Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ವಾರ್ತಾ ಭಾರತಿ ಅವಲೋಕನ
  5. ದೇಶದಲ್ಲಿ ಸಂಚಲನ ಸೃಷ್ಟಿಸಿದ...

ದೇಶದಲ್ಲಿ ಸಂಚಲನ ಸೃಷ್ಟಿಸಿದ ‘ಯಾತ್ರೆ’ಗಳು, ಚಳವಳಿಗಳು

ಆರ್.ಜೀವಿಆರ್.ಜೀವಿ9 Sept 2025 12:44 PM IST
share
ದೇಶದಲ್ಲಿ ಸಂಚಲನ ಸೃಷ್ಟಿಸಿದ ‘ಯಾತ್ರೆ’ಗಳು, ಚಳವಳಿಗಳು

ರಾಹುಲ್ ಗಾಂಧಿಯವರ ‘ವೋಟರ್ ಅಧಿಕಾರ್ ಯಾತ್ರಾ’ ಬಿಹಾರದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ. ಮತಗಳ್ಳತನದ ಬಗೆಗಿನ ಪುರಾವೆಗಳು ಪರಮಾಣು ಬಾಂಬ್‌ಗಿಂತಲೂ ದೊಡ್ಡದಾದ ಹೈಡ್ರೋಜನ್ ಬಾಂಬ್ ಆಗಿರಲಿವೆ ಎಂಬ ಎಚ್ಚರಿಕೆ ನೀಡುವುದರೊಂದಿಗೆ ರಾಹುಲ್ ಆಡಳಿತಾರೂಢರಲ್ಲಿ ನಡುಕ ಹುಟ್ಟಿಸಿದ್ದಾರೆ. ‘‘ಮತ ಕದ್ದು ಗೆದ್ದವರು ಮುಖಗೇಡಿಯಾಗಲಿದ್ದಾರೆ’’ ಎಂಬ ರಾಹುಲ್ ಮಾತು ಇವತ್ತಿನ ರಾಜಕೀಯದಲ್ಲಿ ಒಂದು ಪಲ್ಲಟವನ್ನೇ ತರುವಂಥದ್ದಾಗಿದೆ. ಇದಕ್ಕೂ ಮೊದಲು ಅವರು ‘ಭಾರತ ಜೋಡೊ ಯಾತ್ರೆ’ ಮೂಲಕ ಇಡೀ ದೇಶದ ಕಣ್ಣಲ್ಲಿ ಬೆಳಗಿದ್ದರು. ಯಾತ್ರೆಗಳು ಮತ್ತವುಗಳ ರಾಜಕೀಯ ಪರಿಣಾಮಗಳು ಈ ದೇಶದಲ್ಲಿ ಕಾಲಕಾಲಕ್ಕೆ ದೊಡ್ಡ ಬದಲಾವಣೆಗಳನ್ನೇ ತಂದಿವೆ. ಜನತಾ ಪಕ್ಷದ ನಾಯಕರಾಗಿದ್ದ ಚಂದ್ರಶೇಖರ್ ಅವರ ಪಾದಯಾತ್ರೆಯಿಂದ ಹಿಡಿದು ಇವತ್ತಿನ ರಾಹುಲ್ ಅವರ ಯಾತ್ರೆಗಳವರೆಗೆ, ಈ ಬದಲಿಸಬಲ್ಲ ನಡಿಗೆಯ ಇತಿಹಾಸ ದೊಡ್ಡದಿದೆ. ಯಾತ್ರೆಗಳ ಜೊತೆಜೊತೆಗೇ ವಿವಿಧ ಆಂದೋಲನಗಳು ಕೂಡ ರಾಜಕೀಯವಾಗಿ ಕಾಲಕಾಲಕ್ಕೆ ಮಹತ್ವದ ಪಾತ್ರ ವಹಿಸಿವೆ. ಭಾರತೀಯ ಇತಿಹಾಸದಲ್ಲಿ ಮೈಲಿಗಲ್ಲುಗಳಂತೆ ಉಳಿದಿರುವ ಅಂಥ ಘಟನೆಗಳ ಕಡೆಗೊಮ್ಮೆ ತಿರುಗಿ ನೋಡುವುದು ಕುತೂಹಲಕಾರಿ.

ಭಾಗ - 1

ಬಿಹಾರದಲ್ಲಿನ ‘ವೋಟರ್ ಅಧಿಕಾರ್ ಯಾತ್ರಾ’ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮತ್ತು ‘ಇಂಡಿಯಾ’ ಮೈತ್ರಿಕೂಟ ಬಿಜೆಪಿಯೊಳಗೆ ಹುಟ್ಟಿಸಿರುವ ತಳಮಳ ಸಣ್ಣದಲ್ಲ. ಬಿಜೆಪಿಯ ಭಂಡ ರಾಜಕೀಯವನ್ನು ಉದ್ದಕ್ಕೂ ಪ್ರಶ್ನಿಸಿರುವ ಈ ಯಾತ್ರೆ, ಮತಗಳ್ಳತನದ ವಿರುದ್ಧದ ಸ್ಫೋಟಕ ಶಕ್ತಿಯಾಗಿ ಹೈಡ್ರೋಜನ್ ಬಾಂಬ್‌ನ ರೂಪಕವನ್ನು ಇಟ್ಟಿದೆ.

ಮತಗಳ್ಳತನ ಎಂದರೆ ಹಕ್ಕುಗಳ ಕಳ್ಳತನ, ಮೀಸಲಾತಿಯ ಕಳ್ಳತನ, ಉದ್ಯೋಗದ ಕಳ್ಳತನ, ಶಿಕ್ಷಣದ ಕಳ್ಳತನ, ಪ್ರಜಾಪ್ರಭುತ್ವದ ಕಳ್ಳತನ, ಯುವಕರ ಭವಿಷ್ಯದ ಕಳ್ಳತನ ಎಂದು ರಾಹುಲ್ ವ್ಯಾಖ್ಯಾನಿಸಿದ್ದಾರೆ. ‘‘ನಿಮ್ಮ ಭೂಮಿ, ನಿಮ್ಮ ಪಡಿತರ ಚೀಟಿಯನ್ನು ತೆಗೆದುಕೊಂಡು ಅದಾನಿ-ಅಂಬಾನಿಗೆ ನೀಡಲಾಗುತ್ತದೆ. ಮಹಾತ್ಮಾ ಗಾಂಧಿಯ ಹಂತಕರು ಈಗ ಸಂವಿಧಾನವನ್ನು ಮುಗಿಸಲು ಯತ್ನಿಸುತ್ತಿದ್ದಾರೆ. ಇದನ್ನು ಬಿಹಾರದ ಯುವಜನರು ಅರ್ಥ ಮಾಡಿಕೊಳ್ಳಬೇಕಿದೆ’’ ಎಂದು ರಾಹುಲ್ ಮನವರಿಕೆ ಮಾಡಿಕೊಟ್ಟಿದ್ದಾರೆ. ‘‘ಸಂವಿಧಾನವನ್ನು ನಾಶ ಮಾಡಲು ನಾವು ಅವರಿಗೆ ಬಿಡುವುದಿಲ್ಲ’’ ಎಂದಿದ್ದಾರೆ.

ಈ ಯಾತ್ರೆ ಮೂಲಕ ರಾಹುಲ್ ಒಂದೆಡೆ ಬಿಹಾರದಲ್ಲಿ ಕ್ಷೀಣಿಸಿದ್ದ ಕಾಂಗ್ರೆಸ್‌ಗೆ ಬಲ ತುಂಬಿದ್ದಾರೆ. ಮತ್ತೊಂದೆಡೆ, ಮುಂಬರುವ ವಿಧಾನಸಭೆ ಚುನಾವಣೆಯ ಸೀಟು ಹಂಚಿಕೆ ವೇಳೆ ಹೆಚ್ಚಿನ ಸ್ಥಾನಗಳಿಗಾಗಿ ಚೌಕಾಸಿ ಮಾಡುವ ಶಕ್ತಿಯನ್ನೂ ಪಡೆದಿದ್ದಾರೆ. ಇನ್ನೂ ಮುಖ್ಯವಾಗಿ ಅವರು ಬಿಜೆಪಿ ಮತ್ತು ಚುನಾವಣಾ ಆಯೋಗದ ವಂಚನೆಯ ಜೋಡಾಟವನ್ನು ಬಯಲಿಗೆಳೆದು ನಿಲ್ಲಿಸಿದ್ದಾರೆ. ಇದರೊಂದಿಗೆ, ಸಂವಿಧಾನ ರಕ್ಷಣೆಯ ರಾಹುಲ್ ಅಭಿಯಾನ, ಪ್ರಜಾಸತ್ತೆಯ ಆತ್ಮದಂತಿರುವ ಮತಗಳನ್ನು ಕಾಯುವ ಮೂಲಭೂತ ಕೆಲಸಕ್ಕೆ ಅಣಿಯಾಗಿದ್ದು, ಇನ್ನಷ್ಟು ತೀವ್ರತೆ ಪಡೆದಿದೆ.

ಆಗಸ್ಟ್ 17ರಂದು ಬಿಹಾರದಲ್ಲಿ ಶುರುವಾದ ‘ವೋಟರ್ ಅಧಿಕಾರ್ ಯಾತ್ರಾ’ ಸೆಪ್ಟಂಬರ್ 1ರಂದು ಮುಕ್ತಾಯಗೊಂಡಿತು. ಬಿಹಾರದ 25 ಜಿಲ್ಲೆಗಳ 11 ವಿಧಾನಸಭೆ ಕ್ಷೇತ್ರಗಳಲ್ಲಿ ಸಾಗಿದ್ದ ಯಾತ್ರೆ ಒಟ್ಟು 1,300 ಕಿ.ಮೀ. ಕ್ರಮಿಸಿದೆ.

ರಾಹುಲ್ ಅವರು ತಮ್ಮದೇ ಆದ ರಾಜಕೀಯ ಛಾಪನ್ನು ಮೂಡಿಸಿದ ಮೊದಲ ಯಾತ್ರೆಯಾಗಿ ‘ಭಾರತ ಜೋಡೊ ಯಾತ್ರೆ’ ಮಹತ್ವವಾದದ್ದು. ಅದು ಎರಡು ಹಂತಗಳಲ್ಲಿ ನಡೆಯಿತು. ಮೊದಲನೆಯ ಭಾರತ ಜೋಡೊ ಯಾತ್ರೆ 2022ರ ಸೆಪ್ಟಂಬರ್ 7ರಂದು ಕನ್ಯಾಕುಮಾರಿಯಿಂದ ಶುರುವಾಗಿ, 2023ರ ಜನವರಿ 30ರಂದು ಶ್ರೀನಗರದಲ್ಲಿ ಕೊನೆಗೊಂಡಿತು. 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡಂತೆ ಈ ಯಾತ್ರೆಯಲ್ಲಿ ರಾಹುಲ್ ಅವರು 3,970 ಕಿ.ಮೀ. ಕ್ರಮಿಸಿದರು. ಅವರ ‘ಭಾರತ ಜೋಡೊ ನ್ಯಾಯ ಯಾತ್ರೆ’ 2024ರ ಜನವರಿ 14ರಂದು ಮಣಿಪುರದ ತೌಬಲ್ ಜಿಲ್ಲೆಯ ಖಂಗ್ಜೋಮ್‌ನಿಂದ ಪ್ರಾರಂಭವಾಗಿ, ಮಾರ್ಚ್ 20ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಕೊನೆಗೊಂಡಿತು. 15 ರಾಜ್ಯಗಳನ್ನು ಹಾದುಹೋಗುವ ಮೂಲಕ 6,700 ಕಿ.ಮೀ. ಕ್ರಮಿಸಿತು. ಮೊದಲನೆಯ ‘ಭಾರತ ಜೋಡೊ ಯಾತ್ರೆ’ ದಕ್ಷಿಣದಿಂದ ಉತ್ತರಕ್ಕೆ ಸಾಗಿದ್ದರೆ, ಎರಡನೇ ಹಂತವಾಗಿದ್ದ ‘ಭಾರತ ಜೋಡೊ ನ್ಯಾಯ ಯಾತ್ರೆ’ ಪೂರ್ವದಿಂದ ಪಶ್ಚಿಮದವರೆಗೆ ಸಾಗಿತ್ತು.

‘‘ಇದು ದ್ವೇಷಿಸುವ ದೇಶವಲ್ಲ, ಪ್ರೀತಿಸುವ ದೇಶ ಮತ್ತು ದ್ವೇಷದ ಬಝಾರ್‌ನಲ್ಲಿ ಪ್ರೀತಿಯ ಅಂಗಡಿ ತೆರೆಯಬೇಕಿದೆ’’ ಎಂದು ಮೊದಲ ಯಾತ್ರೆಯಲ್ಲಿ ರಾಹುಲ್ ಪ್ರತಿಪಾದಿಸಿದ್ದರು. ‘‘ನಾವು ಒಬ್ಬ ವ್ಯಕ್ತಿ ಅಥವಾ ಒಂದು ಪಕ್ಷದ ವಿರುದ್ಧ ಹೋರಾಡುತ್ತಿಲ್ಲ. ಮೋದಿ ಕೇವಲ ಒಂದು ಮುಖವಾಡ. ಅವರನ್ನು ಮುಂದಿಟ್ಟುಕೊಂಡು ಆಟವಾಡುತ್ತಿರುವ ಶಕ್ತಿಯ ವಿರುದ್ಧ ನಮ್ಮ ಹೋರಾಟ’’ ಎಂದು ‘ಭಾರತ ಜೋಡೊ ನ್ಯಾಯ ಯಾತ್ರೆ’ಯ ಹೊತ್ತಲ್ಲಿ ರಾಹುಲ್ ಹೇಳಿದ್ದರು.

ರಾಜಕೀಯ ಇತಿಹಾಸದಲ್ಲಿ ದೊಡ್ಡ ಸಾಧ್ಯತೆಗಳನ್ನೇ ತೆರೆದ ಹಲವು ಯಾತ್ರೆಗಳಿಗೆ ಈ ದೇಶ ಸಾಕ್ಷಿಯಾಗಿದೆ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಕೈಗೊಂಡಿದ್ದ ದಂಡಿಯಾತ್ರೆ ಮಹತ್ವದ ಮೈಲಿಗಲ್ಲಾಗಿತ್ತು. ಬ್ರಿಟಿಷರು ಉಪ್ಪಿನ ಮೇಲೆ ಕರ ಹೇರಿದ್ದನ್ನು ವಿರೋಧಿಸಿ, 1930ರ ಮಾರ್ಚ್ 12ರಂದು ಅಹ್ಮಾದಾಬಾದ್‌ನ ಸಾಬರ್‌ಮತಿ ಆಶ್ರಮದಿಂದ ಗಾಂಧೀಜಿ ಪಾದಯಾತ್ರೆ ಆರಂಭಿಸಿದ್ದರು. 240 ಮೈಲಿ ಕಾಲ್ನಡಿಗೆಯಲ್ಲಿ ನಡೆದು 1930ರ ಎಪ್ರಿಲ್ 6ರಂದು ತಮ್ಮ 24 ದಿನಗಳ ಪಾದಯಾತ್ರೆ ಮುಗಿಸಿದ್ದರು.

ಸ್ವಾತಂತ್ರ್ಯಾನಂತರದ ಭಾರತದಲ್ಲಿನ ರಾಜಕೀಯ ಯಾತ್ರೆಗಳಲ್ಲಿ ಗೆಲುವು ಕಂಡ ಯಾತ್ರೆಗಳಿರುವಂತೆ ವಿಫಲವಾದವುಗಳೂ ಇವೆ. ಅಂಥವುಗಳನ್ನು ಒಮ್ಮೆ ಇಲ್ಲಿ ನೆನಪು ಮಾಡಿಕೊಳ್ಳಬೇಕು.

ಚಂದ್ರಶೇಖರ್ ಪಾದಯಾತ್ರೆ

1983ರಲ್ಲಿ ಜನತಾ ಪಕ್ಷದ ನಾಯಕರಾಗಿದ್ದ ಚಂದ್ರಶೇಖರ್ ಅವರು ಕನ್ಯಾಕುಮಾರಿಯಿಂದ ಪಾದಯಾತ್ರೆ ಪ್ರಾರಂಭಿಸಿದರು. ತಮಿಳುನಾಡು-ಕರ್ನಾಟಕ ಗಡಿ ಪ್ರದೇಶ ಅತ್ತಿಬೆಲೆಯಿಂದ ಕರ್ನಾಟಕಕ್ಕೂ ಪ್ರವೇಶಿಸಿ, 15 ದಿನಗಳ ಕಾಲ ಪಾದಯಾತ್ರೆ ಮೂಲಕ ರಾಜ್ಯದ ಪ್ರಮುಖ ಜಿಲ್ಲೆಗಳಲ್ಲಿ ಸಂಚರಿಸಿದ್ದರು. ಆರು ತಿಂಗಳ ನಂತರ ಯಾತ್ರೆ ಹೊಸದಿಲ್ಲಿ ಮುಟ್ಟಿತ್ತು. ಅದು ಅವರನ್ನು ಪ್ರಧಾನಿ ಹುದ್ದೆಯವರೆಗೂ ನಡೆಸಿಕೊಂಡು ಹೋಯಿತೆಂಬುದು ಮಹತ್ವದ ವಿಚಾರ. ಪಕ್ಷ ಮತ್ತು ಜನರ ನಡುವೆ ಸಂಪರ್ಕ ಸಾಧಿಸುವಲ್ಲಿ ಆ ಪಾದಯಾತ್ರೆ ಒಂದು ದೊಡ್ಡ ಯಶಸ್ಸನ್ನು ಕಂಡಿತು ಎಂದು ವಿಶ್ಲೇಷಕರು ಹೇಳುತ್ತಾರೆ. ಆದರೆ, ಅದರ ಹೊರತಾಗಿಯೂ, ಇಂದಿರಾ ಗಾಂಧಿಯವರ ಹತ್ಯೆ ಮತ್ತು ನಂತರದ ನಾಟಕೀಯ ರಾಜಕೀಯ ಬೆಳವಣಿಗೆಗಳ ಬಳಿಕ, 1984ರ ಚುನಾವಣೆಯಲ್ಲಿ ಅದರ ಪ್ರಭಾವ ಕ್ಷೀಣಿಸಿತ್ತು. ರಾಜೀವ್ ಗಾಂಧಿ ಭಾವನಾತ್ಮಕ ಅಲೆಯ ಮೇಲೆ ಅಧಿಕಾರಕ್ಕೆ ಬಂದರು.

ರಾಜೀವ್ ಗಾಂಧಿ ಸಂದೇಶ ಯಾತ್ರೆ

1985ರಲ್ಲಿ ಮುಂಬೈನಲ್ಲಿ ನಡೆದ ಎಐಸಿಸಿ ಸಭೆಯಲ್ಲಿ ರಾಜೀವ್ ಗಾಂಧಿ ಸಂದೇಶ ಯಾತ್ರೆ ಘೋಷಣೆಯಾಯಿತು. ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಮುಂಬೈ, ಕಾಶ್ಮೀರ, ಕನ್ಯಾಕುಮಾರಿ ಮತ್ತು ಈಶಾನ್ಯದಿಂದ ಏಕಕಾಲದಲ್ಲಿ ಯಾತ್ರೆ ನಡೆಸಿದರು. ಮೂರು ತಿಂಗಳಿಗೂ ಹೆಚ್ಚು ಕಾಲದ ನಂತರ ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಯಾತ್ರೆ ಮುಕ್ತಾಯಗೊಂಡಿತ್ತು.

ಅಡ್ವಾಣಿ ರಥಯಾತ್ರೆ

ಅಯೋಧ್ಯೆಯಲ್ಲಿ ರಾಮ ಮಂದಿರ ಚಳವಳಿಗೆ ಚಾಲನೆ ನೀಡಲು ಲಾಲ್ ಕೃಷ್ಣ ಅಡ್ವಾಣಿ ರಥಯಾತ್ರೆಯನ್ನು ಕೈಗೊಂಡರು. ಸೆಪ್ಟಂಬರ್ 1990ರಲ್ಲಿ ಪ್ರಾರಂಭವಾದ ಯಾತ್ರೆ 10,000 ಕಿ.ಮೀ. ಕ್ರಮಿಸಿ ಅಕ್ಟೋಬರ್ 30ರಂದು ಅಯೋಧ್ಯೆಯಲ್ಲಿ ಮುಕ್ತಾಯಗೊಳ್ಳಬೇಕಿತ್ತು. ಆದರೆ ಉತ್ತರ ಬಿಹಾರದ ಸಮಷ್ಟಿಪುರದಲ್ಲಿ ಅದನ್ನು ನಿಲ್ಲಿಸಲಾಯಿತು ಮತ್ತು ಅಡ್ವಾಣಿಯನ್ನು ಬಂಧಿಸಲಾಯಿತು. ಮಂದಿರ ಕುರಿತ ಬೇಡಿಕೆ ಹೆಚ್ಚಾದಂತೆ, ಬಿಜೆಪಿಯ ಚುನಾವಣಾ ಅದೃಷ್ಟವೂ ಖುಲಾಯಿಸಿತ್ತು. ಇಡೀ ದೇಶದಲ್ಲಿ ಕೋಮುವಾದದ ಕಿಡಿ ಹಚ್ಚುವಲ್ಲಿ ನಿರ್ಣಾಯಕ ಕೊಡುಗೆ ನೀಡಿದ ಯಾತ್ರೆಯಾಗಿ ಇದನ್ನು ನೋಡಲಾಗುತ್ತಿದೆ. ಆ ಯಾತ್ರೆ, ಅದರ ಹಿಂಸಾತ್ಮಕ ಪರಿಣಾಮಗಳು, ಅದು ಈ ದೇಶದ ಸಾಮಾಜಿಕ ವ್ಯವಸ್ಥೆಯ ಮೇಲೆ ಮಾಡಿದ ಪರಿಣಾಮ ಇವತ್ತಿಗೂ ಗುಣವಾಗದ ಗಾಯದಂತೆ ಉಳಿದುಕೊಂಡಿದೆ.

ಏಕತಾ ಯಾತ್ರೆ

ರಾಷ್ಟ್ರೀಯ ಏಕತೆಯನ್ನು ಬೆಂಬಲಿಸಲು ಮತ್ತು ಪ್ರತ್ಯೇಕತಾವಾದಿ ಚಳುಳಿಗಳನ್ನು ವಿರೋಧಿಸಲು 1991ರಲ್ಲಿ ಆಗಿನ ಬಿಜೆಪಿ ಅಧ್ಯಕ್ಷ ಮುರಳಿ ಮನೋಹರ್ ಜೋಶಿ ನೇತೃತ್ವದಲ್ಲಿ ಏಕತಾ ಯಾತ್ರೆ ನಡೆಯಿತು. ಬಹಳ ನಿರೀಕ್ಷೆಯೊಂದಿಗೆ ಪ್ರಾರಂಭವಾಗಿದ್ದ ಬಿಜೆಪಿಯ ಈ ಮತ್ತೊಂದು ಯಾತ್ರೆಯಲ್ಲಿ ಭಾಗವಹಿಸುವಿಕೆ ನಿರಾಶಾದಾಯಕವಾಗಿತ್ತು ಮತ್ತು ವಿಫಲವಾಯಿತು.

ಭಾರತ ಉದಯ ಯಾತ್ರೆ

ಇದು ಬಿಜೆಪಿಯ ಮತ್ತೊಂದು ವಿಫಲ ಯಾತ್ರೆಯಾಗಿತ್ತು. 2004 ರ ಲೋಕಸಭಾ ಚುನಾವಣೆಗೆ ಮೊದಲು ಅಡ್ವಾಣಿ ಅವರು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅಡಿಯಲ್ಲಿ ಭಾರತದ ಸಾಧನೆಗಳನ್ನು ಎತ್ತಿ ತೋರಿಸಲು ಈ ಯಾತ್ರೆ ಪ್ರಾರಂಭಿಸಿದರು. ಇದು ‘ಇಂಡಿಯಾ ಶೈನಿಂಗ್’ ಅಭಿಯಾನದ ಭಾಗವಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಅನುಭವಿಸಿದ್ದರಿಂದ ಮತ್ತು ಮನಮೋಹನ್ ಸಿಂಗ್ ಪ್ರಧಾನಿಯಾಗಿ ತಮ್ಮ ಮೊದಲ ಅವಧಿಯನ್ನು ಪ್ರಾರಂಭಿಸಿದ್ದರಿಂದ ಈ ಯಾತ್ರೆ ಲೆಕ್ಕದಲ್ಲಿ ಉಳಿಯದೆ ಹೋಯಿತು.

ನರ್ಮದಾ ಪರಿಕ್ರಮ ಯಾತ್ರೆ

ಕಾಂಗ್ರೆಸ್‌ಗೆ ಚುನಾವಣಾ ಯಶಸ್ಸನ್ನು ತಂದುಕೊಟ್ಟ ಒಂದು ಯಾತ್ರೆ 2017ರಲ್ಲಿ ನಡೆಯಿತು. ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ನರ್ಮದಾ ನದಿಯ ದಡದಲ್ಲಿರುವ ನರಸಿಂಗ್‌ಪುರ ಜಿಲ್ಲೆಯ ಬರ್ಮನ್ ಘಾಟ್‌ನಿಂದ ನರ್ಮದಾ ಪರಿಕ್ರಮ ಯಾತ್ರೆ ಪ್ರಾರಂಭಿಸಿದರು. ಈ ಯಾತ್ರೆ ಸಂಪೂರ್ಣವಾಗಿ ಆಧ್ಯಾತ್ಮಿಕ ಎಂದು ಸಿಂಗ್ ಸಮರ್ಥಿಸಿಕೊಂಡಿದ್ದರೂ, ಅದರ ರಾಜಕೀಯ ಪರಿಣಾಮಗಳು ಸ್ಪಷ್ಟವಾಗಿದ್ದವು. ಮಧ್ಯಪ್ರದೇಶದಲ್ಲಿ 2019ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಯಶಸ್ಸಿಗೆ ಇದು ಕಾರಣ ಎಂದು ವಿಶ್ಲೇಷಕರು ಉಲ್ಲೇಖಿಸುತ್ತಾರೆ.

ಆಂಧ್ರ ರಾಜಕೀಯದಲ್ಲಿ ಯಾತ್ರೆಗಳು

ಯಾತ್ರೆಗಳಿಗೆ ಆಂಧ್ರಪ್ರದೇಶದ ರಾಜಕೀಯದಲ್ಲಿ ಬಹಳ ಮಹತ್ವವಿದೆ. ಮಾಜಿ ಮುಖ್ಯಮಂತ್ರಿಗಳಾದ ಎನ್.ಟಿ. ರಾಮರಾವ್, ಅವರ ಅಳಿಯ ಚಂದ್ರಬಾಬು ನಾಯ್ಡು, ವೈ.ಎಸ್. ರಾಜಶೇಖರ್ ರೆಡ್ಡಿ ಮತ್ತು ಅವರ ಮಗ ವೈ.ಎಸ್. ಜಗನ್ ಮೋಹನ್ ರೆಡ್ಡಿ ಎಲ್ಲರೂ ಕೈಗೊಂಡ ಯಾತ್ರೆಗಳು ಆ ರಾಜ್ಯದಲ್ಲಿ ನಾಟಕೀಯ ತಿರುವುಗಳಿಗೆ ಕಾರಣವಾಗಿವೆ.

1983ರ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಎನ್‌ಟಿಆರ್ ಅವರು ಶೆವರ್ಲೆ ವ್ಯಾನ್ ಅನ್ನು ಮಾರ್ಪಡಿಸಿ ಬಳಸಿದ್ದು ದೊಡ್ಡ ವಿಶೇಷತೆ ಪಡೆದಿತ್ತು. ದೇಶದಲ್ಲಿ ಅಂಥದೊಂದನ್ನು ಮಾಡಿದ ಮೊದಲ ರಾಜಕಾರಣಿ ಅವರಾಗಿದ್ದರು. ಅದಕ್ಕೆ ‘ಚೈತನ್ಯ ರಥ’ ಎಂದು ಹೆಸರಿಸಲಾಗಿತ್ತು. ಯಾತ್ರೆ ಬಳಿಕ ಅವರು 294 ವಿಧಾನಸಭಾ ಸ್ಥಾನಗಳಲ್ಲಿ 202 ಸ್ಥಾನಗಳನ್ನು ಗೆದ್ದರು.

ನಾಯಕನೊಬ್ಬನನ್ನು ಅಧಿಕಾರಕ್ಕೆ ತಂದ ಮತ್ತೊಂದು ಯಾತ್ರೆ 2003ರಲ್ಲಿ ನಡೆದಿತ್ತು. ಕಾಂಗ್ರೆಸ್ ನಾಯಕರಾಗಿದ್ದ ವೈ.ಎಸ್. ರಾಜಶೇಖರ್ ರೆಡ್ಡಿ ಆಂಧ್ರಪ್ರದೇಶದಲ್ಲಿ ಬಿಸಿಲಿನಲ್ಲಿ 1,500 ಕಿ.ಮೀ. ನಡೆದರು. 11 ಜಿಲ್ಲೆಗಳಲ್ಲಿ ಮೂರು ತಿಂಗಳ ಕಾಲ ಈ ಪಾದಯಾತ್ರೆ ನಡೆಸಿದ ಒಂದು ವರ್ಷದ ನಂತರ ಅವರು ಕಾಂಗ್ರೆಸ್ ಅನ್ನು ಅದ್ಭುತ ಗೆಲುವಿನತ್ತ ಮುನ್ನಡೆಸಿದರು. ಅಧಿಕಾರದಲ್ಲಿದ್ದ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿಯನ್ನು ಸೋಲಿಸಿದರು. ಅವರು 2004 ಮತ್ತು 2009ರ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಅನ್ನು ಗೆಲುವಿನತ್ತ ಕೊಂಡೊಯ್ದರು.

ಅವರ ನಿಧನದ ಬಳಿಕ ಕಾಂಗ್ರೆಸ್‌ನಿಂದ ಹೊರಬಂದು ವೈ.ಎಸ್.ಆರ್. ಕಾಂಗ್ರೆಸ್ ಪಕ್ಷವನ್ನು ಕಟ್ಟಿದ ಅವರ ಮಗ ವೈ.ಎಸ್. ಜಗನ್ ಮೋಹನ್ ರೆಡ್ಡಿ ನವೆಂಬರ್ 2017ರಿಂದ ಜನವರಿ 2019ರವರೆಗೆ ಪ್ರಜಾ ಸಂಕಲ್ಪ ಯಾತ್ರೆ ಕೈಗೊಂಡರು. ವಿಧಾನಸಭಾ ಚುನಾವಣೆಗೆ ಮುನ್ನ ಆಂಧ್ರಪ್ರದೇಶದಾದ್ಯಂತ 3,500 ಕಿ.ಮೀ.ಗೂ ಹೆಚ್ಚು ಕಾಲ್ನಡಿಗೆಯಲ್ಲಿ ಪ್ರಯಾಣಿಸಿದರು. ಈ ಯಾತ್ರೆ ಜಗನ್ ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸಲು ಮತ್ತು ರಾಜ್ಯದಲ್ಲಿ ವೈ.ಎಸ್.ಆರ್. ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತರಲು ಸಹಾಯ ಮಾಡಿತು. ಮೇ 2019ರಲ್ಲಿ ವೈ.ಎಸ್.ಆರ್.ಸಿ.ಪಿ. ರಾಜ್ಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿತು ಮತ್ತು ಜಗನ್ ಮುಖ್ಯಮಂತ್ರಿಯಾದರು.

ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು 2012-2013ರಲ್ಲಿ ಆಂಧ್ರದ ಮತದಾರರನ್ನು ತಲುಪಲು ‘ವಸ್ತುನ್ನಾ ಮೀ ಕೋಸಮ್’ (ನಿಮಗಾಗಿ ಬರುತ್ತಿದ್ದೇನೆ) ಎಂಬ 2,340 ಕಿ.ಮೀ. ದೂರದ ಪಾದಯಾತ್ರೆ ನಡೆಸಿದರು. ಅವರು 2014 ರಲ್ಲಿ ಮುಖ್ಯಮಂತ್ರಿಯಾದರು ಮತ್ತು 2019ರವರೆಗೆ ಸೇವೆ ಸಲ್ಲಿಸಿದರು. ಆಂಧ್ರದ ಪ್ರಸ್ತುತ ಮುಖ್ಯಮಂತ್ರಿಯೂ ಅವರೇ ಆಗಿದ್ದಾರೆ.

ತಮಿಳುನಾಡು ರಾಜಕೀಯ ಯಾತ್ರೆಗಳು

ತಮಿಳುನಾಡಿನಲ್ಲಿ ಮಾವೋ ಝೆಡಾಂಗ್ ಅವರಿಂದ ಪ್ರೇರಿತರಾಗಿ, ಎಂಡಿಎಂಕೆ ನಾಯಕರಾಗಿದ್ದ ವೈಕೊ ಏಳು ಪಾದಯಾತ್ರೆಗಳನ್ನು ಕೈಗೊಂಡಿದ್ದರು. ‘‘ನನ್ನ ಯಾತ್ರೆಗಳ ಸಮಯದಲ್ಲಿ ನಾನು ರಾಜಕೀಯ ಮಾತನಾಡಲಿಲ್ಲ’’ ಎಂದು ವೈಕೊ ಹೇಳಿದ್ದನ್ನು ಉಲ್ಲೇಖಿಸುವ ವರದಿಗಳಿವೆ. 2015ರಲ್ಲಿ ಎಂ .ಕೆ. ಸ್ಟಾಲಿನ್ ಕೈಗೊಂಡಿದ್ದ ‘ನಮಕ್ಕು ನಾಮೆ’ ಯಾತ್ರೆ ಕೂಡ ಅಲ್ಲಿನ ಮನಸ್ಸುಗಳಲ್ಲಿ ಉಳಿದಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷರಾಗಿದ್ದ ಅಣ್ಣಾಮಲೈ ಕೂಡ ‘ಎನ್ ಮನ್, ಎನ್ ಮಕ್ಕಳ್’ ಯಾತ್ರೆ ಕೈಗೊಂಡಿದ್ದರು.

share
ಆರ್.ಜೀವಿ
ಆರ್.ಜೀವಿ
Next Story
X