ಭಾರತದ ಚುನಾವಣಾ ಇತಿಹಾಸದಲ್ಲಿನ ಅಕ್ರಮಗಳು ಮತ್ತು ಹಗರಣಗಳು

ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿಯವರು ಮತಗಳ್ಳತನದ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಮತಗಳ್ಳತನಕ್ಕೆ ಅವರು ಕೊಟ್ಟಿರುವ ಪುರಾವೆಗಳು ಬೆಚ್ಚಿಬೀಳಿಸುವಂತಿವೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭೆ ಕ್ಷೇತ್ರವೊಂದರಲ್ಲಿಯೇ ಲಕ್ಷ ಮತಗಳ ಕಳ್ಳತನ ನಡೆದಿರುವುದನ್ನು ಅವರು ಬಹಿರಂಗಪಡಿಸಿದ್ದಾರೆ. ಈ ಮೂಲಕ ಅವರು ಬಹುದೊಡ್ಡ ಚುನಾವಣಾ ಅಕ್ರಮವನ್ನು ಗುರುತಿಸಿದ್ದಾರೆ. ಈ ಹಿಂದೆಯೂ ಚುನಾವಣೆಗಳು ವಿವಾದಕ್ಕೊಳಗಾದದ್ದು, ಅಕ್ರಮಗಳು ನಡೆದಿರುವುದರ ದೊಡ್ಡ ಇತಿಹಾಸವೇ ಇದೆ.
ಜಮ್ಮು-ಕಾಶ್ಮೀರ ಚುನಾವಣೆಯಲ್ಲಿ ರಿಗ್ಗಿಂಗ್
ಆರೋಪ - 1987
1987ರ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ವ್ಯಾಪಕ ರಿಗ್ಗಿಂಗ್ ನಡೆಯಿತೆಂಬ ಆರೋಪವಿದೆ. ಅದು ಇವತ್ತಿಗೂ ಜಮ್ಮು-ಕಾಶ್ಮೀರ ರಾಜಕೀಯದಲ್ಲಿನ ಒಂದು ಕಳಂಕವೆಂಬಂತಿದೆ. ಆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ಮೈತ್ರಿ ವಿರುದ್ಧ ಅಮೀರಾ ಕಡಲ್ ಕ್ಷೇತ್ರದಿಂದ ಮುಸ್ಲಿಮ್ ಯುನೈಟೆಡ್ ಫ್ರಂಟ್ (ಎಂಯುಎಫ್) ಅಭ್ಯರ್ಥಿಯಾಗಿ ಸೈಯದ್ ಸಲಾಹುದ್ದೀನ್ ಸ್ಪರ್ಧಿಸಿದ್ದರು. ಎಲ್‌ಒಸಿ ದಾಟಿ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ನಾಯಕನಾಗುವ ಮೊದಲು ಸೈಯದ್ ಸಲಾಹುದ್ದೀನ್ ಸ್ಪರ್ಧಿಸಿದ್ದ ಕಡೇ ಚುನಾವಣೆ ಅದಾಗಿತ್ತು.
ಮತ ಎಣಿಕೆ ವೇಳೆ ಸೈಯದ್ ಸಲಾಹುದ್ದೀನ್ ತಮ್ಮ ಎದುರಾಳಿ ಗುಲಾಮ್ ಮುಹಿಯುದ್ದೀನ್ ಶಾ ಅವರಿಗಿಂತ ಭಾರೀ ಮುಂದಿದ್ದರು. ಒಂದು ಹಂತದಲ್ಲಿ ನಿರಾಶರಾದ ಮುಹಿಯುದ್ದೀನ್ ಶಾ ಮತ ಎಣಿಕೆ ಕೇಂದ್ರದಿಂದಲೇ ಹೊರನಡೆದಿದ್ದರು. ಆದರೆ ಅವರನ್ನು ಮರಳಿ ಮತಗಟ್ಟೆಗೆ ಕರೆಸಲಾಯಿತು ಮತ್ತು ಅಮೀರಾ ಕಡಲ್ ವಿಧಾನಸಭಾ ಕ್ಷೇತ್ರದ ವಿಜೇತರೆಂದು ಘೋಷಿಸಲಾಯಿತು. ಮತ ಎಣಿಕೆ ನಡುವೆ ಭಾರೀ ಅಂತರದಿಂದ ಹಿಂದುಳಿದಿದ್ದ ಮುಹಿಯುದ್ದೀನ್ ಶಾ 4,289 ಮತಗಳಿಂದ ಗೆದ್ದಿದ್ದರು. ಆದರೆ ಫಲಿತಾಂಶ ತಿರುಚಲಾಗಿದೆ ಎಂದು ಆರೋಪಿಸಿ ಎಂಯುಎಫ್ ಆಕ್ರೋಶ ವ್ಯಕ್ತಪಡಿಸಿತ್ತು. ಕಾಶ್ಮೀರ ಕಣಿವೆಯ ಅನಂತನಾಗ್, ಸೋಪೋರ್, ಹಂದ್ವಾರ ಮತ್ತು ಬಾರಾಮುಲ್ಲಾಗಳಲ್ಲಿ ಕರ್ಫ್ಯೂ ಜಾರಿಯಲ್ಲಿತ್ತು. ಗೆದ್ದ ಫಾರೂಕ್ ಅಬ್ದುಲ್ಲಾ ಸರಕಾರ ಪ್ರಮುಖ ಎಂಯುಎಫ್ ನಾಯಕರನ್ನು ಬಂಧಿಸಿತು. ಈ ನಡೆ ರಿಗ್ಗಿಂಗ್ ಆರೋಪಗಳಿಗೆ ಮತ್ತಷ್ಟು ಪುಷ್ಟಿ ನೀಡಿತ್ತು. ಸೈಯದ್ ಸಲಾವುದ್ದೀನ್, ಅವರ ಪ್ರಚಾರ ವ್ಯವಸ್ಥಾಪಕ ಯಾಸೀನ್ ಮಲಿಕ್ ಮತ್ತಿತರ ಬೆಂಬಲಿಗರನ್ನು ಯಾವುದೇ ಆರೋಪವಿಲ್ಲದೆಯೂ ಜೈಲಿಗೆ ತಳ್ಳಲಾಯಿತು.
1987ರ ಆ ಚುನಾವಣೆ ಮತ್ತದರ ಫಲಿತಾಂಶಗಳು ಜಮ್ಮು -ಕಾಶ್ಮೀರದ ಇತಿಹಾಸದ ಹಾದಿಯನ್ನೇ ಬದಲಾಯಿಸಿದವು ಮತ್ತು ದಶಕಗಳ ನಂತರವೂ ಆ ನೆರಳು ಕಾಶ್ಮೀರ ಮತ್ತದರ ರಾಜಕೀಯದ ಮೇಲೆ ದೊಡ್ಡದಾಗಿ ಹರಡಿಕೊಂಡಿದೆ ಎಂದೇ ವಿಶ್ಲೇಷಿಸಲಾಗುತ್ತದೆ. ಕಾಶ್ಮೀರದೊಳಕ್ಕೆ ಬಂದೂಕುಗಳು ಬರಲು ಮತ್ತು ಆನಂತರದ ಮಾರಣ ಹೋಮಗಳು ನಡೆಯಲು 1987ರ ಚುನಾವಣೆಯಲ್ಲಿನ ಅಕ್ರಮಗಳೇ ಕಾರಣ ಎಂದು ಆರೋಪಿಸಲಾಗುತ್ತದೆ.
ಬಿಹಾರ ಚುನಾವಣೆಗಳ ಕರಾಳ ಕಾಲ
1990ರ ದಶಕ
ಬಿಹಾರ ಚುನಾವಣಾ ಇತಿಹಾಸದಲ್ಲಿ 1990ರ ದಶಕವೆಂಬುದು ನಡುಕ ಹುಟ್ಟಿಸುವಂಥ ಸಮಯ. ಅದು ಬಿಹಾರದ ಚುನಾವಣಾ ಇತಿಹಾಸದ ಅತ್ಯಂತ ಕರಾಳ ದಶಕ. ಆ ಅವಧಿಯಲ್ಲಿ ಅತಿದೊಡ್ಡ ಪ್ರಮಾಣದ ಮತ್ತು ಅತಿ ಕೆಟ್ಟ ಸ್ವರೂಪದ ಚುನಾವಣಾ ಹಿಂಸಾಚಾರಗಳು ನಡೆದವು. ಆ ದಶಕದಲ್ಲಿ ಬಹುತೇಕ ಎಲ್ಲಾ ಹಿಂದಿ ಭಾಷಿಕ ರಾಜ್ಯಗಳಲ್ಲೂ ಭಾರೀ ಚುನಾವಣಾ ಹಿಂಸಾಚಾರ ನಡೆದಿದ್ದರೂ, ಬಿಹಾರದ ಪಾಲು ದೊಡ್ಡದು.
1990ರಿಂದ 2004ರ ಅವಧಿಯಲ್ಲಿ ಬಿಹಾರದ ಚುನಾವಣೆಗಳೆಂದರೆ ಕೊಲೆ, ಲೂಟಿ, ಬೆಂಕಿ ಹಚ್ಚುವಿಕೆ, ಅಪಹರಣ, ಬೆದರಿಕೆ ಬಿಟ್ಟರೆ ಮತ್ತೇನೂ ಅಲ್ಲವೆನ್ನುವಂತಿತ್ತು. 1990ರಿಂದ 2004ರ ಅವಧಿಯಲ್ಲಿನ ಒಟ್ಟು 9 ಚುನಾವಣೆಗಳಲ್ಲಿ ಮತದಾನಕ್ಕೆ ಸಂಬಂಧಿಸಿದ ಹಿಂಸಾಚಾರಕ್ಕೆ ಬಲಿಯಾದವರು 641 ಮಂದಿ ಎಂದು ಅಧಿಕೃತ ಅಂಕಿಅಂಶಗಳು ಹೇಳುತ್ತವೆ. 23 ವರ್ಷಗಳ ದೀರ್ಘ ಅಂತರದ ಬಳಿಕ ಬಿಹಾರದಲ್ಲಿ ನಡೆದ 2001ರ ಪಂಚಾಯತ್ ಚುನಾವಣೆ ಸಮಯದಲ್ಲಿಯೇ 196 ಜನರು ಸಾವನ್ನಪ್ಪಿದ್ದರು. 2004ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 28 ಮಂದಿ ಬಲಿಯಾಗಿದ್ದರು. ನೂರಾರು ಅಪರಾಧಗಳು ಮತಗಟ್ಟೆ ವಶಪಡಿಸಿಕೊಳ್ಳುವ ಏಕೈಕ ಉದ್ದೇಶದಿಂದ ನಡೆದಿದ್ದವು. ಈ ಬೂತ್ ಲೂಟಿ ಪದ್ಧತಿ 1927ರಷ್ಟು ಹಿಂದಿನದ್ದು. ಆರಂಭದಲ್ಲಿ, ಬೂತ್ ಲೂಟಿ ಕೆಲವೇ ಜನರ ವ್ಯವಹಾರವಾಗಿತ್ತು. ಕ್ರಮೇಣ ಅಲ್ಲಿ ಕ್ರಿಮಿನಲ್‌ಗಳ ಪ್ರವೇಶವಾಯಿತು. ಅವರು ತಮ್ಮ ನಾಯಕರಿಗಾಗಿ ಕೆಲಸ ಮಾಡುವ ಬದಲು ತಾವೇ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಲು ಶುರು ಮಾಡಿದ್ದರು.
1991 ಮತ್ತು 1998ರಲ್ಲಿ ಪಾಟ್ನಾದಲ್ಲಿ ಲೋಕಸಭಾ ಚುನಾವಣೆಗಳನ್ನು ಎರಡು ಬಾರಿ ರದ್ದುಗೊಳಿಸಲಾಯಿತು. ರಾಜ್ಯದ ರಾಜಧಾನಿ ಕಥೆಯೇ ಹೀಗಿತ್ತೆಂದರೆ, ಇನ್ನು ಸಣ್ಣ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿನ ಸ್ಥಿತಿ ಹೇಗಿದ್ದಿರಬಹುದು ಎಂಬುದರ ಊಹೆ ಕಷ್ಟವಲ್ಲ. ಚುನಾವಣೆಗಳ ರದ್ದತಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ನಿರ್ಧಾರಗಳು ಸಹ ಕೆಲವೊಮ್ಮೆ ವಿವಾದಕ್ಕೊಳಗಾಗಿದ್ದವು. 1998ರ ಲೋಕಸಭೆ ಚುನಾವಣೆ ವೇಳೆ ಮತಗಟ್ಟೆಗಳನ್ನು ವಶಪಡಿಸಿಕೊಳ್ಳುವಾಗ ಸಚಿವರು ಸೇರಿದಂತೆ 20ಕ್ಕೂ ಹೆಚ್ಚು ಶಾಸಕರ ಬಂಧನವಾಗಿದ್ದರ ಬಗ್ಗೆ ಉಲ್ಲೇಖಗಳಿವೆ. ರಾಜ್ಯದಲ್ಲಿ ಮರು ಮತದಾನಕ್ಕೆ ಎಷ್ಟು ಬಾರಿ ಆದೇಶಿಸಲಾಗಿದೆ ಎಂಬುದನ್ನು ನೋಡಿದರೆ ಅದಕ್ಕಿಂತ ಕರಾಳ ಚಿತ್ರಣ ಸಿಗಲು ಸಾಧ್ಯವಿಲ್ಲ. ಕೇವಲ ಬಿಹಾರದಲ್ಲಿ ಒಂದೇ ಚುನಾವಣಾ ವರ್ಷದಲ್ಲಿ, ಅಂದರೆ 1998ರ ಲೋಕಸಭೆ ಚುನಾವಣೆಯಲ್ಲಿ 4,995 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸಲಾಯಿತು. 1952ರ ಲೋಕಸಭಾ ಚುನಾವಣೆಯಲ್ಲಿ 26 ಮತಗಟ್ಟೆಗಳಲ್ಲಿ ಮಾತ್ರ ಮರು ಮತದಾನ ನಡೆದಿತ್ತು. ಅಂದರೆ, ಮತಗಟ್ಟೆ ವಶ ತೀವ್ರವಾಗಿ ಹೆಚ್ಚಿದಂತೆ, ದೇಶದ ಮೊದಲ ಚುನಾವಣೆಯ 45 ವರ್ಷಗಳ ನಂತರ ಮರು ಮತದಾನ ಪ್ರಕ್ರಿಯೆ ಅಗಾಧವಾಗಿ ಹೆಚ್ಚಾಗಿತ್ತು. ಬಿಹಾರ ವಿಧಾನಸಭಾ ಚುನಾವಣೆಗಳು ಕೂಡ ಈ ವಿಷಯದಲ್ಲಿ ಹಿಂದಿರಲಿಲ್ಲ. 1995ರ ವಿಧಾನಸಭಾ ಚುನಾವಣೆ ಸಮಯದಲ್ಲಿ 1,668 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಆದೇಶಿಸಲಾಯಿತು. 2000ದ ವಿಧಾನಸಭಾ ಚುನಾವಣೆ ಸಮಯದಲ್ಲಿ 1,420 ಮತಗಟ್ಟೆಗಳಲ್ಲಿ ಮರು ಮತದಾನ ನಡೆಯಿತು. ಇವಿಎಂಗಳು ಬರುವ ಹೊತ್ತಿಗೆ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲೇ ನಂಬಿಕೆ ಕಳೆದುಕೊಂಡಿದ್ದರು. ತರುವಾಯ ಬಿಹಾರ ಮತ್ತು ಇತರ ಕೆಲ ಉತ್ತರ ಭಾರತದ ರಾಜ್ಯಗಳಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಕುಸಿದಿತ್ತು. ಇವಿಎಂಗಳನ್ನು ಸಹ ಬಿಡಲಿಲ್ಲ. ದುಷ್ಕರ್ಮಿಗಳು ಇವಿಎಂಗಳನ್ನು ನಾಶಪಡಿಸಿದ ಸುದ್ದಿಗಳು ಕೂಡ ಆ ದಿನಗಳಲ್ಲಿ ಸಾಕಷ್ಟಿದ್ದವು.
ಧರ್ಮದ ಹೆಸರಿನಲ್ಲಿ ಮತಯಾಚನೆಗೆ
ನಿಷೇಧ-2017
ದೇಶದಲ್ಲಿ ಚುನಾವಣೆ ವೇಳೆ ಮತದಾರರ ಮೇಲೆ ಧಾರ್ಮಿಕ ಭಾವನೆ ಬಳಸಿ ಪ್ರಭಾವ ಬೀರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. 1951ರ ಜನತಾ ಪ್ರಾತಿನಿಧ್ಯ ಕಾಯ್ದೆ ಮತ್ತು ಚುನಾವಣಾ ಆಯೋಗದ ಮಾದರಿ ನೀತಿ ಸಂಹಿತೆ ಪ್ರಕಾರ, ಅಭ್ಯರ್ಥಿಗಳು ಧರ್ಮ, ಜಾತಿ, ಜನಾಂಗ, ಸಮುದಾಯ ಅಥವಾ ಭಾಷೆಯ ಆಧಾರದ ಮೇಲೆ ಮತಗಳನ್ನು ಕೇಳುವಂತಿಲ್ಲ. ಅಲ್ಲದೆ, ಧಾರ್ಮಿಕ ಸ್ಥಳಗಳನ್ನು ಚುನಾವಣಾ ಪ್ರಚಾರಕ್ಕಾಗಿ ವೇದಿಕೆಗಳಾಗಿ ಬಳಸಲು ಅವಕಾಶವಿಲ್ಲ. ಆದರೆ, ಇವೆಲ್ಲವೂ ಕಾಗದದ ಮೇಲೆ ಮಾತ್ರ ಎಂಬುದು ಕೂಡ ಸತ್ಯ. ಧ್ರುವೀಕರಣ ರಾಜಕೀಯವೇ ಇವತ್ತಿನ ಚುನಾವಣೆಗಳಲ್ಲಿ ದೊಡ್ಡ ಪಾತ್ರ ವಹಿಸುತ್ತಿದೆ ಎಂಬುದನ್ನು ನೋಡುತ್ತಿದ್ದೇವೆ. ಮಂದಿರ, ಮಸೀದಿ, ಮಚಲಿ, ಮಟನ್, ಮಂಗಲಸೂತ್ರ ವಿಚಾರಗಳೇ ಚುನಾವಣೆಯಲ್ಲಿ ಹಲವರ ಪಾಲಿನ ಅಸ್ತ್ರಗಳಾಗಿರುವುದು ದೊಡ್ಡ ವಿಪರ್ಯಾಸ.
ಆದರೆ, 2017ರ ಜನವರಿಯಲ್ಲಿ ಸುಪ್ರೀಂ ಕೋರ್ಟ್, ರಾಜಕಾರಣಿಗಳು ಮತ ಕೇಳಲು ಧರ್ಮ ಅಥವಾ ಜಾತಿಯನ್ನು ಬಳಸುವುದನ್ನು ನಿಷೇಧಿಸಿ ತೀರ್ಪು ನೀಡಿತು. ಚುನಾವಣಾ ಪ್ರಕ್ರಿಯೆಯಲ್ಲಿ ಧರ್ಮಕ್ಕೆ ಯಾವುದೇ ಪಾತ್ರವಿಲ್ಲ. ಅದು ಜಾತ್ಯತೀತ ಪ್ರಕ್ರಿಯೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಭಾರತದ ಸಂವಿಧಾನ ನಂಬಿಕೆಯ ಮುಕ್ತ ಆಚರಣೆಗೆ ಅವಕಾಶ ನೀಡಿದೆಯಾದರೂ, ಚುನಾವಣೆಯಂಥ ಜಾತ್ಯತೀತ ಪ್ರಕ್ರಿಯೆಯಲ್ಲಿ ಧರ್ಮ ಮತ್ತು ಧಾರ್ಮಿಕ ನಂಬಿಕೆಗಳ ಹಸ್ತಕ್ಷೇಪ ಇರಕೂಡದು ಎಂದು ತೀರ್ಪಿನಲ್ಲಿ ಹೇಳಲಾಗಿತ್ತು. ಮತ ಕೇಳಲು ಧರ್ಮ ಅಥವಾ ಜಾತಿಯನ್ನು ಬಳಸುವುದು ಚುನಾವಣಾ ಕಾನೂನುಗಳ ಅಡಿಯಲ್ಲಿ ಭ್ರಷ್ಟಾಚಾರಕ್ಕೆ ಸಮ ಎಂದು ನ್ಯಾಯಾಲಯ ಹೇಳಿದೆ. ಉತ್ತರಪ್ರದೇಶದಲ್ಲಿ ಚುನಾವಣೆಗೆ ಕೆಲವೇ ವಾರಗಳ ಮೊದಲು ಸುಪ್ರೀಂ ಕೋರ್ಟ್‌ನ ಈ ಮಹತ್ವದ ತೀರ್ಪು ಬಂದಿತ್ತು. ಅಲ್ಲಿ ಧರ್ಮ ಮತ್ತು ಜಾತಿ ಈ ಎರಡೂ ವಿಷಯಗಳು ಸಾಮಾನ್ಯವಾಗಿ ಚುನಾವಣೆಗಳಲ್ಲಿ ಪ್ರಬಲವಾಗಿವೆ.
ತೀರ್ಪಿನ ವೇಳೆ ನ್ಯಾಯಾಧೀಶರಲ್ಲಿ ಭಿನ್ನಾಭಿಪ್ರಾಯ ವಿದ್ದರೂ, ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವದ ಏಳು ನ್ಯಾಯಾಧೀಶರ ಪೀಠ ಆ ತೀರ್ಪನ್ನು ಅಂಗೀಕರಿಸಿತ್ತು. ನಾಲ್ವರು ನ್ಯಾಯಾಧೀಶರು ಆದೇಶದ ಪರವಿದ್ದರೆ, ಮೂವರು ಅದರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರು. ಜಾತಿ, ಮತ ಮತ್ತು ಧರ್ಮದ ಕುರಿತು ಚರ್ಚೆಯನ್ನು ಚುನಾವಣೆಯ ಒಳಗೆ ಮತ್ತು ಹೊರಗೆ ಸಾಂವಿಧಾನಿಕವಾಗಿ ರಕ್ಷಿಸಲಾಗಿದೆ ಮತ್ತದನ್ನು ನಿರ್ಬಂಧಿಸಲಾಗದು. ಈ ವಿಷಯವನ್ನು ನಿರ್ಧರಿಸಲು ಸಂಸತ್ತಿಗೆ ಬಿಡಬೇಕು ಎಂಬುದು ಭಿನ್ನಾಭಿಪ್ರಾಯ ಹೊಂದಿದ್ದ ಮೂವರು ನ್ಯಾಯಾಧೀಶರ ನಿಲುವಾಗಿತ್ತು. ಅದೇನೇ ಇದ್ದರೂ, ಭಾರತದ ಚುನಾವಣಾ ರಾಜಕೀಯ ವಿಧಾನದಲ್ಲಿ ಅಸ್ಪಷ್ಟ ಆದರೆ ದೂರಗಾಮಿ ಪರಿಣಾಮಗಳನ್ನು ಬೀರಬಹುದಾದ ಒಂದು ಮಹತ್ವದ ತೀರ್ಪು ಅದಾಗಿದೆ.