Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ವಾರ್ತಾ ಭಾರತಿ ಅವಲೋಕನ
  5. ಇತಿಹಾಸದ ಪುಟಗಳನ್ನು ನೋಡಿದಾಗ...

ಇತಿಹಾಸದ ಪುಟಗಳನ್ನು ನೋಡಿದಾಗ ಉಪರಾಷ್ಟ್ರಪತಿಯಾಗಿ ಧನ್ಕರ್ ಪ್ರಕರಣದಷ್ಟು ಕಳಂಕಿತವಾದದ್ದು ಮತ್ತೊಂದಿದೆಯೇ?

ಆರ್.ಜೀವಿಆರ್.ಜೀವಿ29 July 2025 3:34 PM IST
share
ಇತಿಹಾಸದ ಪುಟಗಳನ್ನು ನೋಡಿದಾಗ ಉಪರಾಷ್ಟ್ರಪತಿಯಾಗಿ ಧನ್ಕರ್ ಪ್ರಕರಣದಷ್ಟು ಕಳಂಕಿತವಾದದ್ದು ಮತ್ತೊಂದಿದೆಯೇ?
ಉಪ ರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನ್ಕರ್ ರಾಜೀನಾಮೆ ನೀಡುವುದರೊಂದಿಗೆ, ಸಾಂವಿಧಾನಿಕ ಘನತೆ ಕಳೆದವರೊಬ್ಬರ ನಿರ್ಗಮನವಾಗಿದೆ. ರಾಜ್ಯಪಾಲರಾಗಿದ್ದಾಗಲೂ ಉಪ ರಾಷ್ಟ್ರಪತಿ ಹುದ್ದೆಗೇರಿದ ನಂತರವೂ ಬಿಜೆಪಿಗಾಗಿ ಮತ್ತು ಮೋದಿ ಸರಕಾರಕ್ಕಾಗಿಯೇ ದುಡಿದವರೆಂಬ ಕಳಂಕ ಹೊತ್ತುಕೊಂಡೇ ಅವರು ಹೋಗಿದ್ದಾರೆ ಮತ್ತು ಹಾಗೆ ತನಗಾಗಿಯೇ ಕೆಲಸ ಮಾಡಿದ್ದ ವ್ಯಕ್ತಿಯನ್ನು ಕಡೆಗೆ ಕಣ್ಣೆತ್ತಿಯೂ ನೋಡದೆ ಬಿಜೆಪಿ ಹೊರಹಾಕಿದೆ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ದೋಷಾರೋಪ ನಿರ್ಣಯಕ್ಕೆ ಗುರಿಯಾದ ಮೊದಲ ಉಪ ರಾಷ್ಟ್ರಪತಿ ಎಂಬುದು ಕೂಡ ಅವರ ಹೆಸರಿನಲ್ಲಿರುತ್ತದೆ. ಸ್ವಲ್ಪ ಇತಿಹಾಸದ ಪುಟಗಳಲ್ಲಿ ನೋಡಿದರೆ, ಧನ್ಕರ್ ಪ್ರಕರಣದಷ್ಟು ಕಳಂಕಿತವಾದದ್ದು ಮತ್ತೊಂದು ಕಾಣಿಸುವುದಿಲ್ಲ. ಸಂಸದೀಯ ನೆಲೆಯಲ್ಲಿ ಸರಕಾರದ ಜೊತೆ ಸಂಘರ್ಷಕ್ಕೆ ನಿಂತಿದ್ದವರು ಇದ್ದಿರಬಹುದೇ ಹೊರತು ತೀರಾ ಈ ಮಟ್ಟಕ್ಕೆ ಸಂವಿಧಾನದ ಘನತೆ ಕಳೆದವರಿಲ್ಲ.

ಭಾಗ- 1

ಸಂಸತ್ತಿನ ಮಳೆಗಾಲದ ಅಧಿವೇಶನ ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ, ಜುಲೈ 21ರಂದು ಉಪ ರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನ್ಕರ್ ರಾಜೀನಾಮೆ ನೀಡಿದರು. ಆರೋಗ್ಯದ ಕಾರಣವನ್ನು ಅವರು ನೀಡಿದ್ದರೂ, ಅದು ನಿಜವಾದ ಕಾರಣವಲ್ಲ ಎಂಬುದು ಕೂಡಲೇ ಸ್ಪಷ್ಟವಾಗಿಬಿಟ್ಟಿತ್ತು. ಬಿಜೆಪಿಗಾಗಿ ಎಲ್ಲ ಬೆಲೆ ತೆತ್ತಿದ್ದ ಧನ್ಕರ್ ಕಡೆಗೆ ಅದೇ ಬಿಜೆಪಿಯ ದೃಷ್ಟಿಯಲ್ಲಿ ಯಾವ ಮರ್ಯಾದೆಗೂ ಅರ್ಹರಲ್ಲದವರಂತೆ ನಿರ್ಗಮಿಸಬೇಕಾಯಿತು.

ಧನ್ಕರ್ ತಮ್ಮ ಪತನವನ್ನು ತಾವೇ ಬರೆದುಕೊಂಡ ವ್ಯಕ್ತಿ ಎಂಬುದು ಅವರ ನಡೆ ಮತ್ತು ನುಡಿಯಲ್ಲೇ ಗೊತ್ತಾಗುತ್ತದೆ. ಆಗಸ್ಟ್ 11, 2022ರಂದು ಅಧಿಕಾರ ವಹಿಸಿಕೊಂಡಾಗಿನಿಂದ ಅವರು ಪ್ರತೀ ಹಂತದಲ್ಲೂ ಅವರೊಬ್ಬ ಬಿಜೆಪಿ ರಾಜಕಾರಣಿಯಾಗಿಯೇ ವರ್ತಿಸಿದ್ದರು.

ರಾಜ್ಯಸಭೆ ಅಧ್ಯಕ್ಷರಾಗಿಯೂ ಅವರ ವಿಚಿತ್ರ ಮೊಂಡುತನ, ಅವರ ಬಿಜೆಪಿ ಪಕ್ಷಪಾತಿ ಪಾತ್ರದ ಭಾಗದಂತಿತ್ತು.

ಮೊದಲನೆಯದಾಗಿ, ಧನ್ಕರ್ ಅವರು ಸಂವಿಧಾನದ ಮೂಲ ರಚನೆ ಸಿದ್ಧಾಂತವನ್ನು ಪ್ರಶ್ನಿಸಿದ್ದರು. ಮೂಲ ರಚನೆ ಸಿದ್ಧಾಂತವೆಂದರೆ, ಭಾರತೀಯ ಸಂವಿಧಾನದ ಮೂಲಭೂತ ಲಕ್ಷಣಗಳನ್ನು ಸಂಸತ್ತು ತಿದ್ದುಪಡಿ ಮಾಡುವ ಮೂಲಕ ಬದಲಾಯಿಸಲಾಗುವುದಿಲ್ಲ ಎಂಬುದು. ಅದನ್ನು ಧನ್ಕರ್ ಪ್ರಶ್ನಿಸಿದ್ದರು. ಅದು ಅವರ ಅಧಿಕಾರಾವಧಿಯ ಅತ್ಯಂತ ವಿವಾದಾತ್ಮಕ ಹೇಳಿಕೆಗಳಲ್ಲಿ ಒಂದು. ಈ ಹೇಳಿಕೆಗೆ ವಿವಿಧ ವಲಯಗಳಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. ಅದರ ನಂತರ ಮತ್ತೊಂದೆಡೆ ಮಾತನಾಡಿದ ಆಗಿನ ಸಿಜೆಐ ಡಿ.ವೈ. ಚಂದ್ರಚೂಡ್ ಅವರು ಕೂಡ, ಮೂಲಭೂತ ರಚನೆ ಸಿದ್ಧಾಂತದ ಮಹತ್ವವನ್ನು ಪುನರುಚ್ಚರಿಸಿದ್ದರು. ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್‌ನ 2015ರ ತೀರ್ಪನ್ನು ಧನ್ಕರ್ ಟೀಕಿಸಿದ್ದರು. ಚುನಾಯಿತ ಸರಕಾರ ಅಂಗೀಕರಿಸಿದ ಕಾನೂನುಗಳನ್ನು ನ್ಯಾಯಾಧೀಶರು ರದ್ದುಗೊಳಿಸುವುದು ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದೆ ಎಂದಿದ್ದರು.

ಮೊನ್ನೆ ಎಪ್ರಿಲ್‌ನಲ್ಲಿ, ರಾಷ್ಟ್ರಪತಿಗೆ ಕಾಲಮಿತಿ ನಿಗದಿಪಡಿಸಿದ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿಯೂ ಧನ್ಕರ್ ಹೇಳಿಕೆ ನೀಡಿದ್ದರು. ರಾಷ್ಟ್ರಪತಿಗಳಿಗೆ ಕೋರ್ಟ್ ನಿರ್ದೇಶನ ನೀಡಲು ಸಾಧ್ಯವಿಲ್ಲ. ಇತ್ತೀಚಿನ ತೀರ್ಪಿನ ಮೂಲಕ ರಾಷ್ಟ್ರಪತಿಗಳಿಗೆ ನಿರ್ದೇಶನ ನೀಡಲಾಗಿದೆ. ನಾವು ಎಲ್ಲಿಗೆ ಹೋಗುತ್ತಿದ್ದೇವೆ? ದೇಶದಲ್ಲಿ ಏನಾಗುತ್ತಿದೆ ಎಂದು ಧನ್ಕರ್ ಕಳವಳ ವ್ಯಕ್ತಪಡಿಸಿದ್ದರು. ರಾಷ್ಟ್ರಪತಿಗೆ ಕಾಲಮಿತಿ ನಿಗದಿ ಮಾಡಿರುವ ಕ್ರಮ ಸಂಸತ್ತಿಗೂ ಮೀರಿದ ವರ್ತನೆ ಎಂದು ಧನ್ಕರ್ ಆಕ್ಷೇಪ ವ್ಯಕ್ತಪಡಿಸಿದ್ದರು. ಅವರ ಈ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ಎರಡನೆಯದಾಗಿ, ವಿರೋಧ ಪಕ್ಷಗಳೊಂದಿಗೆ ಅವರು ಸತತ ಸಂಘರ್ಷಗಳನ್ನು ಮಾಡುತ್ತಲೇ ಇದ್ದರು. ಡಿಸೆಂಬರ್ 2023ರಲ್ಲಿ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರದ ಬಗ್ಗೆ ಸದನದಲ್ಲಿ ಪ್ರತಿಭಟನೆಗಿಳಿದಿದ್ದ ವಿರೋಧ ಪಕ್ಷದ 20ಕ್ಕೂ ಹೆಚ್ಚು ಸದಸ್ಯರನ್ನು ಅಶಿಸ್ತಿನ ನಡವಳಿಕೆ ಮತ್ತು ಉದ್ದೇಶಪೂರ್ವಕ ಅಡ್ಡಿ ಆರೋಪದಲ್ಲಿ ಅಮಾನತುಗೊಳಿಸಿದ್ದರು. ಆಗಸ್ಟ್ 2023ರಲ್ಲಿ, ಧನ್ಕರ್ ಮಾತಿನ ಧಾಟಿ ಬಗ್ಗೆ ಜಯಾ ಬಚ್ಚನ್ ಕಳವಳ ವ್ಯಕ್ತಪಡಿಸಿದಾಗಲೂ, ಮತ್ತೊಮ್ಮೆ ಅವರು ವಿವಾದದ ಕೇಂದ್ರವಾಗಿದ್ದರು. ವಿರೋಧ ಪಕ್ಷದ ಭಾಷಣಕಾರರನ್ನು ತಡೆಯುವುದು, ಉದ್ದೇಶಪೂರ್ವಕವಾಗಿ ಅವರ ಪ್ರಶ್ನೆಗಳನ್ನು ನಿರ್ಲಕ್ಷಿಸುವುದು, ಅವರಿಗೆ ಅವಕಾಶ ನಿರಾಕರಿಸುವುದು ಮತ್ತು ಆಡಳಿತ ಪಕ್ಷದ ಸದಸ್ಯರಿಗೆ ಸದನದಲ್ಲಿ ಹೆಚ್ಚಿನ ಸಮಯವನ್ನು ಕೊಡುವುದು ಅವರ ವಿರುದ್ಧ ನಿರಂತರವಾಗಿ ಕೇಳಿಬರುತ್ತಿದ್ದ ಆರೋಪಗಳಾಗಿದ್ದವು.

ಹೆಚ್ಚಿನ ಸಂಖ್ಯೆಯ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದ ಅಧಿವೇಶನಗಳಲ್ಲಿ, ರಾಜ್ಯಸಭೆಯಲ್ಲಿ ಹಲವಾರು ಮಸೂದೆಗಳನ್ನು ಚರ್ಚೆಯಿಲ್ಲದೆ ಅಂಗೀಕರಿಸಲು ಅವಕಾಶ ಮಾಡಿಕೊಟ್ಟಿದ್ದ ಧನ್ಕರ್ ನಡೆಗೆ ಕೂಡ ಆಕ್ಷೇಪ ವ್ಯಕ್ತವಾಗುತ್ತಲೇ ಇತ್ತು. ಧನ್ಕರ್ ಅವರ ಈ ಮಾದರಿ, ಸಂಸದೀಯ ಸಭ್ಯತೆಯನ್ನು ಮತ್ತಷ್ಟು ಕುಗ್ಗಿಸಿತೆಂಬ ಟೀಕೆಯನ್ನು ಎದುರಿಸಬೇಕಾಯಿತು. ‘‘ಕೆಲವರು ಭಾರತೀಯ ಪ್ರಜಾಪ್ರಭುತ್ವವನ್ನು ನಾಶಮಾಡಲು ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದಾರೆ, ಅಂಥ ನಡವಳಿಕೆಯನ್ನು ದೇಶದ್ರೋಹ ಎಂದು ಪರಿಗಣಿಸಬೇಕು’’ ಎಂದು ಧನ್ಕರ್ ಮೇ 2024ರಲ್ಲಿ ಹೇಳಿದ್ದರು. ಈ ಹೇಳಿಕೆಯನ್ನು ಸರ್ವಾಧಿಕಾರಿ ಮತ್ತು ಭಿನ್ನಮತವನ್ನು ಸಹಿಸದ ಧೋರಣೆ ಎಂದೇ ವಿಶ್ಲೇಷಿಸಲಾಗಿತ್ತು.

ಮೂರನೆಯದಾಗಿ, ಈ.ಡಿ. ಮತ್ತು ಸಿಬಿಐ ಅನ್ನು ಧನ್ಕರ್ ಸಮರ್ಥಿಸಿಕೊಂಡದ್ದು ವಿಚಿತ್ರವಾಗಿತ್ತು. ಅಕ್ಟೋಬರ್ 2024ರಲ್ಲಿ ಅವರು ಈ.ಡಿ. ಮತ್ತು ಸಿಬಿಐನಂತಹ ತನಿಖಾ ಏಜನ್ಸಿಗಳನ್ನು ಬಹಿರಂಗವಾಗಿಯೇ ಬೆಂಬಲಿಸಿದ್ದರು.

ನಾಲ್ಕನೆಯದಾಗಿ, ಡಿಸೆಂಬರ್ 2023ರ ಜೆಎನ್‌ಯು ಘಟಿಕೋತ್ಸವದಲ್ಲಿನ ಅವರ ವಿವಾದಾತ್ಮಕ ಭಾಷಣ. ಚುನಾಯಿತವಲ್ಲದ ಸಂಸ್ಥೆಗಳು ಸಂಸತ್ತಿನ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ಮಾಡುವುದರ ವಿರುದ್ಧ ಅವರು ಆ ಭಾಷಣದಲ್ಲಿ ಎಚ್ಚರಿಕೆ ನೀಡಿದ್ದರು. ಬುದ್ಧಿಜೀವಿಗಳ ಒಂದು ವಿಭಾಗ ಬೌದ್ಧಿಕ ಅಪ್ರಾಮಾಣಿಕತೆ ಮತ್ತು ಸೆಲೆಕ್ಟಿವ್ ಆದ ಸಿಟ್ಟನ್ನು ತೋರಿಸುತ್ತದೆಂದು ಧನ್ಕರ್ ಆರೋಪಿಸಿದ್ದರು.

ಇನ್ನು, ಧನ್ಕರ್ ಪ್ರಕರಣದ ಹಿನ್ನೆಲೆಯಲ್ಲಿ ಭಾರತದ ರಾಷ್ಟ್ರಪತಿಗಳು ಮತ್ತು ಅವರ ಕೆಲವು ವಿವಾದಗಳನ್ನು ನೆನಪು ಮಾಡಿಕೊಳ್ಳಬಹುದು. ಆದರೆ, ಅವುಗಳ ಸ್ವರೂಪ ಬೇರೆಯದೇ ಆಗಿದೆ ಎಂಬುದನ್ನು ಹೇಳಲೇಬೇಕು.

ಸರ್ವಪಲ್ಲಿ ರಾಧಾಕೃಷ್ಣನ್

ಭಾರತದ ಎರಡನೇ ರಾಷ್ಟ್ರಪತಿ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟಂಬರ್ 5ನ್ನು ಶಿಕ್ಷಕರ ದಿನವೆಂದೇ ಆಚರಿಸಲಾಗುತ್ತದೆ. ಆದರೆ ಅವರದೇ ವಿದ್ಯಾರ್ಥಿಯೊಬ್ಬರು ಅವರ ಮೇಲೆ ಕೃತಿಚೌರ್ಯದ ಆರೋಪ ಹೊರಿಸಿದ್ದು ವಿಪರ್ಯಾಸ. ಒಂದೆಡೆ ಉಲ್ಲೇಖವಾಗಿರುವ ಪ್ರಕಾರ, ಅದು 1929 ರಲ್ಲಿ ನಡೆದ ಘಟನೆ. ಮೀರತ್ ಕಾಲೇಜಿನಲ್ಲಿ ತತ್ವಶಾಸ್ತ್ರದ ಉಪನ್ಯಾಸಕರಾಗಿದ್ದ ಜದುನಾಥ್ ಸಿನ್ಹಾ ಅವರು ತಮ್ಮ Indian Psychology of Perception ಎಂಬ ಪ್ರಬಂಧದ ಮೊದಲ ಎರಡು ಭಾಗಗಳಿಂದ ಡಾ. ರಾಧಾಕೃಷ್ಣನ್ ವಿಷಯವನ್ನು ಕದ್ದಿದ್ದಾರೆ ಎಂದು ಆರೋಪಿಸಿದರು. ಸಿನ್ಹಾ 1922ರಲ್ಲಿ ಕಲ್ಕತ್ತಾ ವಿಶ್ವವಿದ್ಯಾನಿಲಯದಲ್ಲಿ ಈ ಪ್ರಬಂಧವನ್ನು ಸಲ್ಲಿಸಿದ್ದರು. ಅವರ ಕೃತಿಯನ್ನು ಪರಿಶೀಲಿಸಿದ ಬೋಧಕರಲ್ಲಿ ರಾಧಾಕೃಷ್ಣನ್ ಒಬ್ಬರಾಗಿದ್ದರು.

1928ರಲ್ಲಿ ರಾಧಾಕೃಷ್ಣನ್ ಅವರುThe Vedanta According to Sankara and Ramanuja ಎಂಬ ಪುಸ್ತಕ ಪ್ರಕಟಿಸಿದಾಗ, ಅದು ತಮ್ಮ ಇಂಡಿಯನ್ ಫಿಲಾಸಫಿ ಸಂಪುಟ 2ರ ಅಧ್ಯಾಯ 8 ಮತ್ತು 9ರ ಕೃತಿಚೌರ್ಯ ಎಂದು ಸಿನ್ಹಾ ಆರೋಪಿಸಿದ್ದರು. ಹಕ್ಕುಸ್ವಾಮ್ಯ ಉಲ್ಲಂಘನೆ ಕುರಿತು ನ್ಯಾಯಾಲಯದ ವಿಚಾರಣೆಗಳು ನಡೆದವು. ಅಂತಿಮವಾಗಿ, ರಾಧಾಕೃಷ್ಣನ್ ಹೆಚ್ಚು ಪ್ರಭಾವಶಾಲಿ ಎಂದು ಸಾಬೀತಾಯಿತು ಮತ್ತು ವಿಷಯ ನ್ಯಾಯಾಲಯದ ಹೊರಗೆ ಇತ್ಯರ್ಥವಾಯಿತು. ಅವರ ಮೇಲೆ ಸಿನ್ಹಾ ಆ ಕಾಲಕ್ಕೆ ದೊಡ್ಡ ಮೊತ್ತವಾಗಿದ್ದ 20,000 ರೂ.ಗಳಿಗೆ ಮೊಕದ್ದಮೆ ಹೂಡಲು ಮುಂದಾದಾಗ, ರಾಧಾಕೃಷ್ಣನ್ ಒಂದು ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟ ಪ್ರತಿದಾವೆ ಹೂಡಲು ನಿಂತಿದ್ದರು. ಕಡೆಗೆ ಅವರಿಬ್ಬರ ನಡುವೆ ನಡೆದ ಸಂಧಾನದೊಂದಿಗೆ, ಸಿನ್ಹಾ ತಮ್ಮ ಆರೋಪ ಹಿಂದೆಗೆದುಕೊಂಡಿದ್ದರು.

ವಿ.ವಿ. ಗಿರಿ

ವಿ.ವಿ. ಗಿರಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅದಕ್ಕೆ ಅವರು ಪ್ರಧಾನಿ ಇಂದಿರಾ ಗಾಂಧಿಯವರ ಬೆಂಬಲ ಪಡೆದ ರೀತಿಯ ಹಿನ್ನೆಲೆಯಲ್ಲಿ, ರಾಷ್ಟ್ರಪತಿಯಾಗಿ ಅವರ ಆಯ್ಕೆ ವಿವಾದಾತ್ಮಕವಾಗಿತ್ತು. ಗಿರಿಯವರ ಗೆಲುವು ಕಾಂಗ್ರೆಸ್‌ನಲ್ಲಿ ಇಂದಿರಾ ಗಾಂಧಿಯವರ ಪ್ರಭಾವ ಎಂಥದೆಂಬುದನ್ನು ಸಾಬೀತು ಮಾಡಿತ್ತು. ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಗಿರಿ ಉಪ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದು ಕೂಡ ರಾಜಕೀಯ ಬಿರುಗಾಳಿಯನ್ನೆಬ್ಬಿಸಿತ್ತು.

ವಿ.ವಿ. ಗಿರಿ ಅವರು 1969ರಲ್ಲಿ ಭಾರತದ ನಾಲ್ಕನೇ ರಾಷ್ಟ್ರಪತಿಯಾದರು. ಇದು ಅತ್ಯಂತ ನಾಟಕೀಯ ಮತ್ತು ರಾಜಕೀಯವಾಗಿ ಬಿರುಸಿನಿಂದ ಕೂಡಿದ ಚುನಾವಣೆಯಾಗಿತ್ತು. ಅವರು ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾದ ಏಕೈಕ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಅವರ ಈ ಹಾದಿ ಅನನ್ಯವಾಗಿತ್ತು.

1969ರ ಮೇ 3ರಂದು, ಆಗಿನ ಭಾರತದ ರಾಷ್ಟ್ರಪತಿ ಡಾ. ಝಾಕಿರ್ ಹುಸೇನ್ ಅವರು ಅಧಿಕಾರದಲ್ಲಿದ್ದಾಗಲೇ ನಿಧನರಾದರು.

ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದು ಅಭೂತಪೂರ್ವ ಘಟನೆಯಾಗಿತ್ತು. ಸಂವಿಧಾನದ ಪ್ರಕಾರ, ಹೊಸ ರಾಷ್ಟ್ರಪತಿ ಆಯ್ಕೆಯಾಗುವವರೆಗೆ ಉಪರಾಷ್ಟ್ರಪತಿ ಗಿರಿ ಅವರಿಗೆ ಹುಸೇನ್ ಅವರ ನಿಧನದ ದಿನವೇ ಹಂಗಾಮಿ ರಾಷ್ಟ್ರಪತಿಯಾಗಿ ಪ್ರಮಾಣವಚನ ಮಾಡಿಸಲಾಯಿತು. ಅವರು ಸುಮಾರು ಮೂರು ತಿಂಗಳು ಈ ಹುದ್ದೆಯಲ್ಲಿ ಸೇವೆ ಸಲ್ಲಿಸಿದರು.

ರಾಷ್ಟ್ರಪತಿ ಹುಸೇನ್ ಅವರ ನಿಧನವು ಆಡಳಿತಾರೂಢ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದೊಳಗೆ ದೊಡ್ಡ ಮಟ್ಟದ ಅಧಿಕಾರ ಹೋರಾಟಕ್ಕೆ ಕಾರಣವಾಯಿತು.

ಪಕ್ಷವು ಕೆ. ಕಾಮರಾಜ್ ನೇತೃತ್ವದ ಸಿಂಡಿಕೇಟ್ ಮತ್ತು ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಬಣದ ನಡುವೆ ತೀವ್ರವಾಗಿ ವಿಭಜಿತವಾಗಿತ್ತು. ಸಿಂಡಿಕೇಟ್ ರಾಷ್ಟ್ರಪತಿ ಸ್ಥಾನಕ್ಕೆ ತಮ್ಮ ಆದ್ಯತೆಯ ಅಭ್ಯರ್ಥಿ ನೀಲಂ ಸಂಜೀವ ರೆಡ್ಡಿ ಅವರನ್ನು ನಾಮನಿರ್ದೇಶನ ಮಾಡಿತು. ಆ ಮೂಲಕ ಉಪರಾಷ್ಟ್ರಪತಿಯನ್ನು ಹೆಚ್ಚಾಗಿ ರಾಷ್ಟ್ರಪತಿ ಹುದ್ದೆಗೆ ಪರಿಗಣಿಸುವ ಸಂಪ್ರದಾಯವನ್ನು ಮುರಿಯಿತು. ಪಕ್ಷದೊಳಗೆ ಹಿಡಿತಕ್ಕಾಗಿ ಪ್ರಯತ್ನಿಸುತ್ತಿದ್ದ ಇಂದಿರಾ ಗಾಂಧಿ, ಆರಂಭದಲ್ಲಿ ಬಾಬು ಜಗಜೀವನ್ ರಾಮ್ ಅವರ ಹೆಸರನ್ನು ಪ್ರಸ್ತಾವಿಸಿದರು, ಆದರೆ ಇದನ್ನು ಸಿಂಡಿಕೇಟ್ ತಿರಸ್ಕರಿಸಿತು. ಕಾಂಗ್ರೆಸ್ ಪಕ್ಷವು ಸಂಜೀವ ರೆಡ್ಡಿ ಅವರನ್ನು ಅಧಿಕೃತವಾಗಿ ನಾಮನಿರ್ದೇಶನ ಮಾಡಿತು. ಉಪರಾಷ್ಟ್ರಪತಿ ವಿ.ವಿ. ಗಿರಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದರು. ಅದೊಂದು ಧೈರ್ಯಶಾಲಿ ಮತ್ತು ಅಭೂತಪೂರ್ವ ಹೆಜ್ಜೆಯಾಗಿತ್ತು. ತಮ್ಮ ರಾಷ್ಟ್ರಪತಿ ಬಿಡ್ ಅನ್ನು ಮುಂದುವರಿಸಲು, ಗಿರಿ ಅವರು 1969ರ ಜುಲೈ 20ರಂದು ಉಪರಾಷ್ಟ್ರಪತಿ ಹುದ್ದೆ ಮತ್ತು ಹಂಗಾಮಿ ರಾಷ್ಟ್ರಪತಿ ಹುದ್ದೆ ಎರಡಕ್ಕೂ ರಾಜೀನಾಮೆ ನೀಡಿದರು.

ಈ ರಾಜೀನಾಮೆ ಒಂದು ವಿಶಿಷ್ಟ ಸಾಂವಿಧಾನಿಕ ಪರಿಸ್ಥಿತಿಯನ್ನು ಸೃಷ್ಟಿಸಿತು. ಏಕೆಂದರೆ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ಎರಡೂ ಹುದ್ದೆಗಳು ಖಾಲಿಯಾಗಿದ್ದವು. ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ಮುಹಮ್ಮದ್ ಹಿದಾಯತುಲ್ಲಾ ಅವರು ಗಿರಿ ಅವರು ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸುವವರೆಗೆ ಹಂಗಾಮಿ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಳ್ಳಬೇಕಾಯಿತು.

ರಾಷ್ಟ್ರಪತಿ ಚುನಾವಣೆ ಕಾಂಗ್ರೆಸ್ ಪಕ್ಷದ ನಿಯಂತ್ರಣಕ್ಕಾಗಿ ನೇರ ಯುದ್ಧಭೂಮಿಯಾಯಿತು. ಚುನಾವಣೆಗೆ ಕೇವಲ ಎರಡು ದಿನಗಳ ಮೊದಲು, ಇಂದಿರಾ ಗಾಂಧಿ ತಮ್ಮ ಪಕ್ಷದ ಸದಸ್ಯರಿಗೆ ಅಂತಃಸಾಕ್ಷಿಯ ಪ್ರಕಾರ ಮತ ಚಲಾಯಿಸಲು ಮನವಿ ಮಾಡಿದರು. ಇದು ಮೂಲತಃ ಕಾಂಗ್ರೆಸ್ ಶಾಸಕರು ವಿ.ವಿ. ಗಿರಿ ಅವರಿಗೆ ಮತ ಹಾಕಲು ಸ್ವತಂತ್ರರು ಎಂದು ಅರ್ಥೈಸಿತು. ಸಿಂಡಿಕೇಟ್, ಪಕ್ಷದ ಅಧಿಕೃತ ಅಭ್ಯರ್ಥಿ ರೆಡ್ಡಿ ಅವರಿಗೆ ತಮ್ಮ ಎರಡನೇ ಆದ್ಯತೆಯ ಮತಗಳನ್ನು ಹಾಕಲು ಸ್ವತಂತ್ರ ಮತ್ತು ಜನಸಂಘದಂತಹ ವಿರೋಧ ಪಕ್ಷಗಳನ್ನು ಸಂಪರ್ಕಿಸಿದ್ದೇ ಇಂದಿರಾಗೆ ಲಾಭವಾಯಿತು. ಇಂದಿರಾ ಗಾಂಧಿ ಈ ವಿಷಯವನ್ನು ಸಿಂಡಿಕೇಟ್‌ನ ನಡೆಯನ್ನು ಖಂಡಿಸಲು ಮತ್ತು ಗಿರಿ ಅವರಿಗೆ ಬೆಂಬಲವನ್ನು ಗಳಿಸಲು ಬಳಸಿಕೊಂಡರು.

share
ಆರ್.ಜೀವಿ
ಆರ್.ಜೀವಿ
Next Story
X