ದೇಶದಲ್ಲಿ ಸಂಚಲನ ಸೃಷ್ಟಿಸಿದ ‘ಯಾತ್ರೆ’ಗಳು, ಚಳವಳಿಗಳು

ಭಾಗ - 2
ಕರ್ನಾಟಕ ರಾಜಕಾರಣದಲ್ಲಿ ಪಾದಯಾತ್ರೆ
ಕರ್ನಾಟಕದಲ್ಲಿಯೂ ನಾಯಕರು ನಡೆಸಿರುವ ಹಲವು ಪಾದಯಾತ್ರೆಗಳು ಮಹತ್ವ ಪಡೆದಿವೆ.
1980ರಲ್ಲಿ ಅಂದಿನ ಸರಕಾರದ ರೈತ ವಿರೋಧಿ ನೀತಿ ಪ್ರತಿಭಟಿಸಿ ದೇವರಾಜ ಅರಸು ನೇತೃತ್ವದ ಪ್ರಗತಿಪರ ಪ್ರಜಾಸತ್ತಾತ್ಮಕ ರಂಗ ನರಗುಂದದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿತ್ತು. ಅದು ಕರ್ನಾಟಕದಲ್ಲಿ ರೈತಸಂಘದ ಹುಟ್ಟಿಗೆ ನಾಂದಿ ಹಾಡಿತು.
ಚನ್ನಪಟ್ಟಣದ ನೀರಾ ಹೋರಾಟದ ಹೊತ್ತಿನಲ್ಲಿ ಇಬ್ಬರು ರೈತರನ್ನು ಬಲಿ ಪಡೆದ ಗೋಲಿಬಾರ್ ವಿರೋಧಿಸಿ ದೇವೇಗೌಡರು 2001ರಲ್ಲಿ ದೊಡ್ಡಳ್ಳಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಿದ್ದರು.
ಹರಿಜನ-ಗಿರಿಜನರಿಗೆ ಬಗರ್ ಹುಕುಂ ಭೂಮಿ ನೀಡಬೇಕೆಂದು ಬಿ.ಎಸ್. ಯಡಿಯೂರಪ್ಪ 1981ರಲ್ಲಿ ಪಾದಯಾತ್ರೆ ನಡೆಸಿದ್ದರು.
ಕಾವೇರಿ ನೀರಿಗಾಗಿ ಎಸ್.ಎಂ. ಕೃಷ್ಣ ಹಾಗೂ ಯಡಿಯೂರಪ್ಪ 1998ರಲ್ಲಿ ಪಾದಯಾತ್ರೆ ನಡೆಸಿದ್ದರು.
ಎಸ್.ಎಂ. ಕೃಷ್ಣ ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿದ್ದ ಕಾಲದಲ್ಲಿ ಅವರ ನೇತೃತ್ವದಲ್ಲಿ 1999ರಲ್ಲಿ ರಾಜ್ಯಾದ್ಯಂತ ಪಾಂಚಜನ್ಯ ಯಾತ್ರೆ ನಡೆಯಿತು. ಅದರ ಫಲವಾಗಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಅಧಿಕಾರದ ಗದ್ದುಗೆ ಏರಿತ್ತು.
ಬಳ್ಳಾರಿ ಗಣಿಗಾರಿಕೆ ವಿರುದ್ಧ ಸಿದ್ದರಾಮಯ್ಯನವರು 2010 ರಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ನಡೆಸಿದರು. ಬಳ್ಳಾರಿಯಲ್ಲಿ 2 ಲಕ್ಷಕ್ಕೂ ಹೆಚ್ಚು ಜನರ ಬೃಹತ್ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರು ‘ಗಣಿಧಣಿ’ಗಳು ಹಾಗೂ ಬಿಜೆಪಿ ಸರಕಾರದ ವಿರುದ್ಧ ಅಬ್ಬರಿಸಿದ್ದರು. ಈ ಪಾದಯಾತ್ರೆ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ, 2013ರಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದಕ್ಕೆ ಕಾರಣವಾಗಿತ್ತು.
ಕೃಷ್ಣಾದ ಎ ಮತ್ತು ಬಿ ಸ್ಕೀಮ್‌ನಡಿ ಪೂರ್ಣ ಪ್ರಮಾಣದ ನೀರು ಬಳಸಿಕೊಳ್ಳುವಲ್ಲಿ ಸರಕಾರದ ವೈಫಲ್ಯ ಹಾಗೂ ನೀರಾವರಿ ಯೋಜನೆ ಅನುಷ್ಠಾನದಲ್ಲಿನ ವೈಫಲ್ಯ ವಿರೋಧಿಸಿ 2013ರಲ್ಲಿ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ‘ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ’ ಎಂಬ ಪಾದಯಾತ್ರೆ ನಡೆಯಿತು.
2022ರಲ್ಲಿ ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮೇಕೆದಾಟು ಪಾದಯಾತ್ರೆ ನಡೆಯಿತು. ಆದರೆ ಕೋವಿಡ್ ನಿಯಮಗಳ ಹಿನ್ನೆಲೆಯಲ್ಲಿ ಅದು ಅರ್ಧಕ್ಕೇ ನಿಲ್ಲುವಂತಾಯಿತು. ಆದರೂ ಹಳೆ ಮೈಸೂರು ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಚೈತನ್ಯ ತುಂಬುವಲ್ಲಿ ಆ ಯಾತ್ರೆ ಯಶಸ್ವಿಯಾಯಿತು.
ಯಾತ್ರೆಗಳದ್ದು ದೇಶದ ರಾಜಕಾರಣದಲ್ಲಿ ಒಂದು ಬಗೆಯ ಪಾತ್ರವಾದರೆ, ಆಂದೋಲನಗಳು ಮೂಡಿಸಿರುವ ಗುರುತು ಇನ್ನೊಂದು ಬಗೆಯದ್ದು. ಅಂಥ ಪ್ರಮುಖ ಆಂದೋಲನಗಳನ್ನು ಗಮನಿಸುವುದಾದರೆ,
ಭೂದಾನ ಚಳವಳಿ
ಭೂಮಿ ಉಳ್ಳವರ ಮನವೊಲಿಸಿ ಭೂರಹಿತರಿಗೆ ಭೂಮಿ ಕೊಡಿಸಲು ವಿನೋಬಾ ಭಾವೆಯವರು 1951ರಲ್ಲಿ ದೇಶಾದ್ಯಂತ ಸಂಚರಿಸಿದರು. 43,000 ಮೈಲಿ ಕಾಲ್ನಡಿಗೆಯಲ್ಲಿ ದೇಶದ ಮೂಲೆ ಮೂಲೆ ಸಂಚರಿಸಿ, ಭೂಮಿ ಉಳ್ಳವರಿಂದ ಐವತ್ತು ದಶಲಕ್ಷ ಎಕರೆ ಭೂಮಿಯನ್ನು ಪಡೆದು ಭೂರಹಿತರಿಗೆ ದಾನ ಮಾಡಿದ್ದರು.
ಕೃಷಿ ಕಾಯ್ದೆ ವಿರೋಧಿಸಿ ರೈತರ ಹೋರಾಟ
ಸೆಪ್ಟಂಬರ್ 27, 2020ರಂದು ಮೋದಿ ಸರಕಾರದ ಮೂರು ಕೃಷಿ ಕಾಯ್ದೆಗಳಿಗೆ ಅಂಕಿತ ಬಿದ್ದಾಗ, ಅದೇ ನವೆಂಬರ್‌ನಿಂದ ಪಂಜಾಬ್, ಹರ್ಯಾಣ ರೈತರು ದಿಲ್ಲಿ ಗಡಿಯಲ್ಲಿ ಪ್ರತಿಭಟನೆ ಆರಂಭಿಸಿದರು. ಇತರ ರಾಜ್ಯಗಳ ರೈತರಿಂದಲೂ ಬೆಂಬಲ ವ್ಯಕ್ತವಾಯಿತು. ರಾಹುಲ್ ಗಾಂಧಿ ಮೊದಲಾದ ವಿಪಕ್ಷ ನಾಯಕರು ರೈತರ ಹೋರಾಟಕ್ಕೆ ಜೊತೆಯಾದರು. ಒಂದು ವರ್ಷಕ್ಕೂ ಹೆಚ್ಚು ಕಾಲ ಈ ಐತಿಹಾಸಿಕ ಆಂದೋಲನ ನಡೆಯಿತು. ಅಂತಿಮವಾಗಿ, ನವೆಂಬರ್ 19, 2021ರಂದು, ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಬೇಕಾಯಿತು.
ಚಿಪ್ಕೊ ಚಳವಳಿ
ಚಿಪ್ಕೊ ಅಥವಾ ಅಪ್ಪಿಕೋ ಚಳವಳಿ 1970ರ ದಶಕದಲ್ಲಿ ಉತ್ತರಾಖಂಡದಲ್ಲಿ ಪ್ರಾರಂಭವಾದ ಅಹಿಂಸಾತ್ಮಕ ಪರಿಸರ ಚಳವಳಿಯಾಗಿದೆ. ಮರಗಳನ್ನು ಕಡಿಯುವುದನ್ನು ವಿರೋಧಿಸಿ ಮರಗಳನ್ನು ಅಪ್ಪಿಕೊಳ್ಳುವ ಮೂಲಕ ಕಾಡು ರಕ್ಷಿಸುವ, ಸುಂದರ್ ಲಾಲ್ ಬಹುಗುಣ ನೇತೃತ್ವದ ಈ ಆಂದೋಲನ ಅರಣ್ಯನಾಶದ ವಿರುದ್ಧದ ದೊಡ್ಡ ಹೋರಾಟವಾಗಿತ್ತು. ಮಹಿಳೆಯರೇ ಪ್ರಮುಖ ಪಾತ್ರ ನಿರ್ವಹಿಸಿದ್ದ ಇದು, ದೇಶಾದ್ಯಂತದ ಇದೇ ರೀತಿಯ ಪರಿಸರ ಚಳವಳಿಗಳಿಗೆ ಸ್ಫೂರ್ತಿಯಾಯಿತು.
ಮೌನ ಕಣಿವೆ ಪ್ರತಿಭಟನೆ
1973ರಲ್ಲಿ ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿ, ಕೇರಳ ಸರಕಾರ ಮತ್ತು ಪರಿಸರವಾದಿಗಳ ನಡುವಿನ ದೊಡ್ಡ ಸಂಘರ್ಷಕ್ಕೆ ಕಾರಣವಾದ ಹೋರಾಟ ಇದಾಗಿತ್ತು. ಇಡೀ ಜೀವಗೋಳ ಮೀಸಲು ಪ್ರದೇಶವನ್ನು ಮುಳುಗಿಸಲಿದ್ದ ಮತ್ತು ಅದರ ನಾಲ್ಕು ಮಿಲಿಯನ್ ವರ್ಷಗಳಷ್ಟು ಹಳೆಯದಾದ ಮಳೆಕಾಡುಗಳ ನಾಶಕ್ಕೆ ಕಾರಣವಾಗಲಿದ್ದ ಮೌನ ಕಣಿವೆ ಜಲವಿದ್ಯುತ್ ಯೋಜನೆ ವಿರುದ್ಧ ನಡೆದ ಈ ಹೋರಾಟದ ಪರಿಣಾಮವಾಗಿ ಎಂ.ಜಿ.ಕೆ. ಮೆನನ್ ಸಮಿತಿ ಯೋಜನೆ ರದ್ದುಗೊಳಿಸಲು ಶಿಫಾರಸು ಮಾಡಿತು.
ಅಸ್ಸಾಂ ಚಳವಳಿ
1979-1985ರ ಅವಧಿಯಲ್ಲಿ ಅಸ್ಸಾಮಿನಲ್ಲಿನ ದಾಖಲೆರಹಿತ ವಲಸಿಗರ ವಿರುದ್ಧ ಈ ಚಳವಳಿ ನಡೆಯಿತು. ಆಲ್ ಅಸ್ಸಾಂ ಸ್ಟೂಡೆಂಟ್ಸ್ ಯೂನಿಯನ್ (ಎಎಎಸ್‌ಯು) ಮತ್ತು ಆಲ್ ಅಸ್ಸಾಂ ಗಣ ಸಂಗ್ರಾಮ್ ಪರಿಷತ್ (ಎಎಜಿಎಸ್‌ಪಿ) ನೇತೃತ್ವ ವಹಿಸಿದ್ದವು.
ಜಂಗಲ್ ಬಚಾವೋ ಆಂದೋಲನ
1980ರ ದಶಕದಲ್ಲಿ ನೈಸರ್ಗಿಕ ಸಾಲ್ ಕಾಡುಗಳ ಜಾಗದಲ್ಲಿ ಹೆಚ್ಚು ಬೆಲೆಯ ತೇಗ ಬೆಳೆಸಲು ಸರಕಾರ ನಿರ್ಧರಿಸಿದಾಗ ಬಿಹಾರದ ಸಿಂಗ್‌ಭೂಮ್ ಜಿಲ್ಲೆಯ ಬುಡಕಟ್ಟು ಜನಾಂಗದವರು ದಂಗೆ ಎದ್ದರು. ಜಂಗಲ್ ಬಚಾವೋ ಆಂದೋಲನ ಶೀಘ್ರದಲ್ಲೇ ಜಾರ್ಖಂಡ್ ಮತ್ತು ಒಡಿಶಾಗೆ ಹರಡಿತು.
ಗೋಕಾಕ್ ಚಳವಳಿ
1980ರ ದಶಕದಲ್ಲಿ ಕರ್ನಾಟಕದಲ್ಲಿ ಕನ್ನಡದ ಪ್ರಥಮ ಭಾಷೆಯ ಸ್ಥಾನಮಾನಕ್ಕಾಗಿ ನಡೆದ ಯಶಸ್ವಿ ಭಾಷಾ ಹಕ್ಕು ಆಂದೋಲನ ಇದಾಗಿತ್ತು. ರಾಜ್ಯ ಶಾಲೆಗಳಲ್ಲಿ ಕನ್ನಡಕ್ಕೆ ಪ್ರಾಮುಖ್ಯತೆ ಬಗ್ಗೆ ಶಿಫಾರಸು ಮಾಡಿದ ವಿ.ಕೆ. ಗೋಕಾಕ್ ನೇತೃತ್ವದ ಸಮಿತಿಯ ಹೆಸರನ್ನು ಇದಕ್ಕೆ ಇಡಲಾಗಿತ್ತು.
ನರ್ಮದಾ ಬಚಾವೋ ಆಂದೋಲನ
1989ರಲ್ಲಿ ಮೇಧಾ ಪಾಟ್ಕರ್ ಪ್ರಾರಂಭಿಸಿದ ನರ್ಮದಾ ಬಚಾವೋ ಆಂದೋಲನ, ನರ್ಮದಾ ಕಣಿವೆ ಯೋಜನೆ ವಿರುದ್ಧದ ಚಳವಳಿಯಾಗಿದೆ. ಸಂತ್ರಸ್ತ ಗ್ರಾಮಸ್ಥರಿಗೆ ಅಸಮರ್ಪಕ ಪುನರ್ವಸತಿ ವಿರುದ್ಧ ಶುರುವಾದ ಹೋರಾಟ, ಕಡೆಗೆ ಕಣಿವೆಯ ಪರಿಸರ ಮತ್ತು ಪರಿಸರ ವ್ಯವಸ್ಥೆಗಳ ಸಂರಕ್ಷಣೆಯ ಹೋರಾಟವಾಗಿ ಬೆಳೆಯಿತು.
ಮಂಡಲ್ ಪ್ರತಿಭಟನೆಗಳು
ಸೆಪ್ಟ್ಟಂಬರ್ 1990 ರಲ್ಲಿ ಮಂಡಲ್ ಆಯೋಗದ ವರದಿ ವಿರೋಧಿಸಿ ಪ್ರತಿಭಟನೆಗಳು ನಡೆದವು. ಒಬಿಸಿ ಅಭ್ಯರ್ಥಿಗಳಿಗೆ ಸರಕಾರ ಶೇ. 27ರಷ್ಟು ಮೀಸಲಾತಿ ಶಿಫಾರಸು ಮಾಡಿದ ನಂತರ, ದಿಲ್ಲಿ ಬಳಿಯ ಹಲವಾರು ನಗರಗಳು ಮತ್ತು ಪಟ್ಟಣಗಳಲ್ಲಿ ಯುವಕರು ಬೆಂಕಿ ಹಚ್ಚಿಕೊಂಡರು. ಪ್ರತಿಭಟನೆಯ ಇತರ ರೂಪಗಳಲ್ಲಿ ಬಂದ್‌ಗಳು, ಹರತಾಳಗಳು ಮತ್ತು ಧರಣಿಗಳು ಸೇರಿದ್ದವು.
ಇರೋಮ್ ಶರ್ಮಿಳಾ ಹೋರಾಟ
ಮಣಿಪುರದ ಮಾಲೋಮ್ ಹತ್ಯಾಕಾಂಡದ ಸಮಯದಲ್ಲಿ ಇರೋಮ್ ಚಾನು ಶರ್ಮಿಳಾ ಅವರಿಗೆ 28 ವರ್ಷ ವಯಸ್ಸಾಗಿತ್ತು. ಅವರು ನವೆಂಬರ್ 2, 2000ದಂದು ಉಪವಾಸ ಸತ್ಯಾಗ್ರಹ ಆರಂಭಿಸಿದರು. ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಂಈSPಂ) ರದ್ದುಗೊಳಿಸಬೇಕೆಂಬುದು ಅವರ ಆಗ್ರಹವಾಗಿತ್ತು. ಆ ಕಾಯ್ದೆ ರದ್ದಾಗುವವರೆಗೂ ತಿನ್ನುವುದಿಲ್ಲ, ಕುಡಿಯುವುದಿಲ್ಲ, ಕೂದಲು ಬಾಚಿಕೊಳ್ಳುವುದಿಲ್ಲ ಅಥವಾ ಕನ್ನಡಿ ನೋಡುವುದಿಲ್ಲ ಎಂದು ಆಕೆ ಪ್ರತಿಜ್ಞೆ ಮಾಡಿದ್ದರು. 2016ರಲ್ಲಿ ಸತ್ಯಾಗ್ರಹ ಕೊನೆಗೊಳಿಸಿ ರಾಜಕೀಯದ ಹಾದಿ ಆರಿಸಿಕೊಂಡರು.
ನಂದಿಗ್ರಾಮ್, ಸಿಂಗೂರ್ ಪ್ರತಿಭಟನೆಗಳು
ಜನವರಿ 2007ರಲ್ಲಿ ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯ ನಂದಿಗ್ರಾಮ್ ಮತ್ತು ಖೇಜುರಿಯಲ್ಲಿ ವಿಶೇಷ ಆರ್ಥಿಕ ವಲಯಕ್ಕಾಗಿ ಭೂಸ್ವಾಧೀನ ಅಧಿಸೂಚನೆ ವಿರುದ್ಧ ರೈತ ಆಂದೋಲನ ನಡೆಯಿತು. ಈ ಪ್ರತಿಭಟನೆ ವೇಳೆ ಪೊಲೀಸ್ ಗುಂಡಿನ ದಾಳಿಯಲ್ಲಿ 14 ಗ್ರಾಮಸ್ಥರು ಸಾವನ್ನಪ್ಪಿದರು. 2008ರಲ್ಲಿ ಪಶ್ಚಿಮ ಬಂಗಾಳದ ಸಿಂಗೂರ್‌ನಲ್ಲಿ ಪ್ರಸ್ತಾವಿತ ಟಾಟಾ ನ್ಯಾನೋ ಸಣ್ಣ ಕಾರು ಯೋಜನೆಗಾಗಿ 400 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡದ್ದರ ವಿರುದ್ಧ ಪ್ರತಿಭಟನೆಗಳು ಭುಗಿಲೆದ್ದವು. ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ನೇತೃತ್ವ ವಹಿಸಿದ್ದ ಪ್ರತಿಭಟನೆಯಲ್ಲಿ ಅಪರ್ಣಾ ಸೇನ್, ಕೌಶಿಕ್ ಸೇನ್ ಮೊದಲಾದವರು ಪಾಲ್ಗೊಂಡಿದ್ದರು. ಪ್ರತಿಭಟನೆ ಪರಿಣಾಮವಾಗಿ ಟಾಟಾಗಳು ಯೋಜನೆ ಹಿಂದೆಗೆದುಕೊಂಡು, ಗುಜರಾತ್‌ಗೆ ಸ್ಥಳಾಂತರಿಸಿದರು.
ಭ್ರಷ್ಟಾಚಾರ ವಿರೋಧಿ ಆಂದೋಲನ
ಅಣ್ಣಾ ಹಝಾರೆಯವರು ಎಪ್ರಿಲ್ 5, 2011ರಂದು ಹೊಸದಿಲ್ಲಿಯ ಜಂತರ್ ಮಂತರ್‌ನಲ್ಲಿ ಭ್ರಷ್ಟಾಚಾರ ವಿರೋಧಿ ಕಾನೂನು ಜಾರಿಗೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದರು. ಇದು ಲೋಕಪಾಲ್ ಮಸೂದೆ ಜಾರಿಗೆ ಕಾರಣವಾಯಿತು. ಯುಪಿಎ ಸರಕಾರದ ಅಂತ್ಯಕ್ಕೂ ನಾಂದಿ ಹಾಡಿ, ಮೋದಿ ಗದ್ದುಗೆ ಏರುವುದಕ್ಕೆ ದಾರಿ ಮಾಡಿತು.
ತೆಲಂಗಾಣ ಹೋರಾಟ
ಈ ಚಳವಳಿ ಆಂಧ್ರಪ್ರದೇಶ ರಾಜ್ಯದಿಂದ ತೆಲಂಗಾಣ ಬೇರ್ಪಟ್ಟು ಹೊಸ ರಾಜ್ಯವಾಗುವುದಕ್ಕೆ ಕಾರಣವಾಯಿತು.
ಪಾಟಿದಾರ್ ಆಂದೋಲನ
ಜುಲೈ 2015ರಲ್ಲಿ ಪಾಟಿದಾರ್ ಸಮುದಾಯದ ಜನರು ಒಬಿಸಿ ಸ್ಥಾನಮಾನ ಕೋರಿ, ಗುಜರಾತ್‌ನಾದ್ಯಂತ ಸಾರ್ವಜನಿಕ ಪ್ರದರ್ಶನಗಳನ್ನು ನಡೆಸಿದರು. ಈ ಪ್ರತಿಭಟನೆಗಳು ಹಿಂಸಾತ್ಮಕವಾಗಿ ಮಾರ್ಪಟ್ಟವು. ಯುವ ಪ್ರತಿಭಟನಾಕಾರರು ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ಪಾಟಿದಾರ್ ಅನಾಮತ್ ಆಂದೋಲನ ಸಮಿತಿ ರಚಿಸಿದರು.
ರಾಜಸ್ಥಾನದ ಗುಜ್ಜರ್ ಆಂದೋಲನ
2008ರಲ್ಲಿ ಗುಜ್ಜರ್‌ಗಳು ಇತರ ಹಿಂದುಳಿದ ವರ್ಗದ ಬದಲಿಗೆ ಕೆಳ ಪರಿಶಿಷ್ಟ ಬುಡಕಟ್ಟಿನ ಸ್ಥಾನಮಾನ ಕೋರಿದಾಗ ಪಶ್ಚಿಮ ರಾಜ್ಯದಲ್ಲಿ ಹಿಂಸಾಚಾರ ಭುಗಿಲೆದ್ದಿತು. ಆ ವರ್ಷ ಮೇ 24ರಂದು ಪೊಲೀಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದಾಗ, 15ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
ಯಾತ್ರೆಗಳು ಮತ್ತು ಹೋರಾಟಗಳ ವಿಸ್ತೃತ ಪಟ್ಟಿಯ ಹೊರತಾಗಿ, ಆಧುನಿಕ ಭಾರತದ ಸಾಮಾಜಿಕ-ರಾಜಕೀಯ ವ್ಯವಸ್ಥೆಯನ್ನು ಮೂಲಭೂತವಾಗಿ ರೂಪಿಸಿದ ಹಲವಾರು ಇತರ ಪ್ರಮುಖ ಚಳವಳಿಗಳಿವೆ. 1974ರ ‘ಸಂಪೂರ್ಣ ಕ್ರಾಂತಿ’ಯ ಕರೆಯೊಂದಿಗೆ ನಡೆದ ಜೆ.ಪಿ. ಚಳವಳಿ, ಸರಕಾರದ ಭ್ರಷ್ಟಾಚಾರದ ವಿರುದ್ಧ ರಾಷ್ಟ್ರವನ್ನು ಒಗ್ಗೂಡಿಸಿತು ಮತ್ತು ನೇರವಾಗಿ ತುರ್ತು ಪರಿಸ್ಥಿತಿಯ ಹೇರಿಕೆ ಹಾಗೂ ನಂತರದಲ್ಲಿ ದೇಶದ ಮೊದಲ ಕಾಂಗ್ರೆಸೇತರ ಸರಕಾರದ ರಚನೆಗೆ ಕಾರಣವಾಯಿತು.
ಅದಕ್ಕೂ ಮೊದಲು, ಭಾಷಾವಾರು ರಾಜ್ಯಗಳ ರಚನೆಗಾಗಿ ನಡೆದ ಚಳವಳಿ, ವಿಶೇಷವಾಗಿ 1952ರಲ್ಲಿ ಆಂಧ್ರ ರಾಜ್ಯಕ್ಕಾಗಿ ಪೊಟ್ಟಿ ಶ್ರೀರಾಮುಲು ಅವರ ಪ್ರಾಣಾರ್ಪಣೆಯ ಉಪವಾಸ, 1956ರ ರಾಜ್ಯ ಪುನರ್ವಿಂಗಡಣಾ ಕಾಯ್ದೆಯ ಮೂಲಕ ಭಾರತದ ಆಂತರಿಕ ನಕ್ಷೆಯನ್ನು ಪುನಃ ರಚಿಸಲು ಸರಕಾರವನ್ನು ಒತ್ತಾಯಿಸಿತು.
ಸಾಮಾಜಿಕ ನ್ಯಾಯದ ಕ್ಷೇತ್ರದಲ್ಲಿ, 1970ರ ದಶಕದ ದಲಿತ ಪ್ಯಾಂಥರ್ಸ್ ಚಳವಳಿ ಜಾತಿ ದೌರ್ಜನ್ಯಗಳ ವಿರುದ್ಧ ಒಂದು ಹೋರಾಟಕಾರಿ ಮತ್ತು ಸಾಹಿತ್ಯಕ ಶಕ್ತಿಯಾಗಿ ಹೊರಹೊಮ್ಮಿ, ದಲಿತ ಅಸ್ಮಿತೆಯ ರಾಜಕಾರಣವನ್ನು ತೀವ್ರಗೊಳಿಸಿತು. ಅಂತೆಯೇ, 1990ರ ದಶಕದಲ್ಲಿ ರಾಜಸ್ಥಾನದಲ್ಲಿ ಹುಟ್ಟಿಕೊಂಡ ತಳಮಟ್ಟದ ‘ಮಾಹಿತಿ ಹಕ್ಕು’ (ಆರ್‌ಟಿಐ) ಚಳವಳಿ, ಪಾರದರ್ಶಕತೆಗಾಗಿ ಯಶಸ್ವಿಯಾಗಿ ಹೋರಾಡಿ, 2005ರಲ್ಲಿ ನಾಗರಿಕರನ್ನು ಸಬಲೀಕರಣಗೊಳಿಸಿದ ಪ್ರಬಲ ಆರ್‌ಟಿಐ ಕಾಯ್ದೆಯ ಜಾರಿಗೆ ಕಾರಣವಾಯಿತು.
ತೀರಾ ಇತ್ತೀಚೆಗೆ, 2012ರಲ್ಲಿ ನಡೆದ ಸ್ವಯಂಪ್ರೇರಿತ ಮತ್ತು ರಾಷ್ಟ್ರವ್ಯಾಪಿ ನಿರ್ಭಯಾ ಚಳವಳಿಯು ಮಹಿಳಾ ಸುರಕ್ಷತೆಯ ಬಗ್ಗೆ ದೇಶಾದ್ಯಂತ ಜಾಗೃತಿ ಮೂಡಿಸಿ, ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಕಾನೂನುಗಳಲ್ಲಿ ಮಹತ್ವದ ತಿದ್ದುಪಡಿಗಳಿಗೆ ಕಾರಣವಾಯಿತು.