‘ದಿಢೀರ್ ರಾಜೀನಾಮೆ’ಗಳ ಸುತ್ತ ಮುತ್ತ...

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಪ್ತವಲಯದವರಾಗಿದ್ದ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಲಾಯಿತು ಎಂಬುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ವಿಚಾರ. ಅನೇಕ ಸಲ ಇಂಥ ಬೆಳವಣಿಗೆಗಳು ಅಚ್ಚರಿಗೆ ಕಾರಣವಾಗುತ್ತವೆ. ಪ್ರಮುಖ ನಾಯಕರೇ ಇದ್ದಕ್ಕಿದ್ದ ಹಾಗೆ ಹೊರಹೋಗುವುದು ನಡೆಯುತ್ತದೆ. ದಿಢೀರ್ ರಾಜೀನಾಮೆಗಳು ಕುತೂಹಲಕ್ಕೆ ಎಡೆ ಮಾಡಿಕೊಡುತ್ತವೆ. ಹಗರಣಗಳಲ್ಲಿ ಸಿಲುಕುವುದು, ವಿವಾದಾತ್ಮಕ ಹೇಳಿಕೆಗಳು, ಪಕ್ಷದ ನಾಯಕರ ವಿರುದ್ಧವೇ ತಿರುಗಿಬಿದ್ದಂಥ ಸಂದರ್ಭಗಳಲ್ಲಿ ಹೀಗಾಗುವುದಿದೆ.
ಭಾಗ- 2
ಉತ್ತರಾಖಂಡ ಮಂತ್ರಿ ರಾಜೀನಾಮೆ
ಉತ್ತರಾಖಂಡ ಸಚಿವರಾಗಿದ್ದ ಪ್ರೇಮ್‌ಚಂದ್ ಅಗರವಾಲ್, ವಿಧಾನಸಭೆಯಲ್ಲಿ ಗುಡ್ಡಗಾಡು ಜನರ ವಿರುದ್ಧ ನೀಡಿದ ಹೇಳಿಕೆ ದೊಡ್ಡ ವಿವಾದ ಸೃಷ್ಟಿಸಿದ ಬಳಿಕ ಮಾರ್ಚ್ 17, 2025ರಂದು ರಾಜೀನಾಮೆ ನೀಡಿದರು. ಆಡಳಿತಾರೂಢ ಬಿಜೆಪಿಗೆ ಹಿನ್ನಡೆಯಾದ ವಿದ್ಯಮಾನ ಅದಾಗಿತ್ತು. ರಾಜ್ಯ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಅವರು ಗುಡ್ಡಗಾಡು ಜನರನ್ನು ಟೀಕಿಸಿದ್ದರು. ಈ ರಾಜ್ಯ ಗುಡ್ಡಗಾಡು ಜನರ ಸೊತ್ತೇನಲ್ಲ ಎಂದು ಹೇಳಿದ್ದರು. ಅವರ ಆ ಹೇಳಿಕೆಗಾಗಿ ಪುಷ್ಕರ್ ಸಿಂಗ್ ಧಾಮಿ ಸರಕಾರ ವಿರೋಧ ಪಕ್ಷಗಳಿಂದ ಭಾರೀ ಟೀಕೆಗೆ ತುತ್ತಾಗಬೇಕಾಯಿತು.
ಸಾಜಿ ಚೆರಿಯನ್ ರಾಜೀನಾಮೆ
ಸಂವಿಧಾನ ವಿರೋಧಿ ಹೇಳಿಕೆಯ ಬಳಿಕ ಕೇರಳ ಸಚಿವ ಸಾಜಿ ಚೆರಿಯನ್ 2022ರ ಜುಲೈನಲ್ಲಿ ರಾಜೀನಾಮೆ ನೀಡಿದ್ದರು. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ಅವರು, ಭಾರತೀಯ ಸಂವಿಧಾನದಲ್ಲಿ ಜಾತ್ಯತೀತತೆ, ಪ್ರಜಾಪ್ರಭುತ್ವದ ಬಗ್ಗೆ ಸಡಿಲವಾಗಿ ವಿವರಿಸಲಾಗಿದೆ. ಭಾರತೀಯ ಸಂವಿಧಾನ ಕಾರ್ಮಿಕರ ಶೋಷಣೆಗೆ ಸಹಾಯ ಮಾಡಿದೆ ಮತ್ತು ದೇಶದಲ್ಲಿ ಕಾರ್ಮಿಕರಿಗೆ ಯಾವುದೇ ರಕ್ಷಣೆ ಸಿಗದಂತಾಗಿದೆ ಎಂದು ಹೇಳಿದ್ದರು. ದೇಶದ ಸಂವಿಧಾನ ಶೋಷಣೆಯನ್ನು ಕ್ಷಮಿಸುತ್ತದೆ ಮತ್ತು ಜನಸಾಮಾನ್ಯರನ್ನು ಶೋಷಿಸಲು ನೆರವಾಗುವ ರೀತಿಯಲ್ಲಿ ಅದನ್ನು ಬರೆಯಲಾಗಿದೆ ಎಂದು ಪ್ರತಿಪಾದಿಸಿದ್ದರಿಂದ ವಿವಾದ ಭುಗಿಲೆದ್ದಿತ್ತು. ವಿರೋಧ ಪಕ್ಷದಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು. ಸಿಪಿಎಂ ನಾಯಕರಾಗಿರುವ ಚೆರಿಯನ್, ಪಿಣರಾಯಿ ವಿಜಯನ್ ನೇತೃತ್ವದ ಎರಡನೇ ಅವಧಿಯ ಎಲ್‌ಡಿಎಫ್ ಸರಕಾರದಲ್ಲಿ ರಾಜೀನಾಮೆ ನೀಡಿದ ಮೊದಲ ಸಚಿವರಾದರು. ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಸಾಜಿ ಚೆರಿಯನ್, ಸಂವಿಧಾನವನ್ನು ಗೇಲಿ ಮಾಡುವುದಾಗಲೀ, ಅವಹೇಳನ ಮಾಡುವುದಾಗಲೀ ನನ್ನ ಉದ್ದೇಶವಾಗಿರಲಿಲ್ಲ. ಭಾರತದ ಸಂವಿಧಾನದ ಬಗ್ಗೆ ಅಪಾರ ಗೌರವವಿದೆ ಎಂದಿದ್ದರು.
ಹರ್‌ಸಿಮ್ರತ್ ಕೌರ್ ಬಾದಲ್ ರಾಜೀನಾಮೆ
ಕೇಂದ್ರದ ಕೃಷಿ ಮಸೂದೆಗಳನ್ನು ವಿರೋಧಿಸಿ ಮೋದಿ ಸಂಪುಟಕ್ಕೆ ಶಿರೋಮಣಿ ಅಕಾಲಿ ದಳದ ಹರ್‌ಸಿಮ್ರತ್ ಕೌರ್ ಬಾದಲ್ 2020ರ ಸೆಪ್ಟಂಬರ್ 17ರಂದು ರಾಜೀನಾಮೆ ನೀಡಿದರು. ರೈತ ವಿರೋಧಿ ಕ್ರಮಗಳನ್ನು ವಿರೋಧಿಸಿ ರಾಜೀನಾಮೆ ನೀಡುತ್ತಿರುವುದಾಗಿ, ಮೋದಿ ಸರಕಾರದಲ್ಲಿನ ಶಿರೋಮಣಿ ಅಕಾಲಿ ದಳದ ಏಕೈಕ ಪ್ರತಿನಿಧಿಯಾಗಿದ್ದ ಅವರು ಹೇಳಿದ್ದರು. ಕೇಂದ್ರದ ಕೃಷಿ ಮಸೂದೆಗಳನ್ನು ರೈತ ವಿರೋಧಿ ಎಂದು ಕರೆದ ಅವರು, ಸಂಪುಟದಿಂದ ಹೊರನಡೆದಿದ್ದರು ಮತ್ತು ರೈತರೊಂದಿಗೆ ನಿಲ್ಲಲು ಹೆಮ್ಮೆಪಡುವುದಾಗಿ ಹೇಳಿದ್ದರು. ಪ್ರಧಾನಿ ಮೋದಿ ಅವರಿಗೆ ಬರೆದ ನಾಲ್ಕು ಪುಟಗಳ ರಾಜೀನಾಮೆ ಪತ್ರದಲ್ಲಿ ಅವರು, ‘‘ನನ್ನ ನಿರ್ಧಾರ ನನ್ನ ಪಕ್ಷದ ದೃಷ್ಟಿಕೋನ, ಅದರ ಅದ್ಭುತ ಪರಂಪರೆ ಮತ್ತು ರೈತರ ಹಿತಾಸಕ್ತಿಗಳನ್ನು ಕಾಪಾಡಲು ಯಾವುದೇ ಮಟ್ಟಕ್ಕೆ ಹೋಗುವ ಬದ್ಧತೆಯನ್ನು ಸೂಚಿಸುತ್ತದೆ’’ ಎಂದಿದ್ದರು.
ಶಿವರಾಜ್ ಪಾಟೀಲ್ ರಾಜೀನಾಮೆ
2008ರ ಮುಂಬೈ ದಾಳಿಯ ನಂತರ ವ್ಯಾಪಕ ಟೀಕೆಗಳು ಕೇಳಿಬಂದಾಗ, ದೇಶದ ಗೃಹಮಂತ್ರಿಯಾಗಿದ್ದ ಶಿವರಾಜ್ ಪಾಟೀಲ್ ಅವರು ಅದೇ ನವೆಂಬರ್ 3ರಂದು ಹುದ್ದೆಗೆ ರಾಜೀನಾಮೆ ನೀಡಿದರು. ಭದ್ರತಾ ಲೋಪಕ್ಕೆ ಅವರು ನೈತಿಕ ಹೊಣೆ ಹೊತ್ತುಕೊಂಡರು. ದಾಳಿಯಿಂದ ಜನರನ್ನು ರಕ್ಷಿಸಲು ಭದ್ರತೆ ಮತ್ತು ಗುಪ್ತಚರ ಸಂಸ್ಥೆಗಳು ವಿಫಲವಾದದ್ದಕ್ಕೆ ತಲೆದಂಡವಾಗಲೇಬೇಕೆಂಬ ಒತ್ತಾಯಗಳಿದ್ದವು. ಪರಿಣಾಮವಾಗಿ ಸೋನಿಯಾ ಗಾಂಧಿ ತಮ್ಮ ನಿಷ್ಠಾವಂತ ನಾಯಕನನ್ನೇ ಹೊರ ಕಳುಹಿಸಿದ್ದರು.
ವಿಲಾಸ್ ರಾವ್ ದೇಶ್‌ಮುಖ್ ರಾಜೀನಾಮೆ
ಮುಂಬೈ ದಾಳಿಗೆ ತಲೆದಂಡ ಕೊಟ್ಟ ಮತ್ತೊಬ್ಬ ಪ್ರಮುಖ ನಾಯಕ ಆಗ ಮಹಾರಾಷ್ಟ್ರ ಸಿಎಂ ಆಗಿದ್ದ ವಿಲಾಸ್ ರಾವ್ ದೇಶ್‌ಮುಖ್. 2008ರ ಮುಂಬೈ ದಾಳಿಯ ನಂತರ, ಅವರು ನೈತಿಕ ಹೊಣೆ ಹೊತ್ತು 2008ರ ಡಿಸೆಂಬರ್ 5ರಂದು ರಾಜೀನಾಮೆ ನೀಡಿದ್ದರು.
ಅಶೋಕ್ ಚೌಹಾಣ್ ರಾಜೀನಾಮೆ
ವಿಲಾಸ್ ರಾವ್ ದೇಶ್‌ಮುಖ್ ರಾಜೀನಾಮೆ ಬಳಿಕ ಅನಾಯಾಸವಾಗಿ ಒಲಿದಿದ್ದ ಮುಖ್ಯಮಂತ್ರಿ ಪಟ್ಟವನ್ನು ಅಶೋಕ್ ಚೌಹಾಣ್ ಕಳೆದುಕೊಳ್ಳುವುದಕ್ಕೆ ಆದರ್ಶ ಹೌಸಿಂಗ್ ಸೊಸೈಟಿ ಹಗರಣ ಕಾರಣವಾಗಿತ್ತು. ಮುಂಬೈನಲ್ಲಿನ ಆದರ್ಶ ಹೌಸಿಂಗ್ ಸೊಸೈಟಿ ಹಗರಣ ಮಹಾರಾಷ್ಟ್ರ ರಾಜಕಾರಣದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಆಗ ಮಹಾರಾಷ್ಟ್ರ ಸಿಎಂ ಆಗಿದ್ದ ಅಶೋಕ್ ಚೌಹಾಣ್ ಹೆಸರು ಆ ಹಗರಣದಲ್ಲಿ ಕೇಳಿಬಂದಿತ್ತು. ಕಾರ್ಗಿಲ್ ಯುದ್ಧದ ವೀರರಿಗೆ ಮತ್ತು ಅಲ್ಲಿ ಹುತಾತ್ಮರಾದ ಯೋಧರ ಪತ್ನಿಯರಿಗಾಗಿ ಕಟ್ಟಲಾಗಿದ್ದ ವಸತಿ ಸಂಕೀರ್ಣದಲ್ಲಿ ಬೇನಾಮಿಗಳಿಗೆ ಫ್ಲಾಟ್‌ಗಳನ್ನು ಹಂಚಿಕೆ ಮಾಡಿದ್ದ ಆರೋಪ ಚೌಹಾಣ್ ಮೇಲಿತ್ತು. ಅವರ ಆಪ್ತ ಸಂಬಂಧಿಕರು ಆ ಕಟ್ಟಡದಲ್ಲಿ ಫ್ಲಾಟ್‌ಗಳನ್ನು ಪಡೆದಿದ್ದಾರೆ ಎನ್ನಲಾಗಿತ್ತು. ಇದನ್ನು ತಿಳಿದ ಬಳಿಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಚೌಹಾಣ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೇಳಿದ್ದರು. ಅವರು 2010ರ ನವೆಂಬರ್‌ನಲ್ಲಿ ರಾಜೀನಾಮೆ ನೀಡಬೇಕಾಯಿತು.
ಹಗರಣಗಳಿಂದಾಗಿ ಯುಪಿಎ ಸಚಿವರ ರಾಜೀನಾಮೆ
ಯುಪಿಎ ಅವಧಿಯಲ್ಲಿ ಕಾಮನ್ವೆಲ್ತ್ ಕ್ರೀಡಾಕೂಟ, 2ಜಿ ಸ್ಪೆಕ್ಟ್ರಮ್ ಮತ್ತು ಕಲ್ಲಿದ್ದಲು ಬ್ಲಾಕ್‌ಗಳ ಹಂಚಿಕೆ ಮತ್ತು ರೈಲ್ವೆ ಭ್ರಷ್ಟಾಚಾರ ಹಗರಣಗಳ ಸರಣಿ ಹಲವಾರು ಸಚಿವರು ಮತ್ತು ನಾಯಕರ ತಲೆದಂಡಕ್ಕೆ ಕಾರಣವಾಯಿತು. ಕಡೆಗೆ ನಿರ್ದೋಷಿ ಎಂದು ಸಾಬೀತಾದರೂ, ಎ. ರಾಜಾ ಜೈಲಿಗೆ ಹೋಗುವಂತಾಯಿತು. ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚೌಹಾಣ್, ದಯಾನಿಧಿ ಮಾರನ್ ಮತ್ತು ಬನ್ಸಾಲ್ ಅವರಂತಹ ಕೇಂದ್ರ ಸಚಿವರನ್ನು ಬಲವಂತವಾಗಿ ಹೊರಹಾಕಲಾಯಿತು. ಯುಪಿಎ ಎರಡನೇ ಅವಧಿ ಅತಿ ಭ್ರಷ್ಟತೆಯ ಕಳಂಕದೊಂದಿಗೆ ಕೊನೆಯಾಗಲು ಈ ವಿದ್ಯಮಾನಗಳು ಕಾರಣವಾದವು.
ಎ. ರಾಜಾ - 2ಜಿ ಹಂಚಿಕೆ ಹಗರಣ
ಮಾಜಿ ದೂರಸಂಪರ್ಕ ಸಚಿವ ಎ. ರಾಜಾ 2008ರಲ್ಲಿ ಮೊಬೈಲ್ ಫೋನ್ ಪರವಾನಿಗೆ ಹಂಚಿಕೆಯಲ್ಲಿ ಅಕ್ರಮ ಎಸಗಿದ ಆರೋಪ ಹೊರಬೇಕಾಯಿತು. ರಾಜಾ ಎಲ್ಲಾ ಆರೋಪಗಳನ್ನೂ ನಿರಾಕರಿಸಿದ್ದರು ಮತ್ತು ಪ್ರತಿಯೊಂದು ಪ್ರಮುಖ ನಿರ್ಧಾರವನ್ನು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಪಿ. ಚಿದಂಬರಂ ಮತ್ತು ಪ್ರಣಬ್ ಮುಖರ್ಜಿ ಅವರೊಂದಿಗೆ ಸಮಾಲೋಚಿಸಿದ ನಂತರ ತೆಗೆದುಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿದ್ದರು. ಕಡೆಗೆ, ಅವರು ದೋಷಿಯಲ್ಲ ಎಂಬುದನ್ನು ಕೋರ್ಟ್ ಕೂಡ ದೃಢಪಡಿಸಿತು. ಆದರೆ ಅಷ್ಟರೊಳಗೆ ಏನೆಲ್ಲಾ ನಡೆದುಹೋಗಿತ್ತು. ರಾಜಾ 2010ರ ನವೆಂಬರ್‌ನಲ್ಲಿ ಕೇಂದ್ರ ಮಂತ್ರಿ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು. ತಿಹಾರ್ ಜೈಲು ಸೇರುವಂತಾಯಿತು. ಕಡೆಗೆ 2017ರ ಡಿಸೆಂಬರ್ ಡಿಸೆಂಬರ್ 21 ರಂದು ಕೋರ್ಟ್ ಅವರನ್ನು ದೋಷಮುಕ್ತಗೊಳಿಸಿತ್ತು.
ದಯಾನಿಧಿ ಮಾರನ್- 2ಜಿ ಹಗರಣ
ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್ ಮತ್ತು ಅವರ ಸಹೋದರ ಮತ್ತು ಸನ್ ಟಿ.ವಿ. ವ್ಯವಸ್ಥಾಪಕ ನಿರ್ದೇಶಕ ಕಲಾನಿಧಿ ಮಾರನ್ ಅವರು 2ಜಿ ಸ್ಪೆಕ್ಟ್ರಮ್ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಹಣ ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಈ.ಡಿ. ಆರೋಪಿಸಿತ್ತು. ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಾಗಿದ್ದ ಪ್ರಕರಣ, ಏರ್‌ಸೆಲ್-ಮ್ಯಾಕ್ಸಿಸ್ ಒಪ್ಪಂದದಲ್ಲಿ ಮಾರನ್ ಸಹೋದರರು ಪಡೆದಿದ್ದಾರೆನ್ನಲಾದ ಸುಮಾರು 550 ಕೋಟಿ ರೂ.ಗಳಿಗೆ ಸಂಬಂಧಿಸಿತ್ತು. ದಯಾನಿಧಿ ಮಾರನ್ 2004-05ರಲ್ಲಿ ದೂರಸಂಪರ್ಕ ಪರವಾನಿಗೆಗಳ ಮಂಜೂರಾತಿಯಲ್ಲಿ ಮಲೇಶ್ಯದ ಕಂಪೆನಿ ಮ್ಯಾಕ್ಸಿಸ್‌ಗೆ ಒಲವು ತೋರಿದ್ದರು ಎಂಬ ಆರೋಪಗಳು ಕೇಳಿಬಂದವು. ಸಂಪರ್ಕ ಮತ್ತು ಮಾಹಿತಿ ಖಾತೆ ಸಚಿವರಾಗಿದ್ದ ಅವಧಿಯಲ್ಲಿನ ಈ ಆರೋಪಗಳಿಗಾಗಿ ಅವರು 2011ರ ಜುಲೈನಲ್ಲಿ ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದರು. ಈ ಹೊತ್ತಲ್ಲಿ ಅವರು ಜವಳಿ ಖಾತೆ ಸಚಿವರಾಗಿದ್ದರು.
ಪಿ.ಕೆ. ಬನ್ಸಾಲ್ ಹಗರಣ - ರೈಲ್ವೆ ನೇಮಕಾತಿ ಹಗರಣ
ರೈಲ್ವೆ ಸಚಿವರಾಗಿದ್ದ ಹೊತ್ತಲ್ಲಿ (2012-13) ಪವನ್ ಕುಮಾರ್ ಬನ್ಸಾಲ್ ಉದ್ಯೋಗಕ್ಕಾಗಿ ನಗದು ಹಗರಣದಲ್ಲಿ ಸಿಲುಕಿದ್ದಾರೆ ಎನ್ನಲಾಯಿತು. ಅವರ ಸೋದರಳಿಯ ವಿಜಯ್ ಸಿಂಗ್ಲಾ ವಿರುದ್ಧ, ರೈಲ್ವೆ ಮಂಡಳಿ (ಸಿಬ್ಬಂದಿ) ಸದಸ್ಯ ಮಹೇಶ್ ಕುಮಾರ್ ಭಡ್ತಿಗಾಗಿ 90 ಲಕ್ಷ ರೂ. ಲಂಚ ಪಡೆದ ಆರೋಪದ ಮೇಲೆ ಸಿಬಿಐ ಕೇಸ್ ದಾಖಲಿಸಿತ್ತು. ಮೇ 3, 2013ರಂದು ಸಿಬಿಐ ವಿಜಯ್ ಸಿಂಗ್ಲಾ ಅವರನ್ನು ಬಂಧಿಸಿತು. ಹಗರಣ ಬೆಳಕಿಗೆ ಬಂದ ಬಳಿಕ, ಬನ್ಸಾಲ್ ರಾಜೀನಾಮೆ ಪಡೆಯುವಂತೆ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಸೋನಿಯಾ ಸೂಚಿಸಿದರು. 2013ರ ಮೇ 10ರಂದು ಬನ್ಸಾಲ್ ರಾಜೀನಾಮೆ ನೀಡಬೇಕಾಯಿತು.