ಭಾರತದ ಚುನಾವಣಾ ಇತಿಹಾಸದಲ್ಲಿನ ಅಕ್ರಮಗಳು ಮತ್ತು ಹಗರಣಗಳು

ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿಯವರು ಮತಗಳ್ಳತನದ ಬಗ್ಗೆ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಮತಗಳ್ಳತನಕ್ಕೆ ಅವರು ಕೊಟ್ಟಿರುವ ಪುರಾವೆಗಳು ಬೆಚ್ಚಿಬೀಳಿಸುವಂತಿವೆ. ಬೆಂಗಳೂರು ಕೇಂದ್ರ ಲೊಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭೆ ಕ್ಷೇತ್ರವೊಂದರಲ್ಲಿಯೇ ಲಕ್ಷ ಮತಗಳ ಕಳ್ಳತನ ನಡೆದಿರುವುದನ್ನು ಅವರು ಬಹಿರಂಗಪಡಿಸಿದ್ದಾರೆ. ಈ ಮೂಲಕ ಅವರು ಬಹುದೊಡ್ಡ ಚುನಾವಣಾ ಅಕ್ರಮವನ್ನು ಗುರುತಿಸಿದ್ದಾರೆ. ಈ ಹಿಂದೆಯೂ ಚುನಾವಣೆಗಳು ವಿವಾದಕ್ಕೊಳಗಾದದ್ದು, ಅಕ್ರಮಗಳು ನಡೆದಿರುವುದರ ದೊಡ್ಡ ಇತಿಹಾಸವೇ ಇದೆ.
ಭಾಗ- 1
ಚುನಾವಣಾ ಅಕ್ರಮಗಳ ಬಗ್ಗೆ ವರ್ಷದಿಂದ ಮತ್ತೆ ಮತ್ತೆ ಆರೋಪಿಸುತ್ತಲೇ ಬಂದಿರುವ ರಾಹುಲ್ ಗಾಂಧಿ, ಈಗ ಅದಕ್ಕೆ ಪುರಾವೆಗಳನ್ನೂ ಒದಗಿಸಿದ್ದಾರೆ. ಬಿಜೆಪಿ ಗೆಲ್ಲುವುದರ ಹಿಂದೆ ಏನು ಆಟ ನಡೆಯುತ್ತಿದೆ ಎಂಬುದನ್ನು ಬಯಲಿಗೆಳೆದಿದ್ದಾರೆ. ಚುನಾವಣಾ ಅಕ್ರಮಗಳು ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನೂ ಅವರು ಹೇಳಿದ್ದಾರೆ. ನಕಲಿ ಮತದಾರರ ಸೇರ್ಪಡೆ, ತಮಗೆ ಬೇಕಿರದ ಮತದಾರರನ್ನು ಪಟ್ಟಿಯಿಂದಲೇ ಅಳಿಸುವುದು ಇಂಥ ಎಲ್ಲ ಬಿಜೆಪಿ ತಂತ್ರಗಳಿಗೆ ಚುನಾವಣಾ ಆಯೋಗದ ಬೆಂಬಲವಿದೆ ಎಂಬುದನ್ನು ಕೂಡ ರಾಹುಲ್ ಹೇಳುತ್ತಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭೆ ಕ್ಷೇತ್ರದ ಬಗ್ಗೆ 6 ತಿಂಗಳ ಅಧ್ಯಯನದ ಬಳಿಕ ಲೋಕಸಭೆಯಲ್ಲಿ ಹೇಗೆ ಲಕ್ಷ ಮತಗಳನ್ನು ಕದಿಯಲಾಗಿದೆ ಎಂಬುದನ್ನು ರಾಹುಲ್ ತೆರೆದಿಟ್ಟಿದ್ದಾರೆ. ಹೇಗೆ ಮತಗಳ್ಳತನವನ್ನು ನಕಲಿ ಮತದಾರರು, ಸುಳ್ಳು ವಿಳಾಸಗಳು, ಒಂದೇ ವಿಳಾಸದಲ್ಲಿ ಬೃಹತ್ ಸಂಖ್ಯೆಯ ಮತದಾರರು, ಅಮಾನ್ಯ ಫೋಟೊಗಳು ಮತ್ತು ಫಾರ್ಮ್ 6ರ ದುರ್ಬಳಕೆ -ಈ ಐದು ವಿಧಾನಗಳ ಮೂಲಕ ಮಾಡಲಾಗಿದೆ ಎಂಬುದನ್ನು ಅವರು ವಿವರಿಸಿದ್ದಾರೆ.
ಮಹದೇವಪುರ ಕ್ಷೇತ್ರದಲ್ಲಿ ಒಟ್ಟು 1,00,250 ಮತಗಳನ್ನು ಕದಿಯಲಾಗಿದ್ದು, ಅದಕ್ಕಾಗಿ ಬೇರೆ ಬೇರೆ ವಿಧಾನಗಳನ್ನು ಬಳಸಲಾಗಿರುವುದನ್ನು ರಾಹುಲ್ ತೋರಿಸಿದ್ದಾರೆ. ಒಂದಕ್ಕಿಂತ ಹೆಚ್ಚು ಕಡೆ ಹೆಸರಿರುವ ನಕಲಿ ಮತದಾರರು 11,965; ನಕಲಿ ವಿಳಾಸ ಹೊಂದಿರುವವರು 40,009; ಒಂದೇ ವಿಳಾಸದಲ್ಲಿರುವವರು 10,452; ಗುರುತಿಸಲಾಗದ ಫೋಟೊಗಳಿರುವವರು 4,132; ಫಾರ್ಮ್ 6 ದುರ್ಬಳಕೆ ಮಾಡಿಕೊಂಡಿರುವವರು 33,692.
ರಾಹುಲ್ ಗಾಂಧಿಯವರ ಆರೋಪಗಳನ್ನೆಲ್ಲ ಈ ಹಿಂದೆಯೂ ಚುನಾವಣಾ ಆಯೋಗ ಮತ್ತು ಬಿಜೆಪಿ ನಿರಾಕರಿಸಿವೆ. ಈಗ ಇಷ್ಟು ದೊಡ್ಡ ಪುರಾವೆ ಮುಂದಿಟ್ಟಿರುವಾಗಲೂ ಬಿಜೆಪಿಯಾಗಲಿ, ಆಯೋಗವಾಗಲಿ ಆರೋಪ ತಳ್ಳಿಹಾಕುವ ಅಥವಾ ಲೇವಡಿ ಮಾಡುವ ಚಾಳಿ ಬಿಟ್ಟಂತಿಲ್ಲ. ಮುಂದೇನು ಎನ್ನುವುದನ್ನು ನೋಡಬೇಕಿದೆ.
ರಾಹುಲ್ ಅವರು ಮತಗಳ್ಳತನದ ಬಗ್ಗೆ ಮಾಡಿರುವ ಆರೋಪಗಳ ಹಿನ್ನೆಲೆಯಲ್ಲಿ, ಭಾರತದ ಚುನಾವಣಾ ಇತಿಹಾಸದಲ್ಲಿನ ಅಕ್ರಮಗಳು ಮತ್ತು ಹಗರಣಗಳ ಕಡೆಗೂ ಕುತೂಹಲ ಹೊರಳುತ್ತದೆ.
ಇಂದಿರಾ ಗೆಲುವು ಅಮಾನ್ಯಗೊಂಡ ಕಥೆ-1975
50 ವರ್ಷಗಳ ಹಿಂದೆ, ಜೂನ್ 12, 1975ರಂದು ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪು, ಇಂದಿರಾ ಗಾಂಧಿಯವರ ಲೋಕಸಭೆ ಚುನಾವಣೆಯಲ್ಲಿನ ಗೆಲುವನ್ನು ಅನೂರ್ಜಿತ ಎಂದು ಘೋಷಿಸಿತ್ತು. ಪ್ರಧಾನಿಯ ಚುನಾವಣೆ ಗೆಲುವನ್ನು ರದ್ದುಗೊಳಿಸಿದ ಸ್ವತಂತ್ರ ಭಾರತದ ಏಕೈಕ ಪ್ರಕರಣ ಅದಾಗಿದೆ. 1971ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 518 ಸ್ಥಾನಗಳ ಪೈಕಿ 352 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ರಾಜ್ ನಾರಾಯಣ್ ಅವರು ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಿಂದ ಇಂದಿರಾ ಗಾಂಧಿಯವರ ವಿರುದ್ಧ ಕಣದಲ್ಲಿದ್ದರು. ಅವರು ರಾಮ್ ಮನೋಹರ ಲೋಹಿಯಾ ಅವರ ಎಸ್‌ಎಸ್‌ಪಿ ಪಕ್ಷದಿಂದ ಸ್ಪರ್ಧಿಸಿದ್ದರು. ಆರಂಭದಲ್ಲಿ ಅವರು ಗೆಲ್ಲುವ ವಿಶ್ವಾಸ ಹೊಂದಿದ್ದರೂ, ಅಂತಿಮವಾಗಿ ಭಾರೀ ಅಂತರದಿಂದ ಸೋಲನುಭವಿಸಿದ್ದರು.
ಈ ಫಲಿತಾಂಶದ ವಿರುದ್ಧ ರಾಜ್ ನಾರಾಯಣ್ ಅವರು ಎಪ್ರಿಲ್ 24, 1971ರಂದು ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದರು. 1971ರ ಚುನಾವಣೆಯಲ್ಲಿ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಇಂದಿರಾ ಅವರ ಗೆಲುವನ್ನು ಕೋರ್ಟ್ ಅಮಾನ್ಯಗೊಳಿಸಿತು. 1975ರ ಜೂನ್ 12ರಂದು ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿಯವರು ಚುನಾವಣಾ ಪ್ರಚಾರದಲ್ಲಿ ಅಕ್ರಮ ನಡೆಸಿದ ಆರೋಪದಡಿ ದೋಷಿ ಎಂದು ಘೋಷಿಸಿ, ಅವರ ಗೆಲುವನ್ನು ರದ್ದುಪಡಿಸಿತು. ಅದಾಗುವಷ್ಟರಲ್ಲಿ ಅವರು ಪ್ರಧಾನಿಯಾಗಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ತಾಂತ್ರಿಕ ಆಧಾರದ ಮೇಲೆ ಕೋರ್ಟ್ ಅವರನ್ನು ಅನರ್ಹಗೊಳಿಸಿದಾಗ, ಅವರು ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಲು ಪ್ರಯತ್ನಿಸಿದರು. ಆದರೆ, ಜೂನ್ 24, 1975ರಂದು ಸುಪ್ರೀಂ ಕೋರ್ಟ್, ಸಂಸದೆಯಾಗಿ ಅವರ ಎಲ್ಲಾ ಸವಲತ್ತುಗಳನ್ನು ಹಿಂದೆಗೆದುಕೊಳ್ಳುವಂತೆ ಆದೇಶಿಸಿತು. ಆದರೆ ಅವರು ಪ್ರಧಾನಿಯಾಗಿ ಮುಂದುವರಿಯಲು ಅವಕಾಶ ಕೊಡಲಾಯಿತು. ಅಧಿಕಾರದಲ್ಲಿ ಉಳಿಯುವ ಅವಕಾಶ ಸಿಕ್ಕಿದ್ದನ್ನು ಬಳಸಿಕೊಂಡ ಅವರು, ರಾಷ್ಟ್ರಪತಿಗೆ ಕರೆಮಾಡಿ ತುರ್ತು ಪರಿಸ್ಥಿತಿ ಘೋಷಿಸುವ ಹಾಗೆ ಮಾಡಿದ್ದರು.
ಚುನಾವಣಾ ಬಾಂಡ್ ರದ್ದು-2024
ಮೋದಿ ಸರಕಾರ ತಂದಿದ್ದ ಚುನಾವಣಾ ಬಾಂಡ್ ಯೋಜನೆ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ 2024ರ ಫೆಬ್ರವರಿ 15ರಂದು ಮಹತ್ವದ ತೀರ್ಪು ನೀಡಿತು. ಈ ಯೋಜನೆಯನ್ನು 2017ರಲ್ಲಿ ಮೋದಿ ಸರಕಾರ ಜಾರಿಗೆ ತಂದಿತ್ತು.
ಜನಪ್ರತಿನಿಧಿ ಕಾಯ್ದೆ ಪ್ರಕಾರ, ರಾಜಕೀಯ ಪಕ್ಷಗಳಿಗೆ ವ್ಯಕ್ತಿ ಅಥವಾ ಸಂಸ್ಥೆಗಳು ನೀಡುವ ದೇಣಿಗೆ ಮೊತ್ತ ರೂ. 20 ಸಾವಿರಕ್ಕಿಂತ ಹೆಚ್ಚಿದ್ದಲ್ಲಿ ಅಂಥವರ ಹೆಸರನ್ನು ರಾಜಕೀಯ ಪಕ್ಷಗಳು ಬಹಿರಂಗಪಡಿಸಬೇಕು. ಆದರೆ, ಹೀಗೆ ಮಾಹಿತಿಯನ್ನೇ ಬಹಿರಂಗಪಡಿಸದೆ ವ್ಯಕ್ತಿಗಳು, ಸಂಸ್ಥೆಗಳು ತಮಗೆ ಬೇಕೆನಿಸಿದಷ್ಟು ದೊಡ್ಡ ಮೊತ್ತವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆಯಾಗಿ ನೀಡಲು ಚುನಾವಣಾ ಬಾಂಡ್ ಮೂಲಕ ಅವಕಾಶ ಮಾಡಿಕೊಡಲಾಗಿತ್ತು. 2017ರಲ್ಲಿ ರೆಪ್ರೆಸೆಂಟೇಷನ್ ಆಫ್ ಪೀಪಲ್ಸ್ ಆಕ್ಟ್ 1951 (ಆರ್‌ಪಿಎ)ನ ಸೆಕ್ಷನ್ 29ಸಿಗೆ ತಿದ್ದುಪಡಿ ತಂದು, 2017ರ ಹಣಕಾಸು ಮಸೂದೆಯಲ್ಲಿ ಚುನಾವಣಾ ಬಾಂಡ್ ಪರಿಚಯಿಸಲಾಯಿತು. ರೂ. 10 ಸಾವಿರದಿಂದ ಒಂದು ಕೋಟಿವರೆಗಿನ ಮೌಲ್ಯಗಳಲ್ಲಿ ಲಭ್ಯವಿದ್ದ ಈ ಬಾಂಡ್‌ಗಳ ಮಾರಾಟವೇನಿದ್ದರೂ ಎಸ್‌ಬಿಐ ಮೂಲಕವೇ ನಡೆಯುತ್ತಿತ್ತು. ಸಂಪೂರ್ಣ ಹತೋಟಿ ಸರಕಾರದ ಬಳಿ ಇತ್ತು ಮತ್ತು ಎಲ್ಲ ಮಾಹಿತಿಗಳು ಸರಕಾರಕ್ಕೆ ಸಿಗುವುದಕ್ಕೆ ಅವಕಾಶವಿತ್ತು. ದೇಣಿಗೆ ನೀಡುವವರ ಮಾಹಿತಿ ಗೌಪ್ಯವಾಗಿರಿಸಲು ಅವಕಾಶವಿರುವುದೇ ಇಲ್ಲಿ ವಿವಾದದ ವಿಚಾರವಾಗಿತ್ತು. ಹೀಗಾಗಿಯೇ, ಚುನಾವಣಾ ಬಾಂಡ್ ಯೋಜನೆಯ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯದ ಅರ್ಧಕ್ಕಿಂತ ಹೆಚ್ಚಿನ ಮೂಲ ಚುನಾವಣಾ ಬಾಂಡ್‌ಗಳ ದೇಣಿಗೆಯೇ ಆಗಿದೆ ಎಂಬುದು ಚುನಾವಣಾ ಬಾಂಡ್ ಬಗ್ಗೆ ಕೋರ್ಟ್‌ನಲ್ಲಿ ಪ್ರಶ್ನಿಸಿರುವ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವಾದವಾಗಿತ್ತು. ಆದರೆ ಇಷ್ಟೊಂದು ದೊಡ್ಡ ಮೊತ್ತದ ಹಣದ ಹರಿವಿನ ಮೂಲ ಕೇಳುವಂತಿಲ್ಲ ಎಂಬುದೇ ದೇಶದ ಜನತೆಯನ್ನು ಪೂರ್ತಿ ಕತ್ತಲಲ್ಲಿಡುವ ನೀತಿಯಾಗಿತ್ತು. ಚುನಾವಣಾ ಬಾಂಡ್ ಮೂಲಕ ದೇಣಿಗೆಯಾಗಿ ಸಲ್ಲಿಕೆಯಾಗುವ ಹಣ ಮನಿ ಲಾಂಡರಿಂಗ್‌ಗೆ ಸಮವೆಂದೂ, ಅದು ಕಪ್ಪು ಹಣವನ್ನು ಬಿಳಿಯಾಗಿಸುವ ಸಾಧನವೆಂದೂ ವಾದಗಳಿದ್ದವು. 2018ರಿಂದ 2023ರ ಮಾರ್ಚ್‌ವರೆಗಿನ ಅವಧಿಯಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಸಲ್ಲಿಸಲಾದ ದೇಣಿಗೆಯ ಶೇ.57ರಷ್ಟು ಬಿಜೆಪಿ ಪಾಲಾಗಿದ್ದುದನ್ನು ವರದಿಗಳು ಹೇಳಿದ್ದವು. 5,271 ಕೋಟಿಯಷ್ಟು ಹಣ ಈ ಬಾಂಡ್‌ಗಳ ಮೂಲಕ ಬಿಜೆಪಿಗೆ ಹರಿದುಬಂದಿತ್ತು. ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಇತ್ತು. ಅದಕ್ಕೆ 952 ಕೋಟಿ ರೂ. ಬಂದಿತ್ತು.
ಕಡೆಗೂ ಆ ಯೋಜನೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿತು. ಇದರೊಂದಿಗೆ, ಮೋದಿ ಸರಕಾರದ ಅತಿ ದೊಡ್ಡ ಹಗರಣವೊಂದು, ವಂಚನೆಯೊಂದು ಬಯಲಾಗಿತ್ತು. ಆ ಯೋಜನೆ ಮಾಹಿತಿ ಹಕ್ಕು ಕಾಯ್ದೆಯ ಉಲ್ಲಂಘನೆ ಹಾಗೂ ಸಂವಿಧಾನದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗೆ ವಿರುದ್ಧವೆಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು. ರಾಜಕೀಯ ಪಕ್ಷಗಳಿಗೆ ಆರ್ಥಿಕ ಬೆಂಬಲ ನೀಡುವುದು ಕ್ವಿಡ್ ಪ್ರೊ ಕ್ವೊ, ಅಂದರೆ ಉಪಕಾರಕ್ಕೆ ಪ್ರತ್ಯುಪಕಾರ ಪಡೆಯಲು ಕಾರಣವಾಗಬಹುದು ಎಂದಿತ್ತು. ಕಪ್ಪುಹಣಕ್ಕೆ ಕಡಿವಾಣ ಹಾಕುವುದಕ್ಕಾಗಿ ಈ ಯೋಜನೆ ಎಂಬ ಸರಕಾರದ ನೆಪವನ್ನು ಕೂಡ ತಳ್ಳಿಹಾಕಿದ್ದ ಕೋರ್ಟ್, ಅದಕ್ಕೆ ಪರ್ಯಾಯ ಮಾರ್ಗಗಳಿವೆ ಎಂದಿತ್ತು.
ಪೇಯ್ಡ್ ನ್ಯೂಸ್ ಹಗರಣ - 2011
2007ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ತಮಗೆ ಅನುಕೂಲಕರವಾಗಿದ್ದ ಮಾಧ್ಯಮ ವರದಿಗಾಗಿ ಖರ್ಚು ಮಾಡಿದ ವೆಚ್ಚ ಬಹಿರಂಗಪಡಿಸದೇ ಇದ್ದುದಕ್ಕಾಗಿ ಚುನಾವಣಾ ಆಯೋಗ ಮೊದಲ ಬಾರಿಗೆ ಎಂಎಲ್‌ಎಯನ್ನು ಅನರ್ಹಗೊಳಿಸಿದ ವಿದ್ಯಮಾನ 2011ರಲ್ಲಿ ನಡೆದಿತ್ತು. ಉತ್ತರ ಪ್ರದೇಶದ ಶಾಸಕಿ ಉಮ್ಲೇಶ್ ಯಾದವ್ ಅವರನ್ನು ಮೂರು ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸಲಾಗಿತ್ತು. ಉದ್ಯಮಿ ಮತ್ತು ರಾಜಕಾರಣಿ ಡಿ.ಪಿ. ಯಾದವ್ ಪತ್ನಿಯಾಗಿದ್ದ ಅವರು, ತಮ್ಮ ಪತಿಯ ಪಕ್ಷವಾದ ರಾಷ್ಟ್ರೀಯ ಪರಿವರ್ತನ ದಳದ ಅಭ್ಯರ್ಥಿಯಾಗಿದ್ದರು ಮತ್ತು ಬಿಸೌಲಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಎರಡು ಪತ್ರಿಕೆಗಳಲ್ಲಿ ಸುದ್ದಿಯಂತೆ ಕಾಣುವ, ಆದರೆ ನಿಜವಾಗಿಯೂ ಜಾಹೀರಾತುಗಳಾಗಿದ್ದ ವರದಿಗಳಿಗೆ ಖರ್ಚು ಮಾಡಿದ್ದ ಹಣದ ಮೊತ್ತ ಬಹಿರಂಗಪಡಿಸಿಲ್ಲ ಎಂಬ ಆರೋಪ ಅವರ ಮೇಲಿತ್ತು.
ರಾಜಕಾರಣಿಗಳು ಹಣ ನೀಡಿ ಬರೆಸಿಕೊಳ್ಳುವ ಅನುಕೂಲಕರ ಮಾಧ್ಯಮ ವರದಿಯನ್ನು ಪೇಯ್ಡ್ ನ್ಯೂಸ್ ಎಂದು ಗುರುತಿಸಲಾಗುತ್ತದೆ. ಇದು ಹಲವಾರು ದೊಡ್ಡ ಮಾಧ್ಯಮ ಸಂಸ್ಥೆಗಳ ವರ್ಚಸ್ಸಿಗೆ ಧಕ್ಕೆ ತಂದಿದೆ. ರಾಜಕಾರಣಿಗಳು ತಮ್ಮ ಪ್ರಚಾರಗಳ ಸಕಾರಾತ್ಮಕ ವರದಿ ಪ್ರಕಟಣೆ ಮತ್ತು ಪ್ರಸಾರಕ್ಕಾಗಿ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳಿಗೆ ಹಣ ನೀಡುವ ಹಲವಾರು ಉದಾಹರಣೆಗಳನ್ನು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ವರದಿ ಉಲ್ಲೇಖಿಸಿದೆ. ಪ್ರಚಾರ ವೆಚ್ಚದ ಮಿತಿಯನ್ನು ಮೀರಿದ್ದಕ್ಕಾಗಿ ಉಮ್ಲೇಶ್ ಯಾದವ್ ತಪ್ಪಿತಸ್ಥರೆಂದು ಆಯೋಗ ನಿರ್ಧರಿಸಿತ್ತು. ಪೇಯ್ಡ್ ನ್ಯೂಸ್ ಮೇಲಿನ ವೆಚ್ಚ ಬಹಿರಂಗಪಡಿಸದೇ ಇರುವ ಮೂಲಕ ಕಾನೂನನ್ನು ಉಲ್ಲಂಘಿಸಿರುವುದು ಮಾತ್ರವಲ್ಲದೆ ತನ್ನ ಬಗ್ಗೆ ಸುಳ್ಳು ಪ್ರಚಾರ ಮಾಡಿಸಿಕೊಂಡು ಮತದಾರರನ್ನು ಕೂಡ ವಂಚಿಸಿದಂತಾಗಿದೆ. ಇದು ಸುಪ್ರೀಂ ಕೋರ್ಟ್ ತೀರ್ಪಿಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಆಗ ಆಯೋಗ ಹೇಳಿತ್ತು. ಶಾಸಕರೊಬ್ಬರನ್ನು ಅನರ್ಹಗೊಳಿಸಿದ್ದ ಅಕ್ಟೋಬರ್ 20, 2011ರ ಆಯೋಗದ ಈ ಆದೇಶ ಬಹಳ ಮಹತ್ವದ್ದಾಗಿತ್ತು.
ಮೊದಲ ಇವಿಎಂ ಚುನಾವಣೆ ಫಲಿತಾಂಶ ರದ್ದು-1984
1982ರಲ್ಲಿ ಕೇರಳದ ಎರ್ನಾಕುಲಂ ಜಿಲ್ಲೆಯ ಉತ್ತರ ಪರವೂರ್‌ನ 84 ಮತಗಟ್ಟೆಗಳ 50ರಲ್ಲಿ ಚುನಾವಣಾ ಆಯೋಗ ಮೊದಲ ಬಾರಿಗೆ ಮತಪತ್ರಗಳ ಬದಲು ಇವಿಎಂ ಬಳಸಿತು. ಆರು ಸ್ಪರ್ಧಿಗಳು ಕಣದಲ್ಲಿದ್ದರೂ, ಪ್ರಮುಖ ಸ್ಪರ್ಧೆ ಕಾಂಗ್ರೆಸ್‌ನ ಎ.ಸಿ. ಜೋಸ್ ಮತ್ತು ಭಾರತ ಕಮ್ಯುನಿಸ್ಟ್ ಪಕ್ಷದ ಎನ್. ಶಿವನ್ ಪಿಳ್ಳೈ ನಡುವೆ ಇತ್ತು. ಮೇ 20, 1982ರಂದು ಫಲಿತಾಂಶ ಪ್ರಕಟವಾಗಿ, ಪಿಳ್ಳೈ 30,450 ಮತಗಳನ್ನು ಪಡೆಯುವ ಮೂಲಕ ಚುನಾಯಿತರಾದರು. ಆದರೆ ಜೋಸ್ 30,327 ಮತಗಳನ್ನು ಪಡೆದಿದ್ದರು. ಗೆಲುವಿನ ಅಂತರ ಕೇವಲ 123 ಮತಗಳಾಗಿದ್ದರಿಂದ, ಜೋಸ್ ಕೇರಳ ಹೈಕೋರ್ಟ್‌ನಲ್ಲಿ ಇವಿಎಂಗಳ ಬಳಕೆ ಪ್ರಶ್ನಿಸಿದರು. ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಚುನಾವಣಾ ನಿಯಮಗಳ ನಡವಳಿಕೆ ಚುನಾವಣಾ ಆಯೋಗಕ್ಕೆ ಆ ಸಮಯದಲ್ಲಿ ಇಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಲು ಅಧಿಕಾರ ನೀಡಿರಲಿಲ್ಲ ಎಂದು ಅವರು ವಾದಿಸಿದ್ದರು. ಆದರೆ ಇವಿಎಂಗಳನ್ನು ಬಳಸುವ ಆಯೋಗದ ನಿರ್ಧಾರವನ್ನು ಎತ್ತಿಹಿಡಿದ ಹೈಕೋರ್ಟ್, ಫಲಿತಾಂಶಗಳಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು. ಕಡೆಗೆ ಅವರು ಸುಪ್ರೀಂ ಕೋರ್ಟ್ ಮೊರೆಹೋದರು. ನ್ಯಾಯಮೂರ್ತಿಗಳಾದ ಸೈಯದ್ ಮುರ್ತಝಾ ಫಝಲ್ ಅಲಿ, ಎ. ವರದರಾಜನ್ ಮತ್ತು ರಂಗನಾಥ್ ಮಿಶ್ರಾ ಅವರನ್ನೊಳಗೊಂಡ ಮೂವರು ನ್ಯಾಯಾಧೀಶರ ಪೀಠ ಇವಿಎಂಗಳ ಬಳಕೆಯನ್ನು ಅನಧಿಕೃತವೆಂದು ಘೋಷಿಸಿತು. ಅಲ್ಲದೆ 50 ಮತಗಟ್ಟೆಗಳಲ್ಲಿ ಬ್ಯಾಲೆಟ್ ಪೇಪರ್ ಮೂಲಕ ಮರು ಮತದಾನಕ್ಕೆ ಆದೇಶಿಸಿತು. 1984 ರಲ್ಲಿ ಮರು ಮತದಾನದ ನಂತರ, ಜೋಸ್ 2,000 ಮತಗಳ ಅಂತರದಿಂದ ಗೆದ್ದರು.
ಅದೇನೇ ಇದ್ದರೂ, ಪರವೂರ್ ಭಾರತದಲ್ಲಿ ಇವಿಎಂಗಳನ್ನು ಪ್ರಯೋಗಿಸಿದ ಮೊದಲ ಕ್ಷೇತ್ರವೆನ್ನಿಸಿತು. 1984ರ ಸುಪ್ರೀಂ ಕೋರ್ಟ್ ಆದೇಶದ ನಂತರ, ಇವಿಎಂಗಳ ಬಳಕೆಯನ್ನು ಚುನಾವಣಾ ಆಯೋಗ ಸ್ಥಗಿತಗೊಳಿಸಿತು. 1992ರಲ್ಲಿ ಸಂಸತ್ತು ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಚುನಾವಣಾ ನಡವಳಿಕೆ ನಿಯಮಗಳಿಗೆ ತಿದ್ದುಪಡಿ ತಂದು, ಇವಿಎಂಗಳ ಬಳಕೆಯನ್ನು ಕಾನೂನುಬದ್ಧಗೊಳಿಸಿತು. 1998ರಿಂದ, ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಗಳಿಗೆ ಇವಿಎಂಗಳನ್ನು ಬಳಸಲಾಗುತ್ತಿದೆ. ಇದರೊಂದಿಗೆ, ಚುನಾವಣೆಗಳಲ್ಲಿ ಹೆಚ್ಚಿನ ಪಾರದರ್ಶಕತೆ ತರುವ ಉದ್ದೇಶದಿಂದ ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಅನ್ನು ಕೂಡ ಪರಿಚಯಿಸಲಾಗಿದೆ.