ಇತಿಹಾಸದ ಪುಟಗಳನ್ನು ನೋಡಿದಾಗ ಉಪರಾಷ್ಟ್ರಪತಿಯಾಗಿ ಧನ್ಕರ್ ಪ್ರಕರಣದಷ್ಟು ಕಳಂಕಿತವಾದದ್ದು ಮತ್ತೊಂದಿದೆಯೇ?

ಭಾಗ- 2
1969ರ ಆಗಸ್ಟ್ 16 ರಂದು ನಡೆದ ಈ ಚುನಾವಣೆ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ನಡೆದ ಅತ್ಯಂತ ಕಠಿಣ ಸ್ಪರ್ಧೆಯಾಗಿತ್ತು. ವಿ.ವಿ. ಗಿರಿ ಅವರು ಅಲ್ಪ ಮತಗಳ ಅಂತರದಿಂದ ಚುನಾವಣೆಯಲ್ಲಿ ಗೆದ್ದರು. ಗಿರಿ ಅವರು 4,20,077 ಮತಗಳನ್ನು ಪಡೆದು ನೀಲಂ ಸಂಜೀವ ರೆಡ್ಡಿ ಅವರನ್ನು ಸೋಲಿಸಿದರು. ರೆಡ್ಡಿ ಅವರು 4,05,427 ಮತಗಳನ್ನು ಪಡೆದರು. ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ರೆಡ್ಡಿ ಅವರಿಗಿಂತ ಕಾಂಗ್ರೆಸ್ ಪಕ್ಷದಿಂದ ಗಿರಿ ಅವರಿಗೆ ದೊಡ್ಡ ಪ್ರಮಾಣದ ಮತ ಹೋಗಿರುವುದು ಸ್ಪಷ್ಟವಾಗಿ ಕಾಣಿಸಿತು.
1969ರ ಆಗಸ್ಟ್ 24ರಂದು, ವಿ.ವಿ. ಗಿರಿ ಅವರು ಭಾರತದ ನಾಲ್ಕನೇ ರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ತಮ್ಮ ಪಕ್ಷದ ಭಿನ್ನಮತೀಯ ಸಿಂಡಿಕೇಟ್ ವಿರುದ್ಧ ಇಂದಿರಾ ಗೆದ್ದರು. ವಿ.ವಿ. ಗಿರಿ ಅವರ ಆಯ್ಕೆಯು ಭಾರತದ ರಾಜಕೀಯ ಇತಿಹಾಸದಲ್ಲಿ ಒಂದು ಹೆಗ್ಗುರುತಾಗಿತ್ತು.
ಅತ್ಯುನ್ನತ ಸಾಂವಿಧಾನಿಕ ಹುದ್ದೆಯ ಮೇಲೆ ಪ್ರಧಾನಮಂತ್ರಿಗಳ ಪ್ರಭಾವದ ಶಕ್ತಿಯನ್ನು ಅದು ಪ್ರದರ್ಶಿಸಿತು.
ಗಿರಿ ರಾಷ್ಟ್ರಪತಿಯಾದಾಗ, ಅವರನ್ನು ರಬ್ಬರ್ ಸ್ಟಾಂಪ್ ರಾಷ್ಟ್ರಪತಿ ಎಂದು ನೋಡಲಾಯಿತು.
ಇಂದಿರಾ ಗಾಂಧಿಯವರ ಸಂಪುಟದ ಕೆಲವು ಕಾರ್ಮಿಕ ವಿರೋಧಿ ನಿರ್ಧಾರಗಳನ್ನು ಈ ಮಾಜಿ ಕಾರ್ಮಿಕ ಒಕ್ಕೂಟವಾದಿ ವಿರೋಧಿಸಿದ್ದರೂ, ಇಂದಿರಾ ನಿರ್ಧಾರದ ಮೇಲೆ ಪ್ರಭಾವ ಬೀರುವಲ್ಲಿ ವಿಫಲರಾಗಿದ್ದರು. ಇಂದಿರಾ ಗಾಂಧಿಯವರು ವಯಸ್ಸಿನಲ್ಲಿ ಹಿರಿಯರಾದ ಮೂವರು ನ್ಯಾಯಾಧೀಶರ ಬದಲಿಗೆ ಎ.ಎನ್.ರೇ ಅವರನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನಾಗಿ ಆಯ್ಕೆ ಮಾಡಿದಾಗ ಪರಿಸ್ಥಿತಿ ಹದಗೆಟ್ಟಿತು. ನ್ಯಾಯಾಂಗ ವಿಷಯಗಳಲ್ಲಿ ಮಧ್ಯಪ್ರವೇಶಿಸದಂತೆ ಪ್ರಧಾನಿಗೆ ಸಲಹೆ ನೀಡಲು ಗಿರಿ ಪ್ರಯತ್ನಿಸಿದರೂ, ಅವರನ್ನು ಕಡೆಗಣಿಸಿ ಇಂದಿರಾ ತಮಗೆ ಬೇಕಾದುದನ್ನೇ ಮಾಡಿದರು. ಇಂದಿರಾ ಗಾಂಧಿಯವರ ಆಳ್ವಿಕೆಯಲ್ಲಿ ಗಿರಿ ಒತ್ತಡಗಳನ್ನೇ ಎದುರಿಸಬೇಕಾಗಿತ್ತು ಎಂದೇ ದಾಖಲಿಸಲಾಗಿದೆ.
ನೀಲಂ ಸಂಜೀವ ರೆಡ್ಡಿ
ಇಂದಿರಾ ಗಾಂಧಿಯವರ ನಿರ್ಧಾರಗಳನ್ನು ಆ ಕಾಲದ ರಾಷ್ಟ್ರಪತಿಗಳು ಆಗಾಗ ಎದುರಿಸಿದ್ದಿತ್ತು. ಆದರೆ ನೀಲಂ ಸಂಜೀವ ರೆಡ್ಡಿಯವರ ವಿಚಾರಕ್ಕೆ ಬಂದರೆ, ಅವರು ಇಂದಿರಾ ವಿರುದ್ಧ ನಿಂತದ್ದು 1981ರಲ್ಲಿ, ಪ್ರಿನ್ಸ್ ಚಾರ್ಲ್ಸ್ ಮತ್ತು ಡಯಾನಾ ಸ್ಪೆನ್ಸರ್ ವಿವಾಹವನ್ನು ರಾಣಿ ಎಲಿಝಬೆತ್ ನಿಶ್ಚಿಯಿಸಿದ್ದಾಗ. ಪ್ರಪಂಚದಾದ್ಯಂತದ ನಾಯಕರಿಗೆ ಆಹ್ವಾನ ಬಂದಂತೆ ಭಾರತದ ರಾಷ್ಟ್ರಪತಿಗೆ ಕೂಡ ಆಹ್ವಾನ ಬಂದಿತ್ತು. ಆದರೆ ಇಂಗ್ಲೆಂಡ್‌ನ ಈ ಸಮಾರಂಭದಲ್ಲಿ ಇಂದಿರಾ ಗಾಂಧಿ ಸ್ವತಃ ಪಾಲ್ಗೊಳ್ಳುವ ಆಸೆ ಇಟ್ಟುಕೊಂಡಿದ್ದರು. ರಾಜತಾಂತ್ರಿಕವಾಗಿ, ಭಾರತದ ಒಬ್ಬ ನಾಯಕರು ಮಾತ್ರ ಹೋಗುವುದು ಸೂಕ್ತವಾಗಿರುತ್ತದೆ. ಹಾಗಿದ್ದಾಗ ರೆಡ್ಡಿ, ತಮಗೆ ಹೋಗಲು ಅಧಿಕೃತ ಅನುಮತಿ ಕೊಡದಿದ್ದರೆ ಖಾಸಗಿಯಾಗಿ ಸಾಮಾನ್ಯ ಪ್ರವಾಸಿಯಂತೆ ಮದುವೆಗೆ ಹಾಜರಾಗುವುದಾಗಿ ಹೇಳಿದರು. ಕೊನೆಗೆ, ಇಂದಿರಾ ಅವರೇ ಹಿಂದೆ ಸರಿಯಬೇಕಾಯಿತು ಮತ್ತು ರೆಡ್ಡಿ ಬ್ರಿಟಿಷ್ ರಾಯಲ್ ಕುಟುಂಬದ ವಿವಾಹದಲ್ಲಿ ಭಾಗಿಯಾಗಿ, ತಮ್ಮ ಕನಸನ್ನು ಈಡೇರಿಸಿಕೊಂಡಿದ್ದರು.
ಪ್ರತಿಭಾ ಪಾಟೀಲ್
ದೇಶದ ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಬಗ್ಗೆ ಇದ್ದ ದೊಡ್ಡ ಆರೋಪವೆಂದರೆ, ಅವರು ತಮ್ಮ ಹುದ್ದೆಯನ್ನು ವೈಯಕ್ತಿಕ ಲಾಭಕ್ಕೆ ಬಳಸಿಕೊಳ್ಳುವುದರ ಬಗ್ಗೆ ಹೆಚ್ಚು ಆಸಕ್ತರಾಗಿದ್ದರೆಂಬುದು. ನಿಯಮದಂತೆ, ರಾಷ್ಟ್ರಪತಿಗಳು ಅಧಿಕಾರ ತೊರೆದ ನಂತರ ದಿಲ್ಲಿ ಅಥವಾ ಅವರ ತವರು ರಾಜ್ಯದಲ್ಲಿ ಸರಕಾರಿ ವಸತಿಗೃಹದಲ್ಲಿ ವಾಸಿಸಬೇಕಾಗುತ್ತದೆ.
ಆದರೆ ಪುಣೆಯಲ್ಲಿ 2,60,000 ಚದರ ಅಡಿ ವಿಸ್ತೀರ್ಣದ ಮಿಲಿಟರಿ ಜಾಗದಲ್ಲಿ ಮಹಲು ನಿರ್ಮಿಸಲು ಸಾರ್ವಜನಿಕ ಹಣವನ್ನು ಬಳಸಿದ್ದ ಆರೋಪ ಅವರ ಮೇಲಿತ್ತು. ನಿವೃತ್ತಿ ನಂತರ ರಾಷ್ಟ್ರಪತಿಗಳು ಸರಕಾರಿ ವಾಹನವನ್ನು ಪಡೆಯಬಹುದು ಅಥವಾ ಅವರ ಖಾಸಗಿ ವಾಹನಗಳಿಗೆ ಇಂಧನ ಭತ್ತೆ ಪಡೆಯಬಹುದು. ಎರಡರಲ್ಲಿ ಒಂದನ್ನು ಆಯ್ಕೆ ಮಾಡಲು ಕೇಳಿದಾಗ, ಪಾಟೀಲ್ ಎರಡೂ ಇರಲಿ ಎಂದು ಒತ್ತಾಯಿಸಿದ್ದರು.
ಕೆಲವೊಮ್ಮೆ, ರಾಷ್ಟ್ರಪತಿಗಳು ವಿದೇಶಗಳಿಂದ ಕೂಡ ಉಡುಗೊರೆಗಳನ್ನು ಪಡೆಯುತ್ತಾರೆ. ಅದರ ಮೇಲಿನ ಹಕ್ಕು ಸರಕಾರದ್ದಾದರೂ, ಪ್ರತಿಭಾ ಪಾಟೀಲ್ ಮಾತ್ರ ಆರಂಭದಲ್ಲಿ ಯಾವ ಉಡುಗೊರೆಗಳನ್ನೂ ಬಿಟ್ಟುಕೊಡುತ್ತಿರಲಿಲ್ಲ ಎನ್ನಲಾಗುತ್ತದೆ. ಕಡೆಗೆ, ಅವರ ಬಳಿಯಿದ್ದ ಹಲವಾರು ಉಡುಗೊರೆಗಳನ್ನು ರಾಷ್ಟ್ರಪತಿ ಭವನಕ್ಕೆ ತರಲಾಯಿತು ಎಂದು ವರದಿಯೊಂದು ಹೇಳುತ್ತದೆ.
ಸಂಸದೀಯ ನೆಲೆಯಲ್ಲಿ, ರಾಷ್ಟ್ರಪತಿಗಳು ಸಚಿವ ಸಂಪುಟದ ಸಲಹೆಯಂತೆ ನಡೆಯಲು ಬದ್ಧರಾಗಿರುತ್ತಾರೆ. ಇದನ್ನು ಸಂವಿಧಾನದಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲವಾದರೂ, ಒಂದು ಸಂಪ್ರದಾಯವಾಗಿ ನಡೆದುಬಂದಿದೆ. ಇದು ದೇಶದ ಅತ್ಯುನ್ನತ ಕಾರ್ಯಾಂಗದಲ್ಲಿ ಸಾಮರಸ್ಯ ಕಾಪಾಡಿಕೊಳ್ಳಲು ಮತ್ತು ಯಾವುದೇ ರೀತಿಯ ಪ್ರಕ್ಷುಬ್ಧತೆಗೆ ಹೋಗುವುದನ್ನು ತಡೆಯುವ ಉದ್ದೇಶದ್ದಾಗಿದೆ. ಆದರೂ, ಕೆಲವು ಸಲ ಘರ್ಷಣೆಗಳು ತಪ್ಪಿಲ್ಲ.
ರಾಷ್ಟ್ರಪತಿಗಳು ಮತ್ತು ಸಚಿವ ಸಂಪುಟದ ನಡುವಿನ ಅಂಥ ಮೊದಲ ಸಂಘರ್ಷ ಸೆಪ್ಟಂಬರ್ 1951ರಲ್ಲಿ ಕಂಡುಬಂತು. ಡಾ. ರಾಜೇಂದ್ರ ಪ್ರಸಾದ್ ಅವರು ಸಂಪುಟದ ಸಲಹೆಯಂತೆ ಹಿಂದೂ ಸಂಹಿತೆ ಮಸೂದೆಗೆ ಸಹಿ ಹಾಕಲು ತಯಾರಿರಲಿಲ್ಲ. ಏಕೆಂದರೆ ಕಾಯ್ದೆಯ ಕೆಲವು ನಿಬಂಧನೆಗಳಿಗೆ ಅವರ ವಿರೋಧವಿತ್ತು. ಸಂಪುಟದ ಸಲಹೆ ಲೆಕ್ಕಿಸದೆ ತಮ್ಮ ಸ್ವಂತ ವಿವೇಚನೆ ಚಲಾಯಿಸಬಹುದೇ ಎಂದು ತಿಳಿಯಲು ಅವರು ಬಯಸಿದ್ದರು. ಸಾಂವಿಧಾನಿಕ ಸರಕಾರದ ಸಂಪೂರ್ಣ ಪರಿಕಲ್ಪನೆಯಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ನೆಹರೂ ಹೇಳಿದ್ದರು. ಆದರೂ, ರಾಜೇಂದ್ರ ಪ್ರಸಾದ್, ಈ ವಿಷಯದಲ್ಲಿ ಅಟಾರ್ನಿ ಜನರಲ್ ಅವರ ಸಲಹೆ ಕೇಳಿದರು. ರಾಷ್ಟ್ರಪತಿ ಸಚಿವ ಸಂಪುಟ ನೀಡುವ ಸಲಹೆಯ ಪ್ರಕಾರ ಕಾರ್ಯನಿರ್ವಹಿಸಲು ಬದ್ಧರಾಗಿದ್ದಾರೆ ಮತ್ತು ಸಲಹೆಯಂತೆ ನಡೆಯದಿರುವುದು ಸಾಂವಿಧಾನಿಕವಾಗಿ ಅನುಚಿತವಾಗಿರುತ್ತದೆ ಎಂದು ಅಟಾರ್ನಿ ಜನರಲ್ ಸ್ಪಷ್ಟವಾಗಿ ಹೇಳಿದ್ದರು. ಈ ಉತ್ತರದಿಂದ ರಾಜೇಂದ್ರ ಪ್ರಸಾದ್ ತೃಪ್ತರಾಗದಿದ್ದರೂ, ಹೊಸ ಗಣರಾಜ್ಯವನ್ನು ಸಮಸ್ಯೆಗಳಿಗೆ ಸಿಲುಕಿಸಲು ಬಯಸದೆ, ಮಸೂದೆಗೆ ಸಹಿ ಹಾಕಲು ಒಪ್ಪಿಕೊಂಡಿದ್ದರು ಎಂಬ ಉಲ್ಲೇಖವಿದೆ. ನೆಹರೂ ಮತ್ತು ರಾಜೇಂದ್ರ ಪ್ರಸಾದ್ ನಡುವೆ ಕೆಲ ವಿಷಯಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಸಾಂವಿಧಾನಿಕ ವ್ಯವಸ್ಥೆಯ ಸುಗಮ ಕಾರ್ಯನಿರ್ವಹಣೆಗೆ ಸಂಬಂಧ ಸೌಹಾರ್ದಯುತವಾಗಿ ಇರುವುದು ಬಹಳ ಮುಖ್ಯ ಎಂದು ಅವರಿಗೆ ತಿಳಿದಿತ್ತು.
ಡಾ. ರಾಜೇಂದ್ರ ಪ್ರಸಾದ್ ನಂತರದ ಅಧ್ಯಕ್ಷರು ಯಾವುದೇ ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿಲ್ಲ. ಎಲ್ಲರೂ ಹೆಚ್ಚಾಗಿ ಸಚಿವ ಸಂಪುಟದ ನೆರವು ಮತ್ತು ಸಲಹೆಯನ್ನು ಅನುಸರಿಸಿ ನಡೆದುಕೊಂಡರು. ಇದೊಂದು ರೀತಿಯ ಸ್ವೀಕೃತ ಸಂಪ್ರದಾಯವಾಗಿದೆ.
ಆದರೆ, 111ನೇ ವಿಧಿ ಅಡಿಯಲ್ಲಿ ರಾಷ್ಟ್ರಪತಿಗಳ ಅಧಿಕಾರಗಳು ಸಚಿವ ಸಂಪುಟದ ನೆರವು ಮತ್ತು ಸಲಹೆಗೆ ಒಳಪಡುವುದಿಲ್ಲ. ಅವರ ಒಪ್ಪಿಗೆಯಿಲ್ಲದೆ, ಯಾವುದೇ ಮಸೂದೆ ಕಾನೂನಾಗಲು ಸಾಧ್ಯವಿಲ್ಲ ಮತ್ತು ಅವರು ನಿರ್ದಿಷ್ಟ ಮಸೂದೆಯನ್ನು ಸೂಕ್ತವಲ್ಲವೆಂದು ಪರಿಗಣಿಸಿದರೆ, ಮಸೂದೆಯನ್ನು ಮರುಪರಿಶೀಲನೆಗೆ ಹಿಂದಿರುಗಿಸಬಹುದು ಅಥವಾ ಅನಿರ್ದಿಷ್ಟ ಅವಧಿಗೆ ತಡೆಹಿಡಿಯಬಹುದು. ಈ ಅಧಿಕಾರವನ್ನು ಬಳಸಿಕೊಂಡು, ರಾಷ್ಟ್ರಪತಿಗಳಾದ ಜೈಲ್ ಸಿಂಗ್ ಅಥವಾ ಅಧ್ಯಕ್ಷ ಆರ್. ವೆಂಕಟರಾಮನ್ ಅವರು 1986ರ ಅಂಚೆ ಕಚೇರಿ ತಿದ್ದುಪಡಿ ಮಸೂದೆಗೆ ಒಪ್ಪಿಗೆ ನೀಡಿರಲಿಲ್ಲ. ಅವರು ಮಸೂದೆಯ ಸೆನ್ಸರ್‌ಶಿಪ್ ಷರತ್ತನ್ನು ವಿರೋಧಿಸಿದ್ದರು. ಆರ್. ವೆಂಕಟರಾಮನ್ ಅವರು ಈ ವಿಷಯದಲ್ಲಿ ಅಟಾರ್ನಿ ಜನರಲ್ ಅವರನ್ನು ಸಂಪರ್ಕಿಸುವಂತೆ ಪ್ರಧಾನಿಗೆ ಸಲಹೆ ನೀಡುವ ಹಂತಕ್ಕೆ ಹೋದರು. ಇದು ಪ್ರಧಾನಿ ಮತ್ತು ರಾಷ್ಟ್ರಪತಿಗಳ ನಡುವೆ ದೊಡ್ಡ ಸಂಘರ್ಷಕ್ಕೆ ಕಾರಣವಾಗಬಹುದಿತ್ತು. ಆದರೆ ಸಚಿವ ಸಂಪುಟ ಮಸೂದೆಯನ್ನು ಮತ್ತೆ ಅನುಮೋದನೆಗೆ ಕಳುಹಿಸದ ಕಾರಣ ಅಂಥ ಸಂಘರ್ಷ ತಪ್ಪಿತ್ತು.
ಅದೇ ರೀತಿ, 123ನೇ ವಿಧಿಯ ಅಡಿಯಲ್ಲಿ ರಾಷ್ಟ್ರಪತಿಗಳಿಗೆ, ತಮಗೆ ಒಪ್ಪಿಗೆಯಾದರಷ್ಟೇ ಸುಗ್ರೀವಾಜ್ಞೆ ಪ್ರಕಟಿಸುವ ಅಧಿಕಾರ ನೀಡಲಾಗಿದೆ. ಈ ಅಧಿಕಾರ ಬಳಸಿಕೊಂಡು, ರಾಷ್ಟ್ರಪತಿ ಡಾ. ಶಂಕರ್ ದಯಾಳ್ ಶರ್ಮಾ ಅವರು ನರಸಿಂಹ ರಾವ್ ಸರಕಾರ ಸೂಚಿಸಿದ್ದ ಎರಡು ಸುಗ್ರೀವಾಜ್ಞೆಗಳನ್ನು ಘೋಷಿಸಲು ಒಪ್ಪಿಗೆ ನೀಡಿರಲಿಲ್ಲ. ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಲಾಭದಾಯಕ ಹುದ್ದೆ ಮಸೂದೆಗೆ ಒಪ್ಪಿಗೆ ನೀಡದಿರುವುದಕ್ಕೂ ಅದೇ ಅಧಿಕಾರ ಬಳಸಿದ್ದರು. ಏಕೆಂದರೆ ಅವರು ಇದನ್ನು ಕೆಲವು ರಾಜಕೀಯ ಲಾಭಕ್ಕಾಗಿ ಘೋಷಿಸಲಾಗಿದೆಯೇ ಹೊರತು ಸಾಮಾನ್ಯ ತತ್ವಗಳಿಗಾಗಿ ಅಲ್ಲ ಎಂದು ಭಾವಿಸಿದ್ದರು.
ಈ ಉದಾಹರಣೆಗಳು ರಾಷ್ಟ್ರಪತಿಗಳ ಕ್ರಿಯಾಶೀಲ ಮುಖವನ್ನು ತೋರಿಸುತ್ತವೆ. ಅಲ್ಲಿ ಅವರು ದೇಶದ ಜನರ ವಿಶಾಲ ಹಿತಾಸಕ್ತಿಗಾಗಿ ಸರಕಾರದ ಸಲಹೆಯನ್ನು ತಿರಸ್ಕರಿಸುವ ಧೈರ್ಯ ಮಾಡುತ್ತಾರೆ. ಆದರೂ, ಕೆಲವೊಮ್ಮೆ ಇದು ಇಡೀ ಸಾಂವಿಧಾನಿಕ ವ್ಯವಸ್ಥೆಯನ್ನೇ ಬಿಕ್ಕಟ್ಟಿನಲ್ಲಿ ಸಿಲುಕಿಸಬಹುದು ಎಂಬ ಆತಂಕವೂ ಇದೆ.
ಉಪ ರಾಷ್ಟ್ರಪತಿಗಳ ವಿಷಯಕ್ಕೆ ಬಂದರೆ, ಅವಧಿಗೆ ಮೊದಲೇ ರಾಜೀನಾಮೆ ನೀಡಿದವರಲ್ಲಿ ಧನ್ಕರ್ ಮೂರನೆಯವರಾಗಿದ್ದಾರೆ. ಧನ್ಕರ್ ರಾಜೀನಾಮೆ ಹಿಂದೆ ಹಲವು ಉಹಾಪೋಹಗಳಿವೆ. ಅದೇ ರೀತಿ ವಿ.ವಿ. ಗಿರಿ ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದಾಗಲೂ ಅದು ರಾಜಕೀಯ ಸಂಚಲನ ಮೂಡಿಸಿತ್ತು.
ಮೇ 3, 1969ರಂದು ರಾಷ್ಟ್ರಪತಿಗಳಾಗಿದ್ದ ಝಾಕಿರ್ ಹುಸೇನ್ ನಿಧನದ ನಂತರ ಹಂಗಾಮಿ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಉಪ ರಾಷ್ಟ್ರಪತಿ ವಿ.ವಿ. ಗಿರಿ ಅವರು ಆ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅಧಿಕಾರಾವಧಿ ಪೂರ್ಣಗೊಳಿಸದೇ ಹೋದ ಮೊದಲ ಉಪ ರಾಷ್ಟ್ರಪತಿ ಕೂಡ ಅವರಾಗಿದ್ದಾರೆ. ಝಾಕಿರ್ ಹುಸೇನ್ ನಿಧನದ ನಂತರ ಆರು ತಿಂಗಳಲ್ಲಿ ರಾಷ್ಟ್ರಪತಿ ಚುನಾವಣೆ ನಡೆಯಬೇಕಿತ್ತು. ಆದರೆ ಮೇ 13ರಂದು, ಸದ್ಯಕ್ಕೆ, ಅವರ ಅನುಪಸ್ಥಿತಿಯಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು ರಾಷ್ಟ್ರಪತಿ ಪಾತ್ರವನ್ನು ನಿರ್ವಹಿಸುತ್ತಾರೆ ಎಂಬ ಕಾನೂನು ಬಂತು. ಸ್ವತಂತ್ರ ಅಭ್ಯರ್ಥಿಯಾಗಿ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಲು ಗಿರಿ ರಾಜೀನಾಮೆ ನೀಡುವ ಸುದ್ದಿ ಹರಡಿದ್ದಾಗ, ಬೆಂಗಳೂರಿನಲ್ಲಿ ಕಾಂಗ್ರೆಸ್ ಸಭೆ ನಡೆಯಿತು. ರಾಷ್ಟ್ರಪತಿ ಚುನಾವಣೆಗೆ ನೀಲಂ ಸಂಜೀವ ರೆಡ್ಡಿ ಮತ್ತು ಬಾಬು ಜಗಜೀವನ್ ರಾಮ್ ಹೆಸರುಗಳು ಪ್ರಸ್ತಾವವಾದವು. ತೀರ್ಮಾನ ಎಸ್. ನಿಜಲಿಂಗಪ್ಪ ಅವರ ಕೈಯಲ್ಲಿತ್ತು. ನೀಲಂ ಸಂಜೀವ ರೆಡ್ಡಿ ಅವರನ್ನು ಅವರ ಅಧಿಕೃತ ಅಭ್ಯರ್ಥಿಯನ್ನಾಗಿ ಮಾಡಲಾಯಿತು.
ಮತ್ತೊಂದೆಡೆ, ಇಂದಿರಾ ಗಾಂಧಿ ವಿ.ವಿ. ಗಿರಿಯನ್ನು ಬೆಂಬಲಿಸಲು ನಿರ್ಧರಿಸಿದರು. ಇಂದಿರಾ ಮತ್ತು ನಿಜಲಿಂಗಪ್ಪ ಸಿಂಡಿಕೇಟ್ ನಡುವಿನ ಸಂಘರ್ಷ ಸ್ಪಷ್ಟವಾಗಿತ್ತು. ಗಿರಿ ಜುಲೈ 2, 1969 ರಂದು ಉಪ ರಾಷ್ಟ್ರಪತಿ ಮತ್ತು ಹಂಗಾಮಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದರು.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮುಹಮ್ಮದ್ ಹಿದಾಯತುಲ್ಲಾ ಹಂಗಾಮಿ ರಾಷ್ಟ್ರಪತಿಯಾದರು. ಅವರು ಮುಂದಿನ 35 ದಿನಗಳವರೆಗೆ ದೇಶದ ರಾಷ್ಟ್ರಪತಿಯಾಗಿ ಉಳಿದರು ಮತ್ತು ಈ ಹುದ್ದೆಯಲ್ಲಿ ಅವರು ಅಮೆರಿಕ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅವರ ಆತಿಥ್ಯ ವಹಿಸಿಕೊಂಡರು. ಈ ಸಂದರ್ಭ ಇಲ್ಲಿಯವರೆಗಿನ ಇತಿಹಾಸದಲ್ಲಿ ಅಂತಹ ಏಕೈಕ ಘಟನೆಯಾಗಿದೆ.
ರಾಷ್ಟ್ರಪತಿ ಹುದ್ದೆಗೆ ಇಬ್ಬರು ಪ್ರಮುಖ ಅಭ್ಯರ್ಥಿಗಳಾಗಿ ನೀಲಂ ಸಂಜೀವ ರೆಡ್ಡಿ ಮತ್ತು ವಿ.ವಿ. ಗಿರಿ ಮುಖಾಮುಖಿಯಾದರು. ಪಕ್ಷದ ಅಧಿಕೃತ ಅಭ್ಯರ್ಥಿಯ ಆಯ್ಕೆ ಬಹುತೇಕ ಖಚಿತವೆನ್ನಲಾಗಿತ್ತು. ಆದರೆ, ಇಂದಿರಾ ಬೆಂಬಲಿಸಿದ್ದ ಗಿರಿ ಕೇವಲ ಶೇ. 1.5 ಅಂತರದಿಂದ ಗೆದ್ದಿದ್ದರು. ಗಿರಿಯವರ ಜೊತೆಗೆ ಅದು ಇಂದಿರಾ ಅವರಿಗೂ ಒಂದು ರೀತಿಯ ಗೆಲುವಾಗಿತ್ತು ಮತ್ತು ಅದರೊಂದಿಗೆ, ಕಾಂಗ್ರೆಸ್ ಸಿಂಡಿಕೇಟ್ ಕೈಯಿಂದ ಜಾರಿತು.
ಗಿರಿ ಅವರ ನಂತರ ಉಪ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದ್ದ ಮತ್ತೊಬ್ಬರು ಭೈರೋನ್ ಸಿಂಗ್ ಶೆಖಾವತ್. ಕಾಂಗ್ರೆಸ್ ನೇತೃತ್ವದ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್ ವಿರುದ್ಧ ರಾಷ್ಟ್ರಪತಿ ಚುನಾವಣೆಯಲ್ಲಿ ಸೋತ ನಂತರ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್ ಜುಲೈ 21, 2007 ರಂದು ಹುದ್ದೆಗೆ ರಾಜೀನಾಮೆ ನೀಡಿದ್ದರು. ಶೇಖಾವತ್ ರಾಜೀನಾಮೆ ನಂತರ, ಉಪರಾಷ್ಟ್ರಪತಿ ಹುದ್ದೆ 21 ದಿನಗಳ ಕಾಲ ಖಾಲಿಯಾಗಿತ್ತು. ನಂತರ ಹಾಮಿದ್ ಅನ್ಸಾರಿ ಆ ಸ್ಥಾನಕ್ಕೆ ಆಯ್ಕೆಯಾದರು.
ಉಪರಾಷ್ಟ್ರಪತಿಗಳಾದ ಆರ್ ವೆಂಕಟರಾಮನ್, ಶಂಕರ್ ದಯಾಳ್ ಶರ್ಮಾ ಮತ್ತು ಕೆ. ಆರ್. ನಾರಾಯಣನ್ ಕೂಡ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ಆದರೆ ಅವರು ರಾಜೀನಾಮೆ ನೀಡಿದ್ದು ರಾಷ್ಟ್ರಪತಿಗಳಾಗಿ ಆಯ್ಕೆಯಾದ ನಂತರ. ಕೃಷ್ಣಕಾಂತ್ ಅಧಿಕಾರದಲ್ಲಿರುವಾಗಲೇ ನಿಧನರಾದ ಏಕೈಕ ಉಪ ರಾಷ್ಟ್ರಪತಿ.
ಈಗ ಉಪ ರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿರುವ ಧನ್ಕರ್, ಈ ಹುದ್ದೆಗೆ ಮೊದಲು ಪಶ್ಚಿಮ ಬಂಗಾಳ ರಾಜ್ಯಪಾಲರಾಗಿದ್ದಾಗಲೂ ಸರಕಾರದೊಂದಿಗೆ ಸತತ ಸಂಘರ್ಷ ಹೊಂದಿದ್ದರು. ಅವರು ಆ ಹುದ್ದೆಯಲ್ಲಿ ಬಿಜೆಪಿ ವ್ಯಕ್ತಿಯಾಗಿಯೇ ಕೆಲಸ ಮಾಡಿದ್ದರು. ಉಪ ರಾಷ್ಟ್ರಪತಿಯಾಗಿ, ರಾಜ್ಯಸಭೆಯ ಅಧ್ಯಕ್ಷರಾಗಿಯೂ ಅವರು ವಿಪಕ್ಷಗಳನ್ನು ಬಿಜೆಪಿಯ ವ್ಯಕ್ತಿಯಾಗಿಯೇ ನಡೆಸಿಕೊಂಡಿದ್ದರು. ಕಡೆಗೆ ಅದು ಯಾವ ಮಟ್ಟಕ್ಕೆ ಹೋಯಿತೆಂದರೆ, ಅವರ ವಿರುದ್ಧ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ತಂದವು. ಡಿಸೆಂಬರ್ 10, 2024ರಂದು 60ಕ್ಕೂ ಹೆಚ್ಚು ವಿಪಕ್ಷ ಸಂಸದರು ಆರ್ಟಿಕಲ್ 67(ಬಿ) ಅನ್ನು ಉಲ್ಲೇಖಿಸಿ ಧನ್ಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಅವರು ಸಾಂವಿಧಾನಿಕ ನಿಷ್ಪಕ್ಷತೆಯನ್ನು ತ್ಯಜಿಸಿದ್ದಾರೆ ಮತ್ತು ಸರಕಾರದ ಮುಖವಾಣಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ವಿರೋಧಪಕ್ಷಗಳು ಆರೋಪಿಸಿದ್ದವು.
ಸ್ವತಂತ್ರ ಭಾರತದಲ್ಲಿ ಅವಿಶ್ವಾಸ ನಿರ್ಣಯ ಎದುರಿಸಿದ ಮೊದಲ ಉಪ ರಾಷ್ಟ್ರಪತಿ ಎಂಬ ಕಪ್ಪುಚುಕ್ಕಿ ಕೂಡ ಧನ್ಕರ್ ಅವರಿಗೆ ಅಂಟಿಕೊಂಡಿದೆ.