ಭಟ್ಕಳದ ತಂಝೀಮ್ ಸಂಘಟನೆಯ ಹೆಸರಿನಲ್ಲಿ ಶಿರೂರಿನ ಮಹಿಳೆಯರಿಗೆ ಲಕ್ಷಾಂತರ ರೂ. ವಂಚನೆ: ಪ್ರಕರಣ ದಾಖಲು

ಭಟ್ಕಳ: ಇಲ್ಲಿನ ಸಾಮಾಜಿಕ ಮತ್ತು ರಾಜಕೀಯ ಸಂಸ್ಥೆಯಾಗಿರುವ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ಭಟ್ಕಳ ಸಂಘಟನೆಯ ಪ್ರತಿನಿಧಿ ಎಂದು ಹೇಳಿಕೊಂಡ ಅಜ್ಞಾತ ವ್ಯಕ್ತಿಯೊಬ್ಬ, ಬಡ್ಡಿರಹಿತ ಸಾಲ ನೀಡುತ್ತೇವೆ ಎಂದು ಶಿರೂರಿನ ಮಹಿಳೆಯರ ಲಕ್ಷಾಂತರ ರೂ. ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಕುರಿತಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮಾಹಿತಿಯ ಪ್ರಕಾರ, ಸುಮಾರು ಒಂಬತ್ತು ತಿಂಗಳ ಹಿಂದೆ ಶಿರೂರಿನ ಹಡವಿನಕೋಣೆ ಪ್ರದೇಶದ ಮಹಿಳೆಯೋರ್ವರ ಮನೆಗೆ ಬಂದ ಆ ವ್ಯಕ್ತಿ, “ತಂಝೀಮ್ ಸಂಘಟನೆಯಿಂದ ಬಡವರಿಗೆ ಐದು ಲಕ್ಷ ರೂಪಾಯಿ ವರೆಗೆ ಬಡ್ಡಿಯಿಲ್ಲದ ಸಾಲ ಸಿಗುತ್ತದೆ. ಆದರೆ ನೋಂದಣಿಗೆ 12 ಸಾವಿರ ರೂ. ಕೊಡಬೇಕು” ಎಂದು ಹೇಳಿದ್ದ ಎನ್ನಲಾಗಿದೆ.
ಇದರಿಂದ ಪ್ರೇರಿತರಾದ ಹಲವು ಮಹಿಳೆಯರು ನೋಂದಣಿ ಶುಲ್ಕ ನೀಡಿದ್ದು, ಒಟ್ಟು 22 ಮಹಿಳೆಯರಿಂದ ಸುಮಾರು ರೂ. 4,07,000 ವಂಚನೆ ನಡೆದಿದೆ. ನಂತರ ಹಣ ಹಿಂದಿರುಗಿಸಲು ಕೇಳಿದಾಗ, ವಂಚಕ “ಬೋಗಸ್ ಚೆಕ್” ನೀಡಿದ್ದು, ಬಳಿಕ ನಾಪತ್ತೆಯಾಗಿದ್ದಾನೆ ಎಂದು ತಿಳಿದುಬಂದಿದೆ.
ಮೋಸಕ್ಕೆ ಒಳಗಾದ ಮಹಿಳೆಯರು ಬೈಂದೂರು ಪೊಲೀಸ್ ಠಾಣೆಗೆ ದೂರು ನೀಡಿ, ಆರೋಪಿಯನ್ನು ಬಂಧಿಸಿ ಹಣ ಮರಳಿ ಪಡೆಯಲು ಆಗ್ರಹಿಸಿದ್ದಾರೆ. “ನಾವು ಬಡವರು, ಸಾಲ ಸಿಗುತ್ತದೆಂದು ನಂಬಿ ಹಣ ಕೊಟ್ಟಿದ್ದೇವೆ. ಈಗ ಫೋನ್ ಕೂಡ ಸ್ವೀಕರಿಸುವುದಿಲ್ಲ” ಎಂದು ಮಹಿಳೆಯರು ತಮ್ಮ ವ್ಯಥೆ ವ್ಯಕ್ತಪಡಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯು ಶಿರೂರಿನ ಹೊರತಾಗಿಯೂ ಇನ್ನೂ ಹಲವರನ್ನು ಮೋಸ ಮಾಡಿದ ಶಂಕೆ ವ್ಯಕ್ತವಾಗಿದೆ.
ಘಟನೆಯ ಕುರಿತಂತೆ ತಂಝೀಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಪ್ರತಿಕ್ರಿಯೆ ನೀಡಿದ್ದು, ತಂಝೀಮ್ ಸಂಸ್ಥೆಯಿಂದ ಯಾವುದೇ ಬಡ್ಡಿ ರಹಿತ ಸಾಲ ನೀಡುವ ವ್ಯವಸ್ಥೆ ಇಲ್ಲ. ನಮ್ಮಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೂ ಕೂಡ ದೂರು ನೀಡಿಲ್ಲ. ಒಂದು ದೂರು ಬಂದರೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.