ಜನಪ್ರತಿನಿಧಿಗಳನ್ನು ಜೈಲಿಗೆ ಕಳುಹಿಸುವ ರಾಜಕಾರಣ!

ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು 30 ದಿನಗಳ ಕಾಲ ಜೈಲಿನಲ್ಲಿದ್ದರೆ ಅವರನ್ನು ಪದಚ್ಯುತಗೊಳಿಸಲು ಅವಕಾಶ ನೀಡುವ ಹೊಸ ಮಸೂದೆಯನ್ನು ಮೋದಿ ಸರಕಾರ ತಂದಿದೆ. ವಿರೋಧ ಪಕ್ಷಗಳು ತೀವ್ರವಾಗಿ ವಿರೋಧಿಸಿರುವ ಈ ಮಸೂದೆಯನ್ನು ಸದ್ಯ ಸಂಸದೀಯ ಸಮಿತಿಗೆ ಕಳಿಸಲಾಗಿದೆ. ಇದು ವಿಪಕ್ಷಗಳ ಸರಕಾರಗಳನ್ನು ಉರುಳಿಸುವ ಉದ್ದೇಶದ ಮಸೂದೆ ಮತ್ತು ಒಕ್ಕೂಟ ವ್ಯವಸ್ಥೆಯನ್ನೇ ನಾಶಪಡಿಸುವಂಥದ್ದು ಎಂಬುದು ವಿರೋಧ ಪಕ್ಷಗಳ ಆರೋಪ. ಪ್ರಧಾನಿ ಕೂಡ 30 ದಿನ ಜೈಲಿನಲ್ಲಿದ್ದರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ ಎಂದು ಈ ಮಸೂದೆ ಉಲ್ಲೇಖಿಸುತ್ತದೆಯಾದರೂ, ಅದು ಸಮರ್ಥನೆಗಾಗಿ ಬಳಸಲು ಮಾತ್ರವೇ ಇಟ್ಟುಕೊಂಡಿರುವ ಅಂಶವಾಗಿದೆ ಎಂಬುದು ರಹಸ್ಯವೇನಲ್ಲ. ಈ ಮಸೂದೆ ಬಗ್ಗೆ ತೀವ್ರ ತಕರಾರುಗಳು ಮತ್ತು ಚರ್ಚೆ ಜೋರಾಗಿರುವ ಈ ಹೊತ್ತಿನಲ್ಲಿ, ಈ ಹಿಂದೆ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ವಿವಿಧ ಪ್ರಕರಣಗಳಲ್ಲಿ ಸಿಲುಕಿ ಜೈಲಿಗೆ ಹೋಗಬೇಕಾಗಿ ಬಂದದ್ದರ ಬಗ್ಗೆ ನೆನಪಿಸಿಕೊಳ್ಳಬಹುದು.
ಭಾಗ- 1
ಕೇಂದ್ರ ಸರಕಾರ 30 ದಿನಗಳ ಜೈಲುವಾಸದ ನೆಪ ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳನ್ನು ಅಧಿಕಾರದಿಂದ ತೆಗೆದುಹಾಕುವ ಮಸೂದೆ ತರುವ ಮೂಲಕ ನಡೆಸಿರುವ ಹುನ್ನಾರವೇನು ಎಂಬುದು ಚರ್ಚೆಯಾಗುತ್ತಿದೆ. ಹೇಳಲಾಗುತ್ತಿರುವ ಪ್ರಕಾರ, ಈ ಮಸೂದೆ ತರಲು ಪ್ರೇರಣೆಯಾಗಿರುವುದೇ ಅರವಿಂದ ಕೇಜ್ರಿವಾಲ್ ಪ್ರಕರಣ. ದಿಲ್ಲಿಯ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹುದ್ದೆಯಲ್ಲಿದ್ದಾಗಲೇ ಬಂಧನಕ್ಕೆ ಒಳಗಾದರು. ಬಂಧನದ ನಂತರವೂ ಅವರು ರಾಜೀನಾಮೆ ನೀಡಲಿಲ್ಲ. ಈ ವಿಷಯ ನ್ಯಾಯಾಲಯಕ್ಕೆ ಹೋದಾಗ, ಬಂಧಿತ ಸಚಿವರು ರಾಜೀನಾಮೆ ನೀಡಬೇಕೇ ಅಥವಾ ಬೇಡವೇ ಎಂಬುದರ ಕುರಿತು ಸಂವಿಧಾನದಲ್ಲಿ ಯಾವುದೇ ಸ್ಪಷ್ಟತೆ ಇಲ್ಲದಿರುವುದು ಕಂಡುಬಂತು. ಅರವಿಂದ ಕೇಜ್ರಿವಾಲ್ ಘಟನೆಯ ನಂತರ ಸರಕಾರ ಇಂಥದೊಂದು ಕಾನೂನನ್ನು ತಕ್ಷಣ ತರಲಿಲ್ಲ. ಹಾಗೆ ತಂದಿದ್ದರೆ ಅದು ರಾಜಕೀಯ ಉದ್ದೇಶದ್ದೆಂಬ ಅಪವಾದ ಬರುತ್ತದೆ ಎಂದು ಸರಕಾರ ಲೆಕ್ಕ ಹಾಕಿತ್ತು. ಈಗ ದಿಲ್ಲಿಯಲ್ಲಿ ಎಎಪಿಯನ್ನು ಅಧಿಕಾರದಿಂದ ಕೆಳಗಿಳಿಸಿದ ಬಳಿಕ ಇಂಥ ಕಾನೂನು ತರಲು ಮೋದಿ ಸರಕಾರ ಮುಂದಾಗಿದೆ.
ಕೆಲ ವರದಿಗಳು ಹೇಳುತ್ತಿರುವ ಪ್ರಕಾರ, ಸರಕಾರ ಈ ಮಸೂದೆ ಮೂಲಕ ತನ್ನ ಉದ್ದೇಶ ಸಾಧಿಸಿಕೊಳ್ಳಲಿದೆ. ಒಂದು ವೇಳೆ ಮಸೂದೆ ಕಾನೂನಾಗದಿದ್ದರೂ, ವಿರೋಧಪಕ್ಷಗಳು ಜೈಲಿನಲ್ಲಿದ್ದೂ ಅಧಿಕಾರ ಉಳಿಸಿಕೊಳ್ಳುವುದರ ಪರವಾಗಿವೆ ಎಂಬುದನ್ನು ತೋರಿಸುವ ಉದ್ದೇಶ ಸರಕಾರದ್ದು ಎನ್ನಲಾಗುತ್ತಿದೆ. ಅದೇನೇ ಇದ್ದರೂ, ತನಿಖಾ ಏಜೆನ್ಸಿಗಳನ್ನು ಬಳಸಿಕೊಂಡು ಬಿಜೆಪಿಯೇತರ ಮುಖ್ಯಮಂತ್ರಿಗಳನ್ನು ಸಿಲುಕಿಸಲು ಈ ಮಸೂದೆ ಅಸ್ತ್ರವಾಗಲಿದೆ ಎಂಬ ವಿರೋಧ ಪಕ್ಷಗಳ ಆತಂಕ ಸತ್ಯಕ್ಕೆ ದೂರವಾದುದಲ್ಲ. ಯಾಕೆಂದರೆ, ಒಮ್ಮೆ ಜೈಲಿಗೆ ಕಳಿಸಿದ ಮೇಲೆ ಯಾವ ಗಟ್ಟಿ ಪುರಾವೆಗಳಿಲ್ಲದೆಯೂ ಜಾಮೀನು ನಿರಾಕರಿಸುತ್ತ, 30 ದಿನಗಳ ಕಾಲ ಜೈಲಿನಲ್ಲಿರುವಂತೆ ಮಾಡಿದರೆ ಪದಚ್ಯುತಿಗೆ ಅವಕಾಶ ಸಿಗುತ್ತದೆ. ಈ ಹಿಂದಿನ ಉದಾಹರಣೆಗಳನ್ನು ನೋಡಿದರೆ, ಮುಖ್ಯಮಂತ್ರಿಗಳನ್ನು, ಮಾಜಿ ಮುಖ್ಯಮಂತ್ರಿಗಳನ್ನು ಏನೇನೂ ಪುರಾವೆಗಳಿಲ್ಲದೆ ತಿಂಗಳುಗಟ್ಟಲೆ ಜೈಲಿನಲ್ಲಿ ಕೊಳೆಸಲಾಗಿದೆ. ಹಾಗಿರುವಾಗ, ಅಧಿಕಾರದಿಂದ ತೆಗೆಯುವುದೇ ಉದ್ದೇಶವಾಗಿದ್ದರೆ ಅವರನ್ನು 30 ದಿನಗಳ ಕಾಲ ಜೈಲಿನಲ್ಲಿಡುವುದು ತಪ್ಪದೇ ನಡೆಯುತ್ತದೆ ಎಂಬುದು ಈಗ ಮೂಡಿರುವ ಆತಂಕ.
ಬಹುಶಃ ಮೋದಿ ಸರಕಾರ ವಿಪಕ್ಷಗಳ ಸರಕಾರಗಳಿರುವ ರಾಜ್ಯಗಳ ಮೇಲೆ ಕಣ್ಣಿಡದೇ ಇಲ್ಲ. ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ 10 ಮುಖ್ಯಮಂತ್ರಿಗಳಲ್ಲಿ 7 ಮಂದಿ ವಿರೋಧ ಪಕ್ಷದವರಾಗಿದ್ದಾರೆ. ದೇಶದಲ್ಲಿನ ಮುಖ್ಯಮಂತ್ರಿಗಳಲ್ಲಿ ಸುಮಾರು ಶೇ. 42ರಷ್ಟು, ಅಂದರೆ ಹೆಚ್ಚುಕಡಿಮೆ ಅರ್ಧಕ್ಕರ್ಧ ಸಂಖ್ಯೆಯ ಮುಖ್ಯಮಂತ್ರಿಗಳು ತಮ್ಮ ವಿರುದ್ಧ ಕ್ರಿಮಿನಲ್ ಆರೋಪಗಳಿರುವುದನ್ನು ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವಿಶ್ಲೇಷಿಸಿದ ಚುನಾವಣಾ ಅಫಿಡವಿಟ್‌ಗಳ ದತ್ತಾಂಶ ಇದನ್ನು ತೋರಿಸುತ್ತದೆ. ಈ ಹಿನ್ನೆಲೆಯಲ್ಲಿ, ಗಂಭೀರ ಆರೋಪಗಳ ಮೇಲೆ ಬಂಧಿಸಲ್ಪಟ್ಟರೆ ಮುಖ್ಯಮಂತ್ರಿಗಳು, ಸಚಿವರು ಮತ್ತು ಪ್ರಧಾನಿಯನ್ನು ಸಹ ಪದಚ್ಯುತಗೊಳಿಸುವ ಮಸೂದೆಯನ್ನು ಮೋದಿ ಸರಕಾರ ತರುತ್ತಿರುವುದರ ಖಚಿತ ಉದ್ದೇಶ ಏನೆಂಬುದು ಗೊತ್ತಾಗುತ್ತದೆ. ಡಿಸೆಂಬರ್ 2024ರಲ್ಲಿ ಎಡಿಆರ್ ಸಿದ್ಧಪಡಿಸಿದ ವರದಿ ಪ್ರಕಾರ, 31 ಮುಖ್ಯಮಂತ್ರಿಗಳಲ್ಲಿ 13 ಮಂದಿ ತಮ್ಮ ವಿರುದ್ಧದ ಕ್ರಿಮಿನಲ್ ಆರೋಪಗಳ ಬಗ್ಗೆ ಘೋಷಿಸಿದ್ದಾರೆ. ಅವರಲ್ಲಿ 10 ಮುಖ್ಯಮಂತ್ರಿಗಳು ಕೊಲೆ ಯತ್ನ, ಅಪಹರಣ, ಲಂಚ ಮತ್ತು ಕ್ರಿಮಿನಲ್ ಬೆದರಿಕೆಯಂಥ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈ 10 ಮುಖ್ಯಮಂತ್ರಿಗಳಲ್ಲಿ 7 ಮುಖ್ಯಮಂತ್ರಿಗಳು ವಿರೋಧ ಪಕ್ಷದವರೇ ಆಗಿದ್ದಾರೆ. ಇಬ್ಬರು ಬಿಜೆಪಿಯ ಮಿತ್ರಪಕ್ಷಗಳ ಮುಖ್ಯಮಂತ್ರಿಗಳಾದರೆ, ಒಬ್ಬರು ಬಿಜೆಪಿಯವರಾಗಿದ್ದಾರೆ. ಗಂಭೀರ ಆರೋಪಗಳನ್ನು ಎದುರಿಸುತ್ತಿರುವಾಗ, ಅಂಥ ಆರೋಪಗಳಲ್ಲಿ ಗರಿಷ್ಠ ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಯಾಗುವ ಸಾಧ್ಯತೆ ಇರುತ್ತದೆ.
ನೆಪ ಹುಡುಕುವ ಬಿಜೆಪಿಗೆ, ವಿರೋಧ ಪಕ್ಷಗಳ 7 ಮುಖ್ಯಮಂತ್ರಿಗಳ ವಿರುದ್ಧ ಗಂಭೀರ ಪ್ರಕರಣಗಳಿವೆ ಎನ್ನುವುದೇ ಸಾಕು. ಹೀಗಿರುವಾಗ ಈ ಮಸೂದೆ ಬಂದರೆ ಏನೇನಾಗಬಹುದು ಎಂಬುದನ್ನು ಊಹಿಸುವುದು ಕಷ್ಟವೇನಲ್ಲ.
ಭಾರತದಲ್ಲಿ ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಮೊದಲ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್. 1993ರಲ್ಲಿ ತಮ್ಮ ಸರಕಾರ ಉಳಿಸಿಕೊಳ್ಳಲು ಸಂಸದರಿಗೆ ಲಂಚ ನೀಡಿದ ಆರೋಪದ ಮೇಲೆ 2000ದಲ್ಲಿ ಅವರಿಗೆ ಮೂರು ವರ್ಷ ಜೈಲು ಶಿಕ್ಷೆಯಾಯಿತು. ಆದರೆ ತಕ್ಷಣವೇ ಜಾಮೀನು ಪಡೆದು, 2002ರಲ್ಲಿ ಹೈಕೋರ್ಟ್‌ನಿಂದ ಖುಲಾಸೆಗೊಂಡಿದ್ದರಿಂದ ಅವರು ಜೈಲಿಗೆ ಹೋಗಲಿಲ್ಲ.
ಇದಕ್ಕೂ ಮುನ್ನ, 1977ರಲ್ಲಿ ಜೀಪ್ ಖರೀದಿ ಹಗರಣದಲ್ಲಿ ಇಂದಿರಾ ಗಾಂಧಿಯವರನ್ನು ಜನತಾ ಸರಕಾರ ಬಂಧಿಸಿತ್ತಾದರೂ, ಸಾಕ್ಷ್ಯಾಧಾರಗಳ ಕೊರತೆಯಿಂದ ಮರುದಿನವೇ ಅವರನ್ನು ಬಿಡುಗಡೆ ಮಾಡಲಾಗಿತ್ತು.
ಹೀಗೆ ಇಬ್ಬರೂ ಜೈಲುವಾಸದಿಂದ ಪಾರಾಗಿದ್ದರು.
ಇನ್ನು ಜೈಲು ಶಿಕ್ಷೆ ಅನುಭವಿಸಿದ ಮುಖ್ಯಮಂತ್ರಿಗಳು ಮತ್ತು ಮಾಜಿ ಮುಖ್ಯಮಂತ್ರಿಗಳ ಬಗ್ಗೆ ನೋಡುವುದಾದರೆ,
ಅರವಿಂದ ಕೇಜ್ರಿವಾಲ್
ಹುದ್ದೆಯಲ್ಲಿರುವಾಗಲೇ ಬಂಧನಕ್ಕೊಳಗಾಗಿ ಜೈಲುಪಾಲಾದ ಮೊದಲ ಮತ್ತು ಈವರೆಗಿನ ಏಕೈಕ ಮುಖ್ಯಮಂತ್ರಿ ಕೇಜ್ರಿವಾಲ್. ದಿಲ್ಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಅವರನ್ನು ಈ.ಡಿ. 2024ರ ಲೋಕಸಭಾ ಚುನಾವಣೆಗೆ ಕೆಲ ದಿನಗಳ ಮೊದಲು 2024ರ ಮಾರ್ಚ್ 21ರಂದು ಬಂಧಿಸಿತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರಿಗೆ ಸುಪ್ರೀಂ ಕೋರ್ಟ್ ಮೇ 10ರಂದು ಮಧ್ಯಂತರ ಜಾಮೀನು ನೀಡಿತು. ಜೂನ್ 1ರವರೆಗೆ ಪ್ರಚಾರಕ್ಕೆ ಅವಕಾಶ ಕಲ್ಪಿಸಿ, ಜೂನ್ 2ರಂದು ಶರಣಾಗುವಂತೆ ಆದೇಶಿಸಲಾಗಿತ್ತು. ಜುಲೈ 12ರಂದು ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಮಂಜೂರಾದರೂ, ಸಿಬಿಐ ಪ್ರಕರಣವಿದ್ದುದರಿಂದ ಬಿಡುಗಡೆ ಆಗಲಿಲ್ಲ. ಕಡೆಗೆ, ಸೆಪ್ಟಂಬರ್ 13ರಂದು ಸಿಬಿಐ ಪ್ರಕರಣದಲ್ಲಿಯೂ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಬಳಿಕ ಕೇಜ್ರಿವಾಲ್ ಬಿಡುಗಡೆಯಾದರು.
ಜೈಲಿನಲ್ಲಿದ್ದೇ ಅವರು ಅಧಿಕಾರ ನಡೆಸಿದ್ದರೆಂಬುದು ಗಮನಿಸಬೇಕಿರುವ ಸಂಗತಿ. ಹೇಗಾದರೂ ಅವರು ರಾಜೀನಾಮೆ ನೀಡುವಂತೆ ಮಾಡಬೇಕೆಂಬ ಬಿಜೆಪಿಯ ಆಟ ನಡೆಯಲಿಲ್ಲ. ಹಾಗಾಗಿಯೇ, ಈಗ ಈ ಮಸೂದೆ ಮೂಲಕ ಅದು ಹೊಸ ಆಟ ಶುರು ಮಾಡಿದೆ ಎನ್ನಲಾಗುತ್ತಿದೆ.
ಹೇಮಂತ್ ಸೊರೇನ್
ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ನಾಯಕ ಹೇಮಂತ್ ಸೊರೇನ್ ಅವರನ್ನು 2024ರ ಜನವರಿ 31ರಂದು ಭೂ ಹಗರಣದ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಈ.ಡಿ. ಬಂಧಿಸಿತು. ಬಂಧನಕ್ಕೂ ಮುನ್ನ ಸೊರೇನ್ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. ಹೇಮಂತ್ ಸೊರೇನ್ ವಿರುದ್ಧ ಹಣ ವರ್ಗಾವಣೆ ಆರೋಪಗಳು, ಭೂ ಮಾಫಿಯಾ ಜೊತೆ ಸಂಪರ್ಕ, ಕೆಲವು ಸ್ಥಿರ ಆಸ್ತಿಗಳನ್ನು ಅಕ್ರಮವಾಗಿ ಹೊಂದಿದ್ದ ಆರೋಪ ಹೊರಿಸಲಾಗಿತ್ತು. 2024ರ ಜೂನ್‌ನಲ್ಲಿ ಅವರಿಗೆ ಜಾಮೀನು ನೀಡಲಾಯಿತು. ಬಿಡುಗಡೆಯಾದ ಬಳಿಕ ಅವರು ಮತ್ತೆ ಜಾರ್ಖಂಡ್ ಸಿಎಂ ಪಟ್ಟ ವಹಿಸಿಕೊಂಡರು.
ಹೇಮಂತ್ ಸೊರೇನ್ ಬಂಧನಕ್ಕೊಳಗಾದ ಜಾರ್ಖಂಡ್‌ನ ಮೂರನೇ ಮಾಜಿ ಸಿಎಂ ಆಗಿದ್ದರು. ಅವರಿಗಿಂತ ಮೊದಲು ಮಧು ಕೋಡಾ ಮತ್ತು ಹೇಮಂತ್ ಅವರ ತಂದೆ ಶಿಬು ಸೊರೇನ್ ಅವರನ್ನು ಬಂಧಿಸಲಾಗಿತ್ತು.
ಮಧು ಕೋಡಾ
ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಅವರು ತಮ್ಮ ಅಧಿಕಾರಾವಧಿಯಲ್ಲಿನ ಭ್ರಷ್ಟಾಚಾರಕ್ಕಾಗಿ ಜೈಲುಪಾಲಾಗಿದ್ದರು. ಹಣ ವರ್ಗಾವಣೆ ಮತ್ತು ಅಕ್ರಮ ಆಸ್ತಿ ಆರೋಪಗಳು ಅವರ ಮೇಲಿದ್ದವು. ಗಣಿಗಾರಿಕೆ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪಗಳೂ ಇದ್ದವು. 2009ರಲ್ಲಿ ಬಂಧಿಸಿ 2013ರಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಆದರೆ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಅವರ 144 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. 2017ರಲ್ಲಿ ಅವರನ್ನು ತಪ್ಪಿತಸ್ಥರೆಂದು ಘೋಷಿಸಲಾಯಿತು ಮತ್ತು 25 ಲಕ್ಷ ರೂ. ದಂಡದೊಂದಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. 2006ರಿಂದ 2008ರವರೆಗೆ ರಾಜ್ಯವನ್ನು ಮುನ್ನಡೆಸಿದ್ದ ಜಾರ್ಖಂಡ್‌ನ ಅತ್ಯಂತ ಕಿರಿಯ ಮುಖ್ಯಮಂತ್ರಿ ಮಧು ಕೋಡಾ ಅವರ ಅಧಿಕಾರ ಬದುಕು ಹೀಗೆ ಕಳಂಕ ಅಂಟಿಸಿಕೊಂಡಿತು.
ಶಿಬು ಸೊರೇನ್
ಡಿಸೆಂಬರ್ 5, 2006ರಂದು ದಿಲ್ಲಿ ನ್ಯಾಯಾಲಯ ಶಿಬು ಸೊರೇನ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತು. 1994ರಲ್ಲಿ ಅವರ ಖಾಸಗಿ ಕಾರ್ಯದರ್ಶಿ ಶಶಿನಾಥ್ ಝಾ ಅವರ ಅಪಹರಣ ಮತ್ತು ಕೊಲೆಯಲ್ಲಿ ಅವರ ಪಾತ್ರಕ್ಕಾಗಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಆ ಸಮಯದಲ್ಲಿ ಅವರು ಪ್ರಧಾನಿ ಮನಮೋಹನ್ ಸಿಂಗ್ ಸರಕಾರದಲ್ಲಿ ಕಲ್ಲಿದ್ದಲು ಸಚಿವರಾಗಿದ್ದರು. ಆಗಸ್ಟ್ 2007ರಲ್ಲಿ ದಿಲ್ಲಿ ಹೈಕೋರ್ಟ್ ಖುಲಾಸೆಗೊಳಿಸಿತು. ಆ ತೀರ್ಪನ್ನು ಸುಪ್ರೀಂ ಕೋರ್ಟ್ ಎಪ್ರಿಲ್ 2018ರಲ್ಲಿ ಎತ್ತಿಹಿಡಿಯಿತು. ಜಾರ್ಖಂಡ್‌ನ 3ನೇ ಮುಖ್ಯಮಂತ್ರಿಯಾಗಿ ಶಿಬು ಸೊರೇನ್ ಮೊದಲು 2005ರಲ್ಲಿ ಮಾರ್ಚ್ 2ರಿಂದ ಮಾರ್ಚ್ 12ರವರೆಗೆ, ನಂತರ 2008 ರಿಂದ 2009ರವರೆಗೆ ಮತ್ತು 2009ರಿಂದ 2010ರವರೆಗೆ ಅಧಿಕಾರದಲ್ಲಿದ್ದರು.
ಲಾಲು ಪ್ರಸಾದ್ ಯಾದವ್
ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರನ್ನು ಮೇವು ಹಗರಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಹಾಕಲಾಯಿತು. ಸಾರ್ವಜನಿಕ ಹಣವನ್ನು ಗಣನೀಯ ಪ್ರಮಾಣದಲ್ಲಿ ಬೇರೆಡೆಗೆ ತಿರುಗಿಸಿದ ಆರೋಪ ಅವರ ಮೇಲಿತ್ತು. ಅವರು ರಾಜೀನಾಮೆ ನೀಡಬೇಕಾಯಿತು ಮತ್ತು ಅವರ ಪತ್ನಿ ರಾಬ್ಡಿದೇವಿಯನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಲಾಯಿತು. 2013ರಲ್ಲಿ ಲಾಲು ಪ್ರಸಾದ್ ಒಂದು ಪ್ರಕರಣದಲ್ಲಿ ತಪ್ಪಿತಸ್ಥರೆಂದು ಕಂಡುಬಂತು. ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು ಮತ್ತು ಚುನಾಯಿತ ಹುದ್ದೆ ಹೊಂದುವುದರಿಂದ ಅವರನ್ನು ಅನರ್ಹಗೊಳಿಸಲಾಯಿತು. ಲಾಲೂ ಪ್ರಸಾದ್ ಯಾದವ್ 1990 ಮತ್ತು 1997ರ ನಡುವೆ ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿದ್ದರು.