Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ವಾರ್ತಾ ಭಾರತಿ ಅವಲೋಕನ
  5. ವ್ಯವಸ್ಥೆಯ ವಿರುದ್ಧ ಯುವ ಸಮುದಾಯದ...

ವ್ಯವಸ್ಥೆಯ ವಿರುದ್ಧ ಯುವ ಸಮುದಾಯದ ಆಕ್ರೋಶ ತಂದಿಟ್ಟ ವಿಪ್ಲವಗಳು

ಆರ್.ಜೀವಿಆರ್.ಜೀವಿ16 Sept 2025 1:15 PM IST
share
ವ್ಯವಸ್ಥೆಯ ವಿರುದ್ಧ ಯುವ ಸಮುದಾಯದ ಆಕ್ರೋಶ ತಂದಿಟ್ಟ ವಿಪ್ಲವಗಳು

ನೇಪಾಳ ದಿಕ್ಕೆಟ್ಟಿದೆ. ಶ್ರಿಲಂಕಾ ಮತ್ತು ಬಾಂಗ್ಲಾದೇಶದ ನಂತರ ದಕ್ಷಿಣ ಏಶ್ಯದ ಮತ್ತೊಂದು ದೇಶದ ಸರಕಾರ ಜನಾಕ್ರೋಶದಿಂದ, ಅದರಲ್ಲೂ ಯುವಜನರ ಆಕ್ರೋಶದಿಂದ ಪತನಗೊಂಡಿದೆ. ವ್ಯವಸ್ಥೆಯ ಮೇಲೆಯೇ ನಂಬಿಕೆ ಕಳೆದುಕೊಂಡವರಂತೆ ಪ್ರತಿಭಟನಾಕಾರರು ಸಂಸತ್ ಭವನ, ರಾಜಕಾರಣಿಗಳ ಮನೆಗಳಿಗೆ ಬೆಂಕಿ ಹಚ್ಚಿರುವುದು ವಿಚಿತ್ರ ತಲ್ಲಣವನ್ನು ಸೃಷ್ಟಿಸಿದೆ. ಕಾಣುವುದಕ್ಕೆ ಭ್ರಷ್ಟಾಚಾರ ವಿರೋಧಿ, ಸ್ವಜನ ಪಕ್ಷಪಾತ ವಿರೋಧಿ ಹೋರಾಟವಾಗಿದ್ದರೂ, ಇದರ ಹಿಂದೆ ನಿಂತು ದಾಳ ನಡೆಸುತ್ತಿರುವುದು ಅಮೆರಿಕ ಎಂಬ ಆರೋಪಗಳಿವೆ. ಅರೇಬಿಯನ್ ಸ್ಪ್ರಿಂಗ್, ಜಾಸ್ಮಿನ್ ಕ್ರಾಂತಿ, ಬಾಂಗ್ಲಾದೇಶದ ಕ್ಷಿಪ್ರ ಕ್ರಾಂತಿಯ ಹಿಂದೆ ಸಕ್ರಿಯವಾಗಿದ್ದ ಸಾಮಾಜಿಕ ಮಾಧ್ಯಮ ಮತ್ತದರ ಮೂಲಕ ಜೆನ್ ಝೀ ಎಂಬುದನ್ನು ಬಳಸಿಕೊಂಡು, ಎಲ್ಲವನ್ನೂ ತನ್ನ ನಿಯಂತ್ರಣಕ್ಕೆ ಸೆಳೆಯುವ ಅಮೆರಿಕದ ಆಟ ಗುಟ್ಟಿನದಲ್ಲ.

ಒಂದೆಡೆ ನೆಲದ ಸರಕಾರಗಳೇ ಕಡುಭ್ರಷ್ಟತನದಲ್ಲಿ ಮುಳುಗಿರುವಾಗ, ವಿದೇಶಿ ಕೈವಾಡ ಅದರ ಲಾಭ ಪಡೆಯಲು ಹವಣಿಸುತ್ತದೆ. ಇದೊಂದು ಬಗೆಯಲ್ಲಿ ಯಾವುದನ್ನೂ ಸಮರ್ಥಿಸಲಾರದ ಸಂದಿಗ್ಧತೆ. ಇದರ ನಡುವೆ ನಾಶವಾಗುವುದು ಒಂದು ದೇಶದ ಅಸ್ಮಿತೆ ಮತ್ತು ಸಾರ್ವಭೌಮತ್ವ ಎಂಬುದನ್ನು ಬಹಳ ಎಚ್ಚರಿಕೆಯಿಂದ ನೋಡಬೇಕಿದೆ. ನೇಪಾಳದಲ್ಲಿನ ಕ್ರಾಂತಿ ಅಲ್ಲಿನ ಇಡೀ ರಾಜಕೀಯ ವ್ಯವಸ್ಥೆಯನ್ನೇ ವಿರೋಧಿಸುತ್ತಿರುವಾಗಲೂ, ಅದರ ಹಿಂದೆ ಮತ್ತೊಂದು ರಾಜಕೀಯವೇ ಇದೆಯೆಂಬುದು ವಿಪರ್ಯಾಸ. ಇಂಥ ವೈರುಧ್ಯ ಬಹುಶಃ ಎಲ್ಲ ಕ್ರಾಂತಿಗಳ ಹಿಂದಿನ ವಾಸ್ತವವೂ ಆಗಿರಬಹುದು. ಅದೇನೇ ಇದ್ದರೂ, ಭಾರತದ ಸುತ್ತಲಿನ ದೇಶಗಳೆಲ್ಲ ಯಾವುದೋ ಸಂಚಿಗೆ ಬಲಿಯಾಗುತ್ತಿರುವುದು ಮತ್ತು ಯಾವುದೋ ಸಂಚಿಗೆ ನೆಲೆಯಾಗುತ್ತಿರುವುದು ಭಾರತದ ಸುರಕ್ಷತೆ ದೃಷ್ಟಿಯಿಂದಂತೂ ಬಹಳ ಅಪಾಯಕಾರಿ ಬೆಳವಣಿಗೆ.

ಇದಕ್ಕೂ ಮೊದಲಿನ ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲಿನ ದಂಗೆಗಳೂ ಸೇರಿದಂತೆ, ವಿದ್ಯಾರ್ಥಿಗಳು ಅಥವಾ ಯುವ ಸಮುದಾಯದ ಆಕ್ರೋಶ ತಂದಿಟ್ಟ ವಿಪ್ಲವ ಭಾರತ ಮಾತ್ರವಲ್ಲದೆ, ಇತರ ದೇಶಗಳಲ್ಲೂ ಕಾಲಕಾಲಕ್ಕೆ ಹೇಗೆಲ್ಲ ಚರಿತ್ರೆಯನ್ನು ಬದಲಿಸಿದೆ ಎಂಬುದರ ಕಡೆ ಒಂದು ಹೊರಳುನೋಟದ ಪ್ರಯತ್ನ ಇಲ್ಲಿದೆ.

ಭಾಗ - 1

ನೇಪಾಳದಲ್ಲಿ ಈಗ ಆಗಿರುವುದು, ಮುಂದೆ ಆಗಲಿರುವುದರ ಹಿಂದೆ ಹಲವು ನೆರಳುಗಳ ಆಟವಿರುವುದರ ಬಗ್ಗೆ ಚರ್ಚೆಗಳು ಜೋರಾಗಿವೆ. ಪ್ರಧಾನಿ ಕೆ.ಪಿ. ಶರ್ಮಾ ಒಲಿ ರಾಜೀನಾಮೆ ನೀಡುವುದರೊಂದಿಗೆ, ಮತ್ತೊಮ್ಮೆ ಸರಕಾರ ಪತನಗೊಂಡಂತಾಗಿದೆ. ಅಲ್ಲೀಗ ಹೊಸ ಮಧ್ಯಂತರ ಪ್ರಧಾನಿ ನೇಮಕವಾಗಿದ್ದಾರೆ. ರಾಜಪ್ರಭುತ್ವ ಕೊನೆಗೊಂಡು ಪ್ರಜಾಪ್ರಭುತ್ವ ಬಂದ ನಂತರದ 17 ವರ್ಷಗಳಲ್ಲಿ 14 ಸರಕಾರಗಳನ್ನು ಕಾಣುವ ಮಟ್ಟಿನ ಅಸ್ಥಿರತೆಗೆ ನೇಪಾಳ ಸಾಕ್ಷಿಯಾಗಿದೆ. ಕೆಲವೇ ಕೆಲವರ ಕೈಗೆ ಅಧಿಕಾರ ತಿರುತಿರುಗಿ ಹೋಗುತ್ತಿದ್ದುದು ಒಂದೆಡೆ ಭ್ರಷ್ಟತೆ ಮತ್ತು ಸ್ವಜನ ಪಕ್ಷಪಾತವನ್ನು ಪೋಷಿಸತೊಡಗಿದಾಗ, ಮತ್ತೊಂದೆಡೆ ಜನರ ಭ್ರಮನಿರಸನ, ಹತಾಶೆಯೂ ಬೆಳೆದಿತ್ತು. ಈಗ ನಡೆದಿರುವುದು, ಅದರ ಆತ್ಯಂತಿಕ ಸ್ಫೋಟ. ಅದರ ಹಿಂದೆ ಯಾರೇ ಇದ್ದರೂ, ಬಹುಶಃ ಒಂದು ಕಿಡಿ ಬೀಳಲು ಕಾದಿದ್ದ ಆಕ್ರೋಶ ಅದಾಗಿತ್ತೆಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

2008ರಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಾದಾಗಿನಿಂದ ಈವರೆಗೆ ಸಾಮಾನ್ಯ ನೇಪಾಳಿಗಳ ಜೀವನದಲ್ಲಿ ಇನ್ನೂ ಯಾವುದೇ ಗಮನಾರ್ಹ ಬದಲಾವಣೆಗಳಾಗಿಲ್ಲ. ಆದರೆ ರಾಜಕೀಯ ನಾಯಕರೆಲ್ಲ ರಾಜರಂತೆ, ಚಕ್ರವರ್ತಿಗಳಂತೆ ಐಷಾರಾಮಿ ಜೀವನ ನಡೆಸುತ್ತಿದ್ದರು. ಅಲ್ಲಿನ ಆರ್ಥಿಕ ಬೆಳವಣಿಗೆ ನಿಧಾನಗತಿಯಲ್ಲಿತ್ತು ಮತ್ತು ಉದ್ಯೋಗಗಳೇ ಇಲ್ಲದ ಸ್ಥಿತಿಯಿತ್ತು. ಪ್ರತೀ ವರ್ಷ ಸಾವಿರಾರು ಯುವ ನೇಪಾಳಿಗಳು ಉದ್ಯೋಗ ಹುಡುಕಿಕೊಂಡು ದೇಶದಿಂದ ಹೊರಗೆ ಹೋಗುತ್ತಾರೆ. ಜನರು ಹೀಗೆ ತುಂಬಾ ತೊಂದರೆಯಲ್ಲಿರುವಾಗ, ಸರಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಸಾರ್ವಜನಿಕರೊಂದಿಗಿನ ಅದರ ಸಂಪರ್ಕ ಇಲ್ಲವಾಗಿದೆ. ಎಲ್ಲಾ ರಾಜಕೀಯ ಪಕ್ಷಗಳಲ್ಲಿ ನಂಬಿಕೆ ಕಳೆದುಹೋದಾಗ, ಆರ್ಥಿಕ ಸ್ಥಿತಿ ಬಿಕ್ಕಟ್ಟಿನಲ್ಲಿದ್ದಾಗ ವ್ಯವಸ್ಥೆಯ ಬಗ್ಗೆ ಹತಾಶೆ ಸಹಜ. ನೇಪಾಳಿ ಯುವಕರು ಕೆಲ ಸಮಯದಿಂದ ಸಾಮಾಜಿಕ ಮಾಧ್ಯಮದಲ್ಲಿ ಈ ಕೋಪ ಮತ್ತು ಹತಾಶೆಯನ್ನು ವ್ಯಕ್ತಪಡಿಸುತ್ತಲೇ ಇದ್ದರು. ರಾಜಕೀಯ ಗಣ್ಯರ ಜೀವನಶೈಲಿ, ಅವರ ಮಕ್ಕಳು, ಅವರ ಐಷಾರಾಮಿ ಜೀವನ ಮತ್ತು ಸಾಮಾನ್ಯ ಜನರ ದೈನಂದಿನ ಸಮಸ್ಯೆಗಳ ಬಗ್ಗೆ ಸರಕಾರ ತಲೆಕೆಡಿಸಿಕೊಳ್ಳದಿರುವ ಬಗ್ಗೆ ಹೇಳುತ್ತಲೇ ಇದ್ದರು. ಅವರ ಈ ಅಸಮಾಧಾನ ಆನ್‌ಲೈನ್‌ನಲ್ಲಿ ತೀವ್ರವಾಗಿದ್ದಾಗಲೇ, ನೇಪಾಳ ಸರಕಾರ ಸಾಮಾಜಿಕ ಮಾಧ್ಯಮದ ಮೇಲೆಯೇ ನಿಷೇಧ ಹೇರಿತ್ತು. ಈ ಕಂಪೆನಿಗಳು ದೇಶದ ಕಾನೂನನ್ನು ಗೌರವಿಸುತ್ತಿಲ್ಲ ಎಂಬ ನೆಪ ಹೇಳಿತಾದರೂ, ವಾಸ್ತವದಲ್ಲಿ ನೇಪಾಳ ಸರಕಾರ ಸಾಮಾಜಿಕ ಮಾಧ್ಯಮವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಬಯಸಿತ್ತು. ಸರಕಾರದ ನಿಜವಾದ ಉದ್ದೇಶ, ಸಾಮಾಜಿಕ ಮಾಧ್ಯಮದಲ್ಲಿ ಪ್ರತಿದಿನ ತನ್ನ ರಹಸ್ಯಗಳು ಬಯಲಾಗುತ್ತಿರುವುದನ್ನು ತಡೆಯುವುದಾಗಿತ್ತು. ಈಗಾಗಲೇ ವರ್ಷಗಳಿಂದ ನೇಪಾಳದ ರಾಜಕೀಯ ವ್ಯವಸ್ಥೆಯಿಂದ ನಿರಾಶೆಗೊಂಡಿದ್ದ ಜನರು, ಸರಕಾರದ ಈ ಕ್ರಮವನ್ನು ಒಪ್ಪಲಿಲ್ಲ. ನೇಪಾಳದ ಯುವಕರು ತಮ್ಮ ವ್ಯವಹಾರಗಳಿಗಾಗಿಯೂ ಸಾಮಾಜಿಕ ಮಾಧ್ಯಮವನ್ನೇ ಅವಲಂಬಿಸಿದ್ದ ಹೊತ್ತಿನ ಈ ನಿಷೇಧ, ಸಹಜವಾಗಿಯೇ ಆಕ್ರೋಶ ಹೆಚ್ಚಲು ಕಾರಣವಾಯಿತು. ಆ ನೆಪದಲ್ಲಿ ಶುರುವಾದ ಪ್ರತಿಭಟನೆ ಕಡೆಗೆ ಸರಕಾರವನ್ನೇ ತೆಗೆಯುವವರೆಗೂ ಹೋಯಿತು. ಅದು ಎಲ್ಲಾ ಪಕ್ಷಗಳ ವಿರುದ್ಧದ ಚಳವಳಿಯಾಗಿ, ಸಂಪೂರ್ಣ ಭ್ರಷ್ಟಾಚಾರ ವಿರೋಧಿ ಚಳವಳಿಯಾಗಿ ಬದಲಾಗಿತ್ತು.

ಅಂದಹಾಗೆ, ಈ ಕ್ರಾಂತಿಯ ಹಿಂದಿರುವುದು ಹೊಸ ತಲೆಮಾರು. ‘ಜೆನ್ ಝೀ’ ಎಂದು ಕರೆಯಲಾಗುವ ತಲೆಮಾರಿನವರ ಆಕ್ರೋಶ ಸಹಜವಾದದ್ದೇ ಅಥವಾ ಅವರ ಅಸಹನೆಯನ್ನು ಇನ್ಯಾರೋ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದ್ದಾರೆಯೇ ಎಂಬುದು ಬೇರೆಯದೇ ಚರ್ಚೆ. ಸದ್ಯಕ್ಕೆ, ಯುವ ಸಮುದಾಯದ ಆಕ್ರೋಶ ನೇಪಾಳ ಸರಕಾರವನ್ನು ಉರುಳಿಸಿದೆ. ಮುಂದೆ ಆಗುವುದೇನಿದ್ದರೂ ಮತ್ತೊಂದು ರಾಜಕೀಯ ಮಾತ್ರ. ಈಗ ನೇಪಾಳದ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅಲ್ಲಿನ ಮಧ್ಯಂತರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಈಗ ನೇಪಾಳದಲ್ಲಿ ನಡೆದಂಥದೇ ಯುವ ಸಮುದಾಯದ ದಂಗೆ ಭಾರತದ ನೆರೆಯ ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಲ್ಲೂ ಎರಡೇ ವರ್ಷಗಳ ಅಂತರದಲ್ಲಿ ನಡೆದವು. ಶ್ರೀಲಂಕಾದಲ್ಲಿ 2022 ರಲ್ಲಿ ಯುವ ಸಮುದಾಯದ ಆಕ್ರೋಶ ಅಲ್ಲಿನ ಸರಕಾರವನ್ನು ಬಲಿ ತೆಗೆದುಕೊಂಡಿದ್ದರೆ, ಬಾಂಗ್ಲಾದೇಶದಲ್ಲಿ ಒಂದೂವರೆ ದಶಕದಿಂದ ಆಳಿದ್ದ ಶೇಕ್ ಹಸೀನಾ ಪ್ರಧಾನಿ ಹುದ್ದೆ ತೊರೆದು ದೇಶದಿಂದಲೇ ಪಲಾಯನ ಮಾಡುವುದಕ್ಕೂ ವಿದ್ಯಾರ್ಥಿ ದಂಗೆಯೇ ಕಾರಣವಾಗಿತ್ತು.

ಶ್ರೀಲಂಕಾದಲ್ಲಿ 2022ರಲ್ಲಿ ಪ್ರಕ್ಷುಬ್ಧ ಸ್ಥಿತಿಗೆ ಕಾರಣವಾದ ಜನಾಕ್ರೋಶದಲ್ಲಿಯೂ ಯುವ ಸಮುದಾಯವೇ ಮುಂಚೂಣಿಯಲ್ಲಿತ್ತು. ಶ್ರೀಲಂಕಾ ಅತಿಯಾದ ಹಣದುಬ್ಬರ, ಆಹಾರದ ಕೊರತೆ, ತೈಲದ ಕೊರತೆ, ವಿದ್ಯುತ್ ಅಲಭ್ಯತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿತ್ತು. ಇದು ಸಾಮಾನ್ಯ ಜನತೆ ರೊಚ್ಚಿಗೇಳುವಂತೆ ಮಾಡಿತ್ತು. ಆರ್ಥಿಕ ದುರವಸ್ಥೆಯನ್ನು ನಿಭಾಯಿಸಲು ಅಸಮರ್ಪಕವಾದ ರಾಜಕೀಯ ನಾಯಕತ್ವ ಇನ್ನಷ್ಟು ಅರಾಜಕತೆಗೆ ದಾರಿ ಮಾಡಿಕೊಟ್ಟಿತು. ದಂಗೆಯೆದ್ದಿದ್ದ ಜನರು ಶ್ರೀಲಂಕಾದ ಪ್ರಧಾನಿಯಾಗಿದ್ದ ರನಿಲ್ ವಿಕ್ರಮಸಿಂಗೆ ಮನೆಗೆ ಬೆಂಕಿ ಹಚ್ಚಿದ್ದರು. ಅಧ್ಯಕ್ಷ ಗೊತಬಯ ರಾಜಪಕ್ಸ ನಿವಾಸವನ್ನು ಕೊಳ್ಳೆ ಹೊಡೆದಿದ್ದರು. ಲಕ್ಷಾಂತರ ಜನರ ಸಂಕಷ್ಟಗಳು 2022 ಜುಲೈ 9ರಂದು ಶ್ರೀಲಂಕಾದ ರಾಜಧಾನಿ ಕೊಲಂಬೊ ನಗರದಲ್ಲಿ ಆಕ್ರೋಶದ ರೂಪದಲ್ಲಿ ವ್ಯಕ್ತವಾಗಿದ್ದವು. ಎಲ್ಲ ಪೊಲೀಸ್ ಪಹರೆಗಳನ್ನು ಭೇದಿಸಿ, ಅಧ್ಯಕ್ಷ ಗೊತಬಯ ರಾಜಪಕ್ಸರವರ ಅಧಿಕೃತ ನಿವಾಸಕ್ಕೆ ನುಗ್ಗಿದ್ದ ಜನ, ದಾಂಧಲೆಯೆಬ್ಬಿಸಿದ್ದರು, ವಿಧ್ವಂಸಕತೆ ಮೆರೆದಿದ್ದರು.

ಇನ್ನು, 2024ರಲ್ಲಿನ ಬಾಂಗ್ಲಾದೇಶದಲ್ಲಿನ ಕ್ಷಿಪ್ರ ಕ್ರಾಂತಿಯ ಬಗ್ಗೆ ಹೇಳುವುದಾದರೆ, ಎಲ್ಲ ದಂಗೆಗಳ ಹಿಂದೆ ಇರುವ ಹಾಗೆಯೇ ಇಲ್ಲಿಯೂ ಕಡೆಗೆ ಎಲ್ಲವನ್ನೂ ಸುಟ್ಟುಹಾಕಿದ್ದು ಒಂದು ಅಲಕ್ಷಿತ ಕಿಡಿಯಾಗಿತ್ತು. ವಿದ್ಯಾರ್ಥಿಗಳೇಕೆ ಪ್ರತಿಭಟಿಸುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳದ, ಅದನ್ನು ತನ್ನ ವಿರುದ್ಧದ ರಾಜಕೀಯ ಮತ್ತು ವಿಪಕ್ಷಗಳ ಕುಮ್ಮಕ್ಕು ಎಂದು ಮಾತ್ರ ನೋಡಿದ ಶೇಕ್ ಹಸೀನಾ ಪ್ರತಿಭಟನಾಕಾರರನ್ನು ಭಯೋತ್ಪಾದಕರು, ರಜಾಕಾರರು, ದೇಶದ್ರೋಹಿಗಳು ಎಂದು ಕರೆಯಲು, ಜರೆಯಲು ಹಿಂದೆಮುಂದೆ ನೋಡಲಿಲ್ಲ. ವಿದ್ಯಾರ್ಥಿಗಳ ಮೇಲೆ ಗುಂಡಿನ ದಾಳಿ ನಡೆಸುವ ಅತ್ಯಂತ ಅವಿವೇಚನೆಯ ಕ್ರಮಕ್ಕೂ ಅವರು ಮುಂದಾದರು. ಪರಿಣಾಮವಾಗಿ ತಮ್ಮ ಪತನವನ್ನೇ ತಂದುಕೊಂಡರು. 15 ವರ್ಷ ದೇಶವನ್ನಾಳಿದ್ದ, ಸರ್ವಾಧಿಕಾರಿ ಧೋರಣೆ ಪ್ರದರ್ಶಿಸುತ್ತಿದ್ದ ಶೇಕ್ ಹಸೀನಾ, ಬದುಕುಳಿದರೆ ಸಾಕೆಂದು ಬರಿಗೈಯಲ್ಲಿ ದೇಶ ಬಿಟ್ಟು ಓಡಿಹೋಗಬೇಕಾಯಿತು. ಹಸೀನಾ ಅಧಿಕೃತ ನಿವಾಸ ಲೂಟಿಯಾಗಿ ಹೋಯಿತು. ಆಕೆಯ ಪಕ್ಷ ಅವಾಮಿ ಲೀಗ್‌ನ ಹಲವಾರು ನಾಯಕರು ಮತ್ತವರ ಕುಟುಂಬದವರು ಜೀವ ತೆರಬೇಕಾಯಿತು. ಹಿಂಸೆ ನಿಯಂತ್ರಣ ಮೀರಿದಾಗ ಆಗಬಹುದಾದ ಎಲ್ಲ ಅನಾಹುತಗಳಿಗೆ ಬಾಂಗ್ಲಾದೇಶ ಕೂಡ ಅವತ್ತು ಸಾಕ್ಷಿಯಾಯಿತು.

ಇನ್ನು ನೇಪಾಳ ಕ್ರಾಂತಿಯ ಹಿಂದಿರುವ ಸಾಮಾಜಿಕ ಮಾಧ್ಯಮದ ಬಗ್ಗೆ ಹೇಳುವಾಗ, ಅರೇಬಿಯನ್ ಸ್ಪ್ರಿಂಗ್, ಜಾಸ್ಮಿನ್ ಕ್ರಾಂತಿಯಂಥವುಗಳನ್ನೂ ಉಲ್ಲೇಖಿಸಲಾಗುತ್ತಿದೆ. ಈ ಎಲ್ಲಾ ಕ್ರಾಂತಿಗಳು ಅಮೆರಿಕದ ಸೂತ್ರಕ್ಕೆ ಕುಣಿಯುವ ಸರಕಾರಗಳ ಸ್ಥಾಪನೆಗೆ ಬಳಕೆಯಾಗಿವೆ ಎಂಬ ವಾದವಿದೆ. ಈಜಿಪ್ಟ್, ಲಿಬಿಯಾ, ಟ್ಯುನಿಶಿಯಾ, ಇರಾಕ್‌ನಲ್ಲಿ ಯಶಸ್ವಿಯಾದ ಅಮೆರಿಕ ಇತ್ತೀಚೆಗೆ ಬಾಂಗ್ಲಾದೇಶ, ಪಾಕಿಸ್ತಾನ ಮತ್ತೀಗ ನೇಪಾಳದಲ್ಲೂ ಅದೇ ಆಟವನ್ನು ಆಡಿದೆ ಎನ್ನಲಾಗುತ್ತಿದೆ. ಹಾಗಾಗಿ, ನೆಪೊ ಕಿಡ್ಸ್, ನೆಪೊ ಬೇಬೀಸ್ ವಿರುದ್ಧದ ಹೋರಾಟ ಎಂದೆಲ್ಲ ಬಣ್ಣಿಸಲಾಗುತ್ತಿರುವ ಜೆನ್ ಝೀ ಕ್ರಾಂತಿ ಅಸಲಿಗೆ ಅಮೆರಿಕದ ಅಸ್ತ್ರ ಮಾತ್ರ ಎಂದು ಹೇಳಲಾಗುತ್ತಿದೆ. ಬಾಂಗ್ಲಾದೇಶದಲ್ಲಿ ದಂಗೆಯಾದಾಗಲೂ, ಅದರ ಹಿಂದೆ ಚೀನಾ ಇಲ್ಲವೆ ಅಮೆರಿಕದ ಕೈವಾಡ ಇದ್ದುದರ ಬಗ್ಗೆ ಚರ್ಚೆಯಾಗಿತ್ತು. ಏಶ್ಯದಲ್ಲಿ ತನ್ನ ಪ್ರಾಬಲ್ಯ ಹೆಚ್ಚಿಸಲು ನೋಡುತ್ತಲೇ ಇರುವ ಅಮೆರಿಕ ಈಗ ನೇಪಾಳದಲ್ಲೂ ತನ್ನ ಕೈಗೊಂಬೆ ಸರಕಾರ ಅಸ್ತಿತ್ವಕ್ಕೆ ಬರುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದು, ಚಳವಳಿಯ ಹಿಂದೆ ಕೆಲಸ ಮಾಡಿರಬಹುದಾದ ಸಾಧ್ಯತೆ ಇಲ್ಲದೇ ಇಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.

ಯುವ ತಲೆಮಾರಿನ ಹೋರಾಟ, ವಿದ್ಯಾರ್ಥಿ ಚಳವಳಿಗಳು ಚರ್ಚೆಯಾಗುತ್ತಿರುವ ಈ ಹೊತ್ತಲ್ಲಿ, ಭಾರತದಲ್ಲಿನ ಅಂಥ ಚಳವಳಿಗಳ ಹಾದಿಯ ಬಗ್ಗೆ ಒಮ್ಮೆ ನೋಡಬಹುದು. ಭಾರತದಲ್ಲಿ ವಿದ್ಯಾರ್ಥಿ ಚಳವಳಿಯ ಬೇರುಗಳು ಸುಮಾರು 200 ವರ್ಷಗಳಷ್ಟು ಹಿಂದಿನವಾಗಿದ್ದರೂ, ಜೆ.ಪಿ. ಚಳವಳಿಯಂಥ ವಿದ್ಯಮಾನಗಳು ದೊಡ್ಡ ದಾಖಲೆಯಾಗಿವೆ.

1905ರಲ್ಲಿ ಕೋಲ್ಕತಾದ ಈಡನ್ ಕಾಲೇಜಿನ ವಿದ್ಯಾರ್ಥಿಗಳು ಬಂಗಾಳ ವಿಭಜನೆ ವಿರೋಧಿಸಿ ಆಗಿನ ವೈಸರಾಯ್ ಲಾರ್ಡ್ ಕರ್ಝನ್ ಪ್ರತಿಕೃತಿಯನ್ನು ಸುಟ್ಟುಹಾಕಿದರೆಂಬುದು, ವಿದ್ಯಾರ್ಥಿಗಳ ಪ್ರತಿಭಟನೆಯ ಮೊದಲ ಉಲ್ಲೇಖಿತ ನಿದರ್ಶನಗಳಲ್ಲಿ ಒಂದಾಗಿದೆ. ಅವಿಭಜಿತ ಭಾರತದಲ್ಲಿ ಮೊದಲ ವಿದ್ಯಾರ್ಥಿಗಳ ಮುಷ್ಕರ 1920ರಲ್ಲಿ ಲಾಹೋರ್‌ನ ಕಿಂಗ್ ಎಡ್ವರ್ಡ್ ವೈದ್ಯಕೀಯ ಕಾಲೇಜಿನಲ್ಲಿ ಭಾರತೀಯ ಮತ್ತು ಇಂಗ್ಲಿಷ್ ವಿದ್ಯಾರ್ಥಿಗಳ ನಡುವಿನ ಶೈಕ್ಷಣಿಕ ತಾರತಮ್ಯದ ವಿರುದ್ಧ ನಡೆಯಿತು. ವಿದ್ಯಾರ್ಥಿಗಳು ಮತ್ತು ಅವರ ಸಂಘಟನೆಗಳು ದೇಶಾದ್ಯಂತ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದವು. ಸ್ವಾತಂತ್ರ್ಯಾನಂತರದ ಭಾರತ ಹಲವಾರು ವಿದ್ಯಾರ್ಥಿ ಚಳವಳಿಗಳನ್ನು ಕಂಡಿದೆ. ವಸಾಹತುಶಾಹಿ ನಂತರದ ವಿದ್ಯಾರ್ಥಿ ಚಳವಳಿಗಳ ಆರಂಭಿಕ ನಿದರ್ಶನಗಳನ್ನು 1950ರ ದಶಕದಲ್ಲಿನ ಭಾಷಾವಾರು ರಾಜ್ಯಗಳ ಬೇಡಿಕೆಯಲ್ಲಿ ಕಾಣಬಹುದು. 1965ರ ಮದ್ರಾಸ್ ಹಿಂದಿ ವಿರೋಧಿ ಆಂದೋಲನದಂಥ ಚಳವಳಿಗಳಲ್ಲಿ ಗುರುತಿಸಬಹುದು.

ಭಾರತದಾದ್ಯಂತದ ವಿದ್ಯಾರ್ಥಿ ರಾಜಕೀಯದ ಮೊದಲ ಪ್ರಮುಖ ಹೋರಾಟಗಳಲ್ಲಿ ಒಂದೆಂದರೆ, ಅದು ನಕ್ಸಲೈಟ್ ಚಳವಳಿ. ಮೇ 25, 1967ರಂದು ಪಶ್ಚಿಮ ಬಂಗಾಳದ ನಕ್ಸಲ್‌ಬಾರಿ ಗ್ರಾಮದಲ್ಲಿ ರೈತ ದಂಗೆಯಾಗಿ ಶುರುವಾದದ್ದು, 1960ರ ದಶಕದ ಕಡೆಯ ವೇಳೆಗೆ ಇಡೀ ಪೀಳಿಗೆಯ ವಿದ್ಯಾರ್ಥಿಗಳನ್ನು ಪ್ರೇರೇಪಿಸಿತು. ಬಿಹಾರ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಒಡಿಶಾ ಹೀಗೆ ದೇಶಾದ್ಯಂತ ನಕ್ಸಲೀಯರ ಚಳವಳಿಗೆ ಬೆಂಬಲ ದೊರೆಯಿತು. ಆಮೂಲಾಗ್ರ ವಿದ್ಯಾರ್ಥಿ ರಾಜಕೀಯದ ಮುಂದಿನ ಮೈಲಿಗಲ್ಲು ತುರ್ತು ಪರಿಸ್ಥಿತಿ. 1975ರ ಜೂನ್ 25ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಘೋಷಿಸಿದ ತುರ್ತು ಪರಿಸ್ಥಿತಿ ವಿರುದ್ಧ ಜಯಪ್ರಕಾಶ್ ನಾರಾಯಣ್ (ಜೆಪಿ) ನಡೆಸಿದ ಚಳವಳಿ ಭಾರತದ ರಾಜಕೀಯದಲ್ಲಿ ಹೊಸ ತಲೆಮಾರಿನ ನಾಯಕರನ್ನು ತಂದಿತು. ಜೆ.ಪಿ. ಚಳವಳಿಯ ಮೂಲ 1974ರಲ್ಲಿ ಗುಜರಾತ್‌ನಲ್ಲಿ ನಡೆದ ‘ನವನಿರ್ಮಾಣ ಆಂದೋಲನ’ ಎಂಬ ಹೆಸರಿನ ವಿದ್ಯಾರ್ಥಿ ಚಳವಳಿ. ಗುಜರಾತ್ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಹಾಸ್ಟೆಲ್ ಆಹಾರ ಶುಲ್ಕ ಹೆಚ್ಚಳ ವಿರೋಧಿಸಿ ಆ ಚಳವಳಿ ಶುರುವಾಗಿತ್ತು. ಕಡೆಗೆ ಜೆ.ಪಿ.ಯವರ ಸಂಪೂರ್ಣ ಕ್ರಾಂತಿಯ ಕರೆ ಇಡೀ ಚಳವಳಿಗೆ ಹೊಸ ರೂಪ ಕೊಟ್ಟಿತು. ವಿದ್ಯಾರ್ಥಿ ಬೆಂಬಲಿತ ಜೆ.ಪಿ. ಚಳವಳಿ ದೇಶದಲ್ಲಿ ಮೊದಲ ಕಾಂಗ್ರೆಸೇತರ ಸರಕಾರ ಸ್ಥಾಪಿಸುವಲ್ಲಿ ಯಶಸ್ವಿಯಾಯಿತು. ಸೆಪ್ಟಂಬರ್ 1977ರಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ನಾಯಕರಾಗಿದ್ದ ಸೀತಾರಾಂ ಯೆಚೂರಿ ಅವರು ಆಗಿನ ಕುಲಪತಿ ಇಂದಿರಾ ಗಾಂಧಿ ಅವರ ರಾಜೀನಾಮೆಗೆ ಒತ್ತಾಯಿಸಿ ಗೆದ್ದದ್ದು, ಜಾರ್ಜ್ ಫೆರ್ನಾಂಡಿಸ್ ಅವರ ಪ್ರತಿಭಟನೆ ಇವೆಲ್ಲವೂ ಮಹತ್ವದ ಗುರುತುಗಳು.

1980ರ ದಶಕದಲ್ಲಿ ಅಸ್ಸಾಂ ಆಂದೋಲನ ಮತ್ತು ಪಂಜಾಬ್ ಸಮಸ್ಯೆಯೊಂದಿಗೆ ವಿದ್ಯಾರ್ಥಿ ರಾಜಕೀಯ ತುಸು ಮಟ್ಟಿಗೆ ಉಗ್ರ ತಿರುವು ಕಂಡಿತ್ತು. ಅಸ್ಸಾಂ ಆಂದೋಲನವನ್ನು ಭಾರತೀಯ ಇತಿಹಾಸದಲ್ಲಿ ವಿದ್ಯಾರ್ಥಿ ಆಂದೋಲನದ ಒಂದು ಹೆಗ್ಗುರುತೆಂದೇ ನೋಡಲಾಗುತ್ತದೆ. ಆಲ್ ಅಸ್ಸಾಂ ವಿದ್ಯಾರ್ಥಿ ಒಕ್ಕೂಟ (ಎಎಎಸ್‌ಯು) ಮತ್ತು ಕೇಂದ್ರ ಸರಕಾರದ ನಡುವೆ ಆಗಸ್ಟ್ 15, 1985 ಅಸ್ಸಾಂ ಒಪ್ಪಂದಕ್ಕೆ ಸಹಿ ಬೀಳುವುದರೊಂದಿಗೆ ಆಂದೋಲನ ಮುಗಿದಿತ್ತು. 1966ರ ಜನವರಿ 1ರಿಂದ 1971ರ ಮಾರ್ಚ್ 25ರ ಅವಧಿಯಲ್ಲಿ ಭಾರತ ಪ್ರವೇಶಿಸಿ ಅಸ್ಸಾಮಿಗೆ ಬಂದಿರುವ ವಲಸಿಗರಿಗೆ ಭಾರತೀಯ ಪೌರತ್ವದ ಅವಕಾಶಕ್ಕೆ ಈ ಒಪ್ಪಂದ ಸಮ್ಮತಿಸಿತ್ತು. 1971ರ ಮಾರ್ಚ್ 25ರ ನಂತರ ಬಂದವರೆಲ್ಲ ಅಕ್ರಮ ವಲಸಿಗರಾಗುತ್ತಾರೆ ಮತ್ತು ಅವರನ್ನು ವಿದೇಶಿಗರೆಂದು ಗುರುತಿಸಬೇಕು ಎಂದು ಒಪ್ಪಂದವಾಗಿತ್ತು. ಪ್ರತ್ಯೇಕ ಸಿಖ್ ರಾಜ್ಯ ಅಥವಾ ಖಾಲಿಸ್ತಾನ್ ಅನ್ನು ಒತ್ತಾಯಿಸಿ ನಡೆದ ಚಳವಳಿ ಮತ್ತೊಂದು ದೊಡ್ಡ ವಿದ್ಯಮಾನ.

1990ರ ದಶಕದಲ್ಲಿ ಮಂಡಲ್ ವಿರೋಧಿ ಆಂದೋಲನದ ಸಮಯದಲ್ಲಿ ವಿದ್ಯಾರ್ಥಿಗಳು ಅಕ್ಷರಶಃ ಬೆಂಕಿ ಹಚ್ಚಿಕೊಂಡ ನಿದರ್ಶನಗಳನ್ನು ನೋಡಬೇಕಾಯಿತು. ಫೆಬ್ರವರಿ 2016ರ ಜೆಎನ್‌ಯು ಆಂದೋಲನ ಮತ್ತು ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ರೋಹಿತ್ ವೇಮುಲಾ ಆತ್ಮಹತ್ಯೆ ವಿರುದ್ಧದ ಆಂದೋಲನಗಳು ಕೂಡ ಅಷ್ಟೇ ಮಹತ್ವದವಾಗಿವೆ. ಹೊಸ ರಾಜ್ಯ ರಚನೆಗೆ ಕಾರಣವಾದ ಮತ್ತೊಂದು ಪ್ರಮುಖ ವಿದ್ಯಾರ್ಥಿ ಆಂದೋಲನವೆಂದರೆ ತೆಲಂಗಾಣ ಚಳವಳಿ. ಅದು ಹೆಚ್ಚಾಗಿ ಉಸ್ಮಾನಿಯಾ ವಿಶ್ವವಿದ್ಯಾನಿಲಯ ಮತ್ತು ಹೈದರಾಬಾದ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿದ್ದ ಜೈಲ್ ಭರೋ ಅಭಿಯಾನವಾಗಿತ್ತು. ಅಣ್ಣಾ ಹಝಾರೆ ಅವರ ಭ್ರಷ್ಟಾಚಾರ ವಿರೋಧಿ ಹೋರಾಟದಲ್ಲಿಯೂ ಯುವಕರು ಸೇರಿದ್ದರು. ನಿರ್ಭಯಾ ಪ್ರತಿಭಟನೆಗಳು ಕೂಡ ಯುವಜನರ ಪಾಲ್ಗೊಳ್ಳುವಿಕೆಯ ಮತ್ತೊಂದು ದೊಡ್ಡ ಅಭಿಯಾನವಾಗಿತ್ತು. ವಿದ್ಯಾರ್ಥಿ ಚಳವಳಿಗಳ ಆನಂತರದ ಹಂತದಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಗಳು ಸೇರುತ್ತವೆ.

share
ಆರ್.ಜೀವಿ
ಆರ್.ಜೀವಿ
Next Story
X