ಅಕ್ರಮ ಹಣ ವರ್ಗಾವಣೆ ಪ್ರಕರಣ: ಕಾರವಾರ ಶಾಸಕ ಸತೀಶ್ ಸೈಲ್ ಬಂಧನ

ಸತೀಶ್ ಸೈಲ್
ಕಾರವಾರ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಇಂದು ಸಂಜೆ ಬಂಧಿಸಿದ್ದಾರೆ.
ಆಗಸ್ಟ್ 13 ಮತ್ತು 14ರಂದು ಕಾರವಾರ ತಾಲೂಕಿನ ಸದಾಶಿವಗಡದಲ್ಲಿರುವ ಸತೀಶ್ ಸೈಲ್ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆಯ ತನಿಖೆಯ ಅಂಗವಾಗಿ ಈ ದಾಳಿ ನಡೆದಿತ್ತು. ಈ ವೇಳೆ ಮನೆಯಿಂದ ಸುಮಾರು 1.41 ಕೋಟಿ ರೂ. ನಗದು ಹಾಗೂ ಬ್ಯಾಂಕ್ ಲಾಕರ್ನಲ್ಲಿ 6.75 ಕೆ.ಜಿ. ಚಿನ್ನಾಭರಣ ಪತ್ತೆಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿದ್ದ ಸತೀಶ್ ಸೈಲ್ ಅವರನ್ನು ನಿನ್ನೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಇಂದು ದಿನಪೂರ್ತಿ ವಿಚಾರಣೆ ನಡೆಸಿದ ಅಧಿಕಾರಿಗಳು ಸಂಜೆ ಅವರನ್ನು ಬಂಧಿಸಿದ್ದಾರೆ.
ಬಂಧಿತ ಶಾಸಕ ಸತೀಶ್ ಸೈಲ್ ಅವರನ್ನು ಜನಪ್ರತಿನಿಧಿ ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ ಎಂದು ಇಡಿ ಮೂಲಗಳು ತಿಳಿಸಿವೆ.