ರಾಜ್ಯ ಮತ್ತು ಸ್ಥಳೀಯ ಸುದ್ದಿಗಳನ್ನು ಸರಳ ಶೈಲಿಯಲ್ಲಿ ಜನರಿಗೆ ಮುಟ್ಟಿಸುತ್ತಿದೆ.
ಶಾಂತಪ್ಪ ಪಿ.ಹೆಬಳಿ, ಸಂಶೋಧನಾ ವಿದ್ಯಾರ್ಥಿ, ಗುಲ್ಬರ್ಗ ವಿಶ್ವವಿದ್ಯಾನಿಲಯ, ಕಲಬುರಗಿ
ಸಂವಿಧಾನದ ಆಶಯದ ಪರ
ನೈಜ ಮತ್ತು ದಮನಿತರ, ಶೋಷಿತರ ಪರ, ಜಾತ್ಯತೀತವಾದ ವರದಿಯ ಮೂಲಕ ಸಂವಿಧಾನದ ಆಶಯದಂತೆ ವಾರ್ತಾಭಾರತಿ ಪತ್ರಿಕೆ ಮುನ್ನುಗ್ಗುತ್ತಿದೆ. ಸತ್ಯಕ್ಕೆ ಹಿಡಿದ ಕನ್ನಡಿಯಂತೆ ನ್ಯಾಯದ ಪರ ಧ್ವನಿಯನ್ನು ಎಲ್ಲೆಡೆಗೆ ಪ್ರಸ್ತುತಪಡಿಸುತ್ತಿದೆ. ವಾರ್ತಾಭಾರತಿಯ ಪ್ರಧಾನ, ಸುದ್ದಿ ಸಂಪಾದಕರು, ವರದಿಗಾರರು, ಓದುಗರು, ಚಂದಾದಾರರು, ಬೆಂಬಲಿಗರು ಎಲ್ಲರೂ ಮಾದರಿ ಸಂಸ್ಥೆಯನ್ನಾಗಿ ಮುನ್ನಡೆಸುವಲ್ಲಿ ಯಶಸ್ವಿಯಾಗಲಿ. ವಾರ್ತಾಭಾರತಿ ರಾಜ್ಯ, ರಾಷ್ಟ್ರ, ವಿಶ್ವವ್ಯಾಪಿಯಾಗಿ ವಿಸ್ತರಿಸಿ ಮುನ್ನುಗ್ಗಲಿ.
-ಗುರುನಾಥ ಉಳ್ಳಿಕಾಶಿ ಹುಬ್ಬಳ್ಳಿ, ಸಮತಾ ಸೇನಾ ರಾಜ್ಯಾಧ್ಯಕ್ಷ
ಓದುಗರ ಹಿತ ಕಾಯುವ ಮಾಧ್ಯಮ
ತಂತ್ರಜ್ಞಾನದ ಕಾರಣದಿಂದಾಗಿ ಮಾಧ್ಯಮ ತನ್ನ ಮಗ್ಗಲು ಬದಲಿಸಿದೆ. ಅಂತಹ ಸಂದರ್ಭದಲ್ಲಿ 22 ವರ್ಷಗಳ ಕಾಲ ಸುದೀರ್ಘ ಪ್ರಯಾಣ ಬೆಳೆಸುವುದು ನಿಜಕ್ಕೂ ದೊಡ್ಡ ಸಾಧನೆಯೇ ಸರಿ. ಅದರಲ್ಲೂ ಕೊರೋನ ಕಾಲ ಘಟ್ಟದಲ್ಲಿ ಬಹುತೇಕ ಪತ್ರಿಕೆಗಳು ನೆಲಕಚ್ಚಿದವು. ಆದರೆ ವಾರ್ತಾಭಾರತಿ ದಿನಪತ್ರಿಕೆ ಪರಿಸ್ಥಿತಿಗೆ ಹೊಂದಿಕೊಂಡು ಆ ಕಠಿಣ ಪರಿಸ್ಥಿತಿಯಲ್ಲೂ ಓದುಗರ, ಸಿಬ್ಬಂದಿಯ ಹಿತ ಕಾಯುವಲ್ಲಿ ಯಶಸ್ವಿಯಾಗಿದೆ. ಕೋವಿಡ್ ನಂತರದ ದಿನಗಳಲ್ಲಿ ಪತ್ರಿಕೆಗಳು ಉಸಿರಾಡುವುದೇ ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿತ್ತು. ಆದರೆ, ವಾರ್ತಾಭಾರತಿಯ ಸಮಾಜದಲ್ಲಿ ಅಷ್ಟೊಂದು ಆಳವಾಗಿ ಬೇರಿರುವ ಕಾರಣದಿಂದಾಗಿ ಅದಕ್ಕೆ ಕಠಿಣ ಸವಾಲುಗಳನ್ನು ದಿಟ್ಟವಾಗಿ ಎದುರಿಸಲು ಸಾಧ್ಯವಾಗಿದೆ ಅನ್ನುವುದು ನನ್ನ ಅನಿಸಿಕೆ. ವಾರ್ತಾಭಾರತಿ ಇಂದಿಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಅದು ಮೂಡಿಸಿರುವ ಛಾಪನ್ನು ಮರೆಯಲು ಸಾಧ್ಯವಿಲ್ಲ. ತಂತ್ರಜ್ಞಾನ ಬದಲಾದ ಹಾಗೆ ಅನಿವಾರ್ಯವಾಗಿ ಪತ್ರಿಕಾ ಮಾಧ್ಯಮ ಡಿಜಿಟಲ್ ಕ್ಷೇತ್ರದಲ್ಲೂ ತನ್ನ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿರುವ ಈ ಪರ್ವ ಕಾಲದಲ್ಲಿ ವಾರ್ತಾಭಾರತಿ ಡಿಜಿಟಲ್ ಆವೃತ್ತಿ ಉತ್ತಮ ಕೆಲಸ ನಿರ್ವಹಿಸುತ್ತಿದೆ. ವಾರ್ತಾಭಾರತಿ ಜನದನಿಯ ಸಾರಥಿಯಾಗಿ ಮುನ್ನಡೆಯುತ್ತಿರಲಿ.
-ಡಾ.ಸೌಮ್ಯಾ ಕೆ.ಬಿ. ಕಿಕ್ಕೇರಿ ಉಪನ್ಯಾಸಕಿ, ಪತ್ರಿಕೋದ್ಯಮ ವಿಭಾಗ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು
ಸತ್ಯ, ನ್ಯಾಯವನ್ನು ಪ್ರತಿಪಾದಿಸಿ ಅನ್ಯಾಯಗಳ ಬಗ್ಗೆ ಎಚ್ಚರಿಕೆ ನೀಡುವ ಕೆಲಸವನ್ನು ಪತ್ರಿಕೆ ಮಾಡುತ್ತಿದೆ. ಪತ್ರಿಕೆಯಲ್ಲಿ ಪ್ರಕಟವಾಗುವ ಲೇಖನಗಳು ನಿತ್ಯ ನಮ್ಮ ಬದುಕಿಗೆ ಉಪಯುಕ್ತವಾಗಿವೆ.
-ಪಲ್ಲವಿ ಕೋಸಗಿ, ಸಾಮಾಜಿಕ ಕಾರ್ಯಕರ್ತೆ ರಾಯಚೂರು
ಸರಕಾರದ ಕಣ್ಣು ತೆರೆಸುವ ಕೆಲಸ
ಕನ್ನಡ ಪತ್ರಿಕೋದ್ಯಮದಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರಕಟವಾಗುತ್ತಿರುವ ವಾರ್ತಾಭಾರತಿ ಪತ್ರಿಕೆ ಉತ್ತಮವಾಗಿ ಮೂಡಿಬರುತ್ತಿದೆ. ಪತ್ರಿಕೆಯು ನೈಜ ಸಂಗತಿಯನ್ನು ಹೊಂದಿರುತ್ತದೆ. ಹೆಚ್ಚಾಗಿ ದೀನ ದಲಿತರ, ಹಿಂದುಳಿ ದವರ ಸಮಸ್ಯೆಗಳನ್ನು ಪ್ರಕಟಿಸುವ ಮೂಲಕ ಸರಕಾರದ ಕಣ್ಣು ತೆರೆಸುವ ಕೆಲಸ ಈ ಪತ್ರಿಕೆ ಮಾಡುತ್ತಿದೆ. ವಾರ್ತಾ ಭಾರತಿಯು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಅಸ್ತ್ರವಾಗಿದೆ.
-ಲಕ್ಷ್ಮಣ, ಆಟೊ ಚಾಲಕ, ಚಾಮರಾಜನಗರ
ಶೈಕ್ಷಣಿಕ ಬದುಕಿಗೆ ಬೆಂಬಲ
ವಾರ್ತಾಭಾರತಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಜನಪ್ರತಿನಿಧಿಗಳಿಗೆ ಮನದಟ್ಟು ಮಾಡುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿಗೆ ಬೆಂಬಲವಾಗಿ ನಿಂತಿದೆ. ಪತ್ರಿಕೆಯ ಸುದ್ದಿ, ವಿಶ್ಲೇಷಣೆ, ಲೇಖನ ಉತ್ತಮವಾಗಿದ್ದು, ಪ್ರಗತಿಪರ ಚಿಂತನೆಯುಳ್ಳದ್ದಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಪ್ರಸಕ್ತ ಘಟನೆಗಳ ವಾಸ್ತವಾಂಶವನ್ನು ಜನರ ಮುಂದಿಡುವಲ್ಲೂ ಪತ್ರಿಕೆ ಯಶಸ್ವಿಯಾಗಿದೆ.
-ಸುಜಾತಾ ವೈ. ಕಲಬುರಗಿ, ವಿದ್ಯಾರ್ಥಿನಿ
ಕೆಲವು ಪತ್ರಿಕೆಗಳು ನಿರ್ದಿಷ್ಟ ವ್ಯಕ್ತಿ ಅಥವಾ ಪಕ್ಷಗಳನ್ನು ಓಲೈಸಿಕೊಳ್ಳಲು ಕೆಲಸ ಮಾಡುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ವಾರ್ತಾಭಾರತಿ ಜನಪರ ಧೋರಣೆಯೊಂದಿಗೆ ಕೆಲಸ ಮಾಡುತ್ತಿವೆ. ಮುಂದಿನ ದಿನಗಳಲ್ಲಿಯೂ ಹೀಗೆ ಪ್ರಾಮಾಣಿಕವಾದ ಸುದ್ದಿಗಳನ್ನು ಪ್ರಸಾರ ಮಾಡಲಿ.
-ಬಸವರಾಜ್ ಶೀಲವಂತರ್, ಪ್ರಗತಿಪರ ಹೋರಾಟಗಾರ, ಕೊಪ್ಪಳ
ಯಾವುದೇ ಪ್ರಭಾವಕ್ಕೆ ಒಳಗಾಗದೆ ಸತ್ಯ ಸಂಗತಿಗಳನ್ನು ಜನರಿಗೆ ತಿಳಿಸುವ ಕೆಲವು ಪತ್ರಿಕೆಗಳ ಪೈಕಿ ವಾರ್ತಾಭಾರತಿಯೂ ಒಂದು. ಜನಪರ ಚಳವಳಿಗಳು ಮಾಡುವ ಕೆಲಸವನ್ನು ಈ ಪತ್ರಿಕೆ ಮಾಡುತ್ತಿದೆ.
-ಡಾ.ಕೊಟ್ಟ ಶಂಕರ್, ಉಪನ್ಯಾಸಕ, ದಲಿತ ಹೋರಾಟಗಾರ, ತುಮಕೂರು
ವಾರ್ತಾಭಾರತಿ ಪ್ರಾರಂಭದ ದಿನಗಳಿಂದಲೂ ರಾಜ್ಯದ ಜನಚಳವಳಿ, ಅಂತರ್‌ರಾಷ್ಟ್ರೀಯ ರಾಜಕೀಯ ವಿದ್ಯಾಮಾನಗಳನ್ನು ಪ್ರಕಟಿಸುತ್ತಾ ಬಂದಿದೆ. ಅಳಿವಿನ ಅಂಚಿನ ಸಮುದಾಯಗಳು, ಸ್ಲಂ ನಿವಾಸಿಗಳಿಗೆ ಸಾಮಾಜಿಕ ನ್ಯಾಯ ಕುರಿತ ವರದಿಗಳು ಹೆಚ್ಚಾಗಿ ಪ್ರಕಟವಾಗಲಿ.
-ಎ.ನರಸಿಂಹಮೂರ್ತಿ, ರಾಜ್ಯ ಸಂಚಾಲಕ, ಸ್ಲಂ ಜನಾಂದೋಲನ-ಕರ್ನಾಟಕ
ವಾರ್ತಾಭಾರತಿ ಚಳವಳಿಯ ರೂಪದಲ್ಲಿ ಕೆಲಸ ಮಾಡುತ್ತಿದೆ. ಪತ್ರಿಕೆಯು ನಾಡಿನ ಪ್ರಜ್ಞಾವಂತರು, ಪ್ರಜಾಪ್ರಭುತ್ವವಾದಿಗಳು, ಜನಪರ ಹೋರಾಟಗಾರರು, ಸಂವಿಧಾನದ ಆಶಯ ಮತ್ತು ಮೌಲ್ಯಗಳ ಉಳಿವಿಗೆ ಶ್ರಮಿಸುವವರ ಐಕ್ಯತಾ ವೇದಿಕೆಯಾಗಿ ಮುಂದುವರಿಯಲಿ.
-ಬುದ್ಧಘೋಷ್ ದೇವೇಂದ್ರ ಹೆಗ್ಗಡೆ, ಸಾಹಿತಿ
ಅಲಕ್ಷಿತ ಸಮುದಾಯಗಳ ಗಟ್ಟಿ ಧ್ವನಿ
ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿದು ಶೋಷಿತ, ದಮನಿತ ಮತ್ತು ಅಲಕ್ಷಿತ ಸಮುದಾಯಗಳ ಪರ ಗಟ್ಟಿ ಧ್ವನಿಯಾಗಿ, ಹೋರಾಟಗಾರರಿಗೆ ನೈತಿಕ ಬೆಂಬಲವಾಗಿ ವಾರ್ತಾಭಾರತಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಸುದ್ದಿಗಳ ವಿಶ್ಲೇಷಣೆ, ವಿಮರ್ಶೆ, ಪ್ರಸಕ್ತ
ರಾಜಕೀಯದ ಆಗು ಹೋಗುಗಳನ್ನು ವಿಮರ್ಶಾತ್ಮಕವಾಗಿ ಪ್ರಕಟಿಸುತ್ತಿದೆ. ಜಾಹೀರಾತುಗಳ ಅಬ್ಬರದ ಆಚೆಗೆ ತನ್ನದೇ ಆದ ಸೈದ್ಧಾಂತಿಕ ಬದ್ಧತೆಗಳನ್ನಿಟ್ಟುಕೊಂಡು ಮುಂದುವರಿಯುತ್ತಿದೆ.
-ಕುಮಾರಿ ಎಚ್., ಸಹ ಶಿಕ್ಷಕಿ, ನಂಜನಗೂಡು.
ಸಮತೆಯ ಮೌಲ್ಯಗಳನ್ನು ಕಾಯ್ದುಕೊಂಡ ಪತ್ರಿಕೆ
ವಾರ್ತಾಭಾರತಿ ಕನ್ನಡ ಪತ್ರಿಕೋದ್ಯಮದಲ್ಲಿ ಪ್ರಗತಿಪರ ಧ್ವನಿಯಾಗಿ ತನ್ನದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದೆ. ದಲಿತರು, ಆದಿವಾಸಿಗಳು, ಅಲ್ಪಸಂಖ್ಯಾತರು, ರೈತ-ಕಾರ್ಮಿಕರು ಹಾಗೂ ಮಹಿಳೆಯರ ಧ್ವನಿಯನ್ನು ಸಮಾಜದ ಕೇಂದ್ರಸ್ಥಾನಕ್ಕೆ ತಂದು ನಿಲ್ಲಿಸುವುದು ಇದರ ವಿಶೇಷತೆಯಾಗಿದೆ. ಈ ಪತ್ರಿಕೆ ಕೇವಲ ಸುದ್ದಿಗಳ ಪ್ರಸಾರಕ್ಕೆ ಸೀಮಿತವಾಗದೆ, ಸಾಮಾಜಿಕ ನ್ಯಾಯ, ಮಾನವ ಹಕ್ಕುಗಳು ಮತ್ತು ಸಮತೆಯ ಮೌಲ್ಯಗಳನ್ನು ಜೀವಂತಗೊಳಿಸಲು ದುಡಿಯುತ್ತಿದೆ. ಅದರ ವರದಿಗಳು, ವಿಶ್ಲೇಷಣಾತ್ಮಕ ಲೇಖನಗಳು ಹಾಗೂ ಸಂಪಾದಕೀಯ ಶೋಷಿತರ ಬದುಕಿನ ಅಸಲಿಯತ್ತನ್ನು ಹೊರಗೆಳೆಯುವ ಜೊತೆಗೆ, ಪರಿಹಾರದ ದಾರಿಯನ್ನು ತೋರಿಸುವಲ್ಲಿಯೂ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ.
-ಡಾ.ಟಿ.ಪದ್ಮಶ್ರೀ, ಉಪನ್ಯಾಸಕಿ, ಅಂಬೇಡ್ಕರ್ ಕೇಂದ್ರ ಮೈಸೂರು ವಿಶ್ವವಿದ್ಯಾನಿಲಯ
ತಳಸಮುದಾಯದ ಧ್ವನಿ
ಇತ್ತೀಚಿನ ದಿನಗಳಲ್ಲಿ ಮಾಧ್ಯಮಗಳು ತನ್ನ ಘನತೆ, ಜವಾಬ್ದಾರಿಗಳನ್ನು ಕಳೆದುಕೊಂಡು ಉಳ್ಳವರ ಮನೆಯ ಸಾಕು ನಾಯಿಗಳಂತಾಗುತ್ತಿರುವ ಕಾಲಘಟ್ಟದಲ್ಲಿ ‘ವಾರ್ತಾಭಾರತಿ’ ಉಳಿದ ಮಾಧ್ಯಮಗಳಿಗೆ ಭಿನ್ನ ಎಂಬಂತಿದೆ. ದುಡಿಯುವ ವರ್ಗದ ನೋವಿಗೆ ಧ್ವನಿಯಾಗಿ ಸಮಾಜದಲ್ಲಿ ಶಾಂತಿ, ಸೌಹಾರ್ದ, ಭ್ರಾತೃತ್ವ ಮೂಡಿಸಲು ಯತ್ನಿಸುತ್ತಿದೆ. ಪತ್ರಿಕೆಯಲ್ಲಿ ಬರುವ ಸುದ್ದಿಗಳು, ವಿಚಾರಗಳು ಬೆವರ ಸಂಸ್ಕೃತಿಯ ಭಾಗವಾಗಿರುತ್ತದೆ. ತಳಸಮುದಾಯದ ಜನರಿಗೆ ಧ್ವನಿಯಾಗಿದೆ.
-ದೇವಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಜನವಾದಿ ಮಹಿಳಾ ಸಂಘಟನೆ, ಮಂಡ್ಯ
ರೈತರು, ಕಲಾವಿದರ ಬಗ್ಗೆ ಹೆಚ್ಚಿನ ಕಾಳಜಿ
ಪತ್ರಿಕೆಯಲ್ಲಿ ಸುದ್ದಿ, ಫೋಟೊ ಬಂದರೆ ಸಾಕು ಎನ್ನುವ ಕಾಲದಲ್ಲಿ ಹೆಚ್ಚಾಗಿ ಕೃಷಿಕ ವರ್ಗದ ರೈತರು ಮತ್ತು ಕಲಾವಿದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಪತ್ರಿಕೆ ‘ವಾರ್ತಾಭಾರತಿ’. ಎಲೆಮರೆ ಕಾಯಿಯಂತೆ ಬದುಕುದೂಡುವ ರೈತರನ್ನು ಗುರುತಿಸಿ ಅವರ ಯಶೋಗಾಥೆಯನ್ನು ಪತ್ರಿಕೆಯಲ್ಲಿ ಪ್ರಕಟಿಸಿ ಸಮಾಜಕ್ಕೆ ಗುರುತಿಸುವ ಕೆಲಸ ಮಾಡಲಾಗುತ್ತಿದೆ. ಪ್ರಸಕ್ತ ಮಾಧ್ಯಮಗಳು ಸದಾ ರಾಜಕೀಯ ಸನ್ನಿವೇಶಗಳ ಸುದ್ದಿಗಳನ್ನೇ ಪ್ರಕಟಿಸುವುದು ಹಾಗೂ ವರ್ಣರಂಜಿತವಾಗಿ ಬಿಂಬಿಸುವ ಕೆಲಸ ಮಾಡುತ್ತಿದೆ. ಇದರ ನಡುವೆ ಸಮಾಜದ ಹಿತ ಕಾಪಾಡುವ ದೃಷ್ಟಿಯಲ್ಲಿ ವಾರ್ತಾಭಾರತಿ ಉತ್ತಮವಾಗಿ ಮೂಡಿಬರುತ್ತಿರುವುದು ಇತರ ಮಾಧ್ಯಮಗಳಿಗೆ ಮಾದರಿಯಾಗಿದೆ.
-ಸಿ.ಎಂ.ನರಸಿಂಹಮೂರ್ತಿ, ಅಂತರ್‌ರಾಷ್ಟ್ರೀಯ ಜಾನಪದ ಗಾಯಕ, ಚಾಮರಾಜನಗರ
ದುರ್ಬಲ ವರ್ಗಕ್ಕೆ ಬಲ
ವಾರ್ತಾಭಾರತಿ ಬಡವರ, ಪರಿಶಿಷ್ಟರ, ಅಲ್ಪಸಂಖ್ಯಾತರ ಹಾಗೂ ಕಾರ್ಮಿಕರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಸುದ್ದಿಗಳನ್ನು ನೀಡಿ ದುರ್ಬಲ ವರ್ಗಕ್ಕೆ ಬಲ ತುಂಬುತ್ತಿದೆ. ಸಮಾಜದಲ್ಲಿ ತುಳಿತಕ್ಕೊಳಗಾದವರ ಸಮಸ್ಯೆಗಳನ್ನು ಪ್ರತಿಬಿಂಬಿಸಿ ಆಡಳಿತ ವ್ಯವಸ್ಥೆಯ ಕಣ್ತೆರೆಸುವ ಕಾರ್ಯ ವಾರ್ತಾಭಾರತಿಯಿಂದ ಆಗುತ್ತಿದೆ. ಎಲ್ಲೂ ಯಾವುದೇ ರಾಜಕೀಯ ಪಕ್ಷಗಳನ್ನು ಓಲೈಕೆ ಮಾಡದೆ ಜನ ಪರವಾಗಿಯೇ ವರದಿಗಳನ್ನು ಪ್ರಕಟಿಸುತ್ತಿರುವುದು ಈ ಪತ್ರಿಕೆಯ ಹೆಗ್ಗಳಿಕೆ. ವಾರದ ವಿಶೇಷ ಲೇಖನಗಳು ಸೊಗಸಾಗಿ ಮೂಡಿ ಬರುತ್ತಿವೆ.
-ಗಾಯತ್ರಿ ನರಸಿಂಹ, ಸಾಮಾಜಿಕ ಹೋರಾಟಗಾರ್ತಿ, ಗೋಣಿಕೊಪ್ಪ
ಕಾನೂನು ಬಾಹಿರ ಚಟುವಟಿಕೆಗಳನ್ನು ಮುನ್ನೆಲೆಗೆ ತರುವಲ್ಲಿ ವರದಿಗಳು ವಿಶೇಷ ಪಾತ್ರವಹಿಸುತ್ತಿವೆ. ಸಮಾಜದ ಕಟ್ಟಕಡೆಯ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಾ ಸಮಸಮಾಜ ಕಟ್ಟುವ ಕಾರ್ಯದಲ್ಲಿ ವಾರ್ತಾಭಾರತಿ ಮುಂದಡಿಯಿಡುತ್ತಿದೆ. ಜನಸಾಮಾನ್ಯರ ಮೂಲಸೌಕರ್ಯಗಳ ಸಮಸ್ಯೆಗಳ ಬಗ್ಗೆ ಸುದ್ದಿಗಳನ್ನು ಪ್ರಕಟಿಸಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತರುವಲ್ಲಿ ಮತ್ತು ಶೀಘ್ರ ಪರಿಹಾರ ಕಲ್ಪಿಸುವಲ್ಲೂ ಪತ್ರಿಕೆ ಪಾತ್ರ ವಹಿಸಿದೆ.
-ಎಂ.ಎನ್.ದೊಡ್ಮನಿ, ವಕೀಲ, ಯಾದಗಿರಿ
ಸಮಾಜದಲ್ಲಿನ ಎಲ್ಲ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ತಾರತಮ್ಯ ಅನುಸರಿಸದೆ ಸುದ್ದಿಗಳನ್ನು ಪ್ರಕಟ ಮಾಡುವ ವಾರ್ತಾಭಾರತಿ ಪತ್ರಿಕೆಯ ಬದ್ಧತೆ ಶ್ಲಾಘನೀಯ. ‘ವ್ಯೆಸ್ ಇನ್ ನ್ಯೂಸ್’ ಗೆ ಅವಕಾಶ ನೀಡದೆ ವಸ್ತುನಿಷ್ಠವಾಗಿ ಸುದ್ದಿಯನ್ನು ಓದುಗರ ಮುಂದೆ ಇಡುತ್ತಿರುವುದು ಅಭಿನಂದನಾರ್ಹ. ಸಂಪಾದಕೀಯ, ಅಂಕಣಗಳು, ಲೇಖನಗಳ ಮೂಲಕ ಕಾರ್ಪೊರೇಟ್ ವಲಯದ ಬೆಂಬಲದಿಂದ ವಿಜೃಂಭಿಸುತ್ತಿರುವ ಇತರ ಮಾಧ್ಯಮಗಳ ನಡುವೆಯೂ ತನ್ನ ವಿಶಿಷ್ಟ ಸ್ಥಾನವನ್ನು ಉಳಿಸಿಕೊಂಡಿದೆ.
-ಝೈಬಾ ಫಾತಿಮಾ ಖಾನಮ್ ಆರ್., ಅಕೌಂಟ್ಸ್ ಅಡ್ಮಿನ್, ಬೆಂಗಳೂರು
ಹಂಪಿ ಕನ್ನಡ ವಿವಿ ಹೃದಯದಲ್ಲಿರುವ ಪತ್ರಿಕೆ
ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆಯುವ ಮಹಾತ್ಮರ ಜಯಂತಿಗಳು, ಸಮ್ಮೇಳನಗಳು, ರಾಷ್ಟ್ರೀಯ ಹಬ್ಬಗಳು, ನಾಡಹಬ್ಬಗಳು, ದತ್ತಿನಿಧಿ, ಪೀಠಗಳ ಉಪನ್ಯಾಸಗಳು, ವಿಚಾರ ಸಂಕಿರಣಗಳು, ಬಗ್ಗೆ ವರದಿ ಪ್ರಕಟ ಮಾಡಿ ಕನ್ನಡ ವಿಶ್ವ ವಿದ್ಯಾನಿಲಯದ ಹೃದಯದಲ್ಲಿ ವಾರ್ತಾಭಾರತಿ ನೆಲೆಸಿದೆ.
ಡಾ.ಡಿ. ಮೀನಾಕ್ಷಿ, ನಿವೃತ್ತ ಉಪನಿರ್ದೇಶಕಿ, ಮಾಹಿತಿ ಕೇಂದ್ರ ಕನ್ನಡ ವಿಶ್ವವಿದ್ಯಾನಿಲಯ ಹಂಪಿ
ದುರ್ಬಲ ವರ್ಗದ ಆಶಾಕಿರಣ
ದುರ್ಬಲ ವರ್ಗದವರ ಆಶಾಕಿರಣವಾಗಿ ಕಾರ್ಯ ನಿರ್ವಹಿಸುತ್ತಿರುವ ಪತ್ರಿಕೆ ತುಳಿತಕ್ಕೊಳಗಾದವರ ಧ್ವನಿ ವಾರ್ತಾಭಾರತಿ. ವಿನಾಕಾರಣ ಯಾವುದೇ ಸುದ್ದಿಯನ್ನು ವಿಜೃಂಭಿಸದೆ ನೈಜ ಸ್ಥಿತಿಗತಿಯನ್ನು ಸಮಾಜಕ್ಕೆ ತಿಳಿಸುತ್ತಿರುವುದು ಮಾದರಿ ಕಾರ್ಯವಾಗಿದೆ. ಎಲ್ಲೋ ಮರೆಯಾಗಿ ಹೋಗಿ ಬಿಡುವ ಪ್ರಮುಖ ಸುದ್ದಿಗಳನ್ನೂ ನಿಷ್ಪಕ್ಷವಾಗಿ ಮುಖಪುಟದಲ್ಲಿ ಪ್ರಕಟಿಸಿ ಪತ್ರಿಕಾ ಧರ್ಮಕ್ಕೆ ನ್ಯಾಯ ಒದಗಿಸುತ್ತಿದೆ.
-ಎಚ್.ಎಲ್.ದಿವಾಕರ್, ದಸಂಸ ಕೊಡಗು ಜಿಲ್ಲಾ ಸಂಚಾಲಕ
ನೈಜ ಸುದ್ದಿಯ ಅನಾವರಣ
ಸತ್ಯವನ್ನು ಸುಳ್ಳಾಗಿ ತೋರಿಸುವ, ಬರೆಯುವ ಇಂದಿನ ಮಾಧ್ಯಮ ಲೋಕದ ಧಾವಂತದಲ್ಲಿ ಯಾವುದು ನೈಜ ಸುದ್ದಿ ಎಂದು ಜನಸಾಮಾನ್ಯರು ತಿಳಿಯುವುದೇ ಕಷ್ಟಕರವಾಗಿದೆ. ಇಂತಹ ಕಾಲಘಟ್ಟದಲ್ಲೂ ಸತ್ಯವನ್ನು ಸತ್ಯವೆಂದೇ ಹೇಳುವ ವಾರ್ತಾಭಾರತಿ ಪತ್ರಿಕೆ ನನಗಿಷ್ಟ. ಪ್ರಸಕ್ತ ಯಾವುದೇ ಘಟನೆಗಳು ಸಾಮಾಜಿಕ ಜಾಲತಾಣಗಳು, ದೃಶ್ಯ ಮಾಧ್ಯಮದ ಮೂಲಕ ಎಲ್ಲವೂ ಜನರಿಗೆ ಅತೀ ವೇಗವಾಗಿ ತಲುಪುತ್ತವೆ. ಆದರೆ, ಅವುಗಳಲ್ಲಿ ಯಾವುದು ಸತ್ಯ, ಯಾವುದು ಅನಗತ್ಯ ಎಂದು ತಿಳಿಯುವುದೇ ಕಷ್ಟ. ಇತರ ಪತ್ರಿಕೆ, ದೃಶ್ಯ ಮಾಧ್ಯಮಕ್ಕಿಂತ ನಾನು ‘ವಾರ್ತಾಭಾರತಿ’ಯನ್ನು ಹೆಚ್ಚಾಗಿ ಇಷ್ಟ ಪಡುವುದೇ ಅದರಲ್ಲಿ ಪ್ರಕಟವಾಗುವ ಸತ್ಯ ದರ್ಶನದ ಸುದ್ದಿಗಳಿಗಾಗಿ.
-ಭಾರತಿ ಬೋಳಾರ, ಕಾರ್ಯದರ್ಶಿ, ಮಂಗಳೂರು ಬೀಡಿ ಯೂನಿಯನ್
ಓದುಗರನ್ನೇ ನೆಚ್ಚಿಕೊಂಡ ಪತ್ರಿಕೆ
ಪತ್ರಿಕೆಯು ಯಾವುದೇ ವಿಷಯಗಳಿಗೆ ರಾಜಿಯಾಗದೆ ಓದುಗರನ್ನೇ ನೆಚ್ಚಿಕೊಂಡು 22 ವರ್ಷಗಳ ಕಾಲ ತನ್ನ ಪಯಣವನ್ನು ಮುನ್ನಡೆಸಿದೆ ಎಂದರೆ ಅದೊಂದು ಪವಾಡ. ಬೇರೆ ಪತ್ರಿಕೆಗಳಲ್ಲಿ ಜಾಹೀರಾತಿನ ಮಧ್ಯೆ ಸುದ್ದಿಗಳನ್ನು ಓದುವ ಸಂಕಷ್ಟ ಓದುಗರದ್ದು. ಆದರೆ, ವಾರ್ತಾಭಾರತಿ ಇದಕ್ಕೆ ತದ್ವಿರುದ್ಧ. ಇದೇ ರೀತಿ ಜನದನಿಯ ಸಾರಥಿಯಾಗಿ ಮುನ್ನಡೆಯಲಿ.
-ಎಸ್.ಬಾಬು ಖಾನ್, ಸಂಶೋಧಕ ಬೆಂಗಳೂರು
ಆಳುವವರನ್ನು ಮೆಚ್ಚಿಸಲು ಇರುವ ನೂರಾರು ಪತ್ರಿಕೆಗಳ ನಡುವೆ ಜನರ ಹಕ್ಕುಗಳ ಧ್ವನಿಯಾಗಿ ವಾರ್ತಾಭಾರತಿ ವಿಭಿನ್ನವಾಗಿ ನಿಂತಿದೆ. ಮಹಿಳೆಯರ, ವಿದ್ಯಾರ್ಥಿ- ಯುವಜನರ, ಕಾರ್ಮಿಕರ, ರೈತರ ಹಲವಾರು ನ್ಯಾಯಯುತ ಬೇಡಿಕೆಗಳ ಹೋರಾಟದ ಕೂಗನ್ನು ನಾಡಿನ ಮನೆ-ಮನಗಳಿಗೆ ಕೊಂಡೊಯ್ಯುವ ಕೆಲಸ ಮೆಚ್ಚುವಂತದ್ದು. ಅನ್ಯಾಯ, ಅಸತ್ಯದ ವಿರುದ್ಧ, ನಿದ್ರೆಗೆ ಜಾರುವವರನ್ನು ಎಚ್ಚರಿಸುವ ಕರೆಗಂಟೆಯಾಗಿ 22 ವರ್ಷಗಳಿಂದ ನಿರಂತರವಾಗಿ ಕೆಲಸ ಮಾಡುತ್ತಿರುವ ವಾರ್ತಾಭಾರತಿಗೆ ಅಭಿನಂದನೆಗಳು.
-ನಿರ್ಮಲಾ ಎಚ್.ಎಲ್., ಸಾಮಾಜಿಕ ಹೋರಾಟಗಾರ್ತಿ, ಬೆಂಗಳೂರು
ತಳಸ್ಪರ್ಶಿ ವಿಶ್ಲೇಷಣೆಗಳು
ವಾರ್ತಾಭಾರತಿ ಬೆಳಗ್ಗೆ ಮನೆಗೆ ತಲುಪಿದಾಗಲೇ ನಾನು ಮಧ್ಯಪುಟಗಳನ್ನು ಹೊರತುಪಡಿಸಿ ಎಲ್ಲ ಪುಟಗಳನ್ನು ಆಗಲೇ ಓದಿ ಮುಗಿಸಿಬಿಡುತ್ತೇನೆ. ಮಧ್ಯಪುಟಗಳು ತಕ್ಷಣ ಓದಿ ಮುಗಿಸದಷ್ಟು ವಿವರ ವಿಸ್ತಾರದಿಂದ ಕೂಡಿರುತ್ತದೆ. ಸಮಾಜ, ರಾಜಕೀಯ, ಸಾಹಿತ್ಯ, ರಂಗಭೂಮಿ, ಜನರ ಹಾಡುಪಾಡು ಇವೆಲ್ಲವುಗಳ ತಳಸ್ಪರ್ಶಿ ವಿಶ್ಲೇಷಣೆಗಳು ಅಲ್ಲಿನ ಲೇಖನಗಳಲ್ಲಿ ಇರುವುದರಿಂದ ಅಷ್ಟೂ ವಿಚಾರಗಳನ್ನು ಗ್ರಹಿಸಲು ಸಾಕಷ್ಟು ಸಮಯವನ್ನು ಅಪೇಕ್ಷಿಸುತ್ತದೆ. ಕನ್ನಡದ ಬೇರೆ ಯಾವ ದಿನಪತ್ರಿಕೆಗಳೂ ಇಷ್ಟೊಂದು ಪುಷ್ಕಳವಾದ ಬೌದ್ಧಿಕ ಆಹಾರವನ್ನು ಪ್ರತಿದಿನವೂ ತಪ್ಪದೇ ನೀಡುತ್ತಿಲ್ಲವೆಂಬುದು ನನ್ನ ಭಾವನೆ. ಇದನ್ನು ನಿತ್ಯ ಸೇವಿಸುವ ನಮ್ಮ ನಾಡಿನ ಓದುಗರು ಆರೋಗ್ಯವಂತರಾಗಿ ಬೆಳೆಯುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆಯಾಗಿದೆ. ಅದಕ್ಕಾಗಿ ವಾರ್ತಾಭಾರತಿ ಪತ್ರಿಕೆಯನ್ನು ನಾನು ಅಭಿನಂದಿಸುತ್ತೇನೆ. ನಮ್ಮ ಹೆಮ್ಮೆ ಪ್ರೀತಿಯ ಪತ್ರಿಕೆ ಹೀಗೆಯೇ ಮುಂದುವರಿಯಲಿ. 23ನೇ ವರ್ಷಕ್ಕೆ ಕಾಲಿಟ್ಟಿರುವ ವಾರ್ತಾಭಾರತಿಗೆ ಹಾರ್ದಿಕ ಶುಭಾಶಯಗಳು.
-ವಾಸುದೇವ ಉಚ್ಚಿಲ್, ಜನಸಂಸ್ಕೃತಿ ಪರಿಚಾರಕ, ಮಂಗಳೂರು
ವಾಸ್ತವ, ಸತ್ಯ ವಿಚಾರಗಳು, ಜನಸಾಮಾನ್ಯರ, ಬಡವರ, ರೈತರ, ಕಾರ್ಮಿಕ, ಮಹಿಳೆಯರ, ವಿದ್ಯಾರ್ಥಿಗಳ ಧ್ವನಿಯಾಗಿ ವಾರ್ತಾಭಾರತಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ.
-ಜೆ.ಎಂ.ವೀರ ಸಂಗಯ್ಯ, ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ
ನೊಂದವರ ಪರ
ಇಂದು ಕೆಲವು ಮಾಧ್ಯಮಗಳು ಬಂಡವಾಳಶಾಹಿಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ವಾರ್ತಾಭಾರತಿ ನೊಂದವರ ಬೆನ್ನಿಗೆ ನಿಂತಿದೆ. ಎಲ್ಲೂ ಅತಿರೇಕಕ್ಕೆ ಅವಕಾಶ ನೀಡದೆ ಪತ್ರಿಕಾ ಧರ್ಮವನ್ನು ನಿಷ್ಠೆಯಿಂದ ಪಾಲಿಸಿಕೊಂಡು ಬರುತ್ತಿದೆ. ದಲಿತರು, ಬಡವರು, ಅನಕ್ಷರಸ್ಥರು ಹಾಗೂ ಕೂಲಿ ಕಾರ್ಮಿಕರ ನೋವು ನಲಿವುಗಳಿಗೆ ಸ್ಪಂದಿಸುತ್ತಿವೆ. ದಲಿತರು, ಬಡವರು ಹಾಗೂ ಕಾರ್ಮಿಕರ ಸುದ್ದಿಗಳನ್ನು ಎಲ್ಲೋ ಮೂಲೆಯಲ್ಲಿ ನೋಡಬೇಕಾದ ಪರಿಸ್ಥಿತಿಯಲ್ಲಿ ವಾರ್ತಾಭಾರತಿ ಈ ವರ್ಗಕ್ಕೆ ದಪ್ಪ ಅಕ್ಷರಗಳ ತಲೆ ಬರಹದೊಂದಿಗೆ ಪ್ರಾಮುಖ್ಯತೆ ನೀಡುತ್ತಿದೆ.
-ಮುನೀಂದ್ರ, ಕರ್ನಾಟಕ ರಾಜ್ಯ ದಲಿತ ಸೇನೆ ಸಂಘಟನಾ ಕಾರ್ಯದರ್ಶಿ, ಹೊಸಕೋಟೆ
ಎಲ್ಲ ವರ್ಗದ ಜನರ ಅಸ್ಮಿತೆಯಾದ ವಾರ್ತಾಭಾರತಿಯನ್ನು ನಾನು ಹಲವು ವರ್ಷಗಳಿಂದ ನಿರಂತರವಾಗಿ ಓದುತ್ತಾ ಬಂದಿದ್ದೇನೆ. ವಾರ್ತಾಭಾರತಿ ವೆಬ್‌ಪೋರ್ಟಲ್‌ನಲ್ಲಿ ಸಾಕಷ್ಟು ರಾಜ್ಯ, ರಾಷ್ಟ್ರ ಮಟ್ಟದ ಸುದ್ದಿ, ಮಾಹಿತಿಗಳು ಕ್ಷಣಕ್ಷಣಕ್ಕೂ ಸಿಗುತ್ತಿದೆ. ವೇಗವಾಗಿ ಸುದ್ದಿ ಬಿತ್ತರಿಸುವ ಮೂಲಕ ಜನಮನ ಗಳಿಸಿದೆ.
-ಸಾಂಗ್ಲಿಯಾನ ಯಾದಗಿರಿ, ಆಟೊ ಚಾಲಕ
ಪತ್ರಿಕೆಗಳು ಮನಸ್ಸು ಮಾಡಿದರೆ ಏನು ಬೇಕಾದರೂ ಬದಲಾವಣೆ ಮಾಡಬಹುದು ಎನ್ನುವುದಕ್ಕೆ ‘ವಾರ್ತಾಭಾರತಿ’ ಸಾಕ್ಷಿ. ಇಂದಿನ ಸಮಾಜದಲ್ಲಿ ಅಹಿಂದ ವರ್ಗದವರ ಧ್ವನಿಯಾಗಿರುವ ಪತ್ರಿಕೆ ಎಂದು ಕರೆಯಲಾಗುತ್ತಿರುವ ವಾರ್ತಾಭಾರತಿಯಲ್ಲಿ ನಿತ್ಯವೂ ಹೊಸ ವಿಷಯಗಳು ಓದುಗರ ಕೈ ಸೇರುತ್ತಿವೆ. ಅಲ್ಪಸಂಖ್ಯಾತರು, ಹಿಂದುಳಿದ ಹಾಗೂ ದಲಿತ ಸಮುದಾಯದವರ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
-ಮಹೇಶ್ ಪ್ರಸಾದ್ ಸಿ.ಎಸ್., ಕಂಪ್ಯೂಟರ್ ತಾಂತ್ರಿಕ ತಜ್ಞ, ಚಾಮರಾಜನಗರ
ಸಂವಿಧಾನ ಪರವಾದ ಲೇಖನಗಳು, ಅಂಬೇಡ್ಕರ್, ಅಷ್ಫಾಕುಲ್ಲಾಖಾನ್, ರಾಮ್ ಪ್ರಸಾದ್, ಬಿಸ್ಮಿಲ್ಲಾ, ಭಗತ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್, ಕಾರ್ಲ್ ಮಾರ್ಕ್ಸ್ ಮತ್ತು ಸಾವಿತ್ರಿ ಬಾಯಿ ಫುಲೆ ವಿಚಾರಗಳ ಜೊತೆಗೆ ಪ್ರಗತಿಪರ ವಿಚಾರ ಉಳ್ಳ ಅಂಕಣಗಳು ಬಹಳ ವಿಶಿಷ್ಟವಾಗಿ ಮೂಡಿ ಬರುತ್ತಿವೆ. ವಿಶೇಷವಾಗಿ ಪಿ.ಮಹಮ್ಮದ್ ಅವರ ಕಾರ್ಟೂನ್‌ಗಳು ಚೆನ್ನಾಗಿತ್ತವೆ. ಸನತ್‌ಕುಮಾರ್ ಬೆಳಗಲಿಯವರ ಪ್ರಚಲಿತ ಅಂಕಣವು ಚಿಂತನಾರ್ಹವಾಗಿದೆ.
-ಅರುಂದತಿ ಬಟನೂರ, ಸಹ ಶಿಕ್ಷಕಿ, ವಿದ್ಯಾನಂದ ಗುರುಕುಲ ಪ್ರೌಢಶಾಲೆ, ಕುಕನೂರ-ಕೊಪ್ಪಳ
ಪ್ರಜಾತಂತ್ರದ ಮೌಲ್ಯ ಎತ್ತಿ ಹಿಡಿಯುವ ಪತ್ರಿಕೆ
ವಾರ್ತಾಭಾರತಿ ನಿಷ್ಪಕ್ಷ, ನಿಸ್ಸಂಕೋಚ ಮತ್ತು ನಿರ್ಭಯವಾಗಿ ವಸ್ತುನಿಷ್ಠ ಸತ್ಯವನ್ನು ಎಲ್ಲೆಡೆಗೆ ಪಸರಿಸುವ ಅಭಿಮಾನದ ಪತ್ರಿಕೆ ಎಂದು ಹೇಳಲು ತುಂಬ ಸಂತೋಷವೆನಿಸುತ್ತದೆ. ಬಹುತೇಕ ಸುದ್ದಿ ಮಾಧ್ಯಮಗಳು ಬಂಡವಾಳಶಾಹಿಗಳ, ಪುರೋಹಿತಶಾಹಿಗಳ ಹಾಗೂ ಸ್ವಘೋಷಿತ ರಾಜಕೀಯ ಧುರೀಣರ ಕೈಗೊಂಬೆಗಳಂತೆ ಕಾಣಿಸುವ ಇಂದಿನ ದಿನಗಳಲ್ಲಿ ವಾರ್ತಾಭಾರತಿ ಪ್ರಜಾತಂತ್ರದ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯವನ್ನು ಜವಾಬ್ದಾರಿಯುತವಾಗಿ ಮಾಡುತ್ತಿರುವುದು ಗಮನಾರ್ಹವಾಗಿದೆ. ವರ್ತಮಾನದ ವಿವಿಧ ಸವಾಲುಗಳನ್ನು ಮೆಟ್ಟಿನಿಂತ ವಾರ್ತಾಭಾರತಿಯ ಯಶಸ್ಸಿನ ಹಾದಿಯು ಪ್ರಜಾತಂತ್ರದ ಉಳಿವಿನ ಹಾದಿಯೂ ಆಗಿದೆ ಎನ್ನುವುದರ ಬಗ್ಗೆ ಎರಡು ಮಾತಿಲ್ಲ. ವಾರ್ತಾಭಾರತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಓದುಗರನ್ನೊಳಗೊಂಡ ಜನಪ್ರಿಯ ಪತ್ರಿಕೆಯಾಗಿ ಶಾಶ್ವತವಾಗಿ ನೆಲೆಗೊಳ್ಳಲಿ.
-ಇಸ್ಮಾಯೀಲ್ ಟಿ., ನಿವೃತ್ತ ಪ್ರಾಂಶುಪಾಲ, ಮದನಿ ಪಿಯು ಕಾಲೇಜು ಅಳೇಕಲ ಉಳ್ಳಾಲ
ಪತ್ರಿಕಾ ಧರ್ಮದ ಪಾಲನೆ
ಇಂದಿನ ದಿನಮಾನದಲ್ಲಿ ಕೆಲವು ಪತ್ರಿಕೆಗಳು ತಮ್ಮ ಪತ್ರಿಕಾ ಧರ್ಮವನ್ನು ಮರೆತು ರಾಜಕಾರಣಿಗಳು, ಶ್ರೀಮಂತರ ಮುಖವಾಣಿಗಳಾಗುತ್ತಿರುವಾಗ ತನ್ನ ನೈಜತೆಯನ್ನು ಕಾಪಿಟ್ಟುಕೊಂಡು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಶ್ರಮಿಸುತ್ತಿರುವ ವಾರ್ತಾಭಾರತಿಯು ಜನಮೆಚ್ಚುಗೆಗೆ ಪಾತ್ರವಾಗಿದೆ. ಪತ್ರಿಕಾ ರಂಗದಲ್ಲಿ 22 ವರ್ಷಗಳ ಸುದೀರ್ಘ ಪಯಣದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಸದಾ ಎತ್ತಿ ಹಿಡಿಯುತ್ತಿದೆ. ಮುಂದಿನ ದಿನಗಳಲ್ಲಿಯೂ ಪತ್ರಿಕಾ ಧರ್ಮವನ್ನು ಪಾಲಿಸಿಕೊಂಡು ಸ್ವಸ್ಥ ಹಾಗೂ ಸದೃಢ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಪತ್ರಿಕೆಯು ಇನ್ನಷ್ಟು ಆತ್ಮವಿಶ್ವಾಸದಿಂದ ಮುಂದುವರಿಯಲಿ.
-ಕೆ.ರಾಘವೇಂದ್ರ ನಾಯರಿ, ಪ್ರಧಾನ ಕಾರ್ಯದರ್ಶಿ, ದಾವಣಗೆರೆ ಜಿಲ್ಲಾ ಬ್ಯಾಂಕ್ ನೌಕರರ ಸಂಘ
ಸಮಾಜದ ಬದಲಾವಣೆಗೆ ಉತ್ತೇಜನ
ವಾರ್ತಾಭಾರತಿ ಪತ್ರಿಕೆ ಕರ್ನಾಟಕ ಪತ್ರಿಕೋದ್ಯಮದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಇದರಲ್ಲಿ ಪ್ರಕಟವಾಗುವ ಸುದ್ದಿಗಳ ಶೈಲಿ ಸರಳವಾಗಿದ್ದು, ಓದುಗರಿಗೆ ನೇರವಾಗಿ ತಲುಪುತ್ತದೆ. ಪತ್ರಿಕೆಯು ವಿಶೇಷವಾಗಿ ಹಿಂದುಳಿದ ವರ್ಗ, ದಲಿತರು, ಅಲ್ಪಸಂಖ್ಯಾತರು, ರೈತರು ಮತ್ತು ಬಡಜನರು ಎದುರಿಸುತ್ತಿರುವ ಅನೇಕ ಸಮಸ್ಯೆಗಳನ್ನು ಎತ್ತಿ ತೋರಿಸುವ ಮೂಲಕ ಜನಮನದಲ್ಲಿ ನಂಬಿಕೆ ಗಳಿಸಿದೆ. ಇದು ಸಮಾಜದ ನೈಜ ಚಿತ್ರಣವನ್ನು ಜನರ ಮುಂದಿಡುತ್ತಿದೆ. ಪತ್ರಿಕೆಯಲ್ಲಿನ ‘ವಿಚಾರ ಭಾರತಿ’ ಮತ್ತು ‘ವೈವಿಧ್ಯ ಭಾರತಿ’ ಪುಟಗಳಲ್ಲಿ ಪ್ರಕಟವಾಗುವ ಸಂಪಾದಕೀಯ ಹಾಗೂ ಲೇಖನಗಳು ಸಮಾಜದ ಬದಲಾವಣೆಗೆ ಉತ್ತೇಜನ ನೀಡುತ್ತವೆ. ಇವು ಓದುಗರಲ್ಲಿ ಚಿಂತನಾಶೀಲತೆಯನ್ನು ವೃದ್ಧಿಸಲು ಸಹಕಾರಿಯಾಗುತ್ತವೆ.
ಪ್ರದೀಪ್ ಕಾಂಬ್ಳೆ, ಹಾರೂರಗೇರಿ, ಬೀದರ್
ಜನಸಾಮಾನ್ಯರ ಪರ
ಸಾಮಾನ್ಯ ಜನರ ಹಕ್ಕುಗಳ ಪರವಾಗಿ ಧ್ವನಿ ಎತ್ತಿ ಪತ್ರಿಕೋದ್ಯಮದ ಮಾದರಿಯನ್ನು ತೋರಿಸಿದೆ. ಶಿಕ್ಷಣ, ಆರೋಗ್ಯ, ಪರಿಸರ, ಮಾನವ ಹಕ್ಕುಗಳು ಮುಂತಾದ ಕ್ಷೇತ್ರಗಳ ಕುರಿತ ವರದಿಗಳು ಜನರಲ್ಲಿ ಜಾಗೃತಿ ಮೂಡಿಸುತ್ತವೆ. ಧರ್ಮನಿರಪೇಕ್ಷತೆ, ನ್ಯಾಯ ಮತ್ತು ಸಮಾನತೆ ಎಂಬ ಮೌಲ್ಯಗಳನ್ನು ಉತ್ತೇಜಿಸಿ ಸಾಮಾಜಿಕ ಬದಲಾವಣೆಗೆ ದಾರಿದೀಪವಾಗಿದೆ.
ಜಗದೀಶ್ವರ್ ಬಿರಾದಾರ್, ಬೀದರ್
ವಸ್ತುನಿಷ್ಠ ವರದಿಗೆ ಹೆಸರುವಾಸಿ
ಉತ್ತಮ ಪತ್ರಿಕೆಯಾಗಿ ಉಳಿದಿರುವ ಬೆರಳೆಣಿಕೆಯ ಪತ್ರಿಕೆಗಳಲ್ಲೊಂದಾಗಿರುವ ‘ವಾರ್ತಾಭಾರತಿ’ ಯಾರ ಮುಲಾಜಿಲ್ಲದೆ ಯಾವುದೇ ಹಂಗಿಗೆ ಒಳಗಾಗದೆ ವಸ್ತುನಿಷ್ಠ ವರದಿಗಳನ್ನು ಬಿತ್ತರಿಸುವ ಮೂಲಕ ಜನರ ವಿಶ್ವಾಸ ಗಳಿಸಿ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಕೋಮು ಸಂಘರ್ಷಗಳಿಂದ ಒಂದಷ್ಟು ಪರಿಸ್ಥಿತಿ ಹದಗೆಡುತ್ತಿರುವ ಇಂತಹ ಸನ್ನಿವೇಶದಲ್ಲಿ ಕೆಲವು ಒಳ್ಳೆಯ ಮನಸ್ಸುಗಳು ನಡೆಸುತ್ತಿರುವ ಸೌಹಾರ್ದ ಸಮಾವೇಶಗಳ ಬಗ್ಗೆ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುವ ಕೆಲಸ ಮಾಡುತ್ತಿರುವುದು ಸಂತೋಷದ ವಿಚಾರ. ಅವ್ಯವಸ್ಥೆಗಳ ಆಗರವಾಗಿರುವ ನಮ್ಮ ಸರಕಾರಿ ಶಾಲೆಗಳ ಬಗ್ಗೆ ಪತ್ರಿಕೆ ತೋರಿಸುತ್ತಿರುವ ಕಾಳಜಿ ಶ್ಲಾಘನೀಯ. ಸರಕಾರಿ ಶಾಲೆಗಳು ಉಳಿದು ಮುಂದಿನ ತಲೆಮಾರಿಗೆ ಕೊಡುಗೆಯಾಗಲು ಈ ಕುರಿತು ಇನ್ನಷ್ಟು ಬೆಳಕು ಚೆಲ್ಲುವ ಕಾರ್ಯವಾಗಲಿ. ಪತ್ರಿಕೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ.
ಅಬ್ದುಲ್ ಸಲಾಂ ಚಿತ್ತೂರು, ರಾಜ್ಯ ನಿರ್ದೇಶಕ, ಜಿಲ್ಲಾ ಅಧ್ಯಕ್ಷ, ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ, ಉಡುಪಿ ಜಿಲ್ಲಾ ಘಟಕ
ವ್ಯಂಗ್ಯಚಿತ್ರಗಳಲ್ಲೇ ವರ್ತಮಾನದ ಸ್ಥಿತಿಗತಿ ಅನಾವರಣ
ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಸಾಹಿತ್ಯ ಕುರಿತಂತೆ ಶೋಷಣೆ ರಹಿತ ಸಮಾಜ ನಿರ್ಮಿಸುವ ಹಾದಿಯಲ್ಲಿ ‘ವಾರ್ತಾಭಾರತಿ’ ಪತ್ರಿಕಾ ಧರ್ಮವನ್ನು ಎಂದೂ ಬಿಟ್ಟು ಕೊಟ್ಟಿಲ್ಲ. ಇದೇ ಕಾರಣಕ್ಕೆ ಈ ಪತ್ರಿಕೆ ನನಗಿಷ್ಟ. ಸಂಪಾದಕೀಯ, ಪ್ರಚಲಿತ ಅಂಕಣ, ವೈಚಾರಿಕ ಮತ್ತು ವೈಜ್ಞಾನಿಕ ಲೇಖನಗಳನ್ನು ಕಾಯ್ದು ಓದಬೇಕು ಎನ್ನುವ ಕುತೂಹಲವನ್ನಂತೂ ಈ ಪತ್ರಿಕೆ ಕಾಪಿಟ್ಟುಕೊಂಡಿದೆ. ಸಾವಿರ ಪದಗಳಲ್ಲಿ ಹೇಳಬಹುದಾದ ವರ್ತಮಾನದ ಸ್ಥಿತಿಗತಿಯನ್ನು ಪತ್ರಿಕೆಯಲ್ಲಿನ ಪಿ.ಮಹಮ್ಮದ್ ಅವರ ವ್ಯಂಗ್ಯಚಿತ್ರಗಳು ಹೇಳುತ್ತವೆ. ಇನ್ನು ಬಂಡವಾಳಶಾಹಿಗಳ ಮರ್ಜಿಗೆ ಬಲಿಯಾಗದೆ ರೈತರ, ಕಾರ್ಮಿಕರ, ಮಹಿಳೆಯರ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ವಾರ್ತಾಭಾರತಿ’ಪತ್ರಿಕೆಯ ಕಾಳಜಿಯನ್ನು ಪ್ರತಿಯೊಬ್ಬ ಪ್ರಜ್ಞಾವಂತನೂ ಮೆಚ್ಚಲೇಬೇಕು.
ಶಿವಲಿಂಗಮೂರ್ತಿ, ಯೋಗಪಟು, ತುಮಕೂರು
ದಕ್ಷತೆ ಕಾಯ್ದುಕೊಂಡ ಪತ್ರಿಕೆ
ವಾರ್ತಾಭಾರತಿಯ ಸುದ್ದಿ ಸಂಪಾದನೆ, ಸಂಪಾದಕೀಯ, ಅಂಕಣ, ಚುಟುಕು ಸುದ್ದಿ, ಜಿಲ್ಲಾವಾರು ಸುದ್ದಿ ಮತ್ತು ವ್ಯಂಗ್ಯ ಚಿತ್ರಗಳು ಪತ್ರಿಕೆಯ ಗುಣಮಟ್ಟವನ್ನು ಮತ್ತು ದಕ್ಷತೆಯನ್ನು ಶ್ರೇಷ್ಠ ಮಟ್ಟದಲ್ಲಿ ಕಾಯ್ದುಕೊಂಡಿವೆ. ವಾರ್ತಾಭಾರತಿಯ ವೆಬ್‌ಪೋರ್ಟಲ್ ಕ್ಷಣ ಕ್ಷಣದ ಸುದ್ದಿಗಳನ್ನು ಓದುಗರ ಅಂಗೈಗಿಡುತ್ತಿದೆ. ಇದರಿಂದಾಗಿ ಗ್ರಾಮೀಣ ಭಾಗದ ಓದುಗರ ಸಮಸ್ಯೆಗಳು ಮತ್ತು ಅಭಿಪ್ರಾಯಗಳು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ತಲುಪುತ್ತದೆ.
ಡಿ.ಎಂ.ನದಾಫ, ಅಫ್ಝಲ್‌ಪುರ, ಕಲಬುರಗಿ
ವಿದ್ಯಾರ್ಥಿಗಳ ಮಾರ್ಗದರ್ಶಕ
ವಾರ್ತಾಭಾರತಿಯಲ್ಲಿ ಬರುವ ಸುದ್ದಿಗಳು ಬೇರೆ ಪತ್ರಿಕೆಗಳಿಗಿಂತ ಭಿನ್ನ. ನಿಖರ ಸುದ್ದಿ, ಸಂಪಾದಕೀಯ ಹಾಗೂ ಲೇಖನಗಳಿಂದಾಗಿ ವಿದ್ಯಾರ್ಥಿಗಳು ಮತ್ತು ಯುವ ಬರಹಗಾರರಿಗೆ ಮಾರ್ಗದರ್ಶನ ನೀಡುತ್ತವೆ. ಪತ್ರಿಕೆಯು ೨೩ನೇ ವರ್ಷಕ್ಕೆ ಕಾಲಿಡುತ್ತಿದ್ದು, ಇನ್ನೂ ಹೆಚ್ಚಿನ ಓದುಗರನ್ನು ತಲುಪಲಿ.
ನಾಗಭೂಷಣ ಸಾಹುಕಾರ್, ಪದವಿ ವಿದ್ಯಾರ್ಥಿ ಸುರಪುರ, ಯಾದಗಿರಿ
ವಸ್ತುನಿಷ್ಠ ಮಾಧ್ಯಮ
ಪ್ರಸಕ್ತ ಕಾಲಘಟ್ಟದಲ್ಲಿ ಹಲವು ಮಾಧ್ಯಮಗಳು ವಸ್ತುನಿಷ್ಠವಾಗಿರದೆ ಪಟ್ಟಭದ್ರ ಹಿತಾಸಕ್ತಿಗಳ ಆಶೋತ್ತರಗಳನ್ನು ಈಡೇರಿಸುವ ಹಾಗೂ ರಕ್ಷಿಸುವ ಕೆಲಸ ನಿರ್ವಹಿಸುತ್ತಿವೆ. ಈ ಮಧ್ಯೆ ವಾರ್ತಾಭಾರತಿ ವಸ್ತುನಿಷ್ಠ ಬರಹಗಳ ಮೂಲಕ ನೈಜ ಪತ್ರಿಕೋದ್ಯಮದ ಜವಾಬ್ದಾರಿ ನಿರ್ವಹಿಸುತ್ತಿದೆ. ಪತ್ರಿಕೆ ಇನ್ನು ಮುಂದೆಯೂ ನೊಂದು ಬೆಂದವರ ಧ್ವನಿಯಾಗಿ ಮುಂದುವರಿಯಲಿ.
ಹರ್ಷವರ್ಧನ ವಿ. ಚಿಮ್ಮನಕಟ್ಟಿ, ಲೇಖಕ, ಕಲಬುರಗಿ
ದಮನಿತರ ಧ್ವನಿ
ಸಮಾಜದಲ್ಲಿ ನಡೆಯುವ ದೌರ್ಜನ್ಯಗಳ ಬಗ್ಗೆ ವರದಿಗಳು ಪ್ರಕಟವಾಗುವುದರಿಂದ ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ವಾರ್ತಾಭಾರತಿ ಪತ್ರಿಕೆಯು ಶೋಷಿತರ, ದಮನಿತರ ಪರ ಸುದ್ದಿ, ಲೇಖನಗಳನ್ನು ಪ್ರಕಟಿಸುತ್ತಾ ನೊಂದವರಿಗೆ ಬೆಂಬಲವಾಗಿ ನಿಂತಿದೆ.
ಮೋಹನ್ ಐನಾಪುರ್, ಭಾರತ ಮುಕ್ತಿ ಮೋರ್ಚಾ ಸಂಘಟನೆಯ ಕಲಬುರಗಿ ಜಿಲ್ಲಾಧ್ಯಕ್ಷ
ಕನ್ನಡದ ಸಾಕ್ಷಿಪ್ರಜ್ಞೆ
ಕನ್ನಡದ ಪತ್ರಿಕಾ ಸಾಕ್ಷಿಪ್ರಜ್ಞೆ ಜೀವಂತವಾಗಿಡುವ ದೊಡ್ಡ ಲೇಖಕರ ಬಳಗವೇ ವಾರ್ತಾಭಾರತಿಯೊಂದಿಗಿದೆ. ಬಹುಸಂಸ್ಕೃತಿ, ಬಹುತ್ವ ಭಾವೈಕ್ಯತೆ, ಅಸಂಘಟಿತ ಸಮುದಾಯಗಳಿಗೆ ಆದ್ಯತೆ ಮತ್ತು ಅಲ್ಪಸಂಖ್ಯಾತ, ದಲಿತ, ಹಿಂದುಳಿದ ವರ್ಗಗಳ ನೋವುಗಳಿಗೆ ಸ್ಪಂದಿಸುತ್ತಾ ಜನಪರವಾಗಿ ಕೆಲಸ ಮಾಡುತ್ತಿರುವ ದಿನಪತ್ರಿಕೆಯೇ ವಾರ್ತಾಭಾರತಿ. ಸಂಪಾದಕೀಯ ಪುಟ ಕನ್ನಡದ ಇತರ ಎಲ್ಲ ಪತ್ರಿಕೆಗಳಿಗಿಂತ ಭಿನ್ನ, ಸ್ಪಷ್ಟ, ನಿಖರ ಮತ್ತು ನಿಷ್ಠುರ. ಈ ವಿಕ್ಷಿಪ್ತ ಕಾಲಘಟ್ಟದಲ್ಲಿ ಪ್ರಭುತ್ವಕ್ಕೆ ಸತ್ಯವನ್ನು ನುಡಿಯುವ ಧ್ವನಿಗಳನ್ನು ಅಡಗಿಸುವ ಪ್ರಯತ್ನಗಳಾಗುತ್ತಿರುವಾಗ ‘ವಾರ್ತಾಭಾರತಿ’ ಯಾವುದಕ್ಕೂ ಎದೆಗುಂದದೆ 23ನೇ ವರ್ಷಕ್ಕೆ ಕಾಲಿಟ್ಟಿದೆ.
-ಯತಿರಾಜ್ ಬ್ಯಾಲಹಳ್ಳಿ, ಯುವ ಲೇಖಕ, ಬೆಂಗಳೂರು.
ಅನ್ಯಾಯವನ್ನು ಪ್ರಶ್ನಿಸುವ ಪತ್ರಿಕೆ
ರೈತರ ಆತ್ಮಹತ್ಯೆ, ನಿರುದ್ಯೋಗ, ಪರಿಸರ ಹಾನಿ, ಅಕ್ರಮ ಗಣಿಗಾರಿಕೆ ಮುಂತಾದ ವಿಷಯಗಳ ಬಗ್ಗೆ ನಿರಂತರವಾಗಿ ಪತ್ರಿಕೆ ಬೆಳಕು ಚೆಲ್ಲುತ್ತಿದೆ. ಪತ್ರಿಕೆಯ ವಿಶ್ಲೇಷಣಾತ್ಮಕ ಲೇಖನಗಳು, ಸಂಪಾದಕೀಯ ಜಾಗೃತಿ ಮೂಡಿಸುತ್ತಿವೆ. ಸಾಮಾಜಿಕ ಶ್ರೇಣೀಕರಣ, ಜಾತಿ, ಧರ್ಮ ಮತ್ತು ಲಿಂಗ ಆಧಾರಿತ ಅಸಮಾನತೆಗಳು ಇಂದೂ ಸಮಾಜವನ್ನು ಕಾಡುತ್ತಿವೆ. ವಾರ್ತಾಭಾರತಿ ಈ ಬಗೆಯ ಸಾಮಾಜಿಕ ಅನ್ಯಾಯಗಳನ್ನು ತೀಕ್ಷ್ಣವಾಗಿ ಪ್ರಶ್ನಿಸುತ್ತಾ ಬಂದಿದ್ದು, ಪತ್ರಿಕೆಯ ಈ ನಡೆ ಶ್ಲಾಘನೀಯ.
-ವಿರೂಪಾಕ್ಷ ಡ್ಯಾಗೇರಹಳ್ಳಿ, ಜಾತ್ಯತೀತ ಯುವ ವೇದಿಕೆ ಅಧ್ಯಕ್ಷ, ತುಮಕೂರು
ಸಮಾಜಮುಖಿ ಧೋರಣೆಯ ಪತ್ರಿಕೆ
ಒಂದು ಪತ್ರಿಕೆ ತನ್ನ ಆಶಯ, ಉದ್ದೇಶ, ಧೋರಣೆಯನ್ನಿರಿಸಿಕೊಂಡು ಪ್ರತಿದಿನವೂ ಹೊಸಬಗೆಯಲ್ಲಿ ಓದುಗರನ್ನು ತಲುಪಬೇಕಾಗುತ್ತದೆ. ಆ ಬಗೆಯಲ್ಲಿ ವಾರ್ತಾಭಾರತಿ ಪತ್ರಿಕೆ ಯಶಸ್ವಿಯೂ ಆಗುತ್ತಲಿದೆ. ನಮ್ಮ ಸುತ್ತ ಮುತ್ತಲಿರುವ ಹಲವಾರು ಪತ್ರಿಕೆಗಳು ಅದರಲ್ಲೂ ಕನ್ನಡ ದಿನ ಪತ್ರಿಕೆಗಳು ವಿವಿಧ ಕಾರಣಗಳಿಗಾಗಿ ಒಂದು ಧರ್ಮ ಅಥವಾ ಒಂದು ಪಕ್ಷದ ಅಥವಾ ಒಂದು ಗುಂಪಿನ ಪರವಾಗಿಯೇ ಸುದ್ದಿಗಳನ್ನು ಪ್ರಕಟಿಸುತ್ತಿರುವುದನ್ನು ಕಾಣಬಹುದು. ಆದರೆ ವಾರ್ತಾಭಾರತಿ ಯಾವ ಉದ್ದೇಶ, ಧೋರಣೆಯಿಂದ ಆರಂಭವಾಗಿದೆಯೋ ಅದನ್ನೇ ಜವಾಬ್ದಾರಿಯಿಂದ ಮುಂದುವರಿಸುತ್ತಿರುವುದು ಉತ್ತಮ ಪ್ರಯತ್ನವೆಂದೇ ಹೇಳಬೇಕು. ವಾರ್ತಾಭಾರತಿಯಲ್ಲಿ ಪ್ರಕಟವಾಗುವ ದೇಶ, ವಿದೇಶಗಳ ಸುದ್ದಿ ಮಾಹಿತಿಗಳೂ ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ಸಾಮಾಜಿಕ ವಿಚಾರಗಳ ಕುರಿತಾದ ಅಂಕಣ ಬರಹ ಲೇಖನಗಳು ಪತ್ರಿಕೆಯ ಗೌರವವನ್ನು ಇನ್ನಷ್ಟು ಹೆಚ್ಚಿಸುತ್ತಿದೆ. 23ನೇ ವರ್ಷಕ್ಕೆ ಕಾಲಿಡುತ್ತಿರುವ ವಾರ್ತಾಭಾರತಿಗೆ ಶುಭ ಹಾರೈಕೆಗಳು.
-ಐ.ಕೆ.ಬೊಳುವಾರು, ರಂಗಕರ್ಮಿ, ಪುತ್ತೂರು
ಅಸಮಾನತೆ ವಿರುದ್ಧದ ಅಸ್ತ್ರ
ಜನಪರ ಚಳವಳಿಗಳನ್ನು ಪ್ರೋತ್ಸಾಹಿಸುವ ಕೆಲಸ ವಾರ್ತಾಭಾರತಿ ಮಾಡುತ್ತಿದೆ. ಶಿಕ್ಷಣ, ಆರೋಗ್ಯ, ಮೂಲಭೂತ ಹಕ್ಕುಗಳನ್ನು ಕಿತ್ತೊಗೆಯುವ ಶೋಷಕ ಶಕ್ತಿಗಳ ವಿರುದ್ಧ ಜನರನ್ನು ಒಗ್ಗೂಡಿಸುವ ಶಕ್ತಿ ಈ ಪತ್ರಿಕೆಗಿದೆ. ಜನರ ಸಮಸ್ಯೆಗಳನ್ನು ತಮ್ಮ ಸಮಸ್ಯೆಯಂತೆ ಕಾಣುವುದು ಪತ್ರಿಕೆಯ ವಿಶೇಷತೆ. ಇಂದಿನ, ವಿಜ್ಞಾನ, ಸಂಸ್ಕೃತಿ, ಸಾಹಿತ್ಯ, ರಾಜಕೀಯ ಎಲ್ಲ ಕ್ಷೇತ್ರಗಳಲ್ಲೂ ಜನಪರ ಚಿಂತನೆಗೆ ಈ ಪತ್ರಿಕೆ ವೇದಿಕೆ ಒದಗಿಸಿದೆ. ಅಸಮಾನತೆ, ಅನ್ಯಾಯಗಳ ವಿರುದ್ಧ ನಿರಂತರ ಸುದ್ದಿ ಪ್ರಕಟಿಸುತ್ತಿದೆ. 23ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಪತ್ರಿಕೆ ಮುಂದಿನ ದಿನಗಳಲ್ಲಿ ಇನ್ನಷ್ಟು ಜನಶಕ್ತಿ, ಹೋರಾಟಶಕ್ತಿ ತುಂಬಲಿ.
-ಇಮಾಮ್‌ಸಾಬ್ ನದಾಫ್, ಎಸ್‌ಎಫ್‌ಐ ಜಿಲ್ಲಾ ಸಂಚಾಲಕ, ಯಾದಗಿರಿ
ಸ್ವತಂತ್ರ ಮಾಧ್ಯಮ
ನಾನು ಕಂಡಂತೆ ಬಹುತೇಕ ಸುದ್ದಿ ವಾಹಿನಿಗಳು ಹಾಗೂ ಪತ್ರಿಕೆಗಳಲ್ಲಿ ಮೇಲ್ವರ್ಗ ಹಾಗೂ ಬಲಪಂಥೀಯ ವಿಚಾರಧಾರೆಯನ್ನು ನೆಚ್ಚಿಕೊಂಡಿರುವವರ ಪರವಾಗಿರುವ ಸುದ್ದಿಗಳಿಗೆ ಆದ್ಯತೆ ನೀಡುತ್ತವೆ. ಬಹುಶಃ ಮಾಧ್ಯಮ ರಂಗವನ್ನು ಕಾರ್ಪೊರೇಟ್ ವಲಯ ನಿಯಂತ್ರಿಸುತ್ತಿರುವುದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿರಬಹುದು. ವಾರ್ತಾಭಾರತಿ ವಾಸ್ತವ ಹಾಗೂ ಸತ್ಯಕ್ಕೆ ಹತ್ತಿರವಿರುವಂತೆ ಸುದ್ದಿಗಳನ್ನು ನೀಡುವುದು ಶ್ಲಾಘನೀಯ. ತನ್ನ ಸುದ್ದಿಗಳಲ್ಲಿ ಸತ್ಯ ಹಾಗೂ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವ ಪ್ರಯತ್ನವನ್ನು ನಿರಂತರವಾಗಿ ಮಾಡಲಿ. ಸ್ವತಂತ್ರ ಮಾಧ್ಯಮವಾಗಿ ವಾರ್ತಾಭಾರತಿ ಮತ್ತಷ್ಟು, ಮಗದಷ್ಟು ಜನರಿಗೆ ಹತ್ತಿರವಾಗಲಿ.
-ಮುಹಮ್ಮದ್ ಸುಹೇಲ್ ಎಸ್., ಖಾಸಗಿ ಸಂಸ್ಥೆಯ ಉದ್ಯೋಗಿ, ಬೆಂಗಳೂರು
ವಸ್ತುಸ್ಥಿತಿ ಮುಂದಿಡುವ ಪತ್ರಿಕೆ
ಜನರ ಮನಸ್ಥಿತಿಯನ್ನು ತಮಗೆ ಬೇಕಾದ ಹಾಗೆ ಬದಲಾಯಿಸಲು ಆಳುವ ವರ್ಗ ಪತ್ರಿಕೋದ್ಯಮವನ್ನು ಬಳಸಿಕೊಳ್ಳುವ ಈ ಹೊತ್ತಿನಲ್ಲಿ ವಾರ್ತಾಭಾರತಿ ವಸ್ತುಸ್ಥಿತಿಯನ್ನು ಜನರ ಮುಂದಿಡುವ ಪ್ರಯತ್ನ ಮಾಡುತ್ತಿದೆ. ಅಂತರ್‌ರಾಷ್ಟ್ರೀಯ ಬೆಳವಣಿಗೆಗಳು, ಪ್ರಚಲಿತ ವಿದ್ಯಮಾನ, ವೈಚಾರಿಕ ಲೇಖನಗಳ ಮೂಲಕ ಪತ್ರಿಕೆಯ ಗುಣಮಟ್ಟವನ್ನು ಹೆಚ್ಚಿಸಿದೆ.
-ಜಗದೀಶ್ ಸೂರ್ಯ, ವಕೀಲ ಹಾಗೂ ಜಿಲ್ಲಾ ಕಾರ್ಯದರ್ಶಿ ಕರ್ನಾಟಕ ಪ್ರಾಂತ ರೈತ ಸಂಘ, ಮೈಸೂರು
ನಿಖರ ಸುದ್ದಿಯ ಮಾಧ್ಯಮ
ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವ ಸುದ್ದಿಗಳೇ ಹೆಚ್ಚು ವರದಿಯಾಗುತ್ತಿರುವ ಈ ಕಾಲದಲ್ಲಿ ಸತ್ಯ, ನಿಖರ, ನಿಷ್ಪಕ್ಷ ಸುದ್ದಿಯನ್ನು ‘ವಾರ್ತಾಭಾರತಿ’ ನೀಡುತ್ತಾ ಜನರಲ್ಲಿ ಭರವಸೆ ಮೂಡಿಸಿದೆ. ದಲಿತರ ಮೇಲಾಗುವ ಹಲ್ಲೆ, ದೌರ್ಜನ್ಯ ಮುಂತಾದ ಸುದ್ದಿಗಳು ಹೆಚ್ಚಾಗಿ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ. ಪ್ರಸಕ್ತ ಕಾಲಘಟ್ಟಕ್ಕೆ ಈ ಪತ್ರಿಕೆ ಅತ್ಯಗತ್ಯ.
-ಮೋಹನ್ ಬಲ್ಲಿದವ್, ಭೀಮ್ ಆರ್ಮಿ
(ಭಾರತ್ ಏಕ್ತಾ ಮಿಷನ್) ದೇವದುರ್ಗ ತಾಲೂಕು ಪ್ರಧಾನ ಕಾರ್ಯದರ್ಶಿ, ರಾಯಚೂರು
ಸಮಾನತೆ ಪ್ರತಿಪಾದನೆ
ಎರಡು ದಶಕಗಳಿಂದ ನಾಡಿನ ಹೆಮ್ಮೆಯ ದಿನಪತ್ರಿಕೆಯಾಗಿ ಬೆಳೆದಿರುವ ವಾರ್ತಾಭಾರತಿ, ನೈಜ ಪತ್ರಿಕಾ ಧರ್ಮವನ್ನು ಪಾಲಿಸುತ್ತಿದೆ. ಅಂಬೇಡ್ಕರ್ ವಿಚಾರಗಳು ಹಾಗೂ ಶೋಷಿತ ಸಮಾಜದ ಪರಿಚಯದ ಜೊತೆಗೆ ಸಮಾನತೆ, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತಿದೆ. ಸಮಾಜದ ಅಂಕು-ಡೊಂಕುಗಳು, ಅವ್ಯವಸ್ಥೆ ಹಾಗೂ ಅನ್ಯಾಯಗಳನ್ನು ಖಂಡಿಸಿ, ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಅಗತ್ಯವಿರುವ ಸಂದೇಶಗಳನ್ನು ನೀಡುತ್ತಿವೆ. ಸಾಮಾಜಿಕ ಪ್ರಜ್ಞೆಯನ್ನು ಬೆಳೆಸುವ ಪ್ರಾಮಾಣಿಕ ಕಾಳಜಿಯ ನುಡಿಗಳು ಅಚ್ಚಾಗಿರುವ ಕಾರಣಕ್ಕಾಗಿಯೇ ಈ ಪತ್ರಿಕೆ ಜನಮಾನಸದಲ್ಲಿದೆ.
-ಮುಹಮ್ಮದ್ ತನ್ವೀರ್ ಹಾಶ್ಮಿ, ಕರ್ನಾಟಕ ಜಮಾಅತ್ ಎ ಅಹ್ಲೆ ಸುನ್ನತ್ ಅಧ್ಯಕ್ಷ
ಸರಕಾರದ ತುತ್ತೂರಿಯಾಗದ ಪತ್ರಿಕೆ
ಪತ್ರಿಕೆಗಳು ಹತ್ತು ಹಲವು ಇದ್ದರೂ ಅವುಗಳು ಪ್ರತಿಪಾದಿಸುವ ಅಭಿಪ್ರಾಯಗಳಲ್ಲಿ ಭಿನ್ನತೆ ಇದ್ದ ಹಾಗೆ ಕಾಣಿಸುತ್ತಿಲ್ಲ. ಆದರೆ, ವಾರ್ತಾಭಾರತಿ ಪತ್ರಿಕೆಯನ್ನು ಹಲವು ಕಾರಣಗಳಿಗಾಗಿ ಈ ವರ್ಗದ ಪತ್ರಿಕೆಗಳ ಸಾಲಿನಲ್ಲಿರಿಸುವಂತಿಲ್ಲ. ದೊಡ್ಡ ಮಾಧ್ಯಮಗಳು ಸರಕಾರದ ತುತ್ತೂರಿಯಂತಾಗಿವೆ. ದೇಶ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನಾಗಲಿ, ಜನಸಾಮಾನ್ಯರು ಎದುರಿಸುತ್ತಿರುವ ಬವಣೆ ಸಂಕಷ್ಟಗಳನ್ನಾಗಲಿ ಅಥವಾ ಜಾಗತಿಕ ದೊಡ್ಡಣ್ಣನ ಕಪಿಮುಷ್ಟಿಯಲ್ಲಿ ನರಳುತ್ತಿರುವ ಸಂಗತಿಗಳನ್ನಾಗಲಿ ತೋರಿಸುವ ಪ್ರಯತ್ನಗಳೇ ಇಲ್ಲ. ಬದಲಿಗೆ ದೇಶ ಸುರಕ್ಷಿತವಾಗಿದೆ, ಸರಕಾರ ಜನಪರವಾಗಿದೆ.
ದೇಶವಾಸಿ ಪ್ರಜೆಗಳಿಗೆ ಯಾವುದೇ ಸಮಸ್ಯೆಗಳಿಲ್ಲ ಎಂಬಂತಹ ಹುಸಿ ಚಿತ್ರಣಗಳನ್ನೇ ಪ್ರತಿಪಾದಿಸಲಾಗುತ್ತಿರುವ ಈ ಸನ್ನಿವೇಶದಲ್ಲಿ ವಾರ್ತಾಭಾರತಿಯು ಭಿನ್ನ ನಿಲುವಿನಿಂದ ಕಾಣಿಸುತ್ತಿದೆ.
ಎ.ಕೆ.ಹಿಮಕರ, ಗುತ್ತಿಗಾರು, ಸುಳ್ಯ
ಬಡವರ, ಹಿಂದುಳಿದವರ, ಅಲ್ಪಸಂಖ್ಯಾತರ ಧ್ವನಿ
23ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ‘ವಾರ್ತಾಭಾರತಿ’ ಪತ್ರಿಕಾ ಬಳಗಕ್ಕೆ ಶುಭಾಶಯಗಳು. ಇಂದು ಇಂತಹ ವಸ್ತುನಿಷ್ಠ ವರದಿ ಮಾಡುವ ಪತ್ರಿಕೆಗಳ ಅವಶ್ಯಕತೆ ಬಹಳಷ್ಟಿದೆ. ಹೆಚ್ಚಿನ ಸುದ್ದಿ ಮಾಧ್ಯಮಗಳು ಉಳ್ಳವರ ಹಿತಾಸಕ್ತಿ ಪರ ಕಾರ್ಯನಿರ್ವಹಣೆ ಮಾಡುವ ಹೊತ್ತಿನಲ್ಲಿ ಬಡವರ, ಹಿಂದುಳಿದವರ, ಅಲ್ಪಸಂಖ್ಯಾತರ ಧ್ವನಿಯಾಗಿ ವಾರ್ತಾಭಾರತಿ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುತ್ತಿದೆ.
ಪ್ರಗತಿಪರ ಚಿಂತನೆ, ಸಾಂವಿಧಾನಿಕ ಮೌಲ್ಯಗಳ ಪರವಾಗಿರುವ ಅಲ್ಪ ಸಂಖ್ಯಾತ ಮತ್ತು ಹಿಂದುಳಿದ ಸಮಾಜದ ಹಕ್ಕುಗಳ ಪರ ಧ್ವನಿಯಾಗಿ ಪ್ರಕಟವಾಗುವ ‘ಸಂಪಾದಕೀಯ’ ಅಚ್ಚುಮೆಚ್ಚು. ಸನತ್ ಕುಮಾರ್ ಬೆಳಗಲಿಯಂಥ ಹೆಸರಾಂತ ಹಿರಿಯ ಪತ್ರಕರ್ತರು ಸಮಾಜದ ವಿವಿಧ ಸಮಸ್ಯೆಗಳ ಕುರಿತು ಮಾಡುವ ವಿಶ್ಲೇಷಣೆ ಮತ್ತು ವಿಮರ್ಶಾತ್ಮಕ ಬರಹಗಳ ಅಂಕಣ ನನ್ನನ್ನು ಬಹುವಾಗಿ ಆಕರ್ಷಿಸಿದೆ. ಸಮಾಜದ ಓರೆ ಕೋರೆಗಳನ್ನು ತಿದ್ದುವ ಒಂದು ಪುಟದಲ್ಲಿ ಹೇಳುವಷ್ಟು ವಿಷಯವನ್ನು ಒಂದು ಕಾರ್ಟೂನ್ ಮೂಲಕ ಹೇಳುವ ಪಿ.ಮಹಮ್ಮದ್‌ರ ಕಾರ್ಟೂನ್ ನನಗೆ ಅಚ್ಚು ಮೆಚ್ಚು. ಸಮಾಜದ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ರೈತರ, ಕಾರ್ಮಿಕರ, ಮಹಿಳೆಯರ, ಶೋಷಿತರ ಧ್ವನಿಯನ್ನು ವಾರ್ತಾಭಾರತಿ ಪ್ರತಿನಿಧಿಸುತ್ತದೆ. ಪತ್ರಿಕೆ ಇದೇ ಹಾದಿಯಲ್ಲಿ ಮುಂದುವರಿಯಲಿ.
-ರಾಮಚಂದ್ರ ನಾವಡ, ಕಾಳಾವರ-ಸಲ್ವಾಡಿ
ಕೋಮುವಾದಿ ಪತ್ರಿಕೆಗಳು ವಿಜೃಂಭಿಸುತ್ತಿರುವ ಈ ಕಾಲದಲ್ಲಿ ಜಾತ್ಯತೀತ ಪತ್ರಿಕೆಯೊಂದು ಹುಟ್ಟಿ ಈ ಮಟ್ಟಿಗೆ ಯಶಸ್ಸಾಗುವುದು ಅಪರೂಪದಲ್ಲಿ ಅಪರೂಪ. ವಾರ್ತಾಭಾರತಿ ನಮ್ಮ ಮೆದುಳನ್ನು ಆರೋಗ್ಯವಾಗಿಡಬಲ್ಲದು.
-ಕುಂದೂರು ಮುರುಳಿ, ಜಿಲ್ಲಾ ಸಂಚಾಲಕ, ಕರ್ನಾಟಕ ದಲಿತ ಸಂಘರ್ಷ ಸಮಿತಿ, (ಅಂಬೇಡ್ಕರ್‌ವಾದ) ತುಮಕೂರು
ವಾರ್ತಾಭಾರತಿ ಪತ್ರಿಕೆಯು ನಾಡಿನಲ್ಲಿ ನಡೆಯುತ್ತಿರುವ ಎಲ್ಲ ಕ್ಷೇತ್ರದ ಸುದ್ದಿಗಳನ್ನು ಯಾವುದೇ ಅಂಜಿಕೆ ಅಳುಕಿಲ್ಲದೆ ಮುದ್ರಿಸಿ ತುಳಿತಕ್ಕೊಳಗಾದ ರೈತ, ಮಹಿಳಾ, ಕಾರ್ಮಿಕ, ವಿದ್ಯಾರ್ಥಿ ಸೇರಿದಂತೆ ಎಲ್ಲರಿಗೂ ನ್ಯಾಯ ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅಲ್ಲದೆ ಸಮಾಚಾರ, ವಿಶ್ಲೇಷಣೆ ಮತ್ತು ಪ್ರತಿ ಸಂದರ್ಭ ಸನ್ನಿವೇಶಗಳ ಆಳವಾದ ವರದಿಗಳನ್ನು ನೀಡುತ್ತಿದೆ. ವಾರ್ತಾಭಾರತಿಯು ನಿಷ್ಪಕ್ಷ ವರದಿಗಳ ಮೂಲಕ ಹೆಸರುವಾಸಿಯಾಗಿದೆ. ಇದು ಕನ್ನಡದ ಆಸ್ತಿ ಎಂದರೆ ತಪ್ಪಾಗಲಾರದು.
-ಸಂಗಮೇಶ ಸಗರ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವಿಜಯಪುರ ಜಿಲ್ಲಾಧ್ಯಕ್ಷ
ವಾರ್ತಾಭಾರತಿ ಪತ್ರಿಕೆಯನ್ನು 10 ವರ್ಷಗಳಿಂದ ಓದುತ್ತಿರುವೆ. ಬಡತನ, ಹಸಿವು, ನಿರುದ್ಯೋಗ, ಅತ್ಯಾಚಾರ, ದೌರ್ಜನ್ಯ, ಅಸ್ಪಶ್ಯತೆ ಸಮಸ್ಯೆಗಳನ್ನು ವರದಿ ಮಾಡುವುದರಲ್ಲಿ ಈ ಪತ್ರಿಕೆ ಮುಂಚೂಣಿ ಯಲ್ಲಿದೆ. ಪತ್ರಿಕೆಯ ಈ ಧೋರಣೆಯಿಂದ ಪ್ರಮುಖ ಸಮಸ್ಯೆಗಳು ಸರಕಾರದ ಗಮನವನ್ನೂ ಸೆಳೆಯುತ್ತಿದೆ. ಪತ್ರಿಕೆಯಲ್ಲಿ ಮುದ್ರಣ ಶುದ್ಧತೆ, ಛಾಯಾಚಿತ್ರಗಳ ಗುಣಮಟ್ಟ, ವಿನ್ಯಾಸದ ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ತೋರ್ಪಡಿಸುತ್ತಿರುವ ಕಾಳಜಿ ಪತ್ರಿಕಾ ಕ್ಷೇತ್ರಕ್ಕೆ ಆದರ್ಶವೆನಿಸಿದೆ. ಬರಹಗಾರರು, ಕಲಾವಿದ-ಕಲಾವಿದೆಯರ ಜೊತೆಗೆ ಗೌರವಪೂರ್ವಕವಾಗಿ ವ್ಯವಹರಿಸುವ ರೀತಿ ಆದರ್ಶವಾದುದು.
-ಪಿಂಟು ಕಾಂಬಳೆ, ಬಸವಕಲ್ಯಾಣ, ಬೀದರ್
2006ರಿಂದ ನಾನು ವಾರ್ತಾಭಾರತಿಯ ಓದುಗ. ಇದರಲ್ಲಿ ಬರುವ ಲೇಖನಗಳು ಮತ್ತು ಆಯ್ಕೆ ಮಾಡುವ ವಿಷಯಗಳ ಬೌದ್ಧಿಕತೆಯೇ ಈ ಪತ್ರಿಕೆಗೆ ಮೆರುಗು. ಕೆಲವು ಪತ್ರಿಕೆಗಳು ನಿರ್ದಿಷ್ಟ ರಾಜಕೀಯ ಪಕ್ಷ ಮತ್ತು ಸಿದ್ಧಾಂತದ ಪರವಾಗಿ ಗುರುತಿಸಿಕೊಂಡಿರುವ ಹೊತ್ತಲ್ಲಿ ವಾರ್ತಾಭಾರತಿ ಭಿನ್ನವಾಗಿದೆ. ಜನರ ಬದುಕು- ಬವಣೆ ಮತ್ತು ಆಹಾರ ಸಂಸ್ಕೃತಿ, ವಸ್ತ್ರ ಸಂಹಿತೆ, ಜಾತಿ- ಧರ್ಮದ ಆಚರಣೆಗಳ ಮೇಲಾಗುತ್ತಿರುವ ದೌರ್ಜನ್ಯಗಳ ವಿರುದ್ಧ ಬದ್ಧತೆಯಿಂದ ವರದಿ ಮಾಡುವ ಮೂಲಕ ಪತ್ರಿಕಾ ಧರ್ಮವನ್ನು ಉಳಿಸಿಕೊಂಡಿರುವುದು ಈ ಪತ್ರಿಕೆಯ ಹೆಗ್ಗಳಿಕೆ.
-ಸಿ.ಹರಕುಮಾರ್, ಹವ್ಯಾಸಿ ಲೇಖಕ ಮತ್ತು ಅಂಕಣಕಾರ, ಮೈಸೂರು
ವಾರ್ತಾಭಾರತಿ ಪತ್ರಿಕೆ 22 ವರ್ಷಗಳನ್ನು ಪೂರೈಸಿ 23ನೇ ವರ್ಷಕ್ಕೆ ಕಾಲಿಡುತ್ತಿರುವುದು ಸಂತಸದ ವಿಷಯ. ನಾನು ವಾರ್ತಾಭಾರತಿ ಪತ್ರಿಕೆಯ ಡಿಜಿಟಲ್ ಓದುಗನಾಗಿದ್ದು, ಅದು ನನ್ನ ಜೀವನದ ಅವಿಭಾಜ್ಯ ಅಂಗವಾಗಿದೆ. ವಾರ್ತಾಭಾರತಿ ಕೇವಲ ಸುದ್ದಿಯನ್ನು ತಲುಪಿಸುವ ಮಾಧ್ಯಮವಾಗಿರದೆ, ನನ್ನಂತಹ ಸಾವಿರಾರು ಓದುಗರಿಗೆ ಜ್ಞಾನ ಹೆಚ್ಚಿಸಿ, ಜಾಗೃತಿ ಮೂಡಿಸಿದೆ. ಸಮಾಜಕ್ಕೆ ಸತ್ಯ, ವಸ್ತುನಿಷ್ಠ ಸುದ್ದಿ ನೀಡುವಲ್ಲಿ ಪತ್ರಿಕೆಯ ಪಾತ್ರ ಹಿರಿದು.
-ಮುಫೀದ್, ಬಾಜೋಳಗಾ, ಭಾಲ್ಕಿ
ಗ್ರಾಮ, ತಾಲೂಕು, ಜಿಲ್ಲೆಗಳ ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ವಾರ್ತಾಭಾರತಿ ಪತ್ರಿಕೆಯು ಸಕಾಲಕ್ಕೆ ಸುದ್ದಿಗಳನ್ನು ಪ್ರಕಟಿಸುತ್ತಿದೆ. ರೈತರ ಸಮಸ್ಯೆ, ಕಾರ್ಮಿಕರು, ಮಹಿಳೆಯರ ದುಃಖ ದುಮ್ಮಾನಗಳಿಗೆ ಧ್ವನಿಯಾಗಿದೆ.
-ಅನುಷಾ ರಾಯಚೂರು, ನರ್ಸಿಂಗ್ ವಿದ್ಯಾರ್ಥಿನಿ
ಜನರಿಗೆ ಉಪಯೋಗವಾಗುವ, ಸಹಕಾರಿಯಾಗುವ ಸುದ್ದಿಗಳನ್ನು ವಾರ್ತಾಭಾರತಿಯಲ್ಲಿ ಪ್ರಕಟಿಸಲಾಗುತ್ತದೆ. ಸರಕಾರಕ್ಕೆ ಮತ್ತು ಜನರನ್ನು ಎಚ್ಚರಿಸುವ ಕೆಲಸವನ್ನು ಈ ಪತ್ರಿಕೆ ಮಾಡುತ್ತಿದ್ದು, ಈ ಪತ್ರಿಕೆಯು ಸತ್ಯ ಮತ್ತು ನ್ಯಾಯದ ಪರ ಕೆಲಸ ಮಾಡುತ್ತಿದೆ. ದಲಿತರ ಮತ್ತು ಅನ್ಯಾಯಕ್ಕೆ ಒಳಗಾದವರ ಬಗ್ಗೆ ಸುದ್ದಿಗಳನ್ನು ಪ್ರಕಟಿಸುವುದರಲ್ಲಿ ಈ ಪತ್ರಿಕೆ ಮುಂಚೂಣಿಯಲ್ಲಿದೆ. ಬೆದರಿಕೆಗಳಿಗೆ ಅಂಜದೆ ಪಾರದರ್ಶಕವಾಗಿ ಜನರ, ದಮನಿತರ, ಅಲ್ಪಸಂಖ್ಯಾತರ, ಮಹಿಳೆಯರ, ಹೋರಾಟಗಾರರ ಧ್ವ್ವನಿಯಾಗಿ ಕಾರ್ಯನಿರ್ವಹಿಸುತ್ತಿದೆ.
-ಶಿವಾನಂದ ಹೊಸಮನಿ, ವಕೀಲ, ಕೊಪ್ಪಳ
ಕನ್ನಡ ನಾಡು, ನುಡಿ, ಸಂಸ್ಕೃತಿಯ ಬಗ್ಗೆ ಉತ್ತಮ ಲೇಖನಗಳು ಪ್ರಕಟವಾಗುತ್ತಿದೆ. ರೈತರ ಬಗ್ಗೆ ಕಾಳಜಿ ವಹಿಸಿ ಸುದ್ದಿಗಳನ್ನು ಪ್ರಕಟಿಸುತ್ತಿರುವುದು ಶ್ಲಾಘನೀಯ. ಜನಪರವಾಗಿರುವ ಈ ಪತ್ರಿಕೆಗೆ ಶುಭವಾಗಲಿ.
-ಎಂ.ಆರ್.ಮಂಜುನಾಥ, ಕನ್ನಡ ಸಾಹಿತ್ಯ ಪರಿಷತ್‌ನ ಹೊಸಕೋಟೆ ತಾಲೂಕು ಸಂಘಟನಾ ಕಾರ್ಯದರ್ಶಿ
ನನಗೆ ವಾರ್ತಾಭಾರತಿ ತುಂಬಾ ಇಷ್ಟ. ಏಕೆಂದರೆ ಈ ಪತ್ರಿಕೆ ಸಂವಿಧಾನ ಪರವಾದ ಲೇಖನಗಳು, ಅಂಬೇಡ್ಕರ್ ವಿಚಾರಗಳು ಹಾಗೂ ಶೋಷಿತ ಸಮಾಜದ ಪರಿಚಯದ ಜೊತೆಗೆ ಸಮಾನತೆ, ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುತ್ತದೆ. ಭ್ರಷ್ಟಾಚಾರ ನಿವಾರಣೆ ಹಾಗೂ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಇನ್ನಷ್ಟು ಹೆಚ್ಚಿನ ಲೇಖನಗಳು ಪತ್ರಿಕೆಯಲ್ಲಿ ಬರಲಿ.
-ಪಾಮಣ್ಣ ಅರಳಿಗನೂರ, ಡಿಎಸ್ಸೆಸ್ ಭೀಮವಾದ ರಾಜ್ಯ ಸಮಿತಿ ಸದಸ್ಯ, ಕನಕಗಿರಿ, ಕೊಪ್ಪಳ
ಸಾರ್ಥಕ ಪಯಣದ ಸಂಭ್ರಮ
ಸಮಾಜಮುಖಿ ಚಿಂತನೆಗಳಿಗೆ, ದೌರ್ಜನ್ಯ, ಅನ್ಯಾಯಗಳ ವಿರುದ್ಧ ಧ್ವನಿ ಏರಿಸುವವರಿಗೆ ಧ್ವನಿಯಾಗುತ್ತಾ, ಹೊಸ ದಿಕ್ಕಿನ ಪತ್ರಿಕೋದ್ಯಮ ಬೆಳೆಸುತ್ತಿರುವ ವಾರ್ತಾಭಾರತಿಗೆ ಸಾರ್ಥಕ ಪಯಣದ ಸಂಭ್ರಮ. ವರ್ತಮಾನದ ಭಾರತಕ್ಕೆ ಅಗತ್ಯವಾಗಿ ಬೇಕಾಗಿರುವ ಈ ಪತ್ರಿಕೆ ಕನ್ನಡ ಜನಮಾನಸದ ನಡುವೆ ಇನ್ನೂ ಪಸರಿಸಲಿ. ಸಾಂಸ್ಥಿಕವಾಗಿ ಬೆಳೆಯುತ್ತಾ, ಪತ್ರಿಕೋದ್ಯಮ ಮೌಲ್ಯಗಳನ್ನು ಕಾಪಾಡುವ ನಿಟ್ಟಿನಲ್ಲಿ ಸಾಗಲಿ.
-ನಾ.ದಿವಾಕರ, ಸಾಹಿತಿ, ಮೈಸೂರು
ನಾಡಿನ ಹಿತ ಕಾಯುತ್ತಿದೆ
ಕರ್ನಾಟಕದಲ್ಲಿ ಅನೇಕ ಪತ್ರಿಕೆಗಳಿದ್ದರೂ ವ್ಯವಸ್ಥೆಯ ಭಾಗವಾಗಿ ಕೆಲಸ ಮಾಡುತ್ತವೆ. ಆದರೆ ವಾರ್ತಾಭಾರತಿ ನಿಷ್ಪಕ್ಷ ಸುದ್ದಿ ಬಿತ್ತರಿಸುತ್ತದೆ. ನೈಜ ಸುದ್ದಿಯನ್ನು ಪ್ರಕಟಿಸಿ ನಾಡಿನ ಹಿತ ಕಾಯುತ್ತಿದೆ.
-ಜೆ.ಶಿವಕುಮಾರ್, ಜೈ ಭೀಮ್ ವಿದ್ಯಾರ್ಥಿ ಯುವಜನ ಒಕ್ಕೂಟದ ವಿಜಯನಗರ ಜಿಲ್ಲಾಧ್ಯಕ್ಷ
ಪ್ರಚಲಿತ ವಿದ್ಯಮಾನಗಳ ಮಾಹಿತಿ
ಪತ್ರಿಕೆಯು ಶೈಕ್ಷಣಿಕ, ರಾಜಕೀಯ ವಿಶ್ಲೇಷಣೆ, ಆರೋಗ್ಯದ ಕುರಿತಾಗಿ ಉಪಯುಕ್ತ ಮಾಹಿತಿ ನೀಡುತ್ತಿದೆ. ಕೃಷಿಗೆ ಸಂಬಂಧಿಸಿದ ಸುದ್ದಿಗಳು, ಶಿಕ್ಷಕರಿಗೆ ಶೈಕ್ಷಣಿಕ ಬದಲಾವಣೆಯ ಸಹಿತ ಪ್ರಚಲಿತ ವಿದ್ಯಮಾನಗಳ ಬಗ್ಗೆ ಸಂಪೂರ್ಣ ಮಾಹಿತಿ ಕೊಡುತ್ತಿದೆ.
-ವಿಜಯಕುಮಾರ್ ಭಂಕಲಗಿ, ಚಿತ್ತಾಪುರ, ಕಲಬುರಗಿ
ದೌರ್ಜನ್ಯದ ವಿರುದ್ಧ ಜಾಗೃತಿ
ಬಡತನ ಹಸಿವು ನಿರುದ್ಯೋಗ, ಅತ್ಯಾಚಾರ, ದೌರ್ಜನ್ಯ, ಅಸ್ಪಶ್ಯತೆ ಮುಂತಾದ ಸಮಸ್ಯೆಗಳ ಬಗ್ಗೆ ಸುದ್ದಿ ಪ್ರಕಟಿಸುವುದರಲ್ಲಿ ಈ ಪತ್ರಿಕೆ ಮುಂಚೂಣಿಯಲ್ಲಿದೆ.
-ಬಿ.ಎನ್.ದೊಡ್ಡಮನಿ, ಯಾದಗಿರಿ
ದಮನಿತರ ಪರ
ವಾರ್ತಾಭಾರತಿ ದಲಿತರ ಮತ್ತು ದಮನಿತರ ಪರ ನಿಂತು ನೈಜ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಪತ್ರಿಕೋದ್ಯಮದ ನೈಜತೆಯನ್ನು ಕಾಪಾಡಿಕೊಂಡು ಬಂದಿದೆ.
-ರಾಜಾಬಕ್ಷಿ ಎಚ್.ವಿ, ಕೊಪ್ಪಳ
ರೈತರ ಹಿತಾಸಕ್ತಿ ಕಾಯುವ ಪತ್ರಿಕೆ
ಸಮಾಜದ ಹಿಂದುಳಿದ ವರ್ಗ, ಕಾರ್ಮಿಕರು, ರೈತರು, ಮಹಿಳೆಯರು, ಅಲ್ಪಸಂಖ್ಯಾತರು ಹಾಗೂ ಸಾಮಾನ್ಯ ಜನರ ಹಿತಾಸಕ್ತಿ ಕಾಪಾಡುವ ಧ್ವನಿಯಾಗಿ ವಾರ್ತಾಭಾರತಿ ಕಾರ್ಯನಿರ್ವಹಿಸುತ್ತಿದೆ.
-ನವೀನ್ ಕುಮಾರ್,
ಹಾಸನ ಜಿಲ್ಲಾ ಸಿಪಿಐಎಂ ಕಾರ್ಯದರ್ಶಿ
ಸತ್ಯಾನ್ವೇಷಣೆಯಲ್ಲಿ ಬದ್ಧತೆ
ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವ, ನೆಮ್ಮದಿಯನ್ನು ನಾಶಮಾಡುವ, ಒಗ್ಗಟ್ಟನ್ನು ಛಿದ್ರಮಾಡುವ ರೀತಿಯಲ್ಲಿ ಹಲವು ಮಾಧ್ಯಮಗಳು ನೈಜ ಕರ್ತವ್ಯವನ್ನು ಮರೆತು ಕೆಲಸ ಮಾಡುತ್ತಿವೆ. ಆದರೆ ವಾರ್ತಾಭಾರತಿ ಸತ್ಯಾನ್ವೇಷಣೆಯಲ್ಲಿ ಬದ್ಧತೆಯನ್ನು ಉಳಿಸಿಕೊಂಡಿದೆ.
-ಸಿ.ಕುಮಾರಿ, ಸಿಐಟಿಯು ಜಿಲ್ಲಾ
ಪ್ರಧಾನ ಕಾರ್ಯದರ್ಶಿ, ಮಂಡ್ಯ
ಅಂಕುಡೊಂಕುಗಳನ್ನು ತಿದ್ದುವ ಕಾರ್ಯ
ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮುಖ್ಯ ಧ್ಯೇಯದೊಂದಿಗೆ ವಾರ್ತಾಭಾರತಿ ಕೆಲಸ ಮಾಡುತ್ತಿದೆ. ನಿಖರ ವರದಿ ಪ್ರಕಟಿಸುವ ಕಾರ್ಯ ಅಚ್ಚುಕಟ್ಟಾಗಿ ಮಾಡುತ್ತಿದೆ.
-ಮಹಾಂತೇಶ್, ಛಲವಾದಿ ಮಹಾಸಭಾ ತಾ.ಅಧ್ಯಕ್ಷ, ದೇವದುರ್ಗ, ರಾಯಚೂರು
ವೈಭವೀಕರಣವಿಲ್ಲ
ಈ ಪತ್ರಿಕೆಯಲ್ಲಿ ಬರುವ ಲೇಖನಗಳನ್ನು ವಿದ್ಯಾರ್ಥಿ ಮತ್ತು ಯುವಜನರು ಓದಲೇ ಬೇಕು. ಲೇಖನ, ವರದಿಗಳು ಸರಳವಾಗಿರುತ್ತವೆ. ಈ ಪತ್ರಿಕೆಯ ಮುದ್ರಿತ ಪ್ರತಿ ನಮ್ಮ ಭಾಗದಲ್ಲಿ ಸಿಗುವುದಿಲ್ಲ. ಆದರೂ ನಾವು ಆನ್‌ಲೈನ್‌ನಲ್ಲಿ ಓದುತ್ತಿದ್ದೇವೆ, ಪತ್ರಿಕೆಯ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಬರುವ ಸುದ್ದಿಗಳನ್ನ್ನೂ ಓದುತ್ತಿದ್ದೇವೆ.
-ಕೃಷ್ಣವಂಶಿ, ವಿದ್ಯಾರ್ಥಿ (ಬಿಎಸ್‌ಸಿ), ಕೊಪ್ಪಳ
ಸಮಸ್ಯೆಗಳ ಬಗ್ಗೆ ಸಮಗ್ರ ವರದಿ
ವಾರ್ತಾಭಾರತಿಯು ಅತ್ಯಲ್ಪ ಅವಧಿಯಲ್ಲೇ ಕರ್ನಾಟಕದ ಅತ್ಯುತ್ತಮ ದಿನಪತ್ರಿಕೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಬಡತನ, ಮೂಲಸೌಕರ್ಯಗಳ ಕೊರತೆ, ನಿರುದ್ಯೋಗ, ಅತ್ಯಾಚಾರ, ದೌರ್ಜನ್ಯ, ದೀನ ದಲಿತರ, ಶೋಷಿತ ವರ್ಗದವರ ಸಮಸ್ಯೆಗಳ ಬಗ್ಗೆ ಸುದ್ದಿ ಪ್ರಕಟಿಸಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಸೆಳೆಯುವಲ್ಲಿ ಪತ್ರಿಕೆ ಪ್ರಮುಖ ಪಾತ್ರ ವಹಿಸಿದೆ.
-ಶಶಿಕಾಂತ್ ಡಾಂಗೆ, ಹುಮನಾಬಾದ್, ಬೀದರ್
ಪಾರದರ್ಶಕ ವರದಿ
ವಾರ್ತಾಭಾರತಿ ಪತ್ರಿಕೆಯು ಪಾರದರ್ಶಕವಾಗಿದೆ. ಸಾಮಾಜಿಕ ಹಿತಾಸಕ್ತಿಗೆ ಆದ್ಯತೆ ನೀಡಿ ವಸ್ತುನಿಷ್ಠ ವರದಿಗೆ ಆದ್ಯತೆ ನೀಡುತ್ತಿದೆ. ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಆರೋಗ್ಯ ಮತ್ತು ಸಂಸ್ಕೃತಿ ಸಹಿತ ವಿವಿಧ ವಿಷಯಗಳನ್ನು ಪರಿಚಯಿಸುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಪತ್ರಿಕೆಯು ಯಶಸ್ವಿಯಾಗಿ 23ನೇ ವರ್ಷಕ್ಕೆ ಕಾಲಿಡುತ್ತಿರುವುದು ಹರ್ಷ ತಂದಿದೆ.
-ತಮನ್ನಾ ಕೌಸರ್,
ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಚಿತ್ತಾಪುರ, ಕಲಬುರಗಿ
ವೈಚಾರಿಕ ಲೇಖನಗಳು
ವಾರ್ತಾಭಾರತಿ ನಾಡಿನ ಸಮಸ್ಯೆಗಳ ಬಗ್ಗೆ ಅದರಲ್ಲೂ ವಿಶೇಷವಾಗಿ ತಳ ಸಮುದಾಯಗಳ ಬಗ್ಗೆ, ಸಂಪಾದಕೀಯ, ವೈಚಾರಿಕ ಲೇಖನಗಳಿಗೆ ಪ್ರಾಮುಖ್ಯತೆ ನೀಡುತ್ತಿದೆ. ಪತ್ರಿಕೆ 23ನೇ ವರ್ಷಕ್ಕೆ ಕಾಲಿಡುತ್ತಿರುವುದು ಸಂತಸದ ವಿಷಯ.
-ಮಾರುತಿ ಹುಳಗೊಳಕರ್, ವಕೀಲ, ಸೇಡಂ-ಕಲಬುರಗಿ
ಸೌಹಾರ್ದಕ್ಕೆ ಒತ್ತು
ಯಾವುದೇ ವಿಷಯವನ್ನು ವರದಿ ಮಾಡುವಾಗ ಅದರ ಮೂಲ ಕಾರಣಗಳನ್ನು ತೆರೆದಿಡುವ ಶೈಲಿ ವಾರ್ತಾಭಾರತಿಯ ವಿಶೇಷತೆ. ಪತ್ರಿಕೆ ಸೌಹಾರ್ದ ಮತ್ತು ಏಕತೆಗೆ ಒತ್ತು ನೀಡುತ್ತದೆ. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಸಹಾಯಕವಾಗಿದೆ.
-ಪ್ರಶಾಂತ್ ಆಳಂದ, ಗಣಿತ ಶಿಕ್ಷಕ ಕಲಬುರಗಿ
ಧ್ವನಿ ಇಲ್ಲದವರ ಧ್ವನಿ
ರಾಜಕೀಯ, ಸಾಂಸ್ಕೃತಿಕ, ಸಾಹಿತ್ಯಕ, ಸಾಮಾಜಿಕ ವಿಷಯಾಧಾರಿತ ಸೂಕ್ಷ್ಮತೆಗಳನ್ನು ಒಳಗೊಂಡ ಲೇಖನಗಳಿಂದ ವಾರ್ತಾಭಾರತಿಯು ಹೆಚ್ಚಿನ ಓದುಗರನ್ನು ದಕ್ಕಿಸಿಕೊಂಡಿದೆ. ಹಕ್ಕು, ಹೋರಾಟ ಮತ್ತು ಸಮಸ್ಯೆಗಳಿಗೆ ಸ್ಪಂದಿಸಿ ಧ್ವನಿ ಇಲ್ಲದವರ ಧ್ವನಿಯಾಗಿ ಪತ್ರಿಕೆ ಕಾರ್ಯನಿರ್ವಹಿಸುತ್ತಿದೆ.
-ಚನ್ನಪ್ಪ ಎಸ್.ಬಾಗ್ಲಿ, ಸ್ನಾತಕೋತ್ತರ ವಿದ್ಯಾರ್ಥಿ, ಯಾದಗಿರಿ
ವರದಿಗಳಿಂದ ಸಮಸ್ಯೆಗಳಿಗೆ ಮುಕ್ತಿ
ನಮ್ಮ ಗ್ರಾಮದಲ್ಲಿನ ತ್ಯಾಜ್ಯ ವಿಲೇವಾರಿ ಘಟಕವನ್ನು ಸ್ಥಳಾಂತರಿಸುವ ಕುರಿತು ವಾರ್ತಾಭಾರತಿಯಲ್ಲಿ ಸುದ್ದಿ ಪ್ರಕಟಿಸಲಾಗಿತ್ತು. ಅದಾದ ತಕ್ಷಣವೇ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಂಬಂಧಿಸಿದ ಅಧಿಕಾರಿಗಳು ದೌಡಾಯಿಸಿದರು. ಸತ್ಯ ಪ್ರಕಟಿಸುವ, ಜನರ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ವಾರ್ತಾಭಾರತಿ ಪತ್ರಿಕೆಯಿಂದ ಮುಂದುವರಿಯಲಿ.
-ಯುವರಾಜ್ ಐಹೊಳ್ಳಿ, ಹುಮನಾಬಾದ್ ಬೀದರ್
ಪ್ರಬುದ್ಧ ವಿಚಾರಧಾರೆ
ರಾಜ್ಯದಲ್ಲಿ ಪತ್ರಿಕೆಗಳ ಸಂಖ್ಯೆಗೆ ಕಡಿಮೆ ಇಲ್ಲ. ಆದರೆ ಸಮಗ್ರ, ಸಂಪೂರ್ಣ ಮಾಹಿತಿಯಿರುವ ಪತ್ರಿಕೆಗಳ ಸಾಲಿನಲ್ಲಿ ವಾರ್ತಾಭಾರತಿ ಮುಂಚೂಣಿಯಲ್ಲಿದೆ. ಪ್ರಬುದ್ಧ ವಿಚಾರಗಳ ಸಮ್ಮಿಲನ, ಸಮೃದ್ಧ ಭಾಷೆ ಈ ಪತ್ರಿಕೆಯ ಹಿರಿಮೆ.
-ಡಾ.ಎಚ್.ಎಂ.ಚಂದ್ರಶೇಖರ್ ಶಾಸ್ತ್ರಿ,
ನಿವೃತ್ತ ಇತಿಹಾಸ ಪ್ರಾಧ್ಯಾಪಕ, ವಿಜಯನಗರ ಮಹಾವಿದ್ಯಾಲಯ ಹೊಸಪೇಟೆ
ಹಿಂದುಳಿದ ವರ್ಗದ ಶಕ್ತಿ
ಕನ್ನಡ ಪತ್ರಿಕೋದ್ಯಮದಲ್ಲಿ ನಿಷ್ಠೆ, ಬದ್ಧತೆ ಮತ್ತು ಜನಪರ ಧ್ವನಿಯನ್ನು ಉಳಿಸಿಕೊಂಡಿರುವುದು ವಾರ್ತಾಭಾರತಿಯ ಹೆಮ್ಮೆ. ದಲಿತರು, ಬಡವರು, ರೈತರು, ಕಾರ್ಮಿಕರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದ ಜನರ ಹಿತಾಸಕ್ತಿಯನ್ನು ಪ್ರತಿನಿಧಿಸುವ ಪ್ರಾಮಾಣಿಕ ವೇದಿಕೆಯಾಗಿದೆ ವಾರ್ತಾಭಾರತಿ.
-ಜೈ ಭೀಮ್ ಮಂಜು, ಅಧ್ಯಕ್ಷ,
ಕಾರ್ಯನಿರತ ಪತ್ರಕರ್ತರ ಸಂಘದ ಸಕಲೇಶಪುರ
ದೈನಂದಿನ ಸಮಸ್ಯೆಗಳ ಪ್ರಸ್ತಾವ
ಸಮಾಜದ ಓರೆ ಕೋರೆಗಳತ್ತ ಬೆಳಕು ಚೆಲ್ಲಿ, ವರದಿ, ಲೇಖನಗಳ ಮುಖಾಂತರ ಕೆಟ್ಟು ಹೋಗಿರುವ ವ್ಯವಸ್ಥೆಯ ಅಂಕುಡೊಂಕುಗಳನ್ನು ತಿದ್ದುವಲ್ಲಿ ವಾರ್ತಾಭಾರತಿಯ ಪ್ರಯತ್ನ ಅಪಾರ. ಬೀದರ್ ಜಿಲ್ಲೆಯ ಜನಸಾಮಾನ್ಯರು ಎದುರಿಸುತ್ತಿರುವ ದೈನಂದಿನ ಸಮಸ್ಯೆಗಳ ಬಗ್ಗೆ ವರದಿ ಉತ್ತಮವಾಗಿ ಬರುತ್ತಿದೆ. ಗ್ರಾಪಂನಿಂದ ಜಿಪಂವರೆಗೆ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪತ್ರಿಕೆ ವರದಿಗಳನ್ನು ಪ್ರಕಟಿಸುತ್ತಿದೆ.
-ಪರಮೇಶ್ವರ್ ಬಿರಾದಾರ್,
ನಾರಾಯಣಪೂರ್, ಔರಾದ್, ಬೀದರ್
ಜನಸಾಮಾನ್ಯರ ಧ್ವನಿ
ವಾರ್ತಾಭಾರತಿ ಅತ್ಯಲ್ಪ ಅವಧಿಯಲ್ಲೇ ಕರ್ನಾಟಕದ ಅತ್ಯುತ್ತಮ ದಿನಪತ್ರಿಕೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ ಎಂಬುದು ಬಹಳ ಸಂತೋಷದ ವಿಚಾರ. ಈಗಂತೂ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಕ್ಷಣ ಕ್ಷಣದ ಸುದ್ದಿ-ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಜನಸಾಮಾನ್ಯರ ಧ್ವನಿಯಾಗಿದೆ. ನಾನು ಸಾಮಾಜಿಕ ನ್ಯಾಯದ ಪರವಾದ ವಾರ್ತಾಭಾರತಿಯ ನಿರಂತರ ಓದುಗ. ವಿಶೇಷವಾಗಿ ಹಿಂದುಳಿದ, ಶೋಷಿತ, ಅಲ್ಪಸಂಖ್ಯಾತ ಸಮುದಾಯಕ್ಕೆ ಅನ್ಯಾಯವಾದಾಗ ನಿಷ್ಪಕ್ಷ ಸುದ್ದಿಗಳನ್ನು ಪ್ರಕಟಿಸಿ ಸಮಾಜಕ್ಕೆ ಸತ್ಯವನ್ನು ಹೇಳುವ ಕೆಲಸವನ್ನು ಮಾಡುತ್ತಿದೆ.
-ಪ್ರೊ.ಬಸವರಾಜ ನಿಲವಾಣಿ, ಚಡಚಣ, ವಿಜಯಪುರ
ಸಾಮಾಜಿಕ ಕಳಕಳಿ
ವಾರ್ತಾಭಾರತಿ, ನಿಷ್ಪಕ್ಷ, ನಿಖರ ಮಾಹಿತಿ ಪ್ರಕಟಿಸುತ್ತಿದೆ. ಬದಲಾಗುತ್ತಿರುವ ವಿದ್ಯಾಮಾನಗಳು, ಸಾಮಾಜಿಕ ಕಳಕಳಿ ಮತ್ತು ಸ್ಪಷ್ಟ ಸುದ್ದಿ ಪ್ರಕಟವಾಗುವುದರಿಂದ ನಾನು ಈ ಪತ್ರಿಕೆಯ ನಿತ್ಯ ಓದುಗ.
-ಮಹೇಶ್ ಕುಮಾರ್, ಶಿಕ್ಷಕ, ಕಲಬುರಗಿ
ಪ್ರಾಮಾಣಿಕತೆಗೆ ಹೆಸರುವಾಸಿ
ಈ ಕಾಲದ ಬಹುತೇಕ ಪತ್ರಿಕೆಗಳು ಒಂದಲ್ಲ ಒಂದು ಪಕ್ಷಕ್ಕೆ ಸೀಮಿತವಾಗಿವೆ. ಇಂತಹ ಸಂದರ್ಭದಲ್ಲಿ ವಾರ್ತಾಭಾರತಿ ತನ್ನ ಪ್ರಾಮಾಣಿಕತೆಯನ್ನು ಉಳಿಸಿಕೊಂಡು ಹೋಗುತ್ತಿದೆ.
-ವೆಂಕಟೇಶ್ ಬೆಲ್ಲದ್, ವಕೀಲ ಕೊಪ್ಪಳ
ಕಣ್ಣು ತೆರೆಸುವ ಲೇಖನಗಳು
ಪ್ರಾಮಾಣಿಕ ಮತ್ತು ವಸ್ತುನಿಷ್ಠ ವರದಿಗಾಗಿ ನಾನು ವಾರ್ತಾಭಾರತಿಯನ್ನೇ ಓದುವೆ. ದೇಶದ ನೈಜ ಇತಿಹಾಸ, ಪ್ರಸಕ್ತ ವಿದ್ಯಮಾನಗಳ ಕುರಿತ ಲೇಖನಗಳು ಸಾರ್ವಜನಿಕರ ಕಣ್ಣು ತೆರೆಸಿವೆ. ವಾರ್ತಾಭಾರತಿ ಮುಂದಿನ ದಿನದಲ್ಲಿ ಇನ್ನಷ್ಟು ಯಶಸ್ಸು ಕಾಣಲಿ.
-ನೀಲಮ್ಮ ನಂದಗುಡಿ, ಸಹ ಶಿಕ್ಷಕಿ ಹೊಸಕೋಟೆ
ಬಸವಣ್ಣರ ಆದರ್ಶ ಪಾಲನೆ
ಶೋಷಿತರ, ಬಡವರ, ದಲಿತರ ಧ್ವನಿಯಾಗಿ ಜಾತ್ಯತೀತ ಮನೋಭಾವದಿಂದ ಈ ನಾಡಿನ ನೆಲ-ಜಲವನ್ನು ಪ್ರೀತಿಸುತ್ತಾ ಸರ್ವತೋಮುಖ ಅಭಿವೃದ್ಧಿಗಾಗಿ, ಯುವಕರಿಗೆ ಸ್ಫೂರ್ತಿಯಾಗಿ, ಕೋಮುವಾದವನ್ನು ವಿರೋಧಿಸುತ್ತಾ, ಬಸವಣ್ಣರ ಆದರ್ಶಗಳನ್ನು ಪಾಲಿಸುತ್ತಾ ಸಾರ್ವಜನಿಕರ ಪತ್ರಿಕೆಯಾಗಿ ವಾರ್ತಾಭಾರತಿ ಹೊರಹೊಮ್ಮಿದೆ.
-ಶಬೀರ್ ಎಚ್., ಕರ್ನಾಟಕ ಸೌಹಾರ್ದ ವೇದಿಕೆಯ ವಿಜಯನಗರ ಜಿಲ್ಲಾಧ್ಯಕ್ಷ
ಶೋಷಿತರ ಮಾರ್ಗದರ್ಶಕ
ಬಡವರ, ಶೋಷಿತರ ಮಾರ್ಗದರ್ಶಕವಾಗಿ ಕಾರ್ಯನಿರ್ವಹಿಸುತ್ತಿರುವ ವಾರ್ತಾಭಾರತಿ 23ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದು ಸಂತಸದ ಸಂಗತಿ. ಪತ್ರಿಕೆ ನೂರಾರು ವರ್ಷ ಇದೇ ರೀತಿ ಸರ್ವ ಜನಾಂಗಕ್ಕೆ ದಾರಿದೀಪವಾಗಿ ಬೆಳೆಲಿ.
-ಗುಜ್ಜಲ್ ಗಣೇಶ, ವಿಜಯನಗರ
ವಿಶ್ವಾಸಾರ್ಹ ಪತ್ರಿಕೆ
ವಾರ್ತಾಭಾರತಿ ವಿಶ್ವಾಸಾರ್ಹ ಸುದ್ದಿಗಳನ್ನು ಪ್ರಕಟಿಸುತ್ತಿದೆ. ಸಾಮಾಜಿಕ ನ್ಯಾಯ, ಸಾಂಸ್ಕೃತಿಕ ಪ್ರಗತಿ ಮತ್ತು ಆರ್ಥಿಕ ಸಮಸ್ಯೆಗಳ ಬಗೆಗಿನ ಲೇಖನಗಳು ಚಿಂತನಾರ್ಹವಾಗಿದೆ. ಇದರ ವರದಿಗಳು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತವೆ.
-ಸಂತೋಷಕುಮಾರ ಎಸ್.ಪಿ., ಗುಲ್ಬರ್ಗಾ ವಿವಿ ವಿದ್ಯಾರ್ಥಿ
ಜನಕಲ್ಯಾಣ ಬಯಸುವ ಸಂಪಾದಕೀಯ
ನಾನು ವಾರ್ತಾಭಾರತಿ ಸಂಪಾದಕೀಯವನ್ನು ನಿತ್ಯ ಓದುತ್ತೇನೆ. ಸಂಪಾದಕೀಯದಲ್ಲಿ ಗಂಭೀರ ವಿಷಯಗಳ ಕುರಿತು ಚರ್ಚೆ, ವಿಮರ್ಶೆ ಮತ್ತು ವಿಶ್ಲೇಷಣೆ ಮಾಡಲಾಗುತ್ತದೆ. ವ್ಯವಸ್ಥೆಯನ್ನು ಸರಿದಿಕ್ಕಿನಲ್ಲಿ ನಡೆಸಲು ಬಂಡವಾಳಶಾಹಿ, ಕೋಮುವಾದಿಗಳು ಮತ್ತು ಜನ ವಿರೋಧಿ ಸಂಚುಗಳನ್ನು ಸಕಾಲದಲ್ಲಿ ಗುರುತಿಸಿ ಪ್ರತಿರೋಧಿಸುವ ಮತ್ತು ಜನಕಲ್ಯಾಣವನ್ನು ಆಗ್ರಹಿಸುವ ವಿಷಯಗಳಿಗೆ ಮಹತ್ವ ನೀಡುವ ಕೆಲಸ ವಾರ್ತಾಭಾರತಿಯ ಸಂಪಾದಕೀಯ ಮಾಡಿದೆ.
-ಮುಹಮ್ಮದ್ ನಿಝಾಮುದ್ದೀನ್, ನಿವೃತ್ತ ಪ್ರಾಂಶುಪಾಲ, ಬೀದರ್
ಪ್ರಬುದ್ಧ ಲೇಖನಗಳು
ವಾರ್ತಾಭಾರತಿಯಲ್ಲಿ ಸುದ್ದಿಗಳು ವಾಸ್ತವಾಂಶದಿಂದ ಕೂಡಿದ್ದು, ಅದರ ಜೊತೆಗೆ ಪ್ರಬುದ್ಧ ಲೇಖಕರ ಲೇಖನಗಳು ಪ್ರಕಟವಾಗುತ್ತಿವೆ. ಇದು ಜನರನ್ನು ಎಚ್ಚರಿಸುವ ಕೆಲಸ ಮಾಡುತ್ತಿವೆ. ಈ ಪತ್ರಿಕೆಯು ಬಹುಜನರ ಪತ್ರಿಕೆಯಾಗಿ ಬೆಳೆಯಬೇಕು. ಎರಡು ದಶಕಗಳಲ್ಲಿ ಈ ಮಟ್ಟಕ್ಕೆ ಬೆಳೆದಿದ್ದು, ಈ ಪತ್ರಿಕೆಯ ಬಗ್ಗೆ ಜನರಲ್ಲಿ ನೀರಿಕ್ಷೆಗಳನ್ನು ಹೆಚ್ಚಿಸಿದೆ.
-ಎಸ್.ಎ. ಗಫರ್, ಸಾಮಾಜಿಕ ಹೋರಾಟಗಾರ, ಕೊಪ್ಪಳ
ಶೈಕ್ಷಣಿಕ ಜಾಗೃತಿ
ಸಾಮಾಜಿಕ, ರಾಜಕೀಯ, ಶೈಕ್ಷಣಿಕ ಕ್ಷೇತ್ರಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸ ವಾರ್ತಾಭಾರತಿ ಮಾಡುತ್ತಿದೆ. ನಾವು ಆನ್‌ಲೈನ್ ಮೂಲಕ ಪತ್ರಿಕೆಯನ್ನು ಓದುತ್ತೇವೆ.
-ಮಾರುತಿ ಕಾಂಬಳೆ, ಬಸವಕಲ್ಯಾಣ ಬೀದರ್
ವೈವಿಧ್ಯಮಯ ವರದಿಗಳು
ವಾರ್ತಾಭಾರತಿಯ ವರದಿಗಳು ವೈವಿಧ್ಯಮಯವಾಗಿದ್ದು, ಸಮಾಜ ಮತ್ತು ರಾಜಕೀಯ ವಿಷಯಗಳ ಮೇಲೆ ವಿಶೇಷ ಒತ್ತು ನೀಡುತ್ತವೆ. ಪತ್ರಿಕೆಯಲ್ಲಿ ವರದಿ ಪ್ರಕಟವಾದ ಬೆನ್ನಲ್ಲೇ ಹಲವಾರು ಸ್ಥಳೀಯ ಸಮಸ್ಯೆಗಳು ಪರಿಹಾರ ಕಂಡುಕೊಂಡಿವೆ. ಕಲೆ, ಸಂಸ್ಕೃತಿ, ಸಾಹಿತ್ಯ ಮತ್ತು ಸಾಮಾಜಿಕ ಚರ್ಚೆಗಳ ಕುರಿತ ವರದಿಗಳು ಮಾಹಿತಿಯತವಾಗಿರುತ್ತವೆ.
-ಡಾ.ರೆಹಮಾನ್ ಪಟೇಲ್, ಕಲಾವಿದ ಮತ್ತು ಸಂಶೋಧಕ, ಕಲಬುರಗಿ
ಭಾರತೀಯತೆಯ ಘಮಲು
ವಾರ್ತಾಭಾರತಿ ಹೆಸರಲ್ಲೇ ಭಾರತೀಯತೆಯನ್ನು ಅಂಟಿಸಿಕೊಂಡಿದೆ. ಇಷ್ಟೇ ಅಲ್ಲದೆ ಸುದ್ದಿ ವಿಚಾರಗಳಲ್ಲೂ ಭಾರತೀಯತೆಯ ಘಮಲು ಪಸರಿಸುತ್ತಲೇ ಇರುವ ‘ನಿಷ್ಠುರವಾದಿ ದಿನಪತ್ರಿಕೆ ವಾರ್ತಾಭಾರತಿ’ ಎನ್ನಲು ಸುದ್ದಿ ಮಾನದಂಡಗಳ ಹೊರತುಪಡಿಸಿ ಇನ್ಯಾವುದೇ ಅಳತೆಗೋಲು ಬೇಕಿಲ್ಲ. ಅಲ್ಲದೆ, ಹಿರಿಯ ಲೇಖಕ ಶಿವಸುಂದರ್ ಅವರ ಲೇಖನಗಳು ಪತ್ರಿಕೆಗೆ ಅದರದ್ದೇ ಆದ ತೂಕ ತಂದುಕೊಟ್ಟಿವೆ.
-ಷಣ್ಮುಖೇಗೌಡ, ಮಂಡ್ಯ
ರಾಜಕೀಯ ಪಕ್ಷದ ಮುಖವಾಣಿಯಾಗದ ಮಾಧ್ಯಮ
ವಾರ್ತಾಭಾರತಿ ಪತ್ರಿಕೆಯನ್ನು ನಿತ್ಯ ಓದುವೆ. ಇದರ ಅಂಕಣ, ಸುದ್ದಿಗಳು, ವಿಶ್ಲೇಷಣೆ ಮನಸೂರೆಗೊಳ್ಳುತ್ತವೆ. 22 ವರ್ಷಗಳಿಂದ ಈ ಪತ್ರಿಕೆಯು ಯಾವುದೇ ರಾಜಕೀಯ ಪಕ್ಷದ ಮುಖವಾಣಿಯಾಗದೆ, ಜನಾನುರಾಗಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಸಮಾಜದ ಕಟ್ಟ ಕಡೆಯ ಸಮುದಾಯವನ್ನು ಮುಖ್ಯವಾಹಿನಿಗೆ ತರಲು ಸದಾ ಯತ್ನಿಸುತ್ತಿರುವ ವಾರ್ತಾಭಾರತಿಯ ಬರಹಗಳು ತೀಕ್ಷ್ಣವಾಗಿವೆ.
-ಎ.ಚಿನ್ನಸ್ವಾಮಿ,
ದೊಡ್ಡರಾಯಪೇಟೆ, ಚಾಮರಾಜನಗರ
ಸಮಾಜಕೆ್ಕ ದಾರಿದೀಪ
ಜನಸಾಮಾನ್ಯರ ನಿಜವಾದ ಧ್ವನಿಯಾಗಿ, ಸತ್ಯದ ಹಾದಿಯನ್ನು ಹಿಡಿದು ನಿಂತಿರುವ ಪತ್ರಿಕೋದ್ಯಮದ ಮಾದರಿಯಾಗಿದೆ ವಾರ್ತಾಭಾರತಿ. ಮಾಹಿತಿ ಮತ್ತು ಮೌಲ್ಯಗಳು ಮಂಕಾಗುತ್ತಿರುವ ಕಾಲಘಟ್ಟದಲ್ಲಿ, ನಿಷ್ಠಾವಂತ ಪತ್ರಿಕೋದ್ಯಮದ ಹೊಣೆಗಾರಿಕೆಯನ್ನು
ಹೊತ್ತು ನಡೆದು ಸಮಾಜಕ್ಕೆ ದಾರಿದೀಪವಾಗಿರುವುದು ವಾರ್ತಾಭಾರತಿಯ ವಿಶೇಷತೆ.
-ಲಲಿತಾ ಸಕಲೇಶಪುರ, ಸಾಹಿತಿ
ಮಹಿಳೆ, ಕಾರ್ಮಿಕರ ಸುದ್ದಿಗಳಿಗೆ ಆದ್ಯತೆ
ಕರ್ನಾಟಕದ ಮಟ್ಟಿಗೆ ನೋಡುವುದಾದರೆ ‘ವಾರ್ತಾಭಾರತಿ’ ಪತ್ರಿಕೆ ನಿಷ್ಪಕ್ಷವಾಗಿ ಜನರ ಧ್ವನಿಯಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಕಾಣಬಹುದು. ನಾನು 12 ವರ್ಷಗಳಿಂದ ಪತ್ರಿಕೆಯ ಓದುಗನಾಗಿದ್ದೇನೆ. ಪತ್ರಿಕೆಯ ಸಂಪಾದಕೀಯ ಮತ್ತು ಅಂಕಣಗಳು ಈ ಪತ್ರಿಕೆಯ ನಿಜವಾದ ಜೀವಾಳ. ಶೋಷಿತರ, ಅಲ್ಪಸಂಖ್ಯಾತರ, ದಮನಿತ ಮಹಿಳೆಯರ, ಕಾರ್ಮಿಕರ ಕುರಿತ ಸುದ್ದಿಗಳು ಯಾವಾಗಲೂ ಈ ಪತ್ರಿಕೆಯ ಮುಖಪುಟ ಸುದ್ದಿಯಾಗುವುದು ನೋಡಿದರೆ ಸಂತಸವಾಗುತ್ತದೆ.
-ನಾಗರಾಜ್ ಅಪ್ಪಸಂದ್ರ ಬೆಂಗಳೂರು,
ಮುಖ್ಯಸ್ಥ, ನ್ಯೂಸ್‌ಬಿಟ್.ಲೈವ್(ಡಿಜಿಟಲ್ ಮಾಧ್ಯಮ)
ಸಂವಿಧಾನದ ಆಶಯಗಳಿಗೆ ಪೂರಕ
ಪ್ರಸಕ್ತ ದಿನಗಳಲ್ಲಿ ಸಮೂಹ ಮಾಧ್ಯಮಗಳ ವಿಪರೀತ ಹಾವಳಿಯ ಮಧ್ಯೆಯೂ ಪತ್ರಿಕಾ ಮಾಧ್ಯಮ ತನ್ನದೇ ಆದ ಪ್ರಾಮುಖ್ಯತೆಯನ್ನು ಕಾಪಾಡಿಕೊಂಡು ಬಂದಿದೆ. ಪತ್ರಿಕೆಯು ಪ್ರಗತಿಪರ, ವೈಚಾರಿಕತೆ, ಜನಪರ ಚಿಂತನೆಗಳು, ಸಂವಿಧಾನದ ಆಶಯಗಳಿಗೆ ಪೂರಕವಾಗಿ ಕಾರ್ಯ ನಿರ್ವಹಿಸುತ್ತಿದೆ. ರಾಜಕೀಯ, ಶೈಕ್ಷಣಿಕ, ಪ್ರಚಲಿತ ವಿದ್ಯಮಾನಗಳು ಸಹಿತ ವಿವಿಧ ಕ್ಷೇತ್ರಗಳ ಸಮಗ್ರ ಮಾಹಿತಿ ನೀಡುತ್ತಿದೆ.
-ಸಿದ್ದಲಿಂಗ ಜಿ.ಬಾಳಿ, ಶಿಕ್ಷಕ,
ಶ್ರೀ ಸಚ್ಚಿದಾನಂದ ಪ್ರೌಢ ಶಾಲೆ, ಕಲಬುರಗಿ
ಜನಮಾನಸ ಸ್ಪರ್ಶಿಸುವ ಮಾಧ್ಯಮ
ಸ್ಥಳೀಯ, ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಸುದ್ದಿ, ಸಾಂಸ್ಕೃತಿಕ ವಿಚಾರಗಳು, ಸಾಮಾಜಿಕ ಸಮಸ್ಯೆಗಳು ಹಾಗೂ ಜನಮಾನಸ ಸ್ಪರ್ಶಿಸುವ ವಿಷಯಗಳನ್ನು ಸ್ಪಷ್ಟವಾಗಿ ವಾರ್ತಾಭಾರತಿ ಪ್ರಕಟಿಸುತ್ತಿದೆ.
-ಲಕ್ಷ್ಮೀದೇವಿ, ಮಸ್ಕಿ, ರಾಯಚೂರು
ಶೋಷಣೆಗಳ ವಿರುದ್ಧ ಸುದ್ದಿ
ಯಾದಗಿರಿ ಜಿಲ್ಲೆಯ ಹಲವಾರು ಸಮಸ್ಯೆಗಳ ಬಗ್ಗೆ ವಾರ್ತಾಭಾರತಿ ಸುದ್ದಿಗಳನ್ನು ಪ್ರಕಟಿಸಿದೆ. ದಲಿತರ ಮೇಲಿನ ದೌರ್ಜನ್ಯ, ಅಸ್ಪಶ್ಯತೆ, ಶೋಷಣೆಗಳ ವಿರುದ್ಧ ಸುದ್ದಿ ಪ್ರಸಾರ ಮಾಡಿ ಅದಕ್ಕೆ ಸೂಕ್ತ ನ್ಯಾಯ ಒದಗಿಸುವಲ್ಲಿ ಪತ್ರಿಕೆ ಯಶಸ್ವಿಯಾಗಿದೆ. ಸತ್ಯ, ನಿಷ್ಠೆ, ಪ್ರಾಮಾಣಿಕತೆಯ ಹಾದಿಯಲ್ಲಿ ಪತ್ರಿಕೆ ನೂರಾರು ವರ್ಷ ಮುಂದುವರಿಯಲಿ ಎಂದು ಹಾರೈಸುತ್ತೇನೆ.
-ಚಂದ್ರಕಾಂತ, ಡಾ.ಬಿ.ಆರ್.ಅಂಬೇಡ್ಕರ್ ನಗರದ ನಿವಾಸಿ, ಯಾದಗಿರಿ
ನಿರ್ಭೀತಿಯ ವರದಿ
‘ವಾರ್ತಾಭಾರತಿ’ ನಿರ್ಭೀತಿಯಿಂದ ವರದಿ ಮಾಡುತ್ತಿರುವುದು ಗಮನಾರ್ಹ. ಪತ್ರಿಕೆಗಳು ಕೇವಲ ಸರಕಾರಗಳು ನೀಡುವ ಹೇಳಿಕೆಗಳನ್ನು ಮಾತ್ರ ಪ್ರಚಾರ ಮಾಡದೆ, ಸರಕಾರಗಳು ಮಾಡಬೇಕಾದ ಕೆಲಸಗಳ ಬಗ್ಗೆಯೂ ಬೆಳಕು ಚೆಲ್ಲಬೇಕಾಗುತ್ತದೆ. ಈ ಪತ್ರಿಕೆಯು ಪ್ರಗತಿಪರ ಆಲೋಚನೆಗಳನ್ನಿಟ್ಟುಕೊಂಡಿದ್ದು, ಪತ್ರಿಕಾ ಧರ್ಮಕ್ಕೆ ಧಕ್ಕೆಯಾಗದ ರೀತಿಯಲ್ಲಿ ಪ್ರಕಟಗೊಳ್ಳುತ್ತಿದೆ.
-ರಾಜ, ಕಾಲೇಜು ವಿದ್ಯಾರ್ಥಿ, ಸಿರವಾರ, ರಾಯಚೂರು
ಎಲ್ಲ ವರ್ಗದ ಪತ್ರಿಕೆ
ಹೊಸಪೇಟೆಯ ಪ್ರಮುಖ ಸುದ್ದಿಗಳು ವಾರ್ತಾಭಾರತಿಯಲ್ಲಿ ಪ್ರಕಟವಾಗುತ್ತಿದೆ. ಪತ್ರಿಕೆಯು ಯಾವುದೇ ಜಾತಿ, ಜನಾಂಗಕ್ಕೆ ಸೀಮಿತವಾಗದೆ ನಿಷ್ಪಕ್ಷವಾಗಿದೆ. ವಿಶೇಷ ಪುಟಗಳಲ್ಲಿ ಪ್ರಕಟವಾಗುವ ಲೇಖನಗಳು ಪತ್ರಿಕೆಯ ಗುಣಮಟ್ಟವನ್ನು ಹೆಚ್ಚಿಸಿದೆ.
-ಡಾ.ಎಂ.ಪ್ರಭುಗೌಡ, ಪ್ರಾಚಾರ್ಯ, ವಿಜಯನಗರ ಮಹಾವಿದ್ಯಾಲಯ ಹೊಸಪೇಟೆ
ಕ್ರಿಯಾಶೀಲ ಮಾಧ್ಯಮ
ನಿದ್ದೆಯ ಮಂಪರಿನಲ್ಲಿರುವ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರ ವರ್ಗಕ್ಕೆ ಸದಾ ಕಾಲ ಎಚ್ಚರದಿಂದಿರಲು ಕಾರ್ಯನಿರ್ವಹಿಸುತ್ತಿರುವ ವಾರ್ತಾಭಾರತಿ ಪ್ರಸಕ್ತ ಕಾಲಘಟ್ಟಕ್ಕೆ ಅಗತ್ಯ. ಮಾಧ್ಯಮಗಳಿಗೆ ಇರಬೇಕಾದ ಕ್ರಿಯಾಶೀಲ ಜವಾಬ್ದಾರಿಯನ್ನು ಈ ಪತ್ರಿಕೆ ಮೈಗೂಡಿಸಿಕೊಂಡಿದೆ. ತನ್ನದೇ ಆದ ಓದುಗ ಬಳಗವನ್ನು ಹುಟ್ಟು ಹಾಕಿ ರಾಜ್ಯಮಟ್ಟದಲ್ಲಿ ಸಂಚಲನ ಮೂಡಿಸುತ್ತಿದೆ.
-ಕಾಶಿನಾಥ ಮುದ್ದಗೋಳ, ಕಲಬುರಗಿ
ಕಾರ್ಮಿಕರ ಪರ
ಶಿಕ್ಷಕರ, ಕಾರ್ಮಿಕರ, ಅಂಗನವಾಡಿ ಕಾರ್ಯಕರ್ತರ, ಪೌರ ಕಾರ್ಮಿಕರ ಬೇಡಿಕೆಗಳ ಕುರಿತು ಮತ್ತು ಅವರ ಹೋರಾಟ, ಪ್ರತಿಭಟನೆಗಳ ಸುದ್ದಿಗಳನ್ನು ಪ್ರಕಟಿಸುವ ಮೂಲಕ ವಾರ್ತಾಭಾರತಿ ಸಾಮಾಜಿಕ ಬದ್ಧತೆಯನ್ನು ತೋರಿದೆ.
-ಶ್ರೀನಿವಾಸಪ್ಪಎಂ., ರಾಜ್ಯ ಉಪಾಧ್ಯಕ್ಷ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ದೊಡ್ಡ ಅರಳಗೆರೆ, ಹೊಸಕೋಟೆ
ಜನಪರ ಕಾಳಜಿಯ ಮಾಧ್ಯಮ
ವಾರ್ತಾಭಾರತಿಯ ಹವ್ಯಾಸಿ ಓದುಗರ ಬಳಗದಲ್ಲಿ ನಾನೂ ಒಬ್ಬ. ಜನಪರ, ಜೀವಪರ ಕಾಳಜಿಯೊಂದಿಗೆ ಈ ಪತ್ರಿಕೆ ಕೆಲಸ ಮಾಡುತ್ತಿದೆ. ಸಮಾಜದಲ್ಲಿ ದ್ವೇಷ, ಕೋಮುವಾದ ಬಿತ್ತರಿಸುವ ಮಾಧ್ಯಮಗಳ ನಡುವೆ ವಾರ್ತಾಭಾರತಿ ಭಿನ್ನವಾಗಿ ಪ್ರಕಟವಾಗುತ್ತಿದೆ. ಸಾಮಾಜಿಕ ಸಮಸ್ಯೆ, ಜನರ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದ ವರದಿಗಳನ್ನು ಪ್ರಕಟಿಸುತ್ತಾ ಜನರ ಒಡನಾಡಿಯಾಗಿ ಪತ್ರಿಕೆ ಕಾರ್ಯ ನಿರ್ವಹಿಸುತ್ತಿದೆ.
-ರಾಹುಲ್ ಸಿಂಗೆ, ಅಫ್ಝಲ್‌ಪುರ, ಕಲಬುರಗಿ